Tag: ರಕ್ಷಣಾ ತಂಡ

  • 120 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವು

    120 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವು

    – ತಾಯಿ ಸೀರೆ ಬಿಚ್ಚಿ ಬಾವಿಯೊಳಗೆ ಕೊಟ್ರೂ ಮಗು ಉಳಿಲಿಲ್ಲ
    – 25ಕ್ಕೂ ಅಧಿಕ ಸಿಬ್ಬಂದಿಯಿಂದ ಸತತ 12 ಗಂಟೆ ಕಾರ್ಯಾಚರಣೆ

    ಹೈದರಾಬಾದ್: 120 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಮೂರು ವರ್ಷದ ಮಗುವನ್ನು ನಿರಂತರ ರಕ್ಷಣಾ ಕಾರ್ಯಚರಣೆಯ ನಂತರವೂ ಉಳಿಸಲು ಸಾಧ್ಯವಾಗದಿರುವ ಘಟನೆ ತೆಲಂಗಾಣದ ಮೆಡಕ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಬಾಲಕನನ್ನು ಸಾಯಿ ವರ್ಧನ್ ಎಂದು ಗುರುತಿಸಲಾಗಿದೆ. ವರ್ಧನ್ ಬುಧವಾರ ರಾತ್ರಿ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಹೊಸದಾಗಿ ಕೊರೆಸಿದ್ದ ಬೋರ್‌ವೆಲ್‌ಗೆ ಬಿದ್ದಿದ್ದನು. ಮಾಹಿತಿ ತಿಳಿದು ತಕ್ಷಣ ಬಾಲಕನ ಪ್ರಾಣ ಉಳಿಸಲು ಅಧಿಕಾರಿಗಳು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

    ಇಂದು ಬೆಳಗ್ಗೆ ಬಾಲಕನ ಮೃತದೇಹವನ್ನು ಬೋರ್‌ವೆಲ್‌ನಿಂದ ಹೊರತೆಗೆಯಲಾಗಿದೆ. ಬೋರ್‌ವೆಲ್‌ ಒಳಗೆ 17 ಅಡಿ ಆಳದಲ್ಲಿ ವರ್ಧನ್ ಮೃತದೇಹ ಪತ್ತೆಯಾಗಿದೆ. ಈ ಮೂಲಕ ನಿರಂತರ ರಕ್ಷಣಾ ಕಾರ್ಯಚರಣೆಯ ನಂತರವೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

    ಬೋರ್‌ವೆಲ್‌ಗೆ ಬಾಲಕ ಬಿದ್ದ ತಕ್ಷಣ ಹೈದರಾಬಾದ್ ಮತ್ತು ಗುಂಟೂರಿನಿಂದ ಬಂದಿದ್ದ ಎನ್‌ಡಿಆರ್‌ಎಫ್ ತಂಡದ 25ಕ್ಕೂ ಅಧಿಕ ಸಿಬ್ಬಂದಿ ಸತತ 12 ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಇಂದು ಬೆಳಗ್ಗೆ ಬಾಲಕನ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಧರ್ಮ ರೆಡ್ಡಿ ತಿಳಿಸಿದರು.

    ನಡೆದಿದ್ದೇನು?
    ಇತ್ತೀಚೆಗೆ ವರ್ಧನ್ ತಾತ ಕೊಳವೆ ಬಾವಿಗಳನ್ನು ಕೊರೆಸಿದ್ದರು. ನೀರು ಸಿಗದಿದ್ದಾಗ ಬುಧವಾರ ಮತ್ತೊಂದು ಬೋರ್‌ವೆಲ್‌ ಕೊರೆಸಿದ್ದರು. ಅದರಲ್ಲಿಯೂ ನೀರು ಸಿಗಲಿಲ್ಲ. ಇದರಿಂದ ಬೇಸರಗೊಂಡು ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಟ್ಟುಬಿಟ್ಟರು. ಗದ್ದೆ ಪಕ್ಕದ ಮನೆಯಲ್ಲಿ ಸಾಯಿ ವರ್ಧನ್ ತಂದೆ ಮತ್ತು ತಾಯಿ ಮತ್ತಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

    ಬುಧವಾರ ಸಂಜೆ ಸುಮಾರು 5 ಗಂಟೆ ಜಿಲ್ಲೆಯ ಪಪನ್ನಪೇಟೆ ಮಂಡಲ್‍ದಲ್ಲಿರುವ ತೋಟದಲ್ಲಿ ಬಾಲಕ ತನ್ನ ಅಜ್ಜ ಮತ್ತು ತಂದೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ಮಾಹಿತಿ ತಿಳಿದು ಎನ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ಬಂದು 120 ಅಡಿ ತೆರೆದ ಬೋರ್‌ವೆಲ್‌ಗೆ ಆಮ್ಲಜನಕ ಸರಬರಾಜು ಮಾಡಿದೆ. ಅಲ್ಲದೇ ಬಾಲಕನನ್ನು ರಕ್ಷಿಸಲು ಪಕ್ಕದಲ್ಲಿ ಮಣ್ಣನ್ನು ಅಗೆಯಲಾಗಿತ್ತು. ಆದರೆ ಬಾಲಕನಿಗೆ ಸರಿಯಾಗಿ ಆಮ್ಲಜನಕ ಸಿಗದೆ ಮೃತಪಟ್ಟಿದ್ದು, ಇಂದು ಬೆಳಗ್ಗೆ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬಾಲಕ ಬೋರ್‌ವೆಲ್‌ಗೆ ಬಿದ್ದ ತಕ್ಷಣ ತಾಯಿ ತಾನು ಉಟ್ಟಿದ್ದ ಸೀರೆಯನ್ನು ಬಿಚ್ಚಿ ಕೊಳವೆ ಬಾವಿಯೊಳಗೆ ಇಳಿಸಿದ್ದಾರೆ. ಅದನ್ನು ಹಿಡಿದುಕೊಂಡು ಮಗು ಮೇಲಕ್ಕೆ ಬರಬಹುದು ಎಂದು ಪ್ರಯತ್ನಿಸಿದ್ದಾರೆ. ಆದರೆ ಬಾಲಕ ಬಾವಿಯೊಳಗೆ ಆಳದವರೆಗೆ ಹೋಗಿದ್ದು, ಸೀರೆಯನ್ನು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ.

    ಸದ್ಯಕ್ಕೆ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅನುಮತಿಯಿಲ್ಲದೆ ಮೂರು ಬೋರ್‌ವೆಲ್‌ಗಳನ್ನು ಕೊರೆಸಿದ್ದಾರೆ. ಆದರೆ ನೀರು ಸಿಗಲಿಲ್ಲ ಎಂದು ಅದನ್ನು ಮುಚ್ಚದ ಬಿಟ್ಟಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಬಾವಿಗೆ ಬಿದ್ದ 4 ವರ್ಷದ ಚಿರತೆ ರಕ್ಷಣೆ – ವಿಡಿಯೋ ವೈರಲ್

    ಬಾವಿಗೆ ಬಿದ್ದ 4 ವರ್ಷದ ಚಿರತೆ ರಕ್ಷಣೆ – ವಿಡಿಯೋ ವೈರಲ್

    ಪುಣೆ: ಬಾವಿಯಲ್ಲಿ ಬಿದ್ದು ಮೇಲೆ ಹತ್ತಲು ಸಾಧ್ಯವಾಗದೆ ಒದ್ದಾಡುತ್ತಿದ್ದ 4 ವರ್ಷದ ಗಂಡು ಚಿರತೆಯನ್ನು ರಕ್ಷಿಸುವಲ್ಲಿ ವೈಲ್ಡ್ ಲೈಫ್ ಎಸ್‍ಓಎಸ್ ಹಾಗೂ ಶಿರೂರ್ ರೇಂಜ್ ರಕ್ಷಣಾ ತಂಡ ಯಶಸ್ವಿಯಾಗಿದ್ದು, ವಿಡಿಯೋ ವೈರಲ್ ಆಗಿದೆ.

    ಶಿರೂರ್ ತಾಲೂಕಿನ ಫಕ್ಟೆ ಎಂಬ ಗ್ರಾಮದಲ್ಲಿ ಬಾವಿಯೊಂದಕ್ಕೆ ಚಿರತೆ ಆಕಸ್ಮಿಕವಾಗಿ ಬಿದ್ದಿತ್ತು. ಶಿರೂರ್ ರೇಂಜ್‍ನ ರಕ್ಷಣಾ ತಂಡದ ಸ್ವಯಂ ಸೇವಕ ವಿಟಲ್ ಬಾಬುರಾವ್ ಬುಜ್ಬಲ್ ಮಾಹಿತಿ ನೀಡಿದ ನಂತರ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ರಕ್ಷಿಸಿವೆ.

    ರೇಂಜ್ ಫಾರೆಸ್ಟ್ ಆಫೀಸರ್ ಮನೋಹರ್ ರಾಮ್‍ದೇವ್, ಮಾಣಿಕ್‍ದೋ ಚಿರತೆ ರಕ್ಷಣಾ ಕೇಂದ್ರದ ಪಶು ವೈದ್ಯಾಧಿಕಾರಿ, ಡಾ.ಅಜಯ್ ದೇಶಮುಖ್, ಅವರ ನೇತೃತ್ವದಲ್ಲಿ ಚಿರತೆಯನ್ನು ರಕ್ಷಿಸಲಾಗಿದೆ.

    ರಕ್ಷಣೆಯ ನಂತರ ಚಿರತೆಯನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಮಾಣಿಕ್‍ದೋ ಚಿರತೆ ರಕ್ಷಣಾ ಕೇಂದ್ರಕ್ಕೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ರಕ್ಷಣೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಕೋಲ್ಕತ್ತಾದಲ್ಲಿ ಸೇತುವೆ ಕುಸಿತ – 8 ಮಂದಿಗೆ ಗಾಯ

    ಕೋಲ್ಕತ್ತಾದಲ್ಲಿ ಸೇತುವೆ ಕುಸಿತ – 8 ಮಂದಿಗೆ ಗಾಯ

    ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆ ಕುಸಿದು ಬಿದ್ದ ಪರಿಣಾಮ, ಓರ್ವ ಸಾವನ್ನಪ್ಪಿ, ಹಲವು ಜನ ಅವಶೇಷಗಳ ಅಡಿಯಲ್ಲಿ ಸಿಲುಕೊಂಡಿದ್ದಾರೆ.

    ರಾಜಧಾನಿಯ ಹಳೆಯ ನಗರ ಹಾಗೂ ಜನಜಂಗುಳಿ ಹೆಚ್ಚಿರುವ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆಯು ಸಂಜೆ 4.45ರ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದ್ದು, ಪರಿಣಾಮವಾಗಿ ಅದರ ಮೇಲೆ ಸಂಚರಿಸುತ್ತಿದ್ದ ಹಲವು ವಾಹನಗಳು ಸೇರಿದಂತೆ 10 ಕ್ಕೂ ಹೆಚ್ಚು ಬೈಕುಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಅಲ್ಲದೇ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ 8ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಅವಶೇಷಗಳ ಅಡಿಯಲ್ಲಿ ಹಲವು ಮಂದಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ಸಿಲುಕಿಕೊಂಡಿರುವ ಜನರನ್ನು ರಕ್ಷಿಸುತ್ತಿದ್ದು, ಗಾಯಗೊಂಡಿದ್ದ 8 ಮಂದಿಯನ್ನು ಎಸ್‍ಎಸ್‍ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೇತುವೆ ಬಿದ್ದ ಪರಿಣಾಮ ವಾಹನಗಳು ಸಂಪೂರ್ಣ ನಜ್ಜು-ಗುಜ್ಜಾಗಿವೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೇತುವೆ ಕುಸಿದು ಬಿದ್ದು, ಹಲವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವುದು ಮಾಹಿತಿ ಸಿಕ್ಕಿದೆ. ಈಗಾಗಲೇ ರಕ್ಷಣಾ ತಂಡ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಯು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾನು ತುರ್ತು ಭೇಟಿಗಾಗಿ ಡಾರ್ಜಿಲಿಂಗ್ ಗೆ ಭೇಟಿ ನೀಡಿದ್ದು, ಯಾವುದೇ ವಿಮಾನಗಳು ಇಲ್ಲದ ಕಾರಣ ಘಟನಾ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ. ಶೀಘ್ರವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಲ್ಲದೇ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಬಿಜೆಪಿಯ ಮುಖಂಡ ಮುಕುಲ್ ರಾಯ್ ಪ್ರತಿಕ್ರಿಯಿಸಿ, ಸೇತುವೆ ಕುಸಿತಕ್ಕೆ ಸಿಎಂ ಮಮತಾ ಬ್ಯಾನರ್ಜಿಯವರೇ ನೇರ ಹೊಣೆ. ಕೇವಲ ಅವರು ನಗರವನ್ನು ಸುಂದರವಾಗಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು, ಯಾವುದೇ ಹಳೆಯ ಕಾಮಗಾರಿಗಳನ್ನು ಸರಿಪಡಿಸುವಲ್ಲಿ ಗಮನಹರಿಸಿಲ್ಲ. ಇದರ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕಿ ಸಾವು ಗೆದ್ದಳು!

    ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕಿ ಸಾವು ಗೆದ್ದಳು!

    – 30 ಗಂಟೆಗಳ ಕಾರ್ಯಾಚರಣೆ ಯಶಸ್ವಿ

    ಪಾಟ್ನಾ: ಮನೆಯ ಬಳಿ ಆಟವಾಡುತ್ತಾ 110 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಸನ್ನೊ ಮಂಗಳವಾರ ಸಂಜೆ 4 ಗಂಟೆ ವೇಳೆ ಮನೆಯ ಬಳಿ ಇದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು. ಸತತ 30 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    ಕೊಳವೆ ಬಾವಿಯಿಂದ ಸನ್ನೋಳನ್ನು ರಕ್ಷಿಸಿದ ಬಳಿಕ ತಜ್ಞ ವೈದ್ಯರು ಬಾಲಕಿಯ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ಆರೋಗ್ಯ ಉತ್ತಮವಾಗಿದ್ದು, ಬಳಿಕ ಸನ್ನೋಳನ್ನು ಪೋಷಕರ ವಶಕ್ಕೆ ನೀಡಿದ್ದಾರೆ.

    ಕಾರ್ಯಾಚರಣೆ ವೇಳೆ ರಕ್ಷಣಾ ತಂಡ ಬಾಲಕಿ ಉಸಿರಾಟಕ್ಕೆ ಆಮ್ಲಜನಕವನ್ನು ಪೂರೈಸಿತ್ತು. ಅಲ್ಲದೇ ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದರು. ಬಳಿಕ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಬೃಹತ್ ಹೊಂಡ ನಿರ್ಮಿಸಿ ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವ ಕಾರ್ಯ ನಡೆಸಿದ್ದರು.

    ಬಾಲಕಿ ಮಂಗಳವಾರ ತನ್ನ ಪೋಷಕರೊಂದಿಗೆ ಮುಂಗೇರಾದ ಮುರ್ಗಿಚಕ್ ಎಂಬಲ್ಲಿರುವ ಅಜ್ಜನ ಮನೆಗೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಕೊಳವೆ ಬಾವಿಗೆ ಬಿದ್ದಿದ್ದಳು. ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದ ಬಳಿಕ ಬಾಲಕಿ ಜೀವಂತವಾಗಿದ್ದು ಖಚಿತವಾಗಿತ್ತು. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.

  • ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

    ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

    ಪಾಟ್ನಾ: ಆಟವಾಡುತ್ತಾ ಮೂರು ವರ್ಷದ ಬಾಲಕಿಯು 110 ಅಡಿ ಆಳದ ಬೋರ್‍ವೆಲ್‍ಗೆ ಬಿದ್ದ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಸನ್ನೊ ಕೊಳವೆಬಾವಿಗೆ ಬಿದ್ದ ಬಾಲಕಿ. ಮಂಗಳವಾರ ತನ್ನ ಪೋಷಕರೊಂದಿಗೆ ಸನ್ನೊ ಅಜ್ಜನಾದ ಉಮೇಶ್ ನಂದನ್ ರವರನ್ನು ನೋಡಲು ಮುಂಗೇರಾದ ಮುರ್ಗಿಚಕ್ ಏರಿಯಾಕ್ಕೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಸಂಜೆ 4ರ ಸುಮಾರಿಗೆ ಮನೆಯ ಬಳಿಯಿದ್ದ ಸುಮಾರು 110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾಳೆ.

    ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದೆ. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ಕೊಳವೆಬಾವಿಯ ಸುತ್ತ ಬಿಗಿಭದ್ರತೆ ಕೈಗೊಂಡಿದ್ದಾರೆ.

    ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜ್ಯ ವಿಪತ್ತು ನಿರ್ವಹಣ ತಂಡದ ಅಧಿಕಾರಿಯಾದ ಸಂಜೀವ್ ಕುಮಾರ್ ರವರು, ಬಾಲಕಿಗೆ ಈಗಾಗಲೇ ಆಮ್ಲಜನಕವನ್ನು ಪೂರೈಕೆ ಮಾಡಿದ್ದು, ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದೇವೆ. ಅಲ್ಲದೇ ಕೂಡಲೇ ಆಕೆಯನ್ನು ಕೊಳವೆಬಾವಿಯಿಂದ ಹೊರತೆಗೆಯುತ್ತೇವೆ ಎಂದು ಹೇಳಿದ್ದಾರೆ.

    ರಾಜ್ಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ 40 ಅಡಿಗೂ ಹೆಚ್ಚಿನ ಬೃಹತ್ ಹೊಂಡ ನಿರ್ಮಿಸಿದ್ದು, ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವುದಾಗಿ ತಿಳಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ವರಿಷ್ಠಾಧಿಕಾರಿಯಾದ ಹರಿಶಂಕರ್ ಕುಮಾರ್ ರವರು, ಈಗಾಗಲೇ ಘಟನಾ ಸ್ಥಳದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, 2 ಪೊಲೀಸ್ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದೇವೆ. ರಕ್ಷಣಾ ಕಾರ್ಯಚರಣೆಗೆ ಪೊಲೀಸ್ ಇಲಾಖೆಯಿಂದ ಬೇಕಾಗುವ ಸಹಾಯವನ್ನು ಮಾಡಲಾಗುತ್ತದೆ ಎಂದು ಹೇಳಿದರು.