Tag: ರಮಾನಾಥ್ ಕೋವಿಂದ್

  • ಹೆಲಿಕಾಪ್ಟರ್ ಲೋನ್‍ಗಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

    ಹೆಲಿಕಾಪ್ಟರ್ ಲೋನ್‍ಗಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

    ಭೋಪಾಲ್: ಮಹಿಳೆಯೊಬ್ಬರು ತನಗೆ ಹೆಲಿಕಾಪ್ಟರ್ ಖರೀದಿಗಾಗಿ ಲೋನ್ ಮತ್ತು ಅದರಲ್ಲಿ ಹಾರಾಟ ನಡೆಸಲು ಪರವಾನಿಗೆ ನೀಡಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಸಂತಿ ಬಾಯಿ ಲೋಹರ್ ಅವರು ಮಾಂಡ್ಸೌರ್ ಜಿಲ್ಲೆ, ಅಗರ್ ಗ್ರಾಮದಲ್ಲಿ ವಾಸಿಸುತ್ತಿದ್ದು. ಕಳೆದ ಕೆಲದಿನಗಳ ಹಿಂದೆ ತಮ್ಮ ಮಕ್ಕಳು ಬಸಂತಿ ಬಾಯಿ ಲೋಹರ್ ಅವರು ಜಮೀನಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದಾರೆ. ಹಾಗಾಗಿ ರಾಷ್ಟ್ರಪತಿಗೆ ಪತ್ರ ಬರೆದು ಹೆಲಿಕಾಪ್ಟರ್ ಖರೀದಿಸಿ ಜಮೀನಿಗೆ ಹೋಗುವ ಉಪಾಯ ಮಾಡಿದ್ದಾರೆ.

    ಬಸಂತಿ ಬಾಯಿ ಲೋಹರ್ ಪತ್ರವನ್ನು ಹಿಂದಿಯಲ್ಲಿ ಬರೆದಿದ್ದು, ನನ್ನ ಮಕ್ಕಳಾದ ಲವ ಮತ್ತು ಕುಶ ಹಾಗೂ ಸ್ಥಳೀಯ ನಿವಾಸಿ ಪರಮಾನಂದ್ ಪಾಟಿದಾರ್ ಸೇರಿಕೊಂಡು ದಿನನಿತ್ಯ ನಾನೂ ಸಂಚರಿಸುವ ಜಮೀನಿನ ದಾರಿಯನ್ನು ಮುಚ್ಚಿದ್ದಾರೆ. ಹಾಗಾಗಿ ಜಮೀನಿಗೆ ಯಾವುದೇ ವಸ್ತುಗಳು ಮತ್ತು ದನಕರುಗಳನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಕ್ತಿ ಹೊಂದಲು ಹೆಲಿಕಾಪ್ಟರ್ ಖರೀದಿಗೆ ಸಾಲ ಕೊಡುವಂತೆ ರಾಷ್ಟ್ರಪತಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಜಮೀನಿನ ದಾರಿಯ ತಕರಾರನ್ನು ಸರಿಪಡಿಸುವಂತೆ ಮತ್ತೊಂದು ಪತ್ರ ಬರೆದಿರುವ ಬಸಂತಿ. ಈ ಪತ್ರವನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರದು ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ.

    ಮಾಂಡ್ಸೌರ್ ಜಿಲ್ಲೆಯ ಸ್ಥಳೀಯಾಡಳಿತ ಪತ್ರದ ಕುರಿತು ತನಿಖೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಪತ್ರ ವೈರಲ್ ಆಗುತ್ತಿದ್ದಂತೆ ಈ ಕುರಿತು ಕಂದಾಯ ಇಲಾಖೆ ಗಮನಹರಿಸಿದ್ದು ಜಿಲ್ಲಾ ತಾಹಶೀಲ್ದಾರ್ ಬಸಂತಿ ಅವರ ಮನೆಗೆ ತೆರಳಿ ಸ್ಥಳ ಪರಿಶೀಲಿಸಿದ್ದಾರೆ. ಆದರೆ ಅಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ ಎಂದು ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ತಿಳಿಸಿದ್ದಾರೆ.

  • ಇಂದು ಸೇನಾ ದಿನವನ್ನಾಗಿ ಯಾಕೆ ಆಚರಿಸಲಾಗುತ್ತಿದೆ..?- ಇದರ ಮಹತ್ವವೇನು..?

    ಇಂದು ಸೇನಾ ದಿನವನ್ನಾಗಿ ಯಾಕೆ ಆಚರಿಸಲಾಗುತ್ತಿದೆ..?- ಇದರ ಮಹತ್ವವೇನು..?

    ನವದೆಹಲಿ: ಇಂದು ಭಾರತೀಯ ಸೇನಾ ದಿನದ ಅಂಗವಾಗಿ ಸೈನಿಕರಿಗಾಗಿ ವಿಶೇಷ ಮ್ಯಾರಥಾನ್ ಆಯೋಜಿಸುವ ಮೂಲಕ ನಮ್ಮ ದೇಶದ ವೀರ ಪುತ್ರರಿಗೆ ಗೌರವ ಸಲ್ಲಿಸಲಾಗಿದೆ.

    ಭಾರತವು ಇಂದು 73ನೇ ವರ್ಷದ ಸೇನಾ ದಿನವನ್ನು ಆಚರಿಸುತ್ತಿದೆ. ಸೈನಿಕರು ದೇಶಕ್ಕಾಗಿ ಮಾಡುವ ನಿಸ್ವಾರ್ಥ ಸೇವೆಯ ಭಾಗವಾಗಿ ಪ್ರತಿ ವರ್ಷ ಅವರಿಗೆ ಗೌರವ ಸಲ್ಲಿಸುವ ಕೆಲಸ ಎಲ್ಲಾ ಆರ್ಮಿ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಯೋಜಿಸಲಾಗುತ್ತದೆ. ಈ ವರ್ಷ ಕೂಡ ಸಂಪ್ರದಾಯ ಮುಂದುವರಿದಿದೆ.

    1949 ರಂದು ಭಾರತ, ಬ್ರಿಟಿಷ್ ಕಮಾಂಡರ್‍ಗಳಿಂದ ಅಧಿಕಾರ ವಹಿಸಿಕೊಂಡಾಗ ಆ ದಿನವನ್ನು ಭಾರತ ವಿಜಯ ದಿನವಾಗಿ ಆಚರಿಸಲಾಯಿತು. ಈ ಸಂಪ್ರದಾಯ ಹೀಗೆ ಮುಂದುವರರಿದಿದ್ದು ಪ್ರತಿ ವರ್ಷ ಸೇನಾ ದಿನದಂದು ಬೇರೆ ಬೇರೆ ವಿಷಯವನ್ನು ಆರಿಸಿಕೊಂಡು ಈ ದಿನವನ್ನು ಸ್ಮರಣೀಯವಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ ಸೈನ್ಯ ದಿನವನ್ನು ‘ರಕ್ಷಣಾ ಡಿಜಿಟಲ್ ಪರಿವರ್ತನೆ’ ದಿನವಾಗಿ ಆಚರಿಸಲಾಗಿತ್ತು. ಈ ಬಾರಿ 1971 ರಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡಿ ವಿಜಯಗಳಿಸಿದ ಸ್ವಾರ್ನಿಮ್ ವಿಜಯ್ ವರ್ಷದ ಸವಿನೆನಪಿಗಾಗಿ ವಿಜಯ್ ರನ್ ಎಂಬ ಮ್ಯಾರಥಾನ್ ಆಯೋಜಿಸಲಾಗಿದೆ.

    ಪ್ರತಿ ವರ್ಷ ಸೇನಾ ದಿನದಂದು ಧೈರ್ಯಶಾಲಿ ವೀರ ಸೈನಿಕರಿಗಾಗಿ ದೇಶಾದ್ಯಂತ ಗೌರವ ಸೂಚಿಸಲಾಗಿತ್ತದೆ. ಈ ಬಾರಿಯು ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ದೇಶದ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಶುಭಾಶಯಗಳನ್ನು ಹೆಮ್ಮಯೆ ವೀರ ಯೋಧರಿಗೆ ಸಲ್ಲಿಸಿದ್ದಾರೆ.

    ಜನವರಿ 15 ಅನ್ನು ಪ್ರತಿ ವರ್ಷ ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ 1949ರಲ್ಲಿ ಈ ದಿನದಂದು ಭಾರತವು ದೇಶದ ಮೊದಲ ಸೇನಾ ಮುಖ್ಯಸ್ಥರನ್ನು ಪೆಡೆದ ದಿನವಾಗಿದೆ. ಭಾರತ ದೇಶವು ಮೊದಲ ಚೀಫ್ ಇನ್ ಕಮಾಂಡರ್ ಲೆಫ್ಟೆನೆಂಟ್ ಜನರಲ್ ಕೆ.ಎಂ.ಕರಿಯಪ್ಪ, ಭಾರತದ ಕೊನೆಯ ಬ್ರಿಟಿಷ್ ಕಮಾಂಡರ್ ಚೀಫ್ ಇನ್ ಜನರಲ್ ಸರ್ ಫ್ರಾನ್ಸಿಸ್ ಬುತ್ಚೆರ್ ಅವರಿಂದ ಅಧಿಕಾರ ವಹಿಸಿಕೊಂಡ ದಿನವಾಗಿದೆ. ಆ ದಿನ ಭಾರತ ವಿಜಯ ದಿನವಾಗಿ ಆಚರಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಭಾರತೀಯ ಸೇನಾ ದಿನವನ್ನು ಪ್ರತಿವರ್ಷ ಸಂಭ್ರಮದಿಂದ ಆಚರಿಸಿ ಸೈನಿಕರಿಗೆ ಗೌರವ ಸೂಚಿಸಲಾಗುತ್ತಿದೆ.

  • ರಾಷ್ಟ್ರಪತಿ ಕೋವಿಂದ್ ಪತ್ನಿಯಿಂದ ಮಾಸ್ಕ್ ತಯಾರು

    ರಾಷ್ಟ್ರಪತಿ ಕೋವಿಂದ್ ಪತ್ನಿಯಿಂದ ಮಾಸ್ಕ್ ತಯಾರು

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಈ ಸಾಂಕ್ರಾಮಿಕ ರೋಗ ಹರಡುವ ದೃಷ್ಟಿಯಿಂದ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಇದೀಗ ಈ ಮಾಸ್ಕ್ ತಯಾರು ಮಾಡುವಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಧರ್ಮಪತ್ನಿ ಸವಿತಾ ಕೋವಿಂದ್ ಅವರು ನಿರತರಾಗಿದ್ದಾರೆ.

    ಹೌದು. ಆಶ್ರಯತಾಣಗಳಲ್ಲಿ ವಾಸಿಸುತ್ತಿರುವ ಬಡವರು ಕೋವಿಡ್ 19 ಜೊತೆ ಹೋರಾಡಲು ಸವಿತಾ ಅವರು ತಾವೇ ತಮ್ಮ ಕೈಯಾರೇ ಮಾಸ್ಕ್ ತಯಾರಿಸಿ ಹಂಚುತ್ತಿದ್ದಾರೆ. ಈ ಮೂಲಕ ಬಡ ಜನರ ನೆರವಿಗೆ ಧಾವಿಸಿದ್ದಾರೆ.

    ದೆಹಲಿಯ ಶಕ್ತಿ ಹಾತ್ ನಲ್ಲಿರುವ ರಾಷ್ಟ್ರಪತಿಗಳ ಎಸ್ಟೇಟ್ ನಲ್ಲಿ ಸವಿತಾ ಅವರು ಹೊಲಿಗೆ ಯಂತ್ರದ ಮೂಲಕ ಮಾಸ್ಕ್ ತಯಾರು ಮಾಡುತ್ತಿದ್ದಾರೆ. ಬಳಿಕ ಅವುಗಳನ್ನು ನಗರ ಪ್ರದೇಶಗಳಲ್ಲಿರುವ ಹಲವು ಆಶ್ರಯತಾಣಗಳಿಗೆ ನೀಡುತ್ತಾರೆ. ಸವಿತಾ ಅವರು ಕೆಂಪು ಬಣ್ಣದ ಮಾಸ್ಕ್ ಧರಿಸಿಯೇ ಅವುಗಳನ್ನು ತಯಾರು ಮಾಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ತಾವೇ ಮಾಸ್ಕ್ ತಯಾರು ಮಾಡುವ ಮೂಲಕ ಮಾಸ್ಕ್ ಧರಿಸಿ ಒಗ್ಗಟ್ಟಿನಿಂದ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡೋಣ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಆರೋಗ್ಯ ತಜ್ಞರು ಕೂಡ ಕೋವಿಡ್ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಮುಖ್ಯ ಎಂದು ಹೇಳಿದ್ದಾರೆ.

  • ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

    ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

    ಬೆಂಗಳೂರು: ಇಂದು ಭಾರತೀಯ ಸೇನೆಯ ಮಹಾದಂಡ ನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ 120ನೇ ಜನ್ಮ ದಿನಾಚರಣೆ. ಹೀಗಾಗಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಕಾರ್ಯಪ್ಪ ಅವರನ್ನು ಸ್ಮರಿಸಿದ್ದಾರೆ.

    ಕನ್ನಡ ಲಿಪಿಯಲ್ಲಿ ಕೊಡವ ಭಾಷೆಯಲ್ಲಿಯೇ ಟ್ವೀಟ್ ಮಾಡುವ ಮೂಲಕ ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರ ಎಂದು ನೆನಪಿಸಿಕೊಳ್ಳುವ ಮೂಲಕ ಜನ್ಮದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ..?:
    “ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಆಯಿಂಗಡ ಪುಟ್ಟ ನ ದಿನತ್ ರ ಒರ್ ಸ್ಮರಣೆ. ಕೊಡ ಗ್ ರ , ಕರ್ನಾಟಕ ತ್ ರ, ಆಂಡ ಮೀದ ಭಾರತ ದೇಶ ತ್ ರ ಕೊದಿಮೋಂವ ನಾನ ಇಯಂಗ ನಂಗಡ ಕೇಳಿ ಪೋನ ಮಹದಂಡ ನಾಯಕ ಅಲ್ಲತೆ ಪ್ರೀತಿರ ರಾಷ್ಟ್ರನಾಯಕ. ಇಯಂಗಡ ದೇಶ ಸೇವೆನ ನಂಗ ಎಕ್ಕಲೂ ಗೇ ನ ಬೆಚ್ಚೋ ವ. – ರಾಷ್ಟ್ರಪತಿ ಕೋವಿಂದ್”

    ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರು ನಮ್ಮ ಅತ್ತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರ ನಾಯಕರಾಗಿ ಉಳಿದಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.

    ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ(ಕಾರ್ಯಪ್ಪ) ಅವರು 1899ರ ಜನವರಿ 28 ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಲ್ಲಿ ತಂದೆ ಕೊಡಂದೆರ ಮಾದಪ್ಪ ಕಾರಿಯಪ್ಪ ಹಾಗೂ ತಾಯಿ ಕಾವೇರಿಯ ಪುತ್ರನಾಗಿ ಜನಿಸಿದ್ದರು. ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲ ವ್ಯಕ್ತಿ. 1993 ಮೇ 15 ರಂದು ಕಾರ್ಯಪ್ಪ ನಿಧನರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!

    ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!

    ಶ್ರೀನಗರ: ಬರೆಯುತ್ತಿದ್ದಂತೆಯೇ ಪದಗಳನ್ನು ಲೆಕ್ಕ ಹಾಕುವಂತಹ ಅಪರೂಪದ ಪೆನ್ ಒಂದನ್ನು 9 ವರ್ಷದ ಬಾಲಕನೊಬ್ಬ ಕಂಡುಹುಡುಕಿದ್ದಾನೆ.

    ಉತ್ತರ ಕಾಶ್ಮೀರದ ಗುರೇಜ್ ವ್ಯಾಲಿಯ ಪ್ರೊಡಿಗಿ ನಿವಾಸಿ ಮೂರನೇ ತರಗತಿಯಲ್ಲಿ ಓದುತ್ತಿರುವ ಮುಜಾಫರ್ ಅಹಮ್ಮದ್ ಖಾನ್ “ಕೌಂಟಿಂಗ್ ಪೆನ್” ಕಂಡುಹಿಡಿದಿದ್ದಾನೆ.

    ಈ ಪೆನ್ ನ ಹಿಂಭಾಗದಲ್ಲಿ ಕವಚವೊಂದಿದೆ. ಅಲ್ಲದೇ ಸಣ್ಣದಾದ ಎಲ್‍ಸಿಡಿ ಮಾನಿಟರ್ ನ್ನು ಕೂಡ ಪೆನ್ ಗೆ ಅಳವಡಿಸಲಾಗಿದೆ. ಹೀಗಾಗಿ ನಾವು ಬರೆಯುತ್ತಿದ್ದಂತೆಯೇ ಅದು ಅಕ್ಷರಗಳನ್ನು ಲೆಕ್ಕ ಮಾಡುತ್ತದೆ. ಅಲ್ಲದೇ ಇದರ ಇನ್ನೊಂದು ವಿಶೇಷತೆ ಏನೆಂದರೆ ನೀವು ಎಷ್ಟು ಅಕ್ಷರಗಳನ್ನು ಬರೆದಿದ್ದೀರಿ ಅನ್ನೋ ಮೆಸೇಜ್ ನಿಮ್ಮ ಮೊಬೈಲ್ ಗೂ ಬರುತ್ತದೆ ಅಂತ ಬಾಲಕ ತಿಳಿಸಿದ್ದಾನೆ.

    ಪೆನ್ ಕಂಡುಹಿಡಿದಿದ್ದು ಯಾಕೆ?
    ಕಳೆದ ಬಾರಿ ಪರೀಕ್ಷೆಯನ್ನು ನಾನು ಕಡಿಮೆ ಪದಗಳನ್ನು ಬರೆದಿದ್ದರಿಂದ ನನಗೆ ಕಡಿಮೆ ಅಂಕಗಳು ಬಂದಿತ್ತು. ಇದರಿಂದ ನಾವು ಯೋಚನೆ ಮಾಡಲು ಆರಂಭಿಸಿದೆ. ಆ ಕ್ಷಣದಿಂದಲೇ ನನ್ನ ಸಮಯ ಉಳಿಸಿಕೊಳ್ಳಲು ಏನಾದ್ರೂ ಕಂಡುಹಿಡಿಯಬೇಕು ಅನ್ನೋದನ್ನು ಚಿಂತಿಸಿದೆ. ಹೀಗಾಗಿ ಕೊನೆಗೆ ಕೌಂಟಿಂಗ್ ಪೆನ್ ಕಂಡುಹಿಡಿದೆ ಅಂತ ಬಾಲಕ ವಿವರಿಸಿದ್ದಾನೆ.

    ರಾಷ್ಟ್ರಪತಿ ಮೆಚ್ಚುಗೆ:
    ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಯೋಜಿಸಿದ್ದ ಆವಿಷ್ಕಾರ ಮತ್ತು ವಾಣಿಜ್ಯೋದ್ಯಮ ಉತ್ಸವದಲ್ಲಿ ಮುಜಾಫ್ಫರ್ ತನ್ನ ‘ಕೌಂಟಿಂಗ್ ಪೆನ್’ ಪ್ರದರ್ಶಿಸಿದ್ದ. ಮುಜಾಫ್ಫರ್ ಆವಿಷ್ಕರಿಸಿರುವ ಅಪರೂಪ ‘ಕೌಂಟಿಂಗ್ ಪೆನ್’ ಉತ್ಸವದಲ್ಲಿ ಎಲ್ಲರನ್ನೂ ಆಕರ್ಷಿಸಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಕೂಡ ಪುಟ್ಟ ಬಾಲಕನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಸಂಧಿ ಪಾಠ ಮಾಡೋ ಸಿಎಂ, ರಾಷ್ಟ್ರಪತಿ ಕೋವಿಂದ್‍ರನ್ನ ಗೋವಿಂದ್  ಅಂದ್ರು

    ಸಂಧಿ ಪಾಠ ಮಾಡೋ ಸಿಎಂ, ರಾಷ್ಟ್ರಪತಿ ಕೋವಿಂದ್‍ರನ್ನ ಗೋವಿಂದ್ ಅಂದ್ರು

    ದಾವಣಗೆರೆ: ಸಂಧಿ ಸಮಾಸದ ಪಾಠ ಮಾಡೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರಪತಿ ಹೆಸರು ಗೊತ್ತಿಲ್ಲದೇ ಚಡಪಡಿಸಿದ ಘಟನೆ ಇಂದು ನಡೆದಿದೆ.

    ಜಿಲ್ಲೆಯ ಚನ್ನಗಿರಿಯಲ್ಲಿ ಬಹುಕೋಟಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಯವರು ಈ ಎಡವಟ್ಟು ಮಾಡಿದ್ದಾರೆ. ತಮ್ಮ ಭಾಷಣದ ವೇಳೆ ಕೋವಿಂದ್ ರನ್ನ ಗೋವಿಂದ್ ಎಂದ ಅವರು, ಯಾರ್ರಿ ಅವರು ರಾಷ್ಟ್ರಾಧ್ಯಕ್ಷರು ಗೋವಿಂದ.. ಪೂರ್ತಿ ಹೆಸ್ರೇನ್ರಿ ಅಂತ ವೇದಿಕೆ ಮೇಲಿದ್ದವರನ್ನ ಕೇಳುವ ಮೂಲಕ ಪೇಚಿಗೆ ಸಿಲುಕಿದರು.

    ವೇದಿಕೆಯಲ್ಲಿದ್ದವರು ಹೇಳಿದ ಮೇಲೆ ಎಚ್ಚೆತ್ತ ಸಿದ್ದರಾಮಯ್ಯ ರಾಮನಾಥ ಗೋವಿಂದ್ ಅಲ್ಲ ಕೋವಿಂದ್.. ಕೋವಿಂದ್ ಎಂದು ಸರಿಪಡಿಸಿಕೊಂಡರು.’

    ಇದನ್ನೂ ಓದಿ: ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ: ಸಿಎಂ ವ್ಯಾಕರಣದ ಬಗ್ಗೆ ವಿಶ್ವನಾಥ್ ವ್ಯಂಗ್ಯ

    ಕೆಲ ತಿಂಗಳ ಹಿಂದೆ ಮೈಸೂರಿನ ಮೃಗಾಲಯದಲ್ಲಿ ಸಿಎಂ ಸಂಧಿ ಪಾಠ ಮಾಡಿದ್ದರು. ಮೃಗ + ಆಲಯ ಇದು ಸವರ್ಣದೀರ್ಘ ಸಂಧಿ, ಗುಣಸಂಧಿ ಅಂದರೆ ಏನು ಗೊತ್ತಾ ಎಂದು ಸಿಎಂ ಸಭಿಕರನ್ನು ಪ್ರಶ್ನೆ ಮಾಡಿದ್ದರು. ಆ ಬಳಿಕ ಶಿಕ್ಷಕರ ದಿನಾಚರಣೆಯಂದು ಮತ್ತೊಮ್ಮೆ ಕನ್ನಡ ವ್ಯಾಕರಣದ ಕುರಿತು ಮಾತನಾಡಿದ್ದರು.

    ಇದನ್ನೂ ಓದಿ: ಶಿಕ್ಷಕರ ಮುಂದೆ ಸಂಧಿ ಪಾಠ – ವೇದಿಕೆಯಲ್ಲೇ ಶರವಣರ ಕಾಲೆಳೆದ ಸಿಎಂ

  • ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

    ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಬೆಳಗ್ಗೆ 10.30ಕ್ಕೆ ಪುನಾರಚನೆ ಆಗಿದೆ. 9 ಮಂದಿ ಹೊಸಬರು ಸಂಪುಟ ಸೇರಿದ್ದು, ನಾಲ್ಕು ಮಂದಿಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ನೀಡಲಾಗಿದೆ. ಸಚಿವ ಸ್ಥಾನದ ಪಟ್ಟಿಯಲ್ಲಿ ಕರ್ನಾಟಕದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಶೋಭಾ ಕರಂದ್ಲಾಜೆ ಹೆಸರು ಬಲವಾಗಿ ಕೇಳಿ ಬಂದಿತ್ತು. ಆದರೆ ಮೋದಿ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು, ಅಚ್ಚರಿಯ ಆಯ್ಕೆ ಎಂಬಂತೆ ಉತ್ತರ ಕನ್ನಡದ ಸಂಸದ ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ ಅವರನ್ನು ಆರಿಸಿದ್ದಾರೆ. ಹೀಗಾಗಿ ಇಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದ 9 ಮಂದಿ ಸಚಿವರ ಕಿರು ವಿವರವನ್ನು ನೀಡಲಾಗಿದೆ.

    ಅನಂತ್‍ಕುಮಾರ್ ಹೆಗಡೆ:
    ಮೇ 20, 1968ರಲ್ಲಿ ಶಿರಸಿಯಲ್ಲಿ ಜನಿಸಿದ ಇವರ ಪೂರ್ಣ ಹೆಸರು ಅನಂತಕುಮಾರ್ ದತ್ತಾತ್ರೇಯ ಹೆಗಡೆ. ಉತ್ತರ ಕನ್ನಡದ ಬಿಜೆಪಿ ಹಾಲಿ ಸಂಸದರಾಗಿರುವ ಅನಂತ್ ಕುಮಾರ್ 28ನೇ ವಯಸ್ಸಿಗೇ ಮೊದಲ ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. 1996, 1998, 2004, 2009, 2014ರಲ್ಲಿ ಸಂಸದರಾಗಿ ಆಯ್ಕೆ ಆಗಿರುವ ಇವರು ವಿದೇಶಾಂಗ ವ್ಯವಹಾರ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ ಹಾಲಿ ಸದಸ್ಯರಾಗಿದ್ದಾರೆ.

    ಹಣಕಾಸು, ಗೃಹ, ವಾಣಿಜ್ಯ, ಕೃಷಿ, ಪರಿಸರ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಗ್ರಾಮೀಣಾ ಅಭಿವೃದ್ಧಿಗಾಗಿ ಕದಂಬ ಹೆಸರಿನ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಟೇಕ್ವಾಂಡೋ, ಮಾರ್ಷಲ್ ಆರ್ಟ್ಸ್ ನಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ.

    ಅಶ್ವಿನಿ ಚೌಬೆ:
    ಬಿಹಾರದ ಬಕ್ಸರ್ ಕ್ಷೇತ್ರದ ಸಂಸದರಾಗಿರುವ ಅಶ್ವಿನಿ ಚೌಬೆ ಬ್ರಾಹ್ಮಣ ಸಮುದಾಯದ ಪ್ರಮುಖ ಮುಖಂಡರಾಗಿದ್ದು, 8 ವರ್ಷ ಬಿಹಾರದಲ್ಲಿ ಸಚಿವರಾಗಿ ಅನುಭವ ಹೊಂದಿದ್ದಾರೆ. 5 ಬಾರಿ ಬಾಗಲ್ಪುರದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ.

    ಸತ್ಯಪಾಲ್ ಸಿಂಗ್:
    ಉತ್ತರಪ್ರದೇಶ ಬಾಗ್ಪತ್ ಕ್ಷೇತ್ರದ ಸಂಸದರಾಗಿರುವ ಇವರು ಮುಂಬೈ ಪೊಲೀಸ್ ಆಯುಕ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು. ಮೊದಲ ಬಾರಿಗೆ ಸಂಸದರಾಗಿರುವ ಇವರು ಇಶ್ರಾಂತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದ ತನಿಖಾ ತಂಡದ ಮುಖ್ಯಸ್ಥರಾಗಿದ್ದರು.

    ಗಜೇಂದ್ರ ಸಿಂಗ್ ಶೇಖಾವತ್:
    ರಾಜಸ್ಥಾನದ ಜೋಧಪುರ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಇವರು ರಜಪೂತ್ ಸಮುದಾಯದ ಪ್ರಭಾವಿ ನಾಯಕ. ಐತಿಹಾಸಿಕ 4,10,051 ಮತಗಳ ಅಂತರದೊಂದಿಗೆ ಗೆದ್ದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಪ್ರಶ್ನೆ ಮತ್ತು ಉತ್ತರಕ್ಕೆ ಮೀಸಲಾಗಿರುವ ಸಾಮಾಜಿಕ ಜಾಲತಾಣ ಕೋರಾದಲ್ಲಿ ಇವರ ಪೇಜ್ ಅನ್ನು 58 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದೆ. ಸ್ವದೇಶಿ ಜಾಗರಣ ಮಂಚ್, ಬಿಜೆಪಿ ಕಿಸಾನ್ ಮೋರ್ಚಾದಲ್ಲಿ ಸಕ್ರಿಯರಾಗಿರುವ ಇವರು ತತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಶಿವಪ್ರತಾಪ್ ಶುಕ್ಲ:
    ಉತ್ತರಪ್ರದೇಶದಿಂದ ರಾಜ್ಯಸಭಾ ಸಂಸದರಾಗಿರುವ ಇವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಮುಖ ಮುಖಂಡರಾಗಿದ್ದಾರೆ. ರಾಜನಾಥ್ ಸಿಂಗ್, ಕಲ್ಯಾಣ ಸಿಂಗ್ ಅವಧಿಯಲ್ಲಿ ಉತ್ತರಪ್ರದೇಶಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

    ವೀರೇಂದ್ರ ಕುಮಾರ್:
    ಮಧ್ಯಪ್ರದೇಶದ ಟಿಕ್ಕಂಗಢ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಇವರು ಸತತ 7 ಬಾರಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ, ಬಾಲಕಾರ್ಮಿಕರ ವಿಷಯದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ.

    ರಾಜ್‍ಕುಮಾರ್ ಸಿಂಗ್:
    ಮಾಜಿ ಕೇಂದ್ರ ಗೃಹ ಖಾತೆ ಕಾರ್ಯದರ್ಶಿ ಆಗಿರುವ ಇವರು ಮೊದಲ ಬಾರಿಗೆ ಬಿಹಾರದ ಅರ್ರಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ರಾಮಜನ್ಮ ಭೂಮಿ ರಥಯಾತ್ರೆ ವೇಳೆ 1990 ಅಕ್ಟೋಬರ್ 30 ರಂದು ಸಮಷ್ಠಿಪುರದಲ್ಲಿ ಅಡ್ವಾಣಿ ಬಂಧಿಸಿದ ಖ್ಯಾತಿ ಇವರಿಗಿದೆ. ಅತ್ಯಂತ ದಕ್ಷ ಐಎಎಸ್ ಅಧಿಕಾರಿ ಎಂದು ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಹರ್ದೀಪ್ ಸಿಂಗ್ ಪುರಿ:
    1974ನೇ ಬ್ಯಾಚ್‍ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ಆಗಿದ್ದ ಇವರು 009 – 2013ರವರೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಆಗಿ ಕಾರ್ಯನಿರ್ವಹಿಸಿದ್ದರು. ವಿಶ್ವಸಂಸ್ಥೆಯ ಭದ್ರತಾ ಸಮಿತಿ(ಭಯೋತ್ಪಾದನೆ ನಿಗ್ರಹ) ಮುಖ್ಯಸ್ಥರಾಗಿದ್ದರು. ಬ್ರೆಜಿಲ್, ಶ್ರೀಲಂಕಾ, ಜಪಾನ್, ಇಂಗ್ಲೆಂಡ್‍ಗೆ ರಾಯಭಾರಿ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಇವರು 2014ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರೂ ಇನ್ನೂ ಸಂಸದರಾಗಿಲ್ಲ.

    ಅಲ್ಫೋನ್ಸ್ ಕಣ್ಣನ್‍ತನಂ:
    ಮಾಜಿ ಐಎಎಸ್ ಅಧಿಕಾರಿ, 2006ರಲ್ಲಿ ಬಿಜೆಪಿಗೆ ಸೇರ್ಪಡೆ ಆಗಿದ್ದ ಇವರು ಈ ಹಿಂದೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ವೇಳೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದ್ದರು. ‘ಡೆಮಾಲಿಶನ್ ಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ಇವರು 1994ರಲ್ಲಿ ಟೈಂ ಮ್ಯಾಗಜಿನ್‍ನ 100 ಪ್ರಭಾವಿ ಯುವ ಮುಖಗಳಲ್ಲಿ ಒಬ್ಬರಾಗಿದ್ದರು. ಸದ್ಯ ರಾಷ್ಟ್ರೀಯ ಶಿಕ್ಷಣ ನೀತಿ ಮೇಲಿನ ಸಮಿತಿ ಸದಸ್ಯರಾಗಿರುವ ಇವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದಾರೆ. ಆದರೆ ಸದ್ಯ ಸಂಸದರಲ್ಲ.

    ಸಂಪುಟ ಪುನಾರಚನೆಗೆ ಯಾಕೆ ಅಷ್ಟೊಂದು ಮಹತ್ವ?
    ಇದು ತಮ್ಮ ಕನಸಿನ ಸಂಪುಟ ರಚಿಸಿಕೊಳ್ಳಲು ಪ್ರಧಾನಿ ಮೋದಿಗಿರುವ ಕಡೆಯ ಅವಕಾಶವಾಗಿದ್ದು, ಕಳಪೆ ಸಾಧನೆ ಮಾಡಿದ ಸಚಿವರಿಗೆ ಗೇಟ್‍ಪಾಸ್, ಹೊಸಬರು, ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ಇನ್ನೆರಡು ವರ್ಷಗಳಲ್ಲಿ 3 ವರ್ಷಗಳ ಹಿಂದೆ ಘೋಷಿಸಿರುವ ಕಾರ್ಯಕ್ರಮಗಳ ಸಮರ್ಥ ಅನುಷ್ಠಾನ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಸರ್ಕಾರದ ಬಗ್ಗೆ ಮತ್ತಷ್ಟು ಜನಪ್ರಿಯತೆ ಸೃಷ್ಟಿಸುವ ಲೆಕ್ಕಾಚಾರ ನೋಡಿಕೊಂಡು ಪುನಾರಚನೆ ಮಾಡಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಅಮಿತ್ ಶಾ ಹೆಣೆದಿರುವ 350 ಸೀಟುಗಳ ಕನಸನ್ನು ಸಾಕಾರಗೊಳಿಸುವುದಕ್ಕೆ ಸಂಪುಟದಲ್ಲಿ ಜಾತಿ-ವರ್ಗಗಳ ಲೆಕ್ಕಾಚಾರದಲ್ಲಿ ಜಾಗ ನೀಡಿ ಹೊಸ ಮತ ಧ್ರುವೀಕರಣಕ್ಕೆ ಪ್ಲಾನ್ ಮಾಡಿ ಪುನರಾಚನೆ ಮಾಡಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ಪಶ್ಚಿಮಬಂಗಾಳ, ಅಸ್ಸಾಂ, ಒಡಿಶಾದಲ್ಲಿ ಮತ್ತಷ್ಟು ಸಂಸದ ಸ್ಥಾನ ಗೆಲ್ಲಲು ತಂತ್ರ ಹೆಣೆಯಲಾಗಿದ್ದು ಈ ಕಾರಣಕ್ಕೆ ಹಿರಿಯ ಸಚಿವರಿಗೆ ಮಂತ್ರಿ ಸ್ಥಾನದಿಂದ ಮುಕ್ತಿ ನೀಡಿ ಪಕ್ಷದ ಬಲವರ್ಧನೆಗೆ ಬಳಸಲು ಮೋದಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ನಿರ್ಮಲಾ ಸೀತಾರಾಮನ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ನೀಡಲಾಗಿದೆ. ಈ ನಾಲ್ಕೂ ಸಚಿವರಿಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಸುಮಿತ್ರಾ ಮಹಾಜನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಸಚಿವರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಭಾರತೀಯ ಸೇನೆಯ ಮೂರು ದಳಗಳ ಮುಖ್ಯಸ್ಥರು ಹಾಜರಿದ್ದರು.