ಲಕ್ನೋ: ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಮಂಡ್ಯ ಮಾಜಿ ಸಂಸದೆ ರಮ್ಯಾ, ಪ್ರಧಾನಿ ಮೋದಿ ಅವರನ್ನು ಟೀಕಿಸಿ ಅಪೇಕ್ಷರ್ಹ ಫೋಟೋವನ್ನು ಟ್ವೀಟ್ ಮಾಡಿದ್ದಕ್ಕೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಲಕ್ನೋ ಮೂಲ ವಕೀಲರಾದ ಸೈಯದ್ ರಿಜ್ವಾನ್ ಅಹ್ಮದ್ ಮಂಗಳವಾರ ಗೌಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ರಮ್ಯಾ ಅವರ ವಿರುದ್ಧ ಐಪಿಸಿ ಸೆಕ್ಷನ್ 67 (ಮಾಹಿತಿ ತಂತ್ರಜ್ಞಾನದ ಕಾಯ್ದೆ), 2008 ಮತ್ತು ಸೆಕ್ಷನ್ 124ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಫೇಲ್ ಒಪ್ಪಂದ ಕುರಿತು ರಮ್ಯಾ ಸೆಪ್ಟೆಂಬರ್ 24 ರಂದು ಮೋದಿ ಅವರ ಮೇಣದ ಪ್ರತಿಮೆಯ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಮೋದಿ ಸ್ವತಃ ತಮ್ಮ ಪ್ರತಿಮೆ ಮೇಲೆ ಕಳ್ಳ ಎಂದು ಬರೆಯುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಕಳ್ಳ ಪ್ರಧಾನಿ ಸುಮ್ಮನಿದ್ದಾರೆ (#ChorPMChupHai) ಎಂಬ ಹ್ಯಾಷ್ ಟ್ಯಾಗನ್ನು ರಮ್ಯಾ ಬಳಸಿ ಟ್ವೀಟ್ ಮಾಡಿದ್ದರು.
ರಮ್ಯಾ ಮಾಡಿದ ಟ್ವಿಟ್ ನಲ್ಲಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುವ ಅಂಶವಿದೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಜ್ವಾನ್ ಅಹ್ಮದ್ ದೂರು ನೀಡಿದ್ದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ರಫೇಲ್ ಒಪ್ಪಂದ ಕುರಿತು ಮೋದಿ ಸರ್ಕಾರದ ವಿರುದ್ಧ ಅರೋಪಗಳ ಸುರಿಮಳೆ ಮಾಡಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ (ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು ಎಂದು ರಾಹುಲ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಆರೋಪಗಳನ್ನು ಅಲ್ಲಗೆಳೆದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯಗಳು ಸಿಗಲಿಲ್ಲ. ಹೀಗಾಗಿ ಅವರು ರಫೇಲ್ ಒಪ್ಪಂದದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಹೇಳಲು ಮುಂದಾಗಿದೆ. ಆದರೆ ನಮ್ಮದು ದೇಶಕಂಡ ಅತ್ಯಂತ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ. ಹತಾಶಾ ಮನೋಭಾವನೆಗೆ ತಲುಪಿರುವ ಕಾಂಗ್ರೆಸ್ ನಮ್ಮ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ ಎಂದು ಹೇಳಿದ್ದರು.
ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮಥ್ರ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್ ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv