Tag: ರಥ

  • ‘ಇಂಥದ್ದನ್ನ ಸಹಿಸಬೇಕಾ ಹೇಳಿ’- ಟೀಕೆಯ ಬೆನ್ನಲ್ಲೇ ಚಾಮುಂಡಿ ಬೆಟ್ಟದ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ

    ‘ಇಂಥದ್ದನ್ನ ಸಹಿಸಬೇಕಾ ಹೇಳಿ’- ಟೀಕೆಯ ಬೆನ್ನಲ್ಲೇ ಚಾಮುಂಡಿ ಬೆಟ್ಟದ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ

    ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥದ ಚಕ್ರಕ್ಕೆ ಆಕ್ಷೇಪರ್ಹ ಚಿತ್ರರಚನೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರ ವಿರೋಧದ ನಡುವೆ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ ಮಾಡಲಾಗಿದೆ.

    ಸಂಸದ ಪ್ರತಾಪ್ ಸಿಂಹ ಅವರು ಚಾಮುಂಡಿ ಬೆಟ್ಟದ ರಥ ಚಕ್ರಗಳಿಗೆ ಮಾಡಿದ್ದ ಪೇಂಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಸಂಸದರು, ಚಾಮುಂಡಿ ಬೆಟ್ಟದ ರಥದ ಚಕ್ರಗಳಿಗೆ ಮಾಡಿ ಪೇಂಟಿಂಗ್ ನೋಡಿ… ಇಂಥದ್ದನ್ನ ಸಹಿಸಬೇಕಾ ಹೇಳಿ ಎಂದು ಪ್ರಶ್ನಿಸಿದ್ದರು. ಬಳಿಕ ಮತ್ತೊಂದು ಟ್ವೀಟ್ ಮಾಡಿ, ನಿಮ್ಮ ಗಮನಕ್ಕೆ ಇರಲಿ ಅಂತ ಫೋಟೋ ಹಾಕಿದ್ದೇನೆ. ಪಾಠ ಕಲಿಸದೇ ಬಿಡಲ್ಲ ಎಂದು ಗುಡುಗಿದ್ದರು.

    ಚಿತ್ರದಲ್ಲಿ ಏನಿತ್ತು?:
    ಚಾಮುಂಡಿ ಬೆಟ್ಟದ ಮಹಾಬಲೇಶ್ವರ ರಥದ ಚಕ್ರಗಳಿಗೆ ಹಸಿರು ಬಣ್ಣದಿಂದ ಅರ್ಧ ಚಂದ್ರ ಹಾಗೂ ಅದರ ಮೇಲೊಂದು ನಕ್ಷದ ಬಿಂಬಿಸುವಂತಹ ಕಲಾಕೃತಿ ಬಿಡಿಸಲಾಗಿತ್ತು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ರಥದ ಚಕ್ರಗಳ ಮೇಲಿದ್ದ ಅರ್ಧ ಚಂದ್ರ ಹಾಗೂ ನಕ್ಷತ್ರದ ಬಿಂಬಿಸುವ ಕಲಾಕೃತಿಯನ್ನು ತೆಗೆದು ಹಾಕಲಾಗಿದೆ.

    ಆದರೆ ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧ ವ್ಯಕ್ಯವಾಗಿತ್ತು. ಸಂಸದರೇ ಹೀಗೆ ಪ್ರಚೋದನಕಾರಿ ಪೋಸ್ಟ್ ಮಾಡಿದ್ದು ಸರಿಯೇ ಎಂದು ಕೆಲವರು ಪ್ರಶ್ನಿಸಿದ್ದರು. ಈ ವಿಚಾರ ಮುಜುರಾಯಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಪೇಟಿಂಗ್ ಬದಲಾವಣೆ ಮಾಡಿದ್ದಾರೆ.

  • ಜಾತ್ರೆ ವೇಳೆ ರಥದ ಚಕ್ರ ಸಿಲುಕಿ ಬಾಲಕ ಸಾವು, ಮತ್ತೋರ್ವನಿಗೆ ಗಾಯ

    ಜಾತ್ರೆ ವೇಳೆ ರಥದ ಚಕ್ರ ಸಿಲುಕಿ ಬಾಲಕ ಸಾವು, ಮತ್ತೋರ್ವನಿಗೆ ಗಾಯ

    ಮಂಡ್ಯ: ಶಿವರಾತ್ರಿ ಜಾತ್ರಾಮಹೋತ್ಸವದ ಅಂಗವಾಗಿ ಭಾನುವಾರ ನಡೆದ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಬಾಲಕ ಮೃತಪಟ್ಟು, ಮತ್ತೋರ್ವನಿಗೆ ಗಾಯವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಹನುಂತನಗರದ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಘಟನೆ ನಡೆದಿದ್ದು, ಕರಡಕೆರೆ ಗ್ರಾಮದ ಶಿವಕುಮಾರ್ (13) ಮೃತಪಟ್ಟ ಬಾಲಕ. ಲಿಂಗೇಗೌಡ (50) ಕಾಲುಮುರಿದುಕೊಂಡ ವ್ಯಕ್ತಿ. ಭಾನುವಾರ ಸಂಜೆ 4 ಗಂಟೆಗೆ ಪ್ರಾರಂಭವಾದ ರಥೋತ್ಸವ ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ರಥವನ್ನು ನಿಲ್ಲಿಸಲಾಗಿತ್ತು.

    ನಂತರ ರಥದ ಮನೆಗೆ ರಥವನ್ನು ಎಳೆದು ನಿಲ್ಲಿಸುವಾಗ ಶಿವಕುಮಾರ್ ರಥದ ಚಕ್ರಕ್ಕೆ ಸಿಲುಕಿದ್ದಾನೆ. ಇದನ್ನು ಕಂಡ ಲಿಂಗೇಗೌಡ ಬಾಲಕನ್ನು ರಕ್ಷಿಸಲು ಯತ್ನಿಸಿದಾಗ ರಥದ ಹಿಂಬದಿಯ ಚಕ್ರಕ್ಕೆ ಕಾಲು ಸಿಲುಕಿ ಅವರ ಕಾಲು ಮುರಿದು ತೀವ್ರವಾಗಿ ಗಾಯಗೊಂಡಿದ್ದಾರೆ.

    ಬಳಿಕ ಇಬ್ಬರನ್ನೂ ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ್ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಲಿಂಗೇಗೌಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ- ಉಡುಪಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ

    ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ- ಉಡುಪಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ

    ಉಡುಪಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿತಗೊಳ್ಳುವ ಬ್ರಹ್ಮರಥ ಉಡುಪಿಯಿಂದ ಮೆರವಣಿಗೆ ಹೊರಟಿದೆ. ಕುಕ್ಕೆಯ ಬ್ರಹ್ಮರಥ ಬಹಳ ಹಳೆಯದಾಗಿದ್ದು, ಜೀರ್ಣಾವಸ್ಥೆಗೆ ತಲುಪಿತ್ತು. ಹೀಗಾಗಿ ದೇವಸ್ಥಾನ ಸಮಿತಿ ನೂತನ ರಥ ರಚನೆ ಮಾಡಬೇಕೆಂದು ತೀರ್ಮಾನಿಸಿತ್ತು.

    ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್ ಶೆಟ್ಟಿಯವರು ತಾವು ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿದ್ದರು. ಉಡುಪಿಯ ಕೋಟೇಶ್ವರದ ಶಿಲ್ಪಗುರು, ರಾಷ್ಟ್ರಪ್ರಶಸ್ತಿ ವಿಜೇತ ಲಕ್ಷ್ಮೀನಾರಾಯಣ ಆಚಾರ್ಯ ನೇತೃತ್ವದ ತಂಡ ಒಂದೂವರೆ ವರ್ಷ ನಿರಂತರವಾಗಿ ಕೆತ್ತನೆ ಕೆಲಸ ಮಾಡಿರುವ ಬ್ರಹ್ಮರಥ ಇಂದು ಕುಕ್ಕೆಗೆ ಹೊರಟಿದೆ. ಕೋಟೆಶ್ವರದಿಂದ ಕುಕ್ಕೆಯವರೆಗೆ ಅಲ್ಲಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆರತಿಯೆತ್ತಿ ಬರಮಾಡಿಕೊಳ್ಳಲಾಗುತ್ತದೆ.

    ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ರಥ ಅಕ್ಟೋಬರ್ 2ಕ್ಕೆ ಕುಕ್ಕೆ ಕ್ಷೇತ್ರವನ್ನು ತಲುಪಲಿದೆ. ಬೃಹತ್ ಗಾತ್ರದ ಟ್ರಕ್‍ನಲ್ಲಿ ರಥ ಮತ್ತು ಅದರ ಗಾಲಿಯನ್ನು ಉಡುಪಿಯಿಂದ ಕುಕ್ಕೆಗೆ ಸಾಗಿಸಲಾಯಿತು. ಮುತ್ತಪ್ಪ ರೈ ಪತ್ನಿ ಅನುರಾಧ ಉಡುಪಿಯ ಅಂಬಲಪಾಡಿಯಲ್ಲಿ ಆರತಿಯೆತ್ತಿ ಪೂಜೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವರ ಕೃಪೆಯಿಂದ ಕುಕ್ಕೆ ದೇವರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ದೇವರ ಸೇವೆ ಮಾಡುವ ಶಕ್ತಿ ನಮಗೆ ಸಿಗಲಿ ಎಂದು ಬೇಡಿಕೊಂಡಿದ್ದೇವೆ. ಅಲ್ಲಲ್ಲಿ ಜನ ಭಕ್ತಿ ತೋರಿ ಪೂಜೆ ಸಲ್ಲಿಸುತ್ತಿದ್ದಾರೆ. ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬ್ರಹ್ಮರಥ ಸಮರ್ಪಿಸುತ್ತೇವೆ ಎಂದರು. ದಕ್ಷಿಣ ಕನ್ನಡ ಜಿಲ್ಲೆ ಕಡಬದ ಉದ್ಯಮಿ ಅಜಿತ್ ಶೆಟ್ಟಿ ಕೂಡಾ ಬ್ರಹ್ಮ ರಥಕ್ಕೆ ದೇಣಿಗೆ ನೀಡಿದ್ದಾರೆ. ಕೋಟೇಶ್ವರದಿಂದ ಕುಕ್ಕೆಯವರೆಗೆ ತೆರಳುವ ಮೆರವಣಿಗೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ.

    ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ಈವರೆಗೆ ಸುಮಾರು 180 ರಥಗಳನ್ನು ಕೆತ್ತಿ ದೇವಸ್ಥಾನಗಳಿಗೆ ಕೊಟ್ಟಿದ್ದಾರೆ. 2006ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದು ಶಿಲ್ಪಗುರು ಎಂಬ ಬಿರುದು ಪಡೆದಿದ್ದರು. 2018ರ ಮಾರ್ಚ್ 15ರಂದು ಬ್ರಹ್ಮರಥದ ಕೆತ್ತನೆ ಕಾರ್ಯ ಆರಂಭ ಮಾಡಲಾಗಿತ್ತು. ಮಹಾಭಾರತ ಮತ್ತು ರಾಮಾಯಣದ ಕೆಲವು ಘಟನೆಗಳನ್ನು ರಥದಲ್ಲಿ ಕೆತ್ತಲಾಗಿದೆ.

  • ಬೆಳ್ಳಿಯನ್ನು ಕೊಡದೇ ಹರಕೆ ಮರೆತ ಮಾಜಿ ಸಿಎಂ

    ಬೆಳ್ಳಿಯನ್ನು ಕೊಡದೇ ಹರಕೆ ಮರೆತ ಮಾಜಿ ಸಿಎಂ

    ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾದಪ್ಪನಿಗೆ ಕೊಡುತ್ತೇನೆ ಎಂದಿದ್ದ ಬೆಳ್ಳಿಯನ್ನು ಕೊಡದೇ ತಮ್ಮ ಹರಕೆಯನ್ನು ಮರೆತಿದ್ದಾರೆ.

    ಸಿದ್ದರಾಮಯ್ಯ ಈ ಹಿಂದೆ ಮಾದಪ್ಪನಿಗೆ ಬೆಳ್ಳಿ ರಥ ಮಾಡಿಸಲು ತಮ್ಮಲ್ಲಿರುವ ಬೆಳ್ಳಿಯನ್ನು ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಸಿದ್ದರಾಮಯ್ಯ ಅವರು ತಮ್ಮ ಹರಕೆಯನ್ನು ತೀರಿಸಲಿಲ್ಲ. ಇದೀಗ ಬೆಳ್ಳಿ ರಥ ಮಾಡಿಸಲು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ.

    ಪ್ರಾಧಿಕಾರ ಈಗಾಗಲೇ ಮರದ ರಥ ಸಿದ್ಧಪಡಿಸಿಕೊಂಡಿದ್ದಾರೆ. ಮರದ ರಥಕ್ಕೆ ಬೆಳ್ಳಿ ಜೋಡಣೆಯೊಂದೇ ಬಾಕಿ ಇದೆ. ಇಷ್ಟಿದ್ದರೂ ಸಹ ಸಿದ್ದರಾಮಯ್ಯ ಅವರು ತಮ್ಮ ಹರಕೆಯನ್ನು ಮರೆತಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರು ಹರಕೆ ಮರೆತ ಕಾರಣ ಸಂಕಷ್ಟಗಳನ್ನು ಎದುರಿಸುತ್ತಿದ್ದಾರಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.

    ಎರಡು ವರ್ಷದ ಹಿಂದೇ ತಾವೇ ರಥ ಮಾಡಿಸಲು ಬೆಳ್ಳಿ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದೀಗ ಬೆಳ್ಳಿಯನ್ನು ಕೊಡದೇ ಇರುವುದಕ್ಕೆ ಸಿದ್ದರಾಮಯ್ಯ ಅವರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರಾ ಎಂಬ ಅನುಮಾನ ಹುಟ್ಟಿದೆ.

  • ಕಲಬುರಗಿಯಲ್ಲಿ ಯುಗಾದಿಯಂದೇ ದುರಂತ – ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಕಲಬುರಗಿಯಲ್ಲಿ ಯುಗಾದಿಯಂದೇ ದುರಂತ – ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಕಲಬುರಗಿ/ಗದಗ: ಯುಗಾದಿ ಹಬ್ಬದಂದೇ ಕಲಬುರಗಿಯ ಶಿವಲಿಂಗೇಶ್ವರ ಜಾತ್ರೆಯ ರಥೋತ್ಸವದಲ್ಲಿ ಘನಘೋರ ದುರಂತ ಸಂಭವಿಸಿದೆ. ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಇಲ್ಲಿನ ಶಹಬಾದ್ ತಾಲೂಕಿನ ದೇವನ ತೇಗನೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕಿಶನ್ ಮೃತ ದುರ್ದೈವಿಯಾಗಿದ್ದು, ಇವರು ಶಹಬಾದ್ ತಾಲೂಕಿನ ತರಿ ತಾಂಡಾದ ನಿವಾಸಿ ಎಂದು ತಿಳಿದುಬಂದಿದೆ. ಯುಗಾದಿ ಹಬ್ಬದಂದು ಪ್ರತಿವರ್ಷ ಶಿವಲಿಂಗೇಶ್ವರ ರಥೋತ್ಸವ ನಡೆಯುತ್ತೆ. ಈ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ಕಿಶನ್ ಮೃತಪಟ್ಟಿದ್ದಾರೆ.

    ಅತ್ತ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ರಥವನ್ನು ಎಳೆಯುವ ವೇಳೆ ನೂಕುನುಗ್ಗಲಿನಿಂದಾಗಿ ರಥದ ಗಾಲಿಗೆ ಭಕ್ತರೊಬ್ಬರು ಸಿಲುಕಿ ಕಾಲು ಕಳೆದುಕೊಂಡಿರುವ ಘಟನೆ ನಡೆದಿದೆ. ಗ್ರಾಮದ ಶ್ರೀ ಯಚ್ಚರೇಶ್ವರ ಜಾತ್ರೆಯ ರಥ ಎಳೆಯುವ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರಾದ ಮುದಿಯಪ್ಪ ಬದಾಮಿ ಎಂಬ 48 ವರ್ಷದ ವ್ಯಕ್ತಿಯ ಎರಡೂ ಕಾಲಗಳ ಮೇಲೆ ರಥದ ಗಾಲಿ ಹರಿದಿದೆ. ಪರಿಣಾಮ ಮುದಿಯಪ್ಪ ಅವರ ಎರಡೂ ಕಾಲುಗಳು ನುಜ್ಜುಗುಜ್ಜಾಗಿದ್ದು, ಗಾಯಾಳುವನ್ನ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಭಕ್ತರು ಸಾಕಷ್ಟು ಆತಂಕಕ್ಕಿಡಾಗಿದ್ದರು.

  • ಮದ್ದೂರಮ್ಮ ಜಾತ್ರೆಯಲ್ಲಿ 75 ಅಡಿ ಎತ್ತರದ ರಥ ಉರುಳಿಬಿತ್ತು- ವಿಡಿಯೋ ನೋಡಿ

    ಮದ್ದೂರಮ್ಮ ಜಾತ್ರೆಯಲ್ಲಿ 75 ಅಡಿ ಎತ್ತರದ ರಥ ಉರುಳಿಬಿತ್ತು- ವಿಡಿಯೋ ನೋಡಿ

    ಆನೇಕಲ್: ಇತಿಹಾಸ ಪ್ರಸಿದ್ಧ ಮದ್ದೂರಮ್ಮ ಜಾತ್ರೆಯಲ್ಲಿ 75 ಅಡಿ ಎತ್ತರದ ರಥ ಉರುಳಿಬಿದ್ದಿದ್ದು ಅದೃಷ್ಟವಶಾತ್ ಸಂಭವಿಸಬೇಕಿದ್ದ ಭಾರಿ ಅನಾಹುತ ತಪ್ಪಿದೆ.

    ಹೆಚ್ಚು ಎತ್ತರವಿದ್ದ ಕಾರಣ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಬೆಂಗಳೂರು ಹೊರವಲಯ ಅನೇಕಲ್ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಇಂದು ಮದ್ದೂರಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು ಈ ಜಾತ್ರೆಗೆ ಸುತ್ತಮುತ್ತಲಿನ 7 ಗ್ರಾಮಗಳಿಂದ 100 ಅಡಿಗೂ ಎತ್ತರದ ರಥಗಳನ್ನು ದೇವಸ್ಥಾನದ ಬಳಿಗೆ ಎಳೆದು ತರುತ್ತಾರೆ.

    ಈ ದೇವಾಲಯಕ್ಕೆ ಈ ಹಿಂದೆ ಸುಮಾರು 11 ಹಳ್ಳಿಗಳಿಂದ ರಥಗಳು ಬರುತಿತ್ತು. ಬೆಂಗಳೂರು ಬೆಳವಣಿಗೆಯಾದಂತೆ ಹೊಲಗದ್ದೆಗಳು ಲೇಔಟ್ ಅದ ಪರಿಣಾಮ ಇದೀಗ ರಥಗಳನ್ನು ಎಳೆದು ತರಲು ಆಗದೆ ಕೇವಲ 7 ಗ್ರಾಮಗಳ ರಥಗಳು ಬರುತ್ತಿವೆ.

    https://www.youtube.com/watch?v=2qNdNlSwWNY&feature=youtu.be

     

  • ವಿಡಿಯೋ: ಬಳ್ಳಾರಿಯಲ್ಲಿ ರಥದ ಅಚ್ಚು ಮುರಿದು ನೆಲಕ್ಕೆ ಉರುಳಿತು ಮತ್ತೊಂದು ರಥ

    ವಿಡಿಯೋ: ಬಳ್ಳಾರಿಯಲ್ಲಿ ರಥದ ಅಚ್ಚು ಮುರಿದು ನೆಲಕ್ಕೆ ಉರುಳಿತು ಮತ್ತೊಂದು ರಥ

    ಬಳ್ಳಾರಿ: ಒಂದೂವರೆ ವರ್ಷದ ಹಿಂದೆಯಷ್ಟೇ ರಥೋತ್ಸವದ ವೇಳೆ ರಥದ ಅಚ್ಚು ಮುರಿದು ಕೊಟ್ಟೂರಿನ ಕೊಟ್ಟೂರೇಶ್ವರ ರಥ ಮಗುಚಿ ಬಿದ್ದಿತ್ತು. ಈ ಘಟನೆ ಮಾಸುವ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ರಥ ರಥೋತ್ಸವದ ವೇಳೆ ಮಗುಚಿ ಬಿದ್ದಿದೆ.

    ಹೊಸಪೇಟೆ ತಾಲೂಕಿನ ಗರಗ ನಾಗಾಲಾಪುರ ಗ್ರಾಮದ ಆಂಜನೇಯ ರಥೋತ್ಸವದ ವೇಳೆ ರಥ ಮಗುಚಿ ಬಿದ್ದಿದೆ. ರಥೋತ್ಸವ ನಡೆಯುವ ವೇಳೆ ರಥದ ಅಚ್ಚು ಮುರಿದು ರಥ ನೆಲಕ್ಕೆ ಉರುಳಿದೆ.

    ಘಟನೆಯಲ್ಲಿ ಓರ್ವ ಬಾಲಕನಿಗೆ ಗಾಯವಾಗಿದ್ದು, ಗಾಯಾಳು ಬಾಲಕನನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ರಥ ಬಿಳುವ ಮುನ್ನ ರಥದ ಪಕ್ಕದಲ್ಲಿದ್ದ ಎಲ್ಲರೂ ತಪ್ಪಿಸಿಕೊಂಡ ಪರಿಣಾಮ ಬಹು ದೊಡ್ಡ ಅನಾಹುತ ತಪ್ಪಿದಂತಾಗಿದೆ.

    https://youtu.be/f0o4C-zVphs

    https://www.youtube.com/watch?v=oOGOlAPVqEE

    https://www.youtube.com/watch?v=iwUr8Y0qoQQ

  • ಎಲೆಕ್ಷನ್ ಹೊತ್ತಲ್ಲೇ ಶಿವಭಕ್ತರಾದ ಸಿಎಂ- ಮಹದೇಶ್ವರನಿಗೆ ಬೆಳ್ಳಿ ಉಡುಗೊರೆಗಳ ಕಾಣಿಕೆ, ತಿರುಪತಿಗಿಂತಲೂ ಅದ್ಭುತವಾದ ಚಿನ್ನದ ರಥ ನಿರ್ಮಿಸಲು ಸೂಚನೆ

    ಎಲೆಕ್ಷನ್ ಹೊತ್ತಲ್ಲೇ ಶಿವಭಕ್ತರಾದ ಸಿಎಂ- ಮಹದೇಶ್ವರನಿಗೆ ಬೆಳ್ಳಿ ಉಡುಗೊರೆಗಳ ಕಾಣಿಕೆ, ತಿರುಪತಿಗಿಂತಲೂ ಅದ್ಭುತವಾದ ಚಿನ್ನದ ರಥ ನಿರ್ಮಿಸಲು ಸೂಚನೆ

    ಚಾಮರಾಜನಗರ: ವಿಧಾನಸಭಾ ಚುನಾವಣೆ ಸಮಯ ಸಮೀಪಿಸುತ್ತಿದ್ದ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರ ಮೇಲೆ ಭಕ್ತಿ ಹೆಚ್ಚಾದಂತೆ ಕಾಣುತ್ತಿದೆ. ಇದಕ್ಕೊಂದು ತಾಜ ಉದಾಹರಣೆಗೆ ಎಂಬಂತೆ ಗುರುವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ರು. ಈ ವೇಳೆ ಸಿಎಂ ಅವರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ನೀಡಿರುವ ಬೆಳ್ಳಿ ಉಡುಗೊರೆಗಳನ್ನು ದೇವರಿಗೆ ಅರ್ಪಿಸಲು ಮುಂದಾಗಿದ್ದಾರೆ.

    ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸರ್ಕಾರದ ಸಾಧನಾ ಸಮಾವೇಶವನ್ನು ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಕೊಳ್ಳೆಗಾಲ ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ತಮ್ಮ ಆಪ್ತರೊಂದಿಗೆ ವಾಸ್ತವ್ಯ ಹೂಡಿದರು. ನಂತರ ಬೆಳಗ್ಗೆ 8 ಗಂಟೆಗೆ ಮಾದಪ್ಪನ ಸನ್ನಿಧಿಗೆ ಹೋಗಿ ಸುಮಾರು 20 ನಿಮಿಷಗಳ ಕಾಲ ಮಾದಪ್ಪನ ಮುಂದೆ ನಿಂತು ಧ್ಯಾನ ಮಾಡಿದರು. ಇದಾದ ಬಳಿಕ ಸಿಎಂ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

    ಸಿಎಂ ಸಭೆ ವೇಳೆ ಅಧಿಕಾರಿಯೊಬ್ಬರು ಮಾದೇಶ್ವರ ಬೆಟ್ಟದಲ್ಲಿ ಒಂದು ಬೆಳ್ಳಿ ರಥವನ್ನು ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ರು. ಇದಕ್ಕಾಗಿ ನಮಗೆ 400 ಕೆಜಿ ಬೆಳ್ಳಿ ಬೇಕು. ಭಕ್ತರಿಂದ ನಮಗೆ ಈಗಾಗಲೇ 800 ಕೆಜಿ ಬೆಳ್ಳಿ ಸಂಗ್ರಹಣವಾಗಿದೆ. ರಥ ತಯಾರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದ್ರು. ಈ ವೇಳೆ ಸಿಎಂ ಅವರು ನನ್ನ ಬಳಿಯೂ ಸಾಕಷ್ಟು ಬೆಳ್ಳಿ ಇದೆ. ಕಾರ್ಯಕ್ರಮಗಳಲ್ಲಿ ಕೊಟ್ಟ ಬೆಳ್ಳಿ ಗದೆ, ಕಿರೀಟ ಇತ್ಯಾದಿ ಬೆಳ್ಳಿ ಉಡುಗೊರೆಗಳು ಇವೆ. ಅವುಗಳನ್ನು ರಥ ನಿರ್ಮಾಣಕ್ಕೆ ನಾನು ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇದಲ್ಲದೇ ಸಚಿವೆ ಗೀತಾ ಮಹದೇವಪ್ರಸಾದ್ ಅವರನ್ನು ಕರೆದು, ಮಲೆಮಹದೇಶ್ವರ ಬೆಟ್ಟದಲ್ಲಿ ಒಂದು ಪ್ಯೂರ್ ಚಿನ್ನದ ರಥ ಮಾಡಿಸಬೇಕು. ತಿರುಪತಿ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ಇರುವ ಚಿನ್ನದ ರಥಕ್ಕಿಂತ ಉತ್ತಮ ಚಿನ್ನದ ರಥ ನಿರ್ಮಾಣ ಮಾಡಬೇಕು. ಈ ಕೆಲಸವನ್ನು ಆದಷ್ಟು ಬೇಗ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

    ಈ ಮೊದಲು ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ನಾಸ್ತಿಕಪಟ್ಟ ಕಟ್ಟಿಕೊಂಡಿದ್ದ ಸಿದ್ದರಾಮಯ್ಯ ಅವರು ಅಧಿಕಾರ ಮುಗಿಯುತ್ತಿದ್ದಂತೆ ಆಸ್ತಿಕರಾಗುತ್ತಾ ಸಾಗುತ್ತಿರುವಂತೆ ಕಾಣುತ್ತಿದೆ. ಸಿಎಂ ದಸರೆಯಲ್ಲಿ ಶೂ ಹಾಕಿಕೊಂಡು ಪುಷ್ಪರ್ಚನೆ ಮಾಡಿದ್ದರು. ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆಯೂ ಇದೇ ರೀತಿ ನಡೆದಿತ್ತು. ಇತ್ತೀಚೆಗೆ ಧರ್ಮಸ್ಥಳದಲ್ಲಿ ಮೀನು ತಿಂದು ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಮಲೈಮಹದೇಶ್ವರ ಬೆಟ್ಟಕ್ಕೆ ಮಾತ್ರ ಪರಮಭಕ್ತರಾಗಿರುವ ಸಿದ್ದರಾಮಯ್ಯ ಅವರು, 2016ರ ಸಂದರ್ಭದಲ್ಲಿ ಕಾವೇರಿ ಸಮಸ್ಯೆ ವೇಳೆ ಬೆಟ್ಟಕ್ಕೆ ಬಂದು ಮಾದಪ್ಪನಲ್ಲಿ ಹಾಡು ಹೇಳಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಮತ್ತೆ ಬೆಳ್ಳಿ ಉಡುಗೊರೆಗಳನ್ನ ಕಾಣಿಕೆಯಾಗಿ ನೀಡುತ್ತಿರೋದು ಸಿಎಂ ದೈವ ಭಕ್ತಿಯ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

     

     

  • ವಿಜೃಂಭಣೆಯಿಂದ ನೆರವೇರಿತು ಶ್ರೀ ತ್ರಿಪುರ ಸುಂದರಿ ಅಮ್ಮನ ಜಾತ್ರೆ

    ವಿಜೃಂಭಣೆಯಿಂದ ನೆರವೇರಿತು ಶ್ರೀ ತ್ರಿಪುರ ಸುಂದರಿ ಅಮ್ಮನ ಜಾತ್ರೆ

    ಮೈಸೂರು: ಜಿಲ್ಲೆಯ ಟಿ. ನರಸೀಪುರದ ಮೂಗೂರಿನಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನ ಜಾತ್ರೆ ವಿಜೃಂಭಣೆಯಿಂದ ನೆರವೇರಿದೆ.

    ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ಭಕ್ತಿಯಿಂದ ರಥವನ್ನು ಎಳೆದಿದ್ದಾರೆ. ರಥಕ್ಕೆ ವಿವಿಧ ಫಲಪುಷ್ಪದಿಂದ ಅಲಂಕಾರ ಮಾಡಲಾಗಿತ್ತು. ಬರಿ ಹೂವುಗಳಿಂದ ಮಾತ್ರವಲ್ಲದೇ ಬಾಳೆ ಹಣ್ಣು, ಬಾಳೆ ಕಾಯಿಯ ಗೊನೆಯನ್ನು ರಥಕ್ಕೆ ಅಲಂಕಾರಕ್ಕಾಗಿ ಕಟ್ಟಿದ್ದರು.

    ಭಕ್ತಿ ಭಾವದಲ್ಲಿ ಮಿಂದೆಳೆಬೇಕಿದ್ದ ಭಕ್ತರು ಬಹಳ ಆತಂಕದಲ್ಲೇ ರಥ ಎಳೆದಿದ್ದಾರೆ. ತ್ರಿಪುರ ಸುಂದರಿ ಜಾತ್ರೆಯ ರಥದ ಚಕ್ರಗಳು ಸಂಪೂರ್ಣ ಶಿಥಿಲಗೊಂಡಿದ್ದವು. ರಥದ ಚಕ್ರದಲ್ಲಿ ಬಿರುಕು ಕಾಣಿಸಿಕೊಂಡಿದ್ದರ ಬಗ್ಗೆ ತಾಲೂಕು ಹಾಗೂ ಜಿಲ್ಲಾಡಳಿತ ಗಮನಕ್ಕೆ ತಂದಿದ್ದರೂ ಚಕ್ರಗಳನ್ನ ಸರಿಪಡಿಸದೇ ಅಧಿಕಾರಿಗಳು ರಥೋತ್ಸವ ಮುಗಿಸಿದ್ದಾರೆ.

    ಬಳ್ಳಾರಿಯ ಕೊಟ್ಟೂರು ಜಾತ್ರಾ ಸಂದರ್ಭದಲ್ಲಿ ರಥದ ಚಕ್ರ ಕುಸಿದಿತ್ತು. ಅದೇ ರೀತಿಯಾಗಿ ಇಲ್ಲೂ ಅವಘಡ ಸಂಭವಿಸಿಬೇಕೇ? ಯಾಕೆ ಅಧಿಕಾರಿಗಳು ಇನ್ನೂ ಈ ವಿಚಾರದ ಬಗ್ಗೆ ಎಚ್ಚೆತ್ತುಕೊಳ್ಳುವುದಿಲ್ಲ ಎಂದು ಭಕ್ತರು ಪ್ರಶ್ನಿಸಿ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಹತ್ತಾರು ವರ್ಷಗಳಿಂದ ರಥದ ಚಕ್ರಗಳಿಗೆ ಕಾಯಕಲ್ಪ ಸಿಕ್ಕಿಲ್ಲ. ಯಾವ ಕ್ಷಣದಲ್ಲಾದರೂ ರಥ ಉರುಳುವ ಅಪಾಯ ಇತ್ತು. ಆದರೆ ಸದ್ಯ ಯಾವುದೇ ಅನಾಹುತ ಆಗದೇ ರಥೋತ್ಸವ ಯಶಸ್ವಿಯಾಗಿ ನೆರವೇರಿದ್ದು ಭಕ್ತರಿಗೆ ಸಂತಸ ನೀಡಿದೆ.

  • ಬಳ್ಳಾರಿಯ ಕೊಟ್ಟೂರೇಶ್ವರನಿಗೆ ಸಿದ್ಧವಾಗುತ್ತಿದೆ ಹೊಸ ರಥ

    ಬಳ್ಳಾರಿಯ ಕೊಟ್ಟೂರೇಶ್ವರನಿಗೆ ಸಿದ್ಧವಾಗುತ್ತಿದೆ ಹೊಸ ರಥ

    ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಬಸವೇಶ್ವರನ ರಥೋತ್ಸವಕ್ಕಾಗಿ ಈ ಬಾರಿ ಹೊಸ ರಥ ನಿಮಾರ್ಣವಾಗುತ್ತಿದೆ. ಕಳೆದ ಫೆಬ್ರವರಿ 21 ರಂದು ರಥದ ಅಚ್ಚು ಮುರಿದು ರಥೋತ್ಸವದ ವೇಳೆಯೇ ತೇರು ಮಗುಚಿ ಬಿದ್ದಿತ್ತು. ಇದರಿಂದಾಗಿ ನೂತನ ರಥ ನಿರ್ಮಾಣ ಕಾರ್ಯ ಯಾವಾಗ ನಡೆಯುತ್ತೋ ಅಂತಾ ಭಕ್ತರು ಆತಂಕಗೊಂಡಿದ್ದು, ಇದೀಗ ನೂತನ ರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

    ಸರ್ಕಾರ ನೂತನ ರಥ ನಿರ್ಮಾಣಕ್ಕಾಗಿ 2 ಕೋಟಿ ರೂಪಾಯಿ ಅನುದಾನ ನೀಡಿದ್ದು, ಈಗಾಗಲೇ ರಥ ನಿರ್ಮಾಣ ಕಾರ್ಯ ಅರ್ಧ ಮುಕ್ತಾಯಗೊಂಡಿದೆ. ಫೆಬ್ರುವರಿ 14ರಂದು ರಥೋತ್ಸವವನ್ನು ನೂತನ ರಥದಲ್ಲೆ ನಡೆಸಲಾಗುವುದು ಅಂತ ಉಜ್ಜೈನಿ ಶ್ರೀಗಳು ಹೇಳಿದ್ದಾರೆ.

    ಈ ಬಾರಿ ನೂತನ ರಥದೊಂದಿಗೆ ಬಸವೇಶ್ವರನ ಜಾತ್ರೆ ಅದ್ಧೂರಿಯಾಗಿ ನಡೆಸಲು ದೇವಾಲಯದ ಆಡಳಿತ ಮಂಡಳಿ ಕೂಡ ಸಜ್ಜಾಗಿದೆ. ನೂತನ ರಥವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.