Tag: ರಕ್ಷಣಾ ಕಾರ್ಯಾಚರಣೆ

  • ಒಲಿಂಪಿಕ್ ಮೆಡಲ್ ಪಡೆಯುವ ತನಕ ನನಗೆ ಏನು ಆಗಲ್ಲ: ಜ್ಯೋತಿರಾಜ್ – ವಿಡಿಯೋ ನೋಡಿ

    ಒಲಿಂಪಿಕ್ ಮೆಡಲ್ ಪಡೆಯುವ ತನಕ ನನಗೆ ಏನು ಆಗಲ್ಲ: ಜ್ಯೋತಿರಾಜ್ – ವಿಡಿಯೋ ನೋಡಿ

    ಶಿವಮೊಗ್ಗ: ಕನ್ನಡಿಗರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಚಿರಋಣಿ ಎಂದು ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಹೇಳಿದ್ದಾರೆ.

    ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ಕುಟುಂಬದ ನೋವು ನಿವಾರಿಸಲು ನನ್ನ ಕೈಲಾದ ಸಹಾಯ ಮಾಡಲು ಮುಂದಾಗಿದ್ದೆ, ಆದರೆ ಮೃತ ದೇಹದ ಪತ್ತೆ ಮಾಡುವ ವೇಳೆ ನನ್ನ ಕಾಲು ಜಾರಿ ಬಂಡೆಗಳ ನಡುವೆ ಸಿಲುಕಿಕೊಳ್ಳಬೇಕಾಯಿತು. ಆದರೆ ನಾನು ಅಲ್ಲಿಂದ ಮತ್ತೆ ಹತ್ತಿ ಬರಲು ಪ್ರಯತ್ನಿಸಿದೆ ಸದಾ ನೀರು ಹರಿಯುವ ಕಾರಣ ನನ್ನ ಪ್ರಯತ್ನ ವಿಫಲವಾಯಿತು. ಇಂತಹ ಸನ್ನಿವೇಶಗಳನ್ನು ಹೇಗೆ ಎದುರಿಸಬೇಕು ಎಂಬ ಮಾಹಿತಿ ಇದ್ದ ಕಾರಣ ದೇಹಕ್ಕೆ ಹೆಚ್ಚು ಶ್ರಮ ನೀಡದೇ ಬಂಡೆ ಹತ್ತಿಬರಲು ಪ್ರಯತ್ನಿಸಿದೆ ಎಂದರು.

    ಸಂಜೆ ವೇಳೆ ಎಷ್ಟೇ ಪ್ರಯತ್ನಿಸಿದರೂ ಮೇಲೆ ಬರಲು ಸಾಧ್ಯವಾಗಲಿಲ್ಲ, ಅದ್ದರಿಂದ ರಾತ್ರಿ ಪೂರ್ತಿ ಅಲ್ಲಿಯೇ ಉಳಿಯಬೇಕಾಯಿತು. ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಂತಹ ಅನುಭವ ಆಗಿದೆ. ಕಲ್ಲು ಬಂಡೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೂ ಈ ರೀತಿ ನಡೆಯುವ ಕುರಿತು ಊಹೆ ಮಾಡಿರಲಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸದರು.

    ಇದೇ ವೇಳೆ ನನ್ನ ಯೋಗ ಕ್ಷೇಮದ ಕುರಿತು ಇಷ್ಟು ಪ್ರೀತಿ ತೋರಿದ ಕರ್ನಾಟಕ ಜನತೆಗೆ ಚಿರಋಣಿ ಎಂದ ಅವರು, ಭಾರತಕ್ಕೆ ಒಲಿಂಪಿಕ್ ನಲ್ಲಿ ಪದಕ ತರುವ ತನಕ ನನಗೆ ಏನು ಆಗುವುದಿಲ್ಲ ಎಂದು ಮುಗುಳುನಕ್ಕರು. ಇದನ್ನೂ ಓದಿ: ಜ್ಯೋತಿ ರಾಜ್ ಪತ್ತೆಯಾಗಿದ್ದು ಹೇಗೆ? 

    https://www.youtube.com/watch?v=wzQj6XUCYj0

  • ಬೆಂಗ್ಳೂರಲ್ಲಿ ಕಟ್ಟಡ ಕುಸಿತ ಪ್ರಕರಣ- ಇನ್ನೂ ಇಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ

    ಬೆಂಗ್ಳೂರಲ್ಲಿ ಕಟ್ಟಡ ಕುಸಿತ ಪ್ರಕರಣ- ಇನ್ನೂ ಇಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ

    ಬೆಂಗಳೂರು: ನಗರದ ಕಸವನಹಳ್ಳಿಯಲ್ಲಿ ಕಟ್ಟಡ ಕುಸಿತದ ಸ್ಥಳದಲ್ಲಿ ಎರಡು ದಿನಗಳಿಂದ ಅಗ್ನಿಶಾಮಕ ಹಾಗೂ ಎನ್‍ಡಿಆರ್‍ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

    ಶುಕ್ರವಾರ ರಾಯಚೂರು ಮೂಲದ ರಾಜುಸಾಬ್ ಎಂಬ ಕಾರ್ಮಿಕನ ಮೃತ ದೇಹ ಪತ್ತೆಯಾಗಿತ್ತು. ಇದುವರೆಗೂ ಕಟ್ಟಡ ದುರಂತದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಒಟ್ಟು 16 ಮಂದಿ ಗಾಯಗೊಂಡಿದ್ದವರನ್ನು ರಕ್ಷಣೆ ಮಾಡಲಾಗಿದೆ.

    ಒಟ್ಟು ಕಟ್ಟಡದಲ್ಲಿ 22 ಮಂದಿ ಕೆಲಸ ಮಾಡುತ್ತಿದ್ದರು ಅಂತ ಪೊಲೀಸರು ತಿಳಿಸಿದ್ದಾರೆ. ಕಟ್ಟಡ ಕಾರ್ಮಿಕರ ಮಾಹಿತಿ ಪ್ರಕಾರ ಇನ್ನೂ ಇಬ್ಬರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಂದೂರು ಪೊಲೀಸರು 304 ಅಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

    ಪ್ರ್ರಕರಣದ ಪ್ರಮುಖ ಆರೋಪಿ ಹಾಗೂ ಕಟ್ಟಡದ ಮಾಲೀಕ ರಫಿಕ್ ಪರಾರಿಯಾಗಿದ್ದಾನೆ. ಆದರೆ ರಫಿಕ್ ಪತ್ನಿ ಸಮೀರಾ ಹಾಗೂ ಬಿಬಿಎಂಪಿಯ ಮಹಾದೇವಪುರ ವಲಯದ ಉಪ ಅಭಿಯಂತರ ಮುನಿರೆಡ್ಡಿ ವಶಕ್ಕೆ ಪಡೆದಿರೋ ಬೆಳ್ಳಂದೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಏನಾಗಿತ್ತು?: ಕಳೆದ ಐದು ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣ ಕೆಲಸ ಆರಂಭವಾಗಿದ್ದು, ಅನಂತರದಲ್ಲಿ ಕಾರಣಾಂತರಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಕಳೆದ ಇಪ್ಪತ್ತು ದಿನ ಹಿಂದೆಯಷ್ಟೇ ಕಟ್ಟಡ ನವೀಕರಣ ಕೆಲಸವನ್ನು ಆರಂಭ ಮಾಡಲಾಗಿತ್ತು. ಗುರುವಾರ ಈ ಕಟ್ಟಡ ಕುಸಿದು ಬಿದ್ದಿದ್ದು 7 ಜನರನ್ನು ರಕ್ಷಣೆ ಮಾಡಲಾಗಿತ್ತು.

    ಘಟನಾಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಮಾತನಾಡಿದ ಅವರು ಸದ್ಯ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗುವುದು. ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುತ್ತದೆ ಹಾಗೂ ಮೃತರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಈ ವೇಳೆ ಮಾತನಾಡಿದ ಮೇಯರ್ ಸಂಪತ್ ರಾಜ್ ಇದು ಹಳೇ ಕಟ್ಟಡವಾಗಿದ್ದು, 5 ವರ್ಷದ ಹಿಂದೆ ನಿರ್ಮಾಣವಾಗಿತ್ತು. ಕಳಪೆ ಫೌಂಡೇಶನ್ ಕಾರಣ ಕಟ್ಟಡ ಕುಸಿದಿರುವ ಸಾಧ್ಯತೆ ಇದೆ ಅಂತ ಹೇಳಿದ್ದರು.

  • `ಓಖಿ’ಗೆ ಮಂಗಳೂರಲ್ಲಿ ಕಡಲು ಪ್ರಕ್ಷುಬ್ಧ – ಮಂಗಳೂರಿಂದ ಹೊರಟಿದ್ದ 8 ಮಂದಿ ಸೇಫ್

    `ಓಖಿ’ಗೆ ಮಂಗಳೂರಲ್ಲಿ ಕಡಲು ಪ್ರಕ್ಷುಬ್ಧ – ಮಂಗಳೂರಿಂದ ಹೊರಟಿದ್ದ 8 ಮಂದಿ ಸೇಫ್

    -ಸುಖ್ ಪಾಲ್ ಪೊಳಲಿ
    ಮಂಗಳೂರು: ತಮಿಳುನಾಡು ಮತ್ತು ಕೇರಳದಲ್ಲಿ ಅಬ್ಬರಿಸಿದ ಓಖಿ ಚಂಡಮಾರುತ ರಾಜ್ಯದ ಕರಾವಳಿಗೂ ಅಪ್ಪಳಿಸಿದೆ. ಮಂಗಳೂರಿನ ಸಮುದ್ರದಲ್ಲಿ ರಕ್ಕಸ ಅಲೆಗಳು ಏಳುತ್ತಿದ್ದು ಶನಿವಾರ ರಾತ್ರಿಯಿಂದ ಉಗ್ರ ಸ್ವರೂಪ ಪಡೆದಿದೆ. ಕಡಲ ತೀರದ 15 ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಇಡೀ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಸಮುದ್ರದಿಂದ ರಸ್ತೆಗೆ ಬಂತು ನೀರು: ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಡಲಿನ ಅಬ್ಬರ ಜೋರಾಗಿದ್ದು, ತೀರ ಪ್ರದೇಶಕ್ಕೆ ರಕ್ಕಸ ಅಲೆಗಳು ಅಪ್ಪಳಿಸತೊಡಗಿವೆ.

    ಶನಿವಾರ ಬೆಳಗ್ಗೆ ಕರಾವಳಿ ಭಾಗದಲ್ಲಿ ಮೋಡದ ವಾತಾವರಣ ಇದ್ದರೂ, ಹನಿ ಮಳೆಯೂ ಬಿದ್ದಿರಲಿಲ್ಲ. ಹೀಗಿದ್ದರೂ ಬಿರುಗಾಳಿ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮುನ್ಸೂಚನೆ ನೀಡಿದ್ದರಿಂದ ಮೀನುಗಾರರು ಸೇರಿದಂತೆ ಬೀಚ್ ಪ್ರದೇಶದಲ್ಲಿ ಪ್ರವಾಸಿಗರಿಗೆ ನೀರಿಗಿಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಇನ್ನು ಮಂಗಳೂರಿನ ಉಳ್ಳಾಲ ಭಾಗದಲ್ಲಿ 25ಕ್ಕೂ ಹೆಚ್ಚು ನಾಡದೋಣಿಗಳನ್ನು ತೀರಕ್ಕೆಳೆದು ಕಟ್ಟಿದ್ದಲ್ಲದೆ, ಮೀನುಗಾರರು ಕಡಲಿನ ವೈಪರೀತ್ಯ ಕಂಡು ದಿಗಿಲುಗೊಂಡಿದ್ದರು. ಸಂಜೆಯಾಗುತ್ತಲೇ ಕಡಲಿನಲ್ಲಿ ರಕ್ಕಸ ಅಲೆಗಳು ಏಳಲಾರಂಭಿಸಿದ್ದು ಕಡಲ ತೀರದ ಜನರು ಆತಂಕಗೊಂಡಿದ್ದಾರೆ. ಸೋಮೇಶ್ವರದ ಪರಿಬೈಲ್, ಬಟ್ಟಪ್ಪಾಡಿಯಲ್ಲಿ ಸಮುದ್ರದ ನೀರು ರಸ್ತೆಗೆ ಬಂದಿದೆ. ಉಳ್ಳಾಲ, ಸೋಮೇಶ್ವರ, ಮುಕ್ಕ, ಪಣಂಬೂರು ಸಮುದ್ರ ತೀರದಲ್ಲಿ ಸಮುದ್ರದ ಅಲೆಗಳ ರಭಸ ತೀವ್ರ ವಾಗಿದ್ದು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಕಡಲ ತೀರದಲ್ಲಿ ಹೈ ಅಲರ್ಟ್ ಘೋಷಿಸಿದೆ. ಡಿಸೆಂಬರ್ 6ರ ತನಕ ಲಕ್ಷ ದ್ವೀಪಕ್ಕೆ ಎಲ್ಲಾ ವೆಸಲ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    ಮಂಗಳೂರಿಂದ ಹೊರಟವ್ರು ಬದುಕಿ ಬಂದ್ರು: ಲಕ್ಷದ್ವೀಪದ ಬಳಿ ನಾಪತ್ತೆಯಾಗಿದ್ದ ಮಂಗಳೂರಿನ ಬೋಟ್ ನಲ್ಲಿದ್ದ 8 ಸಿಬ್ಬಂದಿಯನ್ನು ಕೊನೆಗೂ ನೌಕಾಪಡೆ ರಕ್ಷಣೆ ಮಾಡಿದೆ. ಮಂಗಳೂರಿನ ಹಳೆಬಂದರಿನಿಂದ ನವೆಂಬರ್ 28ರಂದು ಸರಕು ತುಂಬಿಕೊಂಡು ಹೊರಟಿದ್ದ ಜೇವರ್ಗಿ 258 ಹೆಸರಿನ ಬೋಟ್ ನಿನ್ನೆ ರಾತ್ರಿ ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿತ್ತು. ಕರಾವಳಿ ತಟ ರಕ್ಷಣಾ ಪಡೆ ಮತ್ತು ನೌಕಾಪಡೆ ಕಾರ್ಯಾಚರಣೆ ಯತ್ನ ನಡೆಸಿತ್ತಾದರೂ ಬಿರುಗಾಳಿಯಿಂದಾಗಿ ಬೋಟ್ ಸಮುದ್ರದಲ್ಲಿ ಕಾಣೆಯಾಗಿತ್ತು. ಶನಿವಾರ ಸಂಜೆ ಹೆಲಿಕಾಪ್ಟರ್ ಮೂಲಕ ಪತ್ತೆ ಕಾರ್ಯ ನಡೆಸಿದ ನೌಕಾಪಡೆ ಬೋಟಿನಲ್ಲಿದ್ದ 8 ಮಂದಿ ತಮಿಳ್ನಾಡು ಮೂಲದ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.

    ಕೇರಳ, ತಮಿಳುನಾಡಿನಲ್ಲಿ ಭೀತಿ ಮೂಡಿಸಿದ್ದ ಓಖಿ ಚಂಡಮಾರುತ ಕರಾವಳಿಯಲ್ಲೂ ಪ್ರತಾಪ ತೋರಿಸಿದೆ. ಚಂಡ ಮಾರುತದ ಪ್ರಭಾವ ಮುಂದಿನ ಮೂರು ದಿನಗಳ ಕಾಲ ಇರುವ ಸಾಧ್ಯತೆಗಳಿದ್ದು ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

    https://www.youtube.com/watch?v=IskPbU9PesM

    https://www.youtube.com/watch?v=XHBE1SXcP-A

    https://www.youtube.com/watch?v=ampmtdoQElk

     

  • ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    – ಮಂಡ್ಯ, ಕಾರವಾರದಲ್ಲೂ ಸೈಕ್ಲೋನ್ ಹೊಡೆತ
    – 14 ಜನರ ಸಾವು, 223 ಜನರ ರಕ್ಷಣೆ

    ತಿರುವನಂತರಪುರ: ಕನ್ಯಾಕುಮಾರಿ ಸೇರಿದಂತೆ ಕೇರಳದ ಕರಾವಳಿಯಲ್ಲಿ ಓಖಿ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಾಜ್ಯದ ಮಂಗಳೂರು ಕರಾವಳಿಗೂ ಓಖಿ ಚಂಡಮಾರತ ಅಪ್ಪಳಿಸಿದ್ದು, ಚಂಡಮಾರುತದ ರಭಸಕ್ಕೆ 4 ಮೀನುಗಾರಿಕಾ (ವೆಸಲ್) ಹಡುಗು ಮುಳುಗಡೆಯಾಗಿದೆ.

    ಇದರ ಜೊತೆಗೆ ಇನ್ನೊಂದು ವೆಸಲ್ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಮಂದಿ ಕಾರ್ಮಿಕರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ವೆಸಲ್‍ನ ಮಾಲೀಕರು, ಸಾಮಾಗ್ರಿಗಳನ್ನು ಕಳಿಸುತ್ತಿರುವ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

    ಮಂಗಳೂರಲ್ಲಿ ಅನಾಹುತದ ಬೆನ್ನಲ್ಲೇ ಕಾರವಾರದಲ್ಲೂ ಓಖಿ ಸೈಕ್ಲೋನ್ ಗಂಟೆಗೆ 40 ಕಿ.ಮೀ ವೇಗದಲ್ಲಿ ಅಪ್ಪಳಿಸುತ್ತಿದೆ. ಇದರಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಮೀನುಗಾರರಿಗೆ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಲಾಗಿದೆ. ಓಖಿ ಪ್ರಭಾವ ಸತತ 48 ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಓಖಿ ಚಂಡಮಾರುತದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿಯೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳು ಹೆಚ್ಚು ಏಳುತ್ತಿದ್ದು ಗಂಟೆಗೆ 35 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಕಾರಣದಿಂದ ಎರಡು ದಿನಗಳವರೆಗೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಕಾರವಾರ ಭಾಗದಲ್ಲಿ ನಾರ್ತ್ ಈಸ್ಟ್ ನಿಂದ ಬೀಸುತ್ತಿರುವ ಬಿರುಗಾಳಿಯ ಪ್ರಮಾಣ ತಗ್ಗಿದೆ. ಗಾಳಿಯು ದಿಕ್ಕು ಬದಲಿಸುತ್ತಿದ್ದು ಜಿಲ್ಲೆಯ ಕರಾವಳಿ ಭಾಗದಲ್ಲಿ ಇಂದು ಸಂಜೆ ಅಥವಾ ನಾಳೆ ಸಂಜೆ ಒಳಗೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

     

    ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ಮಂಡ್ಯ, ಕೋಲಾರದಲ್ಲೂ ಸೈಕ್ಲೋನ್ ಭೀತಿ ಎದುರಾಗಿದೆ. ಓಖಿ ಚಂಡಮಾರುತದಿಂದಾಗಿ ಕಟಾವಿಗೆ ಬಂದಿರುವ ಭತ್ತ, ರಾಗಿ ಆಹಾರ ಪದಾರ್ಥಗಳು ಬಿರುಗಾಳಿಗೆ ನಾಶವಾಗುವ ಆಂತಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಟಾವು ಮಾಡಲಾಗಿರುವ ಬೆಳೆಗಳು ಮಳೆಗೆ ನಾಶವಾಗಿದೆ. ಮಂಡ್ಯದ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ರೈತ ಬೆಳೆದ ಭತ್ತದ ಬೆಳೆ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ, ವೈದ್ಯನಾಥಪುರ ಗ್ರಾಮದ ರೈತರು ಚಂಡಮಾರುತದ ಅರಿವಿಲ್ಲದೇ ತೆನೆ ಬಂದಿದ್ದ ಸುಮಾರು ನಾಲ್ಕು ಎಕರೆ ಪ್ರದೇಶದ ಭತ್ತದ ಪೈರನ್ನು ಕಟಾವು ಮಾಡಿದ್ದರು. ಆದರೆ ಭತ್ತದ ಪೈರನ್ನು ಒಕ್ಕಣೆ ಮಾಡುವ ಮುನ್ನವೇ ಮಳೆ ಸುರಿದು ಗದ್ದೆಯಲ್ಲಿ ನೀರು ನಿಂತಿದೆ. ಪರಿಣಾಮ ಭತ್ತದ ಬೆಳೆ ಸಂಪೂರ್ಣ ನೀರಿನಲ್ಲಿ ನೆನೆದು ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

    ಸಮುದ್ರಕ್ಕೆ ತೆರಳಿದ ಮೀನುಗಾರರನ್ನು ಭಾರತೀಯ ನೌಕಾ ಪಡೆ ಹೆಲಿಕಾಪ್ಟರ್ ಗಳ ಮೂಲಕ ರಕ್ಷಣೆ ಮಾಡುತ್ತಿದ್ದು, ಇದುವರೆಗೂ ಸುಮಾರು 223 ಜನರನ್ನು ರಕ್ಷಣೆ ಮಾಡಿದೆ. ಇನ್ನು ಸಮುದ್ರಕ್ಕೆ ತೆರಳಿದ 40 ರಿಂದ 60 ಮೀನುಗಾರರ ಸುಳಿವು ಸಿಕ್ಕಿಲ್ಲ ಎಂದು ವರದಿಯಾಗಿದೆ. ಈವರೆಗೆ 14 ಜನ ಮೃತಪಟ್ಟಿದ್ದಾರೆ.

    ಭಾರತೀಯ ನೌಕಪಡೆ ರಕ್ಷಣಾ ಕಾರ್ಯಚಾರಣೆ ಕೈಗೊಂಡಿರುವ ದೃಶ್ಯಗಳು ಲಭ್ಯವಾಗಿದೆ. ಇನ್ನು ಸಮುದ್ರಕ್ಕೆ ತೆರಳಿರುವ ಮೀನುಗಾರರ ಕುಟುಂಬಸ್ಥರು ಸಮುದ್ರ ದಡದಲ್ಲೇ ಕಾದು ಕುಳಿತ್ತಿದ್ದು, ನೀರು ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

    https://www.youtube.com/watch?v=FlExdKZ96-U

    https://www.youtube.com/watch?v=IskPbU9PesM