Tag: ಯೋಧ

  • ಕಾಶ್ಮೀರದಲ್ಲಿ ಜೀಪ್‍ಗೆ ವ್ಯಕ್ತಿಯನ್ನ ಕಟ್ಟಿದ ಪ್ರಕರಣ – ಸೇನೆ ವಿರುದ್ಧ ಎಫ್‍ಐಆರ್

    ಕಾಶ್ಮೀರದಲ್ಲಿ ಜೀಪ್‍ಗೆ ವ್ಯಕ್ತಿಯನ್ನ ಕಟ್ಟಿದ ಪ್ರಕರಣ – ಸೇನೆ ವಿರುದ್ಧ ಎಫ್‍ಐಆರ್

    ಶ್ರೀನಗರ: ಕಳೆದ ವಾರ ಉಪಚುನಾವಣೆ ವೇಳೆ ಪ್ರತಿಭಟನಕಾರರ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಭದ್ರತಾ ಪಡೆ ವ್ಯಕ್ತಿಯೊಬ್ಬರನ್ನು ಜೀಪ್‍ಗೆ ಕಟ್ಟಿದ ಆರೋಪದ ಮೇಲೆ ಸೇನೆಯ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸೇನಾ ಪಡೆ ವ್ಯಕ್ತಿಯೊಬ್ಬರನ್ನು ಜೀಪ್‍ಗೆ ಕಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಭಾರೀ ಖಂಡನೆ ಕೂಡ ವ್ಯಕ್ತವಾಗಿತ್ತು. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜ್ಯದ ಪೊಲೀಸರಿಗೆ ಘಟನೆ ಬಗ್ಗೆ ವರದಿ ಕೇಳಿದ್ದರು. ಸೇನೆ ಕೂಡ ಘಟನೆ ಬಗ್ಗೆ ಆಂತರಿಕ ತನಿಖೆ ಆರಂಭಿಸಿತ್ತು. ಗೃಹ ಸಚಿವ ರಾಜನಾಥ್ ಸಿಂಗ್ ಪ್ರಕರಣದ ಕುರಿತು ಪರಿಶೀಲಿಸುವುದಾಗಿ ಹೇಳಿದ್ದರು. ಇದೀಗ ವ್ಯಕ್ತಿಯ ಅಪಹರಣ ಹಾಗೂ ಆತನ ಜೀವಕ್ಕೆ ಆಪತ್ತು ತಂದ ಆರೋಪಗಳ ಮೇಲೆ ಸೇನೆಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಏಪ್ರಿಲ್ 9 ರಂದು ಶ್ರೀನಗರ ಕ್ಷೇತ್ರದಲ್ಲಿ ಉಪಚುನಾವಣೆಯ ಸಂದರ್ಭದಲ್ಲಿ ಜನರ ಗುಂಪು ಚುನಾವಣಾ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಸುಮಾರು 400 ಪ್ರತಿಭಟನಾಕಾರರು ಅಧಿಕಾರಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಈ ವೇಳೆ ರಕ್ಷಣೆಗಾಗಿ ವ್ಯಕ್ತಿಯನ್ನ ಜೀಪ್‍ಗೆ ಕಟ್ಟಲಾಗಿತ್ತು. ಆ ವ್ಯಕ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

    ಜೀಪ್‍ಗೆ ಕಟ್ಟಲಾಗಿದ್ದ ವ್ಯಕ್ತಿಯನ್ನು ಫರೂಕ್ ಅಹ್ಮದ್ ದರ್ ಎಂದು ಗುರುತಿಸಲಾಗಿದೆ. ಇವರು ಬುದ್ಗಾಮ್ ಜಿಲ್ಲೆಯ ಖಾಗ್‍ನ ಸೀತಾಹರಣ್ ನಿವಾಸಿಯಾಗಿದ್ದಾರೆ. ಹಾಗೇ ಜೀಪ್‍ಗೆ ವ್ಯಕ್ತಿಯನ್ನು ಕಟ್ಟಿದ ಸೇನಾ ಘಟಕ 53 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದವರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

    ತನಿಖೆ ವೇಳೆ ಫರೂಕ್ ಅವರು ಹೇಳಿಕೆ ನೀಡಿದ್ದು, ಅಂದು ನಾನು ಓಟ್ ಮಾಡಿದ ನಂತರ ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಕಾರಣ ಸಹೋದರಿಯ ಮನೆಗೆ ಹೋಗುತ್ತಿದ್ದೆ. ಚುನಾವಣಾ ಸಿಬ್ಬಂದಿಯೊಂದಿಗೆ ಬೀರ್ವಾ ಗ್ರಾಮವನ್ನ ಪ್ರವೇಶಿಸಬೇಕಿದ್ದ ಸೇನಾ ದಳ, ನನ್ನನ್ನು ಕರೆದುಕೊಂಡು ಹೋಗಿ ಜೀಪ್‍ಗೆ ಕಟ್ಟಿದ್ರು ಎಂದು ಹೇಳಿದ್ದಾರೆ.

    ಪ್ರತ್ಯೇಕವಾದಿಗಳು ಚುನಾವಣೆ ಬಹಿಷ್ಕಾರಕ್ಕೆ ನೀಡಿದ ಕರೆ ಹಾಗೂ ಬೆದರಿಕೆಯ ನಡುವೆಯೇ ನಡೆದ ಶ್ರೀನಗರ ಉಪಚುನಾವಣೆಯ ವೇಳೆ ನಡೆದ ಘರ್ಷಣೆಯಲ್ಲಿ 8 ಮಂದಿ ಮೃತಪಟ್ಟು ಸುಮಾರು 100 ಜನ ಗಾಯಗೊಂಡಿದ್ದರು. ಇವಿಎಂಗಳನ್ನು ಧ್ವಂಸಗೊಳಿಸಲಾಗಿತ್ತು.

    ಇನ್ನು ಸಿಆರ್‍ಪಿಎಫ್ ಯೋಧರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರು ಯೋಧರೊಬ್ಬರು ಮೇಲೆ ಹಲ್ಲೆ ಮಾಡಿದ್ದು, ಎಷ್ಟೇ ಪ್ರಚೋದಿಸಿದ್ರೂ ಆ ಯೋಧ ಅದಕ್ಕೆ ಪ್ರತಿಕ್ರಿಯಿಸದೇ ಸುಮ್ಮನೆ ನಡೆದುಕೊಂಡು ಹೋಗುವ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಈಗಾಗಲೇ ಬಂಧಿಸಲಾಗಿದೆ.

     

  • ಹೆಸರು ಬದಲಾವಣೆ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ- ಯೋಧ ಆತ್ಮಹತ್ಯೆ

    ಹೆಸರು ಬದಲಾವಣೆ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ- ಯೋಧ ಆತ್ಮಹತ್ಯೆ

    ಬೆಳಗಾವಿ: ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯ ಜೊತೆಗೆ ಜಗಳವಾಡಿ ಯೋಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ಬಿಎಸ್‍ಎಫ್ ಯೋಧ ಬಸವರಾಜ್ ಉರ್ಫ್ ರಫೀಕ್ ಮುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಾರಣವೇನು?: ಬಸವರಾಜ್ ಅವರ ತಾಯಿ ಮೂಲತಃ ಮುಸ್ಲಿಂ ಸಮಾಜಕ್ಕೆ ಸೇರಿದವರಾಗಿದ್ದು, ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದ್ರೆ ಪತಿ ಸದ್ಯಪ್ಪ ಸಾವಿನ ನಂತರ ತಾಯಿ ಶಾಂತವ್ವ ಮತ್ತೆ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡು ಶಹಜಾನ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಶಹಜಾನ್ ಮಗ ಬಿಎಸ್‍ಎಫ್ ಯೋಧ ಬಸವರಾಜ್ ಕೂಡ ಮುಸ್ಲಿಂ ಯುವತಿಯನ್ನು ಮದುವೆಯಾಗಿ ತನ್ನ ಹೆಸರನ್ನು ಬಸವರಾಜ್ ಬದಲಾಗಿ ರಫೀಕ್ ಮುಲ್ಲಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಆದ್ರೆ ಈ ಬದಲಾವಣೆ ವಿಚಾರದಲ್ಲಿ ಪತ್ನಿ ಹಾಗೂ ತಾಯಿಯೊಂದಿಗೆ ಆಗಾಗ ಜಗಳವಾಗುತ್ತಿತ್ತು.

    ಇತ್ತೀಚೆಗಷ್ಟೇ ಜಮ್ಮುವಿನ ಪೂಂಚ್ ಸೆಕ್ಟರ್ ನಲ್ಲಿ ಕೆಲಸ ಮಾಡುತ್ತಿದ್ದ ಯೋಧ ಬಸವರಾಜ್ ಅವರು ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು. ಸೋಮವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿದ ಸೈನಿಕ ಮನನೊಂದು ಮನೆ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೆ ಯೋಧ ಬಸವರಾಜ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

    ಬಸವರಾಜ್ ಅವರು ಪತ್ನಿ ಬಶೀರಾ ಹಾಗೂ ಅಯಾನ್, ಹಸನ್ ಸಾಬ್ ಎಂಬ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬಿಎಸ್‍ಎಫ್ ಕಾರ್ಯಾಲಯದ ಅನುಮತಿ ಸಿಕ್ಕ ನಂತರ ಶವ ಪರೀಕ್ಷೆ ನಡೆಸುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

  • ಕೆರೆಯಲ್ಲಿ ಮೀನು ಹಿಡಿಯಲು ಸೇನೆಯ ಗ್ರೆನೇಡ್!- ಸೈನಿಕ ಅರೆಸ್ಟ್

    ಕೆರೆಯಲ್ಲಿ ಮೀನು ಹಿಡಿಯಲು ಸೇನೆಯ ಗ್ರೆನೇಡ್!- ಸೈನಿಕ ಅರೆಸ್ಟ್

    ಶ್ರೀನಗರ: ಬ್ಯಾಗ್‍ ನಲ್ಲಿ 2 ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    17 ಜಮ್ಮು ಕಾಶ್ಮೀರ ರೈಫಲ್ಸ್ ನ ಗೋಪಾಲ್ ಮುಖಿಯಾ ಬಂಧಿತ ಯೋಧ. ಇವರು ಜಮ್ಮು ಕಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಉರಿ ಸೆಕ್ಟರ್‍ನಲ್ಲಿ ಕಾರ್ಯ ನಿರ್ವಸುತ್ತಿದ್ದಾರೆಂದು ತಿಳಿದುಬಂದಿದೆ. ಗೋಪಾಲ್ ಇಂದು ಬೆಳಿಗ್ಗೆ ದೆಹಲಿಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅವರ ಲಗೇಜ್ ತಪಾಸಣೆ ಮಾಡಿದಾಗ ಗ್ರೆನೇಡ್ ಇರುವುದು ಪತ್ತೆಯಾಗಿದೆ.

    ಯೋಧ ಗೋಪಾಲ್ ದೆಹಲಿಗೆ ಹೋಗಬೇಕಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆಗೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಯೋಧ ಡಾರ್ಜಿಲಿಂಗ್ ಮೂಲದವರಾಗಿದ್ದು, ಗ್ರೆನೇಡ್ ತಗೆದುಕೊಂಡು ಹೋರಟಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಕೆರೆಯಲ್ಲಿ ಸ್ಫೋಟಿಸಿ ಮೀನು ಹಿಡಿಯುವ ಸಲುವಾಗಿ ಗ್ರೆನೇಡ್ ತೆಗೆದುಕೊಂಡು ಹೋಗುತ್ತಿದ್ದುದಾಗಿ ಯೋಧ ಹೇಳಿದ್ದಾರೆಂದು ಸೇನಾ ಮೂಲಗಳಿಂದ ತಿಳಿದುಬಂದಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

  • ಎಬಿವಿಪಿ ವಿರುದ್ಧ ಮಾತಾಡಿದ್ದಕ್ಕೆ ಕಾರ್ಗಿಲ್ ಹುತಾತ್ಮ ಯೋಧನ ಮಗಳಿಗೆ ಅತ್ಯಾಚಾರದ ಬೆದರಿಕೆ

    ಎಬಿವಿಪಿ ವಿರುದ್ಧ ಮಾತಾಡಿದ್ದಕ್ಕೆ ಕಾರ್ಗಿಲ್ ಹುತಾತ್ಮ ಯೋಧನ ಮಗಳಿಗೆ ಅತ್ಯಾಚಾರದ ಬೆದರಿಕೆ

    ನವದೆಹಲಿ: ಎಬಿವಿಪಿ ವಿರುದ್ಧ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಬಂದಿದೆ ಎಂದು ಕಾರ್ಗಿಲ್ ಹುತಾತ್ಮ ಯೋಧರೊಬ್ಬರ ಮಗಳು ಹೇಳಿದ್ದಾರೆ

    1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಮಂದೀಪ್ ಸಿಂಗ್ ಅವರ ಪುತ್ರಿ ಗುರ್‍ಮೆಹರ್ ಕೌರ್ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಎಬಿವಿಪಿ ವಿರುದ್ಧ ಪೋಸ್ಟ್ ಹಾಕಿದ ನಂತರ ಅತ್ಯಾಚಾರದ ಬೆದರಿಕೆಗಳು ಬಂದಿದೆ ಎಂದು ಹೇಳಿದ್ದಾರೆ.

    ಕಳೆದ ಬುಧವಾರ ದೆಹಲಿಯ ರಾಮ್‍ಜಸ್ ಕಾಲೇಜಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‍ಎ) ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಜೆಎನ್‍ಯು ವಿದ್ಯಾರ್ಥಿಗಳಾದ ಉಮರ್ ಖಲೀದ್ ಹಾಗೂ ಶೆಹ್ಲಾ ರಷೀದ್‍ರನ್ನು ಕಲ್ಚರ್ ಆಫ್ ಪ್ರೊಟೆಸ್ಟ್ಸ್ ಎಂಬ ಸೆಮಿನಾರ್ ನೀಡಲು ಆಹ್ವಾಸಲಾಗಿತ್ತು. ಇದಕ್ಕೆ ಅಬಿವಿಪಿ ವಿರೋಧ ವ್ಯಕ್ತಪಡಿಸಿದ್ದೇ ಈ ಗಲಾಟೆಗೆ ಕಾರಣವಾಗಿದೆ.

    ಇದಾದ ಬಳಿಕ ಗುರ್‍ಮೆಹರ್ ಕೌರ್, ನಾನು ಎಬಿವಿಪಿಗೆ ಹೆದರುವುದಿಲ್ಲ. ನಾನು ಒಂಟಿಯಲ್ಲ, ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ನನ್ನ ಜೊತೆಗಿದ್ದಾರೆ ಎಂಬ ಭಿತ್ತಿಪತ್ರ ಹಿಡಿದಿರುವ ಫೋಟೋವನ್ನ ಫೇಸ್‍ಬುಕ್ ಪ್ರೊಫೈಲ್ ಪಿಕ್ಚರ್ ಮಾಡಿದ್ದರು. ನಂತರ ಈ ಫೋಟೋ ವೈರಲ್ ಆಗಿತ್ತು. ಗುರ್‍ಮೆಹರ್ ಅವರ ಈ ಫೋಟೋಗೆ ನಾಲ್ಕು ದಿನಗಳಲ್ಲಿ 2 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ಸ್ ಹಾಗೂ 1 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದ್ದು, 3 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

  • ಮೈಸೂರಿನಲ್ಲಿ ರಸ್ತೆ ಅಪಘಾತ: ಯೋಧ ದುರ್ಮರಣ

    ಮೈಸೂರು: ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯೋಧ ಮೃತಪಟ್ಟ ಘಟನೆ ಸಂಭವಿಸಿದೆ. ಮಹೇಶ್(26) ಮೃತ ದುರ್ಧೈವಿ ಯೋಧರಾಗಿದ್ದು, ಇವರು ಬಿಎಂಶ್ರೀ ನಗರದ ನಿವಾಸಿ ಮಹದೇವು ಎಂಬವರು ಪುತ್ರರಾಗಿದ್ದಾರೆ.

    ರಾತ್ರಿ ಸ್ನೇಹಿತರನ್ನು ನೋಡಲೆಂದು ಮಹೇಶ್ ಬೈಕ್ ನಲ್ಲಿ ಮನೆಯಿಂದ ಹೊರಹೋಗಿದ್ದರುಶೀ ವೇಳೆ ಆರ್ ಬಿ.ಐ. ಸಮೀಪದ ರಿಂಗ್ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯೋಧ ಮಹೇಶ್ ಕೆಲ ವರ್ಷಗಳ ಹಿಂದೆ ವಾಯುಪಡೆ ಸೇರಿದ್ದರು. ಸದ್ಯ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳು ರಜೆ ಹಾಕಿ ಜ.15ರಂದು ಮೈಸೂರಿಗೆ ಬಂದಿದ್ದರು. ಫೆ.15ರಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.

  • ಹಾಸನ ತಲುಪಿದ ಮೃತ ಸಂದೀಪ್ ಪಾರ್ಥೀವ ಶರೀರ: ಇಂದು ಮಧ್ಯಾಹ್ನ ಅಂತ್ಯಕ್ರಿಯೆ

    ಹಾಸನ: ಜಮ್ಮುಕಾಶ್ಮೀರದಲ್ಲಿ ಹಿಮಕುಸಿತಕ್ಕೆ ಸಿಲುಕಿ ವೀರಮರಣವನ್ನಪ್ಪಿದ ಯೋಧ ಸಂದೀಪ್ ಪಾರ್ಥೀವ ಶರೀರ ಮಂಗಳವಾರ ತಡರಾತ್ರಿ ತವರು ಜಿಲ್ಲೆ ಹಾಸನಕ್ಕೆ ಆಗಮಿಸಿದೆ. ತಡರಾತ್ರಿ 2.30ಕ್ಕೆ ವಿಶೇಷ ಅಂಬುಲೆನ್ಸ್‍ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಸೈನ್ಯದ ಅಧಿಕಾರಿಗಳ ತಂಡ ಸಂದೀಪ್ ಪಾರ್ಥೀವ ಶರೀರದೊಂದಿಗೆ ಆಗಮಿಸಿದರು.

    ಜಿಲ್ಲಾಡಳಿತದ ವತಿಯಿಂದ ಸಂದೀಪ್ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂದೀಪ್ ಪೋಷಕರು, ಶಾಸಕ ಹೆಚ್ ಎಸ್ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಜರಿದ್ದರು.

    ರಾತ್ರಿ ಇಡೀ ಸಂದೀಪ್ ಪಾರ್ಥೀವ ಶರೀರವನ್ನು ಹಾಸನ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದು ಜಿಲ್ಲಾಧಿಕಾರಿ ಕಛೇರಿ ಬಳಿ ಇಂದು ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬೆಳಗ್ಗೆ 10 ಗಂಟೆಯ ನಂತರ ಪಾರ್ಥೀವ ಶರೀರ ಸ್ವಗ್ರಾಮ ದೇವಿಹಳ್ಳಿಗೆ ಮೆರವಣಿಗೆ ಮುಖಾಂತರ ತೆರಳಲಿದೆ. ನಂತರ ದೇವಾಂಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.

    ಯೋಧ ಸಂದೀಪ್ ಮೃತದೇಹ ಬೆಂಗಳೂರಿಗೆ ಬಂದಿಳಿದಾಗ ಸಚಿವ ಎ.ಮಂಜು ಕೂಡ ಜೊತೆಗೇ ಇದ್ದರು. ಮೃತ ಸಂದೀಪ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ., ಒಂದು ಸೈಟ್ ನೀಡಲಾಗುವುದು ಅಂತಾ ಘೋಷಣೆ ಮಾಡಿದ್ರು.