Tag: ರಂಜನ್ ಗೊಗೋಯ್

  • ರಾಜ್ಯಸಭೆಗೆ ನ್ಯಾ.ಗೊಗೋಯ್ ನೇಮಕ – ಬಿಜೆಪಿ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ

    ರಾಜ್ಯಸಭೆಗೆ ನ್ಯಾ.ಗೊಗೋಯ್ ನೇಮಕ – ಬಿಜೆಪಿ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ

    ಬೆಂಗಳೂರು: ರಾಜ್ಯಸಭೆಗೆ ನಿವೃತ್ತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇಮಕ ವಿಚಾರ ವಿಧಾನ ಪರಿಷತ್‍ನಲ್ಲಿ ಗದ್ದಲ ಗಲಾಟೆ ಕಾರಣವಾಯಿತು. ನ್ಯಾ.ಗೊಗೋಯ್ ನೇಮಕವನ್ನ ಬಿಜೆಪಿ ಸದಸ್ಯರು ಸಮರ್ಥನೆ ಮಾಡಿಕೊಂಡರೆ, ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದರು. ಮಾತು ಮಾತಿಗೆ ಬೆಳೆದು ಸದನದಲ್ಲಿ ಗದ್ದಲ ಗಲಾಟೆಗೆ ಕಾರಣವಾಯಿತು.

    ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಂವಿಧಾನದ ಚರ್ಚೆ ವೇಳೆ ಮಾತನಾಡುತ್ತಾ, ಇವತ್ತಿನ ಆಡಳಿತ ವ್ಯವಸ್ಥೆ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಇವತ್ತು ಐಟಿ, ಸಿಬಿಸಿ, ಇಡಿ, ಚುನಾವಣೆ ಆಯೋಗದ ಮೇಲೆ ರಾಜಕೀಯ ಹಸ್ತಕ್ಷೇಪ ಆಗುತ್ತಿದೆ. ಇದು ಸರಿಯಾದ ವ್ಯವಸ್ಥೆ ಅಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೆ RBI ಗವರ್ನರ್ ಕೂಡ ವ್ಯವಸ್ಥೆ ವಿರುದ್ಧ ಅಸಮಾಧಾಗೊಂಡು ರಾಜೀನಾಮೆ ಕೊಟ್ಟು ಹೋದರು ಅಂತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು. ಈಗ ನಿವೃತ್ತ ಸಿಜೆಯೊಬ್ಬರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ ನೀಡಿದ್ದಾರೆ. ಇದು ಯಾವ ಸಂದೇಶ ಜನರಿಗೆ ಹೋಗುತ್ತೆ ಎಂದ ಅಸಮಾಧಾನ ಹೊರ ಹಾಕಿದರು.

    ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತಿಗೆ ಕಾನೂನು ಮಂತ್ರಿ ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸಿದರು. RBI ಗವರ್ನರ್ ರನ್ನ ದೇಶದ ಪ್ರಧಾನಿ ಮಾಡಲಿಲ್ಲವಾ? ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ನಿವೃತ್ತ ಅಧಿಕಾರಿಗಳು, ನ್ಯಾಯಮೂರ್ತಿಗಳನ್ನ ರಾಜ್ಯಸಭೆಗೆ ನೇಮಕ ಮಾಡದಂತೆ ನಿಯಮ ಇದೆಯಾ? ಕೊಟ್ಟರೆ ಏನು ತಪ್ಪಿದೆ. ಕಾನೂನಿನ ಅನ್ವಯ ನೇಮಕವಾಗಿದ್ದಾರೆ. ಚೆನ್ನಾಗಿ ಓದಿರೋರು ರಾಜ್ಯಸಭೆಗೆ ಬರೋದು ತಪ್ಪಾ? ಅಂತ ಗೊಗೋಯ್ ನೇಮಕವನ್ನ ಸಮರ್ಥನೆ ಮಾಡಿಕೊಂಡರು.

    ಬಿಜೆಪಿ ಸದಸ್ಯರ ಸಮರ್ಥನೆಗೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದರು. ಈ ನ್ಯಾಯಮೂರ್ತಿಗಳು ಹಿಂದೆ ಅನೇಕ ತೀರ್ಪು ಕೊಟ್ಟಿದ್ದಾರೆ. ಈಗ ಅವರನ್ನ ರಾಜ್ಯಸಭೆಗೆ ನೇಮಕ ಮಾಡಿರೋದು ಎಷ್ಟು ಸರಿ ಅಂತ ಆಕ್ರೋಶ ಹೊರ ಹಾಕಿದರು. ಈ ವಿಚಾರವಾಗಿ ಸದನದಲ್ಲಿ ಗದ್ದಲ ಗಲಾಟೆ ಆಯಿತು.

    ಕಾಂಗ್ರೆಸ್‍ನ ಸಿಎಂ ಇಬ್ರಾಹಿಂ ನ್ಯಾ.ಗೊಗೊಯ್ ನೇಮಕವನ್ನ ವಿಧವೆ ವಿವಾಹಕ್ಕೆ ಹೋಲಿಸಿ ಲೇವಡಿ ಮಾಡಿದರು. ವಿಧವೆ ಪುನರ್ ಮದುವೆ ಆಗೋದು ಸರಿ. ಆದರೆ ನಿನ್ನೆ ಮೊನ್ನೆ ಸತ್ತ ಗಂಡನ ಹೆಂಡತಿ ಮದುವೆ ಆಗೋದು ಎಷ್ಟು ಸರಿ. ನಿವೃತ್ತಿಯಾಗಿ 4 ತಿಂಗಳು ಆಗಿಲ್ಲ. ಆಗಲೇ ರಾಜ್ಯಸಭೆಗೆ ಅಯ್ಕೆ ಆದರೆ ಹೇಗೆ. ಇದು ಸುಪ್ರೀಂಕೋರ್ಟ್ ಸ್ಥಾನಕ್ಕೆ ಚ್ಯುತಿ ತಂದ ಹಾಗೆ ಅನ್ನಿಸುತ್ತೆ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮತ್ತೆ ವಿಪಕ್ಷ- ಆಡಳಿತ ಪಕ್ಷದ ನಡುವೆ ಗಲಾಟೆ ಆಯಿತು.

  • ಹರಳಕೋಟೆ ಆಂಜನೇಯನ ದರ್ಶನ ಪಡೆದ ರಂಜನ್ ಗೊಗೋಯ್

    ಹರಳಕೋಟೆ ಆಂಜನೇಯನ ದರ್ಶನ ಪಡೆದ ರಂಜನ್ ಗೊಗೋಯ್

    ಚಾಮರಾಜನಗರ: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.

    ತಾಲೂಕಿನ ರಾಮಸಮುದ್ರದಲ್ಲಿನ ಹರಳುಕೋಟೆ ಆಂಜನೇಯ ದೇಗುಲಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ರಂಜನ್ ಗೊಗೋಯ್ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು.

    ರಂಜನ್ ಗೊಗೋಯ್ ಅವರು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಬೆಳಗ್ಗೆ ಬಿಳಿಗಿರಿರಂಗನ ಬೆಟ್ಟದಲ್ಲಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳಿಂದ ಆಶೀರ್ವಚನ ಪಡೆಯಲಿದ್ದಾರೆ. ನಂತರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡುವರು ಎಂದು ಮೂಲಗಳು ತಿಳಿಸಿವೆ.

  • ಹಿಂದೂಗಳಿಗೆ ಮಾತ್ರ ಸೀಮಿತವಲ್ಲ, ಉಳಿದ ಧರ್ಮಗಳಿಗೂ ಅನ್ವಯ – 7 ಜಡ್ಜ್‌ಗಳ ಪೀಠಕ್ಕೆ ಶಬರಿಮಲೆ ಕೇಸ್

    ಹಿಂದೂಗಳಿಗೆ ಮಾತ್ರ ಸೀಮಿತವಲ್ಲ, ಉಳಿದ ಧರ್ಮಗಳಿಗೂ ಅನ್ವಯ – 7 ಜಡ್ಜ್‌ಗಳ ಪೀಠಕ್ಕೆ ಶಬರಿಮಲೆ ಕೇಸ್

    ನವದೆಹಲಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಕರಣದ ವಿಚಾರಣೆ 7 ಮಂದಿ ನ್ಯಾಯಾಧೀಶರ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.

    ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠದ ಮೂವರು ನ್ಯಾಯಾಧೀಶರು ಈ ವಿಚಾರದ ಬಗ್ಗೆ ವಿಸ್ತೃತ  ಚರ್ಚೆ ನಡೆಯಬೇಕು ಎಂದು ತೀರ್ಪು ನೀಡಿದರೆ ನ್ಯಾ. ಚಂದ್ರಚೂಡ್ ಮತ್ತು ನ್ಯಾ. ನಾರಿಮನ್ ವಿಸ್ತೃತ  ಪೀಠಕ್ಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಶಬರಿಮಲೆ ವಿಚಾರ ಕೇವಲ ಹಿಂದೂ ಧರ್ಮದ ದೇವಾಲಯಕ್ಕೆ ಮಾತ್ರ ಸೀಮಿತವಲ್ಲ. ಮುಸ್ಲಿಂ ಧರ್ಮದ ಮಹಿಳೆ ಮಸೀದಿ ಪ್ರವೇಶಕ್ಕೂ ಇದು ಅನ್ವಯವಾಗುತ್ತದೆ. ಪಾರ್ಸಿ ಧರ್ಮಕ್ಕೂ ಅನ್ವಯವಾಗುತ್ತದೆ. ಹೀಗಾಗಿ ಈ ಪ್ರಕರಣದ ಬಗ್ಗೆ ದೀರ್ಘ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

    ಶಬರಿಮಲೆ ಪ್ರಕರಣದಲ್ಲಿ ತೀರ್ಪು ನೀಡಿದರೆ ಉಳಿದ ಧರ್ಮದಲ್ಲಿ ಯಾಕೆ ಪ್ರವೇಶ ಇಲ್ಲ. ಅಲ್ಲೂ ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕೆಂಬ ಕೂಗು ಈಗಾಗಲೇ ಎದ್ದಿದೆ. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಈ ಎಲ್ಲ ವಿಚಾರಗಳ ಮೇಲೆ ಗಮನಹರಿಸಿದ ಪೀಠ ಸುದೀರ್ಘ ವಿಚಾರಣೆ ನಡೆಸಬೇಕು ಎಂದು ಹೇಳಿದೆ.

    2018ರ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟಿನ ಅಂದಿನ ಸಿಜೆ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ 4:1ರ ಅನುಪಾತದಲ್ಲಿ ಎಲ್ಲಾ ವಯೋಮಾನದ ಮಳೆಯರಿಗೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ 64 ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಫೆ.6 ರಂದು ಪೂರ್ಣಗೊಳಿಸಿದ್ದ ಪೀಠದ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

    ಸುಪ್ರೀಂ ತೀರ್ಪು ಏನಿತ್ತು?
    5ರಿಂದ 50 ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿ ಹಿಡಿಯುತ್ತದೆ. ಅಯ್ಯಪ್ಪ ಪ್ರತ್ಯೇಕ ದೇವರಲ್ಲ. ಲಿಂಗದ ಆಧಾರದ ಮೇಲೆ ಮಹಿಳೆಗೆ ದೇಗುಲ ಪ್ರವೇಶ ನಿರಾಕರಿಸುವುದು ಸರಿಯಲ್ಲ.

    ಅಂದಿನ ಸಿಜೆ ದೀಪಕ್ ಮಿಶ್ರಾ ಸೇರಿ ನಾಲ್ವರು ನ್ಯಾಯಮೂರ್ತಿಗಳಿಂದ ತೀರ್ಪಿಗೆ ಸಹಮತ ವ್ಯಕ್ತವಾಗಿತ್ತು. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಮಾತ್ರ ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಧಾರ್ಮಿಕ ಆಚರಣೆಗಳನ್ನು ಸಂವಿಧಾನದ 14ನೇ ವಿಧಿ ಅನ್ವಯ ಪರಿಗಣಿಸಲಾಗದು ಅಂದು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.

    ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ, ವಿರೋಧಿಸಿ ವಿರೋಧಿಸಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೇ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕನಕದುರ್ಗಾ ಮತ್ತು ಬಿಂದು ಅವರು ಪೊಲೀಸ್ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಇದು ಉದ್ರಿಕ್ತರನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ, ನಾಯರ್ ಸಮಾಜ, ತಿರುವಂಕೂರು ದೇವಸ್ವ ಮಂಡಳಿ ಹಾಗೂ ಕೇರಳ ಸರ್ಕಾರದ ಜೊತೆಗೆ 64 ಅರ್ಜಿಗಳು ಸುಪ್ರೀಂಕೋರ್ಟಿಗೆ  ಮೇಲ್ಮನವಿ ಸಲ್ಲಿಸಿದ್ದವು.

  • ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸುಪ್ರೀಂ ಕೋರ್ಟ್, ಸಿಜೆಐ ಕಚೇರಿ

    ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸುಪ್ರೀಂ ಕೋರ್ಟ್, ಸಿಜೆಐ ಕಚೇರಿ

    ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ನ್ಯಾಯಮೂರ್ತಿಗಳಾದ ರಮಣ, ಚಂದ್ರಚೂಡ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ನೇತೃತ್ವದ ಸಂವಿಧಾನ ಪೀಠದಿಂದ ತೀರ್ಪು ಪ್ರಕಟವಾಗಿದೆ. ಈ ಮೂಲಕ ಅಯೋಧ್ಯೆ ತೀರ್ಪಿನ ಬಳಿಕ ರಂಜನ್ ಗೊಗೋಯ್ ನಿವೃತ್ತಿಗೂ ಮುನ್ನ ಮತ್ತೊಂದು ಮಹತ್ವದ ತೀರ್ಪು ಪ್ರಕಟಿಸಿ 2010ರಲ್ಲಿ ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.

    ನ್ಯಾಯ ಮೂರ್ತಿಗಳಾದ ರಂಜನ್ ಗೊಗೋಯ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ಅವರೆಲ್ಲ ಸೇರಿ ಒಂದು ಆದೇಶ ಪ್ರಕಟವಾಗಿದ್ದರೆ, ನ್ಯಾ.ರಮಣ ಮತ್ತು ನ್ಯಾ. ಚಂದ್ರಚೂಡ್ ಅವರು ಪ್ರತ್ಯೇಕ ತೀರ್ಪು ಬರೆದಿದ್ದಾರೆ.

    ಪಾರದರ್ಶಕತೆಯಿಂದ ನ್ಯಾಯಾಂಗದ ಸ್ವಾತಂತ್ರ್ಯ ಹಾಳಾಗುವುದಿಲ್ಲ. ಖಾಸಗಿ ಹಕ್ಕು ಮತ್ತು ಮಾಹಿತಿ ಹಕ್ಕು ಜೊತೆ ಜೊತೆಯಾಗಿ ಸಾಗಬೇಕು ಎಂದು ನ್ಯಾ. ಸಂಜೀವ್ ಖನ್ನಾ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

    ಏನಿದು ಪ್ರಕರಣ?
    ದೇಶದ ಗೌಪ್ಯ ಮಾಹಿತಿಯನ್ನು ಬಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದೆಂಬ ಉದ್ದೇಶದಿಂದ 2005ರ ಅಕ್ಟೋಬರ್ 12 ರಂದು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇಲ್ಲಿಯವರೆಗೆ ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ.

    2010ರಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮತ್ತು ಸುಪ್ರೀಂ ಕೋರ್ಟ್ ಕೂಡ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿನ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಪ್ರೀಂ ಕೋರ್ಟ್ ನಲ್ಲಿ 2010 ರಲ್ಲಿ ಮೂರು ಅರ್ಜಿ ಸಲ್ಲಿಸಿದ್ದರು. ಈ ವರ್ಷ ಏಪ್ರಿಲ್‍ನಲ್ಲಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠ ಇಂದಿಗೆ ಆದೇಶವನ್ನು ಕಾಯ್ದಿರಿಸಿತ್ತು.

  • ಅಯೋಧ್ಯೆ ಕೇಸ್ ಇಂದು ತೀರ್ಪು ಪ್ರಕಟ – ಶನಿವಾರವೇ ತೀರ್ಪು ಪ್ರಕಟಗೊಳ್ಳುತ್ತಿರುವುದು ಯಾಕೆ?

    ಅಯೋಧ್ಯೆ ಕೇಸ್ ಇಂದು ತೀರ್ಪು ಪ್ರಕಟ – ಶನಿವಾರವೇ ತೀರ್ಪು ಪ್ರಕಟಗೊಳ್ಳುತ್ತಿರುವುದು ಯಾಕೆ?

    ನವದೆಹಲಿ: ಸಾಧಾರಣವಾಗಿ ಸುಪ್ರೀಂ ಕೋರ್ಟ್ ಶನಿವಾರ ತೀರ್ಪು ಪ್ರಕಟಿಸುವುದಿಲ್ಲ. ಆದರೆ ಅಯೋಧ್ಯೆ ಪ್ರಕರಣದ ತೀರ್ಪನ್ನು ಶನಿವಾರ ಪ್ರಕಟಿಸುವ ಮೂಲಕ ಮುಖ್ಯ ನ್ಯಾ. ರಂಜನ್ ಗೊಗೋಯ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

    ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿ ಆಗಲಿರುವ ಹಿನ್ನೆಲೆಯಲ್ಲಿ ಈ ವಾರ ಅಥವಾ ಮುಂದಿನ ವಾರ ತೀರ್ಪು ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಶನಿವಾರವೇ ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇರಲಿಲ್ಲ. ಗೊಗೋಯ್ ಅವರ ಕೊನೆಯ ಕೆಲಸದ ದಿನಾಂಕ ನ.16 ಶನಿವಾರ ಆಗಿದ್ದರಿಂದ ಈ ವಾರ ತೀರ್ಪು ಪ್ರಕಟವಾಗದ ಕಾರಣ ನವೆಂಬರ್ 14, 15 ರಂದು ತೀರ್ಪು ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಇದನ್ನೂ ಓದಿ:ಸಂವಿಧಾನ ಪೀಠದಿಂದ ಅಯೋಧ್ಯೆ ತೀರ್ಪು – ಐವರು ನ್ಯಾಯಾಧೀಶರ ಕಿರು ಪರಿಚಯ ಓದಿ

    ಅಯೋಧ್ಯೆ ವಿಚಾರ ಬಹಳ ಸೂಕ್ಷ್ಮವಾಗಿರುವ ಕಾರಣ ಸಂವಿಧಾನ ಪೀಠ ಸಂಧಾನದ ಮೂಲಕ ಬಗೆಹರಿಸಲು ಮಧ್ಯಸ್ಥಿಕೆ ತಂಡವನ್ನು ರಚಿಸಿತು. ಈ ತಂಡ ನಡೆಸಿದ ಸಂಧಾನ ಪ್ರಕ್ರಿಯೆ ವಿಫಲವಾದ ಹಿನ್ನೆಲೆಯಲ್ಲಿ ಅಗಸ್ಟ್ 6 ರಿಂದ ಸುಪ್ರೀಂ ಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿದ ಸಂವಿಧಾನ ಪೀಠ ಅಕ್ಟೋಬರ್ 16ಕ್ಕೆ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು.

    ಇಂದು ತೀರ್ಪಿನ ದಿನಾಂಕ ಪ್ರಕಟಗೊಳ್ಳುವ ಮೊದಲೇ ರಂಜನ್ ಗೊಗೋಯ್ ಅವರು ಶುಕ್ರವಾರ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅನುಪ್ ಚಂದ್ರ ಪಾಂಡೆ ಮತ್ತು ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಸಿಂಗ್ ಅವರನ್ನು ಭೇಟಿಯಾಗಿ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದ್ದರು. ಸುಪ್ರೀಂ ನ್ಯಾಯಮೂರ್ತಿಗಳೇ ಸರ್ಕಾರದ ಪ್ರತಿನಿಧಿಗಳ ಜೊತೆ ಕಾನೂನು ಬಗ್ಗೆ ಚರ್ಚೆ ನಡೆಸಿರುವುದು ಬಹಳ ಅಪರೂಪ.

    ಸಾಧಾರಣವಾಗಿ ಒಂದು ದಿನ ಅಥವಾ ಎರಡು ದಿನದ ಮೊದಲು ತೀರ್ಪು ಪ್ರಕಟಗೊಳ್ಳುವ ದಿನಾಂಕವನ್ನು ಸುಪ್ರೀಂ ಕೋರ್ಟ್ ಪ್ರಕಟಿಸುತ್ತದೆ. ಆದರೆ ಈ ಪ್ರಕರಣದಲ್ಲಿ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶುಕ್ರವಾರ ರಾತ್ರಿ ನ್ಯಾಯಮೂರ್ತಿಗಳು ದಿನಾಂಕ ಪ್ರಕಟಿಸಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

    ಮೊದಲೇ ದಿನಾಂಕ ಪ್ರಕಟಿಸಿದರೆ ಸಮಾಜ ವಿರೋಧಿ ಜನರಿಗೆ ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲದೇ ನ.10 ಭಾನುವಾರ ಸಾರ್ವಜನಿಕ ರಜೆಯಿದೆ. ಹೀಗಾಗಿ ಯಾವುದೇ ರೀತಿಯಲ್ಲಿ ಯಾರಿಗೂ ಸಮಸ್ಯೆ ಆಗದೇ ಇರಲು ರಂಜನ್ ಗೊಗೋಯ್ ಅವರು ದಿಢೀರ್ ಆಗಿ ಶುಕ್ರವಾರ ರಾತ್ರಿ ತೀರ್ಪು ಪ್ರಕಟಿಸುವ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

  • ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್‍ಎ ಬೊಬ್ಡೆ ನೇಮಕ

    ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್‍ಎ ಬೊಬ್ಡೆ ನೇಮಕ

    ನವದೆಹಲಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಶರಾದ್ ಅರವಿಂದ್ ಬೊಬ್ಡೆ ಅವರನ್ನು ಇಂದು ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ.

    ಈಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ನಂತರ ಹಿರಿಯ ನ್ಯಾಯಮೂರ್ತಿಯಾಗಿದ್ದ ಬಾಬ್ಡೆ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವೆಂಬರ್ 18 ರಂದು ಪ್ರಮಾಣ ವಚನ ಭೋದಿಸಲಿದ್ದಾರೆ. ನ್ಯಾಯಮೂರ್ತಿ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕಾರ್ಯನಿರ್ವಹಿಸಿದ್ದಾರೆ. ಅವರು 23 ಏಪ್ರಿಲ್ 2021 ರಂದು ನಿವೃತ್ತರಾಗಲಿದ್ದಾರೆ.

    ಈ ಹಿಂದೆ ಈ ವಿಚಾರವಾಗಿಯೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೋಯ್ ಅವರು ತನ್ನ ನಂತರ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶ ಎಸ್.ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ರಂಜನ್ ಗೊಗೋಯ್ ಅವರು ನವೆಂಬರ್ 17 ರಂದು ಮುಖ್ಯ ನ್ಯಾಯಾಧೀಶರ ಸ್ಥಾನದಿಂದ ನಿವೃತ್ತಿ ಹೊಂದಲಿದ್ದು, ತನ್ನ ನಂತರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಎಸ್.ಎ ಬೊಬ್ಡೆ ಅವರನ್ನು ನೇಮಕ ಮಾಡಿ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

    2018ರ ಅಕ್ಟೋಬರ್ 3 ರಂದು ಭಾರತದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ರಂಜನ್ ಗೊಗೋಯ್, ಮುಂದಿನ ತಿಂಗಳು ಅಂದರೆ ನವೆಂಬರ್ 17 ರಂದು ನಿವೃತ್ತಿ ಆಗಲಿದ್ದಾರೆ. ಇವರ ನಂತರ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಆ ಸ್ಥಾನವನ್ನು ಪಡೆಯಲಿದ್ದಾರೆ.

    ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಮಹಾರಾಷ್ಟ್ರದ ನಾಗ್ಪುರದಲ್ಲಿ 1956ರ ಏಪ್ರಿಲ್ 24 ರಂದು ಜನಿಸಿರುವ ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಹೆಚ್ಚುವರಿ ನ್ಯಾಯಾಧೀಶರಾಗಿ 2000ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012 ರಲ್ಲಿ ಅವರು ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ನಂತರ ಅವರನ್ನು 2013 ರ ಏಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ಬೊಬ್ಡೆ ಅವರು 2021ರ ಏಪ್ರಿಲ್ 23 ರಂದು ನಿವೃತ್ತರಾಗಲಿದ್ದಾರೆ.

  • ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ – ಸುಪ್ರೀಂ ಮುಖ್ಯ ನ್ಯಾಯಮೂರ್ತಿ

    ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ – ಸುಪ್ರೀಂ ಮುಖ್ಯ ನ್ಯಾಯಮೂರ್ತಿ

    ನವದೆಹಲಿ: ಅಗತ್ಯವಿದ್ದಲ್ಲಿ ಜಮ್ಮು ಕಾಶ್ಮೀರಕ್ಕೆ ಖುದ್ದು ಭೇಟಿ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಓಡಾಡುವುದು ಕಷ್ಟಕರವಾಗಿದೆ ಎಂದು ಕಾಶ್ಮೀರ ಟೈಮ್ಸ್ ಸಂಪಾದಕಿ ಅನುರಾಧಾ ಭಸಿನ್, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಎನಾಕ್ಷಿ ಗಂಗೂಲಿ, ಪ್ರೊ.ಶಾಂತಾ ಸಿನ್ಹಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.

    ವಾದ ಮಂಡಿಸುವ ವೇಳೆ ಇದು ಹೈಕೋರ್ಟ್ ಮಟ್ಟದಲ್ಲಿಯೇ ಬಗೆಹರಿಯುವ ವಿಚಾರ ಎಂದು ನ್ಯಾಯಮೂರ್ತಿ ಬೊಬ್ಡೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅನುರಾಧಾ ಭಸಿನ್ ಪರ ವಕೀಲೆ ವೃಂದಾ ಗ್ರೋವರ್ ಬೇಗನ್, ಕಾಶ್ಮೀರದ ಕಣಿವೆಯಲ್ಲಿ ಅಂತರ್ಜಾಲ, ಸಾರ್ವಜನಿಕ ಸಾರಿಗೆ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ಸಾರ್ವಜನಿಕರು ಹೈ ಕೋರ್ಟ್‍ಗೆ ಹೋಗುವುದು ಸಹ ಕಷ್ಟಕರವಾಗಿದೆ ಎಂದು ತಿಳಿಸಿದರು.

    ನಂತರ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಎನಾಕ್ಷಿ ಗಂಗೂಲಿ, ಪ್ರೊ.ಶಾಂತಾ ಸಿನ್ಹಾ ಪರ ವಕೀಲರು ವಾದ ಮಂಡಿಸಿ, 18 ವರ್ಷದೊಳಗಿನ ಮಕ್ಕಳು ಹಾಗೂ ಯುವಕರನ್ನು ಬಂಧಿಸಿದ್ದು, ಅವರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು. ಆಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರತಿಕ್ರಿಯಿಸಿ, ಅರ್ಜಿದಾರರು ಹೈ ಕೋರ್ಟ್ ಮೊರೆಯೇ ಹೋಗಬೇಕು ಎಂದು ತಿಳಿಸಿದರು.

    ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಪರ ವಕೀಲರು ಪ್ರತಿಕ್ರಿಯಿಸಿ, ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಿರುವುದರಿಂದ ಹೈ ಕೋರ್ಟ್ ಮೊರೆ ಹೋಗಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

    ತಕ್ಷಣ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, ಜಮ್ಮು ಕಾಶ್ಮೀರದ ಹೈಕೋರ್ಟ್ ಪ್ರವೇಶಿಸಲು ಸಹ ತೊಂದರೆಗಳಿವೆ ಎಂಬ ಮಕ್ಕಳ ಹಕ್ಕುಗಳ ಕಾರ್ಯಕರ್ತರ ಆರೋಪಗಳು ನಿಜವೇ ಎಂದು ಪರಿಶೀಲಿಸಿದರು. ಅಲ್ಲದೆ, ಜಮ್ಮು ಕಾಶ್ಮೀರ ಹೈ ಕೋರ್ಟ್‍ಗೆ ಹೋಗುವುದು ಏಕೆ ಕಷ್ಟ? ಯಾರಾದರೂ ದಾರಿಯಲ್ಲಿ ತಡೆಯುತ್ತಾರೆಯೇ ಎಂದು ಪ್ರಶ್ನಿಸಿದರು. ಮುಂದುವರಿದು, ಈ ಕುರಿತು ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಂದ ವಿವರ ಪಡೆಯುತ್ತೇವೆ. ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರದ ಹೈ ಕೋರ್ಟ್‍ಗೆ ಹೋಗುತ್ತೇನೆ. ಆದಷ್ಟು ಬೇಗ ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

  • ಸಂವಿಧಾನ ಪೀಠದಲ್ಲಿ ಕಾಶ್ಮೀರ ಅರ್ಜಿ ವಿಚಾರಣೆ – ಕೇಂದ್ರಕ್ಕೆ ನೋಟಿಸ್

    ಸಂವಿಧಾನ ಪೀಠದಲ್ಲಿ ಕಾಶ್ಮೀರ ಅರ್ಜಿ ವಿಚಾರಣೆ – ಕೇಂದ್ರಕ್ಕೆ ನೋಟಿಸ್

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳ ವಿಚಾರಣೆ 5 ಮಂದಿ ನ್ಯಾಯಾಧೀಶರ ಸಂವಿಧಾನಿಕ ಪೀಠದಲ್ಲಿ ನಡೆಯಲಿದೆ.

    ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಎಸ್‍ಎ ಬೊಬ್ಡೆ, ಎಸ್ ಅಬ್ದುಲ್ ನಜೀರ್ ಅವರಿದ್ದ ಪೀಠದಲ್ಲಿ ಇಂದು ಕೇಂದ್ರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯಿತು. ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಇದು ಬಹಳ ಸೂಕ್ಷ್ಮ ವಿಚಾರ ಎಂದು ಕೋರ್ಟ್ ಗಮನಕ್ಕೆ ತಂದರು.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಇಂದು ನಾವು ಯಾವುದೇ ಆದೇಶ ಪ್ರಕಟಿಸುವುದಿಲ್ಲ. ಎಲ್ಲ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗುವುದು. ಅಕ್ಟೋಬರ್ ಮೊದಲ ವಾರದಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ ಎಂದು ಹೇಳಿದರು.

    ಕಾಶ್ಮೀರ ಟೈಮ್ಸ್ ಪತ್ರಿಕೆಯ ಸಂಪಾದಕಿ ಅನುರಾಧ ಬಸ್ಸಿನ್ ಕಾಶ್ಮೀರದಲ್ಲಿ ಹೇರಲಾಗಿರುವ ಸಂವಹನ ನಿರ್ಬಂಧವನ್ನು ಕೂಡಲೇ ತೆಗೆದು ಹಾಕಬೇಕು. ನಿರ್ಬಂಧ ಹೇರಿದ್ದರಿಂದ ಮಾಧ್ಯಮಗಳು ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಮನವಿ ಮಾಡಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ನಂತರ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ 7 ದಿನಗಳ ಒಳಗಡೆ ಉತ್ತರಿಸಬೇಕು ಎಂದು ಸೂಚಿಸಿತು.

    ಕೇಂದ್ರ ಸರ್ಕಾರ ಭದ್ರತೆಗಾಗಿ  50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಿದೆ. ಕಾಶ್ಮೀರದ  400ಕ್ಕೂ ಹೆಚ್ಚು ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.  ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಗೃಹ ಬಂಧನದಲ್ಲಿದ್ದಾರೆ.

  • 370ನೇ ವಿಧಿ ರದ್ದು : ಇದು ಯಾವ ರೀತಿಯ ಅರ್ಜಿ – ಅರ್ಜಿದಾರರಿಗೆ ಸುಪ್ರೀಂ ತರಾಟೆ

    370ನೇ ವಿಧಿ ರದ್ದು : ಇದು ಯಾವ ರೀತಿಯ ಅರ್ಜಿ – ಅರ್ಜಿದಾರರಿಗೆ ಸುಪ್ರೀಂ ತರಾಟೆ

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನದವನ್ನು ರದ್ದುಗೊಳಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಇದು ಯಾವ ರೀತಿಯ ಅರ್ಜಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅರ್ಜಿದಾರ ಎಂ.ಎಲ್.ಶರ್ಮಾ ಅವರಿಗೆ ಇದು ಯಾವ ರೀತಿಯ ಅರ್ಜಿ? ನೀವು ಏನನ್ನು ಪ್ರಶ್ನೆ ಮಾಡುತ್ತಿದ್ದೀರಿ? ನಿಮ್ಮ ಮನವಿ ಏನು ಎಂದು ಖಾರವಾಗಿ ಪ್ರಶ್ನಿಸಿದರು. ನಿಮ್ಮ ಅರ್ಜಿಯನ್ನು ನಾನು ಅರ್ಧಗಂಟೆ ಓದಿದ್ದೇನೆ. ನನಗೆ ಅರ್ಥ ಆಗಲಿಲ್ಲ ಎಂದು ರಂಜನ್ ಗೊಗೋಯ್ ಹೇಳಿದರು.

    ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಎಸ್‍ಎ ಬೊಬ್ಡೆ, ಎಸ್‍ಎ ನಾಜೀರ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ಇಂದು ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ 6 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.

    ಕಾಶ್ಮೀರ ಟೈಮ್ಸ್ ಸಂಪಾದಕರು ಮಾಧ್ಯಮಗಳಿಗೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕುವ ವಿಚಾರದಲ್ಲಿ ನಾವು ಸ್ವಲ್ಪ ಸಮಯವನ್ನು ನೀಡಲು ಬಯಸುತ್ತೇವೆ ಎಂದು ಹೇಳಿದರು. ಈ ವೇಳೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕಾಶ್ಮೀರ ಟೈಮ್ಸ್ ಜಮ್ಮುವಿನಿಂದ ಪ್ರಕಟವಾಗುತ್ತದೆ ಹೊರತು ಶ್ರೀನಗರದಿಂದಲ್ಲ. ಯಾಕೆ ಶ್ರೀನಗರಿಂದ ಮುದ್ರಣ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಲ್ಯಾಡ್‍ಲೈನ್ ಮತ್ತು ಬ್ರಾಡ್‍ಲೈನ್ ಸಂಪರ್ಕ ಮರುಸ್ಥಾಪಿಸಲಾಗುತ್ತದೆ. ಇವತ್ತು ಸಂಜೆಯ ಒಳಗಡೆ ಇವುಗಳು ಮತ್ತೆ ಕಾರ್ಯನಿರ್ವಹಿಸುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇಂದು ಜಮ್ಮು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಿಂದ ಕರೆ ಬಂದಿದೆ ಎಂದು ಅರ್ಜಿದಾರರ ಗಮನಕ್ಕೆ ತಂದರು.

    ಈ ವೇಳೆ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಭದ್ರತಾ ಸಂಸ್ಥೆಯ ಮೇಲೆ ನ್ಯಾಯಾಲಯ ನಂಬಿಕೆ ಇಡಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು. ನ್ಯಾಯಾಲಯ ಮುಂದಿನ ವಿಚಾರಣೆಗಾಗಿ ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ.

  • ರೋಹಟಗಿ ಎಲ್ಲಿ? ಸಿಂಘ್ವಿ ಎಲ್ಲಿ – ಸಿಜೆಐ ರಂಜನ್ ಗೊಗೋಯ್ ಪ್ರಶ್ನೆ

    ರೋಹಟಗಿ ಎಲ್ಲಿ? ಸಿಂಘ್ವಿ ಎಲ್ಲಿ – ಸಿಜೆಐ ರಂಜನ್ ಗೊಗೋಯ್ ಪ್ರಶ್ನೆ

    ನವದೆಹಲಿ: ರೋಹಟಗಿ ಎಲ್ಲಿ? ಸಿಂಘ್ವಿ ಎಲ್ಲಿ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರಶ್ನಿಸಿದ್ದಾರೆ.

    ಪಕ್ಷೇತರ ಶಾಸಕರಾರದ ನಾಗೇಶ್ ಮತ್ತು ಶಂಕರ್ ಅವರು ವಿಶ್ವಾಸ ಮತಯಾಚನೆ ನಡೆಸಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

    ಈ ಸಂದರ್ಭದಲ್ಲಿ ಪಕ್ಷೇತರ ಶಾಸಕರ ಪರ ವಕೀಲ ಮುಕುಲ್ ರೋಹಟಗಿ, ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ಕಿರಿಯ ವಕೀಲರನ್ನು ನ್ಯಾಯಾಲಯಕ್ಕೆ ಕಳುಹಿಸಿದ್ದರು. ಬೆಳಗ್ಗೆ 10:45ಕ್ಕೆ ವಿಚಾರಣೆ ಸಂದರ್ಭದಲ್ಲಿ ಇಬ್ಬರು ಹಿರಿಯ ವಕೀಲರು ಗೈರಾಗಿದ್ದನ್ನು ನೋಡಿದ ಮುಖ್ಯ ನ್ಯಾಯಾಧೀಶರು ರೋಹಟಗಿ ಎಲ್ಲಿ? ಸಿಂಘ್ವಿ ಎಲ್ಲಿ ಎಂದು ಪ್ರಶ್ನಿಸಿದರು.

    ಪಕ್ಷೇತರ ಶಾಸಕರ ಪರವಾಗಿ ಹಾಜರಾಗಿದ್ದ ಜ್ಯೂನಿಯರ್ ಲಾಯರ್ ದೀಕ್ಷಾ ರೈ ವಿಶ್ವಾಸ ಮತಯಾಚನೆ ಸಾಬೀತಾದ ಹಿನ್ನೆಲೆ ಅರ್ಜಿಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ನಂತರ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಿತು. ಇಂದಿನ ವಿಚಾರಣೆ ವೇಳೆ ಸಿಎಂ ಪರ ವಕೀಲ ರಜೀವ್ ಧವನ್ ಹಾಜರಾಗಿದ್ದರು.

    ಮಂಗಳವಾರದ ಅರ್ಜಿ ವಿಚಾರಣೆ ವೇಳೆ ಮುಕುಲ್ ರೋಹಟಗಿ, ಸೋಮವಾರ ಮಧ್ಯರಾತ್ರಿಯವರೆಗೂ ಅಧಿವೇಶನ ನಡೆದಿದೆ. ಇಂದು ಸಂಜೆಗೆ ಬಹುಮತ ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಪ್ರತಿ ದಿನ ಕಲಾಪದಲ್ಲಿ ಹೀಗೆ ನಡೆಯುತ್ತಿರುವುದರಿಂದ ನೀವೇ ಒಂದು ಆದೇಶ ಪ್ರಕಟಿಸಿ ಎಂದು ಪೀಠದಲ್ಲಿ ಮನವಿ ಮಾಡಿದ್ದರು.

    ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಜುಲೈ 18ಕ್ಕೆ ಕಲಾಪ ಆರಂಭಗೊಂಡಿದ್ದು ಹಲವು ಮಂದಿ ಮಾತನಾಡಬೇಕಿದೆ. ಇತಿಹಾಸವನ್ನು ನೋಡಿದರೆ ಸುದೀರ್ಘ ಚರ್ಚೆ ನಡೆದಿದೆ. ಸದನದಲ್ಲಿ ಅಭಿಪ್ರಾಯ ಮಂಡನೆ ಆಗುತ್ತಿರುವಾಗ ರಾಜ್ಯಪಾಲರು ಸಮಯ ನಿಗದಿ ಮಾಡಿರುವುದು ಸರಿಯಲ್ಲ. ಚರ್ಚೆ ಮಧ್ಯೆ ಮತಕ್ಕೆ ಹಾಕುವುದು ಹೇಗೆ ಎಂದು ಪ್ರಶ್ನಿಸಿದ್ದರು.

    ಸಿಎಂ ಪರ ವಾದ ವಕೀಲ ರಾಜೀವ್ ಧವನ್, ವಿಶ್ವಾಸ ಮತ ಯಾಚನೆ ಆರಂಭವಾದ ಸಮಯದಲ್ಲಿ ಒತ್ತಡ ಹಾಕಬಾರದು. ಚರ್ಚೆ ನಡೆಯುತ್ತಿದೆ. ಈ ವೇಳೆ ಮತಕ್ಕೆ ಹಾಕುವ ನಿರ್ಧಾರ ಸರಿಯಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.

    ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು, ಹಾಗಾದರೆ ವಿಶ್ವಾಸ ಮತಯಾಚನೆ ಯಾವಾಗ ನಡೆಯಲಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಿಂಘ್ವಿ ಇಂದು ಸಂಜೆಯ ಒಳಗಡೆ ಮತಕ್ಕೆ ಹಾಕುವುದಾಗಿ ಸ್ಪೀಕರ್ ತಿಳಿಸಿದ್ದಾರೆ ಎಂದು ಉತ್ತರಿಸಿದ್ದರು. ಸಿಂಘ್ವಿ ಅವರಿಂದ ಈ ಉತ್ತರ ಬರುತ್ತಿದ್ದಂತೆ, ನಾವು ಅದೇ ಆಶಾ ಭಾವದಿಂದ ಕಾದು ನೋಡುತ್ತೇವೆ. ಒಂದು ವೇಳೆ ಮತಕ್ಕೆ ಹಾಕದೇ ಇದ್ದರೆ ನಾಳೆ ವಿಚಾರಣೆ ನಡೆಸೋಣ ಎಂದು ಹೇಳಿ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದರು.