Tag: ರಂಗಕರ್ಮಿ

  • ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

    ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

    ಹುಬ್ಬಳ್ಳಿ: ಕನ್ನಡದ ಹಿರಿಯ ನಟ ಪ್ರೊ.ಜಿ.ಕೆ ಗೋವಿಂದ ರಾವ್ ಇಂದು ಮುಂಜಾನೆ ನಿಧನರಾಗಿದ್ದಾರೆ.

    ಹಿನ್ನೆಲೆ:
    ರಂಗಕರ್ಮಿ ಜಿ.ಕೆ.ಗೋವಿಂದ ರಾವ್ (86) ಅವರು ಇಂದು ಬೆಳಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ. ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಜಿ.ಕೆ. ಗೋವಿಂದ ರಾವ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

    ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು, ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಮಾಲ್ಗುಡಿ ಡೇಸ್, ಮಹಾಪರ್ವ ಧಾರಾವಾಹಿ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಲೇಖಕರಾಗಿ, ಪ್ರಾಧ್ಯಾಪಕರಾಗಿ, ರಂಗಭೂಮಿ ಕಲಾವಿದರಾಗಿ, ಚಿತ್ರ ನಟರಾಗಿ ಅವರು ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಕೆರೆ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗಿನ ಅರ್ಪಣೆ

    ಸಾಹಿತ್ಯ:
    ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ, ಸಿನಿಮಾರಂಗದ ಒಡನಾಟ ಅವರಿಗಿದೆ. ಈಶ್ವರ ಅಲ್ಲಾ (ಕಿರು ಕಾದಂಬರಿ), ಶೇಕ್ಸ್‍ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‍ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು) ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ ಜಿ.ಕೆ.ಗೋವಿಂದರಾವ್ ನಿಧನದ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ. ಹಿರಿಯ ಲೇಖಕ, ಚಿಂತಕ, ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು.ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

  • ಯುಪಿ ಬಸ್ ದುರಂತದಲ್ಲಿ ಮೈಸೂರಿನ ರಂಗಕರ್ಮಿ ದಂಪತಿ ಸಾವು

    ಯುಪಿ ಬಸ್ ದುರಂತದಲ್ಲಿ ಮೈಸೂರಿನ ರಂಗಕರ್ಮಿ ದಂಪತಿ ಸಾವು

    ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಸೋಮವಾರ ಬೆಳಗ್ಗಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ಮೈಸೂರಿನ ರಂಗಕರ್ಮಿ ಕೆ. ಮುದ್ದುಕೃಷ್ಣ ದಂಪತಿ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಮುದ್ದುಕೃಷ್ಣ ಹಾಗೂ ಪತ್ನಿ ಇಂದ್ರಾಣಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದ್ರಾಣಿ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಇತ್ತ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದ ಮುದ್ದುಕೃಷ್ಣ ಅವರು ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ವಿಪರ್ಯಾಸವೆಂದರೆ ಸೋಮವಾರ ಇಂದ್ರಾಣಿ ಅವರ ಜನ್ಮದಿನವಾಗಿದ್ದು, ಇಂದೇ ದಂಪತಿ ಪ್ರಾಣಬಿಟ್ಟಿದ್ದಾರೆ.

    ಈ ಕುರಿತು ಸಿಎಂ ಕಚೇರಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದೆ. ದಂಪತಿಯ ಸ್ನೇಹ ಬಳಗ ಹಾಗೂ ವಿದ್ಯಾರ್ಥಿಗಳು ಫೇಸ್‍ಬುಕ್‍ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

    ಆಗಿದ್ದೇನು?:
    ಯಮುನಾ ಎಕ್ಸ್‍ಪ್ರೆಸ್ ಹೈವೇನಲ್ಲಿ ಸೋಮವಾರ ಬೆಳಗ್ಗಿನ ಜಾವ ಈ ದುರಂತ ಸಂಭವಿಸಿದೆ. 165 ಕಿ.ಮೀ ಉದ್ದದ ಎಕ್ಸ್‍ಪ್ರೆಸ್‍ವೇ ಉತ್ತರ ಪ್ರದೇಶದ ಆಗ್ರಾ ಮತ್ತು ನೊಯ್ಡಾವನ್ನು ಸಂಪರ್ಕಿಸುತ್ತದೆ. ಇದೊಂದು ಡಬಲ್ ಡೆಕ್ಕರ್ ಬಸ್ಸಾಗಿದ್ದು, ಈ ಬಸ್ ಸುಮಾರು 50 ಮಂದಿ ಪ್ರಯಾಣಿಕರನ್ನು ಲಕ್ನೋದಿಂದ ದೆಹಲಿಗೆ ಕರೆದುಕೊಂಡು ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಚಾಲಕ ನಿದ್ದೆ ಮಂಪರಿನಲ್ಲಿದ್ದನು. ಹೀಗಾಗಿ ಬಸ್ ಸ್ಕಿಡ್ ಆಗಿ ಆಗ್ರಾ ಎಕ್ಸ್‍ಪ್ರೆಸ್‍ವೇ ಬಳಿ ನಿಯಂತ್ರಣ ತಪ್ಪಿ 50 ಅಡಿ ಆಳದ ಚರಂಡಿಗೆ ಬಿದ್ದಿದೆ. ಪರಿಣಾಮ 29 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 17 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆದ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದರು.

    ಅಪಘಾತವಾದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡ ಚರಂಡಿಗೆ ಇಳಿದು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಬಸ್ಸಿನಲ್ಲಿರುವ ಮೃತದೇಹವನ್ನು ಹೊರತೆಗೆಯಲಾಗುತ್ತಿದ್ದು, ಮೃತರ ಗುರುತನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಸ್ ದುರಂತಕ್ಕೆ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಮತ್ತು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸರ್ಕಾರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಫೋಷಿಸಿದೆ.