Tag: ರಕ್ಷಣಾ ಕಾರ್ಯ

  • ಮುಂಬೈನಲ್ಲಿ ವಸತಿ ಕಟ್ಟಡ ಕುಸಿತ – 11 ಸಾವು, 8 ಮಂದಿಗೆ ಗಾಯ

    ಮುಂಬೈನಲ್ಲಿ ವಸತಿ ಕಟ್ಟಡ ಕುಸಿತ – 11 ಸಾವು, 8 ಮಂದಿಗೆ ಗಾಯ

    ಮುಂಬೈ: ಎರಡು ಅಂತಸ್ತಿನ ವಸತಿ ಕಟ್ಟಡ ಇನ್ನೊಂದು ಕಟ್ಟಡದ ಮೇಲೆ ಕುಸಿತಗೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿ, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮುಂಬೈಯ ಮಲಾಡ್ ವೆಸ್ಟ್ ಪ್ರದೇಶದ ನ್ಯೂ ಕಲೆಕ್ಟರ್ ಕಾಂಪೌಂಡ್ ನಲ್ಲಿ ನಡೆದಿದೆ.

    ಘಟನೆಯಲ್ಲಿ ಈಗಾಗಲೇ 11 ಮಂದಿ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡವರನ್ನು ರಕ್ಷಣೆ ಮಾಡಲಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ವಸತಿ ಕಟ್ಟಡದ ಸ್ಲ್ಯಾಬ್ ಕುಸಿದು ಆರು ಮಂದಿ ದಾರುಣ ಸಾವು

    ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಹಲವರು ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

    ಸ್ಥಳಕ್ಕೆ ಪೊಲೀಸರು, ಮತ್ತು ರಕ್ಷಣಾ ತಂಡಗಳ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

  • ಕೇರಳದ ವಿಮಾನ ಅಪಘಾತ – ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ

    ಕೇರಳದ ವಿಮಾನ ಅಪಘಾತ – ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ

    ತಿರುವನಂತಪುರಂ: ಕೇರಳ ವಿಮಾನ ದುರಂತದ ವೇಳೆ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ 22 ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಲಪ್ಪುರಂ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

    ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಕೊರೊನಾ ನಡುವೆಯೂ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರುತ್ತಿತ್ತು. ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ 184 ಪ್ರಯಾಣಿಕರನ್ನು ಕೇರಳಗೆ ಬಂದಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯಿಂದ ವಿಮಾನ 35 ಅಡಿ ಕಂದಕಕ್ಕೆ ಜಾರಿ ಬಿದ್ದಿತ್ತು. ಪರಿಣಾಮ ಇಬ್ಬರು ಪೈಲಟ್‍ಗಳು ಸೇರಿ 18 ಜನರು ಸಾವನ್ನಪ್ಪಿದ್ದರು.

    ಕಂದಕಕ್ಕೆ ಬಿದ್ದಿದ್ದ ವಿಮಾನದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ಮತ್ತು ಸ್ಥಳದಲ್ಲಿದ್ದ ಹಲವು ಅಧಿಕಾರಿಗಳು ಬಂದು ರಕ್ಷಣೆ ಮಾಡಿದ್ದರು. ಇದಾದ ನಂತರ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದ ಎಲ್ಲ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ಇವರ ಪೈಕಿ 22 ಮಂದಿ ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಎಲ್ಲ ಅಧಿಕಾರಿಗಳು 4 ಗಂಟೆಗಳ ಕಾಲ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

    ಅಗಸ್ಟ್ 7ರಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿತ್ತು. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 184 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು.

    ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಪೈಲಟ್ ದೀಪಕ್ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್ ಟಾಪ್ ರನ್‍ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸೇರಿ 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಜೊತೆಗೆ 150ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.

  • ಕುರಿಗಳನ್ನು ಬಿಟ್ಟು ಬರೋದಿಲ್ಲ- ಕುರಿಗಾಯಿಯನ್ನು ನಡುಗಡ್ಡೆಯಿಂದ ರಕ್ಷಿಸಲು ಸಿಬ್ಬಂದಿ ಹರಸಾಹಸ

    ಕುರಿಗಳನ್ನು ಬಿಟ್ಟು ಬರೋದಿಲ್ಲ- ಕುರಿಗಾಯಿಯನ್ನು ನಡುಗಡ್ಡೆಯಿಂದ ರಕ್ಷಿಸಲು ಸಿಬ್ಬಂದಿ ಹರಸಾಹಸ

    – ಐದು ದಿನಗಳಿಂದ ನಡುಗಡ್ಡೆಯಲ್ಲೇ ಸಿಲುಕಿದ್ದ ಕುರಿಗಾಯಿ
    – ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್‍ನಿಂದ ಕಾರ್ಯಾಚರಣೆ
    – 2 ಲಕ್ಷ ಕ್ಯೂಸೆಕ್ ನೀರಿನಲ್ಲಿ ಸಾಹಸಮಯ ಕಾರ್ಯಾಚರಣೆ

    ಯಾದಗಿರಿ: ಕಳೆದ ಐದು ದಿನಗಳಿಂದ ನಡುಗಡ್ಡೆಯಲ್ಲೇ ಸಿಲುಕಿರುವ ಕುರಿಗಾಯಿ ಮನ ಒಲಿಸಲು ಎನ್‍ಡಿಆರ್‍ಎಫ್ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಜಪ್ಪಯ್ಯ ಅಂದರೂ ಕುರಿಗಾಯಿ ಮಾತ್ರ ತನ್ನ ಕುರಿಗಳನ್ನು ಬಿಟ್ಟು ಬರುವುದಿಲ್ಲ ಎಂದು ಹಠ ಹಿಡಿದಿದ್ದರು. ಸುಮಾರು 2 ಲಕ್ಷ ಕ್ಯೂಸೆಕ್ ನೀರು ದಾಟಿ ಎನ್‍ಡಿಆರ್‍ಎಫ್ ತಂಡ ಕುರಿಗಾಯಿ ಇರುವ ನಡುಗಡ್ಡೆ ಸ್ಥಳವನ್ನು ತಲುಪಿದ್ದು, ಕುರಿಗಾಯಿಯನ್ನು ಮನವೊಲಿಸಿ ರಕ್ಷಣಾ ಕಾರ್ಯ ಮಾಡಿದ್ದಾರೆ.

    ಜಿಲ್ಲೆಯ ನಾರಾಯಣಪುರದ ಐಬಿ ತಾಂಡ ಬಳಿಯ ಕೃಷ್ಣಾ ನದಿಯಲ್ಲಿ ಕುರಿಗಾಯಿ ಸಿಲುಕಿದ್ದರು. ರಕ್ಷಣಾ ತಂಡ ಕುರಿಗಾಯಿ ಟೋಪಣ್ಣ ಮನವೊಲಿಸಿ ನದಿಯ ಒಂದು ದಡಕ್ಕೆ ಕರೆ ತಂದಿದ್ದು, ನಡುಗಡ್ಡೆಯಲ್ಲಿದ್ದ ಶ್ವಾನದೊಂದಿಗೆ ಟೋಪಣ್ಣನನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಕುರಿಗಳನ್ನು ನಡುಗಡ್ಡೆಯಲ್ಲೇ ಬಿಟ್ಟು ಟೋಪಣ್ಣನನ್ನು ರಕ್ಷಣೆ ಮಾಡಲಾಗಿದೆ. ಯಾವುದೇ ಅಪಾಯವಿಲ್ಲದೆ ಕುರಿಗಾಯಿ ರಕ್ಷಣೆ ಮಾಡಲಾಗಿದ್ದು, 2 ಲಕ್ಷ ಕ್ಯೂಸೆಕ್ ನೀರಿನಲ್ಲಿ ರೋಚಕ ಕಾರ್ಯಾಚರಣೆ ಮೂಲಕ ಕುರಿಗಾಯಿ ಮತ್ತು ನಾಯಿಯನ್ನು ರಕ್ಷಣೆ ಮಾಡಲಾಗಿದೆ.

    ಸುರಕ್ಷಿತವಾಗಿ ದಡ ಸೇರಿಸಿದ ಎನ್‍ಡಿಆರ್‍ಎಪ್ ತಂಡಕ್ಕೆ ಸ್ಥಳೀಯರು ಜಯ ಘೋಷ ಕೂಗಿದ್ದಾರೆ. ಶಾಸಕ ರಾಜೂಗೌಡ ಸಹ ರಕ್ಷಣಾ ತಂಡಕ್ಕೆ ಸನ್ಮಾನ ಮಾಡಿದ್ದಾರೆ. ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಎರಡೂ ತಂಡಗಳಿಗೆ ಅಗ್ನಿ ಶಾಮಕದಳದ ಸಿಬ್ಬಂದಿ ಸಹಾಯ ಮಾಡಿದ್ದಾರೆ.

    ಕುರಿಗಾಯಿ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಕಳೆದ ಐದು ದಿನಗಳಿಂದ ಸಿಲುಕಿದ್ದರು. 250 ಕುರಿ, ನಾಲ್ಕು ನಾಯಿ ಜೊತೆ ಸಿಲುಕಿದ್ದರು. ಶನಿವಾರ ಸಂಜೆ ಡ್ರೋಣ್ ಮೂಲಕ ಕುರಿಗಾಯಿ ಸಿಲುಕಿರುವ ಸ್ಥಳ ಪತ್ತೆಯಾಗಿತ್ತು. ಇದೀಗ ಕಾರ್ಯಾಚರಣೆ ನಡೆಸಿ ಕುರಿಗಾಯಿ ಮತ್ತು ಕುರಿಗಳ ರಕ್ಷಣೆ ಮಾಡಲಾಗಿದೆ.

  • ಕೊರೊನಾ ಲೆಕ್ಕಿಸಲಿಲ್ಲ, ಸಾಧ್ಯವಾದಷ್ಟು ಜೀವ ಉಳಿಸುವುದೊಂದೇ ನಮ್ಮ ತಲೆಯಲ್ಲಿತ್ತು- ಪ್ರತ್ಯಕ್ಷದರ್ಶಿ

    ಕೊರೊನಾ ಲೆಕ್ಕಿಸಲಿಲ್ಲ, ಸಾಧ್ಯವಾದಷ್ಟು ಜೀವ ಉಳಿಸುವುದೊಂದೇ ನಮ್ಮ ತಲೆಯಲ್ಲಿತ್ತು- ಪ್ರತ್ಯಕ್ಷದರ್ಶಿ

    – ಒಬ್ಬ ಪ್ರಯಾಣಿಕನನ್ನು ನನ್ನ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದೆ
    – ಪತ್ನಿ, ಮಗುವಿಗಾಗಿ ಆತ ಅಳುತ್ತಿದ್ದ ದೃಶ್ಯ ಇನ್ನೂ ಕಣ್ಣಮುಂದಿದೆ

    ತಿರುವನಂತಪುರಂ: ಕೇರಳದ ಕೋಯಿಕ್ಕೊಡ್ ವಿಮಾನ ನಿಲ್ದಾಣದ ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು, ಘಟನೆ ನಡೆದ ನಂತರ ರಕ್ಷಣಾ ಕಾರ್ಯ ಸಹ ಅದೇ ರೀತಿ ಭರದಿಂದ ಸಾಗಿದೆ. ಹೀಗಾಗಿಯೇ ಹಲವರ ಜೀವ ಉಳಿದಿದೆ. ಆದರೆ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರ ಪಾತ್ರ ಮಹತ್ವದ್ದಾಗಿದೆ. ವಿಮಾನ ವಿದೇಶದಿಂದ ಬಂದರೂ ಕೊರೊನಾ ಸೋಂಕು ತಗುಲುವ ಭಯವಿಲ್ಲದೆ ಹಲವರ ಜೀವವನ್ನು ರಕ್ಷಿಸಿದ್ದಾರೆ.

    ಟೇಬಲ್ ಟಾಪ್ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ವರ್ಷಗಟ್ಟಲೇ ಅನುಭವವಿರುತ್ತದೆ. ಆದರೆ ಸಾಮಾನ್ಯ ಜನರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಆದರೂ ಸಹ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪೈಕಿ ಸ್ಥಳೀಯರಾದ ಫಝಲ್ ಪುಥಿಯಾಕಥ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಘಟನೆ ನಡೆಯುತ್ತಿದ್ದಂತೆಯೇ 32 ವರ್ಷದ ಬ್ಯುಸಿನೆಸ್ ಮ್ಯಾನ್ ಹಾಗೂ ಸ್ಥಳೀಯರು ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಅವಘಡ ಸಂಭವಿಸಿದ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಒಟ್ಟು 190 ಪ್ರಯಾಣಿಕರ ಪೈಕಿ ದುರ್ಘಟನೆಯಲ್ಲಿ 18 ಜನ ಸಾವನ್ನಪ್ಪಿದ್ದು, 120ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

    ವಿಮಾನ ಅವಘಡ ಸಂಭವಿಸುತ್ತಿದ್ದಂತೆ ಬ್ಲಾಸ್ಟ್ ಆದ ರೀತಿ ದೊಡ್ಡ ಶಬ್ದ ಕೇಳಿಸಿದ್ದು, ತಕ್ಷಣವೇ ನಾನು ಹಾಗೂ ಇತರರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆವು. ಸ್ಥಳಕ್ಕೆ ಆಗಮಿಸಿದಾಗ ವಿಮಾನದಲ್ಲಿದ್ದವರೆಲ್ಲ ಕಿರುಚಾಡುತ್ತಿದ್ದರು. ಸಾಕಷ್ಟು ಜನ ರಕ್ತದ ಮಡುವಿನಲ್ಲಿದ್ದರು. ಹಲವರಿಗೆ ಗಂಭೀರ ಗಾಯಗಳಾಗಿದ್ದರೆ, ಇನ್ನೂ ಕೆಲವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅಪಘಾತದ ಪರಿಣಾಮ ಎಷ್ಟಿತ್ತೆಂದರೆ ಬೋಯಿಂಗ್ 737 ಮುಂದಿನ ಭಾಗ ಸುಮಾರು 20 ಮೀಟರ್ ನಷ್ಟು ಹಿಂದೆ ಬಿದ್ದಿತ್ತು. ಅಷ್ಟರ ಮಟ್ಟಿಗೆ ವಿಮಾನ ಅಪ್ಪಳಿಸಿತ್ತು ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಪುಥಿಯಾಕಥ್ ಭೀಕರತೆಯನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    ನಾವು ತೆರೆಳಿದಾಗ ಆಗಲೇ ಇಬ್ಬರು ಪೈಲೆಟ್‍ಗಳು ಸಾವನ್ನಪ್ಪಿದ್ದರು. ವಿಮಾನಕ್ಕೆ ಬೆಂಕಿ ತಗುಲಿದ್ದರೆ ಇನ್ನೂ ಹೆಚ್ಚಿನ ಸಾವು ನೋವು ಸಂಭವಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

    ವಿಮಾನ ದುರಂತ ಸಂಭವಿಸಿದಾಗ ರಕ್ಷಣಾ ಕಾರ್ಯವನ್ನು ಹೇಗೆ ನಡೆಸಬೇಕು ಎಂಬುದನ್ನು ನಾನು ಈ ಹಿಂದೆ ದೂರದಿಂದ ನೋಡಿದ್ದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಡಮ್ಮಿ ವಿಮಾನದಿಂದ ಇದನ್ನು ಮಾಡುತ್ತಾರೆ. ಆದರೆ ಈ ಪ್ರಯೋಗವೇ ಬೇರೆ ವಾಸ್ತವವೇ ಬೇರೆ ಎಂದು ಈ ಘಟನೆ ನೋಡಿದ ಬಳಿಕ ತಿಳಿಯಿತು. ನಾವು ಹೇಗೆ ಸಿದ್ಧರಿದ್ದೇವೆ ಎಂಬುದು ಮುಖ್ಯವಲ್ಲ, ಸ್ಥಳದಲ್ಲಿ ಸಾವು, ನೋವು ಸಂಭವಿಸಿದಾಗ ಪರಿಸ್ಥಿತಿ ಬೇರೆ ರೀತಿಯೇ ಆಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಉಳಿಸಬೇಕಾಗುತ್ತದೆ ಎಂದು ಪುಥಿಯಾಕಥ್ ತಿಳಿಸಿದ್ದಾರೆ.

    ಪ್ರಯಾಣಿಕರಲ್ಲಿ ಯಾರಿಗೆ ಕೊರೊನಾ ಸೋಂಕು ತಗುಲಿರುತ್ತದೆಯೋ ಎಂಬುದರ ಕುರಿತು ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಸಾಧ್ಯವಾದಷ್ಟು ಜನರನ್ನು ಉಳಿಸಬೇಕೆಂಬುದಷ್ಟೇ ನಮ್ಮ ತಲೆಯಲ್ಲಿತ್ತು ಎಂದು ಪುಥಿಯಾಕಥ್ ತಿಳಿಸಿದ್ದಾರೆ.

    ಇಂತಹ ಪರಿಸ್ಥಿತಿಯಲ್ಲಿಯೂ ಒಬ್ಬ ಪ್ರಯಾಣಿನನ್ನು ನನ್ನ ಕಾರಿನಲ್ಲಿಯೇ ಆಸ್ಪತ್ರೆ ಸೇರಿಸಿದೆ. ಈ ವೇಳೆ ವ್ಯಕ್ತಿ ತನ್ನ ಪತ್ನಿ ಹಾಗೂ ಮಗುವಿಗಾಗಿ ಅಳುತ್ತಿದ್ದ. ಇದನ್ನು ನಾನು ಎಂದೂ ಮರೆಯುವುದಿಲ್ಲ. ನಾನು ಕಾರನ್ನು ಪರಿಶೀಲಿಸಿಲ್ಲ, ಖಂಡಿತವಾಗಿಯೂ ಹಿಂದಿನ ಸೀಟ್ ರಕ್ತವಾಗಿರುತ್ತದೆ. ನಾನೊಬ್ಬ ಮಾತ್ರವಲ್ಲ ನನ್ನಂತೆ ಹಲವರು ಚಿಕ್ಕ ಮಕ್ಕಳನ್ನು ತಮ್ಮ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಿಜಕ್ಕೂ ಈ ದೃಶ್ಯ ಆಘಾತಕಾರಿಯಾಗಿತ್ತು ಎಂದು ವಿವರಿಸಿದ್ದಾರೆ.

    ಕೊರೊನಾ ವೈರಸ್ ಹಿನ್ನೆಲೆ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಒಂದೇ ಭಾರತ್ ಮಿಷನ್ ಅಡಿ ಸರ್ಕಾರ ಏರ್ ಇಂಡಿಯಾ ವಿಮಾನಗಳ ಹಾರಾಟ ನಡೆಸುತ್ತಿದೆ. ಇದರ ಭಾಗವಾಗಿ ದುಬೈನಿಂದ ವಿಮಾನ ಕೇರಳದ ಕೋಯಿಕ್ಕೊಡ್‍ಗೆ ಆಗಮಿಸಿದೆ. ವಿಮಾನದಲ್ಲಿ ಒಟ್ಟು 190 ಜನ ಪ್ರಯಾಣಿಕರಿದ್ದರು. ಕೋಯಿಕ್ಕೊಡ್ ಟೇಬಲ್-ಟಾಪ್ ವಿಮಾನ ನಿಲ್ದಾಣವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

  • ಮಂಗಳೂರು ಗುಡ್ಡ ಕುಸಿತ ಪ್ರಕರಣ- ಮಣ್ಣಿನಡಿ ಸಿಲುಕಿದ್ದ ಮಕ್ಕಳು ಸಾವು

    ಮಂಗಳೂರು ಗುಡ್ಡ ಕುಸಿತ ಪ್ರಕರಣ- ಮಣ್ಣಿನಡಿ ಸಿಲುಕಿದ್ದ ಮಕ್ಕಳು ಸಾವು

    -ಮನೆಯಲ್ಲಿ ಮಲಗಿದ್ದ ಅಣ್ಣ-ತಂಗಿ ಏಳಲೇ ಇಲ್ಲ

    ಮಂಗಳೂರು: ಗುರುಪುರದ ಬಳಿಯ ಗುಡ್ಡ ಕುಸಿತ ಸಂಭವಿಸಿದ ಬಳಿಕ ಸುಮಾರು ಐದು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳ ಶವವನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ.

    ಮಂಗಳೂರು ಹೊರವಲಯದ ಗುರುಪುರ ಬಳಿ ಗುಡ್ಡ ಕುಸಿತದಿಂದಾಗಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಸತತ ಐದು ಗಂಟೆಯಿಂದ ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಇದೀಗ 16 ವರ್ಷದ ಅಣ್ಣ ಸಫ್ವಾನ್ ಹಾಗೂ 10 ವರ್ಷದ ತಂಗಿ ಸಹಲಾ ಇಬ್ಬರ ಮೃತ ದೇಹ ಪತ್ತೆಯಾಗಿವೆ.

    ಈ ಮನೆಯಲ್ಲಿ ಸುಮಾರು 6 ಜನ ವಾಸವಿದ್ದರು. ಗುಡ್ಡ ಕುಸಿಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯವರು ಹೊರಗಡೆ ಓಡಿ ಬಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಹೀಗಾಗಿ ಮನೆಯಲ್ಲೇ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಕಳೆದ ಮೂರ್ನಾಲ್ಕು ಗಂಟೆಗಳಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿತ್ತು. ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿತ್ತು. ಹೀಗಾಗಿ ಇಷ್ಟೇ ಸಮಯಕ್ಕೆ ಮುಗಿಯುತ್ತೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ.ಬಿ.ರೋಪೆಶ್ ತಿಳಿಸಿದ್ದರು. ಆದರೆ ಇದೀಗ ಇಬ್ಬರ ಮಕ್ಕಳ ಶವವನ್ನು ಹೊರಗಡೆ ತೆಗೆಯಲಾಗಿದೆ.

    ಘಟನೆ ನಡೆಯುತ್ತಿದ್ದಂತೆ ಗುಡ್ಡದ ಸುತ್ತ ಮುತ್ತ ಇದ್ದ 15 ಮನೆಯಲ್ಲಿದ್ದ ಜನರನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ನಾಳೆ ತಜ್ಞರ ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

  • ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ- ಲಾರಿ ಕೆಳಗೆ ರಕ್ಷಣೆ ಪಡೆದ ಜನ

    ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ- ಲಾರಿ ಕೆಳಗೆ ರಕ್ಷಣೆ ಪಡೆದ ಜನ

    ಬೆಳಗಾವಿ: ಮಹಾಮಳೆಗೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದ ರಕ್ಷಣೆ ಪಡೆಯಲು ಜನರು ನಿಂತಿರುವ ಲಾರಿ ಕೆಳಗೆ ಕಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.

    ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಎನ್.ಡಿ.ಆರ್.ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ) ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ 10ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಪುಟ್ಟ ಕಂದಮ್ಮಗಳು ಇದ್ದು, ಮಕ್ಕಳ ಜೊತೆ ದಡ ಸೇರಿದ ತಾಯಂದಿರು ಕಣ್ಣೀರು ಹಾಕಿದ್ದಾರೆ.

    ಕೃಷ್ಣೆಯ ಆರ್ಭಟಕ್ಕೆ ಕೇವಲ ಮನುಷ್ಯ ಸಂಕುಲ ಮಾತ್ರ ನಲುಗಿ ಹೋಗಿಲ್ಲ. ಸಾಕಷ್ಟು ಮೂಕ ಪ್ರಾಣಿಗಳು ಕೂಡ ನೆರೆಯಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಪ್ರವಾಹದಲ್ಲಿ ಸಿಲುಕಿ ಕಂಗಾಲಾಗಿ ಪ್ರಾಣ ಕಳೆದುಕೊಳ್ಳುವ ಭಯದಲ್ಲಿದ್ದ ಮೊಲವೊಂದನ್ನು ಯುವಕರು ರಕ್ಷಿಸಿ ಅಭಯ ನೀಡಿದ್ದಾರೆ.

    ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರಿ ರಸ್ತೆಗಳು ಸಾವಿಗೆ ಆಹ್ವಾನ ನೀಡುತ್ತಿವೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಆಶ್ಲೇಷ ಮಳೆಯ ಹೊಡೆತಕ್ಕೆ, ರಸ್ತೆಗಳ ಅವಷೇಶಗಳು ಮಾತ್ರ ಉಳಿದುಕೊಂಡಿವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂಚರಿಸುವಾಗ ರಸ್ತೆಗಳ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆಯದೆ ಮುಂದೆ ಸಾಗಬೇಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

  • ಧಾರವಾಡ ದುರಂತ – ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೊಷಣೆ

    ಧಾರವಾಡ ದುರಂತ – ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೊಷಣೆ

    ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ನಗರದಲ್ಲಿ ನಡೆದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡುವುದಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ತುಷಾರ ಗಿರಿನಾಥ ಘೋಷಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಟ್ಟಡ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಆರೋಪಿಗಳು ಎಷ್ಟೇ ಪ್ರಭಾವಿ ಆಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಎಷ್ಟೇ ಪ್ರಭಾವ ಇದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಟ್ಟಡ ಯಾರದ್ದು ಎನ್ನುವುದು ನಮಗೆ ಗೊತ್ತಿದೆ. ಅವರು ಏನೆಲ್ಲಾ ಮಾಡಿದ್ದಾರೆ ಎಂಬುದು ನನಗೆ ಗೊತ್ತು ಎಂದು ಎಂದು ತಿಳಿಸಿದರು.

    ಪರಿಹಾರದ ಮೊತ್ತವನ್ನು ಹೊರತು ಪಡಿಸಿ, ರಕ್ಷಣಾ ಕಾರ್ಯಾಚರಣೆಗೆ ಬಳಸಿದ ವೆಚ್ಚದ ಹಣವನ್ನು ಕಟ್ಟಡದ ಮಾಲೀಕರಿಂದ ವಸೂಲಿ ಮಾಡಲಾಗುವುದು. ಪೊಲೀಸ್ ಇಲಾಖೆಯಿಂದ ಒಂದು ದೂರು, ಕಾರ್ಮಿಕ ಇಲಾಖೆಯಿಂದ ದೂರು ದಾಖಲಾಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಮ್ಮ ಬಳಿ ಎಲ್ಲಾ ದಾಖಲೆ ಸಂಗ್ರಹ ಇದೆ. ದಾಖಲೆಯನ್ನು ಪರಿಶೀಲನೆ ಮಾಡಿದ ಬಳಿಕ ಮುಂದಿನ ಕ್ರಮಕ್ಕೆ ಆದೇಶ ಮಾಡಲಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತರು ಹೇಳಿದರು.

    https://www.youtube.com/watch?v=jP84MBog6ds

  • ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿತ – ಓರ್ವ ಸಾವು, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

    ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿತ – ಓರ್ವ ಸಾವು, 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

    ಧಾರವಾಡ: ನಗರದಲ್ಲಿ ನೋಡನೋಡುತ್ತಿದ್ದಂತೆ ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿದು ಓರ್ವ ಸಾವನ್ನಪ್ಪಿ, 50ಕ್ಕೂ ಹೆಚ್ಚು ಕಾರ್ಮಿಕರು ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ನಗರದ ಕೆವಿಜಿ ಬ್ಯಾಂಕ್ ಬಳಿ 5 ಅಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ಒಂದು ವರ್ಷದಿಂದ ನಡೆಯುತಿತ್ತು. ಇಂದು ಮಧ್ಯಾಹ್ನ 3.40ರ ವೇಳೆಗೆ ಜನ ನೋಡುತ್ತಿದ್ದಂತೆ ಏಕಾಏಕಿ ಕಟ್ಟಡ ಕುಸಿದಿದೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಿದ್ದು, ಅವಶೇಷದಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.  ನಿರ್ಮಾಣದ ಕೆಲಸ ನಡೆಯುತ್ತಿದ್ದ ವೇಳೆಯಲ್ಲಿಯೇ ಸಂಪೂರ್ಣ ಕುಸಿದು ನೆಲಸಮವಾಗಿದೆ.

    ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಜೊತೆ ಸ್ಥಳೀಯರು ಕೈಜೋಡಿಸಿದ್ದು, ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ಹೊರತೆಯಲು ಸಹಾಯ ಮಾಡುತ್ತಿದ್ದಾರೆ. ಹಾಗೆಯೇ ಘಟನೆಯಲ್ಲಿ ಗಾಯಗೊಂಡಿರುವ ಮಂದಿಯನ್ನು ಬಸ್ ಹಾಗೂ ಇತರೇ ವಾಹನಗಳಲ್ಲಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಅಲ್ಲದೇ ಜಿಲ್ಲಾಧಿಕಾರಿ ದೀಪಾ ಚೇಳನ್ ಅವರು ಖುದ್ದಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    ಸದ್ಯ ಕಟ್ಟಡದಡಿಯಲ್ಲಿ ಸಿಲುಕಿದ್ದ 10- 15 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

  • ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

    ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

    ಮಡಿಕೇರಿ: ವಾಡಿಕೆಗಿಂತ ಶೇಕಡಾ 73 ರಷ್ಟು ಮಳೆಯಾಗಿದೆ. ಪ್ರವಾಹ ಸ್ಥಳಗಳಿಂದ ಈಗಾಗಲೇ 3,120 ಜನರನ್ನು ರಕ್ಷಿಸಿ ತರಲಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ವೈಮಾನಿಕ ಸಮೀಕ್ಷೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯನ್ನು ಲೆಕ್ಕ ಹಾಕಲು ಹೆಚ್ಚು ದಿನಗಳು ಬೇಕಾಗುತ್ತದೆ. ಅಲ್ಲಲ್ಲಿ ಗುಡ್ಡ ಕುಸಿತವಾಗಿದೆ, ರಸ್ತೆಗಳು ಬಿರುಕುಬಿಟ್ಟಿವೆ. ಹಿಂದೆಂದು ಕಾಣದ ಅನಾಹುತಗಳು ಆಗುತ್ತಿವೆ. ಇತ್ತ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದರು.

    ಇಂತಹ ಸಂದರ್ಭದಲ್ಲಿ ಕಳ್ಳಾಟ ಆಡುವ ಅಧಿಕಾರಿಗಳ ಅಮಾನತು ಮಾಡಿ, ಸೂಕ್ತ ವ್ಯವಸ್ಥೆ ಮಾಡಲು ಬಿಬಿಎಂಪಿ ಅಧಿಕಾರಿಗಳನ್ನು ಮಡಿಕೇರಿಗೆ ಕರೆಸಿಕೊಳ್ಳಲಾಗುತ್ತದೆ. ಆದರೆ ಕೆಲವರು ರಕ್ಷಣಾ ಕಾರ್ಯನಿರತರ ಮೇಲೆ ಕೆಲವರು ರಾಜಕೀಯ ಪ್ರದರ್ಶಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ, ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯ ಮೇಲೆ ಒತ್ತಡ ತರುವ ಕೆಲಸ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಸಂತ್ರಸ್ತರಿಗೆ ಸರ್ಕಾರವು ಅಗತ್ಯ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಮೊಬೈಲ್ ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಜೀವನದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಕೆಲವರು ಅವರಿಗೆ ಬೆರಳು ಮಾಡಿ ತೋರಿಸುತ್ತಿದ್ದು, ಸಣ್ಣತನ ಮೆರೆಯುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.


    ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ಕಷ್ಟವಾಗುತ್ತಿದೆ. 40 ಪರಿಹಾರ ಕೇಂದ್ರ ಕೇಂದ್ರಗಳು ವ್ಯವಸ್ಥೆ ಮಾಡಲಾಗಿದ್ದು, ಕೆಲವರು ಪರಿಹಾರ ಕೇಂದ್ರಗಳಲ್ಲಿ ಇರಲು ಇಷ್ಟ ಪಡುತ್ತಿಲ್ಲ. ಹೀಗಾಗಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ. ಮಳೆ ಆರ್ಭಟ ನಿಂತ ತಕ್ಷಣವೇ ಸರ್ಕಾರದ ಭೂಮಿ ಗುರುತು ಮಾಡಿ ಶೆಡ್ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಮುಂದಾಗಲಿದೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv