Tag: ರಂಗನಾಯಕಿ

  • 1987 ನಾನು ಅಪ್ಪನಾದ ದಿನ: ಜಗ್ಗೇಶ್

    1987 ನಾನು ಅಪ್ಪನಾದ ದಿನ: ಜಗ್ಗೇಶ್

    ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಮ್ಮ ಮಗನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯವನ್ನು ಕೋರಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಗ್ಗೇಶ್ ಅವರು ತಮ್ಮ ಮಗ ಗುರುರಾಜ್ ಫೋಟೋವನ್ನು ಹಂಚಿಕೊಂಡು ಆ ಕುರಿತಾಗಿ ಬರೆದುಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?: 1987 ನಾನು ಅಪ್ಪನಾದ ದಿನ. ಕೈಯಲ್ಲಿ ಬಿಡಿಗಾಸಿಲ್ಲ. ಕಾಡಿಬೇಡಿದರೂ ಕೆಲಸವಿಲ್ಲ. ಅಪ್ಪನ ಮುಂದೆ ಸೋತೆ ಎಂದು ನಿಲ್ಲಲು ಸ್ವಾಭಿಮಾನ ಅಡ್ಡಬಂತು. ಹಣ ಇಲ್ಲದವ ಹೆಣಕ್ಕೆ ಸಮವೆಂದು ಅಂದು ನಾನು ಅರಿತ ಜಗದ ಪಾಠವಾಗಿದೆ. ಆಗ ನಾನು ಗುರುರಾಯರ ಮುಂದೆ ಮಂತ್ರಾಲಯದಲ್ಲಿ ನಿಂತಿದ್ದೆ ಎಂದು ಬರೆದುಕೊಂಡಿದ್ದಾರೆ.

    ನನ್ನವರಾರು ನನಗಿಲ್ಲ, ನೀನಲ್ಲದೆ ಬೇರೆ ಗತಿಯಿಲ್ಲ, ನನ್ನಲಿ ಏಕೆ ಕೃಪೆಯಿಲ್ಲ, ಗುರುರಾಯನೆ ನೀನೆ ನನಗೆಲ್ಲ ಎಂದು ಬೇಡಿಕೊಂಡಿದ್ದೆ. ನಂತರ ನನ್ನ ಬದುಕಲ್ಲಿ ನಡೆದುದ್ದೆಲ್ಲವೂ ರಾಯರ ವಿಸ್ಮಯವಾಗಿದೆ. ಈ ವಿಷಯವನ್ನು ಹೇಳಲು ಕಾರಣ 87ರಲ್ಲಿ ಹುಟ್ಟಿದ ಮಗ ಗುರುರಾಜನಿಗೆ ಇಂದು 35ನೇ ಹುಟ್ಟುಹಬ್ಬದ ಸಂಭ್ರಮ. ಅಂದು ನನ್ನ ಕಷ್ಟಕಾಲದಲ್ಲಿ ಹುಟ್ಟಿದ ಮಗ ಗುರುರಾಜನಿಗೆ ಇಂದು ನನ್ನ ಮುದ್ದಿನ ಮೊಮ್ಮಗ ಅರ್ಜುನನಿಗೆ ಅಪ್ಪನಾಗಿದ್ದಾನೆ. ಹುಟ್ಟುಹಬ್ಬದ ಶುಭಾಶಯ ಮಗನೆ ಎಂದು ಬರೆದುಕೊಂಡು ಬಾಲ್ಯದಿಂದ ಇಲ್ಲಿಯವರೆಗೂ ಜೊತೆಯಾಗಿ ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?

    ಜಗ್ಗೇಶ್ ಅವರು ತಮ್ಮ ಮಗನಿಗೆ ವಿಭಿನ್ನವಾಗಿ ಶುಭ ಕೋರಿರುವುದರ ಜೊತೆಗೆ ಭಾವನಾತ್ಮಕವಾದ ಆ ಸಾಲುಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಏನೇ ಆಗು-ಹೋಗುಗಳಿದ್ದರೂ ನಟ ಜಗ್ಗೇಶ್ ಧ್ವನಿ ಎತ್ತುತ್ತಾರೆ. ಜಗ್ಗೇಶ್ ಅವರ ಸಿನಿಮಾಗಳ ಮೂಲಕ ಮಾತ್ರವಲ್ಲ, ಸಾಮಾಜಿಕ ಜಾಲತಾಣದ ಮೂಲಕ ಜನರ ಜೊತೆಗೆ ಸದಾ ಕನೆಕ್ಟ್ ಆಗಿ ಇರುತ್ತಾರೆ. ತಮ್ಮ ಬದುಕಿನ ಹಲವು ವಿಚಾರಗಳನ್ನು ಆಗಾಗ ರಿವೀಲ್ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಪ್ರೀಮಿಯಂ ಪದ್ಮಿನಿ, ಕಾಳಿದಾಸ ಕನ್ನಡ ಮೇಸ್ಟ್ರು ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ರಂಗನಾಯಕಿ ಚಿತ್ರಿಕರಣದಲ್ಲಿ ಜಗ್ಗೇಶ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಕರುನಾಡ ರತ್ನ ಅಪ್ಪು ದನಿಯಾಗಿದ್ದ ‘ಹರೀಶ ವಯಸ್ಸು 36’ ಚಿತ್ರದ ಹಾಡಿಗೆ ಸಿನಿರಸಿಕರ ಮೆಚ್ಚುಗೆ..!

     

  • ಹೆಣ್ಣಿನ ಸೂಕ್ಷ್ಮ ತಲ್ಲಣಕ್ಕೆ ಕಣ್ಣಾಗುವ ‘ರಂಗನಾಯಕಿ’!

    ಹೆಣ್ಣಿನ ಸೂಕ್ಷ್ಮ ತಲ್ಲಣಕ್ಕೆ ಕಣ್ಣಾಗುವ ‘ರಂಗನಾಯಕಿ’!

    ಬೆಂಗಳೂರು: ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗೋ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದ ಚಿತ್ರ ರಂಗನಾಯಕಿ. ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ಗಮನ ಹರಿಸದ ಸೂಕ್ಷ್ಮ ಕಥೆಗಳತ್ತಲೇ ಹೆಚ್ಚು ಒತ್ತು ನೀಡುವವರು ನಿರ್ದೇಶಕ ದಯಾಳ್ ಪದ್ಮನಾಭನ್. ಅವರು ನಿರ್ಭಯಾ ಅತ್ಯಾಚಾರ ಪ್ರಕರಣದಂಥಾ ಘಟನೆಯನ್ನು ಬೇಸ್ ಆಗಿಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡುತ್ತಾರೆಂಬ ಸುದ್ದಿ ಜಾಹೀರಾದ ಕ್ಷಣದಿಂದಲೇ ಗಾಢವಾದ ಕುತೂಹಲ ಮೂಡಿಕೊಂಡಿತ್ತು. ಅದಕ್ಕೆ ತಕ್ಕುದಾದ ವಿಚಾರಗಳೇ ಜಾಹೀರಾಗುತ್ತಾ ಸಾಗಿದ್ದರಿಂದಾಗಿ ರಂಗನಾಯಕಿಯತ್ತ ಎಲ್ಲ ವರ್ಗಗಳ ಪ್ರೇಕ್ಷಕರೂ ಕೂಡಾ ಚಿತ್ರ ನೆಟ್ಟಿದ್ದರು. ಅಂಥಾ ಅಗಾಧ ನಿರೀಕ್ಷೆ, ಕುತೂಹಲದ ಒಡ್ಡೋಲಗದಲ್ಲಿಯೇ ಈ ಚಿತ್ರವೀಗ ತೆರೆ ಕಂಡಿದೆ. ಹೆಣ್ಣೊಬ್ಬಳ ಸೂಕ್ಷ್ಮ ತಲ್ಲಣಗಳಿಗೆ ಕಣ್ಣಾಗುವಂತೆ, ಅದರ ಆಚೀಚೆಗೂ ಗಹನವಾದ ಕಥೆಯನ್ನೊಳಗೊಂಡು ಈ ಚಿತ್ರ ಪ್ರತೀ ಪ್ರೇಕ್ಷಕರನ್ನೂ ಕಾಡುವಂತೆ ಮೂಡಿ ಬಂದಿದೆ.

    ಹೆಣ್ಣಿನ ಮೇಲೆ ನಿರಂತರವಾಗಿ ಒಂದಿಲ್ಲೊಂದು ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದಂಥಾ ಘೋರ ಆಘಾತವೂ ಹೆಣ್ಣಿನ ಬದುಕನ್ನು ಕಂಗಾಲು ಮಾಡಿ ಹಾಕುತ್ತಿವೆ. ಇಂಥಾ ಭೀಕರ ಆಘಾತಕ್ಕೀಡಾದ ಹೆಣ್ಣೊಬ್ಬಳು ಈ ಸಮಾಜವನ್ನು, ಇಲ್ಲಿನ ಪಲ್ಲಟಗಳನ್ನು ಹೇಗೆಲ್ಲ ಎದುರುಗೊಳ್ಳ ಬಹುದೆಂಬ ಕಾಲ್ಪನಿಕ ಕಥೆಯನ್ನು ನಿರ್ದೇಶಕ ದಯಾಳ್ ವಾಸ್ತವಿಕ ನೆಲೆಗಟ್ಟಿನಲ್ಲಿ ನಿರೂಪಿಸಿದ್ದಾರೆ. ಅದು ಅತ್ಯಾಚಾರಕ್ಕೀಡಾದ ಹೆಣ್ಣೊಬ್ಬಳ ಆತ್ಮ ಮರ್ಮರ. ನಮ್ಮದೇ ಸಮಾಜದಲ್ಲಿ ನಮ್ಮ ನಡುವಿದ್ದರೂ ಒಳಗಿವಿಗೆ ಮಾತ್ರವೇ ಕೇಳುವಂಥಾ ಆ ರೀತಿಯ ಮಿಡಿತಗಳನ್ನು ದಯಾಳ್ ದೊಡ್ಡ ಸ್ವರದಲ್ಲಿ, ತಣ್ಣಗಿನ ಶೈಲಿಯಲ್ಲಿ ನಿರೂಪಿಸಿದ ರೀತಿಯೇ ಅದ್ಭುತ.

    ಈವರೆಗೂ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದ ಅದಿತಿ ಪ್ರಭುದೇವ ಇಲ್ಲಿ ಅನಾಥ ಹುಡುಗಿಯಾಗಿ, ಅತ್ಯಾಚಾರದಂಥಾ ಆಘಾತಕ್ಕೀಡಾದ ನಂತರದ ಚಹರೆಯಲ್ಲಿಯೂ ನಟಿಸಿರೋ ರೀತಿಯನ್ನು ಯಾರೇ ಆದರೂ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಆಕೆ ತಬ್ಬಲಿತನವನ್ನೇ ಬೆನ್ನಿಗಿಟ್ಟುಕೊಂಡಂತಿರೋ ಅನಾಥೆ. ಈ ಕಾರಣದಿಂದಲೇ ಆಸುಪಾಸಿನಲ್ಲಿ ಸುಳಿದಾಡುವವರನ್ನೆಲ್ಲ ತನ್ನವರೆಂಬಂಥಾ ಪ್ರೀತಿಯಿಂದ ಜೀವಿಸುತ್ತಾಳೆ. ಅನಾಥ ಪ್ರಜ್ಞೆಯನ್ನು ಮೀರಿಕೊಳ್ಳಲು ಹಚ್ಚಿಕೊಂಡಿದ್ದ ಸಂಗೀತದ ಗುಂಗೇ ಬದುಕು ರೂಪಿಸುತ್ತೆ. ಬೆಳದ ಮೇಲೆ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಿಸುತ್ತಾ, ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾ ಒಂದಷ್ಟು ಮಂದಿಯ ಪುಟ್ಟ ಪ್ರಪಂಚದಲ್ಲಿ ಹಾಯಾಗಿಯೇ ಇರುತ್ತಾಳೆ.

    ಇಂಥಾ ನಾಯಕಿಗೆ ನಾಯಿಗಳೊಂದಷ್ಟು ಮುಗಿಬಿದ್ದು ಕಾಡಿಸುವಂತೆ ಆಗಾಗ ಕನಸು ಬೀಳುತ್ತಿರುತ್ತೆ. ಒಂದಷ್ಟು ಕಾಲದ ನಂತರ ಅದು ನಿಜವೂ ಆಗುತ್ತೆ. ಸಾಮಾನ್ಯವಾಗಿ ಅತ್ಯಾಚಾರದಂಥಾ ಆಘಾತದ ನಂತರ ಬದುಕಿಗೆ ಅರ್ಥವಿಲ್ಲ ಎಂಬಂಥಾ ವಾತಾವರಣವಿದೆ. ಆದರೆ ಇಲ್ಲಿನ ಕಥೆ ಅಲ್ಲಿಂದಲೇ ಆರಂಭವಾಗುತ್ತೆ. ರಂಗನಾಯಕಿಯ ಮುಂದೆ ನಿಜವಾದ ಪ್ರೀತಿ, ಭ್ರಮೆಗಳ ವಾಸ್ತವ ಜಗತ್ತು ಬಿಚ್ಚಿಕೊಳ್ಳಲಾರಂಭಿಸುತ್ತೆ. ಅದಿತಿ ಪ್ರಭುದೇವ ಅವರಂತೂ ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಗೆಳತಿಯಾಗಿ ಲಾಸ್ಯಾ ನಾಗರಾಜ್ ಅವರದ್ದೂ ಗಮನಾರ್ಹ ಅಭಿನಯ.

    ಇನ್ನುಳಿದಂತೆ ತ್ರಿವಿಕ್ರಮ್, ಎಂ ಜಿ ಶ್ರೀನಿವಾಸ್, ಪೊಲೀಸ್ ಅಧಿಕಾರಿಯಾಗಿ ನಟಿಸಿರೋ ಚಂದ್ರಚೂಡ್ ಮತ್ತು ನ್ಯಾಯಾಧೀಶರ ಪಾತ್ರಕ್ಕೆ ಜೀವ ತುಂಬಿರೋ ಸುಚೇಂದ್ರಪ್ರಸಾದ್ ಸೇರಿದಂತೆ ಎಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ದಯಾಳ್ ಪದ್ಮನಾಭನ್ ಅಷ್ಟೊಂದು ಅಚ್ಚುಕಟ್ಟಾಗಿ, ಎಲ್ಲರೆದೆಗೂ ತಾಕುವಂತೆ, ಒಂದರೆ ಕ್ಷಣವೂ ಬೋರು ಹೊಡೆಸದಂತೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಈ ಮೂಲಕ ನಿರ್ಮಾಪಕ ಎಸ್ ವಿ ನಾರಾಯಣ್ ಅವರ ಶ್ರಮವೂ ಸಾರ್ಥಕಗೊಂಡಿದೆ. ಒಟ್ಟಾರೆಯಾಗಿ ಇದೊಂದು ಅಪರೂಪದ ಚಿತ್ರ. ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರವೂ ಹೌದು.

    ರೇಟಿಂಗ್: 4/5

  • ಪುಟ್ಟಣ್ಣ ಕಣಗಾಲ್‍ಗೆ ರಂಗನಾಯಕಿಯ ಗೌರವ!

    ಪುಟ್ಟಣ್ಣ ಕಣಗಾಲ್‍ಗೆ ರಂಗನಾಯಕಿಯ ಗೌರವ!

    ಬೆಂಗಳೂರು: ರಂಗನಾಯಕಿ ಎಂಬ ಹೆಸರು ಕೇಳಿದಾಕ್ಷಣವೇ ಕನ್ನಡದ ಪ್ರೇಕ್ಷಕರಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನೆನಪಾಗುತ್ತಾರೆ. ಆರತಿಯವರ ಮನೋಜ್ಞ ಅಭಿನಯ ನೆನಪಾಗುತ್ತದೆ. ಆ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿ ಸೂಪರ್ ಹಿಟ್ ಆಗಿದ್ದ ಈ ಚಿತ್ರ ಈವರೆಗೂ ತನ್ನೆಡೆಗಿನ ಕ್ರೇಜ್ ಆನ್ನು ಹಾಗೆಯೇ ಕಾಯ್ದಿಟ್ಟುಕೊಂಡು ಬಂದಿದೆ. ಇದೀಗ ದಯಾಳ್ ಪದ್ಮನಾಭನ್ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ನಿರ್ದೇಶನ ಮಾಡಿರೋ ಚಿತ್ರ ಇದೇ ನವೆಂಬರ್ ಎಂಟರಂದು ತೆರೆಗಾಣುತ್ತಿದೆ.

    ಒಂದು ಯಶಸ್ವೀ ಚಿತ್ರದ ಶೀರ್ಷಿಕೆಯಲ್ಲಿಯೆ ಹೊಸಾ ಚಿತ್ರಗಳು ತೆರೆ ಕಾಣೋದೇನು ಹೊಸತಲ್ಲ. ಆದರೆ ಕಥೆ ಪೂರಕವಾಗಿ, ಮೂಲ ಚಿತ್ರದ ಘನತೆಯನ್ನು ಮತ್ತಷ್ಟು ಮಿರುಗಿಸುವಂಥಾ ಕಥೆಗಳು ದೃಷ್ಯ ರೂಪ ಪಡೆಯೋದು ಮಾತ್ರ ಅಪರೂಪದ ಬೆಳವಣಿಗೆ. ಆರಂಭದಲ್ಲಿ ಕಣಗಾಲ್ ನಿರ್ದೇಶನದ ರಂಗನಾಯಕಿ ಎಂಬ ಶೀರ್ಷಿಕೆಯನ್ನು ತಮ್ಮ ಚಿತ್ರಕ್ಕಿಡೋ ಸಂದರ್ಭ ಬಂದಾಗ ಖುದ್ದು ದಯಾಳ್ ಅವರೇ ತಲ್ಲಣಿಸಿದ್ದರಂತೆ. ರಂಗನಾಯಕಿಯ ಹೆಸರಿಗೆ ಕುಂದುಂಟಾಗದಂತೆ ಈ ಸಿನಿಮಾ ನಿರ್ದೇಶನ ಮಾಡಲು ತನ್ನಿಂದ ಸಾಧ್ಯವಾಗುತ್ತದಾ ಎಂದು ಕೇಳಿಕೊಂಡಿದ್ದರಂತೆ.

    ಇದೀಗ ರಂಗನಾಯಕಿ ರೆಡಿಯಾಗಿ ನಿಂತಿದೆ. ದಯಾಳ್ ಕೂಡಾ ನಿರಾಳ ಭಾವದಿಂದಿದ್ದಾರೆ. ಇದು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಗೌರವ ಸೂಚಿಸುವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಸಾರ್ಥಕ ಭಾವ ಅವರಲ್ಲಿದೆ. ಈ ಚಿತ್ರ ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಿರೋದೇ ಒಂದು ಗೌರವದ ವಿಚಾರ. ಅದು ಪುಟ್ಟಣ್ಣ ಕಣಗಾಲ್ ಅವರಂಥಾ ಮೇರು ನಿರ್ದೇಶಕನಿಗೆ ಸಲ್ಲಿಸೋ ಮಹಾ ಗೌರವ ಎಂಬುದರಲ್ಲಿ ಎರಡು ಮಾತಿಲ್ಲ. ಬಿಡುಗಡೆ ಪೂರ್ವದಲ್ಲಿಯೇ ಇಷ್ಟೊಂದು ಮಿಂಚುತ್ತಿರೋ ರಂಗನಾಯಕಿ ಬಿಡುಗಡೆಯ ನಂತರ ದೇಶ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ.

  • ರಂಗನಾಯಕಿ: ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರ!

    ರಂಗನಾಯಕಿ: ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರ!

    ಬೆಂಗಳೂರು: ಕನ್ನಡ ಚಿತ್ರಗಳು ಕರ್ನಾಟಕಕ್ಕೆ ಮಾತ್ರವೇ ಸೀಮಿತ ಎಂಬಂಥಾ ವಾತಾವರಣ ಹಲವಾರು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ಆದರೆ ಕನ್ನಡ ಸಿನಿಮಾಗಳು ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತವೆ, ಪರಭಾಷಾ ಚಿತ್ರಗಳೆದುರೂ ಸ್ಪರ್ಧೆಯೊಡ್ಡಿ ಗೆದ್ದು ಬೀಗುತ್ತವೆಂಬುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿಯೇ ಮನನವಾಗಿದೆ. ಕೆಜಿಎಫ್‍ನಂಥಾ ಚಿತ್ರಗಳು ಅದನ್ನು ಮತ್ತಷ್ಟು ಸ್ಪಷ್ವಾಗಿಯೇ ಸಾಬೀತುಗೊಳಿಸಿವೆ. ಇತ್ತೀಚೆಗೆ ಶುರುವಾಗಿರೋ ಕನ್ನಡ ಚಿತ್ರಗಳ ಖದರ್ ಅನ್ನು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ರಂಗನಾಯಕಿ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಿರುಗುವಂತೆ ಮಾಡಿದೆ.

    ಪ್ರತೀ ಬಾರಿ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಸ್ಥಾನ ಗಿಟ್ಟಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದವು. ಆದರೆ ತೀವ್ರ ಸ್ಪರ್ಧೆಯೊಡ್ಡಿದರೂ ಅದು ಸಾಧ್ಯವಾಗಿರಲಿಲ್ಲ. ಆದರೆ ರಂಗನಾಯಕಿ ವಿಚಾರದಲ್ಲಿ ಬಹು ಕಾಲದ ಕನಸು ಕೈಗೂಡಿದೆ. ಈ ಚಿತ್ರ ಗೋವಾ ಫಿಲಂ ಫೆಸ್ಟಿವಲ್‍ನ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಮೂಲಕ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರೋ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರದ ಪಾಲಾಗಿದೆ.

    ಇದು ಪ್ರತಿಯೊಬ್ಬರೂ ಹೆಮ್ಮೆ ಪಡುವಂಥಾ ಸಂಗತಿ. ಈ ಮೂಲಕವೇ ದಯಾಳ್ ಕನ್ನಡ ಚಿತ್ರರಂಗದ ತಾಕತ್ತೇನೆಂಬುದನ್ನು ಇಡೀ ದೇಶಕ್ಕೇ ತೋರಿಸಿಕೊಟ್ಟಿದ್ದಾರೆ. ಅದೇನು ಸಾಮಾನ್ಯದ ಸಾಧನೆಯಲ್ಲ. ವಿಶ್ವಾದ್ಯಂತ ಬೇರೆ ಬೇರೆ ಭಾಷೆಗಳ ನೂರಾರು ಚಿತ್ರಗಳೊಂದಿಗೆ ಸರ್ಧೆಯೊಡ್ಡಿ ಜಯಿಸಿಕೊಂಡರೆ ಮಾತ್ರವೇ ಈ ಸಿನಿಮೋತ್ಸವಕ್ಕೆ ಪ್ರವೇಶ ಸಿಗುತ್ತದೆ. ಅದನ್ನು ರಂಗನಾಯಕಿ ಚಿತ್ರ ಸಮರ್ಥವಾಗಿಯೇ ಮಾಡಿ ತೋರಿಸಿದೆ. ಇದು ಸದರಿ ಚಿತ್ರದ ಭಿನ್ನವಾದ ಹೂರಣದ ಪ್ರತಿಫಲ. ಇನ್ನೇನು ವಾರದೊಪ್ಪತ್ತಿನಲ್ಲಿಯೇ ಬಿಡುಗಡೆಗೊಳ್ಳಲಿರೋ ರಂಗನಾಯಕಿ ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ.

  • ಈ ಬಾರಿಯ ನವೆಂಬರ್ ಸಂಭ್ರಮಕ್ಕೆ ರಂಗು ತುಂಬಿಸುತ್ತಾಳೆ ರಂಗನಾಯಕಿ!

    ಈ ಬಾರಿಯ ನವೆಂಬರ್ ಸಂಭ್ರಮಕ್ಕೆ ರಂಗು ತುಂಬಿಸುತ್ತಾಳೆ ರಂಗನಾಯಕಿ!

    ಬೆಂಗಳೂರು: ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಅಭೂತಪೂರ್ವ ನಿರೀಕ್ಷೆಗಳೊಂದಿಗೆ ನವೆಂಬರ್ ಒಂದರಂದು ತೆರೆಗಾಣಲು ತಯಾರಾಗಿದೆ. ದಯಾಳ್ ಚಿತ್ರಗಳೆಂದ ಮೇಲೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಅದಕ್ಕೆ ಕಾರಣವಾಗಿರೋದು ಇದುವರೆಗೂ ಅವರು ಸೋಕುತ್ತಾ ಬಂದಿರುವ ಭಿನ್ನ ಕಥಾ ಹಂದರ. ಯಾರಿಗೇ ಆದರೂ ಇದು ಆರ್ಟ್ ಮೂವಿಗೆ ಮಾತ್ರವೇ ಹೊಂದಿಕೊಳ್ಳುವ ಕಥೆ ಎಂಬುದಕ್ಕೂ ಅವರು ಕಮರ್ಶಿಯಲ್ ಟಚ್ ಕೊಟ್ಟು ಬಿಡುತ್ತಾರೆ. ಈ ಮಾತಿಗೆ ಆ ಕರಾಳ ರಾತ್ರಿ, ತ್ರಯಂಬಕಂನಂಥಾ ಒಂದಷ್ಟು ಉದಾಹರಣೆಗಳಿವೆ. ದಯಾಳ್ ಅವರ ಈವರೆಗಿನ ಸಿನಿಮಾ ಯಾನದಲ್ಲಿಯೇ ಇದೀಗ ಬಿಡುಗಡೆಗೆ ರೆಡಿಯಾಗಿರುವ ರಂಗನಾಯಕಿ ಒಂದು ವಿಶಿಷ್ಟ ಚಿತ್ರ. ಈ ಮಾತಿಗೆ ಇತ್ತೀಚೆಗೆ ಲಾಂಚ್ ಆಗಿದ್ದ ಟ್ರೇಲರ್ ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹೀಗೆ ಸಕಾರಾತ್ಮಕ ವಾತಾವರಣದ ನಡುವೆ ಇದೇ ನವೆಂಬರ್ ಒಂದರಂದು ರಂಗನಾಯಕಿ ರಂಗ ಪ್ರವೇಶ ಮಾಡಲಿದ್ದಾಳೆ.

    ಈ ಹಿಂದೆ ಅಟೆಂಪ್ಟ್ ಟು ಮರ್ಡರ್ ಎಂಬ ಚಿತ್ರ ನಿರ್ಮಾಣ ಮಾಡಿದ್ದ ನಾರಾಯಣ್ ರಂಗನಾಯಕಿಯನ್ನು ಬಲು ಶ್ರದ್ಧೆಯಿಂದಲೇ ಬಂಡವಾಳ ಹೂಡಿ ಪೊರೆದಿದ್ದಾರೆ. ತಾವು ನಿರ್ಮಾಣ ಮಾಡುವ ಚಿತ್ರಗಳ ಸಂಖ್ಯೆಗಿಂತಲೂ ಅವೆಲ್ಲವೂ ಅಪರೂಪದವುಗಳಾಗಿರ ಬೇಕೆಂಬುದೇ ನಾರಾಯಣ್ ಅವರ ಇಂಗಿತ. ಅದಕ್ಕೆ ತಕ್ಕುದಾದ ಕಥೆಯಾದ್ದರಿಂದಲೇ ಅವರು ರಂಗನಾಯಕಿಯನ್ನು ಬಲು ಆಸ್ಥೆಯಿಂದಲೇ ನಿರ್ಮಾಣ ಮಾಡಿ ಪೊರೆದಿದ್ದಾರೆ. ಅಷ್ಟಕ್ಕೂ ಈ ಕಥೆ ತುಂಬಾನೇ ವಿಶೇಷವಾದದ್ದು ಮತ್ತು ಸೂಕ್ಷ್ಮವಾದದ್ದೆಂಬ ವಿಚಾರ ಈಗಾಗಲೇ ಪ್ರೇಕ್ಷಕರಿಗೆಲ್ಲ ತಿಳಿದು ಹೋಗಿದೆ.

    ಅತ್ಯಾಚಾರದಂಥಾ ಪೈಶಾಚಿಕ ಘಟನಾವಳಿಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಆದರೆ ಅಂಥಾ ವಿಕೃತಿಗೆ ಬಲಿಯಾದ ಹೆಣ್ಣು ಜೀವಗಳು ಈ ಸಮಾಜವನ್ನು ಎದುರಿಸೋದು ಸಾಮಾನ್ಯವಾದ ಸಂಗತಿಯಲ್ಲ. ಹಾಗೆ ಅತ್ಯಾಚಾರಕ್ಕೀಡಾದ ಹೆಣ್ಣಿನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಹಾಗಂಥಾ ಇದರ ಕಥೆ ಇಂಥಾ ನೊಂದ ಜೀವಗಳತ್ತ ಸಿಂಪಥಿ ಹರಿಸೋವಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಆ ಸಂಕಟವೇನೆಂಬುದನ್ನು ಜನರತ್ತ ದಾಟಿಸುತ್ತಲೇ ಆ ಬಗ್ಗೆ ಸಮಾಜದಲ್ಲೊಂದು ಜಾಗೃತಿ ಮೂಡಿಸೋ ಸನ್ನಿವೇಶಗಳೂ ಇಲ್ಲಿವೆ. ಇಂಥಾ ವಿಶೇಷತೆಗಳು ಇಲ್ಲದೇ ಹೋಗಿದ್ದರೆ ಈ ಚಿತ್ರ ಗೋವಾ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ.

    ಈ ಚಿತ್ರದಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಅದಿತಿ ಬಹಳಷ್ಟು ಇಷ್ಟಪಟ್ಟು ಒಪ್ಪಿಕೊಂಡಿರೋ ಚಿತ್ರವಿದು. ಅವರಿಗಿಲ್ಲಿ ಸಿಕ್ಕಿರೋದು ಸವಾಲಿನ ಪಾತ್ರ. ಅತ್ಯಾಚಾರದಂಥಾ ಬೀಭತ್ಸ ಕೃತ್ಯಕ್ಕೆ ಬಲಿಯಾದ ಹೆಣ್ಣೊಬ್ಬಳ ಮರ್ಮರವನ್ನು ಆವಾಹಿಸಿಕೊಂಡು ಅದಿತಿ ನಟಿಸಿದ್ದಾರಂತೆ. ಅದರ ಝಲಕ್ಕುಗಳು ಈಗಾಗಲೇ ಟ್ರೇಲರ್ ಮೂಲಕವೇ ಜಾಹೀರಾಗಿವೆ. ಒಟ್ಟಾರೆಯಾಗಿ ಈ ಸಿನಿಮಾ ಬಗ್ಗೆ ಆರಂಭದಿಂದಲೂ ಜನ ಆಕರ್ಷಿತರಾಗಿದ್ದರು. ಈಗಂತೂ ರಂಗನಾಯಕಿಯನ್ನು ಕಣ್ತುಂಬಿಕೊಳ್ಳುವ ಕಾತರ ಹೆಚ್ಚಾಗಿದೆ. ನವೆಂಬರ್ ಒಂದರಂದು ರಂಗನಾಯಕಿ ಎಲ್ಲರ ಕಣ್ಮುಂದೆ ಪ್ರತ್ಯಕ್ಷವಾಗಲಿದ್ದಾಳೆ.

  • ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗೆ ರಂಗನಾಯಕಿ ಎಂಟ್ರಿ!

    ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗೆ ರಂಗನಾಯಕಿ ಎಂಟ್ರಿ!

    ಬೆಂಗಳೂರು: ನಮ್ಮ ನಡುವೆಯೇ ನಡೆಯೋ ವಿದ್ಯಮಾನಗಳನ್ನು ಎಲ್ಲ ಮಾಮೂಲಿಯೆಂಬ ಯಾಂತ್ರಿಕ ತಿರುಗಣಿಗೆಸೆದು ಮರೆತು ಬಿಡುವ, ಕಡೆಗಣಿಸುವವರೇ ಹೆಚ್ಚು. ಅಂಥಾ ಸೂಕ್ಷ್ಮ ವಿಚಾರಗಳನ್ನೇ ಸಿನಿಮಾವಾಗಿಸಿ ಮತ್ತೆ ನಮ್ಮದೇ ಮನಸಿಗೆ ನಾಟುವಂತೆ ಮಾಡೋದಿದೆಯಲ್ಲಾ? ಅದು ನಿಜವಾದ ಕಸುಬುದಾರಿಕೆ. ಅದರಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಪಳಗಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಅಮೋಘವಾದ ಗೆಲುವನ್ನೂ ಕಂಡಿದ್ದಾರೆ. ಹೀಗೆ ಸಲೀಸಾಗಿ ಯಾರೂ ಸೋಕಲಾರದ ಕಥೆಗಳ ಒಳಗೆ ಪಾತಾಳಗರಡಿ ಹಾಕಿ ದೃಶ್ಯ ಕಟ್ಟುವ ಕಲೆಗಾರಿಕೆಯಿಂದಲೇ ಅವರು ರಂಗನಾಯಕಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಈ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗೋದರ ಜೊತೆಗೇ ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯಂಥಾ ಮತ್ತೊಂದು ವಿಚಾರವೂ ಹೊರಬಿದ್ದಿದೆ!

    ಎಸ್.ವಿ ನಾರಾಯಣ್ ನಿರ್ಮಾಣ ಮಾಡಿರೋ ರಂಗನಾಯಕಿ ನವೆಂಬರ್ ಒಂದರಂದು ತೆರೆಗಾಣಲಿದೆ. ಅದಾಗಲೇ ಈ ಚಿತ್ರ ಈ ವರ್ಷದ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂಡಿಯನ್ ಪನೋರಮಾ ವಿಭಾಗದಿಂದ ಆಯ್ಕೆಯಾಗಿದೆ. ಇದಕ್ಕೆ ಆಯ್ಕೆಯಾದ ಈ ವರ್ಷದ ಏಕೈಕ ಕನ್ನಡ ಚಿತ್ರವೆಂಬ ಗರಿಮೆಯೂ ರಂಗನಾಯಕಿಯ ಮುಡಿಗೇರಿಕೊಂಡಿದೆ. ಈ ಬಗ್ಗೆ ಇಡೀ ಚಿತ್ರತಂಡವೇ ಸಂಭ್ರಮದಲ್ಲಿದೆ. ಅಂದಹಾಗೆ ಇದರ ಕಥಾ ಹಂದರದ ಸ್ವರೂಪವೇ ಇಂಥಾದ್ದೊಂದು ದಾಖಲೆಗೆ ದಾರಿ ಮಾಡಿ ಕೊಟ್ಟಿದೆ. ಇದುವೇ ರಂಗನಾಯಕಿಯ ಗೆಲುವಿನ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ.

    ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಅದಿತಿ ಪ್ರಭುದೇವ ರಂಗನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇದು ಅತ್ಯಾಚಾರಕ್ಕೀಡಾದ ಹೆಣ್ಣುಮಗಳೊಬ್ಬಳ ಮನದ ಮರ್ಮರದ ಆಂತರ್ಯ ಹೊಂದಿರೋ ಕಥೆ. ನಮ್ಮೆಲ್ಲರ ಅರಿವಿಗೆ ಬಂದು ಸಾವಿರ ಸುದ್ದಿಗಳ ನಡುವೆ ಸದ್ದಿಲ್ಲದ ಸರಕಾಗಿ ಕಳೆದು ಹೋಗುವ ಅತ್ಯಾಚಾರದಂಥಾ ಕೃತ್ಯ ಅದನ್ನನುಭವಿಸಿದ ಜೀವದ ಪಾಲಿಗೆ ನಿತ್ಯ ನರಕ. ಅಂಥಾದ್ದನ್ನು ಅನುಭವಿಸುತ್ತಲೇ ಈ ಸಮಾಜವನ್ನು ಹೆಣ್ಣೊಬ್ಬಳು ಎದುರಿಸೋ ಬಗೆ ಈ ಸಿನಿಮಾದ ಒಂದೆಳೆ. ಆದರೆ ಇಡೀ ಚಿತ್ರ ಈ ಒಂದೆಳೆಯಷ್ಟು ಸರಳವಾದುದಲ್ಲ. ದಯಾಳ್ ಪದ್ಮನಾಭನ್ ಯಾವುದೇ ಕಥೆಯೇ ಆದರೂ ಇಂಚಿಂಚು ಸೂಕ್ಷ್ಮ ಅಂಶಗಳನ್ನೂ ಹೆಕ್ಕಿಕೊಂಡು ದೃಶ್ಯ ಕಟ್ಟುವ ಛಾತಿ ಹೊಂದಿರುವವರು. ಅವರು ರಂಗನಾಯಕಿಯನ್ನೂ ಕೂಡಾ ಅಷ್ಟೇ ಆಸ್ಥೆಯಿಂದ ಪೊರೆದಿದ್ದಾರೆ.

    ಇಂಥಾ ಸೂಕ್ಷ್ಮವಾದ, ಸಮಾಜಕ್ಕೆ ಸಂದೇಶ ರವಾನಿಸೋ ಕಥೆಗೆ ಕಮರ್ಶಿಯಲ್ ಚೌಕಟ್ಟು ಹಾಕೋದು ನಿರ್ದೇಶನದ ದೃಷ್ಟಿಯಿಂದ ಸವಾಲಿನ ಕೆಲಸ. ಅದನ್ನು ದಯಾಳ್ ಪದ್ಮನಾಭನ್ ಸ್ವೀಕರಿಸಿದ್ದಾರೆ. ಆದರೆ ಅದು ಸಾಧ್ಯವಾದದ್ದು, ಪರಿಣಾಮಕಾರಿಯಾಗಿರೋದು ಎಸ್.ವಿ ನಾರಾಯಣ್ ಅವರಂಥಾ ಕಲಾಭಿರುಚಿಯ ನಿರ್ಮಾಪಕರ ಕಾರಣದಿಂದ. ಈ ಹಿಂದೆ ಎಟಿಎಂ ಎಂಬ ಸಿನಿಮಾ ನಿರ್ಮಾಣ ಮಾಡೋ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಾರಾಯಣ್ ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿರುವವರು. ತಾವು ನಿರ್ಮಾಣ ಮಾಡೋ ಚಿತ್ರಗಳ ಸಂಖ್ಯೆಗಿಂತ ಗುಣಮಟ್ಟವೇ ಮುಖ್ಯ ಎಂಬ ಮನೋಭಾವ ಹೊಂದಿರೋ ನಾರಾಯಣ್ ಆ ಪ್ರೀತಿಯಿಂದಲೇ ರಂಗನಾಯಕಿಗೆ ಸಾಥ್ ಕೊಟ್ಟಿದ್ದಾರೆ. ಆ ಬಲದಿಂದಲೇ ಈ ಚಿತ್ರವಿಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗೋ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಎತ್ತಿ ಹಿಡಿದಿದೆ.

  • ಕೃಷ್ಣನನ್ನು ಕರೆದಳು ರಂಗನಾಯಕಿ!

    ಕೃಷ್ಣನನ್ನು ಕರೆದಳು ರಂಗನಾಯಕಿ!

    ಬೆಂಗಳೂರು: 1981ರಲ್ಲಿ ಹಿಂದೆ ಕಾಲದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ‘ರಂಗನಾಯಕಿ’ ಸಿನಿಮಾ ಬಂದಿದ್ದು, ದಾಖಲೆ ನಿರ್ಮಿಸಿದ್ದೀಗ ಇತಿಹಾಸ. ಅದೇ ‘ರಂಗನಾಯಕಿ’ ಶೀರ್ಷಿಕೆಯಲ್ಲೇ ಮತ್ತೊಂದು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ವರ್ಷಕ್ಕೆ ಮುಂಚೆ ‘ಅಟೆಂಪ್ಟ್ ಟು ಮರ್ಡರ್’ ಸಿನಿಮಾವನ್ನು ನಿರ್ಮಿಸಿದ್ದ ಎಸ್.ವಿ ನಾರಾಯಣ್ ನಿರ್ಮಾಣದಲ್ಲಿ, ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ರಂಗನಾಯಕಿ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ, ಎಂ.ಜಿ. ಶ್ರೀನಿವಾಸ್, ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಂಗನಾಯಕಿಯ ಟ್ರೇಲರ್ ಬಿಡುಗಡೆಗೊಂಡು ಸಂಚಲನ ಸೃಷ್ಟಿಸಿತ್ತು. ಈಗ ಈ ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿದೆ. ಕದ್ರಿ ಮಣಿಕಾಂತ್ ಸಂಗೀತ ನೀಡಿರುವ ‘ಕೃಷ್ಣ ನೀ ಬೇಗನೆ ಬಾರೋ’ ಹಾಡಿನ ಲಿರಿಕಲ್ ವಿಡಿಯೋ ಅನಾವರಣಗೊಂಡಿದೆ. ವ್ಯಾಸತೀರ್ಥರು ಬರೆದಿದ್ದ ಈ ಹಾಡನ್ನು ಅನನ್ಯ ಭಗತ್ ಮೋಹಕವಾಗಿ ಹಾಡಿದ್ದಾರೆ.

    ಕಣಗಾಲ್ ಪುಟ್ಟಣ್ಣನವರ ‘ರಂಗನಾಯಕಿ’ಯಂತೆಯೇ ದಯಾಳ್ ಅವರ ‘ರಂಗನಾಯಕಿ’ ಕೂಡ ಮಹಿಳೆಯೊಬ್ಬಳ ಕುರಿತಾದ ಕಥಾಹಂದರ ಹೊಂದಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳೊಬ್ಬಳು ಈ ಸಮಾಜದಲ್ಲಿ ಹೇಗೆ ತಲೆಯೆತ್ತಿನಿಲ್ಲುತ್ತಾಳೆ, ತನಗಾದ ದೌರ್ಜನ್ಯದ ವಿರುದ್ಧ ಹೇಗೆ ದನಿಯೆತ್ತುತ್ತಾಳೆ ಎಂಬುದು ಚಿತ್ರದ ತಿರುಳು. ಈಗ ಬಿಡುಗಡೆಯಾಗಿರುವ ಕೃಷ್ಣ ನೀ ಬೇಗನೆ ಬಾರೋ ಹಾಡು ಪ್ರೇಮಗೀತೆಯಂತೆ ಮೂಡಿಬಂದಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಎಲ್ಲೆಡೆ ತಲುಪಿರುವ ಈ ಲಿರಿಕಲ್ ವಿಡಿಯೋ ಕೇಳಲು ಮಾತ್ರವಲ್ಲ ನೋಡಲು ಸಹಾ ಅಷ್ಟೇ ಮುದ್ದಾಗಿದೆ. ಇದನ್ನು ಓದಿ:  ಟ್ರೇಲರ್‌ನಲ್ಲಿ ಕಂಡಿದ್ದು ಭಿನ್ನ ಕಥೆಯ ರಂಗನಾಯಕಿ!

    ಶ್ರೀಮತಿ ಮಂಜುಳಾ ಮತ್ತು ಎಸ್.ವಿ. ಕೃಷ್ಣಮೂರ್ತಿ ಅರ್ಪಿಸಿರುವ ಎಸ್.ವಿ. ಎಸ್‍ವೀ ಎಂಟರ್‍ಟೈನ್ಮೆಂಟ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಬಿ. ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ, ನವೀನ್ ಕೃಷ್ಣ ಸಂಭಾಷಣೆ, ವೆಂಕಟ್ ದೇವ್ ಸಹನಿರ್ದೇಶನವಿದೆ. ಶ್ರೀನಿ, ಅದಿತಿ ಪ್ರಭುದೇವ ಮತ್ತು ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ: ‘ರಂಗನಾಯಕಿ’ ಶುರುವಾಯ್ತು!

  • ಟ್ರೇಲರ್‌ನಲ್ಲಿ  ಕಂಡಿದ್ದು ಭಿನ್ನ ಕಥೆಯ ರಂಗನಾಯಕಿ!

    ಟ್ರೇಲರ್‌ನಲ್ಲಿ ಕಂಡಿದ್ದು ಭಿನ್ನ ಕಥೆಯ ರಂಗನಾಯಕಿ!

    ಬೆಂಗಳೂರು: ನಿರ್ದೇಶಕ ದಯಾಳ್ ಪದ್ಮನಾಭನ್ ಯಾವ ಚಿತ್ರವನ್ನೇ ಮಾಡಿದರೂ ವಿಶಿಷ್ಟವಾದ ಕಥೆಯನ್ನೇ ಕೈಗೆತ್ತಿಕೊಂಡಿರುತ್ತಾರೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಇತ್ತೀಚೆಗೆ ತೆರೆಗಂಡಿದ್ದ ತ್ರಯಂಬಕಂ ಚಿತ್ರದವರೆಗೂ ಅವರು ಆ ನಂಬಿಕೆಯನ್ನು ಹುಸಿಗೊಳಿಸಿದ್ದೇ ಇಲ್ಲ. ಇದೀಗ ಅವರು ರಂಗನಾಯಕಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದರ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಈ ಮೂಲಕವೇ ಇದು ದಯಾಳ್ ನಿರ್ದೇಶನದ ಇದುವರೆಗಿನ ಚಿತ್ರಗಳಿಗಿಂತಲೂ ಭಿನ್ನವಾದ ಕಥೆಯನ್ನೊಳಗೊಂಡಿರೋ ಸಿನಿಮಾ ಎಂಬ ಭರವಸೆ ಪ್ರೇಕ್ಷಕರಲ್ಲಿ ಮೂಡಿಕೊಂಡಿದೆ.

    ಈ ಟ್ರೇಲರ್ ಬಿಡುಗಡೆಯಾದ ತುಸು ಹೊತ್ತಿನಲ್ಲಿಯೇ ವ್ಯಾಪಕ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಭರ್ಜರಿಯಾದ ಪಾಸಿಟಿವ್ ಕಮೆಂಟುಗಳನ್ನೂ ತನ್ನದಾಗಿಸಿಕೊಳ್ಳುತ್ತಾ ಯೂಟ್ಯೂಬ್ ಟ್ರೆಂಡಿಂಗ್‍ನತ್ತ ಸಾಗುತ್ತಿದೆ. ವ್ಯಾಲ್ಯೂಮ್ 1 ವರ್ಜಿನಿಟಿ ಎಂಬ ಟ್ಯಾಗ್ ಲೈನ್ ಹೊಂದಿರೋ ರಂಗನಾಯಕಿಯ ಕಥೆ ಅತ್ಯಾರಕ್ಕೊಳಗಾದ ಹುಡುಗಿಯೊಬ್ಬಳು ಸಮಾಜವನ್ನು ಎದುರಿಸುವಂಥಾ ಸೂಕ್ಷ್ಮ ಕಥಾಹಂದರವನ್ನೊಳಗೊಂಡಿರೋ ಸ್ಪಷ್ಟ ಸುಳಿವನ್ನು ಈ ಟ್ರೇಲರ್ ಬಿಟ್ಟು ಕೊಟ್ಟಿದೆ. ಇದು ವಿಶೇಷವಾದ ಕಥೆಯ ಮಹಿಳಾಪ್ರಧಾನ ಚಿತ್ರ. ಇಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ರಂಗನಾಯಕಿಯಾಗಿ ಅಮೋಘವಾಗಿ ಅಭಿನಯಿಸಿರೋ ಸ್ಪಷ್ಟ ಲಕ್ಷಣಗಳೂ ಗೋಚರಿಸಿವೆ.

    ದಯಾಳ್ ಪದ್ಮನಾಭನ್ ಅವರಿಗೆ ಈ ಚಿತ್ರದಲ್ಲಿಯೂ ನಟ ನವೀನ್ ಕೃಷ್ಣ ಸಂಭಾಷಣೆಕಾರರಾಗಿ ಸಾಥ್ ಕೊಟ್ಟಿದ್ದಾರೆ. ಅದಿತಿ ಪ್ರಭುದೇವ ಜೊತೆ ಎಂಜಿ ಶ್ರೀನಿವಾಸ್ ಮತ್ತು ತ್ರಿವಿಕ್ರಂ ಮುಖ್ಯ ಪಾತ್ರಗಳ ಮೂಲಕ ಜೊತೆಯಾಗಿದ್ದಾರೆ. ಈ ಹಿಂದೆ ಎಟಿಎಂ ಎಂಬ ಚಿತ್ರ ನಿರ್ಮಾಣ ಮಾಡಿದ್ದ ಎಸ್ ವಿ ನಾರಾಯಣ್ ರಂಗನಾಯಕಿಗೂ ಬಂಡವಾಳ ಹೂಡಿದ್ದಾರೆ. ಹೆಣ್ಣೊಬ್ಬಳು ಅತ್ಯಾಚಾರಕ್ಕೊಳಗಾದರೆ ಕೇಸು ದಾಖಲಿಸಿ ಅತ್ಯಾಚಾರಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲೂ ಪೋಶಕರು ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣ ಈ ಸಮಾಜದ ಭಯ. ಆದರಿಲ್ಲಿ ಅತ್ಯಾಚಾರಕ್ಕೀಡಾದ ನಾಯಕಿಯೇ ಖುದ್ದಾಗಿ ಕೇಸು ದಾಖಲಿಸೋ ದೃಷ್ಯದ ಮೂಲಕ ಇದೊಂದು ಭಿನ್ನ ಕಥೆ ಹೊಂದಿರೋ ಚಿತ್ರವೆಂಬ ಸುಳಿವನ್ನೂ ಈ ಟ್ರೇಲರ್ ಬಿಟ್ಟುಕೊಟ್ಟಿದೆ. ಇದುವೇ ರಂಗನಾಯಕಿಗಾಗಿ ಪ್ರೇಕ್ಷಕರು ನಕಾತರದಿಂದ ಕಾಯುವಂತೆಯೂ ಮಾಡಿದೆ.

  • ‘ರಂಗನಾಯಕಿ’ ಶುರುವಾಯ್ತು!

    ‘ರಂಗನಾಯಕಿ’ ಶುರುವಾಯ್ತು!

    ನಿರ್ದೇಶಕ ದಯಾಳ್ ಪದ್ಮನಾಭನ್ ಕಳೆದ ಒಂಭತ್ತು ತಿಂಗಳಲ್ಲಿ ಮೂರು ಸಿನಿಮಾಗಳನ್ನು ರೂಪಿಸಿ ತೆರೆಗೆ ತಂದಿದ್ದಾರೆ. ಈಗ ಮತ್ತೊಂದು ಸಿನಿಮಾ ಆರಂಭಿಸಿದ್ದಾರೆ. ರಂಗನಾಯಕಿ ಹೆಸರಿನ ಈ ಚಿತ್ರವೀಗ ಟೈಟಲ್ ಲಾಂಚ್ ಮೂಲಕ ಆರಂಭವಾಗಿದ್ದು, ಇದೇ ತಿಂಗಳ 29ರಿಂದ ಚಿತ್ರೀಕರಣ ಶುರುವಾಗಲಿದೆ.

    ಧೈರ್ಯಂ ಸಿನಿಮಾದ ಮೂಲಕ ಸಿನಿಮಾ ನಾಯಕನಟಿಯಾಗಿ ಎಂಟ್ರಿ ಕೊಟ್ಟಿದ್ದ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ಭಯಾ ಪ್ರಕರಣ ನಡೆದ ನಂತರ ದಯಾಳ್ ಒಂದು ಕಾದಂಬರಿಯನ್ನು ಬರೆಯಲು ಆರಂಭಿಸಿದ್ದರಂತೆ. ಕನ್ನಡ ಭಾಷೆ ಗೊತ್ತಿಲ್ಲದ ಕಾರಣ ತಾವು ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ರಚಿಸಿದ್ದರಂತೆ. ಇದನ್ನು ದಯಾಳ್ ಅವರ ಅಸೋಸಿಯೇಟ್ಸ್ ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ರಂಗನಾಯಕಿ ಸಿನಿಮಾದ ಟೈಟಲ್ ಲಾಂಚ್ ಜೊತೆಗೆ ರಂಗನಾಯಕಿ ಕಿರು ಕಾದಂಬರಿ ರೂಪದಲ್ಲೂ ಲೋಕಾರ್ಪಣೆಗೊಂಡಿದೆ. ಡಿಐಜಿ ರೂಪಾ ಅವರು ರಂಗನಾಯಕಿ ಚಿತ್ರದ ಟೈಟಲ್ ಮತ್ತು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.

    ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ರಂಗನಾಯಕಿ ಸಿನಿಮಾದ ಟೈಟಲ್ ಲಾಂಚ್ ಜೊತೆಗೆ ರಂಗನಾಯಕಿ ಕಿರು ಕಾದಂಬರಿ ರೂಪದಲ್ಲೂ ಲೋಕಾರ್ಪಣೆಗೊಂಡಿದೆ. ಡಿಐಜಿ ರೂಪಾ ಅವರು ರಂಗನಾಯಕಿ ಚಿತ್ರದ ಟೈಟಲ್ ಮತ್ತು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.

    “ರಂಗನಾಯಕಿ ಹೆಸರು ಕೇಳಿದರೇನೇ ರೋಮಾಂಚನಗೊಳ್ಳುತ್ತದೆ. ನಾನು ನನ್ನ ಐದನೇ ವಯಸ್ಸಿನಲ್ಲಿ ನನ್ನ ತಂದೆ ತಾಯಿಯೊಂದಿಗೆ ಪುಟ್ಟಣ್ಣ ಕಣಗಾಲರ ರಂಗನಾಯಕಿಯನ್ನು ಚಿತ್ರಮಂದಿರದಲ್ಲಿ ನೋಡಿದ್ದೆ. ಈಗ ಅದೇ ಹೆಸರಿನ ಸಿನಿಮಾದ ಆರಂಭೋತ್ಸವಕ್ಕೆ ನಾನು ಅತಿಥಿಯಾಗಿ ಬಂದಿರೋದು ಖುಷಿ ಎನಿಸುತ್ತಿದೆ. ಹೆಣ್ಣುಮಕ್ಕಳ ಪರವಾದ ಸಾಮಾಜಿಕ ಸಂದೇಶ ಈ ಸಿನಿಮಾದ ಮೂಲಕ ಜಗತ್ತಿಗೆ ರವಾನೆಯಾಗಲಿ” ಎಂದು ರೂಪಾ ಹೇಳಿದರು.

    ನಾಯಕಿ ಅದಿತಿ ಮಾತನಾಡಿ, ಅತ್ಯಾಚಾರದಂತಹ ಅಮಾನವೀಯ ಪ್ರಕರಣಗಳಾದಾಗ ಅದರ ಸುದ್ದಿಗಳನ್ನು ನೋಡಿ ಮನಸ್ಸು ಹಿಂಡುತ್ತದೆ. ಆದರೆ ಈ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳ ಪಾತ್ರದಲ್ಲಿ ನಟಿಸಲಿದ್ದೇನೆ. ಇದು ನಿಜಕ್ಕೂ ಛಾಲೆಂಜಿಂಗ್ ಆದ ಪಾತ್ರ ಎಂದರು.

    ಇನ್ನು ಈ ಸಿನಿಮಾದಲ್ಲಿ ನಿರ್ದೇಶಕ ಶ್ರೀನಿ, ತ್ರಿವಿಕ್ರಮ್, ಲಾಸ್ಯಾ, ಶಿವಮಣಿ ಸೇರಿದಂತೆ ಸಾಕಷ್ಟು ಜನ ನಟಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ಈ ಸಿನಿಮಾವನ್ನು ಈ ಹಿಂದೆ ಎಟಿಎಮ್ ಸಿನಿಮಾ ನಿರ್ಮಿಸಿದ್ದ ಎಸ್.ವಿ. ನಾರಾಯಣ್ ನಿರ್ಮಿಸುತ್ತಿದ್ದಾರೆ.