Tag: ರತ್ನ ಮಂಜರಿ

  • ರತ್ನ ಮಂಜರಿ ಮೇ 17ಕ್ಕೆ ಬಿಡುಗಡೆ

    ರತ್ನ ಮಂಜರಿ ಮೇ 17ಕ್ಕೆ ಬಿಡುಗಡೆ

    ಎನ್ ಆರ್ ಐ ಕನ್ನಡಿಗರ ಪ್ರಾಮಾಣಿಕ ಪ್ರಯತ್ನದ ಸಿನೆಮಾ `ರತ್ನ ಮಂಜರಿ’ ಇದೇ ಶುಕ್ರವಾರ ಮೇ 17ರಂದು ಬಿಡುಗಡೆಯಾಗುತ್ತಿದೆ. ಶರಾವತಿ ಫಿಲ್ಮ್ಸ್ ಅಡಿಯಲ್ಲಿ ಸಂದೀಪ್ ಕುಮಾರ್, ಡಾ. ನವೀನ್ ಕೃಷ್ಣ ಹಾಗೂ ನಟರಾಜ ಹಳೇಬೀಡು ನಿರ್ಮಾಣದ ಸಿನಿಮಾಕ್ಕೆ ಅಮೆರಿಕದಲ್ಲಿ ನಡೆದ ಘಟನೆಗೆ ಕರ್ನಾಟಕದ ಕನೆಕ್ಷನ್ ಬೆಸೆಯಲಾಗಿದೆ.

    ಅಮೆರಿಕದಲ್ಲಿ ದಶಕಗಳ ಹಿಂದೆ ನಡೆದೊಂದು ಕಥೆಯ ಬೇಸಿನಲ್ಲಿ ರತ್ನಮಂಜರಿ ಚಿತ್ರದ ಕಥೆ ರೂಪುಗೊಂಡಿದೆ. ಅದು ಸಂದೀಪ್ ಸೇರಿದಂತೆ ನಿರ್ಮಾಪಕರೆಲ್ಲರ ಇಷಾರೆಯೊಂದಿಗೇ ರೆಡಿಯಾಗಿರೋ ಕಥೆ. ನಂತರ ಈ ಚಿತ್ರದ ಐವತ್ತರಷ್ಟು ಭಾಗದ ಕಥೆಯನ್ನು ಯುಎಸ್ ನಲ್ಲಿ ಮತ್ತುಳಿದ ಅರ್ಧ ಭಾಗವನ್ನು ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆಯೇ ಇಡೀ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಾಗಿದೆ.

    ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಹೊಸತನವೇ ತುಂಬಿಕೊಳ್ಳಬೇಕೆಂಬುದು ಸಂದೀಪ್ ಅವರ ಇರಾದೆಯಾಗಿತ್ತು. ತಮ್ಮಂತೆಯೇ ಕಲೆಯ ಗುಂಗು ಹೊಂದಿದ್ದ ಹೊರನಾಡ ಕನ್ನಡಿಗರಿಗೂ ಅವಕಾಶ ಮಾಡಿಕೊಡಬೇಕೆಂಬ ಆಲೋಚನೆಯೂ ಅವರಲ್ಲಿತ್ತು. ಆದ್ದರಿಂದಲೇ ಈ ಚಿತ್ರದ ಪಾತ್ರಕ್ಕಾಗಿ ವಿದೇಶದಲ್ಲಿ ಆಡಿಷನ್ ಕರೆದಾಗ ಸಾವಿರಕ್ಕೂ ಹೆಚ್ಚು ಆಸಕ್ತರು ಮುಂದೆ ಬಂದಿದ್ದರು. ಕಡೆಗೂ ಅವರಲ್ಲಿ ಹತ್ತು ಮಂದಿಯನ್ನು ಆಯ್ಕೆ ಮಾಡಿ ನಟಿಸಲು ಅವಕಾಶ ಮಾಡಿ ಕೊಡಲಾಗಿದೆ. ಅವರೆಲ್ಲರೂ ವಿದೇಶದಲ್ಲಿಯೇ ರಂಗಭೂಮಿಯ ಸಖ್ಯ ಹೊಂದಿದ್ದವರು.

    ನಿರ್ದೇಶಕ ಪ್ರಸಿದ್ದ್ ಡೆನ್ಮಾರ್ಕ್ ನಿವಾಸಿ ಈ ಚಿತ್ರವನ್ನು ಅನೇಕ ಬಾರಿ ಅವಲೋಕನ ಮಾಡಿ ತೆರೆಗೆ ತಂದಿದ್ದಾರೆ. ರಾಜ್ ಚರಣ್, ಅಖಿಲಾ ಪ್ರಕಾಶ್, ಪಲ್ಲವಿ ರಾಜು, ಕನ್ನಿಕಾ ಹಾಗೂ ಶ್ರದ್ಧಾ ಸಾಲಿಯಾನ್ ಪೈಕಿ ಯಾರು ರತ್ನ ಮಂಜರಿ ಎಂಬುದು ಕುತೂಹಲದ ವಿಚಾರ.

    ಅಮೆರಿಕದಲ್ಲಿ ಹಾಗೂ ಕರ್ನಾಟಕದ ಮನೋಹರವಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರೀತಂ ಮತ್ತು ಕಿಟ್ಟಿ ಛಾಯಾಗ್ರಹಣ, ಹರ್ಷವರ್ಧನ ರಾಜ್ ಸಂಗೀತ ಸಂಯೋಜನೆ, ಪವನ್ ರಾಮ್ ಶೆಟ್ಟಿ ಸಂಕಲನ, ವಿಕ್ರಮ್ ಮೋರ್ ಸಾಹಸ ಈ ಸಿನಿಮಾಕ್ಕೆ ಒದಗಿಸಿದ್ದಾರೆ.

  • ರತ್ನಮಂಜರಿ ಟ್ರೈಲರ್ ರಿಲೀಸಾಯ್ತು!

    ರತ್ನಮಂಜರಿ ಟ್ರೈಲರ್ ರಿಲೀಸಾಯ್ತು!

    ಬೆಂಗಳೂರು: ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಒಳಗೊಂಡಿರುವ ರತ್ನಮಂಜರಿ ಚಿತ್ರದ ಟ್ರೈಲರ್ ಕಳೆದ ವಾರ ಬಿಡುಗಡೆಯಾಯಿತು. ಪ್ರಸಿದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ.

    ಅಮೆರಿಕಾದಲ್ಲಿ ನಡೆದ ನೈಜ ಘಟನೆಯೊಂದನ್ನಾಧರಿಸಿ ಈ ಚಿತ್ರದ ಕಥೆಯನ್ನು ಮಾಡಲಾಗಿದ್ದು ರಾಂಚರಣ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಖಿಲಾ ಪ್ರಕಾಶ್, ಪಲ್ಲವಿರಾಜು ಹಾಗೂ ಶ್ರದ್ಧಾ ಸಾಲಿಯಾನ್ ಮೂರು ಜನ ನಾಯಕಿಯರಾಗಿ ಅಭಿನಯಿಸಿದ್ದಾರೆ. ಈ ಮೂವರಲ್ಲಿ ರತ್ನಮಂಜರಿ ಯಾರು ಎನ್ನುವುದೇ ಚಿತ್ರದ ಸಸ್ಪೆನ್ಸ್. ಹರ್ಷವರ್ಧನ ರಾಜ್ ಅವರ ಸಂಗೀತ ಸಂಯೋಜನೆ ಹಾಗೂ ಪ್ರೀತಂ ತೆಗ್ಗಿನಮನೆ ಅವರ ಛಾಯಾಗ್ರಹಣ ಕೂಡ ಈ ಚಿತ್ರಕ್ಕಿದೆ.

    ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ನಾಯಕ ರಾಂಚರಣ್ ಮಾತನಾಡಿ, ಸಿದ್ಧಾಂತ್ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದು, ಅಮೆರಿಕಾದ ಕಂಪನಿಯೊಂದರಲ್ಲಿ ಸಸ್ಯ ವಿಜ್ಞಾನಿಯಾಗಿರುತ್ತೇನೆ. ನನ್ನಲ್ಲಿರುವ ಒಂದು ವಿಶೇಷ ಫೋಟೋಗ್ರಫಿಕ್ ಮೆಮೋರಿಯಿಂದ ಅಲ್ಲಿ ನಡೆದ ಕೊಲೆಯೊಂದರ ಮೂಲವನ್ನು ಹುಡುಕುತ್ತಾ ಹೊರಟಾಗ ನೂರಾರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಯು.ಎಸ್.ನಲ್ಲಿ ಶೂಟ್ ಮಾಡುವಾಗ ಸ್ವಲ್ಪ ತೊಂದರೆಯಾದರೂ ಅಲ್ಲಿನ ಕನ್ನಡಿಗರು ತುಂಬಾ ಸಹಾಯ ಮಾಡಿದರು. ನಮಗೆ ಮಳೆ ತುಂಬಾ ಅನುಕೂಲ ಮಾಡಿಕೊಟ್ಟಿತು ಎಂದು ಹೇಳಿದರು. ನಾಯಕಿ ಅಖಿಲಾ ಪ್ರಕಾಶ್ ಮಾತನಾಡಿ, ಗೌರಿ ಎಂಬ ಫ್ಯಾಷನ್ ಡಿಸೈನರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಯು.ಎಸ್.ನಲ್ಲಿದ್ದರೂ ನಮ್ಮ ಸಂಪ್ರದಾಯ ಮರೆತಿರುವುದಿಲ್ಲ. ಹಾಡುಗಳನ್ನು ಮಲೇಷಿಯಾ ಹಾಗೂ ಕೂರ್ಗ್ ನಲ್ಲಿ ಶೂಟ್ ಮಾಡಿದ್ದೇವೆ. ನಾವು ಮೂವರು ನಾಯಕಿಯರಿದ್ದು ಅದರಲ್ಲಿ ರತ್ನಮಂಜರಿ ಯಾರು ಅಂತ ನಮಗೂ ಗೊತ್ತಿಲ್ಲ. ಚಿತ್ರ ಬಂದ ಮೇಲಷ್ಟೇ ಅದು ಗೊತ್ತಾಗಲಿದೆ ಎಂದು ಹೇಳಿಕೊಂಡರು. ಮತ್ತೊಬ್ಬ ನಾಯಕಿ ಪಲ್ಲವಿರಾಜು ಮಾತನಾಡಿ, ಮನೆ ಕೆಲಸ ಮಾಡುವ ಹುಡುಗಿ ಪಾತ್ರ ನನ್ನದು. ಸ್ವಲ್ಪ ತಲೆಹರಟೆ ಪಾತ್ರ ಎಂದು ಹೇಳಿದರು.