Tag: ರಕ್ಷಣಾ ಕಾರ್ಯಾಚರಣೆ

  • ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ನವದೆಹಲಿ: ಕಾರ್ಮಿಕರ ರಕ್ಷಣೆಗೆ ದೇಶಾದ್ಯಂತ ಪ್ರಾರ್ಥನೆ, ನಾವು ಸಾವನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಛಲ ತೊಟ್ಟ ಕಾರ್ಮಿಕರು, ಕಾರ್ಯಾಚರಣೆ ಮಧ್ಯೆ ಕೈಕೊಟ್ಟ ಯಂತ್ರ…ಹೆಜ್ಜೆ ಹೆಜ್ಜೆಗೂ ಅಡೆತಡೆಅಡ್ಡಿ ಆತಂಕಗಳ ನಡುವೆ ಉತ್ತರಾಖಂಡದ (Uttarakhand) ಸುರಂಗದಲ್ಲಿ (Tunnel) ಕಳೆದ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು (Workers) ಯಶಸ್ವಿಯಾಗಿ ರಕ್ಷಿಸಲಾಗಿದೆ.

    ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಡೆಸಿದ ಸಾಹಸೋಪೇತ ಕಾರ್ಯಾಚರಣೆಯಲ್ಲಿ 400ಕ್ಕೂ ಹೆಚ್ಚು ಗಂಟೆಗಳ ಬಳಿಕ ಎಲ್ಲಾ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸುರಂಗದಿಂದ ಕಾರ್ಮಿಕರು ಹೊರಬರುತ್ತಿದ್ದಂತೆ ಉತ್ತಾರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿಬ ವಿಕೆ ಸಿಂಗ್ ಹೂವಿನ ಹಾರವನ್ನು ಹಾಕಿ ಬರಮಾಡಿಕೊಂಡರು.

    ನೆಲದಿಂದ ಸಮಾನಾಂತರವಾಗಿ ಮೊದಲು ಕೈಗೊಂಡಿದ್ದ ಕೊರೆವ ಕೆಲಸವನ್ನು ಅದು ನಿಂತಿದ್ದ ಸ್ಥಳದಿಂದಲೇ ನಿಷೇಧಿತ ಇಲಿ ಬಿಲ ಗಣಿಗಾರಿಕೆಯ ಪದ್ದತಿ ಬಳಸಿ ಡ್ರಿಲ್ಲಿಂಗ್ ಮಾಡಿದ್ದು ಫಲ ಕೊಟ್ಟಿದೆ. ನಂತರ ಸುರಂಗದ ಒಳಗೆ 3 ಮೀಟರ್‌ನಷ್ಟು ಕೊರೆಯಲಾಯಿತು. ಸಂಜೆ 7:05ಕ್ಕೆ ಸರಿಯಾಗಿ ಕಾರ್ಮಿಕರು ಸಿಲುಕಿದ್ದ ಸ್ಥಳವನ್ನು ಎನ್‌ಡಿಆರ್‌ಎಫ್ ತಲುಪಿತು. ಐವರು ಅಧಿಕಾರಿಗಳ ತಂಡ ಮೊದಲು ಸುರಂಗ ತಲುಪಿ ಕಾರ್ಮಿಕರನ್ನು ಭೇಟಿ ಮಾಡಿದರು. ನಂತರ 4 ಅಡಿಯಷ್ಟು ಅಗಲ ಪೈಪ್‌ನೊಳಗಿನಿಂದ ಸ್ಟ್ರೆಚರ್ ಬಳಸಿ ಹಲವು ಬ್ಯಾಚ್‌ಗಳಲ್ಲಿ ಕಾರ್ಮಿಕರನ್ನು ಎನ್‌ಡಿಆರ್‌ಎಫ್ ಕರೆತಂದಿದೆ.

    3-3 ಕಾರ್ಮಿಕರನ್ನು ಬ್ಯಾಚ್‌ಗಳನ್ನಾಗಿ ವಿಂಗಡಿಸಿ ಅವರನ್ನು ಹೊರಗೆ ಕರೆತರಲಾಗಿದೆ. ಒಬ್ಬೊಬ್ಬ ಕಾರ್ಮಿಕ ಬಾಹ್ಯ ಜಗತ್ತನ್ನು ಕಂಡ ಕೂಡಲೇ ಸ್ಥಳದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸಾವು ಗೆದ್ದು ಬಂದ ಪ್ರತಿಯೊಬ್ಬ ಕಾರ್ಮಿಕರನ್ನು ಹೂಹಾರದೊಂದಿಗೆ ಸ್ವಾಗತಿಸಲಾಗಿದೆ. ಈ ಎಲ್ಲಾ ಕೆಲಸ ಕೇವಲ ಅರ್ಧ ಗಂಟೆ ಅಂತರದಲ್ಲಿ ನಡೆದಿದೆ.

    ಸದ್ಯಕ್ಕೆ ಎಲ್ಲ ಕಾರ್ಮಿಕರೂ ಆರೋಗ್ಯವಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಒಂದೊಮ್ಮೆ ಯಾರಿಗಾದರೂ ಮೆಡಿಕಲ್ ಎಮೆರ್ಜೆನ್ಸಿ ಇದ್ದರೆ ಆಸ್ಪತ್ರೆಗೆ ಸಾಗಿಸಲು ಚಿನೂಕ್ ಹೆಲಿಕಾಪ್ಟರ್ ಸಜ್ಜಾಗಿ ಇರಿಸಲಾಗಿತ್ತು. ಅದೃಷ್ಟವಶಾತ್ ಅಂತಹ ಸನ್ನಿವೇಶ ಕಂಡುಬಂದಿಲ್ಲ. ಸ್ಥಳದಲ್ಲೇ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರು ಬಂಧುಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    17 ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ನೂರೆಂಟು ವಿಘ್ನಗಳು ಎದುರಾಗಿದ್ದವು. ವಿದೇಶಿ ತಜ್ಞರನ್ನು ಆಪರೇಷನ್‌ಗೆ ಬಳಸಿಕೊಳ್ಳಲಾಗಿತ್ತು. ಆದರೆ ಕಾರ್ಯಾಚರಣೆ ಯಾವಾಗ ಮುಗಿಯಬಹುದು ಎಂಬ ಬಗ್ಗೆ ಸ್ಪಷ್ಟತೆಯೇ ಇರಲಿಲ್ಲ. ಆದರೆ ರಕ್ಷಣಾ ಪಡೆಗಳ ಅವಿರತ ಪ್ರಯತ್ನ ಇಂದು ಫಲ ಕೊಟ್ಟಿದೆ.

    ರಕ್ಷಣಾ ಕಾರ್ಯರಚಣೆ ನಡೆದಿದ್ದು ಹೀಗೆ:
    ಅವಶೇಷಗಳ ನಡುವೆ ಮೊದಲು ಡ್ರಿಲ್ಲಿಂಗ್ ನಡೆಸಿ ಕೊನೆ ಭಾಗ ಸುಮಾರು 57 ಮೀಟರ್ ಮಾತ್ರ ಮನುಷ್ಯರಿಂದಲೇ ಕೊರೆಯಲಾಯಿತು. ಸುರಂಗಕ್ಕೆ 90 ಸೆಂಟಿಮೀಟರ್ ಅಗಲದ ಪೈಪ್ ಅಳವಡಿಸಿ, ಅದರ ಮೂಲಕವೇ ಕಾರ್ಮಿಕರನ್ನು ಹೊರಕ್ಕೆ ತರಲಾಗಿದೆ. ಇದನ್ನೂ ಓದಿ: ಉತ್ತರಕಾಶಿ ಸುರಂಗದಲ್ಲಿ ಗ್ರೇಟ್ ಆಪರೇಷನ್ – 17 ದಿನಗಳ ಬಳಿಕ ಸಾವು ಗೆದ್ದ 41 ಕಾರ್ಮಿಕರು

    ಕಾರ್ಮಿಕರು 17 ದಿನ ಬದುಕಿದ್ದು ಹೇಗೆ?
    ನವೆಂಬರ್ 12 ರಂದು ಸಿಲ್‌ಕ್ಯಾರಾ ಸುರಂಗ ಕುಸಿತವಾಗಿತ್ತು. ಈ ಹಿನ್ನೆಲೆ 41 ಕಾರ್ಮಿಕರು ಅದರೊಳಗೆ ಸಿಲುಕೊಕೊಂಡಿದ್ದರು. ಅದೃಷ್ಟವಶಾತ್ ಕಾರ್ಮಿಕರು ಓಡಾಡುವುದಕ್ಕೆ 2 ಕಿ.ಮೀ ಸ್ಥಳಾವಕಾಶ ಇತ್ತು. ಸುರಂಗ ಕುಸಿದ 2-3 ದಿನಗಳಲ್ಲಿ ಪೈಪ್ ಮೂಲಕ ಆಹಾರ, ನೀರು, ಔಷಧಿ ಪೂರೈಕೆ ಮಾಡಲಾಗುತ್ತಿತ್ತು.

    ಕಾರ್ಮಿಕರ ಮನಸ್ಥೈರ್ಯ ಕಡಿಮೆಯಾಗದಿರಲು ಯೋಗ, ಸಂವಹನ ಮಾಡಿಸಲಾಗಿತ್ತು. ಕುಟುಂಬಸ್ಥರೊಡನೆ ಮಾತನಾಡಲು ಕಾರ್ಮಿಕರಿಗೆ ಮೊಬೈಲ್ ಸೌಲಭ್ಯ ನೀಡಲಾಗಿತ್ತು. ಸಿಲುಕೊಕೊಂಡಿದ್ದ ಕಾರ್ಮಿಕರೊಡನೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಖುದ್ದಾಗಿ ಮಾತನಾಡಿದ್ದರು.

    ವರವಾದ ನಿಷೇಧಿತ ರ‍್ಯಾಟ್ ಹೋಲ್ ಟೆಕ್ನಿಕ್:
    ಇಲಿ ಬಿಲ ಕೊರೆವ ಮಾದರಿಯ ನೆಲ ಕೊರೆಯುವ ಟೆಕ್ನಿಕ್ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಕೊನೆಗೆ ಸಹಾಯಕ್ಕೆ ಬಂದಿದೆ. ಇದು ಕಾರ್ಮಿಕರ ಸಣ್ಣ ಗುಂಪುಗಳು ನೆಲ ಅಗೆದು ಕಲ್ಲಿದ್ದಲು ತೆಗೆಯುವ ಪ್ರಕ್ರಿಯೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದು ಸಲಕರಣೆ ಬಳಸಿಕೊಂಡು ಕೈಗಳಿಂದ ನೆಲ ಅಗೆಯುವ ಪ್ರಕ್ರಿಯೆಯಾಗಿದೆ. ಒಬ್ಬರು ಮಾತ್ರ ಒಳಗೆ ತೂರುವಷ್ಟು ಸಣ್ಣ ಕುಣಿ ಅಗೆಯವ ಕ್ರಿಯೆಯಾಗಿದ್ದು, ಇದನ್ನು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಿದ್ದರು.

    ಆದರೆ ಪರಿಸರಕ್ಕೆ ಮಾರಕ ಮಾತ್ರವಲ್ಲದೆ ದುರಂತ ಹೆಚ್ಚಳದ ಕಾರಣ ಇದಕ್ಕೆ ನಿಷೇಧ ಹೇರಲಾಗಿದೆ. ಈ ವಿಧಾನ ನಿಷೇಧವಿದ್ದರೂ ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಬಳಸಿಕೊಂಡು ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

  • 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

    41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

    ನವದೆಹಲಿ: ಕಳೆದ 17 ದಿನಗಳಿಂದ ಉತ್ತರಕಾಶಿ ಸುರಂಗದಲ್ಲಿ (Uttarkashi Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸಲಾಗಿದೆ. ವಿದೇಶಿ ಯಂತ್ರಗಳನ್ನು ತರಿಸಿಯೂ ಹಲವು ಪ್ರಯತ್ನಗಳನ್ನು ಮಾಡಿ ಅವುಗಳು ಕೈಕೊಟ್ಟ ಬಳಿಕ ಕೊನೆಗೆ ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ (Rat Hole Mining) ವಿಧಾನವೇ ಕೆಲಸಕ್ಕೆ ಬಂದಿದೆ.

    ಹೌದು, ಅಮೆರಿಕದಿಂದ ಆಗರ್ ಯಂತ್ರವನ್ನು ತರಿಸಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನ ಪಡುತ್ತಿದ್ದ ವೇಳೆ ಯಂತ್ರವೇ ಕೆಟ್ಟುಹೋಗಿತ್ತು. ಇದಾದ ಬಳಿಕ ರಕ್ಷಣಾ ಕಾರ್ಯಾಚರಣೆ ಭಾರೀ ವಿಳಂಬವೂ ಆಯಿತು. ಇದೀಗ ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತವನ್ನು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ ವಿಧಾನದ ಮೂಲಕ ಪೂರ್ಣಗೊಳಿಸಲಾಗಿದೆ.

    ಏನಿದು ರ‍್ಯಾಟ್ ಹೋಲ್ ಮೈನಿಂಗ್?
    ರ‍್ಯಾಟ್ ಹೋಲ್ ಮೈನಿಂಗ್ ಕೈಯಿಂದ ಕೊರೆಯುವ ವಿಧಾನವಾಗಿದೆ. ಇದನ್ನು ನುರಿತ ಕೆಲಸಗಾರರಷ್ಟೇ ಮಾಡುತ್ತಾರೆ. ಮೇಘಾಲಯದಲ್ಲಿ ಹೆಚ್ಚಾಗಿ ಕಾರ್ಮಿಕರು ಈ ರೀತಿ ಕೊರೆಯುತ್ತಾರೆ. ನೆಲದಲ್ಲಿ ಕಿರಿದಾದ ಹೊಂಡಗಳನ್ನು ಅಗೆದು, ಒಬ್ಬ ವ್ಯಕ್ತಿ ತೂರಿಕೊಂಡು ಹೋಗಲು ಸಾಧ್ಯವಾಗುವಷ್ಟೇ ಅಗಲದ ಹೊಂಡಗಳನ್ನು ಕೊರೆಯಲಾಗುತ್ತದೆ. ವ್ಯಕ್ತಿ ಹೊಂಡವನ್ನು ಕೊರೆದಂತೆ ಮುಂದೆ ಮುಂದೆ ಸಾಗುತ್ತಾ ಕಲ್ಲಿದ್ದಲನ್ನು ಸಂಗ್ರಹಿಸುತ್ತಾನೆ.

    ರ‍್ಯಾಟ್ ಹೋಲ್ ಎಂದರೆ ಹೆಸರೇ ಹೇಳಿದಂತೆ ಇಲಿಗಳು ಕೊರೆಯುವಂತಹ ಕಿರಿದಾದ ಹೊಂಡಗಳು. ಹೊಂಡಗಳನ್ನು ಅಗೆದ ನಂತರ ಗಣಿಗಾರನು ಹಗ್ಗ ಮತ್ತು ಬಿದಿರಿನ ಏಣಿಗಳನ್ನು ಬಳಸಿ ಹೊಂಡದೊಳಗೆ ಇಳಿಯುತ್ತಾನೆ. ಈ ವಿಧಾನವನ್ನು ಸಾಮಾನ್ಯವಾಗಿ ಕಲ್ಲಿದ್ದಲನ್ನು ಹೊರತೆಗೆಯಲು ಬಳಸಲಾಗುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ವಿಧಾನವನ್ನು ಬಳಸಿ ಉಸಿರುಗಟ್ಟಿ, ಆಮ್ಲಜನಕದ ಕೊರತೆಯಿಂದ ಹಾಗೂ ಅಲ್ಲೇ ಸಿಲುಕಿ ಹಸಿವಿನಿಂದ ಜನರು ಸಾವನಪ್ಪಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.

    ರ‍್ಯಾಟ್ ಹೋಲ್ ಮೈನಿಂಗ್‌ನಲ್ಲಿ ಮತ್ತೊಂದು ವಿಧವಿದೆ. ಇದರಲ್ಲಿ 10 ರಿಂದ 100 ಚದರ ಮೀಟರ್ ವರೆಗೆ ಬದಲಾಗುವ ಆಯತಾಕಾರದ ಹೊಂಡಗಳನ್ನು ಮಾಡಲಾಗುತ್ತದೆ. ಅದರ ಮೂಲಕ 100-400 ಅಡಿ ಆಳದ ಲಂಬವಾದ ಹೊಂಡವನ್ನು ಅಗೆಯಲಾಗುತ್ತದೆ. ಅದರಲ್ಲಿ ಕಲ್ಲಿದ್ದಲು ಕಂಡುಬಂದ ನಂತರ ರಂಧ್ರದ ಗಾತ್ರದ ಸುರಂಗಗಳನ್ನು ಅಡ್ಡಲಾಗಿ ಅಗೆಯಲಾಗುತ್ತದೆ. ಅದರ ಮೂಲಕ ಕಾರ್ಮಿಕರು ಕಲ್ಲಿದ್ದಲನ್ನು ಹೊರತೆಗೆಯುತ್ತಾರೆ.

    ರ‍್ಯಾಟ್ ಹೋಲ್ ಮೈನಿಂಗ್ ಬ್ಯಾನ್ ಯಾಕೆ?
    ರ‍್ಯಾಟ್ ಹೋಲ್ ಮೈನಿಂಗ್ ವಿಧಾನವು ಅದರ ಅಪಾಯಕಾರಿ ಕೆಲಸದ ಪರಿಸ್ಥಿತಿಗಳು, ಪರಿಸರ ಹಾನಿ ಮತ್ತು ಸಾವು ನೋವುಗಳಿಗೆ ಕಾರಣವಾಗುವ ಹಲವು ಅಂಶಗಳಿಂದಾಗಿ ತೀವ್ರ ಟೀಕೆಗಳನ್ನು ಎದುರಿಸಿದೆ. ಗಣಿಗಾರಿಕೆಗಳು ಸಾಮಾನ್ಯವಾಗಿ ಅನಿಯಂತ್ರಿತವಾಗಿದ್ದು, ಕಾರ್ಮಿಕರಿಗೆ ಸರಿಯಾದ ಗಾಳಿ, ರಚನಾತ್ಮಕ ಬೆಂಬಲ ಅಥವಾ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯವಹಿಸಲಾಗುತ್ತದೆ. ಮಾತ್ರವಲ್ಲದೇ ಈ ಹಳ್ಳದಲ್ಲಿ ಕಾರ್ಮಿಕರು ಇಳಿದ ಸಂದರ್ಭದಲ್ಲಿ ಮಳೆಯಾಗಿ, ಗಣಿಗಾರಿಕೆ ಪ್ರದೇಶದಲ್ಲಿ ನೀರು ನುಗ್ಗಿದ ಪರಿಣಾಮ ಅನೇಕ ಕಾರ್ಮಿಕರು ಅದರೊಳಗೆಯೇ ಪ್ರಾಣಬಿಟ್ಟಿರುವ ಅನೇಕ ನಿದರ್ಶನಗಳಿವೆ.

    ಈ ರೀತಿಯ ಗಣಿಗಾರಿಕೆಯಿಂದಾಗಿ ಭೂಮಿಯ ಅವನತಿ, ಅರಣ್ಯನಾಶ ಮತ್ತು ಜಲ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2014 ರಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಅಭ್ಯಾಸವನ್ನು ನಿಷೇಧಿಸಿತು.

    ರ‍್ಯಾಟ್ ಹೋಲ್ ಮೈನಿಂಗ್ ಅತ್ಯಂತ ಅಪಾಯಕಾರಿಯಾಗಿದ್ದು ಅನೇಕ ದೇಶಗಳಲ್ಲಿ ಇದನ್ನು ನಿಷೇಧಿಸಿದ್ದರೂ ಕೊನೆಗೆ ಅನಿವಾರ್ಯವಾಗಿ ಉತ್ತರಕಾಶಿಯ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಈ ವಿಧಾನವನ್ನು ಬಳಸಲಾಗಿದೆ. ಅನೇಕ ಜೀವಗಳಿಗೆ ಕುತ್ತಾಗಿದ್ದ ರ‍್ಯಾಟ್ ಹೋಲ್ ಮೈನಿಂಗ್ ವಿಧಾನವನ್ನು ಇದೀಗ ಅನೇಕ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, 41 ಕಾರ್ಮಿಕರನ್ನು ರಕ್ಷಣೆ ಮಾಡುವ ಮೂಲಕ ವರವಾಗಿ ಬಳಸಿಕೊಳ್ಳಲಾಗಿದೆ.

  • ತಾಂತ್ರಿಕ ಅಡಚಣೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆ ವಿಳಂಬ

    ತಾಂತ್ರಿಕ ಅಡಚಣೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆ ವಿಳಂಬ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದಲ್ಲಿ (Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ (Rescue operation) ಇಂದಿಗೆ (ಶುಕ್ರವಾರ) 13ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ತಡರಾತ್ರಿ ತಾಂತ್ರಿಕ ಅಡಚಣೆಯಿಂದಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗಿದೆ.

    ಸಿಲ್ಕ್ಯಾರಾ ಸುರಂಗದ ಕಡೆಯಿಂದ ಅಮೆರಿಕನ್ ಆಗುರ್ ಯಂತ್ರವನ್ನು ಬಳಸಿ ಕೊರೆಯುವ ಕೆಲಸ ನಡೆಯುತ್ತಿತ್ತು. ರಕ್ಷಣಾ ತಂಡ ಇಲ್ಲಿಯವರೆಗೆ ಸುಮಾರು 46.8 ಮೀ. ವರೆಗೆ ಕೊರೆದಿದ್ದಾರೆ. ಆದರೆ ಗುರುವಾರ ತಡರಾತ್ರಿ ಮತ್ತೊಂದು ತಾಂತ್ರಿಕ ಅಡಚಣೆ ಉಂಟಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಕೊರೆಯುವ ಯಂತ್ರವನ್ನು ದುರಸ್ತಿಗೊಳಿಸಲು ಕೆಲವು ಗಂಟೆ ತೆಗೆದುಕೊಳ್ಳುತ್ತದೆ. ಬೇರೆ ಯಾವುದೇ ಸಮಸ್ಯೆ ಉಂಟಾಗದಿದ್ದರೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಶೂಟಿಂಗ್‌ಗೆ ಅವಕಾಶ

    13 ದಿನಗಳಿಂದ ಸುರಂಗದೊಳಗೆ ಸಿಲುಕಿ ಪರದಾಡುತ್ತಿರುವ 41 ಕಾರ್ಮಿಕರನ್ನು ಇಂದು ಹೊರತರುವ ನಿರೀಕ್ಷೆಯಿದೆ. ಅಂಬುಲೆನ್ಸ್‌ಗಳು, ವೈದ್ಯರ ತಂಡ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದಾರೆ. ಕಾರ್ಮಿಕರಿಗೆ ನೀರು, ಆಹಾರ ವಿತರಿಸಲು ಪೈಪ್ ಅನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ

  • ತಂತಿ ಬೇಲಿಗೆ ಸಿಲುಕಿದ ಚಿರತೆ – ಗಂಟೆಗಳ ಕಾರ್ಯಾಚರಣೆ ಮೂಲಕ ಕೊನೆಗೂ ರಕ್ಷಣೆ

    ತಂತಿ ಬೇಲಿಗೆ ಸಿಲುಕಿದ ಚಿರತೆ – ಗಂಟೆಗಳ ಕಾರ್ಯಾಚರಣೆ ಮೂಲಕ ಕೊನೆಗೂ ರಕ್ಷಣೆ

    ಕಾರವಾರ: ಒಂದೂವರೆ ವರ್ಷದ ಗಂಡು ಚಿರುತೆಯೊಂದು ಆಹಾರ ಅರಸಿ ಹೋಗುತಿದ್ದ ವೇಳೆ ಖಾಸಗಿ ಜಮೀನಿನಲ್ಲಿ ಹಾಕಿದ್ದ ತಂತಿ ಬೇಲಿಗೆ ಸಿಲುಕಿದ ಘಟನೆ ಶಿರಸಿ ತಾಲೂಕು ಜಾನ್ಮನೆ ವಲಯದ ಶಿರಗುಣಿ ಗ್ರಾಮದಲ್ಲಿ ನಡೆದಿದೆ.

    ಚಿರತೆ ಚೀರಾಟ ಕೇಳಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಶಿವಮೊಗ್ಗ ವನ್ಯಜೀವಿ ವಲಯದ ವೈದ್ಯರ ತಂಡಕ್ಕೆ ಮಾಹಿತಿ ನೀಡಿದ್ದು, ಹಲವು ಗಂಟೆಗಳ ರಕ್ಷಣಾ ಕಾರ್ಯಾಚರಣೆ ಮೂಲಕ ಕೊನೆಗೂ ಚಿರತೆಯನ್ನು ಜೀವಂತ ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಇದನ್ನೂ ಓದಿ: ಕಳೆದ 4 ದಿನಗಳಿಂದ ಮಗ ಸಂಪರ್ಕಕ್ಕೆ ಸಿಗುತ್ತಿಲ್ಲ: ಪೋಷಕರು ಆತಂಕ

    ಈ ಹಿಂದೆ ಶಿರಸಿ ಭಾಗದಲ್ಲಿ ಕಪ್ಪು ಚಿರತೆಯೊಂದು ತಂತಿಗೆ ಸಿಲುಕಿದ್ದಾಗ ರಕ್ಷಣಾ ಕಾರ್ಯ ತಡವಾಗಿದ್ದರಿಂದ ಸಾವು ಕಂಡಿತ್ತು. ಈ ಬಾರಿ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‍ಜಿ ಹೆಗಡೆ ನೇತ್ರತ್ವದಲ್ಲಿ ಶಿವಮೊಗ್ಗದ ವನ್ಯಜೀವಿ ವೈದ್ಯರ ಸಹಕಾರದಿಂದ ಚಿರತೆಯನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಇದನ್ನೂ ಓದಿ: ಮೇಕ್ ಇನ್ ಇಂಡಿಯಾದಲ್ಲಿ ಇನ್ನೂ ದೊಡ್ಡದಾಗಿ ಯೋಚಿಸಬೇಕಿದೆ: ಮೋದಿ

  • ವೀಡಿಯೋ- ಮನೆ ಟೆರೆಸ್‍ನಲ್ಲಿ ನೇತಾಡ್ತಿದ್ದ ಬಾಲಕನ ರಕ್ಷಿಸಿದ ಬೀದಿ ಬದಿ ವ್ಯಾಪಾರಿ

    ವೀಡಿಯೋ- ಮನೆ ಟೆರೆಸ್‍ನಲ್ಲಿ ನೇತಾಡ್ತಿದ್ದ ಬಾಲಕನ ರಕ್ಷಿಸಿದ ಬೀದಿ ಬದಿ ವ್ಯಾಪಾರಿ

    – ಮನೆ ಮೇಲಿಂದ ಬಿದ್ದ ಬಾಲಕನ ಕ್ಯಾಚ್ ಹಿಡಿದು ರಕ್ಷಣೆ

    ಚೆನ್ನೈ: ಬಾಲಕ ಮನೆಯ ಟೆರೆಸ್ ಮೇಲೆ ತೆರಳಿದ್ದು, ಈ ವೇಳೆ ಗೋಡೆಗೆ ನೇತಾಡುತ್ತಿದ್ದ. ಇದನ್ನು ಗಮನಿಸಿದ ಬಾಲಕಿ, ಟೆರೆಸ್ ಮೇಲೆಯೇ ಬಾಲಕನ ಕೈ ಹಿಡಿದು ಎಳೆಯಲು ಯತ್ನಿಸಿದ್ದಾಳೆ ಆದರೆ ಸಾಧ್ಯವಾಗಿಲ್ಲ. ಇದೇ ಸಮಯಕ್ಕೆ ಬಂದ ಬೀದಿ ಬದಿ ವ್ಯಾಪಾರಿ ಮನೆಯ ಮೇಲಿಂದ ಬಿದ್ದ ಬಾಲಕನನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ. ಈ ಮೈ ಜುಮ್ ಎನ್ನಿಸುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ತಮಿಳುನಾಡಿನ ತಿರುಚ್ಚಿ ಬಳಿ ಘಟನೆ ನಡೆದಿದ್ದು, ಟೆರೆಸ್ ಮೇಲೆ ನೇತಾಡುತ್ತಿದ್ದ ಬಾಲಕನನ್ನು ಬೀದಿ ಬದಿ ವ್ಯಾಪಾರಿ ರಕ್ಷಿಸಿದ್ದಾರೆ. ಮನೆಯ ಟೆರೆಸ್‍ನ ಮೂಲೆಗೆ ತೆರಳಿ ಗೋಡೆಯನ್ನು ಹಿಡಿದು ಬಾಲಕ ನೇತಾಡುತ್ತಿದ್ದ. ಆತನ ಸಹೋದರಿ ಬಾಲಕನ ಕೈ ಹಿಡಿದು ಮೇಲಿಂದ ಎಳೆಯಲು ಯತ್ನಿಸುತ್ತಿದ್ದಳು. ಈ ವೇಳೆ ಕೆಲವೇ ಸೆಕೆಂಡುಗಳಲ್ಲಿ ವ್ಯಕ್ತಿಯೊಬ್ಬರು ಮನೆ ಬಳಿಗೆ ಓಡೋಡಿ ಬಂದಿದ್ದಾರೆ.

    ಮನೆಯ ಬಳಿ ಬಂದ ವ್ಯಕ್ತಿ ಟೆರೆಸ್ ಕೆಳಗೆ ನಿಂತಿದ್ದು, ಈ ವೇಳೆ ಮಗುವನ್ನು ತನ್ನ ತೋಳುಗಳ ಮೂಲಕ ಕ್ಯಾಚ್ ಹಿಡಿಯುವ ರೀತಿ ನಿಂತಿದ್ದಾರೆ. ಈ ವೇಳೆ ಬಾಲಕನ ಸಹೋದರಿ ಆತನ ಕೈ ಬಿಟ್ಟಿದ್ದಾಳೆ. ಬಾಲಕ ಸುರಕ್ಷಿತವಾಗಿ ವ್ಯಕ್ತಿಯ ತೋಳಿನಲ್ಲಿ ಬಂದು ಸೇರಿದ್ದಾನೆ.

    ಬಾಲಕನನ್ನು ಮಣಪ್ಪರೈ ಸಮೀಪದ ಪಾಲಕೊಟ್ಟೈ ಗ್ರಾಮದವ ನಾಲ್ಕು ವರ್ಷದ ಎಡ್ರಿಕ್ ಎಝಿಲ್ ಎಂದು ಗುರುತಿಸಲಾಗಿದ್ದು, ಬಾಲಕನ ಸಹೋದರಿ 6 ವರ್ಷದ ಕವಿ ಎನ್ನಲಾಗಿದೆ. ಮಗುವಿನ ಪೋಷಕರಾದ ಜಾನ್ ಪೀಟರ್ ಹಾಗೂ ಜಾನ್ಸಿ ಮೇರಿ ಕೆಲಸ ನಿಮಿತ್ತ ಹೊರಗೆ ಹೋದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.

    ಘಟನೆ ಹೇಗಾಯ್ತು?
    ಅಕ್ಕ-ತಮ್ಮ ಇಬ್ಬರೂ ಟೆರೆಸ್ ಮೇಲೆ ಆಟವಾಡಲು ತೆರಳಿದ್ದಾರೆ. ಈ ವೇಳೆ ಎಝಿಲ್ ಇದ್ದಕ್ಕಿದ್ದಂತೆ ರೇಲಿಂಗ್ ಬಳಿ ಜಾರಿದ್ದಾನೆ. ನಂತರ ಗೋಡೆಯನ್ನು ಹಿಡಿದು ನೇತಾಡುತ್ತಿದ್ದ. ಕವಿ ತನ್ನ ಸಹೋದರ ಗೋಡೆಯ ಅಂಚಿನಲ್ಲಿ ನೇತಾಡುತ್ತಿದ್ದುದನ್ನು ಕಂಡು ತಕ್ಷಣವೇ ಅವನ ಕೈಗಳನ್ನು ಹಿಡಿದು ಸುರಕ್ಷಿತವಾಗಿ ಮೇಲಕ್ಕೆ ಎಳೆಯಲು ಯತ್ನಿಸಿದ್ದಾಳೆ. ಅಲ್ಲದೆ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿಯುವಲ್ಲಿ ಸಹ ಯಶಸ್ವಿಯಾಗಿದ್ದಾಳೆ. ನಂತರ ನೆರೆ ಹೊರೆಯವರು ಬರುವಂತೆ ಜೋರಾಗಿ ಕಿರುಚಿದ್ದಾಳೆ.

    https://www.youtube.com/watch?v=qNL1w4eKDHc&feature=emb_logo

    ಅದೃಷ್ಟವೆಂಬಂತೆ ಬೀದಿ ಬದಿ ವ್ಯಾಪಾರಿ ಮೊಹಮ್ಮದ್ ಸಾಲಿಕ್ ಬಾಲಕಿ ಚೀರುವ ಧ್ವನಿಯನ್ನು ಕೇಳಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಮಗುವನ್ನು ರಕ್ಷಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬಾಲಕನನ್ನು ಕಾಪಾಡುವ ಸಹೋದರಿ ಹಾಗೂ ಬೀದಿ ಬದಿ ವ್ಯಾಪಾರಿಯ ಪ್ರಯತ್ನಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಬಾವಿಗೆ ಬಿದ್ದ ಚಿರತೆ, ಮಂಚದ ಮೂಲಕ ರಕ್ಷಣೆ- ವಿಡಿಯೋ ವೈರಲ್

    ಬಾವಿಗೆ ಬಿದ್ದ ಚಿರತೆ, ಮಂಚದ ಮೂಲಕ ರಕ್ಷಣೆ- ವಿಡಿಯೋ ವೈರಲ್

    ಭೋಪಾಲ್: ಚಿರತೆಯೊಂದು ಬಾವಿಗೆ ಬಿದ್ದು ಪರದಾಡಿದ್ದು, ಹರಸಾಹಸಪಟ್ಟು ರಕ್ಷಣೆ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಧ್ಯಪ್ರದೇಶದಲ್ಲಿ ಘಟನೆ ನಡೆದಿದ್ದು, ಚಿರತೆಯ ರಕ್ಷಣೆಯ ವಿಡಿಯೋವನ್ನು ಅರಣ್ಯಾಧಿಕಾರಿ(ಐಎಫ್‍ಎಸ್) ಪ್ರವೀಣ್ ಕಾಸ್ವನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಶಿವಪುರಿಯಲ್ಲಿ ಈ ಚಿರತೆ ಆಕಸ್ಮಿಕವಾಗಿ ಆಳದ ಬಾವಿಗೆ ಬಿದ್ದಿತ್ತು. ಸಮಯಕ್ಕೆ ಸರಿಯಾಗಿ ಇದನ್ನು ರಕ್ಷಿಸಲಾಗಿದ್ದು, ಈ ಕಾರ್ಯಾಚರಣೆ ಅದ್ಭುತವಾಗಿದೆ ಎಂದು ಕಾರ್ಯಾಚರಣೆಯ ಚತುರತೆಯನ್ನು ಶ್ಲಾಘಿಸಿದ್ದಾರೆ.

    ಈ ವಿಡಿಯೋ ಒಂದು ನಿಮಿಷದ್ದಾಗಿದ್ದು, ನೀರು ಇರುವ ಬಾವಿಗೆ ಬಿದ್ದಿದ್ದ ಚಿರತೆಯನ್ನು ಮಂಚದ ಮೂಲಕ ಮೇಲೆತ್ತಲಾಗಿದೆ. ಮಂಚವನ್ನು ಉಲ್ಟಾ ಮಾಡಿ ಅದಕ್ಕೆ ಹಗ್ಗ ಕಟ್ಟಿ ಎಳೆ ಬಿಟ್ಟು, ಚಿರತೆ ಅದರ ಮೇಲೆ ಕುಳಿತ ನಂತರ ಮೇಲೆತ್ತುವ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಂಚದ ಮೇಲೆ ಚಿರತೆ ಕುಳಿತಿರುವ ವಿಡಿಯೋ ವೈರಲ್ ಆಗಿದೆ.

    ಚಿರತೆ ಬಾವಿಯಿಂದ ಹೊರಬರುತ್ತಿದ್ದಂತೆ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವರು ಭಯಭೀತರಾಗಿ ಓಡಲು ಪ್ರಾರಂಬಿಸುತ್ತಾರೆ. ನಂತರ ಚಿರತೆ ಸಹ ಓಡಿ ಹೋಗಿದೆ.

    ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ರಕ್ಷಿಸುತ್ತಿರುವವರೊಂದಿಗೆ ಚಿರತೆ ಸಹಕರಿಸಿದೆ. ಹಲವು ಬಾರಿ ಚಿರತೆಗಳು ರಕ್ಷಣಾ ಕಾರ್ಯಾಚರಣೆ ನಡೆಸದವರ ಮೇಲೆಯೇ ದಾಳಿ ನಡೆಸುತ್ತವೆ. ಆದರೆ ಈ ಚಿರತೆ ಅವರೊಂದಿಗೆ ಸಹಕರಿಸಿದೆ. ಈ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ರವೀಂದ್ರ ಮಣಿ ತ್ರಿಪಾಠಿಯವರು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಮಾ.16ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಕೇವಲ 3 ಗಂಟೆಗಳಲ್ಲಿ 20 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. 2 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಈ ಮೂಲಕ ರಕ್ಷಣಾ ಕಾರ್ಯಾಚರಣೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹಲವರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ, ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಗ್ರಾಮದ ಬಳಿ 12 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ- ರಕ್ಷಣೆ ವಿಡಿಯೋ ವೈರಲ್

    ಗ್ರಾಮದ ಬಳಿ 12 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ- ರಕ್ಷಣೆ ವಿಡಿಯೋ ವೈರಲ್

    ಗಾಂಧಿನಗರ: ಜನವಸತಿ ಪ್ರದೇಶಕ್ಕೆ ಧಾವಿಸಿದ್ದ 12 ಅಡಿ ಉದ್ದದ ಮೊಸಳೆಯನ್ನು ರಕ್ಷಿಸಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಗುಜರಾತ್‍ನ ವಡೋದರಾ ಬಳಿಯ ರಾವಲ್ ಗ್ರಾಮದ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ವನ್ಯಜೀವಿ ಸಂರಕ್ಷಕರು ರಕ್ಷಿಸಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ಸುಮಾರು 5-6 ಗಂಟೆಗಳ ಕಾಲ ನಡೆದಿದ್ದು, ಕಡೆಗೂ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬೃಹತ್ ಮೊಸಳೆಯು ರಾವಲ್ ಗ್ರಾಮದ ಬಳಿ ಇರುವ ನರ್ಮದಾ ನದಿ ಕ್ಯಾನಲ್‍ನ ಸೋಲಾರ್ ಪ್ಲಾಂಟ್‍ನಿಂದ ಬಂದಿದ್ದು, ಗ್ರಾಮಸ್ಥರು ಈ ನೀರನ್ನು ಕೃಷಿಗಾಗಿ ಬಳಸುತ್ತಾರೆ.

    ನರ್ಮದಾ ಕ್ಯಾನಲ್ ಸೋಲಾರ್ ಪ್ಲಾಂಟ್‍ನ ಎಂಜಿನಿಯರ್ ಬೆಳಗ್ಗೆ 10.30ಕ್ಕೆ ಕರೆ ಮಾಡಿ ರಾವಲ್ ಗ್ರಾಮದ ಬಳಿ 12 ಅಡಿ ಮೊಸಳೆ ಪ್ರತ್ಯಕ್ಷವಾಗಿರುವುದನ್ನು ತಿಳಿಸಿದರು. ತಕ್ಷಣವೇ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಪ್ರಾರಂಭಿಸಿದೆವು. ಮೊಸಳೆಯನ್ನು ರಕ್ಷಿಸಲು ಐದರಿಂದ ಆರು ತಾಸು ಸಮಯ ಹಿಡಿಯಿತು ಎಂದು ವನ್ಯ ಜೀವಿ ಸಂರಕ್ಷಕ ಹೇಮಂತ್ ವಧ್ವಾನ ತಿಳಿಸಿದ್ದಾರೆ.

    ಬೃಹತ್ ಮೊಸಳೆ ಕಾಣುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿದ್ದು, ಕೂಗಾಡಲು ಪ್ರಾರಂಭಿಸಿದ್ದಾರೆ. ನಂತರ ವನ್ಯ ಜೀವಿ ಸಂರಕ್ಷಣಾ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿ ಆಗಮಿಸಿ ಮೊಸಳೆಯನ್ನು ಹಿಡಿದಿದ್ದಾರೆ. ಐದಾರು ಗಂಟೆಗಳ ಕಾಲ ಹರ ಸಾಹಸ ಪಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಕ್ಷಿಸಿದ ಮೊಸಳೆಯನ್ನು ಹಲವು ಮೊಸಳೆಗಳಿರುವ ಕೆರೆಗೆ ಬಿಡಲಾಗಿದೆ. ಈ ರೀತಿ ನಡೆಯುತ್ತಿರುವ ಮೂರನೇ ಘಟನೆ ಇದಾಗಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಇಂತಹದ್ದೇ ಘಟನೆ ನಡೆದಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

  • ದಿಢೀರ್ ಭೂಸ್ಪರ್ಶ – ಬಸ್ ತಳ್ಳಿದಂತೆ ಹೆಲಿಕಾಪ್ಟರ್ ತಳ್ಳಿದ ಸ್ಥಳೀಯರು

    ದಿಢೀರ್ ಭೂಸ್ಪರ್ಶ – ಬಸ್ ತಳ್ಳಿದಂತೆ ಹೆಲಿಕಾಪ್ಟರ್ ತಳ್ಳಿದ ಸ್ಥಳೀಯರು

    ಬಳ್ಳಾರಿ: ಇಂಧನ ಖಾಲಿಯಾಗಿ ತುರ್ತು ಲ್ಯಾಂಡಿಂಗ್ ಆದ ಹೆಲಿಕಾಪ್ಟರ್ ಅನ್ನು ಸ್ಥಳೀಯರು ಬಸ್ ತಳ್ಳಿದಂತೆ ತಳ್ಳಿರುವ ಘಟನೆ ಸಂಡೂರು ತಾಲೂಕಿನ ಎಸ್.ಆರ್. ಪುರದಲ್ಲಿ ನಡೆದಿದೆ.

    ನೆರೆ ಸಂತ್ರಸ್ತರ ರಕ್ಷಣೆಗೆ ನೆರವಾಗಲೆಂದು ಬೆಂಗಳೂರಿನಿಂದ ಬೆಳಗಾವಿ ಕಡೆ ವಾಯುಸೇನೆಯ ಹೆಲಿಕಾಪ್ಟರ್ ಹೊರಟಿತ್ತು. ಮಾರ್ಗ ಮಧ್ಯೆ ಇಂಧನ ಕಡಿಮೆ ಇದೆ ಎನ್ನುವುದು ಪೈಲಟ್‍ಗೆ ಗೊತ್ತಾಗಿದೆ. ಕೂಡಲೇ ಪೈಲಟ್ ಸುರಕ್ಷಿತವಾಗಿ ಖಾಲಿ ಭೂಮಿಯಲ್ಲಿ ತುರ್ತು ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ್ದಾರೆ.

    ಹೆಲಿಕಾಪ್ಟರ್ ಲ್ಯಾಂಡ್ ಆದ ವಿಚಾರ ತಿಳಿದು ಗ್ರಾಮಸ್ಥರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವಿಚಾರ ಗೊತ್ತಾಗಿ ಕುಡುತಿನಿ ಪಿಎಸ್‍ಐ ಮೊಹಮ್ಮದ್ ರಫಿ ನೇತೃತ್ವದಲ್ಲಿ ಪೊಲೀಸರು ಜಿಂದಾಲ್ ಫ್ಯಾಕ್ಟರಿಗೆ ತೆರಳಿ ವೈಮಾನಿಕ ಇಂಧನವನ್ನು ತಂದು ಹೆಲಿಕಾಪ್ಟರಿಗೆ ತುಂಬಿಸಿದ್ದಾರೆ.

    ಇಂಧನ ತುಂಬಿಸಿದ್ದರೂ ಹೆಲಿಕಾಪ್ಟರ್ ಮಣ್ಣಿನಲ್ಲಿ ಸ್ವಲ್ಪ ಹೂತು ಹೋಗಿತ್ತು. ಹೀಗಾಗಿ ಗ್ರಾಮಸ್ಥರು ಹೆಲಿಕಾಪ್ಟರ್ ಅನ್ನು ಬಸ್ಸು ತಳ್ಳಿದಂತೆ ದೂಡಿದ್ದಾರೆ. ಬಳಿಕ ಹೆಲಿಕಾಪ್ಟರ್ ಬೆಳಗಾವಿ ಕಡೆ ಪ್ರಯಾಣ ಬೆಳೆಸಿತು. ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಹೋಗುವ ಭರದಲ್ಲಿ ಸಿಬ್ಬಂದಿ ಇಂಧನ ಎಷ್ಟಿದೆ ಎನ್ನುವುದನ್ನು ಪರಿಶೀಲನೆ ಮಾಡದ ಪರಿಣಾಮ ಭೂ ಸ್ಪರ್ಶ ಮಾಡಿತ್ತು.

     

  • ಕಟ್ಟಡ ಕುಸಿದು 6 ಮಂದಿ ಸೇನಾ ಸಿಬ್ಬಂದಿ ಸಾವು

    ಕಟ್ಟಡ ಕುಸಿದು 6 ಮಂದಿ ಸೇನಾ ಸಿಬ್ಬಂದಿ ಸಾವು

    ಶಿಮ್ಲಾ: ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್‍ನಲ್ಲಿ ನಡೆದಿದೆ.

    ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್‍ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿ ಈ ಕಟ್ಟಡ ಇದ್ದು, ಭಾರೀ ಮಳೆಯಿಂದಾಗಿ ಕುಸಿದಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.

    ಇಲ್ಲಿಯವರೆಗೆ ಸುಮಾರು 17 ಸೇನಾ ಸಿಬ್ಬಂದಿ ಮತ್ತು 11 ನಾಗರಿಕರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಅವಶೇಷದಡಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಇಂದು ಮಧ್ಯಾಹ್ನದೊಳಗೆ ಪೂರ್ಣಗೊಳಿಸಲಾಗುವುದು. ಈ ಘಟನೆಯಲ್ಲಿ ಆರು ಸೇನಾ ಸಿಬ್ಬಂದಿ ಮತ್ತು ಸಾರ್ವಜನಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಸೋಲನ್‍ನ ಉಪ ಆಯುಕ್ತ ಕೆ.ಸಿ.ಚಮನ್ ತಿಳಿಸಿದ್ದಾರೆ.

    ಘಟನೆ ನಡೆದಾಗ ಒಟ್ಟು 30 ಸಿಬ್ಬಂದಿ ಮತ್ತು ಇತರೆ ಕೆಲವರು ಕಟ್ಟಡದಲ್ಲಿದ್ದರು ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‍ಎಫ್) ಸಿಬ್ಬಂದಿ ನಡೆಸುತ್ತಿದ್ದಾರೆ.

    ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಹಾಗೂ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

  • ಮುಂಬೈನಲ್ಲಿ ರೆಡ್ ಅಲರ್ಟ್, ಇಂದು ಭಾರೀ ಮಳೆ ಸಾಧ್ಯತೆ – ಗೋಡೆ ಕುಸಿದು 18 ಮಂದಿ ಸಾವು

    ಮುಂಬೈನಲ್ಲಿ ರೆಡ್ ಅಲರ್ಟ್, ಇಂದು ಭಾರೀ ಮಳೆ ಸಾಧ್ಯತೆ – ಗೋಡೆ ಕುಸಿದು 18 ಮಂದಿ ಸಾವು

    ಮುಂಬೈ: ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರ ಮುಂದುವರಿದಿದೆ. ಮಲಾಡ್‍ನ ಕರೂರ್ ಗ್ರಾಮದಲ್ಲಿ ಇಂದು ಬೆಳಗ್ಗೆ ಗೋಡೆ ಕುಸಿದು 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಬೆಳ್ಳಂಬೆಳಗ್ಗೆ ಈ ದುರಂತ ನಡೆದಿದ್ದು, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿರುವ ಗುಡಿಸಲುಗಳ ಮೇಲೆಯೇ 20 ಅಡಿ ಉದ್ದ ಹಾಗೂ ಬಹು ಎತ್ತರದ ಗೋಡೆ ಕುಸಿದಿದ್ದು, 18 ಮಂದಿ ಮೃತಪಟ್ಟಿದ್ದು, ಹಲವರು ತೀವ್ರ ಗಾಯಗೊಂಡಿರುವ ಪರಿಣಾಮ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

    ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಫ್ ಪಡೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳನ್ನು ಶತಾಬ್ದಿ ಆಸ್ಪತ್ರೆ, ಜೋಗೇಶ್ವರಿ ಆಸ್ಪತ್ರೆ, ಎಂ.ಡಬ್ಲೂ ದೇಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಶತಾಬ್ದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

    ಮುಂಬೈ ನಗರದಲ್ಲಿ ದಶಕದಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಇಂದು ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರದ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರೈಲ್ವೇ ಹಳಿಗಳ ಮೇಲೂ ನೀರು ನಿಂತಿರುವ ಕಾರಣಕ್ಕೆ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

    ಮಳೆರಾಯನ ಅಬ್ಬರಕ್ಕೆ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂದಿದೆ. ಇಡೀ ಮುಂಬೈ ನಗರವೇ ಮಳೆಗೆ ಜಲಾವೃತವಾಗಿದ್ದು, ಹಲವೆಡೆ ಮನೆಗಳ ಒಳಗೆ ಕೂಡ ನೀರು ನುಗ್ಗಿದೆ. ಅಲ್ಲದೆ ಮಿತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ನೀರು ಆಸುಪಾಸಿನ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಅಲ್ಲಿನ ಕಟ್ಟಡಗಳ ಕೆಳ ಮಹಡಿ ಸಂಪೂರ್ಣ ಜಲಾವೃತಗೊಳ್ಳುವ ಮಟ್ಟಿಗೆ ನೀರು ತುಂಬಿದೆ.