Tag: ಯೋಧ ಗುರು

  • ಯಾವುದಾದ್ರೂ ತಾಯಿ ಹೊಟ್ಟೇಲಿ ಮತ್ತೆ ಹುಟ್ಟಿ ಬಾ – ಗುರು ನನ್ನ ಮಗನಲ್ಲ, ರಾಜ್ಯದ ಮಗ: ತಾಯಿ ರೋಧನೆ

    ಯಾವುದಾದ್ರೂ ತಾಯಿ ಹೊಟ್ಟೇಲಿ ಮತ್ತೆ ಹುಟ್ಟಿ ಬಾ – ಗುರು ನನ್ನ ಮಗನಲ್ಲ, ರಾಜ್ಯದ ಮಗ: ತಾಯಿ ರೋಧನೆ

    – ಸೇನಾಧಿಕಾರಿಗಳಲ್ಲಿ ಚಿಕ್ಕತಾಯಮ್ಮ ಮನವಿ

    ಮಂಡ್ಯ: ಅಪಾರ ಜನಸಾಗರದ ಕಣ್ಣೀರ ವಿದಾಯದೊಂದಿಗೆ ಹುತಾತ್ಮ ಯೋಧ ಗುರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಗುರು ಇಲ್ಲದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದ್ದು, ಗುರು ಅವರ ಚಿಕ್ಕಂದಿನ ಫೋಟೋ ಹಿಡಿದು ತಾಯಿ ಗೋಳಾಡುತ್ತಿದ್ದಾರೆ.

    ಯೋಧ ಗುರು ತಾಯಿ ಚಿಕ್ಕತಾಯಮ್ಮ, ಗುರು ಅವರು ಬಾಲ್ಯದಲ್ಲಿ ಪೊಲೀಸ್ ಡ್ರೆಸ್‍ನಲ್ಲಿ ತೆಗೆಸಿಕೊಂಡಿದ್ದ ಫೋಟೋ ನೋಡುತ್ತಾ ಕಣ್ಣಿರು ಹಾಕುತ್ತಿದ್ದು, ಈ ಫೋಟೋದಲ್ಲಿ ಏನ್ ಚಂದಾ ಕಾಣ್ತಾ ಇದ್ದೀಯಾ. ಯಾವುದಾದರೂ ತಾಯಿಯ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬಾ ಮಗನೇ ಎಂದು ತಾಯಿ ಗೋಳಾಡಿದ್ದಾರೆ. ಈ ದೃಶ್ಯಗಳು ನೋಡುಗರ ಕರುಳು ಕಿತ್ತುಬರುವಂತಿದೆ.

    ಗುರು ರಾಜ್ಯದ ಮಗ:
    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರು ತಾಯಿ, ಜನರು ಕೊಟ್ಟಿರುವ ಪ್ರೀತಿ ಏಳು ಜನ್ಮವಾದರೂ ಮುಗಿಯುವುದಿಲ್ಲ. ಅಷ್ಟೊಂದು ಪ್ರೀತಿಯನ್ನು ನನ್ನ ಮಗ ಎಲ್ಲರಿಗೂ ಕೊಟ್ಟು ಹೋಗಿದ್ದಾನೆ. ಗುರು ನನ್ನ ಮಗನಲ್ಲ, ರಾಜ್ಯದ ಮಗ ಅವನು. ಚಿತೆಯ ಮೇಲೆ ಮಗನನ್ನು ಮಲಗಿಸಿದಾಗ ಮಾತ್ರ ಮುಖ ತೋರಿಸಿದ್ದರು. ಮಗನ ಮುಖವನ್ನು ಒಮ್ಮೆ ಕೈಯಲ್ಲಿ ಸವರಿ ನೋಡಿದೆ. ನನ್ನ ಮಗನ ಕೊಂದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಸೇನಾಧಿಕಾರಿಗಳಲ್ಲಿ ಮನವಿ:
    ಇದೇ ವೇಳೆ ಗುರು ಮನೆಯ ಬಳಿ ಸೇನಾಧಿಕಾರಿಗಳು ಬಂದು ನಾವಿನ್ನು ಹೊರಡುತ್ತೇವೆ ಎಂದು ಹೇಳಿದಾಗ ಚಿಕ್ಕತಾಯಮ್ಮ, ನನ್ನ ಮಗ ನಿಮ್ಮ ಜೊತೆ ಇದ್ದಾನಾ..? ಏನು ಮಾಡುತ್ತಿದ್ದಾನೆ ಎಂದು ಕೇಳುತ್ತಾ ಮತ್ತೆ ಕಣ್ಣೀರು ಹಾಕಿದ್ದಾರೆ. ನೀವು ಚೆನ್ನಾಗಿರಿ, ನನ್ನ ಮಗನಿಗೆ ಹೀಗೆ ಮಾಡಿದವರನ್ನು ಯಾವತ್ತೂ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=KifeAcf26G4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ನಿಖಿಲ್

    ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ನಿಖಿಲ್

    ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ನಟ ನಿಖಿಲ್ ಸಾಂತ್ವನ ಹೇಳಿದ್ದಾರೆ.

    ಗುಡಿಗೆರೆ ಗ್ರಾಮಕ್ಕೆ ಭೇಟಿ ನೀಡಿದ ನಿಖಿಲ್ ಪುತ್ರನನ್ನು ಕಳೆದುಕೊಂಡ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಪ್ರತಿಯೊಬ್ಬ ಭಾರತೀಯನಲ್ಲೂ ಜೀರ್ಣಿಸಿಕೊಳ್ಳಲಾಗದ ನೋವು ಇಂದು ಕಾಡುತ್ತಿದೆ. ಯೋಧರ ಸಾವಿಗೆ ಆಕ್ರೋಶದ ಕಿಚ್ಚು ಎಲ್ಲರಲ್ಲಿದ್ದು, ನಿಜಕ್ಕೂ ಬೇಸರ ತಂದಿದೆ. ಸೈನಿಕರ ಋಣದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಉಗ್ರ ಚಟುವಟಿಕೆಗಳು ನಡೆಯದಂತೆ ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂದು ತಿಳಿಸಿದರು.

    ಯೋಧರು ನಮ್ಮ ದೇಶದ ಆಸ್ತಿಯಾಗಿದ್ದು, ಈ ಪ್ರತಿಯೊಂದು ಕ್ಷಣ, ನಿಮಿಷ ಅವರು ಕೊಟ್ಟಿರುವ ನೆಮ್ಮದಿಯ ಕ್ಷಣಗಳಾಗಿದೆ. ನಾವು ಎಷ್ಟೇ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿದರೂ ಕೂಡ ಅವರ ಮಗನನ್ನು ವಾಪಸ್ ತಂದು ಕೊಡಲು ಸಾಧ್ಯವಿಲ್ಲ ಎಂಬ ಅರಿವು ನನಗಿದೆ. ಅವರ ಕುಟುಂಬ ನೋಡಿದರೆ ಹೊಟ್ಟೆಯಲ್ಲಿ ಬೆಂಕಿ ಹಚ್ಚಿದ ಹಾಗೆ ಆಗುತ್ತದೆ. ವೀರ ಯೋಧರಿಗೆ ಈ ರೀತಿ ಏನೂ ಆಗದಂತೆ ಕೇಂದ್ರ ಸರ್ಕಾರ ಕ್ರಮ ವಹಿಸಲಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧ ಗುರು ಕುಟುಂಬಕ್ಕೆ 25 ಲಕ್ಷ, ಪತ್ನಿಗೆ ಸರ್ಕಾರಿ ಉದ್ಯೋಗ: ಸಿಎಂ ಎಚ್‍ಡಿಕೆ

    ಯೋಧ ಗುರು ಕುಟುಂಬಕ್ಕೆ 25 ಲಕ್ಷ, ಪತ್ನಿಗೆ ಸರ್ಕಾರಿ ಉದ್ಯೋಗ: ಸಿಎಂ ಎಚ್‍ಡಿಕೆ

    ಬೆಂಗಳೂರು: ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುತ್ತೇವೆ ಎಂದು ಸಿಎಂ ಎಚ್‍ಡಿಕೆ ಘೋಷಣೆ ಮಾಡಿದ್ದಾರೆ.

    ನಗರದ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧ ಗುರು ಅವರ ಪಾರ್ಥೀವ ಶರೀರ ಬಂದಿದ್ದಾಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರು ಅವರಿಗೆ ಹೂಗುಚ್ಛವನ್ನಿಟ್ಟು ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಹುತಾತ್ಮ ಗುರು ಕುಟುಂಬಕ್ಕೆ ಪರಿಹಾರ ಧನವನ್ನು ಫೋಷಿಸಿದರು. ಹುತಾತ್ಮ ಗುರು ಕುಟುಂಬದ ಸಂಪೂರ್ಣ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ಹುತಾತ್ಮ ಗುರು ಅವರ ಪಾರ್ಥೀವ ಶರೀರ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಸಿಎಂ ಕುಮಾರಸ್ವಾಮಿ, ಎಂ.ಬಿ ಪಾಟೀಲ್, ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಹುತಾತ್ಮ ಗುರು ಅವರಿಗೆ ಹೂಮಾಲೆ ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.

    ಸರ್ಕಾರ ಗುರು ಶವವವನ್ನು ಸಾಗಿಸಲು ಸೇನಾ ಹೆಲಿಕಾಪ್ಟರ್ ಕೇಳಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರದಿಂದ ಈ ಮನವಿ ಬಂದಿದ್ದರಿಂದ ಹೆಲಿಕಾಪ್ಟರ್ ನೀಡಲು ಸಾಧ್ಯವಿಲ್ಲ ಎಂದು ಸೇನೆ ತಿಳಿಸಿತ್ತು. ಹೀಗಾಗಿ ಗುರು ಪಾರ್ಥೀವ ಶರೀರ ಸೇನಾ ವಾಹನದಲ್ಲಿ ರಸ್ತೆ ಮೂಲಕ ಸಾಗುತ್ತಿದ್ದು, ಜನರು ರಸ್ತೆ ಇಕ್ಕೆಲದಲ್ಲಿ ನಿಲ್ಲುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.

    ಇದಕ್ಕೂ ಮೊದಲು ಮಾತನಾಡಿದ ಸಿಎಂ, ಹುತಾತ್ಮ ಯೋಧನ ಶರೀರ ಬರುವುದು ತಡವಾಗಿದೆ. ಆದಷ್ಟು ಬೇಗ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ತೆರಳುವ ವ್ಯವಸ್ಥೆ ಮಾಡಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯೋಧ ಗುರು ಅವರ ಮುಖ ದರ್ಶನ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆದಷ್ಟು ಬೇಗ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಈಗಾಗಲೇ ಸರ್ಕಾರ, ಜಿಲ್ಲಾಡಳಿತ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ನಾನು ಸಂಜೆ ಸುಮಾರು 4.30ಕ್ಕೆ ಅಂತ್ಯ ಸಂಸ್ಕಾರಕ್ಕೆ ಹೋಗುತ್ತೇನೆ ಎಂದು ಸಿಎಂ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಝೀರೋ ಟ್ರಾಫಿಕ್ ಮೂಲಕ ಹುತಾತ್ಮ ಗುರು ಪಾರ್ಥಿವ ಶರೀರ ರವಾನೆ – ಯಾವ ಮಾರ್ಗದಲ್ಲಿ ಸಂಚಾರ?

    ಝೀರೋ ಟ್ರಾಫಿಕ್ ಮೂಲಕ ಹುತಾತ್ಮ ಗುರು ಪಾರ್ಥಿವ ಶರೀರ ರವಾನೆ – ಯಾವ ಮಾರ್ಗದಲ್ಲಿ ಸಂಚಾರ?

    ಬೆಂಗಳೂರು: ಹುತಾತ್ಮ ಯೋಧ ಗುರು ಕುಟುಂಬದ ಒತ್ತಾಯಕ್ಕೆ ಮಣಿದ ಸರ್ಕಾರ ವಿಶೇಷ ವಿಮಾನದ ಮೂಲಕ ಗುರು ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ತಲುಪಲಿದೆ.

    ತಿರುಚ್ಚಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬೆಳಗ್ಗೆ ಸುಮಾರು 11.45ಕ್ಕೆ ಎಚ್‍ಎಲ್‍ಎ ವಿಮಾನ ನಿಲ್ದಾಣಕ್ಕೆ ಬರುವ ಸಾಧ್ಯತೆ ಇದೆ. ಮೊದಲು ದೆಹಲಿಯಿಂದ ತಿರುಚ್ಚಿ, ಮಧುರೈ, ಕ್ಯಾಲಿಕಟ್‍ಗೆ ತೆರಳಿ ಬೆಂಗಳೂರಿಗೆ ಬರಬೇಕಿತ್ತು. ಆದರೆ ಕುಟುಂಬಸ್ಥರ ಒತ್ತಾಯಕ್ಕೆ ವಿಶೇಷ ವಿಮಾನದ ಮೂಲಕ ತಿರುಚ್ಚಿಯಿಂದ ಬೆಂಗಳೂರಿಗೆ ಪಾರ್ಥಿವ ಶರೀರ ತಲುಪುತ್ತದೆ ಎಂದು ಮಂಡ್ಯ ಜಿಲ್ಲಾಡಳಿತದಿಂದ ಮಾಹಿತಿ ತಿಳಿದು ಬಂದಿದೆ.

    ಮಾರ್ಗ: ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಗುರು ಯೋಧ ಪಾರ್ಥಿವ ಶರೀರ ಬಂದು ಅಲ್ಲಿಂದ ಎಡಕ್ಕೆ ತಿರುವು ಓಲ್ಡ್ ಏರ್‌ಪೋರ್ಟ್ ರಸ್ತೆ ಮೂಲಕ ಮಣಿಪಾಲ್ ಸೆಂಟರ್, ದೊಮ್ಮಲೂರು, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ಕಬ್ಬನ್ ರಸ್ತೆ ಮೂಲಕ ಹಡ್ಸನ್ ಸರ್ಕಲ್ ಎಂಟ್ರಿಯಾಗುತ್ತದೆ. ಅಲ್ಲಿಂದ ಟೌನ್ ಹಾಲ್ ಬಳಿ ಬಲಕ್ಕೆ ತಿರುಗಿ ಬಾಲಗಂಗಾಧರ ಸ್ವಾಮಿ ಫ್ಲೈ ಓವರ್ ಮೇಲೆ ಹತ್ತಿ, ದೀಪಾಂಜಲಿನಗರ, ಆರ್.ಆರ್.ನಗರ, ಕೆಂಗೇರಿ, ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು (ಶಿವಪುರ) ಬಳಿ ಎಡಕ್ಕೆ ತಿರುಗಿ ಕೆ.ಎಂ ದೊಡ್ಡಿಗೆ ತಲುಪಲಿದೆ.

    ಯೋಧನ ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗಣ್ಯರ ಆಗಮನ ಹಿನ್ನೆಲೆಯಲ್ಲಿ ಮದ್ದೂರಿನ ಸಮೀಪ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಮದ್ದೂರಿನ ಹುಲಿಗೆರೆಪುರ ಗ್ರಾಮದ ಬಳಿಯಿರುವ ಹೆಲಿಪ್ಯಾಡ್‍ಗೆ ನೀರು ಸಿಂಪಡಿಸಿ ಜಿಲ್ಲಾಡಳಿತ ಸಜ್ಜುಗೊಳಿಸುತ್ತಿದೆ.

    ಝೀರೋ ಟ್ರಾಫಿಕ್:
    ವಿಐಪಿ ರಸ್ತೆ ಮುಖಾಂತರ ಗುರು ಪಾರ್ಥಿವ ಶರೀರ ರವಾನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಹೆಚ್‍ಎಎಲ್ ಏರ್‌ಪೋರ್ಟ್ ನಿಂದ ಎಂಜಿ ರಸ್ತೆ ಮೂಲಕ ಮೂವ್ ಆಗುತ್ತದೆ. ಹೆಚ್‍ಎಎಲ್ ಮೂಲಕ ದೊಮ್ಮಲೂರು – ಟ್ರಿನಿಟಿ ಜಂಕ್ಷನ್ – ಎಂಜಿ ರಸ್ತೆ – ಟೌನ್ ಹಾಲ್ – ಮೈಸೂರು ರಸ್ತೆ, ನಾಯಂಡಹಳ್ಳಿ ಪ್ಲೇಓರ್ ಮೂಲಕ ಕೆಂಗೇರಿ, ಬಿಡಿದಿ, ರಾಮನಗರ, ಮಂಡ್ಯ, ಝೀರೋ ಟ್ರಾಫಿಕ್ ಮೂಲಕ ಪಾರ್ಥಿವ ರವಾನೆಗೆ ಸಿದ್ಧತೆ ಮಾಡಿಕೊಂಡಿಕೊಳ್ಳಲಾಗಿದೆ ಎಂದು ಟ್ರಾಫಿಕ್ ಈಸ್ಟ್ ಡಿಸಿಪಿ ಹೇಳಿದ್ದಾರೆ.

    ನಗರದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಇನ್ನೂ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆಗಮಿಸಿದ್ದಾರೆ. ಇತ್ತ ಹೆಚ್‍ಎಎಲ್ ಪೊಲೀಸರು ವಿಮಾನ ನಿಲ್ದಾಣದ ಸುತ್ತ ಬಂದೋಬಸ್ತ್ ಮಾಡಿದ್ದು, ಈಗಾಗಲೇ ಯಲಹಂಕದ ಏರ್ ಬೇಸ್ ನಲ್ಲಿ ಸೇನಾ ವಾಹನ ಸಿದ್ಧವಾಗಿದ್ದು, ಎಚ್‍ಎಎಲ್ ಗೆ ಆಗಮಿಸುತ್ತಿದೆ.

    https://www.youtube.com/watch?v=SZDaoFTiQg4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv