Tag: ರಘುರಾಮ್ ರಾಜನ್

  • ರಘುರಾಮ್‌ ರಾಜನ್‌ ಕಾಂಗ್ರೆಸ್‌ ರಾಜ್ಯಸಭಾ ಅಭ್ಯರ್ಥಿ- ಮಹಾರಾಷ್ಟ್ರದಿಂದ ಆಯ್ಕೆ?

    ರಘುರಾಮ್‌ ರಾಜನ್‌ ಕಾಂಗ್ರೆಸ್‌ ರಾಜ್ಯಸಭಾ ಅಭ್ಯರ್ಥಿ- ಮಹಾರಾಷ್ಟ್ರದಿಂದ ಆಯ್ಕೆ?

    ನವದೆಹಲಿ: ನಿವೃತ್ತ ರಿಸರ್ವ್‌ ಬ್ಯಾಂಕ್‌ ಗವರ್ನರ್‌ (RBI) ಜನರಲ್‌ ರಘುರಾಮ್‌ ರಾಜನ್‌ (Raghuram Rajan) ರಾಜ್ಯಸಭೆಗೆ ಮಹಾರಾಷ್ಟ್ರದಿಂದ (Maharashtra) ಆಯ್ಕೆ ಆಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಜನವರಿ 31 ರಂದು ರಾಜನ್‌ ಅವರು ಶಿವಸೇನೆ(ಯುಬಿಟಿ) ಬಣದ ಮುಖ್ಯಸ್ಥ ಉದ್ಧವ್‌ ಠಾಕ್ರೆ (Uddhav Thackeray) ಅವರ ಮಂಬೈ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಮಹಾರಾಷ್ಟ್ರ ವಿಕಾಸ್‌ ಅಘಾಡಿ (MVA) ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿದೆ. ಎಂವಿಎ ಮೂಲಕ ರಾಜನ್‌ ಅವರನ್ನು ರಾಜ್ಯಸಭೆಗೆ ಕಳುಹಿಸಲು ಮಾತುಕತೆ ನಡೆದಿದೆ ಎಂಬ ವಿಚಾರ ಈಗ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

    ಕಾಂಗ್ರೆಸ್‌ ರಘುರಾಮ್‌ ರಾಜನ್‌ ಅವರನ್ನು ರಾಜ್ಯಸಭೆಗೆ ಕಳುಹಿಸಲು ಮುಂದಾಗಿದೆ. ಇದರ ಭಾಗವಾಗಿ ಬೆಂಬಲ ಕೇಳಲು ರಾಜನ್‌ ಉದ್ಧವ್‌ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತದೆ.

    ಮಹಾರಾಷ್ಟ್ರದಿಂದ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿ 3 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯಸಭೆಗೆ ಆಯ್ಕೆಯಾಗಲು ಓರ್ವ ಅಭ್ಯರ್ಥಿಗೆ ಕನಿಷ್ಠ 42 ಮತಗಳ ಅಗತ್ಯವಿದೆ. ಪ್ರಸ್ತುತ ಕಾಂಗ್ರೆಸ್‌ 45 ಶಾಸಕರನ್ನು ಹೊಂದಿದೆ.

    ರಘುರಾಮ್‌ ರಾಜನ್‌ ಅವರು ಯುಪಿಎ ಅವಧಿಯಲ್ಲಿ ಆರ್‌ಬಿಐ ಗವರ್ನರ್‌ ಆಗಿ ನೇಮಕಗೊಂಡಿದ್ದರು. 2013 ರಲ್ಲಿ ಅಧಿಕಾರ ಸ್ವೀಕರಿಸಿದ್ದ ಅವರು 2016ರಲ್ಲಿ ನಿವೃತ್ತರಾಗಿದ್ದರು.

    ಈ ಹಿಂದೆ ಭಾರತವು ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ಹೇಳಿಕೆ ನೀಡುವ ಮೂಲಕ ರಾಜನ್‌ ಚರ್ಚೆಗೆ ಗ್ರಾಸವಾಗಿದ್ದರು.

     

  • ಭಾರತ ಸೂಪರ್ ಪವರ್ – ನನ್ನ ವಿಷಯ ಅದಲ್ಲವೆಂದ ರಘುರಾಮ್‌ ರಾಜನ್‌

    ಭಾರತ ಸೂಪರ್ ಪವರ್ – ನನ್ನ ವಿಷಯ ಅದಲ್ಲವೆಂದ ರಘುರಾಮ್‌ ರಾಜನ್‌

    – ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

    ನವದೆಹಲಿ: ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಮತ್ತೆ ಸುದ್ದಿಯಲ್ಲಿದ್ದು ಭಾರತ ದೇಶದ ಬಗ್ಗೆ ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

    ಸಂವಾದ ಕಾರ್ಯಕ್ರಮದಲ್ಲಿ ರಘುರಾಮ್‌ ರಾಜನ್‌ ಸಭಿಕರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಮುಂದಿನ ದಶಕದಲ್ಲಿ ಹಣಕಾಸು ಸಚಿವರಾಗಿ ಅಥವಾ ಪ್ರಧಾನ ಮಂತ್ರಿಯಾಗಿ ನಿಮ್ಮನ್ನು ನೋಡಬಹುದೇ ಎಂದು ಪ್ರಶ್ನೆ ಕೇಳಲಾಯಿತು.  ಇದನ್ನೂ ಓದಿ: ಮೋಸ್ಟ್‌ ವಾಂಟೆಡ್‌ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಗುಂಡಿನ ದಾಳಿಗೆ ಬಲಿ

    https://twitter.com/cogitoiam/status/1670460961222688771

    ಈ ಪ್ರಶ್ನೆಗೆ, ಭಾರತವು ಸೂಪರ್ ಪವರ್ ಆಗಿರುವ ಬಗ್ಗೆ ನನಗೆ ಕಾಳಜಿ ಇಲ್ಲ. ಅದು ನನಗೆ ವಿಷಯವಲ್ಲ. ರಾಷ್ಟ್ರದ ಪಿತಾಮಹ ಬಯಸಿದಂತೆ ಪ್ರತಿಯೊಬ್ಬ ಭಾರತೀಯನನ್ನು ಸಂತೋಷಪಡಿಸುವುದೇ ಅದು ನನ್ನ ವಿಷಯ ಎಂದು ಉತ್ತರಿಸಿದರು. ಈ ಹೇಳಿಕೆಯ ಬಗ್ಗೆ ಈಗ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

    ರಾಘುರಾಮ್‌ ರಾಜನ್‌ ಹೇಳಿಕೆಗಳು ಚರ್ಚೆಗೆ ಗ್ರಾಸವಾಗುತ್ತಿರುವುದು ಇದು ಮೊದಲೆನಲ್ಲ. ಈ ಹಿಂದೆ ಸ್ಮಾರ್ಟ್‌ಫೋನ್‌ ಹೂಡಿಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಆರಂಭಿಸಿದ್ದ ಉತ್ಪಾದನೆ ಆಧಾರಿತ ಪ್ರೋತ್ಸಾಹಧನನ್ನು (Production Linked Incentive) ಟೀಕಿಸಿದ್ದರು. ಸ್ಮಾರ್ಟ್‌ಫೋನ್ ಪಿಎಲ್‌ಐ ಯೋಜನೆಯಲ್ಲಿ ಮೌಲ್ಯವರ್ಧನೆ ಕಡಿಮೆಯಾಗಿದೆ. ಇಲ್ಲಿ ಕೇವಲ ಜೋಡಣೆಯಾಗುತ್ತಿದೆಯೇ ಹೊರತು ಉತ್ಪಾದನೆಯಾಗುತ್ತಿಲ್ಲ. ಮೊಬೈಲ್ ಫೋನ್‌ಗಳ ಸಣ್ಣ ಭಾಗಗಳನ್ನು ಸಹ ಭಾರತದಲ್ಲಿ ತಯಾರಿಸಲಾಗುತ್ತಿಲ್ಲ ಎಂದು ಹೇಳಿದ್ದರು.

    ಕೋವಿಡ್‌ ಲಾಕ್‌ಡೌನ್‌ ಬಳಿಕ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ರಘುರಾಮ್‌ ರಾಜನ್‌ ನೀಡಿದ ಸಲಹೆಯೂ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ರೀತಿಯ ಅಸಾಮಾನ್ಯ ಸಂದರ್ಭದಲ್ಲಿ ಹಣ ಮುದ್ರಿಸುವುದರಿಂದ ಹಣಕಾಸು ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಬಹುದು. ಈ ರೀತಿಯ ಕ್ರಮ ವಿನಾಶಕಾರಿ ಆಗುವುದಿಲ್ಲ. ಮುದ್ರಣಗೊಂಡ ಹೆಚ್ಚುವರಿ ಹಣವನ್ನು ತಪ್ಪು ಮಾರ್ಗದಲ್ಲಿ ಬಳಸಿದರೆ ಮಾತ್ರ ಸಮಸ್ಯೆ ಸೃಷ್ಟಿಯಾಗಬಹುದು. ಹೆಚ್ಚುವರಿ ಹಣ ಮುದ್ರಿಸುವುದನ್ನು ತುಂಬ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕೆಂದು ರಘುರಾಂ ರಾಜನ್ ತಮ್ಮ ಲಿಂಕ್‌ಇನ್ ಖಾತೆಯಲ್ಲಿ ಬರೆದುಕೊಂಡಿದ್ದರು.

  • ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಪ್ರತಿಷ್ಠಿತ ವರ್ಷದ ಗವರ್ನರ್‌ ಪ್ರಶಸ್ತಿ

    ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಪ್ರತಿಷ್ಠಿತ ವರ್ಷದ ಗವರ್ನರ್‌ ಪ್ರಶಸ್ತಿ

    ನವದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ (RBI) ಗವರ್ನರ್‌ ಶಕ್ತಿಕಾಂತ ದಾಸ್‌ (Governor Shaktikanta Das) ಅವರಿಗೆ ಪ್ರತಿಷ್ಠಿತ ʼವರ್ಷದ ಗವರ್ನರ್‌ʼ ಪ್ರಶಸ್ತಿ ಲಭಿಸಿದೆ.

    ಕೋವಿಡ್‌ 19 ಮತ್ತು ಉಕ್ರೇನ್‌- ರಷ್ಯಾ ನಡುವಿನ ಯುದ್ಧದಿಂದಾಗಿ ಸೃಷ್ಟಿಯಾದ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಕ್ಕೆ ಅಂತರರಾಷ್ಟ್ರೀಯ ಆರ್ಥಿಕ ಸಂಶೋಧನಾ ಜರ್ನಲ್‌ ಆಗಿರುವ ಸೆಂಟ್ರಲ್‌ ಬ್ಯಾಂಕಿಂಗ್‌ 2023ರ ವರ್ಷದ ಗವರ್ನರ್‌ ಪ್ರಶಸ್ತಿ (Governor of the Year Award) ನೀಡಿದೆ.

    ಕೋವಿಡ್‌ 19 (Covid 19) ಉಕ್ರೇನ್‌ ಯುದ್ಧದಿಂದಾಗಿ (Russia-Ukraine War ) ಸೃಷ್ಟಿಯಾದ ಹಣದುಬ್ಬರ ಮತ್ತು ಹಲವು ಸವಾಲಿನ ಮಧ್ಯೆಯೂ ಶಕ್ತಿಕಾಂತ್‌ ದಾಸ್‌ ಅವರ ಸ್ಥಿರ ನಾಯಕತ್ವವನ್ನು ಶ್ಲಾಘಿಸಲಾಗಿದೆ.

    ದಾಸ್ ಅವರ ನಾಯಕತ್ವದಲ್ಲಿ ಹಣದುಬ್ಬರ ನಿಯಂತ್ರಿಸಲು ಹಲವಾರು ಬಾರಿ ರೆಪೋ ದರಗಳನ್ನು ಹೆಚ್ಚಿಸುವ ಹಲವಾರು ನಿರ್ಣಾಯಕ ಸುಧಾರಣೆಗಳನ್ನು ಜಾರಿಗೆ ತಂದಿತು. ನವೀನ ಪಾವತಿ ವ್ಯವಸ್ಥೆಗಳನ್ನು ಪರಿಚಯಿಸಿತು. ತೀವ್ರವಾದ ರಾಜಕೀಯ ಒತ್ತಡ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ಆರ್‌ಬಿಐಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಪ್ರಕಟಣೆ ಮೆಚ್ಚುಗೆ ವ್ಯಕ್ತಪಡಿಸಿದೆ.

    ಸಾರ್ವಜನಿಕ ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಪರಿಣತಿ ಹೊಂದಿರುವ ಹಣಕಾಸು ಪ್ರಕಾಶಕವಾಗಿರುವ ಸೆಂಟ್ರಲ್‌ ಬ್ಯಾಂಕಿಂಗ್‌ ಕೇಂದ್ರೀಯ ಬ್ಯಾಂಕುಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲೆ ಅಧ್ಯಯನ ನಡೆಸುತ್ತದೆ.

    ಆರ್‌ಬಿಐ ಈ ಪ್ರಶಸ್ತಿಯನ್ನು ಎರಡನೇ ಬಾರಿ ಪಡೆದಿದೆ. ಈ ಹಿಂದೆ 2015ರಲ್ಲಿ ಅಂದಿನ ಗವರ್ನರ್‌ ರಘುರಾಮ್‌ ರಾಜನ್‌ ಪಡೆದಿದ್ದರು. ಇದನ್ನೂ ಓದಿ: ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

    ಶಕ್ತಿಕಾಂತ ದಾಸ್ ಅವರ ಅಧಿಕಾರ ಅವಧಿಯನ್ನು ಕೇಂದ್ರ ಸರ್ಕಾರ 2021ರ ಅಕ್ಟೋಬರ್‌ನಲ್ಲಿ ಮೂರು ವರ್ಷಗಳಿಗೆ ವಿಸ್ತರಿಸಿದ್ದು ಅವರು 2024ರ ಡಿಸೆಂಬರ್‌ವರೆಗೂ ಆರ್‌ಬಿಐ ಗವರ್ನರ್ ಆಗಿ ಮುಂದುವರಿಯಲಿದ್ದಾರೆ.

    ಊರ್ಜಿತ್ ಪಟೇಲ್ ಅವರ ರಾಜೀನಾಮೆ ನಂತರ, ದಾಸ್ ಅವರನ್ನು ಆರ್‌ಬಿಐನ 25ನೆಯ ಗವರ್ನರ್ ಆಗಿ 2018ರ ಡಿಸೆಂಬರ್ 11ರಂದು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಎರಡನೆಯ ಅವಧಿಗೆ ಗವರ್ನರ್ ಆಗಿ ನೇಮಕಗೊಂಡಿರುವ ಮೊದಲ ವ್ಯಕ್ತಿ ದಾಸ್. ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವಲ್ಲಿ ದಾಸ್ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದರು.

  • ಭಾರತವು ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ : ಚರ್ಚೆಗೆ ಗ್ರಾಸವಾಯ್ತು ರಘುರಾಮ್‌ ರಾಜನ್‌ ಹೇಳಿಕೆ

    ಭಾರತವು ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ : ಚರ್ಚೆಗೆ ಗ್ರಾಸವಾಯ್ತು ರಘುರಾಮ್‌ ರಾಜನ್‌ ಹೇಳಿಕೆ

    ನವದೆಹಲಿ: ಭಾರತವು ಹಿಂದೂ ಬೆಳವಣಿಗೆ ದರದ (Hindu Rate of Growth) ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ (Former RBI Governor Raghuram Rajan) ಹೇಳಿದ್ದು ಈಗ ಬಿಸಿ ಚರ್ಚೆಗೆ ಗ್ರಾಸವಾಗಿದೆ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆ (Indian Economy) ಹಿಂದೂ ಬೆಳವಣಿಗೆ ದರದ ಅಪಾಯದಲ್ಲಿದೆ. ಇದೊಂದು ಎಚ್ಚರಿಕೆಯ ಗಂಟೆಯಾಗಿದ್ದು ಕ್ರಮಕ್ಕೆ ಮುಂದಾಗಬೇಕು ಎಂದಿದ್ದಾರೆ.

    2022ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ (GDP) ಶೇ.4.4 ಬೆಳವಣಿಗೆ ಸಾಧಿಸಿತ್ತು. ಈ ಮಂದಗತಿಯನ್ನು “ಹಿಂದೂ ಬೆಳವಣಿಗೆ ದರ” ಎಂಬ ಹಳೆಯ ಪರಿಕಲ್ಪನೆಯೊಂದಕ್ಕೆ ಹೋಲಿಸಿ ರಘುರಾಮ್‌ ರಾಜ್‌ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಆಯುರ್ವೇದ ಪಥ್ಯ; 22 ಕೆಜಿ ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ

    ಖಾಸಗಿ ವಲಯದಲ್ಲಿ ಹೂಡಿಕೆ ಮುಗ್ಗರಿಸಿದ್ದು ಆರ್ಥಿಕ ಬೆಳವಣಿಗೆ (Economy Growth) ನಿರಂತರ ಕುಸಿಯುತ್ತಿದೆ. ಆರ್‌ಬಿಐ (RBI) ಈಗಲೂ ಬಡ್ಡಿ ದರ ಏರಿಸುತ್ತಿದೆ. ಜಾಗತಿಕ ಬೆಳವಣಿಗೆ ಈ ವರ್ಷವೂ ಮಂದಗತಿಯಲ್ಲಿ ಮುಂದುವರಿಯುವ ಲಕ್ಷಣ ಇದೆ. ಇದು ಹೆಚ್ಚಿನ ವೇಗ ಪಡೆಯಲಿದೆ ಎಂಬ ಬಗ್ಗೆ ನನಗೆ ಯಾವುದೇ ಖಚಿತತೆ ಕಾಣುತ್ತಿಲ್ಲ. ಇದು ನನ್ನ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

    ಏನಿದು ಹಿಂದೂ ಬೆಳವಣಿಗೆ ದರ?
    ದೆಹಲಿ ಸ್ಕೂಲ್‌ ಆಫ್‌ ಎಕಾನಮಿಕ್ಸ್‌ನಲ್ಲಿ ಪಾಠ ಮಾಡುತ್ತಿದ್ದ ಆರ್ಥಿಕ ತಜ್ಞ ರಾಜ್ ಕೃಷ್ಣ 1978ರಲ್ಲಿ ಹಿಂದೂ ರೇಟ್ ಆಫ್ ಗ್ರೋಥ್‌ ಪದವನ್ನು ಮೊದಲ ಬಾರಿಗೆ ಪರಿಚಯಿಸಿದ್ದರು. ಭಾರತವು 1950-1980ರ 30 ವರ್ಷಗಳಲ್ಲಿ ಕಡಿಮೆ ಆರ್ಥಿಕ ಬೆಳವಣಿಗೆ ದರವನ್ನು ದಾಖಲಿಸಿತ್ತು. ಸರಾಸರಿ ಶೇ.4 ಕ್ಕಿಂತ ಕಡಿಮೆ ಜಿಡಿಪಿ ಬೆಳವಣಿಗೆಯಾಗಿತ್ತು. ದೀರ್ಘಕಾಲ ಶೇ.3.5 ಕ್ಕಿಂತ ಕಡಿಮೆ ಜಿಡಿಪಿ ಬೆಳವಣಿಗೆ ದಾಖಲಾದರೆ ಅದನ್ನು ಹಿಂದೂ ಗ್ರೂಪ್ ರೇಟ್ ಎಂದು ಕರೆಯುವ ಪರಿಪಾಠ ಆರಂಭವಾಗಿತ್ತು.

  • ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

    ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

    ನವದೆಹಲಿ: ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ 65,000 ಕೋಟಿ ರೂ. ಮೀಸಲಿಡಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು ಆರ್ಥಿಕ ಪರಿಸ್ಥಿತಿ ಸುಧಾರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

    ಕೊರೊನಾದಿಂದ ಭಾರತದ ಆರ್ಥಿಕತೆ ಪೆಟ್ಟು ತಿಂದಿದೆ. ಆರ್ಥಿಕತೆಯ ಪುನರಾರಂಭಿಸಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಇಂಥ ಘಟನೆಗಳಿಂದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಕೂಡ ಇದ್ದು, ಪರಿಸ್ಥಿತಿಯ ಲಾಭ ಪಡೆಯುವ ಹಲವು ಮಾರ್ಗಗಳಿದ್ದು ಅವುಗಳನ್ನು ಸರ್ಕಾರ ಬಳಸಿಕೊಳ್ಳಬೇಕಿದೆ ಎಂದು ರಾಜನ್ ಹೇಳಿದ್ದಾರೆ.

    ಜಾಗತಿಕ ಆರ್ಥಿಕತೆ ಬಗ್ಗೆ ಪುನರ್ವಿಮರ್ಶೆ ಮಾಡಬೇಕು ಭಾರತದಲ್ಲಿ ಸಾಕಷ್ಟು ಸಂಪನ್ಮೂಲಗಳಿದೆ ನಮ್ಮ ಸೀಮಿತ ಸಾಮರ್ಥ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಆರ್ಥಿಕತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇಗೆ ಎಂದು ನಿರ್ಧರಿಸಬೇಕು. ಲಾಕ್‍ಡೌನ್ ಮುಗಿದ ಬಳಿಕ ಸಮಸ್ಯೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ದೇಶದ ಪರಿಸ್ಥಿತಿ ಇನ್ನಷ್ಟು ದುರ್ಬಲಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಪರಿಸ್ಥಿತಿಯನ್ನು ಬೇರೆ ರೀತಿಯಲ್ಲಿ ನಿರ್ವಹಿಸಬೇಕು ಸಾಮೂಹಿಕ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಜೊತೆಗೆ ಜನರಿಗೆ ಜೀವನೋಪಾಯ ತೆರೆಯುವ ಬಗ್ಗೆ ಸರ್ಕಾರ ಚಿಂತಿಸಬೇಕು ಜನರನ್ನು ಸಾಯಲು ಬಿಡಬಾರದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ ದಕ್ಷಿಣ ಭಾರತದ ರಾಜ್ಯಗಳ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೊರೊನಾ ಪರಿಸ್ಥಿತಿ ನಿಯಂತ್ರಣ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉತ್ತಮ ಕೆಲಸ ಮಾಡುತ್ತಿವೆ. ದಕ್ಷಿಣ ರಾಜ್ಯಗಳಲ್ಲಿ ವಿಕೇಂದ್ರೀಕರಣ ಪದ್ಧತಿ ಇದೆ ಜನರಿಗೆ ಏನು ಮಾಡಬೇಕೆಂದು ಯೋಚಿಸುವ ಶಕ್ತಿ ಇದೆ ಎಂದು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

  • ಲಾಕ್‍ಡೌನ್ ನಂತ್ರ ಅರ್ಥ ವ್ಯವಸ್ಥೆಯನ್ನ ರಿಸ್ಟಾರ್ಟ್ ಮಾಡೋದು ಹೇಗೆ?- ರಘುರಾಮ್ ರಾಜನ್ ಸಲಹೆ

    ಲಾಕ್‍ಡೌನ್ ನಂತ್ರ ಅರ್ಥ ವ್ಯವಸ್ಥೆಯನ್ನ ರಿಸ್ಟಾರ್ಟ್ ಮಾಡೋದು ಹೇಗೆ?- ರಘುರಾಮ್ ರಾಜನ್ ಸಲಹೆ

    ನವದೆಹಲಿ: ಏಪ್ರಿಲ್ 14ರ ಬಳಿಕ ಕುಸಿದಿರುವ ಅರ್ಥವ್ಯವಸ್ಥೆಯನ್ನು ಹೇಗೆ ಪುನರ್ ಆರಂಭಿಸಬೇಕು ಎಂಬುದರ ಬಗ್ಗೆ ರಿಸರ್ವ್ ಬ್ಯಾಂಕಿನ ಮಾಜಿ ಗರ್ವನರ್ ರಘುರಾಮ್ ರಾಜನ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

    ಕೊರೊನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರ, ದೇಶವನ್ನು 21 ದಿನ ಲಾಕ್‍ಡೌನ್ ಮಾಡಿದೆ. ಲಾಕ್‍ಡೌನ್ ನಿಂದಾಗಿ ಇಡೀ ದೇಶದ ಅರ್ಥವ್ಯವಸ್ಥೆಯೇ ಸ್ತಬ್ಧಗೊಂಡಿದೆ. ಎಲ್ಲ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿವೆ. ಲಾಕ್‍ಡೌನ್ ಬಳಿಕ ಅರ್ಥವ್ಯವಸ್ಥೆ ನಿಧಾನವಾಗಿ ಚೇತರಿಸಿಕೊಳ್ಳಬೇಕಿದೆ. ಹಾಗಾಗಿ ಅರ್ಥವ್ಯವಸ್ಥೆಯನ್ನು ರೀಸ್ಟಾರ್ಟ್ ಮಾಡಲು ಸರ್ಕಾರ ಸಹ ಕೆಲವೊಂದು ಯೋಜನೆಗಳನ್ನು ರೂಪಿಸಬೇಕಿದೆ ಎಂಬುವುದು ರಘುರಾಮ್ ರಾಜನ್ ಅಭಿಪ್ರಾಯ.

    ಸೂಕ್ಷ್ಮವಾಗಿದೆ ದೇಶದ ಅರ್ಥವ್ಯವಸ್ಥೆ: 2008-09ನೇ ಸಾಲಿನ ಆರ್ಥಿಕ ಹಿಂಜರಿತಗಿಂತಲೂ ಇಂದಿನ ಸ್ಥಿತಿ ಅಪಾಯಕಾರಿಯಾಗಿದೆ. 2008-09ರಲ್ಲಿ ಅರ್ಥಿಕ ಹಿಂಜರಿತದ ನಡುವೆ ವಾಣಿಜ್ಯ ಚಟುವಟಿಕೆಗಳು ನಡೆದಿದ್ದವು. ಆದರೆ ಇಂದು ಎಲ್ಲ ವ್ಯವಹಾರಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. 2008-09ರಲ್ಲಿ ಕಂಪನಿಗಳು ತಮ್ಮ ವ್ಯವಹಾರ ನಡೆಸುತ್ತಿರೋದರಿಂದ ದೇಶವೂ ನಡೆಯುತ್ತಿತ್ತು. ಹಾಗಾಗಿ ಹಣಕಾಸಿನ ವ್ಯವಸ್ಥೆ ಆರೋಗ್ಯಕರವಾಗಿತ್ತು. ಆದ್ರೆ ಇಂದಿನ ಹಣಕಾಸಿನ ವ್ಯವಸ್ಥೆ ತುಂಬಾ ಸೂಕ್ಷ್ಮವಾಗಿದ್ದು, ಜಾಗೂರಕತೆಯಿಂದ ಪ್ರತಿಯೊಂದು ಹೆಜ್ಜೆಯನ್ನು ಇರಿಸಬೇಕಿದೆ.

    ಬಂದ್ ಮಾಡಲು ಸಾಧ್ಯವಿಲ್ಲ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಸಮಯವಕಾಶ ಸಿಕ್ಕಿದೆ. 21 ದಿನಗಳ ಲಾಕ್‍ಡೌನ್ ವೇಳೆಯಲ್ಲಿ ಕೊರೊನಾ ತಡೆಗೆ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಬೇಕಿದೆ. ಈ ಲಾಕ್‍ಡೌನ್ ಅವಧಿಯಲ್ಲಿಯೇ ಕೊರೊನಾ ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್ ಮತ್ತು ಸಾಮಾಜಿಕ ಅಂತರಕ್ಕೆ ಅಂತ್ಯ ಹಾಡಬೇಕಿದೆ. 21 ದಿನಗಳ ಬಳಿಕವೂ ಕೊರೊನಾ ನಿಯಂತ್ರಣಕ್ಕೆ ಸಿಗದಿದ್ದರೆ, ಎಲ್ಲವನ್ನು ಬಂದ್ ಮಾಡಲು ಸಾಧ್ಯವಿಲ್ಲ.

    21 ದಿನಗಳ ನಂತರ ಲಾಕ್‍ಡೌನ್ ನಿಯಮವನ್ನು ಸರ್ಕಾರ ಸಡಿಲಿಸಬೇಕು. ಇದರಿಂದ ಕೆಲ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ಕಾಣುತ್ತದೆ. 21 ದಿನಗಳ ನಂತರ ಆರಂಭಿಸುವ ಕಂಪನಿಗಳು ಕಡ್ಡಾಯವಾಗಿ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಆದೇಶಿಸಬೇಕು. ಹಾಗೆ ಖಾಸಗಿ ಕಂಪನಿಗಳು ಸಹ ತಮ್ಮ ಸಿಬ್ಬಂದಿ ಹಿತದೃಷ್ಟಿಯಿಂದ ಸ್ಕ್ರೀನಿಂಗ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ರಾಜನ್ ಹೇಳುತ್ತಾರೆ.

    ಆರ್ಥಿಕ ಸಹಾಯ: ದೀರ್ಘ ಕಾಲಾವಧಿಯವರೆಗೆ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಸರ್ಕಾರ ಸೂಚಿಸಬೇಕು. ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಬೇಕು. ಲಾಕ್‍ಡೌನ್ ನಿಂದಾಗಿ ದುಡಿಮೆ ಇಲ್ಲದೇ ಕೆಳ ವರ್ಗದ ಜೀವನಸ್ಥಿತಿ ಮತ್ತಷ್ಟು ಕುಸಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.

    ಎಲ್ಲರ ಸಹಾಯ ಪಡೆದುಕೊಳ್ಳಲಿ: ಸರ್ಕಾರ ಕೇವಲ ತಾನೇ ಕೆಲಸ ಮಾಡದೇ ಎಲ್ಲರ ಸಹಾಯ ಪಡೆದು ಒಗ್ಗಟ್ಟಿನಿಂದ ಕೊರೊನಾ ತಡೆಗೆ ಹೋರಾಟ ನಡೆಸಬೇಕಿದೆ. ವಿಪಕ್ಷದಲ್ಲಿರುವ ಅನುಭವಿ ನಾಯಕರನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಕೇವಲ ಪ್ರಧಾನ ಮಂತ್ರಿ ಕಾರ್ಯಾಲಯವೊಂದೇ ಎಲ್ಲ ಕೆಲಸಗಳನ್ನು ಮಾಡಲಾರದು. ಎಲ್ಲ ರಾಜ್ಯಗಳ ಜೊತೆ ಸೇರಿ ಹಿರಿಯ ನಾಯಕರಿಂದ ಉತ್ತಮ ಸಲಹೆ ಪಡೆದು ಕೆಲಸ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು.

    ದೊಡ್ಡ ಕಂಪನಿಗಳಿಂದ ಸಹಾಯ: ಕೇವಲ ಸರ್ಕಾರವೊಂದೇ ಶ್ರಮಪಟ್ಟರೇ ಅರ್ಥವ್ಯವಸ್ಥೆ ಚೇತರಿಕೆ ಕಾಣಲಾರದು. ಹಾಗಾಗಿ ಸುಸ್ಥಿತಿಯಲ್ಲಿರು ದೊಡ್ಡ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಸಣ್ಣ ವ್ಯವಹಾರಸ್ಥರ ಸಹಾಯಕ್ಕೆ ಮುಂದೆ ಬರಬೇಕಿದೆ. ಸಣ್ಣ ಪ್ರಮಾಣದ ವಿತರಕರಿಗೆ ದೊಡ್ಡ ಕಂಪನಿಗಳು ನರೆವು ನೀಡಬೇಕು. ಒಂದು ವೇಳೆ ಅವಶ್ಯವಿದ್ದಲ್ಲಿ ಬಾಂಡ್ ಮಾರ್ಕೆಟ್ ನಿಂದ ದೊಡ್ಡ ಗಾತ್ರದ ಕಂಪನಿಗಳು ಹಣ ಪಡೆಯಲು ಅವಕಾಶಗಳಿವೆ ಎಂದು ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.

  • ಬ್ಯಾಂಕುಗಳ ಶೋಚನೀಯ ಪರಿಸ್ಥಿತಿಗೆ ಮನಮೋಹನ್ ಸಿಂಗ್, ರಘುರಾಂ ರಾಜನ್ ಕಾರಣ – ಸೀತಾರಾಮನ್

    ಬ್ಯಾಂಕುಗಳ ಶೋಚನೀಯ ಪರಿಸ್ಥಿತಿಗೆ ಮನಮೋಹನ್ ಸಿಂಗ್, ರಘುರಾಂ ರಾಜನ್ ಕಾರಣ – ಸೀತಾರಾಮನ್

    ನ್ಯೂಯಾರ್ಕ್: ಆರ್.ಬಿ.ಐ ಹಿಂದಿನ ಗವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ದೇಶದ ಬ್ಯಾಂಕ್‍ಗಳ ಶೋಚನೀಯ ಸ್ಥಿತಿಗೆ ಕಾರಣ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗ ಭಾರತದ ಆರ್ಥಿಕ ನೀತಿ ವಿಚಾರದ ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಉಪನ್ಯಾಸ ನೀಡಿದರು.

    ಈ ವೇಳೆ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವಧಿಯಲ್ಲಿ ಬ್ಯಾಂಕ್‍ಗಳು ದುಸ್ಥಿತಿಗೆ ತಲುಪಿತ್ತು. ಈಗ ನಮ್ಮ ಸರ್ಕಾರ ಬ್ಯಾಂಕ್‍ಗಳಿಗೆ ಜೀವ ನೀಡಿ ಹೊಸ ಚೈತನ್ಯ ನೀಡುತ್ತಿದೆ ಎಂದು ತಿಳಿಸಿದರು.

    ಭಾರತದ ಆರ್ಥಿಕತೆ ಕುಸಿತಕ್ಕೆ ಮೋದಿ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ರಘುರಾಮ್ ರಾಜನ್ ಮತ್ತು ಮನಮೋಹನ್ ಸಿಂಗ್ ದೂರಿದ್ದರು. ಈಗ ನಿರ್ಮಲಾ ಸೀತರಾಮನ್ ಇವರ ವಿರುದ್ಧವೇ ಗಂಭೀರ ಆರೋಪ ಮಾಡಿ ಬ್ಯಾಂಕ್‍ಗಳು ದುಸ್ಥಿತಿಗೆ ನೀವೇ ಹೊಣೆ ಎಂದು ದೂರಿ ತಿರುಗೇಟು ನೀಡಿದರು.

    ಆರ್ಥಿಕ ತಜ್ಞರಾಗಿರುವ ರಘುರಾಮ್ ರಾಜನ್ ಮೇಲೆ ನನಗೆ ನನಗೆ ಬಹಳ ಗೌರವವಿದೆ. ದೇಶದ ಆರ್ಥಿಕತೆ ಸದೃಢವಾಗಿದ್ದಾಗ ಅವರು ಆರ್.ಬಿ.ಐ ಗವರ್ನರ್ ಆಗಿದ್ದರು. ರಾಜನ್ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ವ್ಯಕ್ತಿಗಳು ಒಂದು ಫೋನ್ ಕರೆ ಮಾಡಿದರೆ ಸಾಕು ಸಾಲ ಮಂಜೂರಾಗುತಿತ್ತು. ಇದರಿಂದ ಸೃಷ್ಟಿಯಾದ ಸಮಸ್ಯೆಯಿಂದ ಪಾರಾಗಲು ಸಾರ್ವಜನಿಕ ರಂಗದ ಬ್ಯಾಂಕುಗಳು ಸರ್ಕಾರದ ಷೇರುಗಳನ್ನು ಅವಲಂಬಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ಮಾಹಿತಿ ನೀಡಿದರು.

    ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಈ ವಿಚಾರ ಹೇಳುತ್ತಿಲ್ಲ. ಮನಮೋಹನ್ ಸಿಂಗ್ ಮತ್ತು ರಾಜನ್ ಅವರಿದ್ದ ಸಮಯದಲ್ಲಿ ಬ್ಯಾಂಕುಗಳು ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದವು. ಆ ಸಂದರ್ಭದಲ್ಲಿ ನಮಗೆ ಈ ವಿಚಾರಗಳು ತಿಳಿಯುತ್ತಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿ ಪ್ರಕಾರ 2012-13 ರಲ್ಲಿ ಸಾರ್ವಜನಿಕ ರಂಗದ ಕೆಟ್ಟ ಸಾಲದ ಪ್ರಮಾಣ 9,190 ಕೋಟಿ ಇದ್ದರೆ 2013-14ರ ವೇಳೆಗೆ ಇದು 2.16 ಲಕ್ಷ ಕೋಟಿಗೆ ಏರಿಕೆಯಾಗಿತ್ತು.

  • ಚುನಾವಣಾ ಪ್ರಣಾಳಿಕೆಯಲ್ಲಿರುವ ಸಾಲಮನ್ನಾ ಭರವಸೆಯನ್ನು ಮೊದಲು ಕಿತ್ತುಹಾಕಬೇಕು: ರಘುರಾಮ್ ರಾಜನ್

    ಚುನಾವಣಾ ಪ್ರಣಾಳಿಕೆಯಲ್ಲಿರುವ ಸಾಲಮನ್ನಾ ಭರವಸೆಯನ್ನು ಮೊದಲು ಕಿತ್ತುಹಾಕಬೇಕು: ರಘುರಾಮ್ ರಾಜನ್

    ನವದೆಹಲಿ: ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿರುವ ಸಾಲಮನ್ನಾ ಆಶ್ವಾಸನೆಯನ್ನು ಮೊದಲು ಕಿತ್ತುಹಾಕಬೇಕೆಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

    ದೆಹಲಿಯ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಾಲಮನ್ನಾ ಯೋಜನೆಯಿಂದ ನಿಜಕ್ಕೂ ರೈತರ ಬದುಕು ಹಸನಾಗಿದೆಯೇ ಎಂದು ವಿದ್ಯಾರ್ಥಿಯೊಬ್ಬರು ರಘುರಾಮ್ ರಾಜನ್ ಅವರನ್ನು ಪ್ರಶ್ನಿಸಿದ್ದರು.

    ಈ ಪ್ರಶ್ನೆಗೆ, ರಾಜಕೀಯ ಪಕ್ಷಗಳು ಸಾಲಮನ್ನಾ ಮಾಡುತ್ತಿರುವುದರಿಂದ ರಾಷ್ಟ್ರದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅಲ್ಲದೇ ಸಾಲಮನ್ನಾದಿಂದಾಗಿ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಚುನಾವಣಾ ಆಯೋಗ ಪ್ರಣಾಳಿಕೆಗಳ ಪಟ್ಟಿಯಲ್ಲಿ ಮೊದಲು ಸಾಲಮನ್ನಾ ಭರವಸೆಯನ್ನು ತೆಗೆದುಹಾಕಬೇಕು. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾನು ಪತ್ರ ಬರೆದಿದ್ದೇನೆಂದು ಉತ್ತರಿಸಿದರು.

    ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಸಾಲಮನ್ನಾ ಭರವಸೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಛತ್ತೀಸಗಢದಲ್ಲಿ ಸಾಲಮನ್ನಾ ಭರವಸೆಯಿಂದಲೇ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿದೆ. ಈಗ ಪಂಚರಾಜ್ಯಗಳ ಸೋಲಿನ ನಂತರ ಪ್ರಧಾನಿ ಮೋದಿಯವರೂ ಸಹ ದೇಶದ ಎಲ್ಲಾ ರೈತರ ಸುಮಾರು 4 ಲಕ್ಷ ಕೋಟಿ ಸಾಲಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ ಎಂದು ಹೇಳಿದರು.

    ಇದಲ್ಲದೇ ಆರ್ಥಿಕ ತಜ್ಞರುಗಳಾದ ಅಭಿಜಿತ್ ಬ್ಯಾನರ್ಜಿ, ಪ್ರಂಜುಲ್ ಭಂಡಾರಿ, ಸಜ್ಜಿದ್ ಚಿನಾಯ್, ಮೈತ್ರೀಶ್ ಘಟಕ್, ಗೀತಾ ಗೋಪಿನಾಥ್, ಅಮಥ್ರ್ಯ ಲಹಿರಿ, ನೀಲಕಾಂತ್ ಮಿಶ್ರಾ, ಪ್ರಾಚಿ ಮಿಶ್ರಾ, ಕಾರ್ತಿಕ್ ಮುರುಳೀಧರನ್, ರೋಹಿಣಿ ಪಾಂಡೆ, ಈಶ್ವರ್ ಪ್ರಸಾದ್ ಮತ್ತು ಸೋಮನಾಥನ್ ರವರೊಂದಿಗೆ ಜತೆಗೂಡಿ ಭಾರತದ ಆರ್ಥಿಕತೆಯ ಕಾರ್ಯತಂತ್ರ ಕುರಿತಂತೆ ವರದಿಯನ್ನು ಸಿದ್ಧಪಡಿಸಿದ್ದೇವೆ.

    ಈ ವರದಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಮನದಲ್ಲಿಟ್ಟುಕೊಂಡು, ಮುಂದಿನ 5 ವರ್ಷಗಳಲ್ಲಿ ಯಾವ ಆರ್ಥಿಕ ನೀತಿಗೆ ಪ್ರಾಮುಖ್ಯತೆಯನ್ನು ನೀಡಬೇಕೆಂದು ಉಲ್ಲೇಖಿಸಿದ್ದೇವೆ. ಅಲ್ಲದೇ ಇದು ಭಾರತದ ಆರ್ಥಿಕ ಸ್ಥಿತಿ ಅಭಿವೃದ್ಧಿ ನಡೆಸಿರುವ ವಿಶ್ಲೇಷಣೆಯೂ ಆಗಿದೆ. ಈ ವರದಿಯ ಹಿಂದೆ ಯಾವುದೇ ಸರ್ಕಾರ ಅಥವಾ ಪಕ್ಷವನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಿಲ್ಲವೆಂದು ರಘುರಾಮ್ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ವಿಹೆಚ್‍ಪಿ ಸಮ್ಮೇಳನದಲ್ಲಿ ಭಾಗಿಯಾಗುವಂತೆ ರಘುರಾಮ್ ರಾಜನ್‍ಗೆ ಆಹ್ವಾನ!

    ವಿಹೆಚ್‍ಪಿ ಸಮ್ಮೇಳನದಲ್ಲಿ ಭಾಗಿಯಾಗುವಂತೆ ರಘುರಾಮ್ ರಾಜನ್‍ಗೆ ಆಹ್ವಾನ!

    ನವದೆಹಲಿ: ವಿಶ್ವ ಹಿಂದೂ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗಿಯಾಗುವಂತೆ ವಿಶ್ವ ಹಿಂದೂ ಪರಿಷತ್ (ವಿಹೆಚ್‍ಪಿ) ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರನ್ನು ಆಹ್ವಾನಿಸಿದೆ.

    ಚಿಕಾಗೊ ದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದ ಅವರ ಭಾಷಣದ 125 ನೇ ವರ್ಷದ ನೆನಪಿನಾರ್ಥ ವಿಹೆಚ್‍ಪಿ ಈ ಸಮ್ಮೇಳನವನ್ನು ಆಯೋಜಿಸಿದೆ.

    4 ವರ್ಷಕ್ಕೊಮ್ಮೆ ನಡೆಯುವ ಸಮ್ಮೇಳನಕ್ಕೆ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಟಿಬೇಟಿಯನ್ ಗುರು ದಲೈ ಲಾಮ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಾಲಿವುಡ್ ನಟ ರಿಚರ್ಡ್ ಗೆರೆ, ಯುಎಸ್ ಕಾಂಗ್ರೆಸ್ ನ ತುಳಸಿ ಗಬ್ಬಾರ್ಡ್ ಅವರನ್ನು ಆಹ್ವಾನಿಸಲಾಗಿದೆ.

    ರಾಜನ್ ಅವರು ಆಹ್ವಾನವನ್ನು ಸ್ವೀಕರಿಸಿದಲ್ಲಿ ಸ್ಪೈಸ್ ಜೆಟ್ ಮುಖ್ಯಸ್ಥ ಅಜಯ್ ಸಿಂಗ್, ಪಿರಾಮಾಲ್ ಸಮೂಹದ ಮುಖ್ಯಸ್ಥ ಅಜಯ್ ಪಿರಾಮಾಲ್, ಕೆಪಿಎಮ್‍ಜಿ ಭಾರತದ ಮುಖ್ಯಸ್ಥ ಅರುಣ್ ಕುಮಾರ್ ಅವರ ಜೊತೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ಜೂನ್ 7 ರಂದು ನಡೆಯುವ ಆರ್‍ಎಸ್‍ಎಸ್ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಲಾಗಿದೆ. ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿರುವುದು ಈಗ ವಿವಾದವನ್ನು ಸೃಷ್ಟಿಸಿದೆ. ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದು ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮುಖರ್ಜಿ ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಯಾರು, ಏನು ಹೇಳಿದ್ರು?

    ರಾಜನ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಅಗಿದ್ದ ವೇಳೆ ಆರ್‍ಎಸ್‍ಎಸ್ ಅವರನ್ನ ಬಹಳ ಟೀಕೆ ಮಾಡಿದ್ದು ಈಗ ಸಮ್ಮೇಳನಕ್ಕೆ ಆಹ್ವಾನ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.