ರಾಯಚೂರು: ಕೋವಿಡ್ ಕೇರ್ ಸೆಂಟರ್ ಅಂದ್ರೆ ಅವ್ಯವಸ್ಥೆಗಳ ಆಗರ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಆದರೆ ರಾಯಚೂರಿನ ಸಿಂಧನೂರು ನಗರದ ಕೋವಿಡ್ ಕೇರ್ ಸೆಂಟರ್ ಇದಕ್ಕೆ ಅಪವಾದ ಎಂಬಂತೆ ಉತ್ತಮ ಸೇವೆ ನೀಡುತ್ತಿದೆ. ಕೇಂದ್ರದಲ್ಲಿರುವ ಸೋಂಕಿತರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢತೆಗಾಗಿ ಪ್ರತೀ ದಿನ ಯೋಗ ತರಬೇತಿ ನೀಡಲಾಗುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ತರಬೇತಿಗಳನ್ನ ನೀಡಿರುವ ಸಿಂಧನೂರು ಮೂಲದ ಯೋಗಗುರು ಮಲ್ಲಣ್ಣ ಸೋಂಕಿತರಿಗೆ ಯೋಗ ಕಲಿಸುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 72 ಜನರಿದ್ದು ಎಲ್ಲಿರಗೂ ಬೆಳಗ್ಗೆ 6:30ಕ್ಕೆ ಯೋಗ ಹೇಳಿ ಕೊಡಲಾಗುತ್ತಿದೆ.
ತರಬೇತಿ ಜೊತೆ ಊಟ, ಸ್ವಚ್ಛತೆಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇಲ್ಲಿರುವವರ ಮನೋರಂಜನೆಗೂ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಲ್ಲಿ ದಾಖಲಾಗಿರುವ ಸೋಂಕಿತರು ಯಾವುದೇ ಭೀತಿಯಿಲ್ಲದೆ ತಮ್ಮ ಕ್ವಾರಂಟೈನ್ ಅವಧಿ ಕಳೆಯುತ್ತಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ರಿಕವರಿ ರೇಟ್ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಯೋಗದ ಮೊರೆ ಹೋಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ದಿನಕ್ಕೆ ಎರಡು ಸಾವಿರ ಜನರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರ ಸೋಂಕಿತರಿಗೆ ಬೆಡ್ ಒದಗಿಸಲು ಕಷ್ಟಪಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ನಡುವೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದು ಆರೋಗ್ಯ ಇಲಾಖೆಗೆ ಹೊಸ ತಲೆನೋವಾಗಿದೆ.
ಹೀಗಾಗಿ ಆರೋಗ್ಯ ಇಲಾಖೆ ಸೋಂಕಿತರ ರಿಕವರಿ ರೇಟ್ ಹೆಚ್ಚಿಸಲು ಹೊಸ ಪ್ಲಾನ್ ಮಾಡಿದ್ದು, ಯೋಗ ಮಂತ್ರದ ಮೊರೆ ಹೋಗಿದೆ. ಹೀಗಾಗಿ ಕೊರೊನಾ ವೈರಸ್‍ಗೆ ರಾಮಭಾಣವಾಗಿರುವ ಪ್ರಾಣಾಯಾಮವನ್ನು ಕೋವಿಡ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಮಾಡಿಸುತ್ತಿದೆ. ಈ ಮೂಲಕ ಯೋಗ ಥೆರಪಿ ಬಳಸಿ ಕೊರೊನಾ ಸೋಂಕಿತರು ಬೇಗ ಗುಣಮುಖರಾಗುವಂತೆ ಮಾಡಿ ಡಿಸ್ಚಾರ್ಜ್ ಮಾಡುವ ಹೊಸ ಐಡಿಯಾವನ್ನು ಆರೋಗ್ಯ ಇಲಾಖೆ ಮಾಡಿದೆ.
ಈಗ ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಕಡ್ಡಾಯ ಯೋಗಭ್ಯಾಸ ಮಾಡಿಸಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಹೀಗಾಗಿ ರವಿಶಂಕರ್ ಗುರೂಜಿ ಆಶ್ರಮದ ಕೋವಿಡ್ ಕೇರ್ ಸೆಂಟರ್ ಮತ್ತು ಆಶ್ರಮ ಸಿಸಿಸಿಯಲ್ಲೂ ಪ್ರತಿಯೊಬ್ಬ ರೋಗಿಗೂ ಕಡ್ಡಾಯ ಯೋಗಭ್ಯಾಸಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಕೊರೊನಾ ರೋಗಿಗಳ ಒತ್ತಡ ನಿವಾರಿಸಲು ಇಲಾಖೆ ಈ ಹೊಸ ಪ್ರಯತ್ನ ಮಾಡುತ್ತಿದೆ. ಅದರಂತೆ ಸತತ ಒಂದು ಗಂಟೆಗಳ ಕಾಲ ಸೋಂಕಿತರಿಗೆ ಸಿಬ್ಬಂದಿ ಯೋಗಭ್ಯಾಸ ಮಾಡಿಸುತ್ತಿದ್ದಾರೆ.
ಬೆಂಗಳೂರು: ಮಹಾಮಾರಿ ಕೊರೊನಾ ಪೊಲೀಸರಿಗೂ ಹೆಚ್ಚು ವ್ಯಾಪಿಸುತ್ತಿದ್ದು, ಆತಂಕದಿಂದಲೇ ಕೊರೊನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ಮಹಾಮಾರಿ ವಿರುದ್ಧ ಹೋರಾಡಲು ಸಹಾಯವಾಗುವಂತೆ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಸಿಬ್ಬಂದಿಗೆ ಯೋಗ, ಪ್ರಾಣಯಾಮದ ಬಗ್ಗೆ ಪಾಠ ಮಾಡಿದ್ದಾರೆ.
ನಾಲ್ಕು ಬೆಟಾಲಿಯನ್ ಕ್ವಾರಂಟೈನ್ ಸೆಂಟರ್ ನಲ್ಲಿ ಅಲೋಕ್ ಕುಮಾರ್ ಯೋಗ ಹೇಳಿಕೊಟ್ಟಿದ್ದು, ಕಪಾಲಬಾತಿ, ಭಸ್ತ್ರಿಕ ಪ್ರಾಣಾಯಾಮ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಸ್ವತಃ ತಾವೇ ಯೋಗ, ಪ್ರಾಣಾಯಾಮ ಮಾಡಿ ತೋರಿಸುವ ಮೂಲಕ ಸಿಬ್ಬಂದಿ ಕುರಿತು ಕಾಳಜಿ ತೋರಿದ್ದಾರೆ.
ಕ್ವಾರಂಟೈನ್ ಸೆಂಟರ್ ನಲ್ಲಿ ಇರುವವರು ಯಾರೂ ಭಯಪಡಬಾರದು, ಧೈರ್ಯವಾಗಿ ಕೊರಿನಾ ಎದುರಿಸಬೇಕು. ಯಾರೂ ಹೆದರುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಸಾಕು ಎಂದು ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇದೇ ರೀತಿ ಕ್ವಾರಂಟೈನ್ ಸೆಂಟರ್‍ನಲ್ಲಿರುವ ಎಲ್ಲ ಬೆಟಾಲಿಯನ್ ಸಿಬ್ಬಂದಿ ಯೋಗ ಹಾಗೂ ಪ್ರಾಣಾಯಾಮ ಮಾಡುವಂತೆ ಸಲಹೆ ನೀಡಿದ್ದಾರೆ.
ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಈಗ್ಗೆ ವರ್ಷಗಳಿಂದೀಚೆಗೆ ಯೋಗಕ್ಕೆ ವಿಶ್ವ ಮಾನ್ಯತೆ ಸಿಕ್ಕಿ ಅದು ಎಲ್ಲೆಡೆ ಹಬ್ಬಿಕೊಂಡಿದೆ. ಯೋಗದ ಪರಿಚಯವೇ ಇಲ್ಲದಿದ್ದ ದೇಶಗಳ ಜನರೂ ಕೂಡಾ ಅದರ ಮನೋ ದೈಹಿಕ ಪರಿಣಾಮಗಳನ್ನು ಅನುಭವಿಸಿ ಮುದಗೊಳ್ಳುತ್ತಿದ್ದಾರೆ. ಕೇವಲ ದೈಹಿಕ ಧೃಡತ್ವ ಮಾತ್ರವಲ್ಲ; ಮಾನಸಿಕ, ಭಾವನಾತ್ಮಕವಾಗಿಯೂ ಪವಾಡದಂಥಾ ಪರಿಣಾಮ ಬೀರಬಲ್ಲ ಯೋಗ ಅಧ್ಯಾತ್ಮಿಕ ಸಾಧನೆಯೊಂದಿಗೂ ನೇರ ಕೊಂಡಿಯನ್ನೊಳಗೊಂಡಿದೆ. ಆದರೆ, ನಮ್ಮ ನೆಲದಲ್ಲಿ ಆವಿರ್ಭವಿಸಿರುವ ಯೋಗ ಇಂದು ವಿಶ್ವವ್ಯಾಪಿಯಾಗಿದ್ದರೂ ನಮಗೇ ಅದರ ಮಹತ್ವ ಗೊತ್ತಿಲ್ಲದ ದುಃಸ್ಥಿತಿಯಿದೆ. ಈ ಸಂದರ್ಭದಲ್ಲಿ ಯೋಗದಲ್ಲಿ ಸಾಧನೆ ಮಾಡಿ ಯೋಗಾಚಾರ್ಯರೆಂದೇ ಹೆಸರಾಗಿರುವ, ಸತ್ವ ಯೋಗಪೀಠದ ಸಂಸ್ಥಾಪಕರಾಗಿರುವ ಬಾಳೆಕುಡಿಗೆ ಪರಮೇಶ್ವರ ಯೋಗಾಭ್ಯಾಸದಲ್ಲಿ ಅಗಾಧ ಸಾಧ್ಯತೆಗಳ ಬಗ್ಗೆ ಒಂದಷ್ಟು ಅಚ್ಚರಿದಾಯಕ ಅಂಶಗಳನ್ನು ತೆರೆದಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅದರ ಬಗ್ಗೆ ಒಂದಷ್ಟು ಮಂದಿ ಮಾತಾಡುತ್ತಾರೆ. ಆದರೆ ಅದನ್ನು ವ್ಯವಸ್ಥಿತವಾಗಿ ಹೇಗೆ ಜನರ ಜೀವನದ ಭಾಗವಾಗಿಸಬೇಕು, ಆ ಮೂಲಕ ಎಲ್ಲರನ್ನೂ ಆರೋಗ್ಯದಿಂದಿರುವಂತೆ ಪ್ರೇರೇಪಿಸಬೇಕೆಂಬ ರೂಪುರೇಷೆಯಾಗಲಿ, ಇಚ್ಛಾಶಕ್ತಿಯಾಗಲಿ ಹೆಚ್ಚಿನವರಿಗೆ ಇದ್ದಂತಿಲ್ಲ. ಈಗಂತೂ ಜನ ಅನಾರೋಗ್ಯದ ಕಟಾಂಜನದಂತಾಗಿ ಕಂಗಾಲಾಗಿದ್ದಾರೆ. ಅದಕ್ಕೆ ಆ ಕ್ಷಣದ ಪರಿಹಾರ ಸೂಚಿಸೋದಷ್ಟಕ್ಕೇ ವ್ಯದ್ಯಕೀಯ ಕ್ಷೇತ್ರ ಹೈರಾಣಾಗುತ್ತಿದೆ. ಒತ್ತಡದ ಬದುಕು, ಅದು ಕರುಣಿಸೋ ಎಲ್ಲ ಬಗೆಯ ಆಘಾತ, ಅನಾರೋಗ್ಯಗಳಿಗೂ ಯೋಗ ಹೇಗೆ ಪರಿಹಾರವಾಗಬಲ್ಲುದೆಂಬುದನ್ನು ಪರಮೇಶ್ವರರಂಥಾ ಯೋಗಾಚಾರ್ಯರೇ ಸ್ಪಷ್ಟವಾಗಿ ಪ್ರಚುರಪಡಿಸುತ್ತಾರೆ.
ಕ್ರಿಸ್ತಪೂರ್ವ ಮೂರನೇ ಶತಮಾನದ ಸುಮಾರಿಗೆ ಪತಂಜಲಿ ಋಷಿಯಿಂದ ಜೀವ ಪಡೆದ ಯೋಗ ಅನೂಚಾನವಾಗಿ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ದುರಂತವೆಂದರೆ, ಶತಮಾನಗಳೇ ಕಳೆದರೂ ಯೋಗವೆಂಬುದು ಶಾಸ್ತ್ರವಲ್ಲ; ಅದೊಂದು ದರ್ಶನ ಎಂಬ ಪರಿಕಲ್ಪನೆ ಸಾರ್ವತ್ರಿಕವಾಗಿ ಪಡಿಮೂಡಿಕೊಂಡಿಲ್ಲ. ಈ ಬಗ್ಗೆ ಒಂದು ಕೊರಗಿಟ್ಟುಕೊಂಡೇ ಯೋಗಾಭ್ಯಾಸವನ್ನು ಹಬ್ಬಿಸಲು ಶ್ರಮಿಸುತ್ತಿರುವವರು ಬಾಳೆಕುಡಿಗೆ ಪರಮೇಶ್ವರ್. ಬನಶಂಕರಿ ಎರಡನೇ ಹಂತದಲ್ಲಿರುವ ಸತ್ವ ಯೋಗಪೀಠದ ಮೂಲಕ ಅವರು ಸಂಸದ ತೇಜಸ್ವಿ ಸೂರ್ಯರಿಗೆ ಯೋಗ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಸ್ಟರ್ ಹಿರಣ್ಣಯ್ಯರಂಥ ಸಾಧಕರಿಗೆ ಯೋಗಾಭ್ಯಾಸದ ರುಚಿ ಹತ್ತಿಸಿದ ಕೀರ್ತಿಯೂ ಪರಮೇಶ್ವರ್ ಅವರದ್ದಾಗಿದೆ. ಇನ್ನುಳಿದಂತೆ ಕನ್ನಡ ಚಿತ್ರರಂಗದ ಯುವ ನಟಿ ಸಂಯುಕ್ತಾ ಹೊರನಾಡು ಕೂಡಾ ಸತ್ವ ಯೋಗಪೀಠದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಈ ಮೂಲಕ ಯುವ ಸಮುದಾಯವೂ ಯೋಗದತ್ತ ವಾಲಿಕೊಳ್ಳುವ ಆಶಾವಾದ ಚಿಗುರಿಕೊಂಡಿದೆ.
ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಪತಂಜಲಿ ಯೋಗಮಹಾವಿದ್ಯಾಲಯದಲ್ಲಿ ಯೋಗ ಡಿಪ್ಲೊಮೋ ಪಡೆದುಕೊಂಡಿರುವವರು ಬಾಳೆಕುಡಿಗೆ ಪರಮೇಶ್ವರ್. ಮಲ್ಲಾಡಿಹಳ್ಳಿ ಸ್ವಾಮಿಗಳ ಪ್ರೀತಿಪಾತ್ರರಾಗಿದ್ದುಕೊಂಡು ಅವರ ಆಣತಿಯಂತೆ ಕೊಡಗು ಸೇರಿದಂತೆ ನಾಡಿನ ಉದ್ದಗಲಕ್ಕೂ ಯೋಗಾಭ್ಯಾಸ ಶಿಬಿರಗಳನ್ನು ನಡೆಸಿದ ಕೀರ್ತಿ ಅವರಲ್ಲಿದೆ. ಇದರೊಂದಿಗೆ ಸ್ವತಃ ಕಾಲೇಜು ದಿನಗಳಿಂದಲೇ ಯೋಗಪಟುವಾಗಿದ್ದುಕೊಂಡು ಅದರಲ್ಲಿ ಸಾಧನೆ ಮಾಡಿರುವ ಪರಮೇಶ್ವರ್ ಯೋಗದ ಕರಾಮತ್ತುಗಳ ಬಗ್ಗೆ ಹೇಳುತ್ತಿದ್ದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ.
ಯುವ ಸಮುದಾಯವನ್ನು ಯೋಗದತ್ತ ವಾಲುವಂತೆ ಮಾಡಿದರೆ ಒಂದೊಳ್ಳೆ ಸಮಾಜ ಸೃಷ್ಟಿಸಿದಂತಾಗುತ್ತದೆ. ಯುವ ಸಮೂಹವನ್ನು ಮಾನಸಿಕವಾಗಿ, ದೈಹಿಕವಾಗಿ ಗಟ್ಟಿಗೊಳಿಸುವಂಥಾ ಎಲ್ಲ ಅಂಶಗಳನ್ನೂ ಯೋಗ ಒಳಗೊಂಡಿದೆ. ಈವತ್ತಿಗೆ ಫಿಟ್ನೆಸ್ ಅಂದರೆ ಜಿಮ್, ವರ್ಕೌಟ್ ಎಂಬಂತಾಗಿದೆ. ಆದರೆ ಯೋಗವೆಂಬುದು ಮಾನಸಿಕ, ದೈಹಿಕ ಮತ್ತು ಅಧ್ಯಾತ್ಮಿಕ ಅಣಂಶಗಳ ಸಂಪೂರ್ಣ ಪ್ಯಾಕೇಜ್ ಇದ್ದಂತೆ. ನಿರಂತರವಾದ ಅಭ್ಯಾಸದಿಂದ ನಿರಾಳವಾಗಿ ಬದುಕು ನಡೆಸುವ, ಸದಾ ಚೈತನ್ಯದಿಂದಿರುವ ಮತ್ತು ಹಣ್ಣಣ್ಣು ಮುದುಕರಾದರೂ ಕಾಯಿಲೆ ಕಸಾಲೆಗಳ ಹಂಗಿಲ್ಲದೆ ಲವಲವಿಕೆಯಿಂದಿರೋ ವಿಫುಲ ಅವಕಾಶಗಳ ಯೋಗದಲ್ಲಿವೆ.
ಈವತ್ತಿಗೂ ಪರಮೇಶ್ವರ್ ಅವರನ್ನು ಅದೆಷ್ಟೋ ಮಂದಿ ನಾನಾ ಬಾಧೆಗಳನ್ನಿಟ್ಟುಕೊಂಡು ಸಂಧಿಸುತ್ತಾರೆ. ಆದರೆ ಅಂಥವರಿಗೆ ಯೋಗವೆಂಬುದು ಕಾಯಿಲೆಯನ್ನು ಆ ಕ್ಷಣಕ್ಕೆ ಹೋಗಲಾಡಿಸೋ ಗುಳಿಗೆಯಲ್ಲ; ಅದು ಖಾಯಿಲೆಗಳೇ ಬಾರದಂತೆ ತಡೆಗಟ್ಟುವ ಮಂತ್ರದಂಡವೆಂಬ ಕಿಂಚಿತ್ ಜ್ಞಾನವಿರೋದಿಲ್ಲ. ಪರಮೇಶ್ವರ್ ಅವರ ಪ್ರಕಾರ ಯೋಗ ನಿರಂತರವಾದ, ನಿಯಮಿತವಾದ ಅಭ್ಯಾಸಗಳಿಗೆ ಒಲಿಯುವಂಥಾದ್ದು. ಇದರಿಂದ ಬಿಪಿ, ಶುಗರ್ನಂಥಾ ರೋಗಗಳೇ ತಹಬಂದಿಗೆ ಬಂದಿರೋದು ಕಣ್ಣ ಮುಂದಿನ ದರ್ಶನ. ಇದಕ್ಕೆ ಪರಮೇಶ್ವರ್ ಅವರ ಬಳಿ ದಂಡಿ ದಂಡಿ ಉದಾಹರಣೆಗಳಿದ್ದಾವೆ.
ಯೋಗದಿಂದ ಅಪರಿಮಿತವಾದ ಧೀಶಕ್ತಿ ಪ್ರತಿಯೊಬ್ಬರಿಗೂ ದಕ್ಕುತ್ತದೆ. ಆದರೆ ಅದನ್ನು ನುರಿತವರ ಮಾರ್ಗದರ್ಶನದಲ್ಲಿಯೇ ಮಾಡಿದರಷ್ಟೇ ಪರಿಣಾಮಕಾರಿಯಾಗಿರುತ್ತದೆ. ಒಂದಷ್ಟು ಆಸನ, ವಿದ್ಯೆಗಳನ್ನು ಕಲಿತು ಅದನ್ನೇ ಯೋಗ ಎಂಬಂತೆ ಅಂಗಡಿ ತೆರೆದು ಕೂತವರು ಸಾಕಷ್ಟಿದ್ದಾರೆ. ಬೆಂಗಳೂರಿನಂಥಾ ನಗರಗಳಲ್ಲಿ ಅದೊಂದು ವ್ಯವಹಾರವಾಗಿದೆ. ಆದರೆ ಇಂಥವುಗಳಿಂದ ಯೋಗದ ನೈಜ ಘನತೆ ಮುಕ್ಕಗುತ್ತಿದೆ. ಆದರದು ಯೋಗಾಚಾರ್ಯ ಪರಮೇಶ್ವರ್ ಅವರಂಥ ಯೋಗ ಸಾಧಕರ ಸಮ್ಮುಖದಲ್ಲಿಯಷ್ಟೇ ಸಾರ್ಥಕ್ಯ ಪಡೆದುಕೊಳ್ಳಲು ಸಾಧ್ಯ.
ಈವತ್ತಿಗೆ ಕರ್ನಾಟಕದಲ್ಲಿ ಯೋಗದ ಬಗ್ಗೆ ನಿಖರವಾದ, ಮಹತ್ತರವಾದ ಜ್ಞಾನ ಹೊಂದಿರುವ ಕೆಲವೇ ಕೆಲ ಜನರಲ್ಲಿ ಪರಮೇಶ್ವರ್ ಮೊದಲಿಗರಾಗಿ ನಿಲ್ಲುತ್ತಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಪುಟ್ಟ ಊರು ಕೊಗ್ರೆ. ಅದರ ಭಾಗವಾಗಿರೋ ಬಾಳೆಕುಡಿಗೆ ಮೂಲದವರಾದ ಪರಮೇಶ್ವರ್ ಎಂಭತ್ತರ ದಶಕದಲ್ಲಿಯೇ ಯೋಗ ವಿದ್ಯೆಯ ಪ್ರವರ್ತಕರಾಗಿ ಬೆಳೆಯಲಾರಂಭಿಸಿದವರು. ಆರಂಭದಲ್ಲಿ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದುಕೊಂಡು ಮಲೆನಾಡು ಭಾಗದಲ್ಲಿ ಯೋಗವನ್ನು ಪ್ರಚುರಪಡಿಸುತ್ತಾ ಬಂದಿದ್ದವರು ಬಾಳೆಕುಡಿಗೆ ಪರಮೇಶ್ವರ್.
ವೈಯಕ್ತಿಕ ಸಂಕಷ್ಟ, ಏಳುಬೀಳುಗಳೆಲ್ಲವನ್ನೂ ಯೋಗವೆಂಬೋ ಧೀಶಕ್ತಿಯ ಮೂಲಕವೇ ಗೆಲ್ಲುತ್ತಾ ಬಂದಿರೋ ಪರಮೇಶ್ವರರ ಯಾನವೇ ಯೋಗದ ಸಾಧ್ಯತೆಗಳಿಗೂ ಉದಾಹರಣೆಯಂತಿದೆ. ಶಾಲಾ ಮಟ್ಟದಲ್ಲಿಯೇ ಯೋಗಾಭ್ಯಾಸ ಮಾಡುವಂಥಾ ವ್ಯವಸ್ಥೆಯಾಗಬೇಕೆಂಬ ಕನಸು ಹೊಂದಿರೋ ಅವರು ಈ ಕ್ಷಣಕ್ಕೂ ದಿನಕ್ಕೆ ಹದಿಮೂರು ಘಂಟೆಗಳ ಕಾಲ ಯೋಗದ ಸಾನಿಧ್ಯದಲ್ಲಿಯೇ ಕಳೆಯುತ್ತಾರೆ. ಐವತ್ತನಾಲಕ್ಕು ವರ್ಷದಲ್ಲಿಯೂ ಲವಲವಿಕೆಯಿಂದಿರೋ ಅವರಿಗೆ ನಾಡಿನಾದ್ಯಂತ ಶಿಷ್ಯವರ್ಗವಿದೆ.
ಯೋಗದಿಂದ ಇಡೀ ನಾಡು ಸ್ವಸ್ಥವಾಗೋ ಕಾಲ ಬರಲೆಂದು ಆಶಿಸುವ ಪರಮೇಶ್ವರ್ ಸತ್ವ ಯೋಗಪೀಠವನ್ನು ಅಂಥಾದ್ದೊಂದು ಪರಿವರ್ತನೆಯ ಶಕ್ತಿಪೀಠವಾಗಿಸಿಕೊಂಡಿದ್ದಾರೆ. ಯೋಗವನ್ನು ವ್ಯವಹಾರವಾಗಿಸದೆ ಅದನ್ನು ಅಧ್ಯಾತ್ಮಿಕ ಪಾವಿತ್ರ್ಯದಿಂದಲೇ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಸತ್ವ ಯೋಗ ಕೇಂದ್ರದಲ್ಲಿ ಸಂಸದ ತೇಜಸ್ವಿ ಸೂರ್ಯ, ಆನಂದ ಗುರೂಜಿ, ನಟಿ ಸಂಯುಕ್ತಾ ಹೊರನಾಡು ಮುಂತಾದವರೆಲ್ಲ ತರಬೇತಿ ಪಡೆಯುತ್ತಾ ಬಂದಿದ್ದಾರೆ. ಮಲೆನಾಡು ಭಾಗದ ಹೆಮ್ಮೆಯ ಸಾಧಕರಾಗಿದ್ದುಕೊಂಡು ಈಗ ಬೆಂಗಳೂರಿನಲ್ಲಿ ನೆಲೆ ನಿಂತಿರುವ ಯೋಗಾಚಾರ್ಯ ಬಾಳೆಕುಡಿಗೆ ಪರಮೇಶ್ವರ್ ಬನಶಂಕರಿ ಎರಡನೇ ಹಂತದಲ್ಲಿರುವ ಸತ್ವ ಯೋಗಪೀಠ ಯೋಗಾಭ್ಯಾಸದ ಶಕ್ತಿಪೀಠವಾಗಿ ಕಾರ್ಯನಿರ್ವಹಿಸುತ್ತಿದೆ.
ಹಾವೇರಿ: ಕೃಷಿ ಸಚಿವರಾದ ಬಿ.ಸಿ ಪಾಟೀಲರು ಮತ್ತು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸ್ವಗ್ರಾಮ ಯಲವಾಳ ಗ್ರಾಮದ ಕೃಷಿ ಸಚಿವರ ತೋಟದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ದಿನಾಚರಣೆಯಲ್ಲಿ ಅಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಯೋಗ ಎನ್ನುವುದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡಬಲ್ಲದು. ಋಷಿಮುನಿಗಳು ಈ ಹಿಂದೆ ಆಚರಿಸಿ ಅನುಸರಿಸುತ್ತಿದ್ದ ಯೋಗವನ್ನು ಇಂದಿಗೂ ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಯೋಗ ದಿನಾಚರಣೆಯಂದು ಮಾತ್ರ ಯೋಗ ಮಾಡದೇ ಪ್ರತಿನಿತ್ಯ ವ್ಯಾಯಾಮ ಯೋಗ ಮಾಡುವುದು ಒಳ್ಳೆಯದು. ಯೋಗ ಎಲ್ಲರ ದೈನಂದಿನ ಭಾಗವಾಗಬೇಕು ಎಂದು ಕರೆ ನೀಡಿದರು.
ಯೋಗಕ್ಕೆ ತನ್ನದೇ ಆದ ಇತಿಹಾಸದ ಜೊತೆಗೂ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಯೋಗವನ್ನು ಗುರುಗಳಿಂದ ಯೋಗ ಶಾಲೆಯಲ್ಲಿ ಕಲಿಯಬಹುದು. ಕೈಬೆರಳಲ್ಲಿರುವ ಮೊಬೈಲ್‍ನಲ್ಲಿ ಯೋಗ ಕಲಿಸುವ ಅದೆಷ್ಟೋ ಯೋಗದ ವಿಡಿಯೋ ಚಾನೆಲ್‍ಗಳು ಆ್ಯಪ್‍ಗಳು ಸಹ ಲಭ್ಯ. ನಮ್ಮ ನಮ್ಮ ದೇಹಕ್ಕೆ ಅನುಕೂಲಕರವಾಗುವಂತೆ ಆದಷ್ಟು ಮಾರ್ಗದರ್ಶನ ಪಡೆದೇ ಯೋಗವನ್ನು ಅನುಸರಿಸುವುದು ಉತ್ತಮ ಎಂದು ಸಚಿವರು ಸಲಹೆಯಿತ್ತರು.
ನೆಲಮಂಗಲ: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಬೇಕಾದ ಪ್ರಜೆಗಳು ಕುದೂರು ಹೋಬಳಿಯ ಆಲದಕಟ್ಟೆ ಬಳಿ ಇರುವ ಸೋಹಂ ಆರ್ಯುಯೋಗ ಆಶ್ರಮದಲ್ಲಿ ಕಾಲ ಕಳೆಯುತ್ತಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಆಶ್ರಮದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ವಿದೇಶಿಯರು ತಮ್ಮ ದೇಶಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು. ಈ ಮಧ್ಯೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದು ಮಾಡಿದ ಕಾರಣ ಆಶ್ರಮದಲ್ಲೇ ಉಳಿದುಕೊಂಡಿದ್ದಾರೆ.
ಈ ಆಶ್ರಮದಲ್ಲಿದ್ದ ವಿದೇಶಿಗರು ರಾಮನಗರ ಜಿಲ್ಲಾಡಳಿತದ ಅನುಮತಿ ಪಡೆದು ಇಲ್ಲೇ ತಂಗಿದ್ದು, ಆಶ್ರಮದ ಗುರು ಶ್ರೀ ಸೋಹಂ ಗುರೂಜಿ ಯೋಗ ಪಾಠ ಮಾಡುತ್ತಿದ್ದಾರೆ. ಮಾಗಡಿ ತಾಲೂಕಿನ ವೈದ್ಯಾಧಿಕಾರಿಗಳು ಇಲ್ಲಿಗೆ ಆಗಮಿಸಿದ ಚಿಕಿತ್ಸೆ ಹಾಗೂ ವಿದೇಶಿಗರನ್ನು ಗಮನಿಸುತ್ತಿದ್ದಾರೆ.
ಮಂಗೋಲಿಯ, ತೈವಾನ್, ಈಜಿಪ್ಟ್, ಗ್ರೀಸ್, ಫ್ರಾನ್ಸ್, ಬ್ರೆಜಿಲ್, ಅಮೆರಿಕದಿಂದ ಆಗಮಿಸಿದ ಪ್ರವಾಸಿಗರು ಇಲ್ಲಿ ಉಳಿದು ಕೊಂಡಿದ್ದಾರೆ. ಭಾರತೀಯ ಪುರಾತನ ಆಯುರ್ವೇದ ಯೋಗ ಥೆರಪಿ ಮೂಲಕ ಚಿಕಿತ್ಸೆ ನೀಡಿ, ವಿದೇಶಿಯರೆಲ್ಲ ತಮ್ಮ ದೈನಂದಿನ ಜೀವನ ಯೋಗದ ಮೂಲಕ ಕಳೆಯುತ್ತಿದ್ದಾರೆ. ಈ ವಿದೇಶಿಗರು ಯಾವುದೇ ಸಮಸ್ಯೆ ಹಾಗೂ ರೋಗವಿಲ್ಲದೆ ಗುಣಮುಖರಾಗಿ ತೆರಳುತ್ತಿದ್ದಾರೆ.
ಸೋಹಮ್ ಗುರೂಜಿ ಪ್ರತಿಕ್ರಿಯಿಸಿ, ಫೆಬ್ರವರಿಯಲ್ಲಿ ಹಲವು ದೇಶಗಳಿಂದ ಯೋಗ ಚಿಕಿತ್ಸೆಗೆ ಬಂದಿದ್ದರು. ಇವರು ಮರಳಿ ತಮ್ಮ ದೇಶಕ್ಕೆ ತೆರಳಬೇಕಾದಾಗ ವಿಮಾನ ಸೇವೆ ರದ್ದಾಯಿತು. ಹೀಗಾಗಿ ವಿದೇಶಕ್ಕೆ ತೆರಳದವರು ಇಲ್ಲೇ ಇರಬೇಕು. ಯಾವ ಕಡೆ ತೆರಳುವಂತಿಲ್ಲ ಎಂದು ಹೇಳಿ ಇಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಕೆಲ ದೇಶಗಳ ರಾಯಭಾರ ಕಚೇರಿಗಳು ವಿಶೇಷ ವಿಮಾನದ ಮೂಲಕ ಪ್ರಜೆಗಳನ್ನು ಕರೆಸಿಕೊಂಡಿದೆ. ಇನ್ನು ಕೆಲವರು ಇಲ್ಲೇ ಇದ್ದು ಯೋಗ ಕಲಿಯುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಪಾಠವನ್ನು ಕಲಿಸಲಾಗುತ್ತಿದೆ ಎಂದು ತಿಳಿಸಿದರು.
ಹಾಸನ: ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಹಾಸನದ ಎಸ್‍ಪಿ ಶ್ರೀನಿವಾಸ್ ಗೌಡ ಜನರ ಮನ ಗೆದ್ದಿದ್ದಾರೆ.
ಲಾಕ್‍ಡೌನ್ ಉಲ್ಲಂಘಿಸಿ ನಗರದ ಮೈದಾನದಲ್ಲಿ ಗುಂಪು ಗುಂಪಾಗಿ ಜನರು ವಾಕ್ ಮಾಡುತ್ತಿದ್ದಾರೆ. ಎಷ್ಟು ತಿಳಿ ಹೇಳಿದರೂ ಹಾಸನದ ಜನ ಬೆಳಗ್ಗೆ ಮೈದಾನಕ್ಕೆ ತೆರಳಿ ವಾಕ್ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಈ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನ ಎಸ್‍ಪಿ ಶ್ರೀನಿವಾಸ್ ಗೌಡ ಸ್ವತಃ ಕಾರ್ಯಾಚರಣೆಗಿಳಿದ್ದಾರೆ.
ಶ್ರೀನಿವಾಸ್ ಗೌಡ ಅವರು ಇಂದು ತಮ್ಮ ತಂಡದೊಂದಿಗೆ ಮೈದಾನಕ್ಕೆ ತೆರಳಿ ವಾಕ್ ಮಾಡುತ್ತಿದ್ದವರನ್ನು ಪೊಲೀಸ್ ವಾಹನದಲ್ಲಿ ಡಿಆರ್ ಮೈದಾನಕ್ಕೆ ಕರೆ ತಂದಿದ್ದರು. ಅಲ್ಲಿಗೆ ಒಬ್ಬರು ಯೋಗ ಗುರುಗಳನ್ನು ಕರೆಸಿ ಮನೆಯಲ್ಲೇ ಮಾಡಬಹುದಾದ ಸರಳ ವ್ಯಾಯಾಮ ಮತ್ತು ಯೋಗಾಸನಗಳ ಬಗ್ಗೆ ತಿಳಿಸಿಕೊಟಿದ್ದಾರೆ.
ಎಸ್‍ಪಿಯವರೇ ಸ್ವತಃ ಜನರೊಂದಿಗೆ ಕುಳಿತು ಯೋಗ ಮಾಡಿದ್ದಲ್ಲದೆ, ಇನ್ನು ಮುಂದೆ ಮನೆಯಲ್ಲೇ ಇದ್ದು ವ್ಯಾಯಾಮ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರು ಅಂದ್ರೆ ಭಯದಿಂದ ನೋಡುತ್ತಿದ್ದ ಜನ, ಹಾಸನ ಎಸ್‍ಪಿಯವರ ಸರಳ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿ: ಯೋಗಾಸನದ ಮೂಲಕವೇ ನಾಲ್ಕು ವಿಶ್ವದಾಖಲೆ ಮಾಡಿರುವ ಕೇವಲ 10 ವರ್ಷದ ತನುಶ್ರೀ ಮತ್ತೊಂದು ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ.
ಅತೀ ಕಲ್ಲಿಷ್ಟಕರ ಚಕ್ರಾಸನ ರೇಸ್ ಮಾಡುವ ಮೂಲಕ ದಾಖಲಿ ಬರೆದಿದ್ದಾರೆ. ಉಡುಪಿಯ ಉದ್ಯಾವರದಲ್ಲಿ ಈ ಸಾಧನೆ ದಾಖಲೆಯಾಗಿದ್ದು, ಈಗಾಗಲೇ ನಾಲ್ಕು ವಿಶ್ವದಾಖಲೆ ಹೊಂದಿರುವ ಪಬ್ಲಿಕ್ ಹೀರೋ ತನುಶ್ರೀ ಪಿತ್ರೋಡಿ ಇದೀಗ ಅತೀ ಕ್ಲಿಷ್ಟಕರ ಚಕ್ರಾಸನ ರೇಸ್ ಮಾಡಿದ್ದಾಳೆ. 100 ಮೀಟರ್ ಚಕ್ರಾಸನ ರೇಸನ್ನು ಕೇವಲ 1.14 ನಿಮಿಷದಲ್ಲಿ ಮುಗಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ.
10 ವರ್ಷದ ಪುಟಾಣಿಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿಂದ ನೋಡುತ್ತಿದೆ. ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಹೆಸರಿನಲ್ಲಿದ್ದ ದಾಖಲೆಯನ್ನು ಉಡುಪಿಯ ತನುಶ್ರೀ ಮುರಿದಿದ್ದಾಳೆ. ಸಮೀಕ್ಷಾ ಇದೇ ದೂರ ಕ್ರಮಿಸಲು ಆರು ನಿಮಿಷ ತೆಗೆದುಕೊಂಡಿದ್ದರು. ಆದರೆ ತನುಶ್ರೀ ಕೇವಲ 1.14 ನಿಮಿಷಗಳಲ್ಲಿ 100 ಮೀ. ಕ್ರಮಿಸುವ ಮೂಲಕ ದಾಖಲೆ ಮುರಿದಿದ್ದಾರೆ. ಯೋಗಾಸನದಲ್ಲೇ ರೇಸ್ ಮಾಡೋದು ಅಂದ್ರೆ ಅಸಾಧ್ಯ ಎನ್ನುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ತನುಶ್ರೀ ಕೇವಲ 1.14 ನಿಮಿಷದಲ್ಲಿ 100 ಮೀಟರ್ ಕ್ರಮಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ತನುಶ್ರೀ ಈ ಹಿಂದೆ ನಾಲ್ಕು ವಿಶ್ವದಾಖಲೆ ನಿರ್ಮಿಸಿದ್ದಾರೆ 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನವನ್ನು ಕೇವಲ ಒಂದು ನಿಮಿಷದಲ್ಲಿ 19 ಬಾರಿ ಮಾಡಿದ್ದಾರೆ. ಅಲ್ಲದೆ, 2018ರಲ್ಲಿ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿರಿಸಿ ಉಳಿದ ಭಾಗವನ್ನು 1.42 ನಿಮಿಷದಲ್ಲಿ 42 ಬಾರಿ ತಿರುಗಿಸಿ ದಾಖಲೆ ಮಾಡಿದ್ದರು. 2019ರಲ್ಲಿ ಇದೇ ಭಂಗಿಯಲ್ಲಿ ತನ್ನ ಹಿಂದಿನ ದಾಖಲೆ ಮುರಿದಿದ್ದರು. ನಂತರ ಧನುರಾಸನ ಭಂಗಿಯನ್ನು 1.40 ನಿಮಿಷದಲ್ಲಿ 96 ಬಾರಿ ಮಾಡಿ ಮತ್ತೊಂದು ದಾಖಲೆಗೆ ಕಾರಣರಾಗಿದ್ದರು. ಇದೀಗ ಐದನೇ ವಿಶ್ವದಾಖಲೆ ಮಾಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ತನುಶ್ರೀ ನಮ್ಮ ಪಬ್ಲಿಕ್ ಹೀರೋ ಎಂಬುದು ಮತ್ತೊಂದು ಹೆಮ್ಮೆಯ ವಿಚಾರವಾಗಿದೆ.
ಉಡುಪಿ: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಇಂದು ಅಗತ್ಯವಾಗಿದೆ. ನಿಸರ್ಗದ ಮಡಿಲಲ್ಲಿ ಆಸ್ಪತ್ರೆ ಇರುವುದರಿಂದ ಇಲ್ಲಿ ದೊರೆಯುವ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಉಡುಪಿ ಜಿಲ್ಲೆಯ ಮೂಡುಗಿಳಿಯಾರಿನ ಯೋಗಬನದ ಪ್ರಕೃತಿ ಮಡಿಲಲ್ಲಿ ತಲೆ ಎತ್ತಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಉದ್ಘಾಟಿಸಿದರು. ಬಳಿಕ ಡಿವೈನ್ ಪಾರ್ಕ್ ಟ್ರಸ್ಟ್‍ನ ಅಂಗ ಸಂಸ್ಥೆಯಾದ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಉದ್ಘಾಟಿಸಿ ಡಾ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. ವಾಸ್ತುಶಿಲ್ಪ ಹಾಗೂ ಪ್ರಾಚೀನ ಶೈಲಿಯಿಂದಾಗಿ ಆಸ್ಪತ್ರೆ ಪ್ರಕೃತಿಗೆ ಹತ್ತಿರವಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡಿರುವುದು ಇದರ ಹೆಮ್ಮೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಲ್ಲಿಯ ಪರಿಸರದಲ್ಲಿ ಚಿಕಿತ್ಸೆ ಸಿಗುವುದು ನಮ್ಮ ಪುಣ್ಯ. ಆಧುನಿಕತೆಯಿಂದಾಗಿ ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡುವವರು ಇಲ್ಲಿ ಬಂದು ನೆಮ್ಮದಿ ಹುಡುಕಬಹುದು ಎಂದರು.
ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಎಚ್.ಆರ್.ನಾಗೇಂದ್ರ ಮಾತನಾಡಿ, ಯೋಗ, ಧ್ಯಾನ ಹಾಗೂ ಪ್ರಕೃತಿ ಚಿಕಿತ್ಸೆ ಸಿಗುವಂತಹ ಜಾಗದಲ್ಲಿ ವಿವೇಕಾನಂದರ ಪ್ರತಿಮೆ ಕಾಣಲು ಸಿಗಲಿದೆ. ಅವರು ನಡೆದ ಹಾದಿ ಇಲ್ಲಿ ನಮಗೆ ನೆನಪಾದರೆ ಅದಕ್ಕಿಂತ ಅರ್ಥಪೂರ್ಣವಾದ ಕೆಲಸ ಬೇರೆ ಇಲ್ಲ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈನ್‍ಪಾರ್ಕ್ ಟ್ರಸ್ಟ್ ನ ಆಡಳಿತ ನಿರ್ದೇಶಕ ಉಡುಪ ಮಾತನಾಡಿ, ಶಾಂತಿ, ನೆಮ್ಮದಿ ಅರಸುವವರಿಗೆ ಇದು ಪ್ರಶಸ್ತ ಜಾಗ. ಪ್ರಕೃತಿ ಚಿಕಿತ್ಸೆ ಇಂದು ವಿಶ್ವದಾದ್ಯಂತ ಪಸರಿಸಿದೆ. ಇದಕ್ಕೆ ಕಾರಣ ನಮ್ಮ ಪ್ರಕೃತಿಯಲ್ಲಿಯೇ ಇರುವ ಔಷಧಿ ಗುಣ. ನಾವು ಇದನ್ನು ಬೆಳೆಸಿ ಉಳಿಸಬೇಕಿದೆ ಎಂದರು.
“ರುದ್ರಿ” ಸಿನಿಮಾದ ನಾಯಕಿ ಹಾಗೂ ನಟಿ ಪಾವನಾ ಗೌಡ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಘಟನೆಗಳು ನಿತ್ಯ ನಡೆಯುತ್ತವೆ. ನಮ್ಮ ಸಿನಿಮಾ “ರುದ್ರಿ” ಕೂಡ ಇಂತದ್ದೇ ಒಂದು ಕಥೆಯನ್ನು ಒಳಗೊಂಡಿದೆ. ಪ್ರಕೃತಿ ನಮ್ಮ ಎಲ್ಲಾ ಪ್ರಶ್ನೆಗಳು ಉತ್ತರ ನೀಡಬಲ್ಲದು. ಹಾಗೇ ಇಲ್ಲಿ ಸಿಗುವ ಚಿಕಿತ್ಸೆ ಕೂಡ ಇಂದು ತೀರಾ ಅನಿವಾರ್ಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ಉಡುಪ ಹಾಗೂ ವಿವೇಕ್ ಉಡುಪ ಇದ್ದರು.
ಚಿಕ್ಕಬಳ್ಳಾಪುರ: 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಾಗ್ತೀನಿ ಅಂತ ಸ್ವಾಮೀಜಿಯೋರ್ವ ಗುಂಡಿ ತೆಗೆಸಿ ಸಕಲ ಸಿದ್ಧತೆ ಮಾಡಿಕೊಂಡು ಕೊನೆಗೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಬಳಿ ನಡೆದಿದೆ.
ಗ್ರಾಮಕ್ಕೆ ಆಗಮಿಸಿದ್ದ ಸ್ವಾಮೀಜಿಯೋರ್ವ ಗ್ರಾಮಸ್ಥರ ಜಮೀನುವೊಂದರ ಬಳಿ 9 ಅಡಿ ಆಳದ ಬೃಹದಾಕಾರದ ಗುಂಡಿ ತೆಗೆಯಲಾಗಿತ್ತು. ಗುಂಡಿಯೊಳಗೆ ತಾನು 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿ ಆಗುವುದಾಗಿ ಪತ್ರಗಳನ್ನು ಹಂಚಿಕೆ ಮಾಡಿ ಪ್ರಚಾರ ಮಾಡಿದ್ದನು. ಅಂತೆಯೇ ಜೀವಂತ ಯೋಗ ಸಮಾಧಿಗೆ ಜಮೀನುವೊಂದರಲ್ಲಿ ಗುಂಡಿ ಅಗೆದು ಗುಂಡಿ ಮೇಲ್ಭಾಗವನ್ನ ನೀಲಗಿರಿ ಸೊಪ್ಪು ಚಾಪೆ ಹಾಕಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಿಕೊಂಡಿದ್ದ. ಇನ್ನೂ ಗುಂಡಿಯೊಳಗೆ ಇಳಿಯೋಕೆ ಅಂತ ಒಂದಷ್ಟು ಜಾಗ ಬಿಟ್ಟು ಏಣಿ ಹಾಕಿಕೊಂಡು ಸಕಲ ಸನ್ನದ್ಧನಾಗಿದ್ದನು.
ಹೇಳಿದಂತೆ ಇಂದು ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ ಯೋಗ ಸಮಾಧಿಗೆ ಸ್ವಾಮೀಜಿ ಸಕಲ ತಯಾರಿಗಿದ್ದ. ಆದರೆ ಅಷ್ಟರಲ್ಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ವಾಮೀಜಿ ಕಾರ್ಯಕ್ಕೆ ಅನುಮತಿ ಪಡೆದಿಲ್ಲ. ಈ ರೀತಿ ಮಾಡುವ ಹಾಗಿಲ್ಲ ಮಾಡಿದ್ರೇ ಕೇಸ್ ದಾಖಲಿಸ್ತೀವಿ ಅಂತ ಎಚ್ಚರಿಕೆ ಕೊಟ್ಟ ಹಿನ್ನೆಲೆ ಸ್ವಾಮೀಜಿ ಅಲ್ಲಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ.
ಸ್ವಾಮೀಜಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಹಂಚಿದ್ದ ಪಾಂಪ್ಲೇಟ್ ನಲ್ಲಿ ‘ತಾರನೇಯಿ ಸಾಯಿ ಆದ ನಾನು ದೇವರ ಅನುಗ್ರಹದಿಂದ, ಭೂಮಿಯೊಳಗೆ 9 ಅಡಿ ಆಳದಲ್ಲಿ 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಗುತ್ತಿದ್ದೇನೆ. ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಶಿವಲೋಕಂ ಸೃಷ್ಠಿಸಿ ಆಶ್ರಮ ಮಾಡಿ ಶಿವನ ದೇವಾಲಯ, ಆರ್ಯುವೇದ ಹಾಗೂ ಹೀಲಿಂಗ್ ಸೆಂಟರ್ ಸೇರಿದಂತೆ ಯೋಗ, ಧ್ಯಾನ ಶಿಬಿರಗಳನ್ನ ಆಯೋಜಿಸಲಾಗುವುದು ಅಂತ ಪ್ರಕಟಿಸಿ ಹಂಚಲಾಗಿತ್ತು.
ಸದ್ಯ ಘಟನೆ ನಂತರ ಸ್ವಾಮೀಜಿ ಉತ್ತರಭಾರತ ಮೂಲದವನು ಅಂತ ಮಾಹಿತಿ ಸಿಕ್ಕಿದ್ದರೂ, ಈತ ಸ್ಪಷ್ಟವಾಗಿ ತೆಲುಗು ಭಾಷೆ ಮಾತನಾಡುತ್ತಿದ್ದ ಕಾರಣ ಆಂದ್ರಪ್ರದೇಶ ಮೂಲದವನು ಅಂತ ಹೇಳಲಾಗಿದೆ. ಇನ್ನೂ ಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್ ಎಂಬವರ ಮನೆಯಲ್ಲಿ ಕಳೆದ ಒಂದು ತಿಂಗಳಿನಿಂದ ವಾಸ್ತವ್ಯ ಹೂಡಿದ್ದು ಅವರದೇ ಜಮೀನಿನಲ್ಲಿ ಈ ರೀತಿ ಯೋಗ ಸಮಾಧಿಗೆ ಸ್ವಾಮೀಜಿ ಪ್ಲಾನ್ ಮಾಡಿ ಸದ್ಯ ಪೊಲೀಸರ ಭಯದಿಂದ ಪರಾರಿಯಾಗಿದ್ದಾನೆ.