Tag: ರತ್ನಾಕರ್

  • ದ.ಕ ಜಿಲ್ಲೆಯ ಬಡ ಕೋವಿಡ್ ರೋಗಿಗಳ ಪಾಲಿಗೆ ಆಪದ್ಭಾಂಧವರಾದ ಸರ್ಕಾರಿ ನೋಡಲ್ ಅಧಿಕಾರಿ

    ದ.ಕ ಜಿಲ್ಲೆಯ ಬಡ ಕೋವಿಡ್ ರೋಗಿಗಳ ಪಾಲಿಗೆ ಆಪದ್ಭಾಂಧವರಾದ ಸರ್ಕಾರಿ ನೋಡಲ್ ಅಧಿಕಾರಿ

    ಮಂಗಳೂರು: ಕೊರೊನಾ ಮಹಾಮಾರಿಯ ಅಟ್ಟಹಾಸವು ನಮ್ಮ ವೈದ್ಯಕೀಯ ಕ್ಷೇತ್ರದ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಜೊತೆಗೆ ಈ ಸಂಕಷ್ಟದ ಸಮಯದಲ್ಲೂ ಜನರ ರಕ್ತ ಹೀರುವ ಮಂದಿಯ ಪರಿಚಯವನ್ನು ಮಾಡಿಸಿದೆ. ಬಡಜನರ ನೆರವಿಗೆ ಯಾವ ವೈದ್ಯರು, ಆಸ್ಪತ್ರೆಗಳೂ ಇಲ್ಲ ಎನ್ನುವ ಹತಾಶಾ ಮನೋಭಾವನೆ ಎಲ್ಲರನ್ನೂ ಆವರಿಸುತ್ತಿರುವಂತೆ ಅಲ್ಲೊಂದು, ಇಲ್ಲೊಂದು ಸಹೃದಯವಂತ ವೈದ್ಯರು, ಅಧಿಕಾರಿಗಳು ದೀಪಗಳಂತೆ ಗೋಚರಿಸುತ್ತಾರೆ.ಅಂತಹ ಮಾನವೀಯ ಮುಖವುಳ್ಳ ಅಧಿಕಾರಿಗಳ ಪೈಕಿ ಒಬ್ಬರು, ದಕ್ಷಿಣ ಕನ್ನಡ ಜಿಲ್ಲೆಯ ಆಯುಷ್ಮಾನ್ ನೋಡಲ್ ಅಧಿಕಾರಿ ಡಾ. ರತ್ನಾಕರ್.

    ಹೌದು, ಡಾ. ರತ್ನಾಕರ್ ಅವರು ಇಂದಿನ ಸಂಕಷ್ಟದ ಸಂದರ್ಭದಲ್ಲಿ, ಬಡವರ್ಗದ ಮಂದಿಗೆ ಆಶಾಕಿರಣವಾಗಿದ್ದಾರೆ.ಖಾಸಗಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್ ಬೆಡ್‍ಗಳಲ್ಲಿ ಮಲಗಿರುವ ಬಡ ರೋಗಿಗಳ ಕುಟುಂಬಿಕರು ಲಕ್ಷಾಂತರ ರೂಪಾಯಿ ಬಿಲ್‍ಗಳನ್ನು ಕಂಡು ಕುಸಿದು ಕೂತಾಗ ಅಂತವರ ನೆರವಿಗೆ ಧಾವಿಸಿ ಬಿಲ್‍ಗಳನ್ನು ಕಡಿಮೆಗೊಳಿಸುವುದು, ಲಕ್ಷಾಂತರ ರೂಪಾಯಿ ದುಬಾರಿ ಬಿಲ್ ಗಳ ಕುರಿತು ದೂರುಗಳನ್ನು ಪರಿಶೀಲಿಸಿ ನಿಯಮ ಮೀರಿ ಹಾಕಿದ ಬಿಲ್ ಮೊತ್ತಗಳನ್ನು ವಾಪಾಸ್ ಕೊಡಿಸುವುದು, ಲಕ್ಷಾಂತರ ಮೊತ್ತದಾಟಿದ ತೀರಾ ಬಡ ರೋಗಿಗಳ ಬಿಲ್‍ಗಳನ್ನು ಆಯುಷ್ಮಾನ್ ಅಡಿ ತಂದು ಬಚಾವ್ ಮಾಡುವುದು ಮುಂತಾದ ಕೆಲಸಗಳನ್ನು ಚಾಕಚಕ್ಯತೆಯಿಂದ ಮಾಡಿ ಕೊರೋನ ರೋಗಿಗಳ ಪಾಲಿಗೆ ಆಪತ್ಭಾಂಧವ ಆಗಿದ್ದಾರೆ.

    ಡಾ. ರತ್ನಾಕರ್ ಅವರು ಮೂಲತಃ ಕುಂದಾಪುರದವರು. ಬೆಂಗಳೂರಿನ ಪ್ರತಿಷ್ಠಿತ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ದುಡಿದು ನಂತರ ಆರೋಗ್ಯ ಇಲಾಖೆಯ ಸೇವೆಗೆ ಸೇರಿದವರು. ಡಾ. ನೌಷಾದ್, ಡಾ. ಯಶಸ್ವಿನಿ, ಜಗನ್ನಾಥ್ ಇವರನ್ನೊಳಗೊಂಡ ತಂಡದ ಜೊತೆಗೆ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಕೊರೊನಾ ಎರಡನೇ ಅಲೆಯ ತೀವ್ರತೆಯ ಈ ಸಂದರ್ಭದಲ್ಲಿ ಪ್ರತಿಯೊಂದು ಫೋನ್ ಕರೆಯನ್ನು ಸ್ವೀಕರಿಸುತ್ತಾ ಹಗಲು ರಾತ್ರಿ ದುಡಿಯುತ್ತಿದ್ದಾರೆ.

    ಸಾಂದರ್ಭಿಕ ಚಿತ್ರ

    ವೈದ್ಯಕೀಯ ಲೋಕದ ಲಾಬಿಯು ಇಡೀ ಆಡಳಿತ ವ್ಯವಸ್ಥೆಯನ್ನೇ ಬುಡ ಮೇಲುಗೊಳಿಸುವಷ್ಟು ಬಲಾಢ್ಯವಾಗಿರುವಾಗ ಅಧಿಕಾರಿಗಳಿಂದ ಪೂರ್ಣ ನ್ಯಾಯ, ಕಾನೂನಿನ ಪಾಲನೆ ನಿರೀಕ್ಷಿಸುವುದು ಅಸಾಧ್ಯವೇ ಸರಿ. ಇದೆಲ್ಲ ಸವಾಲುಗಳನ್ನು ಮೀರಿನಿಂತು ಕೆಲಸ ಮಾಡುತ್ತಿರುವ ಡಾ. ರತ್ನಾಕರ್ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಯ ಬರಹಗಳೂ ಮೂಡಿಬರುತ್ತಿವೆ.ಇಂತಹ ಅಧಿಕಾರಿಗಳು ಎಲ್ಲೆಡೆ ಬರುವಂತಾಗಲಿ ಎನ್ನುವುದೇ ಬಡ, ಅಸಹಾಯಕ ಮಂದಿಯ ಆಶಯವಾಗಿದೆ.

  • ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಶಾಲೆಗಳು ಆರಂಭವಾಗಲಿ: ಕಿಮ್ಮನೆ

    ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಶಾಲೆಗಳು ಆರಂಭವಾಗಲಿ: ಕಿಮ್ಮನೆ

    – ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡ್ಬಾರ್ದು

    ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ಮುನ್ನ ಯಾವುದೇ ಕಾರಣಕ್ಕೂ ಶಾಲೆಗಳ ಪುನರ್ ಆರಂಭಕ್ಕೆ ಸರ್ಕಾರ ಮುಂದಾಗಬಾರದು. ಮಕ್ಕಳ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡಬಾರದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸರಿಯಾಗಿ ನಿಯಂತ್ರಣಕ್ಕೆ ಬಾರದ ಹೊರತು ಶಾಲೆ ಓಪನ್ ಮಾಡುವ ಪ್ರಯತ್ನ ನಡೆಸಬಾರದು ಎಂದರು.

    ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಇರುವುದೇ ಒಂದು ದೊಡ್ಡ ದುರಂತ. ಕೊರೊನಾ ಕಡಿಮೆ ಇದ್ದ ಅವಧಿಯಲ್ಲಿ ಎಲ್ಲಾ ಬಂದ್ ಮಾಡಿದರು. ಸದ್ಯ ಕೊರೊನಾ ಸೋಂಕು ಹೆಚ್ಚಾಗಿದೆ. ಈ ವೇಳೆ ಎಲ್ಲಾ ಓಪನ್ ಮಾಡಿದ್ದಾರೆ. ಕೊರೊನಾದಿಂದಾಗಿ ಜನ ಸಾಯುತ್ತಿದ್ದಾರೆ. ಈಗಿರುವಾಗ ಶಾಲೆ ಆರಂಭದ ಬಗ್ಗೆ ಮಾತನಾಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರವೇ ಶಾಲೆ ಆರಂಭಿಸುವುದು ಒಳ್ಳೆಯದು ಎಂದರು.

    ಮೊದಲೆಲ್ಲಾ ಕೊರೊನಾ ಹರಡಲು ಮುಸ್ಲಿಮರೇ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಈಗ ಏನು ಹೇಳುತ್ತಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.