Tag: ಯೋಗ

  • ಯೋಗಾಭ್ಯಾಸ ಯೋಗದಿನಾಚರಣೆಗೆ ಸೀಮಿತವಾಗಬಾರದು-ಡಿವಿಎಸ್

    ಯೋಗಾಭ್ಯಾಸ ಯೋಗದಿನಾಚರಣೆಗೆ ಸೀಮಿತವಾಗಬಾರದು-ಡಿವಿಎಸ್

    ಬೆಂಗಳೂರು: ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಮೂಲಕ ಕೊರೊನಾದಂತಹ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ವಿಚಾರ ನನಗೆ ಗೊತ್ತಿಲ್ಲ: ಸತೀಶ್

    ಸಚಿವರು ದೆಹಲಿಗೆ ಹೊರಡುವ ಮುನ್ನ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಹೆಬ್ಬಾಳ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ, ಅಂತಾರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏಳನೇ ವಿಶ್ವ ಯೋಗದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ಸಚಿವರು ನಿಯಮಿತವಾಗಿ ಯೋಗ, ಪ್ರಾಣಾಯಾಮ ಮಾಡುವುದರಿಂದ ನಮ್ಮ ಉಸಿರಾಟದ ವ್ಯವಸ್ಥೆ ಸದೃಢವಾಗುತ್ತದೆ. ಇದರಿಂದ ಕೊರೊನಾದಂತಹ ಶ್ವಾಸಕೋಶ ಸಂಬಂಧಿತ ಕಾಯಿಲೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಪಡೆಯುತ್ತೇವೆ ಎಂದರು.

    ಯೋಗದಿಂದ ಬರೀ ದೇಹದ ರೋಗ-ನಿರೋಧಕ ಶಕ್ತಿಯಷ್ಟೇ ಸುಧಾರಿಸುವುದಿಲ್ಲ. ಜೊತೆಗೇ ಮಾನಸಿಕ ನೆಮ್ಮದಿ, ಹತೋಟಿ ಪಡೆಯಲು ಸಹಾಯವಾಗುತ್ತದೆ. ಒಟ್ಟಿನಲ್ಲಿ ಯೋಗವು ಭಾರತ ದೇಶ ಮಾನವ ಜನಾಂಗಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಜನರ ಆರೋಗ್ಯ ಕಾಪಾಡುವಲ್ಲಿ ಯೋಗವು ಹೊಂದಿರುವ ಸಾಮರ್ಥ್ಯವು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಅರ್ಥವಾಗಿದೆ. ಇಂದು ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಬಹುತೇಕ ದೇಶಗಳ ಮುಖ್ಯಸ್ಥರು ಪಾಲ್ಗೊಂಡಿರುವುದು ಯೋಗದ ಮಹತ್ವವನ್ನು ಸಾರುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮೋಡ ಸೂರ್ಯನನ್ನು ಮರೆಮಾಚಿದರೂ ಎಷ್ಟು ಕಾಲ?: ಸಿ.ಟಿ.ರವಿ

    ಯೋಗ ಮಾಡುವುದರಿಂದ ದಿನಪೂರ್ತಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತಿದೆ. ಆಧುನಿಕ ಯುಗದ ಒತ್ತಡದ ಬದುಕಿನಿಂದ ಶಮನ ಪಡೆಯಲು ಹೆಚ್ಚೆಚ್ಚು ಜನ ಇಂದು ನಿಯಮಿತ ಯೋಗಾಭ್ಯಾಸಕ್ಕೆ ಮೊರೆಹೋಗುತ್ತಿದ್ದಾರೆ. ಮೊದಲು ನಾನು ಕೂಡಾ ಪ್ರತಿದಿನ ಸ್ವಲ್ಪಕಾಲ ಯೋಗಾಭ್ಯಾಸ ಮಾಡುತ್ತಿದ್ದೆನೆ. ಆದರೆ ಕೊರೊನಾ ಸೋಂಕಿಗೆ ಒಳಗಾದಾಗ ಬಿಟ್ಟುಹೋದ ಯೋಗಾಭ್ಯಾಸವನ್ನು ಪುನರಾರಂಭಿಸಲು ಇನ್ನೂ ಸಾಧ್ಯವಾಗಿಲ್ಲ. ಯೋಗಾಭ್ಯಾಸ ಯೋಗದಿನಾಚರಣೆಗೆ ಸೀಮಿತವಾಗಬಾರದು, ಪ್ರತಿಯೊಬ್ಬರೂ ನಿಯಮಿತವಾಗಿ ಯೋಗ ಮಾಡುವುದರ ಮೂಲಕ ಸದೃಢ ಆರೋಗ್ಯ ಹೊಂದುವಂತೆ ಕರೆ ನೀಡಿದ್ದಾರೆ.

    ಸಚಿವರು ಇದಕ್ಕೂ ಮುನ್ನ ಪಕ್ಷದ ಪದಾಧಿಕಾರಿಗಳ ಜೊತೆ ಸುಮಾರು ಅರ್ಧ ಗಂಟೆಕಾಲ ಯೋಗಾಭ್ಯಾಸ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ ನಾರಾಯಣ ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ವಾಸುದೇವ್, ಶ್ರೀಧರ್ ಜೀ ಮುಂತಾದವರು ಪಾಲ್ಗೊಂಡರು.

  • ನಿರಂತರ ಯೋಗಾಭ್ಯಾಸದಿಂದ ಆರೋಗ್ಯವಂತ ಜೀವನ – ತೇಜಸ್ವಿನಿ ಅನಂತಕುಮಾರ್

    ನಿರಂತರ ಯೋಗಾಭ್ಯಾಸದಿಂದ ಆರೋಗ್ಯವಂತ ಜೀವನ – ತೇಜಸ್ವಿನಿ ಅನಂತಕುಮಾರ್

    ಬೆಂಗಳೂರು: ನಿರಂತರ ಯೋಗಾಭ್ಯಾಸದಿಂದ ಆರೋಗ್ಯವಂತ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಅಭಿಪ್ರಾಯಪಟ್ಟರು.

    ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಬೆಳಿಗ್ಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೋವಿಡ್‍ನಂತಹ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ನಾವು ಇದ್ದು ಯೋಗಾಭ್ಯಾಸ, ಪ್ರಾಣಾಯಾಮ, ವ್ಯಾಯಾಮದಂತಹ ಆರೋಗ್ಯಕ್ಕೆ ಪೂರಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಇವುಗಳು ಆರೋಗ್ಯವಂತ ಬದುಕಿಗೆ ನೆರವಾಗಬಲ್ಲದು ಎಂದು ಅವರು ನುಡಿದರು. ಇದನ್ನೂ ಓದಿ: ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ: ಡಿಸಿಎಂ

    ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಅನುಪ್ರಭಾಕರ್ ಮಾತನಾಡಿ, ಚಿಕ್ಕವಯಸ್ಸಿನಿಂದಲೇ ತಾನು ಯೋಗವನ್ನು ಅಳವಡಿಸಿಕೊಂಡಿರುವುದರಿಂದಾಗಿ ತನಗೆ ಕೊರೋನಾ ಪಾಸಿಟಿವ್ ಬಂದಾಗ ಅದನ್ನು ಹೇಗೆ ಪರಿಣಾಮಕಾರಿಯಾಗಿ ಗುಣಮುಖರಾಗಲು ಮತ್ತು ಮಾನಸಿಕವಾಗಿ ಎದುರಿಸಲು ಸಾಧ್ಯವಾಯಿತು ಎಂಬುದನ್ನು ತಿಳಿಸಿದರು.

    ಅತಿಥಿಗಳಾದ ಹಿರಿಯ ಪ್ರಾಧ್ಯಾಪಕರು ಮತ್ತು ಶಸ್ತ್ರಚಿಕಿತ್ಸಕರಾದ ಡಾ. ಆಂಜನಪ್ಪ ಅವರು ಕೋವಿಡ್ ಸಂದರ್ಭದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಶೈಲಿಯ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರೂ ಆದ ಎನ್ ರವಿಕುಮಾರ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾದ ಲೋಕೇಶ್ ಅಂಬೆಕಲ್ಲು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

  • ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ: ಡಿಸಿಎಂ

    ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ: ಡಿಸಿಎಂ

    – ಯೋಗ ಯಾವುದೇ ದೇಶ-ಧರ್ಮಕ್ಕೆ ಸೀಮಿತವಲ್ಲ 

    ಬೆಂಗಳೂರು: ಮನುಕುಲದ ಮಾನಸಿಕ ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಡಿದ ಅವರು, ಯೋಗ ಶಿಕ್ಷಣವನ್ನು ರಾಜ್ಯದ ಪಠ್ಯಕ್ರಮದಲ್ಲಿ ಸೇರಿಸಲಾಗುವುದು. ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:  ಗಾಳಿ-ಮಳೆಗೆ ಉರುಳುತ್ತಿರುವ ಮರಗಳ ರಕ್ಷಣೆಗೆ ಸರ್ಕಾರದ ಹೊಸ ಪ್ಲ್ಯಾನ್

    ಮನುಕುಲದ ಮಾನಸಿಕ ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ. ಮಕ್ಕಳ ಏಕಾಗ್ರತೆ ಮತ್ತು ಬೆಳವಣಿಗೆಗೆ ಇದು ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗವನ್ನು ಪಠ್ಯವನ್ನಾಗಿ ಅಳವಡಿಸುವ ಅಂಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ವಹಿಸಿದೆ. ಮಕ್ಕಳು ಆರಂಭದಿಂದಲೇ ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸುವುದರ ಜೊತೆಗೆ ಯೋಗದ ಮೂಲಕ ದೈಹಿಕ-ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ಡಿಸಿಎಂ ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಗೋವಿಂದರಾಜು ಅವರು ಯೋಗವನ್ನು ಶಿಕ್ಷಣದ ಪಠ್ಯದಲ್ಲಿ ಸೇರಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಡಿಸಿಎಂ ಸ್ಪಂದಿಸಿ ಈ ಪ್ರತಿಕ್ರಿಯೆ ನೀಡಿದರು.

    ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ:

    ಯೋಗ ದಿನಾಚರಣೆಗೆ ಸಾನ್ನಿಧ್ಯ ವಹಿಸಿ ಆಸೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು, ಯೋಗವು ಯಾವುದೇ ದೇಶ, ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಇದು ಮನುಷ್ಯನ ಅಸ್ತಿತ್ವಕ್ಕೆ ಸೇರಿರುವಂಥದ್ದು. ಮನುಷ್ಯನನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ನಮ್ಮ ಹಿರಿಯರು ಸಂಶೋಧಿಸಿದ ವಿಜ್ಞಾನವೇ ಯೋಗ ಎಂದು ನುಡಿದರು.

    ಯೋಗ ಭಾರತಕ್ಕೆ ಸೇರಿದ್ದು ಎಂದು ಜಗತ್ತು ಅದನ್ನು ಬಳಸದೇ ಇರಬಾರದು. ಹಾಗೆ ಮಾಡಿದರೆ ಜಗತ್ತಿಗೇ ನಷ್ಟ. ಯುರೋಪಿಯನ್ ವಿಜ್ಞಾನಿ ಲಾವಾಶಿಯರ್ ಅವರು ಆಮ್ಲಜನಕವನ್ನು ಸಂಶೋಧಿಸಿದರು ಎಂಬ ಕಾರಣಕ್ಕೆ ನಾವು ಅದನ್ನು ಬಳಸದೇ ಇದ್ದರೆ ನಮಗೇ ನಷ್ಟ. ಹಾಗೆಯ ಯೋಗವೂ ಕೂಡ. ಯೋಗ ಜಗತ್ತಿನ ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು ಎಂದು ಸ್ವಾಮೀಜಿ ಅವರು ಆಶಯ ವ್ಯಕ್ತಪಡಿಸಿದರು.

    ವಚನಾನಂದ ಶ್ರೀಗಳಿಂದ ಯೋಗ ಮಾರ್ಗದರ್ಶನ:

    ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಯೋಗ ಮಾರ್ಗದರ್ಶನ ನೀಡಿದರು. ಯೋಗ ಪಟುಗಳಿಂದ ಶ್ರೀಗಳವರು ‘ಕಟ್ಟಿ ಚಕ್ರಾಸನ’, ‘ತ್ರಿಕೋನಾಸನ’, ‘ಊಧ್ರ್ವ ತಾಡಾಸನ’, ‘ಪಾದ ಹಸ್ತಾಸನ’, ‘ಉಸ್ಟ್ರಾಸನ’, ‘ಶಶಾಂಕಾಸನ’, ‘ಮಂಡೂಕಾಸನ’, ‘ಮಕರಾಸನ’, ‘ಭುಜಂಗಾಸನ’, ‘ಬಾಲ ಕ್ರೀಡಾಸನ’, ‘ಶಲ್ಬಾಸನ’, ‘ಉತ್ಥಾನ ಪಾದಾಸನ’, ‘ಅರ್ಧಪವನ ಮುಕ್ತಾಸನ’, ‘ಪವನ ಮುಕ್ತಾಸನ’ ಜತೆಗೆ, ‘ಕಪಾಲಬಾತಿ’, ‘ಪ್ರಾಣಯಾಮ’, ‘ನಾಡಿ ಶೋಧನ’, ‘ಶೀಥಲಿ ಪ್ರಾಣಯಾಮ’, ‘ಭ್ರಾಮರಿ ಪ್ರಾಣಯಾಮ’ ಮಾಡಿಸಿದರು.

    ಕ್ರೀಡಾ ಮತ್ತು ಯವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

  • ಮೋದಿಯಿಂದಾಗಿ ಯೋಗಕ್ಕೆ ವಿಶ್ವಮನ್ನಣೆ – ಕರಂದ್ಲಾಜೆ

    ಮೋದಿಯಿಂದಾಗಿ ಯೋಗಕ್ಕೆ ವಿಶ್ವಮನ್ನಣೆ – ಕರಂದ್ಲಾಜೆ

    ಉಡುಪಿ: ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಔಷಧಿ ಮಾತ್ರೆಗಳ ಹಿಂದೆ ಹೋಗಿ ನಾವೆಲ್ಲಾ ಯೋಗ ಮರೆತೆವು. ಪ್ರಧಾನಿ ಮೋದಿಯಿಂದ ಯೋಗ ವಿಶ್ವಕ್ಕೆ ಪುನರಪಿ ಪರಿಚಯವಾಯ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

    ವಿಶ್ವ ಯೋಗ ದಿನದ ಅಂಗವಾಗಿ ಉಡುಪಿಯಲ್ಲಿ ಶೋಭಾ ಕರಂದ್ಲಾಜೆಯಿಂದ ಯೋಗಭ್ಯಾಸ ಮಾಡಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ಕಟ್ಟದಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದ್ದು, ವೈದ್ಯರೊಂದಿಗೆ ಯೋಗಾಸನದಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಒಂದು ಮಾಡಿದ ಅಭಿಯಾನ -ರಘುಪತಿ ಭಟ್, ಪ್ರಮೋದ್‍ರಿಂದ ಹಡಿಲು ಗದ್ದೆ ಬೇಸಾಯ

    ಸುಮಾರು ಒಂದು ಗಂಟೆ ಯೋಗ, ಪ್ರಾಣಾಯಾಮದಲ್ಲಿ ಶೋಭಾ ಕರಂದ್ಲಾಜೆ ತಲ್ಲೀನರಾದರು. ಆಯುಷ್ ಇಲಾಖೆ ಆನ್ಲೈನ್ ಮೂಲಕ ತಮ್ಮ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಯೋಗ ಶಿಬಿರವನ್ನು ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಯುಷ್ ವೈದ್ಯರು, ಆಸ್ಪತ್ರೆ ಸಿಬ್ಬಂದಿಯ ಜೊತೆ ಯೋಗಾಸನದ ವಿವಿಧ ಭಂಗಿಗಳನ್ನು ಮಾಡಿದರು.

    ಯೋಗಭ್ಯಾಸದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಔಷಧಿ ಮಾತ್ರೆಗಳ ಹಿಂದೆ ಹೋಗಿ ನಾವೆಲ್ಲಾ ಯೋಗ ಮರೆತೆವು. ಆಧುನಿಕ ಔಷಧಿಯಿಂದ ಹಲವಾರು ಅಡ್ಡಪರಿಣಾಮಗಳು ಇವೆ. ನಮ್ಮ ದೇಶಕ್ಕೆ ಇದರಿಂದ ಹಲವು ಸಮಸ್ಯೆ ಆಗಿವೆ. ಯೋಗ ಮನಸ್ಸು ಆತ್ಮವನ್ನು ಜೋಡಿಸುವ ಒಂದು ಕಲೆ. ಪ್ರಧಾನಿ ಮೋದಿಯಿಂದ ಯೋಗ ವಿಶ್ವಕ್ಕೆ ಪುನರಪಿ ಪರಿಚಯವಾಗಿ ಭಾರೀ ಜನಮನ್ನಣೆ ಪಡೆಯಿತು ಎಂದರು.

    ಕೋಟ್ಯಂತರ ಜನ ಭಾರತದ ಯೋಗಕ್ಕೆ ಮಾರುಹೋಗಿದ್ದಾರೆ. ಪ್ರಪಂಚದಾದ್ಯಂತ ಎಲ್ಲಾ ದೇಶಗಳ ಜನ ಯೋಗ ಅಭ್ಯಾಸ ಮಾಡಿ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಯೋಗ ಅಧ್ಯಯನಕ್ಕೆ ಯೋಗ ಅಭ್ಯಾಸಕ್ಕೆ ಲಕ್ಷಾಂತರ ವಿದೇಶಿಗರು ಭಾರತಕ್ಕೆ ಬರುತ್ತಿದ್ದಾರೆ. ಕೊರೊನಾ ಕಾಲದಲ್ಲಿ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಯೋಗ ಪ್ರಯೋಜನಕಾರಿಯಾಗಿದೆ. ಯೋಗಾಭ್ಯಾಸ ಯೋಗ ದಿನಕ್ಕೆ ಮಾತ್ರ ಸಿಮಿತವಾಗುವುದು ಬೇಡ. ಪ್ರತಿದಿನ ಯೋಗಾಭ್ಯಾಸ ಮಾಡಿ. ಕೊರೊನಾ ಕಾಲದಲ್ಲಿ ಯೋಗಾಭ್ಯಾಸ ಮಾಡುವವರ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಕಲಿತ ವಿದ್ಯೆ, ಪಾಠ ಜೀವನದುದ್ದಕ್ಕೂ ಮುಂದುವರೆಯ ಬೇಕು ಎಂದು ಸಲಹೆ ನೀಡಿದರು.

  • ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಶೆಟ್ಟರ್ ಚಾಲನೆ

    ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಶೆಟ್ಟರ್ ಚಾಲನೆ

    ಹುಬ್ಬಳ್ಳಿ: ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಹುಬ್ಬಳ್ಳಿ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಆಯೋಜಿಸಲಾದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪಾಲ್ಗೊಂಡು ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು.

    ಯೋಗ ದುನಾಚರಣೆ ಅಂಗವಾಗಿ ಯೋಗ ಶಿಕ್ಷಕ ಸಂಗಮೇಶ್ ನಿಂಬರಗಿ ಯೋಗಾಸನಗಳ ಕ್ರಮಗಳ ಕುರಿತು ನಿರ್ದೇಶನ ನೀಡಿ ಅವುಗಳ ಉಪಯೋಗ ತಿಳಿಸಿದರು. ಶೆಟ್ಟರ್ ಸಹಿತ ಕಾರ್ಯಕ್ರಮದಲ್ಲಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗಾಭ್ಯಾಸ ಮಾಡಿದರು. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಸ್ಥಿತಿ ಬಂದಿದೆ: ಶೆಟ್ಟರ್

    ಕಾರ್ಯಕ್ರಮದಲ್ಲಿ ಜಿ.ಪಂ. ಸಿ.ಇ.ಓ ಡಾ.ಬಿ.ಸುಶೀಲ, ಹು-ಧಾ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಯಶವಂತ ಮದೀನಕರ್, ಜಿಲ್ಲಾ ಆಯುಷ್ಯಾಧಿಕಾರಿ ಡಾ.ಮೀನಾಕ್ಷಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಭಾಗವಹಸಿದ್ದರು.

  • ಕೋವಿಡ್ ಸೆಂಟರ್‌ನಲ್ಲಿರೋ ಸೋಂಕಿತರಿಗೆ ಯೋಗ ಹೇಳಿಕೊಟ್ಟ ಶಾಸಕ ಅಪ್ಪಚ್ಚು ರಂಜನ್

    ಕೋವಿಡ್ ಸೆಂಟರ್‌ನಲ್ಲಿರೋ ಸೋಂಕಿತರಿಗೆ ಯೋಗ ಹೇಳಿಕೊಟ್ಟ ಶಾಸಕ ಅಪ್ಪಚ್ಚು ರಂಜನ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳು ದಿನ ಕಳೆದಂತೆ ಕೊಂಚ ಇಳಿಮುಖಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವ ಸೋಂಕಿತರ ಯೋಗಕ್ಷೇಮ ವಿಚಾರಿಸಲು ತೆರಳಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಮಡಿಕೇರಿ ಸಮೀಪ ಇರುವ ನವೋದಯದ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶಾಸಕರು, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಯೋಗ ಹೇಳಿಕೊಟ್ಟರು. ಇತ್ತೀಚಿನ ದಿನಗಳಲ್ಲಿ ಸೋಂಕಿತರು ಉಸಿರಾಟದ ತೊಂದರೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ಬೆಳಗ್ಗೆ ಎದ್ದು ಯೋಗ ಧ್ಯಾನ ಮಾಡಬೇಕು ಎಂದರು.

    ಅಲ್ಲದೆ ಕೋವಿಡ್ 19 ಮಹಾಮಾರಿ ಇಂದಿಗೆ-ನಾಳೆಗೆ ತೊಲಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ತಲೆನೋವು ಇತರೆ ತೊಂದರೆ ಉಂಟಾದಲ್ಲಿ ತಕ್ಷಣವೇ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ಪರೀಕ್ಷಿಕೊಳ್ಳಬೇಕು. ಆದರೆ ಆತಂಕಕ್ಕೆ ತುತ್ತಾಗಬಾರದು ಎಂದರು.

    ಪ್ರತಿಯೊಬ್ಬರೂ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಿದಾಗ ಮಾತ್ರ ಕೋವಿಡ್ 19 ದೂರ ಇರಬಹುದಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರ ವಹಿಸುವುದು ಅಗತ್ಯ, ಸೋಂಕಿತರು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿ ಔಷಧಿ ಪಡೆಯಬೇಕು. ಧೈರ್ಯವಾಗಿರಬೇಕು, ವಾಕ್ (ನಡಿಗೆ) ಮತ್ತು ವ್ಯಾಯಾಮ ಮಾಡಬೇಕು, ಬಿಸಿಯಾದ ಆಹಾರ ಸೇವಿಸಬೇಕು. ಬಿಸಿ ನೀರು ಕುಡಿಯಬೇಕು ಎಂದು ಶಾಸಕರು ಸಲಹೆ ಮಾಡಿದರು.

    ಬಳಿಕ ನವೋದಯ ಶಾಲೆಯ ಕೋವಿಡ್ ಆರೈಕೆ ಕೇಂದ್ರಕ್ಕೆ ಸರಸ್ವತಿ ಡಿಇಡಿ ಕಾಲೇಜಿನಿಂದ ಪೂರೈಕೆಯಾಗುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು, ಇಲ್ಲಿನ ಸ್ವಚ್ಚತೆ, ಅಡುಗೆ ತಯಾರಿ ಮಾಡುವುದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

  • ಒಂದೇ ಶ್ವಾಸಕೋಶ ಹೊಂದಿದ್ದರೂ ಯೋಗ, ಪ್ರಾಣಾಯಾಮದಿಂದ 14 ದಿನಗಳಲ್ಲಿ ಕೊರೊನಾ ಗೆದ್ದ ನರ್ಸ್

    ಒಂದೇ ಶ್ವಾಸಕೋಶ ಹೊಂದಿದ್ದರೂ ಯೋಗ, ಪ್ರಾಣಾಯಾಮದಿಂದ 14 ದಿನಗಳಲ್ಲಿ ಕೊರೊನಾ ಗೆದ್ದ ನರ್ಸ್

    ಭೋಪಾಲ್: ಒಂದೇ ಲಂಗ್ಸ್ ಹೊಂದಿದ್ದರೂ ಕೇವಲ ಯೋಗಾಸನ ಹಾಗೂ ಉಸಿರಾಟ ಸಂಬಂಧಿ ಆಸನಗಳಿಂದ 14 ದಿನಗಳಲ್ಲಿ ಕೊರೊನಾ ಮಣಿಸಿ, ನರ್ಸ್ ಜಯಶಾಲಿಯಾಗಿದ್ದಾರೆ.

    ಮಧ್ಯಪ್ರದೇಶದ ಟಿಕಮ್‍ಘರ್ ಸಾರ್ವಜನಿಕ ಆಸ್ಪತ್ರೆಯಲ್ಲಿ 39 ವರ್ಷದ ನರ್ಸ್ ಪ್ರಫುಲ್ಲಿಟ್ ಪೀಟರ್ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದರು. ಕೇವಲ ಯೋಗ ಹಾಗೂ ಉಸಿರಾಟದ ಆಸನಗಳ ಮೂಲವೇ 14 ದಿನಗಳಲ್ಲಿ ಗುಣಮುಖರಾಗಿದ್ದಾರೆ.

    ಪ್ರಫುಲ್ಲಿಟ್ ಅವರು ಟಿಕಮ್‍ಘರ್ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ತಕ್ಷಣ ಅವರ ಸಹೋದ್ಯೋಗಿಗಳು ಹಾಗೂ ಸಂಬಂಧಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ಅವರ ಕೊರೊನಾ ಹೋರಾಟ ತುಂಬಾ ಕಷ್ಟವಾಗಿದೆ ಎಂದೆಲ್ಲ ಹೇಳಿದ್ದರು.

    ಗುಣಮುಖರಾದ ನಂತರ ಈ ಕುರಿತು ಮಾತನಾಡಿದ ಪೀಟರ್, ನಾನು ಹೋಮ್ ಐಸೋಲೇಶನ್‍ನಲ್ಲಿದ್ದಾಗ ಧೈರ್ಯ ಕಳೆದುಕೊಳ್ಳಲಿಲ್ಲ. ಆದರೆ ನಿಯಮಿತವಾಗಿ ಯೋಗ, ಪ್ರಾಣಾಯಾಮ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಆಸನಗಳನ್ನು ಮಾಡುತ್ತಿದ್ದೆ. ಅಲ್ಲದೆ ಬಲೂನುಗಳನ್ನು ಊದುತ್ತಿದ್ದೆ ಎಂದು ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ.

    ನರ್ಸ್ ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಹೀಗಾಗಿ ಅವರಿಗೆ ಗುಣಮುಖವಾಗುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಿದೆ. ಆದರೆ ಕೇವಲ 14 ದಿನಗಳಲ್ಲಿ ಅವರು ಗುಣಮುಖರಾಗಿರುವುದು ಅಚ್ಚರಿ ಮೂಡಿಸಿದೆ.

    ನರ್ಸ್ ಚಿಕ್ಕವರಿದ್ದಾಗಲೇ ತಮ್ಮ ಒಂದು ಶ್ವಾಸಕೋಶವನ್ನು ಕಳೆದುಕೊಂಡಿದ್ದರು. ಅಪಘಾತದಿಂದಾಗಿ ಚಿಕ್ಕವರಿದ್ದಾಗಲೇ ಅವರ ಒಂದು ಲಂಗ್ಸ್ ನ್ನು ಹೊರಗೆ ತೆಗೆಯಲಾಗಿತ್ತು. 2014ರಲ್ಲಿ ಚೆಸ್ಟ್ ಎಕ್ಸ್ ರೇ ಮಾಡಿಸಿದಾಗ ಇದು ಅವರಿಗೆ ತಿಳಿದಿತ್ತು.

  • ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ತನುಶ್ರೀ ವಿಶ್ವದಾಖಲೆ

    ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ತನುಶ್ರೀ ವಿಶ್ವದಾಖಲೆ

    -ನಿಮಿಷಕ್ಕೆ 55 ಬಾರಿ ಆಸನ ಪೂರೈಸಿದ ಪಬ್ಲಿಕ್ ಹೀರೋ

    ಉಡುಪಿ: ಒಂದು ರಾಷ್ಟ್ರ ದಾಖಲೆ ಮಾಡೋದಕ್ಕೆ ಜೀವಮಾನದ ಸಾಧನೆ ಬೇಕಾಗುತ್ತೆ. ಉಡುಪಿಯ ತನುಶ್ರೀಗೆ ದಾಖಲೆಗಳನ್ನು ಮಾಡುವುದು ಎಂದರೆ ನೀರು ಕುಡಿದಷ್ಟೇ ಸುಲಭ. ವಯಸ್ಸು 11 ದಾಟುವ ಮೊದಲೇ ನಮ್ಮ ಪಬ್ಲಿಕ್ ಹೀರೋ ಬರೋಬ್ಬರಿ 6 ವಿಶ್ವದಾಖಲೆ ಮುಡಿಗೇರಿಸಿಕೊಂಡು ಮಿಂಚಿದ್ದಾಳೆ.

    ಉಡುಪಿಯ ಸೈಂಟ್ ಸಿಸಲೀಸ್ ಹೈಸ್ಕೂಲಿನ ಆರನೇ ತರಗತಿಯ ತನುಶ್ರೀ, ಇದೀಗ ಆರನೇ ವಿಶ್ವ ದಾಖಲೆ ಮಾಡಿದ್ದಾಳೆ. ಒಂದು ನಿಮಿಷದಲ್ಲಿ 55 ಬಾರಿ ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡಿ ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ. ಸೈಂಟ್ ಸಿಸಲೀಸ್ ಸಭಾಂಗಣದಲ್ಲಿ ನೂರಾರು ಜನರು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರರ ನಡುವೆ ತನುಶ್ರೀ ಪಿತ್ರೋಡಿ ಸಲೀಸಾಗಿಯೇ ಈ ರೆಕಾರ್ಡ್ ಮಾಡಿದ್ದಾಳೆ.

    ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಡಾ. ಮನೀಶ್ ಬಿಷ್ಶೋಯ್ ಮಾತನಾಡಿ, ಈವರೆಗೆ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ನಲ್ಲಿ ರೆಕಾರ್ಡ್ ಅಟೆಮ್ಟ್ ಮಾಡಿಲ್ಲ. ದುಬೈ ಯುವತಿ ಫ್ರಂಟ್ ಬಾಡಿ ಸ್ಕಿಪ್ ಮಾಡಿದ್ದಳು. ಈ ಆಸನ ಬಹಳ ಕಷ್ಟಕರ. ತನುಶ್ರೀ ದೇಹದಲ್ಲಿ ಮೂಳೆ ಇಲ್ಲವೇನೋ ಎಂಬ ರೀತಿಯಲ್ಲಿ ಒಂದು ನಿಮಿಷಗಳಲ್ಲಿ 55 ಬಾರಿ ಆಸನ ಪೂರೈಸಿದ್ದಾಳೆ ಎಂದರು.

    ಆರು ವಿಶ್ವ ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ
    ನಮ್ಮ ಪಬ್ಲಿಕ್ ಹೀರೋ ಆಗಿರುವ ತನುಶ್ರೀ, 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನ, 2018ರಲ್ಲಿ ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇಂಟೇನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೋಸಿಶನ್ ಭಂಗಿ, 2019ರಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಪೋಸ್ಚರ್ ಹಾಗೂ 2020 ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀಟರ್ ಅಂತರವನ್ನು 1.14 ಸೆಕುಂಡಿನಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಳು. ಹೊಸ ದಾಖಲೆಗೆ ಕೊರೊನಾ ರಜೆಯನ್ನು ಬಳಸಿಕೊಂಡು ತನುಶ್ರೀ ಪ್ರ್ಯಾಕ್ಟೀಸ್ ಮಾಡಿದ್ದಳು.

    ತನುಶ್ರೀ ಪಿತ್ರೋಡಿ ಮಾತನಾಡಿ, ಲಾಕ್‍ಡೌನ್ ಸಂದರ್ಭದಲ್ಲಿ ಪ್ರ್ಯಾಕ್ಟಿಸ್ ಮಾಡಿದೆ. 50, 51 ಬಾರಿ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡುತ್ತಿದ್ದೆ. ಜನರು ಹುರುದುಂಬಿಸುತ್ತಿರುವಾಗ ಜೋಷ್ ಬಂತು. ನನ್ನ ತಂದೆ ತಾಯಿಗೆ, ಶಿಕ್ಷಣ ಸಂಸ್ಥೆಗೆ ತುಂಬಾ ಥ್ಯಾಂಕ್ಸ್ ಅಂತ ಹೇಳಿದರು. ತನುಶ್ರೀ ತಂದೆ ಉದಯ್ ಮಾತನಾಡಿ, ತನುಶ್ರೀಗೆ ಯಾವೆಲ್ಲಾ ವಿಭಾಗದಲ್ಲಿ ಸಾಧನೆ ಮಾಡಬೇಕೋ ಮಾಡಲಿ. ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

    ಯೋಗ, ದಾಖಲೆಗಳ ಜೊತೆ ತನುಶ್ರೀ ಭರತನಾಟ್ಯದ ಪ್ರವೀಣೆ, ಯಕ್ಷಗಾನ ಕಲಾವಿದೆ. ಮುಂದೆ ಒಂದು ನಿಮಿಷದಲ್ಲಿ ಅತೀ ಹೆಚ್ಚು ಯೋಗ ಭಂಗಿಗಳನ್ನು ಮಾಡಿ ದಾಖಲೆ ಮಾಡುವ ಕನಸು ಇಟ್ಟುಕೊಂಡಿದ್ದಾಳೆ ತನುಶ್ರೀ.

  • ಪಬ್ಲಿಕ್ ಹೀರೋ, ಯೋಗ ಸಾಧಕಿ ತನುಶ್ರೀಗೆ ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಗರಿ

    ಪಬ್ಲಿಕ್ ಹೀರೋ, ಯೋಗ ಸಾಧಕಿ ತನುಶ್ರೀಗೆ ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಗರಿ

    ಉಡುಪಿ: ಯೋಗ ಸಾಧಕಿ, ಪಬ್ಲಿಕ್ ಹೀರೋ ತನುಶ್ರೀ ಪಿತ್ರೋಡಿ, ಡ್ರಾಮ ಜೂನಿಯರ್ ಕಲಾವಿದೆ ಶ್ರಾವ್ಯ ಮರವಂತೆ ಸೇರಿದಂತೆ 36 ಸಾಧಕರಿಗೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

    ರಾಜ್ಯೋತ್ಸವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ನೀಡುವ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ನಾಲ್ಕು ಸಂಘಸಂಸ್ಥೆ ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗಿದೆ. 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ಆಯ್ಕೆಗೊಂಡವರ ವಿವರ ಇಲ್ಲಿದೆ.

    ದೈವಾರಾಧನೆ: ಶ್ರೀರಂಗ ಪಾಣಾ, ಮೋಂಟು ಪಾಣರ, ಮಂಜುನಾಥ ಶೇರಿಗಾರ.
    ರಂಗಭೂಮಿ: ಪಾರಂಪಳ್ಳಿ ನರಸಿಂಹ ಐತಾಳ್, ವಸಂತ ಪೂಜಾರಿ ಮುನಿಯಾಲು, ದಿನಕರ ಭಂಡಾರಿ ಕಣಜಾರು
    ಸಾಹಿತ್ಯ: ನವೀನ್ ಸುವರ್ಣ ಪಡ್ರೆ
    ಯಕ್ಷಗಾನ: ಸುದರ್ಶನ ಉರಾಳ, ಶಶಿಕಲಾ ಪ್ರಭು, ನಾಗೇಶ್ ಗಾಣಿಗ
    ಪತ್ರಿಕೋದ್ಯಮ: ಉದಯ ಶಂಕರ ಪಡಿಯಾರ್, ಆರ್ ಶ್ರೀಪತಿ ಹೆಗಡೆ ಹಕ್ಲಾಡಿ
    ಶೈಕ್ಷಣಿಕ: ಡಾ ಕೆ ಗೋಪಾಲಕೃಷ್ಣ ಭಟ್, ಡಾ ಸುಧಾಕರ ಶೆಟ್ಟಿ, ಡಾ ಸುಧೀರ್ ರಾಜ್ ಕೆ
    ಸಂಕೀರ್ಣ: ಪೂರ್ಣಿಮಾ ಜನಾರ್ದನ್ ಕೊಡವೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಹರಿಪ್ರಸಾದ್ ರೈ
    ಯೋಗ : ಶೇಖರ ಕಡ್ತಲ
    ಕಲೆ (ಕರಕುಶಲ): ಬಾಬು ಕೊರಗ
    ಕಲೆ ಕಾಷ್ಟ ಶಿಲ್ಪ: ಶ್ರೀಪತಿ ಆಚಾರ್ಯ


    ಕಲೆ, ಪೆನ್ಸಿಲ್ ಲೆಡ್ ಕಲೆ : ಸುರೇಂದ್ರ
    ಕಲೆ (ಶಿಲ್ಪಕಲೆ): ರಾಧಾ ಮಾಧವ ಶೆಣೈ
    ವೈದ್ಯಕೀಯ : ಡಾ ಎಂ ರವಿರಾಜ್ ಶೆಟ್ಟಿ
    ಸಂಗೀತ: ಪ್ರಕಾಶ್ ದೇವಾಡಿಗ, ಮಾಯಾ ಕಾಮತ್
    ನೃತ್ಯ: ವಿಧೂಷಿ ಯಶ ರಾಮಕೃಷ್ಣ, ಕಿಶೋರ್ ದೇವಾಡಿಗ
    ಸಮಾಜಸೇವೆ: ಇಮ್ತಿಯಾಝ್, ಕೂಸ ಕುಂದರ್, ಜಯಂತ್ ರಾವ್, ನಾರಾಯಣ ಮೂರ್ತಿ
    ಕ್ರೀಡೆ: ಶರತ್ ಶೆಟ್ಟಿ, ನಾಗಶ್ರೀ ಗಣೇಶ್ ಶೇರುಗಾರ
    ಬಾಲಪ್ರತಿಭೆ: ತನುಶ್ರೀ ಪಿತ್ರೋಡಿ, ಕು. ಶ್ರಾವ್ಯ ಮರವಂತೆ
    ಸಂಘ ಸಂಸ್ಥೆ: ಸ್ವಚ್ಚ್ ಭಾರತ್ ಫ್ರೆಂಡ್ಸ್ ಉಡುಪಿ, ಉಮಾಮಹೇಶ್ವರ ಭಜನಾ ಮಂದಿರ ಅಂಬಲಪಾಡಿ, ಉಡುಪಿ, ದುರ್ಗಾಪರಮೇಶ್ವರಿ ಫ್ರೇಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ, ವೆಂಕಟರಮಣ ಸ್ಪೋಟ್ರ್ಸ್ & ಕಲ್ಚರಲ್ಸ್ ಪಿತ್ರೋಡಿ ಉದ್ಯಾವರ.

  • ಯೋಗ ಮಾಡ್ತಿದ್ದಾಗ ಆನೆ ಮೇಲಿಂದ ಬಿದ್ದ ಬಾಬಾ ರಾಮ್‍ದೇವ್ ವೀಡಿಯೋ ವೈರಲ್

    ಯೋಗ ಮಾಡ್ತಿದ್ದಾಗ ಆನೆ ಮೇಲಿಂದ ಬಿದ್ದ ಬಾಬಾ ರಾಮ್‍ದೇವ್ ವೀಡಿಯೋ ವೈರಲ್

    ಲಕ್ನೋ: ಯೋಗ ಮಾಡುತ್ತಿರುವಾಗ ಯೋಗ ಗುರು ಬಾಬಾ ರಾಮ್‍ದೇವ್ ಆನೆಯ ಮೇಲಿಂದ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಥುರಾದ ರಾಮನಾರತಿಯ ಗುರು ಶರಣನ್ ಆಶ್ರಮದಲ್ಲಿ ಸಂತರಿಗೆ ಯೋಗ ಕಲಿಸುವಾಗ ಈ ಘಟನೆ ಸಂಭವಿಸಿದೆ. 22 ಸೆಕೆಂಡ್‍ಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆನೆಯ ಮೇಲೆ ಬಾಬಾ ರಾಮ್‍ದೇವ್ ಯೋಗಾಸನ ಮಾಡುತ್ತಿದ್ದು, ಕೆಲವೇ ಸೆಕೆಂಡ್‍ಗಳ ಬಳಿಕ ಆನೆ ಅತ್ತಿತ್ತ ವಾಲುತ್ತದೆ. ಈ ವೇಳೆ ರಾಮ್‍ದೇವ್ ಅವರ ಬ್ಯಾಲೆನ್ಸ್ ತಪ್ಪಿದ್ದು, ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಮೇಲಕ್ಕೆದ್ದು ಮುಂದೆ ಹೋಗಿದ್ದಾರೆ.

    ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ನೆಟ್ಟಿಗರು ಈ ಕುರಿತು ಕಮೆಂಟ್ ಮಾಡುತ್ತಿದ್ದಾರೆ. ಆನೆಗೆ ಯೋಗವನ್ನು ಸರಿಯಾಗಿ ಕಲಿಸಲಾಗಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದರೆ, ಬೀಳುತ್ತಿದ್ದಂತೆ ಕ್ಷಣಮಾತ್ರದಲ್ಲೇ ಮೇಲೆಳಲು ಬಾಬಾ ರಾಮ್‍ದೇವ್ ರಿಂದ ಮಾತ್ರ ಸಾಧ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ವಾಹ್ ನಾವು ಚಿಕ್ಕವರಿದ್ದಾಗಿನ ಉತ್ಸಾಹವನ್ನು ಬಾಬಾ ರಾಮ್‍ದೇವ್ ಇನ್ನೂ ಹೊಂದಿದ್ದಾರೆ ಇನ್ನೊಬ್ಬರು ತಿಳಿಸಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ ಎದ್ದು ನಿಂತು ನಕ್ಕಿರುವುದು ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಅಲ್ಲದೆ ಅವರು ಬಿದ್ದಿಲ್ಲ ಬದಲಿಗೆ ಜಂಪ್ ಮಾಡಿದ್ದಾರೆ ಅಂತ ಮಗದೊಬ್ಬರು ಕಮೆಂಟ್ ಮಾಡಿದ್ದಾರೆ.

    ಈ ಹಿಂದೆ ಬಾಬಾ ರಾಮ್‍ದೇವ್, ಸೈಕಲ್ ಮೇಲಿಂದ ಬಿದ್ದಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ವೇಳೆ ಸಹ ಸಾಕಷ್ಟು ಜನ ಅವರನ್ನು ಟ್ರೋಲ್ ಮಾಡಿದ್ದರು. ಬಾಬಾ ರಾಮ್‍ದೇವ್ ಅವರು ಯೋಗಾಸನ ಹಾಗೂ ಯೋಗದ ವಿವಿಧ ಭಂಗಿಗಳ ಮೂಲಕವೇ ಪ್ರಸಿದ್ಧಿ ಪಡೆದಿದ್ದು, 2002ರಿಂದ ಅವರು ದೊಡ್ಡ ಪ್ರಮಾಣದ ಯೋಗ ಕ್ಯಾಂಪ್‍ಗಳನ್ನು ಆಯೋಜಿಸುತ್ತಿದ್ದಾರೆ. ಅಲ್ಲದೆ ಟಿವಿ ವೀಕ್ಷಕರಿಗಾಗಿ ಸಹ ಯೋಗವನ್ನು ರೆಕಾರ್ಡ್ ಮಾಡುತ್ತಾರೆ.