Tag: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

  • ಯುದ್ಧವಿಮಾನ ಖರೀದಿಸುವ ಉದ್ದೇಶವೇ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ : ನಿರ್ಮಲಾ ಸೀತಾರಾಮನ್

    ಯುದ್ಧವಿಮಾನ ಖರೀದಿಸುವ ಉದ್ದೇಶವೇ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ : ನಿರ್ಮಲಾ ಸೀತಾರಾಮನ್

    ನವದೆಹಲಿ: ಲೋಕಸಭೆಯಲ್ಲಿ ಇಂದು ರಫೇಲ್ ವಿವಾದ ಕುರಿತು ಕಾವೇರಿದ ಚರ್ಚೆ ನಡೆದಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಗಳಿಗೆ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಆವೇಷಭರಿತವಾಗಿ ಪ್ರತ್ಯುತ್ತರ ನೀಡಿದ್ದಾರೆ.

    ಯುದ್ಧವಿಮಾನ ಖರೀದಿಸುವ ಉದ್ದೇಶವೇ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ. ಅಲ್ಲದೇ ಅವರಿಗೆ ದೇಶದ ಭದ್ರತೆಯ ವಿಷಯ ಆದ್ಯತೆಯಾಗಿರಲಿಲ್ಲ. `ಕಾಣಿಕೆ’ ಸಿಗದ ಕಾರಣ ಕಾಂಗ್ರೆಸ್ ರಫೇಲ್ ಒಪ್ಪಂದ ಸ್ಥಗಿತಗೊಳಿಸಿತ್ತು. ಎನ್‍ಡಿಎ ಅವಧಿಯಲ್ಲಿ ದಲ್ಲಾಳಿಗಳಿಲ್ಲದೇ ಎಲ್ಲ ವ್ಯವಹಾರ ಪೂರ್ಣಗೊಂಡಿದೆ. 5 ವರ್ಷದ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಿಲ್ಲ ಎಂದು ತಿರುಗೇಟು ಕೊಟ್ಟರು.

    ಎಚ್‍ಎಎಲ್ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಆದರೆ ಈಗ ಮೊಸಳೆ ಕಣ್ಣೀರು ಹಾಕುತ್ತಿದೆ. ಎಚ್‍ಎಎಲ್ ನಮ್ಮ ದೇಶದ ಹೆಮ್ಮೆ. ಎಚ್‍ಎಎಲ್‍ಗೆ 1 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದವನ್ನು ಎನ್‍ಡಿಎ ಸರ್ಕಾರ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದರು.

    ರಫೇಲ್ ಜೆಟ್ ದರ 1,600 ಕೋಟಿ ರೂ. ಅಥವಾ 1,500 ಕೋಟಿ ರೂ. ಅಲ್ಲ. ರಫೇಲ್ ಜೆಟ್ ದರವನ್ನು ನಾವು ಖರೀದಿಸುತ್ತಿರುವುದು 670 ಕೋಟಿ ರೂ. ವೆಚ್ಚದಲ್ಲಿ. ಯುಪಿಎ ಅವಧಿಯಲ್ಲಿ ಇದರ ಮೌಲ್ಯ 737 ಕೋಟಿ ರೂ. ಆಗಿತ್ತು. ನಾವು ಶೇಕಡ 9 ರಷ್ಟು ಕಡಿಮೆ ಮೊತ್ತದಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಭಾವೋದ್ವೇಗದಲ್ಲಿ ಮಾತನಾಡಿದರು. ಈ ವೇಳೆ ರಕ್ಷಣಾ ಸಚಿವೆಯ ಮಾತಿಗೆ ಅಮಿತ್ ಶಾ ಸೇರಿದಂತೆ ಪಕ್ಷದ ನಾಯಕರು ಭೇಷ್ ಅಂದಿದ್ದಾರೆ.

    ಇತ್ತ ಮತ್ತೆ ರಫೇಲ್ ವಿವಾದವನ್ನೇ ಮತ್ತೆ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ ಅವರು, ನನ್ನ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ರಕ್ಷಣಾ ಸಚಿವೆ ನಿರ್ಮಲಾ ಅವರು ಓಡಿಹೋಗುವ ಯತ್ನ ಮಾಡಿದ್ದಾರೆ. ಅನಿಲ್ ಅಂಬಾನಿಯನ್ನ ಪಾಲುದಾರನನ್ನಾಗಿ ಮಾಡುವಂತೆ ಡಸೌಲ್ಟ್ ಗೆ ಮೋದಿ ಅವರು ಒತ್ತಡ ಹೇರಿದ್ದಾರೆ ಎಂದು ರಾಹುಲ್ ಗಾಂಧಿ ಮತ್ತೊಂದು ಆರೋಪ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾ.ರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಕಿಡಿ- ಗೊಂದಲ ಕುರಿತು ರಕ್ಷಣಾ ಸಚಿವರ ಸ್ಪಷ್ಟನೆ

    ಸಾ.ರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಕಿಡಿ- ಗೊಂದಲ ಕುರಿತು ರಕ್ಷಣಾ ಸಚಿವರ ಸ್ಪಷ್ಟನೆ

    ಬೆಂಗಳೂರು: ಕೊಡಗು ಪ್ರವಾಹ ಪೀಡಿತ ಪ್ರದೇಶ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಉಂಟಾದ ಗೊಂದಲದ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದು ಕೊಡಗು ಉಸ್ತುವಾರಿ ಸಚಿವ ಸಾರಾ ಮಹೇಶ್ ಅವರಿಗೆ ದೇಶದ ರಾಜಕೀಯ ವ್ಯವಸ್ಥೆ ಬಗ್ಗೆ ಪರಿಜ್ಞಾನ ಇಲ್ಲ ಎಂದು ಕಿಡಿಕಾರಿದ್ದಾರೆ.

    ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿ ಪತ್ರಿಕಾ ಬಿಡುಗಡೆ ಮಾಡಿದ್ದು, ಈ ಹೇಳಿಕೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ಅದರ ಪೂರ್ಣ ರೂಪ ಇಂತಿದೆ.

    ರಕ್ಷಣಾ ಸಚಿವರ ಕೊಡಗು ಭೇಟಿ ವೇಳೆ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತವಾರಿ ಮಂತ್ರಿಗಳಾದ ಶ್ರೀ ಸಾ.ರಾ.ಮಹೇಶ್ ಅವರ ಮೇಲೆ ರಕ್ಷಣಾ ಸಚಿವರು ಕೋಪಗೊಂಡಿದ್ದರು ಎಂದು ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.

    ಜಿಲ್ಲಾ ಉಸ್ತುವಾರಿ ಮಂತ್ರಿಗಳು ರಕ್ಷಣಾ ಮಂತ್ರಿಗಳ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವ ಬಗ್ಗೆಯೂ ವರದಿಯಾಗಿದೆ. ಅವರ ಈ ಟೀಕೆಯು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಘನತೆಗೆ ಚ್ಯುತಿಯುಂಟು ಮಾಡುವಂತಹದಾಗಿದೆ ಹಾಗೂ ಭಾರತ ರಾಜಕೀಯ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವ ಮತ್ತು ತಿಳುವಳಿಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಇಲ್ಲ ಎನ್ನುವುದನ್ನು ತೋರಿಸಿದೆ.

    ಈ ಕುರಿತ ಸ್ಪಷ್ಟನೆ ನೀಡಲು ಅಂದಿನ ಪ್ರವಾಸ ಕಾರ್ಯಕ್ರಮದ ಪೂರ್ಣ ಮಾಹಿತಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ: ರಕ್ಷಣಾ ಮಂತ್ರಿಗಳ ಪ್ರವಾಸ ಕಾರ್ಯಕ್ರಮದ ಕುರಿತು ಜಿಲ್ಲಾಡಳಿತವೇ 2 ದಿನಗಳ ಮುಂಚೆಯೇ ವೇಳಾಪಟ್ಟಿ ಅಂತಿಮಗೊಳಿಸಿತ್ತು. ಬಳಿಕ ಜಿಲ್ಲಾಡಳಿತ ಮನವಿ ಮೇರೆಗೆ ಸ್ಥಳೀಯ ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪಟ್ಟಿಗೆ ಸೇರಿಸಲಾಯಿತು.

    ಹಾನಿಗೀಗಾಡ ಪ್ರದೇಶಗಳ ಭೇಟಿಯ ನಂತರ ನೆರೆಯಿಂದ ತೀವ್ರ ತೊಂದರೆಗೊಳಗಾದ ನಿವೃತ್ತ ಸೈನಿಕರೊಂದಿಗೆ ರಕ್ಷಣಾ ಮಂತ್ರಿಗಳು ಸಂವಾದ ನಡೆಸುವಾಗ ಅದಕ್ಕೆ ಉಸ್ತವಾರಿ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಸಭೆಯನ್ನು ಮೊದಲು ನಡೆಸಬೇಕು ಎನ್ನುವುದು ಅವರ ವಾದವಾಗಿತ್ತು. ಆದರೆ ನಿವೃತ್ತ ಸೈನಿಕರ ಯೋಗಕ್ಷೇಮವೂ ರಕ್ಷಣಾ ಇಲಾಖೆಯ ಆದ್ಯತೆಗಳಲ್ಲಿ ಒಂದಾದ ಕಾರಣ ರಕ್ಷಣಾ ಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದರು. ಅದರೂ ಉಸ್ತುವಾರಿ ಸಚಿವರು ತಕ್ಷಣ ಆ ಸಭೆ ನಿಲ್ಲಿಸಿ, ಅಧಿಕಾರಿಗಳ ಸಭೆಗೆ ಹೋಗಬೇಕೆಂದು ಒತ್ತಾಯಿಸಿದರು.

    ಆಗ ಪರಿಸ್ಥಿತಿಯನ್ನು ಅರಿತ ರಕ್ಷಣಾ ಸಚಿವರು ಮತ್ತಷ್ಟು ಗೊಂದಲ ಉಂಟಾಗುವುದನ್ನು ತಪ್ಪಿಸಲು ಆ ಸಭೆಯನ್ನು ಸ್ಥಗಿತಗೊಳಿಸಿ ಅಧಿಕಾರಿಗಳ ಸಭೆಗೆ ತೆರಳಿದರು. ಅಲ್ಲಿ ಆಗಲೇ ಪತ್ರಿಕಾಗೋಷ್ಟಿಗೆ ವ್ಯವಸ್ಥೆ ಮಾಡಲಾಗಿತ್ತು. ಅದೇ ಸ್ಥಳಕ್ಕೆ ಅಧಿಕಾರಿಗಳನ್ನು ತರಾತುರಿಯಲ್ಲಿ ಕರೆದು ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲೇ ಅಧಿಕಾರಿಗಳ ಸಭೆ ಆರಂಭಿಸಲಾಯಿತು. ಎಲ್ಲಾ ಮಾಧ್ಯಮ ಪ್ರತಿನಿಧಿಗಳ ಎದುರಿನಲ್ಲೇ ಪರಿಶೀಲನಾ ಸಭೆ ನಡೆಸುವ ನಿದರ್ಶನ ಇಲ್ಲವಾದರೂ, ಪರಿಸ್ಥಿಯನ್ನು ತಿಳಿಯಾಗಿಸಲು ಸಭೆಯನ್ನು ನಡೆಸಲಾಯಿತು.

    ರಕ್ಷಣಾ ಸಚಿವರು ನಂತರ ತಮಗಾಗಿ ಕಾದಿದ್ದ ಮಾಜಿ ಸೈನಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲು ಆಲಿಸಿದರು. ಜಿಲ್ಲಾಡಳಿತವೇ ಅಂತಿಮಗೊಳಿಸಿದ ಕಾರ್ಯಕ್ರಮದ ಪ್ರಕಾರವೇ ರಕ್ಷಣಾ ಸಚಿವರು ಸಭೆ ನಡೆಸಿದರೂ, ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಪ್ರತಿಕ್ರಿಯೆ ಮತ್ತು ಟೀಕೆ ದುರದೃಷ್ಟಕರ. ಇನ್ನು ರಕ್ಷಣಾ ಸಚಿವರ ಬಗ್ಗೆ ಮಾಡಿರುವ ವೈಯಕ್ತಿಕ ಕೀಳು ಅಭಿರುಚಿಯಿಂದ ಕೂಡಿದ್ದಾಗಿದೆ. ಅವರ ಈ ನಡವಳಿಕೆ ಪ್ರತಿಕ್ರಿಯೆಗೂ ಯೋಗ್ಯವಲ್ಲ.

    ರಕ್ಷಣಾ ಸಚಿವರು ಪತ್ರಿಕಾಗೋಷ್ಟಿಯಲ್ಲಿ ಪರಿವಾರ ಎಂದು ಉಲ್ಲೇಖಿಸಿದ್ದನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದು ಗಮನಕ್ಕೆ ಬಂದಿದೆ. ರಕ್ಷಣಾ ಇಲಾಖೆಯ 4 ವಿಭಾಗಗಳಲ್ಲಿ ನಿವೃತ್ತ ಸೈನಿಕರ ಕಲ್ಯಾಣವೂ ಒಂದು. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂಬುವುದು ಇಲ್ಲಿ ಗಮನಿಸಬೇಕಾದ ಅಂಶ. ಈ ಅರ್ಥದಲ್ಲಿ ಪರಿವಾರ ಎನ್ನುವ ಪದ ಬಳಕೆ ಮಾಡಲಾಗಿದೆ. ಉಳಿದಂತೆ ಬೇರೆಲ್ಲಾ ಅಭಿಪ್ರಾಯಗಳೂ ಅಪಾರ್ಥದಿಂದ ಕೂಡಿದ್ದು ಹಾಗೂ ಖಂಡನೀಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರ್ಮಲಾ ಸೀತಾರಾಮನ್ ವಿರುದ್ಧ ಸಾರಾ ಮಹೇಶ್ ಗರಂ

    ನಿರ್ಮಲಾ ಸೀತಾರಾಮನ್ ವಿರುದ್ಧ ಸಾರಾ ಮಹೇಶ್ ಗರಂ

    ಮಡಿಕೇರಿ: ಕೊಡಗು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಭೆ ಬಳಿಕ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಸಚಿವ ಸಾರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸಭೆಯ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಮಹೇಶ್ ಅವರು, ಕೇರಳದಲ್ಲಿ ಪ್ರವಾಹ ಆಗಿರುವಂತೆ ರಾಜ್ಯದ 4 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದ್ದು, ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಆದರೆ ಕೇರಳಕ್ಕೆ ಅನುದಾನ ನೀಡಿದ ಕೇಂದ್ರ ಸರ್ಕಾರ ಇಂದು ವರದಿ ಬಂದ ಬಳಿಕ ಎಲ್ಲಾ ಸಚಿವರೊಂದಿಗೆ ಮಾತನಾಡಿ ಅನುದಾನ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದ್ದಾರೆ. ಇದು ನಿಮಗೂ ತಿಳಿದಿದೆ, ಎಲ್ಲಾ ಸಚಿವರ ಕೆಲಸ ನನೊಬ್ಬಳೇ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲಾ ಇಲಾಖೆಗೆ ಹಾಗೂ ಪ್ರಧಾನಿಗೆ ಮಾಹಿತಿ ನೀಡುತ್ತೇನೆ ಎಂದು ಕೇಂದ್ರ ರಕ್ಷಣಾ ಸಚಿವರು ಹೇಳಿದ್ದಾಗಿ ಸಾರಾ ಮಹೇಶ್ ತಿಳಿಸಿದರು.

    ಇದೇ ವೇಳೆ ನಿರ್ಮಲಾ ಸೀತಾರಾಮನ್ ಅವರ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಾರಾಮಹೇಶ್ ಅವರು, ರಕ್ಷಣಾ ಸಚಿವರು ಇಂದು ತುಂಬಾ ಸ್ಪೀಡ್ ಆಗಿದ್ದರು. ಇದು ಅವರ ಪಕ್ಷದ ಸಮಸ್ಯೆ ಇರಬಹುದು. ಆದರೆ ಇಂದು ಅವರು ತಾಳ್ಮೆ ವಹಿಸುವ ಅಗತ್ಯವಿತ್ತು. ರಾಜಕಾರಣದಲ್ಲಿ ಜನರಿಂದ ನೇರವಾಗಿ ಆಯ್ಕೆ ಆಗಿದ್ದರೆ ತಾಳ್ಮೆ ನಿರ್ವಹಣೆ ಕುರಿತು ತಿಳಿಯುತ್ತಿತ್ತು. ರಾಜ್ಯಸಭೆಯಿಂದ ಆಯ್ಕೆ ಆದ ಕಾರಣ ಕಷ್ಟಗೊತ್ತಿಲ್ಲ. ಆದರೆ ರಾಜ್ಯ ಸರ್ಕಾರದಿಂದ ನೀಡಬೇಕಾದ ಎಲ್ಲಾ ಗೌರವ ನೀಡಿದ್ದೆವೆ ಎಂದರು.  ಇದನ್ನು ಓದಿ: ಸಚಿವ ಸಾರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಗರಂ

    ಸ್ಪಷ್ಟನೆ: ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಸಚಿವರ ನಡುವೆ ಹೊಂದಾಣಿಕೆ ಸಮಸ್ಯೆ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ರಕ್ಷಣಾ ಸಚಿವರು ಮೊದಲು ಕುವೆಂಪು ಬಡಾವಣೆ, ಸಾಯಿ ಬಡಾವಣೆ ಭೇಟಿ ನೀಡಿ ಬಳಿಕ ಮೈತ್ರಿ ಹಾಲ್‍ಗೆ ಆಗಮಿಸಬೇಕಿತ್ತು. ಆದರೆ ಅವರು ನಿಗದಿಯಾಗಿದ್ದ ಕಾರ್ಯಕ್ರಮ ಹೊರತು ಪಡಿಸಿ ಸೇವಾ ಭವನಕ್ಕೆ ತೆರಳಿದ್ದರು. ಅದು ಅವರ ನಿರ್ಧಾರ. ಆದರೆ ಈ ವೇಳೆ ಕಾರ್ಯಕ್ರಮದ ಪಟ್ಟಿ ಇರಲಿಲ್ಲ. ಅದ್ದರಿಂದ ಅವರು ಗರಂ ಆಗಿದ್ದಾರೆ. ಈ ಮಧ್ಯೆ ಸಂಸದ ಪ್ರತಾಪ್ ಸಿಂಹ, ನಾನು ಮಾತನಾಡುವ ವೇಳೆ ತಮಗೇ ಮುಜುಗರ ತರದಂತೆ ಹೇಳಿದ್ದರೆ ಅಷ್ಟೇ. ಆದರೆ ಅಧಿಕಾರಿಗಳ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಪ್ರವಾಹ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವ ಸಾರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಗರಂ

    ಸಚಿವ ಸಾರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಗರಂ

    ಮಡಿಕೇರಿ: ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಬಳಿಕ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದು, ಆದರೆ ತಮ್ಮ ಭೇಟಿ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಕುರಿತು ಗರಂ ಆಗಿದ್ದಾರೆ.

    ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯಲ್ಲಿ ಕೇಂದ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್ ಸೇರಿದಂತೆ ಇತರೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಆದರೆ ಇದಕ್ಕೂ ಮುನ್ನ ಸಭೆಯಲ್ಲಿ ಯಾರು ಮೊದಲು ಮಾಹಿತಿ ನೀಡಬೇಕು ಎಂಬ ಗೊಂದಲ ಏರ್ಪಟ್ಟಿತ್ತು. ಈ ವೇಳೆ ಗರಂ ಆದ ನಿರ್ಮಲಾ ಸೀತಾರಾಮನ್ ಅವರು ನಾನು ನಿಮ್ಮ ಮಾತು ಕೇಳಬೇಕಾ ಎಂದು ಪ್ರಶ್ನಿಸಿ, ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು. ಬಳಿಕ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನಡುವೆ ಯಾವುದೇ ಗೊಂದಲವಿದ್ದರೆ ಮೊದಲು ಬಗೆಹರಿಸಿಕೊಳ್ಳಿ ಎಂದು ಸೂಚನೆ ನೀಡಿದರು.

    ಇದಕ್ಕೂ ಮೊದಲು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕುಶಲನಗರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಉಸ್ತುವಾರಿ ಸಚಿವರು ಮಕ್ಕಂದೂರಿಗೆ ಕರೆದುಕೊಂಡು ಹೋಗಿದ್ದರು. ಇಲ್ಲಿಯೂ ಶಿಷ್ಟಾಚಾರ ಉಲ್ಲಂಘನೆಯಾಗಿತ್ತು. ಪ್ರವಾಹದಲ್ಲಿ ಸಿಲುಕಿರುವ ಜನರ ಪರಿಹಾರ ಕ್ರಮಕ್ಕೆ ತೊಡಗಿರುವ ಅಧಿಕಾರಿಗಳು ಹಾಗು ಸಚಿವರ ನಡುವೆ ಗೊಂದಲ ಉಂಟಾಗಿದೆ. ಬೆಳಗ್ಗೆ ಇಂದ ನೀವು ಹೇಳಿದ ಭಾಗಗಳಲ್ಲಿ ಬಂದು ಪರಿಶೀಲನೆ ನಡೆಸುತ್ತಿದ್ದೆನೆ. ಆದರ ಪರಿಹಾರ ಕಾರ್ಯ ನಡೆಸುವ ಮುನ್ನ ಎಲ್ಲಾ ಗೊಂದಲ ನಿವಾರಣೆ ಮಾಡಿಕೊಳ್ಳಲು ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಈ ಹಿಂದೆ ಕೊಡಗಿನಲ್ಲಿ ವೈಮಾನಿಕ ಸಮೀಕ್ಷೆ, ಸಭೆ ನಡೆಸಿದ ವೇಳೆ ಅಧಿಕಾರಿಗಳು ಹಾಗೂ ಸಚಿವರ ನಡುವೆ ಸಮನ್ವಯ ಕೊರತೆ ಇರುವ ಕುರಿತು ಸಿಎಂ ಕುಮಾರಸ್ವಾಮಿಯವರ ಗಮನಕ್ಕೆ ಬಂದಿತ್ತು. ಈ ವೇಳೆ ಮಾತನಾಡಿದ್ದ ಸಿಎಂ, ಇಂತಹ ಸಂದರ್ಭದಲ್ಲಿ ಕಳ್ಳಾಟ ಆಡುವ ಅಧಿಕಾರಿಗಳ ಅಮಾನತು ಮಾಡಿ, ಸೂಕ್ತ ವ್ಯವಸ್ಥೆ ಮಾಡಲು ಬಿಬಿಎಂಪಿ ಅಧಿಕಾರಿಗಳನ್ನು ಮಡಿಕೇರಿಗೆ ಕರೆಸಿಕೊಳ್ಳಲಾಗುತ್ತದೆ. ಆದರೆ ರಕ್ಷಣಾ ಕಾರ್ಯನಿರತರ ಮೇಲೆ ಕೆಲವರು ರಾಜಕೀಯ ಪ್ರದರ್ಶಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ, ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯ ಮೇಲೆ ಒತ್ತಡ ತರುವ ಕೆಲಸ ಮಾಡಬೇಡಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ಕೊಡಗು ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಗಳನ್ನು ಕೂಡ ನೇಮಕ ಮಾಡಿ ಆದೇಶ ಹೊರಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv