Tag: ರಫೇಲ್ ಯುದ್ಧ ವಿಮಾನ

  • ರಫೇಲ್‌ನಲ್ಲಿ ಹಾರಾಟ ನಡೆಸಿ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

    ರಫೇಲ್‌ನಲ್ಲಿ ಹಾರಾಟ ನಡೆಸಿ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಿಂದ ರಫೇಲ್ ಯುದ್ಧ ವಿಮಾನದಲ್ಲಿ (Rafale Fighter Jet) ಹಾರಾಟ ನಡೆಸಿದ್ದಾರೆ. ಈ ಮೂಲಕ ರಫೇಲ್‌ನಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಐದು ತಿಂಗಳ ಹಿಂದೆ, ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತ ಆಪರೇಷನ್ ಸಿಂಧೂರ ನಡೆಸಿತು. ಇದೇ ವಾಯುನೆಲೆಯಿಂದ ರಫೇಲ್‌ಗಳು ಗಡಿಯುದ್ದಕ್ಕೂ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡುವ ಕಾರ್ಯಾಚರಣೆ ನಡೆಸಿದ್ದವು. ಆ ಮೂಲಕ ಭಾರತವು ಭಯೋತ್ಪಾದನಾ ವಿರೋಧಿ ಸಂದೇಶ ರವಾನಿಸಿತ್ತು. ಇದನ್ನೂ ಓದಿ: ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್‌ ಗ್ಯಾಂಗ್‌

    ಮುರ್ಮು ಅವರು ಯುದ್ಧ ವಿಮಾನದಲ್ಲಿ ನಡೆಸುತ್ತಿರುವ ಎರಡನೇ ಹಾರಾಟ ಇದು. ಭಾರತದ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ 2023ರ ಏಪ್ರಿಲ್ 8 ರಂದು ಅಸ್ಸಾಂನ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಜೆಟ್‌ನಲ್ಲಿ ಮುರ್ಮು ಹಾರಾಟ ನಡೆಸಿದ್ದರು. ಹೀಗೆ ಹಾರಾಟ ನಡೆಸಿದ ಮೂರನೇ ರಾಷ್ಟ್ರಪತಿ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು.

    ಮುರ್ಮು ಅವರಿಗಿಂತ ಮೊದಲು, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಅವರು ಪುಣೆ ಬಳಿಯ ಲೋಹೆಗಾಂವ್‌ನಲ್ಲಿ ಸುಖೋಯ್-30 ಎಂಕೆಐನಲ್ಲಿ ಹಾರಾಟ ನಡೆಸಿದ್ದರು. ಫ್ರೆಂಚ್ ಏರೋಸ್ಪೇಸ್ ದೈತ್ಯ ಡಸಾಲ್ಟ್ ಏವಿಯೇಷನ್ ​​ತಯಾರಿಸಿದ ರಫೇಲ್‌ನಲ್ಲಿ ಭಾರತದ ರಾಷ್ಟ್ರಪತಿಯೊಬ್ಬರು ಹಾರಾಟ ನಡೆಸಿದ್ದು ಇದೇ ಮೊದಲು. ಇದನ್ನೂ ಓದಿ: ಯುದ್ಧ ಪೀಡಿತ ಗಾಜಾ, ಸುಡಾನ್, ಉಕ್ರೇನ್‌ನಲ್ಲಿ ಆಯುಧವಾಗ್ತಿದೆ ಆಹಾರ!

  • ಲಡಾಖ್ ಗಡಿಯಲ್ಲಿ ಯುದ್ಧ ವೀರ ರಫೇಲ್‍ಗಳ ಗಸ್ತು

    ಲಡಾಖ್ ಗಡಿಯಲ್ಲಿ ಯುದ್ಧ ವೀರ ರಫೇಲ್‍ಗಳ ಗಸ್ತು

    ನವದೆಹಲಿ: ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದು ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಭಾರತ ಚೀನಾ ನಡುವಿನ ವಾಸ್ತವಿಕ ಗಡಿ ರೇಖೆ ಬಳಿ ರಾತ್ರಿ ತಾಲೀಮು ಶುರು ಮಾಡಿವೆ. ಇದನ್ನೂ ಓದಿ: ಕನಸು ನನಸು.. ಗೇಮ್‌ ಚೇಂಜರ್‌ ರಫೇಲ್‌ ಭಾರತದಲ್ಲಿ ಲ್ಯಾಂಡ್‌

    ವಾರಗಳ ಹಿಂದೆಯಷ್ಟೇ ಭಾರತೀಯ ವಾಯುಪಡೆ ಸೇರಿರುವ ಐದು ರಫೇಲ್ ಯುದ್ಧ ವಿಮಾನಗಳು ಕಾರ್ಯಾಚರಣೆ ಆರಂಭಿಸಿವೆ. ರಫೇಲ್ ಯುದ್ಧವಿಮಾನಗಳು ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಈಗಾಗಲೇ ಲಡಾಖ್ ಪ್ರದೇಶಗಳಲ್ಲಿ ರಾತ್ರಿ ವೇಳೆ ತಾಲೀಮು ಶುರುಮಾಡಿವೆ. ರಫೇಲ್ ಆರ್ಭಟ ಕಂಡು ಕೊಟ್ಟ ವಾಗ್ದಾನ ಮರೆತು ಭಾರತದ ಗಡಿಯಲ್ಲಿ ಬೀಡುಬಿಟ್ಟಿರುವ ಚೀನಾ ಸೈನಿಕರಿಗೆ ಆತಂಕ ಶುರುವಾಗಿದೆ.

    ಲಡಾಖ್ ಪೂರ್ವಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ಅತಿಕ್ರಮಣ ಮಾಡಿದ್ದಾರೆ. ಟೆಂಟ್ ಹಾಕಿ ಸಂಚು ರೂಪಿಸಿದ್ದಾರೆ. ಯಾವುದೇ ಸಯಮದಲ್ಲಿ ಯುದ್ಧ ಆರಂಭವಾಗಬಹುದು ಎಂಬ ಆತಂಕದ ಕಾರ್ಮೋಡ ಸೃಷ್ಟಿಯಾಗಿದೆ. ವಾಸ್ತವಿಕ ನಿಯಂತ್ರಣ ಗಡಿ ರೇಖೆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಪರಿಸ್ಥಿತಿಗೆ ಪೂರಕವಾಗಿ ಲಡಾಖ್‍ನ ಹಿಮಪರ್ವತಗಳ ನಡುವೆ ರಾತ್ರಿ ವೇಳೆ ತಾಲೀಮು ನಡೆಸುತ್ತಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

    ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ, ಗಗನದಿಂದ ಗಗನಕ್ಕೆ ಚಿಮ್ಮುವ ಮೀಟಿಯಾರ್ ಕ್ಷಿಪಣಿಗಳು ಹಾಗೂ ಗಗನದಿಂದ ಭೂಮಿಗೆ ಅಪ್ಪಳಿಸುವ SCALP ಕ್ಷಿಪಣಿಯನ್ನು ಉಡಾವಣೆ ಮಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ರಫೇಲ್ ಯುದ್ಧವಿಮಾನಗಳ ತಾಲೀಮು ಸಾಗಿದೆ ಎನ್ನಲಾಗಿದೆ.

    ಸದ್ಯಕ್ಕೆ ಈ ಯುದ್ಧ ವಿಮಾನಗಳು ವಾಸ್ತವ ಗಡಿರೇಖೆಯಿಂದ ಸ್ವಲ್ಪ ದೂರದಲ್ಲಿ ಹಾರಾಟ ನಡೆಸುತ್ತಿವೆ. ಈ ಪ್ರದೇಶದಲ್ಲಿ ಚೀನಾ ಸೇನೆ ರೇಡಾರ್‌ಗಳನ್ನು ಸ್ಥಾಪಿಸಿರುವುದರಿಂದ, ಇವುಗಳ ಫ್ರೀಕ್ವೆನ್ಸಿ ಸಿಗ್ನೇಚರ್‌ಗಳನ್ನು ಗ್ರಹಿಸಿ, ದಾಳಿ ಮಾಡುವ ಸಂದರ್ಭದಲ್ಲಿ ಅವನ್ನು ಜಾಮ್ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ.

  • ಶಸ್ತ್ರ ಪೂಜೆಯಲ್ಲಿ ಓಂ ಬರೆಯದೆ ಮತ್ತೇನು ಬರೆಯಬೇಕಿತ್ತು: ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ

    ಶಸ್ತ್ರ ಪೂಜೆಯಲ್ಲಿ ಓಂ ಬರೆಯದೆ ಮತ್ತೇನು ಬರೆಯಬೇಕಿತ್ತು: ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ

    ಚಂಡೀಗಢ: ಶಸ್ತ್ರ ಪೂಜೆಯ ವೇಳೆ ಓಂ ಬರೆಯದೆ ಮತ್ತೇನು ಬರೆಯಬೇಕಿತ್ತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹರ್ಯಾಣದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಕೇಂದ್ರ ಸಚಿವರು, ವಿಜಯದಶಮಿ ದಿನದಂದು ಶಸ್ತ್ರ ಪೂಜೆ ಸಲ್ಲಿಸುವುದು ನಮ್ಮ ಸಂಪ್ರದಾಯ. ಆ ದಿನ ನಾನು ರಫೇಲ್ ಯುದ್ಧ ವಿಮಾನದ ಮೇಲೆ ಓಂ ಎಂದು ಬರೆದಿದ್ದೆ. ಆದರೆ ಕೆಲವರು ನಾನು ಯಾಕೆ ಓಂ ಅಂತ ಬರೆದೆ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರಿಗೆ ಒಂದು ಮಾತು ಕೇಳಲು ಇಚ್ಛಿಸುತ್ತೇನೆ. ಏನೆಂದರೆ ಓಂ ಬದಲಾಗಿ ನಾನು ಏನನ್ನು ಬರೆಯಬಹುದಿತ್ತು ಅಂತ ಅವರು ಹೇಳಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ನಲ್ಲಿ ರಫೇಲ್ ಇದ್ದಿದ್ರೆ ಇಲ್ಲಿಂದಲೇ ದಾಳಿ ನಡೆಸಬಹುದಿತ್ತು: ರಾಜನಾಥ್ ಸಿಂಗ್

    ಇದೇ ವೇಳೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು. ಜಮ್ಮು-ಕಾಶ್ಮೀರ ವಿಚಾರ ಆಂತರಿಕ ವಿಚಾರವಾಗಿದೆ. ಆದರೆ ಇದನ್ನು ನೀವು ಅಂತರಾಷ್ಟ್ರೀಯ ಸಮಸ್ಯೆಯಾಗಿ ಮಾಡಲು ಇಚ್ಛಿಸುತ್ತೀರಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ದೇಶದ ಆರ್ಥಿಕತೆಗಿಂತ 370ರ ಬಗ್ಗೆಯೇ ಹೆಚ್ಚು ನಂಬಿಕೆ: ಎಚ್‍ಡಿಡಿ ಟಾಂಗ್

    ವಿಜಯದಶಮಿ ದಿನವಾದ ಅಕ್ಟೋಬರ್ 8ರಂದು ಫ್ರಾನ್ಸ್ ನ ಒಂದು ರಫೇಲ್ ಯುದ್ಧ ವಿಮಾನವು ಭಾರತಕ್ಕೆ ಹಸ್ತಾಂತರಗೊಂಡಿತ್ತು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಪ್ಯಾರಿಸ್‍ನ ಬೊರಾಡೆಕ್ಸ್ ಸಮೀಪದ ಮೆರಿಗ್ನ್ಯಾಕ್ ವಾಯು ನೆಲೆಯಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡಿದ್ದರು. ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನದ ಮೇಲೆ ಓಂ ಎಂದು ಬರೆದಿದ್ದು, ಚಕ್ರಕ್ಕೆ ನಿಂಬೆಹಣ್ಣು ಇಟ್ಟಿದ್ದ ವಿಚಾರವಾಗಿ ಕೆಲ ವಿಪಕ್ಷ ನಾಯಕರು ವ್ಯಂಗ್ಯವಾಡಿದ್ದರು. ಅದಕ್ಕೆ ಈಗ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ.

    ಭಾರತ ಖರೀದಿಸುತ್ತಿರುವ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದು ವಿಮಾನವನ್ನು ಮಾತ್ರ ಫ್ರಾನ್ಸ್ ಹಸ್ತಾಂತರಿಸಿದೆ. ಉಳಿದಂತೆ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ.

     

  • ವಿಜಯದಶಮಿಯಂದು ರಫೇಲ್ ವಿಮಾನ ಭಾರತಕ್ಕೆ ಹಸ್ತಾಂತರ

    ವಿಜಯದಶಮಿಯಂದು ರಫೇಲ್ ವಿಮಾನ ಭಾರತಕ್ಕೆ ಹಸ್ತಾಂತರ

    ನವದೆಹಲಿ: ರಫೇಲ್ ಯುದ್ಧ ವಿಮಾನ ವಿಜಯದಶಮಿ ದಿನವಾದ ಇಂದು ಭಾರತಕ್ಕೆ ಹಸ್ತಾಂತರಗೊಂಡಿದೆ.

    ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ದಿನಗಳ ಕಾಲ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಪ್ಯಾರಿಸ್‍ನ ಬೊರಾಡೆಕ್ಸ್ ಸಮೀಪದ ಮೆರಿಗ್ನ್ಯಾಕ್ ವಾಯು ನೆಲೆಯಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಮಾಡುವ ಮೂಲಕ ಬರಮಾಡಿಕೊಂಡರು.

    ಭಾರತ ಖರೀದಿಸುತ್ತಿರುವ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದು ವಿಮಾನವನ್ನು ಮಾತ್ರ ಫ್ರಾನ್ಸ್ ಹಸ್ತಾಂತರಿಸಿದೆ. ಉಳಿದಂತೆ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ.

    ರಫೇಲ್ ವಿಶೇಷತೆ ಏನು?
    ಎರಡು ಎಂಜಿನ್, ಎರಡು ಸೀಟ್ ಗಳನ್ನು ಹೊಂದಿರುವ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮಿ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

    ವೈರಿಗಳ  ನೆಲೆಯ ಮೇಲೆ 100 ಕಿ.ಮೀ. ಎತ್ತರದಿಂದಲೇ ದಾಳಿ ಮಾಡುವ ಸಾಮರ್ಥ್ಯ ರಫೇಲ್ ಯುದ್ಧ ವಿಮಾನಕ್ಕಿದೆ. ಜೊತೆಗೆ 50,000 ಅಡಿ ಎತ್ತರದಲ್ಲಿ ಹಾಡುವ ಸಾಮರ್ಥ್ಯ ಹೊಂದಿದೆ.

    ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್ ವಿಮಾನವನ್ನು ನಿರ್ಮಿಸಿದ್ದು, ಭಾರತ ಅಲ್ಲದೇ ಈಜಿಪ್ಟ್, ಕತಾರ್ ದೇಶಗಳು ರಫೇಲ್ ಖರೀದಿ ಸಂಬಂಧ ಡಸಾಲ್ಟ್ ಕಂಪನಿಯ ಜೊತೆ ಮಾತುಕತೆ ನಡೆಸಿವೆ.

    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗೆ ಅನುಗುಣವಾಗಿ ರಫೇಲ್ ವಿಮಾನ ತಯಾರಾಗುತ್ತಿದೆ.

    ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂಕೋರ್ಟ್ ಹೇಳಿದೆ ಅಂತ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಈ ವಿಚಾರವಾಗಿ ಬಿಜೆಪಿ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಮುಂದೆ ವಿಷಾಧ ವ್ಯಕ್ತಪಡಿಸಿದ್ದರು.

  • ಈ ಪರಿಸ್ಥಿತಿಯಲ್ಲಿ ರಫೇಲ್ ಇದ್ದಿದ್ರೆ ಕಥೆಯೇ ಬೇರೆ ಇರ್ತಿತ್ತು: ಪ್ರಧಾನಿ ಮೋದಿ

    ಈ ಪರಿಸ್ಥಿತಿಯಲ್ಲಿ ರಫೇಲ್ ಇದ್ದಿದ್ರೆ ಕಥೆಯೇ ಬೇರೆ ಇರ್ತಿತ್ತು: ಪ್ರಧಾನಿ ಮೋದಿ

    – ಮೋದಿಯನ್ನು ನೀವು ತೆಗಳಿ, ಸೈನ್ಯವನ್ನು ತೆಗಳಬೇಡಿ
    – ಸೈನ್ಯವನ್ನು ತೆಗಳಿ ಉಗ್ರರಿಗೆ ಸಹಾಯಮಾಡಬೇಡಿ

    ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ಮೋಡ ಕವಿದಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸನ್ನಿವೇಶದಲ್ಲಿ ರಫೇಲ್ ಯುದ್ಧ ವಿಮಾನ ಇರುತ್ತಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಹೇಳಿದ್ದಾರೆ.

    ದೇಶ ರಫೇಲ್ ಫೈಟರ್ ಜೆಟ್ ಅನುಪಸ್ಥಿತಿಯಲ್ಲಿದೆ. ರಫೆಲ್ ಒಪ್ಪಂದದ ರಾಜಕೀಯ ಕಾರಣದಿಂದಾಗಿ ನಾವು ಈಗಲೂ ಬಳಲುತ್ತಿದ್ದೇವೆ. ಸ್ವಾಭಿಮಾನದ ಆಸಕ್ತಿಗಳು ಮತ್ತು ರಾಜಕೀಯವು ರಾಷ್ಟ್ರದ ಹಿತಾಸಕ್ತಿಗೆ ಹೆಚ್ಚಿನ ಹಾನಿ ತಂದಿದೆ. ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಷಯಗಳಿಗೆ ವಿರೋಧಿಸಬಾರದು ಎಂದು ಹೇಳಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

    ಭಯೋತ್ಪಾದನೆ ವಿರುದ್ಧದ ಹೋರಾಡುತ್ತಿರುವ ಭಾರತದ ಹಿಂದೆ ವಿಶ್ವದ ಅನೇಕ ದೇಶಗಳು ನಿಂತಿವೆ. ಆದರೆ ದೇಶದ ಕೆಲವು ಪಕ್ಷಗಳು ಭಾರತದ ಹೋರಾಟವನ್ನೇ ಪ್ರಶ್ನಿಸುತ್ತಿವೆ. ದೇಶಕ್ಕೆ ಎದುರಾಗಿರುವ ಸವಾಲುಗಳಲ್ಲಿ ಕೆಲವರು ತಮ್ಮದೇ ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ದೇಶದ ಪ್ರತಿಯೊಬ್ಬರು ಭಾರತೀಯ ಸೇನೆಯ ನಿಂತಿದ್ದಾರೆ. ಕೆಲವು ಪಕ್ಷಗಳು ಅವರ ಯೋಧರ ಸಾಧನೆ, ಕಾರ್ಯದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಟಾಂಗ್ ಕೊಟ್ಟರು.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ನೀತಿಗಳನ್ನು ಟೀಕಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ ಮೋದಿ ವಿರೋಧಿ ಟೀಕೆಗಳು ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಜೆಯುಡಿ ಮುಖ್ಯಸ್ಥ ಹಫೀಜ್ ಸಯೀರ್ ರಂತ ಭಯೋತ್ಪಾದಕರಿಗೆ ಸಹಾಯವಾಗಬಾರದು. ಮೋದಿ ವಿರೋಧಿಸುವ ನಿಮ್ಮ ಮೊಂಡುತನದ ಬಯಕೆಯಲ್ಲಿ, ನೀವು ಭಯೋತ್ಪಾದಕರನ್ನು ಬಲಪಡಿಸುವುದನ್ನು ಕೊನೆಗೊಳಿಸಬೇಡಿ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ವಿಪಕ್ಷಗಳಿಂದ ವ್ಯಾಪಕ ಟೀಕಿಗಳು ವ್ಯಕ್ತವಾಗಿವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. 30 ಸಾವಿರ ಕೋಟಿ ರೂ.ಗಳನ್ನು ಕದ್ದು ನಿಮ್ಮ ಸ್ನೇಹಿತ, ಉದ್ಯಮಿ ಅನಿಲ್ ಅಂಬಾನಿಗೆ ನೀಡಿದ್ದೀರಿ. ರಫೇಲ್ ಜೆಟ್ ಆಗಮನದ ವಿಳಂಬಕ್ಕೆ ನೀವು ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಆರೋಪಿಸಿದ್ದಾರೆ.

    ರಫೇಲ್ ಯುದ್ಧ ವಿಮಾನ ಖರೀದಿಯ ಪ್ರಕರಣದ ತೀರ್ಪು ಮರು ಪರಿಶೀಲನೆ ಸಂಬಂಧ ವಿವಿಧ ಅರ್ಜಿಗಳು ಬಂದಿದ್ದು, ಅವುಗಳನ್ನು ಆಲಿಸಲು ಪ್ರತ್ಯೇಕ ಪೀಠಗಳನ್ನು ರಚಿಸಲಾಗುತ್ತದೆ. ಅರ್ಜಿಗಳನ್ನು ಪರೀಕ್ಷಿಸಬೇಕಿದೆ. ಮುಂದೆ ಏನಾಗುತ್ತದೆ ಎನ್ನುವುದು ನೋಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯನಾಯಮೂರ್ತಿ ರಂಜನ್ ಗೋಗಯ್, ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆ ಮಾರ್ಚ್ 6 ರಂದು ನ್ಯಾಯಾಲಯದಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ನವದೆಹಲಿ: ಎಚ್‍ಎಎಲ್(ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)ನೊಂದಿಗೆ ರಫೇಲ್ ಯುದ್ದ ವಿಮಾನದ ಒಪ್ಪಂದವನ್ನು ಕೈಬಿಟ್ಟಿದ್ದೇಕೆ ಎಂಬುದರ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

    ರಫೇಲ್ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಲ್ಲಿ ಸಂಪಾದಕರು ಮತ್ತು ವರದಿಗಾರರ ಜೊತೆ ಸಂವಾದ ನಡೆಸಿದ ಸೀತಾರಾಮನ್ ಕಾಂಗ್ರೆಸ್ ಅವಧಿಗಿಂತ ನಮ್ಮ ಒಪ್ಪಂದ ಅತ್ಯುತ್ತಮವಾಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಫ್ರಾನ್ಸ್ ಡಸಾಲ್ಟ್ ಏವಿಯೇಶನ್ ಸಹಯೋಗದೊಂದಿಗೆ ರಫೇಲ್ ಯುದ್ದ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಎಚ್‍ಎಎಲ್‍ಗೆ ಇರಲಿಲ್ಲ. ಇದು ಯುಪಿಎ ಅವಧಿಯಲ್ಲಿ ಮಾಡಿಕೊಂಡಿದ್ದ 126 ರಫೆಲ್ ಯುದ್ದ ವಿಮಾನಗಳ ಖರೀದಿ ಒಪ್ಪಂದ ಮುರಿದು ಬೀಳಲು ಪ್ರಮಖ ಕಾರಣ. ರಫೇಲ್ ಯುದ್ದ ವಿಮಾನಗಳ ಖರೀದಿ ಸಂಬಂಧ ಎಚ್‍ಎಎಲ್ ಮತ್ತು ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಜೊತೆಗೆ ಹಲವು ಸುತ್ತಿನ ಮಾತುಕತೆಗಳು ನಡೆದವು. ಮಾತುಕತೆ ವೇಳೆ ರಫೇಲ್ ಯುದ್ದ ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಮುಂದಾದರೆ ಅದರ ಬೆಲೆ ಮೂಲ ಬೆಲೆಗಿಂತ ದುಪ್ಪಟ್ಟಾಗುವ ವಿಚಾರ ಬೆಳಕಿಗೆ ಬಂದಿತ್ತು. ಒಂದು ವೇಳೆ ವಿಮಾನಗಳನ್ನು ಭಾರತದಲ್ಲೇ ತಯಾರಿಸಿದರೆ, ಅವುಗಳಿಗೆ ಗ್ಯಾರೆಂಟಿ ಕೊಡಬೇಕಾಗಿತ್ತು. ಆದರೆ ವಿಮಾನಗಳಿಗೆ ಗ್ಯಾರಂಟಿ ಕೊಡುವ ಪರಿಸ್ಥಿತಿಯಲ್ಲಿ ಎಚ್‍ಎಎಲ್ ಇರಲಿಲ್ಲ. ಹೀಗಾಗಿ ಡಸಾಲ್ಟ್ ಕಂಪೆನಿಯು ಜಂಟಿಯಾಗಿ ರಫೇಲ್ ವಿಮಾನಗಳನ್ನು ನಿರ್ಮಿಸುವ ಮಾತುಕತೆಯನ್ನು ನಿಲ್ಲಿಸಿತ್ತು ಎಂದು ವಿವರಿಸಿದರು.

    ಯುಪಿಎ ಸರ್ಕಾರದ ಅವಧಿಯಲ್ಲಿನ ಒಪ್ಪಂದಕ್ಕೆ ಹೋಲಿಸಿದರೆ, ಮುಂದಿನ ವರ್ಷ 2019ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ರಫೇಲ್ ಯುದ್ಧವಿಮಾನಗಳು ಸೇನೆಗೆ ಸಿಗಲಿವೆ. ಇವುಗಳು ಶಸ್ತ್ರಬಳಕೆ, ಏವಿಯೋನಿಕ್ಸ್ ತಂತ್ರಜ್ಞಾನ ಹಾಗೂ ಇನ್ನೂ ಅನೇಕ ಉನ್ನತ ತಂತ್ರಜ್ಞಾನಗಳನ್ನು ಒಳಗೊಂಡಿವೆ. 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಫ್ರಾನ್ಸ್’ನೊಂದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಈ ವಿಚಾರದಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಎಚ್‍ಎಎಲ್‍ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲವೆಂದು ಕಾಂಗ್ರೆಸ್ ಗಂಭೀರವಾಗಿ ಆರೋಪ ಮಾಡುತ್ತಿದೆ ಎಂದು ತಿಳಿಸಿದರು.

    ಕಾಂಗ್ರೆಸ್‍ಗೆ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯಗಳು ಸಿಗಲಿಲ್ಲ. ಹೀಗಾಗಿ ಅವರು ರಫೇಲ್ ಒಪ್ಪಂದದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಹೇಳಲು ಮುಂದಾದರು. ಆದರೆ ನಮ್ಮದು ದೇಶಕಂಡ ಅತ್ಯಂತ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ. ಹತಾಶಾ ಮನೋಭಾವನೆಗೆ ತಲುಪಿರುವ ಕಾಂಗ್ರೆಸ್ ನಮ್ಮ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ ಎಂದು ಹೇಳಿದರು.

    ರಫೇಲ್ ಒಪ್ಪಂದದ ಕುರಿತು ವಿರೋಧ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಆಸಕ್ತಿ ನಮಗಿಲ್ಲ. ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ವಾಯುಪಡೆಯ ಕಾರ್ಯಾಚರಣೆ ಸನ್ನದ್ಧತೆಯು ಹೇಗೆ ಇರಬೇಕೆಂಬುದರ ಕಾಳಜಿ ಇಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ 526 ಕೋಟಿಗೆ ಒಪ್ಪಂದ ಆಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ 1,670 ಕೋಟಿ ರೂಪಾಯಿ ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಾನು ಇಷ್ಟಂತು ಹೇಳಬಲ್ಲೆ, ಯುಪಿಎ ಅವಧಿಯಲ್ಲಿನ ಒಪ್ಪಂದದ ವಿಮಾನಗಳು ಕೇವಲ ಹಾರುವ ಮತ್ತು ಇಳಿಯುವ ಸಾಮರ್ಥ್ಯವನ್ನು ಮಾತ್ರ ಹೊಂದಿದ್ದವು. ಆದರೆ ನಮ್ಮ ಅವಧಿಯಲ್ಲಿನ ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನಗಳ ಸಹಿತ ಶತ್ರುಗಳೊಂದಿಗೆ ಹೋರಾಡುವ ಶಕ್ತಿಯನ್ನು ಸಹ ಹೊಂದಿವೆ ಎಂದು ತಿಳಿಸಿದರು.

    ಏನಿದು ರಫೇಲ್ ಒಪ್ಪಂದ?
    ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.

    ಎಚ್‍ಎಎಲ್ ಕೈ ಬಿಡಲು ಕಾರಣಗಳೇನು?
    ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್’ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv