Tag: ರಕ್ಷಣಾ ಬಜೆಟ್

  • ಮೊದಲ ಬಾರಿಗೆ ತನ್ನ ರಕ್ಷಣಾ ಬಜೆಟ್‍ಗೆ ಕತ್ತರಿ ಹಾಕಿದ ಪಾಕ್

    ಮೊದಲ ಬಾರಿಗೆ ತನ್ನ ರಕ್ಷಣಾ ಬಜೆಟ್‍ಗೆ ಕತ್ತರಿ ಹಾಕಿದ ಪಾಕ್

    ಇಸ್ಲಾಮಾಬಾದ್: ತನ್ನ ಇತಿಹಾದಲ್ಲಿಯೇ ಇದೇ ಮೊದಲ ಬಾರಿಗೆ ಪಾಕಿಸ್ತಾನವು ರಕ್ಷಣಾ ಬಜೆಟ್‍ಗೆ ಕತ್ತರಿ ಹಾಕಿದೆ.

    ಪಾಕಿಸ್ತಾನವು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಹೀಗಾಗಿ ಅದನ್ನು ಪರಿಹರಿಸಲು ಸರ್ಕಾರವು ಸ್ವಯಂಪ್ರೇರಿತವಾಗಿ ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ಬಜೆಟ್ ಕಡಿತಗೊಳಿಸಲು ನಿರ್ಧರಿಸಿದೆ.

    ಈ ಕುರಿತು ಪಾಕಿಸ್ತಾನದ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಟ್ವೀಟ್ ಮಾಡಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಭದ್ರತೆ ಹಾಗೂ ರಕ್ಷಣೆ ಬಜಟ್‍ನಲ್ಲಿ ಸ್ವಯಂಪ್ರೇರಿತವಾಗಿ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸ್ವಯಂಪ್ರೇರಿತವಾಗಿ ವಾರ್ಷಿಕ ಭದ್ರತಾ ಬಜೆಟ್‍ನಲ್ಲಿ ಕಡಿತಗೊಳಿಸುತ್ತೇವೆ. ಆದರೆ ರಕ್ಷಣೆ ಮತ್ತು ಭದ್ರತೆಯ ವೆಚ್ಚದಲ್ಲಿ ಯಾವುದೇ ವ್ಯತ್ಯಾಸ ಬೀಳುವುದಿಲ್ಲ. ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ದೇಶದ ಆರ್ಥಿಕ ಮುಗ್ಗಟ್ಟಿನಲ್ಲಿರುವ ಹಿನ್ನೆಲೆಯಲ್ಲಿ ಉತ್ತಮ ನಿರ್ಧಾರವನ್ನು ಕೈಗೊಂಡಿದ್ದೀರಿ. ದೇಶವು ಎದುರಿಸುತ್ತಿರುವ ಬಹು ಭದ್ರತಾ ಸವಾಲುಗಳ ಹೊರತಾಗಿಯೂ ಈ ಕ್ರಮಕೈಗೊಂಡಿದ್ದೀರಿ. ಇದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, ಪಾಕ್ ಮಿಲಿಟರಿ ಪಡೆಯ ಸ್ವಯಂಪ್ರೇರಿತ ಕ್ರಮವನ್ನು ಶ್ಲಾಘಿಸಿದ್ದಾರೆ.

    ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಅವರು, ಇದು ಒಂದು ಸಣ್ಣ ಹೆಜ್ಜೆಯಲ್ಲ. ಆಡಳಿತ ಮತ್ತು ಆರ್ಥಿಕತೆಯ ಆಳವಾದ ಸಮಸ್ಯೆಗಳಿಂದ ಪಾಕಿಸ್ತಾನವನ್ನು ಬಲವಾದ ನಾಗರಿಕ-ಮಿಲಿಟರಿ ಸಂಘಟನೆಯು ಮಾತ್ರ ರಕ್ಷಿಸಬಲ್ಲದು ಎಂದು ಹೇಳಿದ್ದಾರೆ.

    ಪಾಕಿಸ್ತಾನದ ಪ್ರಧಾನ ಮಂತ್ರಿಯ ವಿಶೇಷ ಸಹಾಯಕರಾದ ಫಿರ್ದಾಸ್ ಆಶಿಕ್ ಅವಾನ್ ಅವರು ಜೂನ್ 11ರಂದು ದೇಶದ ಫೆಡರಲ್ ಬಜೆಟ್ ಮಂಡಿಸಲಾಗುವುದು ಎಂದು ಘೋಷಿಸಿದ್ದರು. ಈ ನಿಟ್ಟಿನಲ್ಲಿ ಕಳೆದ ತಿಂಗಳು, ಎಲ್ಲಾ ನಾಗರಿಕ ಮತ್ತು ಮಿಲಿಟರಿ ಸಂಸ್ಥೆಗಳು ಸಂಯಮ-ಆಧಾರಿತ 2019-20ರ ಫೆಡರಲ್ ಬಜೆಟ್‍ಗೆ ಕೊಡುಗೆ ನೀಡಲಿವೆ ಎಂದು ಸರ್ಕಾರ ಘೋಷಿಸಿತ್ತು.

    ಸ್ಟಾಕ್‍ಹೋಮ್ ಇಂಟರ್ ನಾಶನಲ್ ಪೀಸ್ ರಿಸರ್ಚ್ ಇನ್‍ಸ್ಟಿಟ್ಯೂಟ್ ವರದಿಯ ಪ್ರಕಾರ ವಿಶ್ವದಲ್ಲೇ ರಕ್ಷಣೆಗೆ ಅತಿ ಹೆಚ್ಚು ಹಣವನ್ನು ಮೀಸಲಿಟ್ಟ ದೇಶಗಳ ಪೈಕಿ ಪಾಕಿಸ್ತಾನ 20ನೇ ಸ್ಥಾನ ಗಳಿಸಿತ್ತು. 20018ರ ಬಜೆಟ್ ನಲ್ಲಿ 4/1ರಷ್ಟು ಹಣವನ್ನು(11.4 ಶತಕೋಟಿ ಡಾಲರ್) ರಕ್ಷಣೆಗೆ ಮೀಸಲಿಟ್ಟಿತ್ತು.