Tag: ಯೋಜನೆಗಳು

  • ಎಚ್‍ಡಿಕೆ, ಡಿಕೆಶಿ ವಿರುದ್ಧ ಸಿಎಂ ಬಿಎಸ್‍ವೈ ಬ್ರಹ್ಮಾಸ್ತ್ರ

    ಎಚ್‍ಡಿಕೆ, ಡಿಕೆಶಿ ವಿರುದ್ಧ ಸಿಎಂ ಬಿಎಸ್‍ವೈ ಬ್ರಹ್ಮಾಸ್ತ್ರ

    – ಜನಪ್ರಿಯ ಯೋಜನೆಗಳು ರಾಮನಗರದಿಂದ ಶಿಫ್ಟ್

    ಬೆಂಗಳೂರು: ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ್ದ ಸಿಎಂ ಬಿಎಸ್‍ವೈ, ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ ರಾಜಕೀಯ ಬೆಳವಣಿಗೆಗಳು ಬದಲಾದಂತೆ ಸಿಎಂ ಬಿಎಸ್‍ವೈ ತಮ್ಮ ನಿರ್ಧಾರವನ್ನು ಬದಲಿಸಿದ್ದು ಇದಕ್ಕೆ ಉದಾಹರಣೆ ಎಂಬಂತೆ ರಾಮನಗರಕ್ಕೆ ನೀಡಲಾಗಿದ್ದ ಪ್ರಮುಖ ಯೋಜನೆಯನ್ನು ಬಿಎಸ್‍ವೈ ವಾಪಸ್ ಪಡೆದಿದ್ದಾರೆ.

    ಈ ಹಿಂದೆ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಬಿಎಸ್‍ವೈ ಅವರು, ತಮ್ಮ ಜಿಲ್ಲೆಗೆ ಬೇಕಾಗಿದ್ದ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದರು. ಅಲ್ಲಿಂದ ಬಿಎಸ್‍ವೈ ಹಾಗೂ ಡಿಕೆಶಿ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಆದರೆ ಮೈತ್ರಿ ಸರ್ಕಾರದ ಬಳಿಕ ಡಿಕೆಶಿ ಹಾಗೂ ಎಚ್‍ಡಿ ಕುಮಾರಸ್ವಾಮಿ ಅವರ ನಡುವೆ ಆಪ್ತತೆ ಹೆಚ್ಚಾಗಿತ್ತು. ಇದೇ ಬಿಎಸ್‍ವೈ ಅವರು ತಮ್ಮ ಮನಸ್ಸು ಬದಲಿಸಲು ಕಾರಣ ಎನ್ನಲಾಗಿದೆ.

    ಯಾವ ಯೋಜನೆಗಳು ಸ್ಥಳಾಂತರ?
    ಮೈತ್ರಿ ಸರ್ಕಾರಯಾದ ಬಳಿಕ ರಾಮನಗರ ಹಾಗೂ ಕನಕಪುರಕ್ಕೆ ಹಲವು ಯೋಜನೆಗಳು ಮಂಜೂರಾಗಿತ್ತು. ಪ್ರಮುಖವಾಗಿ ವೈದ್ಯಕೀಯ ಕಾಲೇಜು ಕನಕಪುರಕ್ಕೆ ಮಂಜೂರಾಗಿತ್ತು. ಆದರೆ ಈ ಯೋಜನೆಯನ್ನು ಸಿಎಂ ಬಿಎಸ್‍ವೈ ಅವರು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ್ದರು. ಇದಕ್ಕೆ ಸಮರ್ಥನೆಯನ್ನು ನೀಡಿದ್ದ ಬಿಜೆಪಿ ಸರ್ಕಾರ, ಜಿಲ್ಲೆಗೆ ಒಂದರಂತೆ ವೈದ್ಯಕೀಯ ಕಾಲೇಜು ನೀಡಲು ನಿರ್ಧರಿಸಲಾಗಿದೆ. ಆದರೆ ಇಲ್ಲಿ ರಾಮನಗರ ಮತ್ತು ಕನಕಪುರಕ್ಕೆ ಎರಡಕ್ಕೂ ನೀಡಲಾಗಿದೆ ಎಂದಿದ್ದರು.

    ಸದ್ಯ ವೈದ್ಯಕೀಯ ಕಾಲೇಜು ಬಳಿಕ ಚಿತ್ರನಗರಿ, ಆರೋಗ್ಯ ವಿಶ್ವವಿದ್ಯಾಲಯ ಮತ್ತು ರಾಮನಗರಕ್ಕೆ ಕಾವೇರಿ ನೀರು ಯೋಜನೆಗಳನ್ನು ರಾಮನಗರದಿಂದ ಸ್ಥಳಾಂತರ ಮಾಡಲು ಬಿಎಸ್‍ವೈ ನೇತೃತ್ವದ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ. ಆರೋಗ್ಯ ವಿವಿಯನ್ನು ಶ್ರೀರಾಮುಲು ಕ್ಷೇತ್ರಕ್ಕೆ ನೀಡಲು ಮುಂದಾಗಿದ್ದರೆ ಎಂಬ ಮಾಹಿತಿ ಲಭಿಸಿದೆ. ಆ ಮೂಲಕ ಕುಮಾರಸ್ವಾಮಿ ಹಾಗೂ ಡಿಕೆಶಿ ವಿರುದ್ಧ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಅವರ ಭದ್ರಕೋಟೆಯನ್ನು ಮುರಿಯಲು ತಂತ್ರ ಬಳಕೆ ಮಾಡಿದ್ದಾರೆ ಎನ್ನಲಾಗಿದೆ.

  • ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು: ಜೆಡಿಎಸ್ ಶಾಸಕ ಶಿವಲಿಂಗೇಗೌಡ

    ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು: ಜೆಡಿಎಸ್ ಶಾಸಕ ಶಿವಲಿಂಗೇಗೌಡ

    ಹಾಸನ: ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗಬೇಕು, ಅವರು ಆರಂಭಿಸಿದ ಯೋಜನೆಗಳು ಪೂರ್ಣಗೊಳ್ಳಲು ಅವರೇ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಹಾಸನ ಜಿಲ್ಲೆಯ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ ಪರೋಕ್ಷವಾಗಿ ಕಾಂಗ್ರೆಸ್ ಪರ ಬ್ಯಾಟ್ ಬೀಸಿದ್ದಾರೆ.

    ಅರಸೀಕೆರೆಯ ಗಂಗೇಮಡು ಗ್ರಾಮದಲ್ಲಿ ಕಾಗಿನೆಲೆ ಪೀಠದ ಶಾಖಾ ಮಠದ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಲಿಂಗೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹಾಡಿ ಹೊಗಳಿದರು.

    ಹಿಂದೆ ಒಂದೇ ಪಕ್ಷದಲ್ಲಿದ್ದವರು. ಪಕ್ಷ ತೊರೆದ ನಂತರವೂ ಅವರ ನಾಯಕತ್ವವನ್ನು ನಾನು ನಂಬಿದ್ದೇನೆ. ನನ್ನ ಕ್ಷೇತ್ರಾದ್ಯಂತ ಹಲವು ಕಾಮಗಾರಿಗಳಿಗೆ ಅವರು ಅನುಮೋದನೆ ಕೊಟ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ. ಆ ಯೋಜನೆಗಳು ಮತ್ತೆ ಪೂರ್ಣಗೊಳ್ಳೊದಿಕ್ಕೆ ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ತಮ್ಮ ಮನದಾಸೆಯನ್ನು ಹೊರಗೆಡವಿದರು.

    ಮೈತ್ರಿ ಸರ್ಕಾರ ಪತನದ ಬಳಿಕ ಜೆಡಿಎಸ್ ನಲ್ಲಿ ಅಂತರ್ಯುದ್ಧವೇ ಆರಂಭಗೊಂಡಿದೆ. ಅಧಿಕಾರ ಕಳೆದುಕೊಂಡ ಬಳಿಕ ಜೆಡಿಎಸ್ ಶಾಸಕರು ಬಿಜೆಪಿ ನಾಯಕರನ್ನು ಹೊಗಳಿ, ಸ್ವಪಕ್ಷದ ಮುಖಂಡರ ವಿರುದ್ಧ ಕಿಡಿಕಾರಿದ್ದರು. ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಎಸ್.ಆರ್.ಶ್ರೀನಿವಾಸ್ ಬಿಜೆಪಿಯನ್ನು ಹೊಗಳಿ ಜೆಡಿಎಸ್ ವರಿಷ್ಠರಿಗೆ ಟಾಂಗ್ ಕೊಟ್ಟಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಜೆಡಿಎಸ್ ನ ಕೆಲ ಶಾಸಕರು ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

  • ದ್ವೇಷ ಇರೋದು ನನ್ನ ಮೇಲೆ, ಬಡವರ ಮೇಲೆ ಕೋಪ ಯಾಕೆ- ಬಿಎಸ್‍ವೈ ವಿರುದ್ಧ ಹೆಚ್‍ಡಿಕೆ ಕಿಡಿ

    ದ್ವೇಷ ಇರೋದು ನನ್ನ ಮೇಲೆ, ಬಡವರ ಮೇಲೆ ಕೋಪ ಯಾಕೆ- ಬಿಎಸ್‍ವೈ ವಿರುದ್ಧ ಹೆಚ್‍ಡಿಕೆ ಕಿಡಿ

    ಬೆಂಗಳೂರು: ಬಡವರ ಸ್ವಾಭಿಮಾನವನ್ನು ಕೆಣಕಿದ್ದೀರಿ ಯಡಿಯೂರಪ್ಪನವರೇ ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಬಿಎಸ್‍ವೈಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

    ಕುಮಾರಸ್ವಾಮಿ ಅವರ ಸರ್ಕಾರ ಅವಧಿಯಲ್ಲಿ ಜಾರಿಯಾಗಿರುವ ಕೆಲ ಯೋಜನೆಗಳನ್ನು ಯಡಿಯೂರಪ್ಪ ಅವರ ಸರ್ಕಾರ ತಡೆಹಿಡಿಯಲು ಮುಂದಾಗಿದೆ. ಈ ವಿಚಾರಕ್ಕೆ ಟ್ವೀಟ್ ಮಾಡವ ಮೂಲಕ ಬೇಸರ ವ್ಯಕ್ತಪಡಿಸಿರುವ ಹೆಚ್‍ಡಿಕೆ ಬಡವರ ಬಂಧು ಯೋಜನೆಯನ್ನು ನಿರ್ಲಕ್ಷಿಸಿ ನೀವು ಬಡವರ ವಿರೋಧಿಯಾಗಿದ್ದೀರಿ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದನ್ನು ಓದಿ: ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಚಾಲನೆ

    ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ನಿಮಗೆ ದ್ವೇಷ ಇದ್ದದ್ದು ನನ್ನ ಮೇಲಲ್ಲವೇ ಯಡಿಯೂರಪ್ಪನವರೇ? ಆದರೆ ಬಡವರ ಮೇಲೇಕೆ ನಿಮ್ಮ ಕೋಪ? ಸೇಡಿನ ರಾಜಕೀಯ ಮಾಡುವುದಿಲ್ಲ ಎಂದು ಸದನದಲ್ಲಿ ಹೇಳಿದ್ದ ನೀವು ಅಧಿಕಾರ ವಹಿಸಿಕೊಂಡ ನಂತರ ನನ್ನ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ಮಾಡಿದ್ದೆಲ್ಲವೂ ಸೇಡಿನ ಕ್ರಮ. ‘ಬಡವರ ಬಂಧು’ ಯೋಜನೆಯನ್ನು ನಿರ್ಲಕ್ಷಿಸಿ ನೀವು ಬಡವರ ವಿರೋಧಿಯಾಗಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಆರ್ಥಿಕವಾಗಿ ಅಶಕ್ತರಾದವರು, ಸಣ್ಣ ವ್ಯಾಪಾರಿಗಳನ್ನು ಲೇವಾದೇವಿದಾರರ ವಿಷವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಬಡವರ ಬಂಧು ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು. ಅಶಕ್ತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಈ ಯೋಜನೆಯನ್ನು ಕೊಲ್ಲುತ್ತಿರುವ ನೀವು ಬಡವರ ಸ್ವಾಭಿಮಾನವನ್ನು ಕೆಣಕಿದ್ದೀರಿ ಯಡಿಯೂರಪ್ಪನವರೇ ಎಂದು ಹೇಳಿದ್ದಾರೆ.

    ಬಡವರ ಬಂಧು ಯೋಜನೆ ವಿಫಲವಾಗಬಾರದು. ಇದರಲ್ಲಿ ಜಾತಿ, ಧರ್ಮ, ಪಕ್ಷಗಳಿಲ್ಲ. ಅಶಕ್ತರನ್ನು ಸಬಲರನ್ನಾಗಿಸಿ ದೇಶದ ಅಭಿವೃದ್ಧಿಯಲ್ಲಿ ಅವರನ್ನೂ ಒಳಗೊಳ್ಳುವಂತೆ ಮಾಡುವ ಪ್ರಮುಖ ಅರ್ಥಿಕ ಚಟುವಟಿಕೆ. ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರು ಚೈತನ್ಯ ತುಂಬಬೇಕು. ಇಲ್ಲವೇ ಹೋರಾಟ ಎದುರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

  • ಎಚ್‍ಡಿಕೆ ಅವಧಿಯ ಯೋಜನೆಗಳನ್ನು ತಡೆಹಿಡಿದಿದ್ದಕ್ಕೆ ಆಕ್ರೋಶಗೊಂಡ ಹೊರಟ್ಟಿ

    ಎಚ್‍ಡಿಕೆ ಅವಧಿಯ ಯೋಜನೆಗಳನ್ನು ತಡೆಹಿಡಿದಿದ್ದಕ್ಕೆ ಆಕ್ರೋಶಗೊಂಡ ಹೊರಟ್ಟಿ

    – ಇದು ದ್ವೇಷದ ರಾಜಕಾರಣ

    ಧಾರವಾಡ: ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯ ಯೋಜನೆಗಳನ್ನು ಈಗಿನ ಸರ್ಕಾರ ತಡೆಹಿಡಿದ ವಿಚಾರಕ್ಕೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ದ್ವೇಷದ ರಾಜಕಾರಣ ಬಿಟ್ಟರೇ ಬೇರೆ ಏನೂ ಇಲ್ಲ, ಅವರ ಬಂದಾಗ ಇವರು, ಇವರು ಬಂದಾಗ ಅವರು ದ್ವೇಷ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಇನ್ನು ಅಧಿಕಾರದಿಂದ ನಿರ್ಗಮಿಸುವವರು ಮಾಡಿದ ಯಾವ ಯೋಜನೆಗೂ ಅಡ್ಡಿ ಮಾಡಬಾರದು, ನಾಳೆ ಇವರು ಹೋಗುವಾಗ ಇನ್ನೊಬ್ಬರು ಅದೇ ಮಾಡಿದರೆ ಹೇಗೆ? ಈಗಿನ ರಾಜಕಾರಣಿಗಳ ನಡೆ ಸಾರ್ವಜನಿಕರ ಬದುಕಿನಲ್ಲಿ ಯಾವ ರೀತಿಯ ಸಂದೇಶ ಕೊಡುತ್ತೆ ಅನ್ನೋದನ್ನು ನೋಡಿಕೊಳ್ಳಬೇಕು. ರಾಜ್ಯಪಾಲರಿಗೂ ಬೇಗ ಅಧಿಕಾರ ಕೊಡಬೇಕಿತ್ತು ಎಂದು ಅನಿಸಿದೆ ಅದಕ್ಕೆ ಬಿಎಸ್ ಯಡಿಯೂರಪ್ಪರಿಗೆ ಬೇಗ ಅಧಿಕಾರ ಕೊಟ್ಟಿದ್ದಾರೆ ಎಂದು ಹೇಳಿದರು.

    ಮೂವರು ಶಾಸಕರ ಅನರ್ಹ ವಿಚಾರವಾಗಿ ಮಾತನಾಡಿದ ಅವರು, ಪಕ್ಷದವರು ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಸ್ಪೀಕರಗೆ ಹೇಳಿದ್ದಕ್ಕೆ ಅನರ್ಹ ಮಾಡಿದ್ದಾರೆ. ಉಳಿದ ಅತೃಪ್ತರ ಬಗ್ಗೆ ಪಕ್ಷದಿಂದ ದೂರು ಕೊಡದೇ ಸ್ಪೀಕರ್ ಏನೂ ಮಾಡೋಕೆ ಆಗೋದಿಲ್ಲ. ಅತೃಪ್ತರು ಇನ್ನೂ ಎಂಎಲ್‍ಎ ಆಗಿಯೇ ಇದ್ದಾರೆ. ಇನ್ನು ಅವರ ರಾಜೀನಾಮೆ ಅಂಗೀಕಾರ ಆಗಿಲ್ಲ. ಹೀಗಾಗಿ ಅವರು ಬಹುಮತ ಸಾಬೀತಿನ ದಿನ ಸದನಕ್ಕೆ ಬರಬಹುದು. ಅವರನ್ನು ತಡೆಯುವುದಕ್ಕೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇಂದಿನ ಪರಿಸ್ಥಿತಿ ನೋಡಿದರೆ ಬಿಎಸ್‍ವೈ ಸರ್ಕಾರ ಕೂಡ ಯಾವಾಗ ಏನ್ ಆಗುತ್ತೆ ಎಂದು ಹೇಳೋಕಾಗಲ್ಲ ಎಂದು ಸಂಶಯ ವ್ಯಕ್ತಪಡಿಸಿದರು. ಇನ್ನು ಈಗ ಬಿಜೆಪಿ ಬಳಿ 105 ಶಾಸಕರು ಮಾತ್ರ ಇದ್ದಾರೆ. ಮೂರು ಜನ ಯಾರಾದರೂ ಹಿಂದೆ ಸರಿದರೆ ಸರ್ಕಾರ ಬಿದ್ದು ಹೋಗುತ್ತೆ. ಇದು ಹೀಗೆ ಹಗ್ಗ ಜಗ್ಗಾಟದ ನಡಿಗೆ ಆಗಿಯೇ ಇರುತ್ತದೆ ಎಂದು ತಿಳಿಸಿದರು.

    ಇನ್ನು ಹಣಕಾಸು ವಿಧೇಯಕಕ್ಕೆ ಅಂಗೀಕಾರ ಬೀಳದ ವಿಚಾರವಾಗಿ ಮಾತನಾಡಿ, ಇದನ್ನು ಮಂಡಿಸಲು ಕನಿಷ್ಠ ನಾಲ್ಕೈದು ಸಚಿವರಾದರೂ ಬೇಕಾಗುತ್ತೆ. ಆದರೆ ಈಗ ಸಚಿವರೇ ಇಲ್ಲದ ಕಾರಣ ಬಿಎಸ್‍ವೈ ಒಬ್ಬರೇ ಹೇಗೆ ಅದನ್ನು ಮಂಡಿಸುತ್ತಾರೆ ನೋಡಬೇಕು ಎಂದರು.

  • ಈ ಬಜೆಟ್ ಜಸ್ಟ್ ಟ್ರೇಲರ್ ಮತ್ತೆ ಆಡಳಿತಕ್ಕೆ ಬಂದ್ರೆ ಇನ್ನಷ್ಟು ಅಭಿವೃದ್ಧಿ: ಪ್ರಧಾನಿ ಮೋದಿ

    ಈ ಬಜೆಟ್ ಜಸ್ಟ್ ಟ್ರೇಲರ್ ಮತ್ತೆ ಆಡಳಿತಕ್ಕೆ ಬಂದ್ರೆ ಇನ್ನಷ್ಟು ಅಭಿವೃದ್ಧಿ: ಪ್ರಧಾನಿ ಮೋದಿ

    ನವದೆಹಲಿ: ಇದು ಕೇವಲ ಮಧ್ಯಂತರ ಬಜೆಟ್ ಹಾಗೂ ಟ್ರೇಲರ್ ಇದ್ದಂತೆ. ಚುನಾವಣೆ ಬಳಿಕ ನಾವು ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಲೋಕಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಮಾತನಾಡಿದ ನರೇಂದ್ರ ಮೋದಿ ಅವರು, ಬಜೆಟ್ ಮಂಡಿಸಲು ತೆರಿಗೆ ಪಾವತಿಸಿದ 12 ಕೋಟಿ ರೈತರು, ಅವರ ಕುಟುಂಬಸ್ಥರಿಗೆ, 3 ಕೋಟಿ ರೂ. ವಾರ್ಷಿಕ ವೇತನ ಹೊಂದಿರುವ ಜನರಿಗೆ ಮತ್ತು 40 ಕೋಟಿ ಶ್ರಮಿಕರಿಗೆ ನೇರವಾಗಿ ಸರ್ಕಾರದ ಯೋಜನೆಗಳು ಮುಟ್ಟಲಿವೆ. ಉಜ್ವಲ ಯೋಜನೆ ಮೂಲಕ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. 6 ಕೋಟಿಗೂ ಅಧಿಕ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಸಿಕ್ಕಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 1.5 ಕೋಟಿ ಜನರಿಗೆ ಮನೆಗಳು ಸಿಗಲಿವೆ ಎಂದು ತಿಳಿಸಿದರು.

    ಸರ್ಕಾರದ ಶ್ರಮದಿಂದ ದಾಖಲೆಯ ಮಟ್ಟದಲ್ಲಿ ಬಡತನ ಕಡಿಮೆಯಾಗುತ್ತಿದೆ. ಕೋಟ್ಯಂತರ ಜನರು ಬಡತನದಿಂದ ಹೊರಬಂದು, ಮಧ್ಯಮ ವರ್ಗವನ್ನು ತಲುಪುತ್ತಿದ್ದಾರೆ. ಅವರ ಕನಸುಗಳನ್ನು ಈಡೇರಿಸಿಕೊಳ್ಳುವ ಮೂಲಕ ದೇಶದ ವಿಕಾಸಕ್ಕೆ ಶ್ರಮಿಸುತ್ತಿದ್ದಾರೆ. ಸರ್ಕಾರವು ಬಡ ಜನರಿಗೆ ಭದ್ರತೆ ಹಾಗೂ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

    ಮಧ್ಯಮ ವರ್ಗ ಹಾಗೂ ಉನ್ನತ ಮಧ್ಯಮ ವರ್ಗದಿಂದ ಕಾನೂನು ಬದ್ಧವಾಗಿ ದೇಶಕ್ಕೆ ತೆರಿಗೆ ಪಾವತಿಯಾಗುತ್ತಿದೆ. ಇದರಿಂದ ಯೋಜನೆಗಳು ಸಾಕಾರಗೊಳ್ಳುತ್ತಿವೆ. ಬಡವರ ಕಲ್ಯಾಣವಾಗುತ್ತಿದೆ. ಇಲ್ಲಿಯವರೆಗೂ ಯಾವುದೇ ಸರ್ಕಾರ ಆದಾಯ ಮಿತಿಯನ್ನು ಏರಿಕೆ ಮಾಡಿರಲಿಲ್ಲ. ಆದರೆ ನಮ್ಮ ಸರ್ಕಾರವು ಆದಾಯ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ ಮಾಡಿದೆ ಎಂದರು.

    ವಿವಿಧ ಸರ್ಕಾರಗಳು ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿವೆ. ಆದರೆ ಅವುಗಳು ಕೇವಲ 2 ರಿಂದ 3 ಕೋಟಿ ರೈತರಿಗೆ ಮಾತ್ರ ಸಿಗುತ್ತಿದ್ದವು. ಆದರೆ ಈಗ ಜಾರಿಯಾಗಲಿರುವ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿಯು ಐದು ಎಕರೆ ಕಡಿಮೆ ಜಮೀನು ಹೊಂದಿರುವ 12 ಕೋಟಿಗೂ ಅಧಿಕ ರೈತರಿಗೆ ಸಿಗಲಿದೆ. ಸ್ವಾತಂತ್ರ್ಯ ನಂತರ ರೈತರಿಗಾಗಿ ರೂಪಿಸಿದ ಮಹತ್ವದ ಯೋಜನೆ ಇದಾಗಿದೆ ಎಂದು ಹೇಳಿದರು.

    ನಮ್ಮ ಸರ್ಕಾರವು ರೈತರಿಗೆ ಹಂತ ಹಂತವಾಗಿ ಯೋಜನೆಗಳನ್ನು ಕೊಡುತ್ತಾ ಬಂದಿದೆ. ಪಶುಪಾಲನೆ, ಗೋ ರಕ್ಷಣೆ, ಮೀನುಗಾರಿಕೆ ಸೇರಿದಂತೆ ಕೃಷಿಗೆ ಪೂರಕ ಯೋಜನೆಗಳನ್ನು ನಾವು ನೀಡಿದ್ದೇವೆ. ಮೀನುಗಾಗರರು ಹಾಗೂ ರೈತರನ್ನು ಬಲಗೊಳಿಸಲು ಶ್ರಮಿಸುತ್ತಿದ್ದೇವೆ ಎಂದರು.

    ದೇಶ ಅನೇಕ ಕ್ಷೇತ್ರದಲ್ಲಿ ಇಂದು ಅಭಿವೃದ್ಧಿಯಾಗುತ್ತದೆ. ಒಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ನಿರಂತರವಾಗಿ ಬಡ್ತಿ ಪಡೆಯುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ಶ್ರಮ್ ಮಾನ್ ಧನ್ ಯೋಜನಾ ರೂಪಿಸಲಾಗಿದೆ. ಅಯುಷ್ಮಾನ್ ಭಾರತ್ ಯೋಜನೆ, ಪ್ರಧಾನಿ ಮಂತ್ರಿ ಭಿಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಂದ ಜನರಿಗೆ ಲಾಭ ಸಿಗುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 2 ತಿಂಗಳು ಸುಮ್ನಿದ್ದೆ, ಆದ್ರೆ ಇನ್ಮುಂದೆ ಸುಮ್ನೆ ಕೈ ಕಟ್ಟಿ ಕೂರಲ್ಲ: ಆಂಜನೇಯ

    2 ತಿಂಗಳು ಸುಮ್ನಿದ್ದೆ, ಆದ್ರೆ ಇನ್ಮುಂದೆ ಸುಮ್ನೆ ಕೈ ಕಟ್ಟಿ ಕೂರಲ್ಲ: ಆಂಜನೇಯ

    ಚಿತ್ರದುರ್ಗ: ಮಾಜಿ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಶಾಸಕ ಚಂದ್ರಪ್ಪನ ವಿರುದ್ಧ ಗರಂ ಆಗಿದ್ದು, ಎರಡು ತಿಂಗಳು ನಾನು ಸುಮ್ಮನೆ ಇದ್ದೆ. ಆದರೆ ಇನ್ನು ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಳು ಹೇಳುವುದೇ ಚಂದ್ರಪ್ಪನ ದೊಡ್ಡ ಕೆಲಸ, ಆತನ ತಲೆಯಲ್ಲಿ ಏನೂ ಇಲ್ಲ ಎಂದು ಏಕವಚನದಲ್ಲೇ ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಾನು ಸೋತಿದ್ದೇನೆ ಎಂದು ಕೈ ಕಟ್ಟಿಕೊಂಡು ಕೂರುವವನಲ್ಲ, ನಾನು ಹೋರಾಟದಿಂದ ಬಂದವನು. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಎರಡು ತಿಂಗಳಾದರೂ ಸುಮ್ಮನೆ ಇದ್ದೆ, ಆದರೆ ಇನ್ನು ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾನು ಸಚಿವನಾಗಿದ್ದ ಸಮಯದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಶಾಸಕ ಚಂದ್ರಪ್ಪ ನನ್ನ ಎಲ್ಲಾ ಕಾಮಗಾರಿಗಳನ್ನು ತಡೆಯುತ್ತಿದ್ದಾನೆ. ಆತನಿಗೆ ಜ್ಞಾನ, ತಿಳುವಳಿಕೆ ಇದ್ದರೆ ಯೋಜನೆಗಳನ್ನು ತಡೆಯುವ ಬದಲು, ಮುಂದವರಿಸಬೇಕೆಂದು ಆಗ್ರಹಿಸಿದ್ದಾರೆ.

    ಕೇಂದ್ರ ಸರ್ಕಾರದಿಂದ ಕೋಟಿಗಟ್ಟಲೇ ಬಂದಿದೆ ಎಂದು ಹೇಳುತ್ತಾರೆ, ಆದರೆ ಇಲ್ಲಿಯವರೆಗೂ ಒಂದು ಪೈಸೆಯೂ ಸಹ ಬಂದಿಲ್ಲ. ನಮ್ಮ ಅವಧಿಯಲ್ಲಿ ಆಗಿರುವ ಎಲ್ಲಾ ಯೋಜನೆಗಳು ಮುಂದುವರಿಯಬೇಕು. ಒಂದು ವೇಳೆ ಯಾವುದೇ ಯೋಜನೆಗಳಲ್ಲಿ ತೊಂದರೆಯಾದರೆ ಚಂದ್ರಪ್ಪನ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.