Tag: ಯೋಗೀಶ್ವರ್

  • ಸಿ.ಪಿ ಯೋಗೀಶ್ವರನನ್ನು ಮಂತ್ರಿ ಮಾಡಬೇಕು: ಅಶ್ವಥ್ ನಾರಾಯಣ್

    ಸಿ.ಪಿ ಯೋಗೀಶ್ವರನನ್ನು ಮಂತ್ರಿ ಮಾಡಬೇಕು: ಅಶ್ವಥ್ ನಾರಾಯಣ್

    ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಸಿ.ಪಿ. ಯೋಗೀಶ್ವರ್ ಬಹಳಷ್ಟು ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಲಿ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.

    ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಶುಕ್ರವಾರ ಉಡುಪಿಗೆ ಆಗಮಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಶಾಸಕ ಯೋಗೀಶ್ವರ್ ಪರ ಬ್ಯಾಟ್ ಮಾಡಿದರು. ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯವಿದೆ. ಅವರಿಗೂ ಸಚಿವ ಸ್ಥಾನದ ಅಪೇಕ್ಷೆ ಇದೆ. ಅಲ್ಲದೇ ನಮ್ಮ ಅಭಿಪ್ರಾಯವೂ ಅದೇ ಆಗಿದೆ ಎಂದರು.

    ಈ ಬಗ್ಗೆ ಕೇಂದ್ರದ ವರಿಷ್ಠರು ಮತ್ತು ಮುಖ್ಯಮಂತ್ರಿ ಅವರು ಸಮಾಲೋಚನೆ ಮಾಡುತ್ತಾರೆ. ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸಾಕಷ್ಟು ಗಮನಸೆಳೆದಿದೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಒಂದು ಜಟಿಲ ವಿಚಾರವಾಗಿದೆ. ಅಲ್ಪಾವಧಿಯಲ್ಲಿ ಎಲ್ಲವೂ ಗೊತ್ತಾಗಲಿದೆ. ಬೇರೆ ಪಕ್ಷದಿಂದ ಬಿಜೆಪಿಗೆ ಬಂದವರಿಗೆ ಸ್ಥಾನ ನೀಡುವುದು ಮೂಲ ಬಿಜೆಪಿಗರಿಗೆ ಬೇಸರ ವಿಚಾರವಾದರೂ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ವಲಸೆ ಬಂದವರೂ ಸರ್ಕಾರ ರಚನೆಗೆ ಕಾರಣೀಕರ್ತರಾಗಿದ್ದಾರೆ ಎಂದು ತಿಳಿಸಿದರು.

    ಬಿಜೆಪಿಯಲ್ಲಿದ್ದಾಗ ಎಲ್ಲರೂ ಒಂದೇ. ಒಳಗೆ ಹೊರಗೆ ಅನ್ನೋ ಭಾವನೆ ಸರಿಯಲ್ಲ, ತಾರತಮ್ಯಕ್ಕೆ ಅವಕಾಶ ಇಲ್ಲ. ಎಲ್ಲರನ್ನೂ ಕುಟುಂಬದ ರೀತಿ ಜೋಡಿಸಿಕೊಂಡು ಹೋಗಬೇಕಾಗುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

  • ಇಷ್ಟರಲ್ಲೇ ಬರಲಿದೆ ಶೀತಲ್ ಶೆಟ್ಟಿ ನಿರ್ದೇಶನದ ಕಾರು!

    ಇಷ್ಟರಲ್ಲೇ ಬರಲಿದೆ ಶೀತಲ್ ಶೆಟ್ಟಿ ನಿರ್ದೇಶನದ ಕಾರು!

    ಹಿಂದೆ ಸಂಗಾತಿ ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ಶೀತಲ್ ಶೆಟ್ಟಿ. ಪತಿಬೇಕು ಡಾಟ್ ಕಾಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಯಶಸ್ವಿಯಾಗಿದ್ದರೂ ನಿರ್ದೇಶನದತ್ತಲೇ ಪ್ರಧಾನ ಆಸಕ್ತಿ ಹೊಂದಿರುವ ಅವರೀಗ ಕಾರು ಎಂಬ ಮತ್ತೊಂದು ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದನ್ನು ಇದೇ ತಿಂಗಳ ಹದಿನೈದನೇ ತಾರೀಕಿನಂದು ಬಿಡುಗಡೆ ಮಾಡಲು ಶೀತಲ್ ಮುಂದಾಗಿದ್ದಾರೆ.

    ಸಂಗಾತಿ ಚಿತ್ರದಲ್ಲಿ ಸಂಬಂಧಗಳ ಬಗೆಗಿನ ಸೂಕ್ಷ್ಮ ಕಥೆಯನ್ನು ಶೀತಲ್ ಪ್ರೇಕ್ಷಕರ ಮುಂದಿಟ್ಟಿದ್ದರು. ಈ ಬಾರಿ ಬಾಲ್ಯದಲ್ಲಿ ಎಲ್ಲರನ್ನೂ ಕಾಡಬಹುದಾದ ಕನಸಿನಂಥಾ ವಿಚಾರವನ್ನು ಕಾರು ಕಿರುಚಿತ್ರದ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಎಳೇ ವಯಸ್ಸಿನಲ್ಲಿ ಮನಸೆಳೆಯುವ ಯಾವುದೇ ವಸ್ತಗಳ ಬಗ್ಗೆ ಥರ ಥರದ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ಏನೇನಿರಬಹುದೆಂಬುದರ ಬಗ್ಗೆ ವಾಸ್ತವವನ್ನು ಮೀರಿಕೊಂಡ ರೋಮಾಂಚಕ ಕಲ್ಪನೆಗಳು ಕಾಡುತ್ತವೆ. ಹಾಗೆ ಎಳೇ ಜೀವವೊಂದನ್ನು ಕಾರೆಂಬ ಮಾಯೆ ಕಲ್ಪನೆಯಾಗಿ, ಬೆರಗಾಗಿ ಕಾಡುವಂಥಾ ಕಥೆ ಈ ಕಿರುಚಿತ್ರದ್ದು.

    ಕಾರು ಕಥೆಗೆ ಸರಿ ಹೊಂದುವಂಥಾ ಹೆಣ್ಣು ಮಗುವನ್ನು ಆಡಿಷನ್ ನಡೆಸಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಮಗು ನಿರೀಕ್ಷೆಗಿಂತಲೂ ಹೆಚ್ಚೇ ಪರಿಣಾಮಕಾರಿಯಾಗಿ ನಟಿಸಿದೆಯಂತೆ. ಇದರ ಚಿತ್ರೀಕರಣ ಮಾಕೋನಹಳ್ಳಿ ಡ್ಯಾಂನ ಸುತ್ತಮುತ್ತಲ ರಮಣೀಯ ಪ್ರದೇಶಗಳಲ್ಲಿ ನಡೆಸಲಾಗಿದೆ. ಯೋಗೀಶ್ವರ್ ಛಾಯಾಗ್ರಹಣ, ಋತ್ವಿಕ್ ಸಂಕಲನ, ಅನಂತ್ ಕಾಮತ್ ಸಂಗೀತ ನಿರ್ದೇಶನ ಈ ಕಿರು ಚಿತ್ರಕ್ಕಿದೆ. ಕಾರು ಎಂಬ ಕನಸಿನಂಥಾ ಕಥೆಯ ಮೂಲಕ ಮತ್ತೊಂದು ಸಲ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿಯಲ್ಲಿ ಶೀತಲ್ ಅವರಿದ್ದಾರೆ. ಈ ಹಿಂದೆ ಸಂಗಾತಿ ಕಿರುಚಿತ್ರಕ್ಕೆ ಸಿಕ್ಕಂಥಾದ್ದೇ ಸ್ಪಂದನೆ ಕಾರಿಗೂ ಸಿಗುತ್ತದೆಂಬ ನಿರೀಕ್ಷೆಯೂ ಅವರಲ್ಲಿದೆ.

    https://twitter.com/isheethalshetty/status/1204435062034321408