Tag: ರಫೇಲ್

  • ಬೆಂಗಳೂರಿಗೆ ಬಂದಿಳಿಯಿತು ರಫೇಲ್ ವಿಮಾನಗಳು – ವಿಶೇಷತೆ ಏನು? ವಿಡಿಯೋ ನೋಡಿ

    ಬೆಂಗಳೂರಿಗೆ ಬಂದಿಳಿಯಿತು ರಫೇಲ್ ವಿಮಾನಗಳು – ವಿಶೇಷತೆ ಏನು? ವಿಡಿಯೋ ನೋಡಿ

    ಬೆಂಗಳೂರು: ಸದ್ಯ ದೇಶದ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿರುವ ರಫೇಲ್ ವಿಮಾನ ಭಾರತದಲ್ಲಿ ಲ್ಯಾಂಡ್ ಆಗಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಫ್ರಾನ್ಸಿನ ಡಸಾಲ್ಟ್ ಕಂಪನಿಯ 3 ರಫೇಲ್ ವಿಮಾನಗಳು ಯಲಹಂಕ ವಾಯುನೆಲೆಗೆ ಆಗಮಿಸಿವೆ.

    ಮೂರು ವಿಮಾನಗಳ ಪೈಕಿ 2 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದರೆ ಒಂದು ವೀಕ್ಷಣೆಗೆ ಇರಿಸಲಾಗುತ್ತದೆ. ಹಾರಾಟ ಪ್ರದರ್ಶನ ನೀಡಲಿರುವ ವಿಮಾನಗಳ ಅಧಿಕೃತ ಪೂರ್ವಸಿದ್ಧತೆಯ ಹಾರಾಟ ಗುರುವಾರದಿಂದ ಆರಂಭವಾಗಲಿದೆ. 12ನೇ ಆವೃತ್ತಿಯ ಏರೋ ಇಂಡಿಯಾ ವೈಮಾನ ನಿಕ ಪ್ರದರ್ಶನ ಫೆ.20 ರಿಂದ ಫೆ.24ರವರೆಗೆ ನಡೆಯಲಿದೆ. ಇದನ್ನೂ ಓದಿ: ರಫೇಲ್ ಡೀಲ್ – ಯಾವುದು ಅಗ್ಗ? ಯಾವುದು ದುಬಾರಿ?

    ಇದುವರೆಗೆ ದೇಶ- ವಿದೇಶಗಳ 365 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, ಆಕಾಶದಲ್ಲಿ ಪ್ರದರ್ಶನ ನೀಡಲು 31 ವಿಮಾನಗಳು ಒಪ್ಪಿಗೆ ನೀಡಿವೆ. 22 ವಿಮಾನಗಳನ್ನು ಪ್ರದರ್ಶನಕ್ಕಿಡಲಾಗುತ್ತಿದ್ದು, ದೇಶೀಯ ಸಾರಂಗ್, ಸೂರ್ಯಕಿರಣ್ ವಿಮಾನಗಳು ಭಾಗವಹಿಸಲಿವೆ.

    ರಫೇಲ್ ವಿಶೇಷತೆ ಏನು?
    ಎರಡು ಎಂಜಿನ್, ಎರಡು ಸೀಟ್ ಗಳನ್ನು ಹೊಂದಿರುವ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮಿ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

    ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್ ವಿಮಾನವನ್ನು ನಿರ್ಮಿಸಿದ್ದು, ಭಾರತ ಅಲ್ಲದೇ ಈಜಿಪ್ಟ್, ಕತಾರ್ ದೇಶಗಳು ರಫೇಲ್ ಖರೀದಿ ಸಂಬಂಧ ಡಸಾಲ್ಟ್ ಕಂಪನಿಯ ಜೊತೆ ಮಾತುಕತೆ ನಡೆಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು  ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗೆ ಅನುಗುಣವಾಗಿ ರಫೇಲ್ ವಿಮಾನ ತಯಾರಾಗುತ್ತಿದೆ.

  • ಮದ್ವೆ ಕರೆಯೋಲೆಯಲ್ಲಿ ರಫೇಲ್ ವಿವರಣೆ – ಪ್ರಧಾನಿಯಿಂದ ಸಿಕ್ತು ಮೆಚ್ಚುಗೆ

    ಮದ್ವೆ ಕರೆಯೋಲೆಯಲ್ಲಿ ರಫೇಲ್ ವಿವರಣೆ – ಪ್ರಧಾನಿಯಿಂದ ಸಿಕ್ತು ಮೆಚ್ಚುಗೆ

    ಗಾಂಧಿನಗರ: ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ರಫೇಲ್ ಎಂಬ ಅಸ್ತ್ರವನ್ನು ಬಳಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ರಫೇಲ್ ವಿಮಾನಗಳ ಖರೀದಿಯಲ್ಲಿ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಎಸಗಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅರೋಪಿಸುತ್ತಾ ಬಂದಿದ್ದಾರೆ. ಇದೀಗ ಮೋದಿ ಅಭಿಮಾನಿಯೊಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ರಫೇಲ್ ವಿಮಾನ ಖರೀದಿಗೆ ಸಂಬಂಧಿಸಿದ ಮಾಹಿತಿಗಳನ್ನು ಮುದ್ರಿಸಿದ್ದಾರೆ.

    ಗುಜರಾತ್ ರಾಜ್ಯದ ಯುವರಾಜ್ ಪೋಖರನಾ ಅವರ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದು ಯುವರಾಜ್ ಮತ್ತು ಸಾಕ್ಷಿ ಸತಿ-ಪತಿಗಳಾಗಿದ್ದಾರೆ. ನಮ್ಮ ಆಮಂತ್ರಣ ಪತ್ರಿಕೆಯನ್ನು ಪ್ರಧಾನಿಗಳು ಸಹ ನೋಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ ಎಂದು ಯುವರಾಜ್ ಹೇಳುತ್ತಾರೆ.

    ಪ್ರಧಾನಿ ಬರೆದ ಪತ್ರದಲ್ಲೇನಿದೆ?
    ಯುವರಾಜ್ ಮತ್ತು ಸಾಕ್ಷಿ ಮದುವೆಗೆ ಪೋಖರನಾ ಕುಟುಂಬಕ್ಕೆ ನನ್ನ ಶುಭಾಶಯಗಳು. ಅತಿಥಿಗಳು ಕಳುಹಿಸಿರುವ ಕರೆಯೋಲೆಯಲ್ಲಿ ಈ ವಿಭಿನ್ನ ಪತ್ರ ನನ್ನನ್ನು ಸೆಳೆಯಿತು. ಪತ್ರದಲ್ಲಿ ನಿಮ್ಮ ಸರಳತೆ, ರಾಷ್ಟ್ರದ ಬಗ್ಗೆ ನಿಮ್ಮ ಕಾಳಜಿ ಹಾಗು ನಿಮ್ಮ ದೇಶ ಭಕ್ತಿಯನ್ನು ತೋರಿಸುತ್ತಿತ್ತು. ಈ ಕರೆಯೋಲೆ ನನಗೆ ದೇಶಕ್ಕಾಗಿ ಕೆಲಸ ಮಾಡುವಂತೆ ಪ್ರೇರಣೆ ನೀಡುತ್ತಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಯುವರಾಜ್ ಮತ್ತು ಸಾಕ್ಷಿ ಅವರಿಗೆ ಮದುವೆ ಶುಭಾಶಯಗಳು ಎಂದು ಪ್ರಧಾನಿಗಳು ಕಳಹಿಸಿದ ಪತ್ರದಲ್ಲಿ ಬರೆಯಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತಿದ್ದ ಪ್ರಧಾನಿ ನರೇಂದ್ರ ಮೋದಿಗೆ ಲೋಕಸಭಾ ಚುನಾವಣೆಗೂ ಮುನ್ನ ಅತಿ ದೊಡ್ಡ ಗೆಲುವಿನ ರೂಪದಲ್ಲಿ ರಫೇಲ್ ತೀರ್ಪು ಪ್ರಕಟವಾಗಿದೆ. ಜೆಟ್ ಖರೀದಿ ಸಂಬಂಧ ಯಾವುದೇ ತನಿಖೆಗೆ ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಪ್ರಕಟಿಸಿದೆ.

    ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ. ಇದನ್ನೂ ಓದಿ: ರಫೇಲ್ ಡೀಲ್ : ಮೋದಿಗೆ ಬಿಗ್ ರಿಲೀಫ್, ಕೈಗೆ ಮುಖಭಂಗ

    ರಫೇಲ್ ಖರೀದಿ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಈ ಕಾರಣಕ್ಕೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಸುಪ್ರೀಂ ತೀರ್ಪಿನಲ್ಲಿ ಏನಿದೆ?
    – ರಫೇಲ್ ಖರೀದಿ ಒಪ್ಪಂದದಲ್ಲಿ ಸಂದೇಹ ಪಡುವ ಅಗತ್ಯವಿಲ್ಲ. ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಯಾವುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಗುಣಮಟ್ಟದ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಖರೀದಿ ಒಪ್ಪಂದ ಬೆಲೆಯ ಪರಾಮರ್ಶೆ ಮಾಡುವುದು ಕೋರ್ಟ್ ಕೆಲಸವಲ್ಲ.

    – ದೇಶಕ್ಕೆ ನಾಲ್ಕು ಮತ್ತು ಐದನೇಯ ತಲೆಮಾರಿನ ಫೈಟರ್ ಜೆಟ್ ಭಾರತೀಯ ವಾಯುಸೇನೆಗೆ ನಿಯೋಜಿಸುವ ಅಗತ್ಯವಿದೆ. ಖರೀದಿ, ಬೆಲೆ ನಿರ್ಣಯ, ದೇಶಿ ಪಾಲುದಾರ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುವುದಿಲ್ಲ. ಒಪ್ಪಂದದಲ್ಲಿ ಭಾಗಿಯಾದ ಎಲ್ಲರೂ ಖರೀದಿ ಹೇಗೆ ನಡೆಯಿತು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತುಲಾತ್ಮಕ ಬೆಲೆ ವಿವರವನ್ನು ನೀಡಿ ವಿಮಾನಗಳನ್ನು ಖರೀದಿಸಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    – ನಾವು ಕೇಳಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರಿಂದ ನಮ್ಮ ಸಂಶಯ ಪರಿಹಾರವಾಗಿದ್ದು ತೃಪ್ತಿಯಾಗಿದೆ. ರಕ್ಷಣೆಯಂತಹ ಸೂಕ್ಷ್ಮ ವಿಚಾರದಲ್ಲಿ ತನಿಖೆಗೆ ಆದೇಶ ನೀಡುವುದು ಸರಿಯಲ್ಲ. ದೇಶಿ ಪಾಲುದಾರನ ಆಯ್ಕೆ ಮಾಡುವುದು ಕಂಪನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ.

    – ರಫೇಲ್ ಖರೀದಿ ಒಪ್ಪಂದದಲ್ಲಿ ದೇಶಿಯ ಪಾಲುದಾರಿಕೆಯ ಆಯ್ಕೆ ವಿಚಾರದಲ್ಲಿ ವಾಣಿಜ್ಯ ಒಲವು ತೋರಿಸಲಾಗಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂಡೆ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಿಂದ ರಫೇಲ್ ಜೆಟ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಎದ್ದಿದ್ದು ಈ ವಿಚಾರವನ್ನು ನಾವು ನ್ಯಾಯಾಂಗದ ಪರಿಧಿ ವ್ಯಾಪ್ತಿಯಲ್ಲಿ ಪರಾಮರ್ಶೆ ಮಾಡುವುದಿಲ್ಲ.

    – 126 ಜೆಟ್ ಬದಲು 36 ಜೆಟ್ ಖರೀದಿ ಒಪ್ಪಂದ ಮಾಡಿಕೊಂಡಿರುವ ಭಾರತ ಸರ್ಕಾರದ ಈ ನಿರ್ಧಾರವನ್ನು ಬದಲಾಯಿಸಿ ಎಂದು ನಾವು ಹೇಳಲು ಸಾಧ್ಯವಿಲ್ಲ. 2016ರ ಸಪ್ಟೆಂಬರ್ ತಿಂಗಳಿನಲ್ಲಿ ಈ ಡೀಲ್ ನಡೆದಾಗ ಯಾರು ಪ್ರಶ್ನೆ ಕೇಳಿರಲಿಲ್ಲ.

    – 4 ಮತ್ತು 5ನೇ ತಲೆಮಾರಿನ ಯುದ್ಧ ವಿಮಾನಗಳನ್ನು ವಾಯುಸೇನೆಗೆ ಅಗತ್ಯವಾಗಿದ್ದು, ಈ ವಿಮಾನಗಳನ್ನು ಸೇರ್ಪಡೆಗೊಳಿಸುವಂತಹ ವಿಚಾರದಲ್ಲಿ ಜನರ ವೈಯಕ್ತಿಯ ಗ್ರಹಿಕೆಗಳಿಗಿಂತಲೂ ಸೇನೆಯ ಅಭಿಪ್ರಾಯಗಳನ್ನು ನ್ಯಾಯಾಂಗ ಹೆಚ್ಚು ಪರಾಮರ್ಶಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ನವದೆಹಲಿ: ನಾವು ಸುಳ್ಳು ಹೇಳುತ್ತಿಲ್ಲ. ಈ ಹಿಂದೆ ನಾವು ಬಿಡುಗಡೆ ಮಾಡಿದ ಹೇಳಿಕೆಗಳು ಎಲ್ಲವೂ ಸತ್ಯವಾಗಿದೆ ಎಂದು ಡಸಾಲ್ಟ್ ಕಂಪನಿಯ ಸಿಇಒ ಎರಿಕ್ ಟ್ರಾಪ್ಪಿಯರ್ ಹೇಳಿದ್ದಾರೆ.

    ರಫೇಲ್ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎನ್ನುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಅವರು ಎಲ್ಲ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಸುಳ್ಳು ಹೇಳುತ್ತಿಲ್ಲ. ನನಗೆ ಸುಳ್ಳು ಹೇಳುವ ಅಗತ್ಯವಿಲ್ಲ. ನಾನು ಸಿಇಒ ಆಗಿರುವಾಗ ಸುಳ್ಳು ಹೇಳಲೇಬಾರದು ಎಂದು ತಿಳಿಸಿದರು.

    ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದ ಜೊತೆಗಿನ ಈ ಹಿಂದಿನ ಒಪ್ಪಂದವನ್ನು ವಿವರಿಸಿದ ಅವರು,  ಕಾಂಗ್ರೆಸ್ ಪಕ್ಷದ ಜೊತೆ ನಮಗೆ ದೀರ್ಘ ಅನುಭವವಿದೆ. 1953 ರರಲ್ಲಿ ನೆಹರು ಪ್ರಧಾನಿಯಾಗಿದ್ದಾಗ ನಮ್ಮ ಜೊತೆ ಒಪ್ಪಂದ ನಡೆದಿತ್ತು. ನಾವು ಸರ್ಕಾರದ ಜೊತೆ ಮಾತ್ರ ವ್ಯವಹರಿಸುತ್ತೇವೆ ಹೊರತು ಪಕ್ಷದ ಜೊತೆ ಅಲ್ಲ ಎಂದರು.

    ಎಚ್‍ಎಎಲ್ ಜೊತೆಗಿನ ವ್ಯವಹಾರ ರದ್ದಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ, ಭಾರತ ಸರ್ಕಾರ 126 ವಿಮಾನದ ಬದಲು ತುರ್ತಾಗಿ ಹಾರಲು ಸಿದ್ಧವಾಗಿರುವ 36 ವಿಮಾನ ಬೇಡಿಕೆಯನ್ನು ಇಟ್ಟಿತ್ತು. ಎಚ್‍ಎಎಲ್ ನಮ್ಮ ಜೊತೆ ಪಾಲುದಾರಿಕೆಯಾಗಲು ಹಿಂದೇಟು ಹಾಕಿತ್ತು. ಹೀಗಾಗಿ ನಾವು ರಿಲಯನ್ಸ್ ಕಂಪನಿ ಜೊತೆ ವ್ಯವಹಾರ ಮುಂದುವರಿಸಲು ತೀರ್ಮಾನಿಸಿದೆವು ಎಂದು ಉತ್ತರಿಸಿದರು.

    ಈ ವೇಳೆ ಯಾವುದೇ ವಿಮಾನವನ್ನು ಉತ್ಪಾದಿಸಿದ ರಿಲಯನ್ಸ್ ಕಂಪನಿಯ ಜೊತೆ ನೀವು ವ್ಯವಹಾರ ನಡೆಸಲು ಒಪ್ಪಿದ್ದು ಹೇಗೆ ಎಂದು ಕೇಳಿದ್ದಕ್ಕೆ, ಈ ಯೋಜನೆಗೆ ಹೂಡಿಕೆ ಮಾಡಿದ ಹಣ ನೇರವಾಗಿ ರಿಲಯನ್ಸ್ ಕಂಪನಿಗೆ ಹೋಗುವುದಿಲ್ಲ. ರಿಲಯನ್ಸ್- ಡಸಾಲ್ಟ್ ಜಂಟಿ ಉದ್ಯಮವಾಗಿದ್ದು ಅವರು ರಫೇಲ್ ಜೆಟ್ ಖರೀದಿಯಲ್ಲಿ ನಮ್ಮ ಪಾಲುದಾರರು ಅಷ್ಟೇ. ಈಗಾಗಲೇ ನಾವು ಭಾರತದ 30ಕ್ಕೂ ಹೆಚ್ಚು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ರಿಲಯನ್ಸ್ ಪಾಲುದಾರಿಕೆಯಾಗುವ ಮೊದಲು 2011 ರಲ್ಲಿ ಟಾಟಾ ಕಂಪನಿ ಸೇರಿದಂತೆ ಇತರೇ ವಿಮಾನ ಕಂಪನಿಗಳ ಜೊತೆಗೂ ಮಾತುಕತೆ ನಡೆಸಿದ್ದೇವೆ. ಕೊನೆಗೆ ದೊಡ್ಡ ಎಂಜಿನಿಯರಿಂಗ್ ಸೌಲಭ್ಯ ವಿಚಾರದಲ್ಲಿ ರಿಲಯನ್ಸ್ ಕಂಪನಿಗೆ ಅನುಭವ ಇರುವ ಹಿನ್ನೆಲೆಯಲ್ಲಿ ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.

    ಕೈಗಾರಿಕಾ ಬೆಳವಣಿಗೆಯಲ್ಲಿ ಈ ಒಪ್ಪಂದ ಮಹತ್ವವಾಗಿದ್ದು, ನಮ್ಮ ಎಂಜಿನಿಯರ್ ಮತ್ತು ಕೆಲಸಗಾರರು ಮುಖ್ಯ ಪಾತ್ರವನ್ನು ವಹಿಸಿ ವಿಮಾನವನ್ನು ತಯಾರಿಸುತ್ತಾರೆ. ಈ ವೇಳೆ ನಮ್ಮ ಎಂಜಿನಿಯರ್ ಭಾರತೀಯರಿಗೆ ವಿಮಾನ ತಯಾರಿಸುವ ಕೌಶಲ್ಯವನ್ನು ತಿಳಿಸಿಕೊಡುತ್ತಾರೆ. ಈ ಮೂಲಕ ರಿಲಯನ್ಸ್ ಜಂಟಿ ಉದ್ಯಮಕ್ಕೆ ಬಂಡವಾಳ ಹಾಕಿ ಭಾರತದ ಅಭಿವೃದ್ಧಿಗೂ ಸಹಾಯ ಮಾಡುತ್ತದೆ. ಭಾರತ ಸರ್ಕಾರದ ನಿಯಮಗಳ ಪ್ರಕಾರ ರಿಲಯನ್ಸ್- ಡಸಾಲ್ಟ್ ಜಂಟಿ ಉದ್ಯಮದಲ್ಲಿ ಶೇ.51 ಶೇರುಗಳು ರಿಲಯನ್ಸ್ ಹೊಂದಿದ್ದರೆ, ಶೇ.49 ರಷ್ಟು ಶೇರುಗಳು ಡಸಾಲ್ಟ್ ಕಂಪನಿ ಹೊಂದಿರಲಿದೆ ಎಂದು ವಿವರಿಸಿದರು.

    126 ವಿಮಾನ ಮತ್ತು ಹಾರಲು ಸಿದ್ಧವಾಗಿರುವ 36 ವಿಮಾನದ ದರಕ್ಕೆ ಹೋಲಿಸಿದರೆ ಶೇ.9 ರಷ್ಟು ಕಡಿಮೆ ದರದಲ್ಲಿ ವಿಮಾನ ಉತ್ಪಾದನೆಯಾಗಲಿದೆ ಎಂದು ಈ ವೇಳೆ ಎರಿಕ್ ಟ್ರಾಪ್ಪಿಯರ್ ಹೇಳಿದರು.

     

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನವಭಾರತದ ದೇವಾಲಯ ಎಚ್‍ಎಎಲ್‍ಗೆ ಕೇಂದ್ರದಿಂದ ಅವಮಾನ: ರಾಹುಲ್ ಗಾಂಧಿ

    ನವಭಾರತದ ದೇವಾಲಯ ಎಚ್‍ಎಎಲ್‍ಗೆ ಕೇಂದ್ರದಿಂದ ಅವಮಾನ: ರಾಹುಲ್ ಗಾಂಧಿ

    ಬೆಂಗಳೂರು: ರಫೇಲ್ ಯುದ್ಧ ವಿಮಾನದ ಒಪ್ಪಂದವನ್ನು ಬೇರೆ ಸಂಸ್ಥೆಗೆ ನೀಡುವ ಮೂಲಕ ದೇಶದ ರಕ್ಷಣಾ ವ್ಯವಸ್ಥೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದ ಎಚ್‍ಎಎಲ್ ಸಂಸ್ಥೆಗೆ ಮೋದಿ ಸರ್ಕಾರ ಅವಮಾನ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ನಿವೃತ್ತ ಎಚ್‍ಎಎಲ್ ನೌಕಕರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಚ್‍ಎಎಲ್ ಸಂಸ್ಥೆ ಸುಮಾರು 78 ವರ್ಷಗಳ ಹಳೆಯ ಸಂಸ್ಥೆಯಾಗಿದ್ದು, ಹಲವು ಮಾದರಿಯ ವಿಮಾನಗಳು, ಹೆಲಿಕಾಪ್ಟರ್ ಗಳನ್ನು ತಯಾರಿಸುತ್ತಿದೆ. ಅಲ್ಲದೇ ದೇಶದ ವೈಮಾನಿಕ ರಂಗಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ದೇಶದ ಬೆನ್ನೆಲುಬು ನಮ್ಮ ರಕ್ಷಣಾ ಕ್ಷೇತ್ರ. ಆದರೆ ಕೇಂದ್ರ ಸರ್ಕಾರ ರಫೇಲ್ ಯುದ್ಧ ವಿಮಾನದ ಒಪ್ಪಂದವನ್ನು ಬೇರೆ ಸಂಸ್ಥೆಗೆ ನೀಡಿದೆ. ಝೀರೋ ಪರ್ಸೆಂಟ್ ಅನುಭವವಿಲ್ಲದವರಿಗೆ ಟೆಂಡರ್ ನೀಡುವ ಮೂಲಕ ಎಚ್‍ಎಎಲ್ ಸಂಸ್ಥೆಗೆ ಕೇಂದ್ರ ಅವಮಾನ ಮಾಡಿದೆ ಎಂದು ದೂರಿದರು.

    ನಾನು ನಿಮ್ಮೊಂದಿಗೆ ಯಾವುದೇ ರಾಜಕೀಯ ಭಾಷಣ ಮಾಡಲು ಬಂದಿಲ್ಲ. ಕೇವಲ ಕೇಂದ್ರ ಸರ್ಕಾರ ಭ್ರಷ್ಟಚಾರದ ಬಗ್ಗೆ ಮಾತನಾಡಲು ನನಗೆ ವೇದಿಕೆ ಸಿಕ್ಕಿದೆ. ಎಚ್‍ಎಎಲ್ ದೇಶಕ್ಕೆ ನೀಡಿದ್ದ ಕೊಡುಗೆಗಳ ಬಗ್ಗೆ ಮಾತನಾಡಲು ನಾನು ಬಂದಿದ್ದೇನೆ. ಇಲ್ಲಿ ಸೇರಿರುವ ನಿಮಗೆಲ್ಲ ಅಭಿನಂದನೆಗಳು. ಭಾರತದ ವೈಮಾನಿಕ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿರುವ ಸಂಸ್ಥೆ ಹಾಗೂ 70 ವರ್ಷಗಳ ನೌಕರರ ಶ್ರಮಕ್ಕೆ ಕೇಂದ್ರ ಸರ್ಕಾರ ಅಪಮಾನ ಮಾಡಿದೆ. ಎಚ್‍ಎಎಲ್ ರಫೇಲ್ ಯುದ್ಧ ವಿಮಾನ ತಯಾರಿಸುವ ಸಾಕಷ್ಟು ಸಾಮರ್ಥ್ಯ ಹೊಂದಿದೆ. ಆದರೆ ಪ್ರಧಾನಿ ಮೋದಿಯವರು ಅನಿಲ್ ಅಂಬಾನಿಯವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಮತ್ತೊಮ್ಮೆ ಆರೋಪಿಸಿದರು.

    ಈ ಒಪ್ಪಂದದಲ್ಲಿ ಅನಿಲ್ ಅಂಬಾನಿಗೆ ಯಾವುದೇ ಅನುಭವವಿಲ್ಲ. ಎಚ್‍ಎಎಲ್ ಸಂಸ್ಥೆ ನಷ್ಟದಲ್ಲಿಲ್ಲ, ಆದರೆ ರಿಲಯನ್ಸ್ ನಷ್ಟದಲ್ಲಿದೆ. ಅನಿಲ್ ಅಂಬಾನಿಗಾಗಿ ಎಚ್‍ಎಎಲ್ ಸಂಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಅನಿಲ್ ಅಂಬಾನಿ ಒಡೆತನದ ಸಂಸ್ಥೆಗೆ ರಫೇಲ್ ಒಪ್ಪಂದ ನೀಡುವ ಮೂಲಕ ದೇಶದ ಸಾವಿರಾರು ಜನರ ಉದ್ಯೋಗವನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ 35,000 ಕೋಟಿ ರೂಪಾಯಿ ಕೊಟ್ಟು ಒಪ್ಪಂದ ಮಾಡುವಲ್ಲಿ ಪ್ರಧಾನಿ ಉತ್ಸುಕರಾಗಿದ್ದಾರೆ. ಸತ್ಯ ಇವತ್ತು ಕೇಂದ್ರದವರಿಗೆ ಬೇಕಾಗಿಲ್ಲ. ಮಾಧ್ಯಮಗಳು ಕೂಡ ಸತ್ಯವನ್ನ ಮರೆಮಾಚುತ್ತಿವೆ ಎಂದು ಆರೋಪಿಸಿದರು.

    ಎಚ್‍ಎಎಲ್ ಅನ್ನು ದೇವಾಲಯಕ್ಕೆ ಹೋಲಿಸಿ ಮಾತನಾಡಿದ ಅವರು, ಇದು ನವಭಾರತದ ದೇವಾಲಯವಿದ್ದಂತೆ ಆದರೆ ಇದನ್ನು ಪ್ರೀತಿಸಲು ನಮ್ಮಿಂದ ಆಗುತ್ತಿಲ್ಲ. 70 ವರ್ಷಗಳ ಸಾಧನೆ ಮತ್ತು ಮಹತ್ವದ ಕೆಲಸವನ್ನು ಯಾರೂ ಗಮನಿಸುತ್ತಿಲ್ಲ. ಕೇಂದ್ರ ಸರ್ಕಾರದ ಹಿರಿಯರೊಬ್ಬರು ಎಚ್‍ಎಎಲ್ ಸಾಮರ್ಥ್ಯ ವಿಲ್ಲವೆಂದು ಹೇಳುತ್ತಿದ್ದಾರೆ. ನಾನು ಅವರನ್ನು ಕೇಳುತ್ತೇನೆ ನಿಮಗಿರುವ ಸಾಮಥ್ರ್ಯವಾದರೂ ಏನು? ನಾನು ಚಿಕ್ಕವನಿದ್ದಾಗಿನಿಂದಲೂ ಎಚ್‍ಎಎಲ್ ಸಾಧನೆಗಳ ಬಗ್ಗೆ ಕೇಳಿಕೊಂಡು ಬೆಳೆದಿದ್ದೇನೆ. ಇದನ್ನು ನೋಡುವ ದೃಷ್ಟಿಕೋನ ನಮ್ಮ ಸರ್ಕಾರಕ್ಕಿಲ್ಲ. ಸರ್ಕಾರ ನಿಮ್ಮ ಬಳಿ ಕ್ಷಮೆ ಕೇಳದಿದ್ದರೆ ನಾನು ನಿಮ್ಮನ್ನು ಕ್ಷಮೆ ಕೋರುತ್ತೇನೆ. ರಫೇಲ್ ಗುತ್ತಿಗೆ ನಿಮ್ಮ ಹಕ್ಕು, ಆ ಹಕ್ಕಿಗೆ ನಿಮ್ಮ ಜೊತೆ ನಾನು ಶ್ರಮಿಸುತ್ತೇನೆ. ದಿನದ 24 ಗಂಟೆಯೂ ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv