Tag: ಯೋಗಿ ಆದಿತ್ಯಾನಾಥ್

  • ಯುಪಿಯಲ್ಲಿ ಇಂದಿನಿಂದ ಪಾಲಿಥಿನ್, ಆಗಸ್ಟ್ 1ರಿಂದ ಪ್ಲಾಸ್ಟಿಕ್ ನಿಷೇಧ

    ಯುಪಿಯಲ್ಲಿ ಇಂದಿನಿಂದ ಪಾಲಿಥಿನ್, ಆಗಸ್ಟ್ 1ರಿಂದ ಪ್ಲಾಸ್ಟಿಕ್ ನಿಷೇಧ

    – ಕಾನೂನು ಉಲ್ಲಂಘಿಸಿದವ್ರಿಗೆ 1 ಲಕ್ಷದವರೆಗೆ ದಂಡ!

    ಲಕ್ನೋ: ನಗರಗಳ ದೈನಂದಿನ ಚಟುವಟಿಕೆಗಳಲ್ಲಿ ಹೊಸ ಬದಲಾವಣೆಯನ್ನು ಉತ್ತರ ಪ್ರದೇಶ ಸರ್ಕಾರ ತರಲಿದೆ. ಯೋಗಿ ಆದಿತ್ಯಾನಾಥ್ ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ಬ್ಯಾಗ್‍ಗಳ ಬಳಕೆ ಮೇಲೆ ನಿಷೇಧಾಜ್ಞೆಯನ್ನು ಇಂದಿನಿಂದ ಜಾರಿಗೆ ತರಲಿದೆ.

    ಮಹಾರಾಷ್ಟ್ರದ ಬಿಜೆಪಿ ಸರ್ಕಾರವೂ ಕೂಡ ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಜಾರಿಗೆ ತರಲು ಯೋಜನೆ ನಡೆಸಿದೆ. ಈ ಕಾನೂನು ಇಂದಿನಿಂದ ಕಾರ್ಯರೂಪಕ್ಕೆ ಬರುವುದಾಗಿ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಡಾ. ಅನೂಪ್ ಚಂದ್ರ ಪಾಂಡೆ ಸ್ಪಷ್ಟಪಡಿಸಿದ್ದಾರೆ.

    ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಪ್ಲಾಸ್ಟಿಕ್ ನಿಷೇಧ ಮಾಡುವ ಕುರಿತು ಮೊದಲೇ ರಾಜ್ಯದ ಜನರಿಗೆ ತಿಳಿಸಿ, ತಮ್ಮ ಸರ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರು. ಪರಿಸರವನ್ನು ಕಾಪಾಡಲು, ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿಸಲು ಈ ದೊಡ್ಡ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇವೆ ಎಂದು ಜುಲೈ 6ರಂದು ನಿಷೇಧಾಜ್ಞೆ ಕುರಿತು ಘೋಷಿಸುವ ಸಂದರ್ಭದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಜುಲೈ 15 ರಿಂದ ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ : ಯೋಗಿ ಆದಿತ್ಯನಾಥ್

    ರಾಜ್ಯ ಸರ್ಕಾರವು ಪ್ಲಾಸ್ಟಿಕ್ ನಿಷೇಧಾಜ್ಞೆ ಕಾನೂನು ಬಾಹಿರವಾಗಿಸಲು ಶಾಸನವನ್ನು ರೂಪಿಸಲಿದೆ. ಈ ಕಾನೂನನ್ನು ಉಲ್ಲಂಘಿಸಿದವರ ಮೇಲೆ 10,000 ರೂ.ಗಳಿಂದ ಸುಮಾರು 1 ಲಕ್ಷ ರೂ.ಗಳಷ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಸರ್ಕಾರವು ನಿಷೇಧಾಜ್ಞೆಯನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲು ಯೋಚಿಸಿದೆ. ಇಂದಿನಿಂದ ಪಾಲಿಥಿನ್ ಚೀಲಗಳ ಬಳಕೆ ನಿಷೇಧಿಸಲಿದೆ. ನಂತರ ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಹಾಗೂ ಥರ್ಮಾಕೋಲ್ ಕಪ್ಪುಗಳು, ಲೋಟ, ಪ್ಲೇಟ್ ಇತ್ಯಾದಿಗಳನ್ನು ನಿಷೇಧಿಸಲು ಮುಂದಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

  • ಉತ್ತರಪ್ರದೇಶದಲ್ಲಿ ಶಿಕ್ಷಕರಿಗೆ ಆಧಾರ್ ಇಲ್ಲದೇ ಇದ್ರೆ ಸಂಬಳ ಜಮೆ ಆಗಲ್ಲ!

    ಉತ್ತರಪ್ರದೇಶದಲ್ಲಿ ಶಿಕ್ಷಕರಿಗೆ ಆಧಾರ್ ಇಲ್ಲದೇ ಇದ್ರೆ ಸಂಬಳ ಜಮೆ ಆಗಲ್ಲ!

    ಲಕ್ನೋ: ಉತ್ತರಪ್ರದೇಶದದಲ್ಲಿ ಸರ್ಕಾರಿ ಶಿಕ್ಷಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದದೇ ಇದ್ದರೆ ಮುಂದೆ ಅವರ ಖಾತೆಗೆ ಸಂಬಳ ಜಮೆ ಮಾಡದೇ ಇರಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.

    ಆಧಾರ್ ಕಡ್ಡಾಯಗೊಳಿಸುವ ಸಂಬಂಧ ಪ್ರಾಥಮಿಕ ಶಿಕ್ಷಣ ಸಚಿವ ಅನುಪಮ್ ಜೈಸ್ವಾಲ್ ಭಾನುವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

    ಪಾರದರ್ಶಕತೆಯನ್ನು ತರಲು ಶಿಕ್ಷಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಬೇಕು. ಅಷ್ಟೇ ಅಲ್ಲದೇ ಗುರುತಿನ ಪತ್ರವಾಗಿಯೂ ಆಧಾರ್ ಬಳಸಲು ಸರ್ಕಾರ ಮುಂದಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಸ್ತುತ ಪ್ರಾಥಮಿಕ ಶಾಲೆಯ ಮತ್ತು ಪ್ರೌಢ ಶಾಲೆಯ ಸೇರಿ ಒಟ್ಟು 4.95 ಲಕ್ಷ ಜನ ಶಿಕ್ಷಕರಿದ್ದಾರೆ. ಈಗಾಗಲೇ ಬಹಳಷ್ಟು ಶಿಕ್ಷಕರು ಆಧಾರ್ ಕಾರ್ಡ್ ಹೊಂದಿದ್ದಾರೆ. ಆಧಾರ್ ಕಾರ್ಡ್ ಹೊಂದಲು ಶಿಕ್ಷಕರಿಗೆ ಜುಲೈ ತಿಂಗಳ ಡೆಡ್‍ಲೈನ್ ನೀಡಲಾಗಿದ್ದು, ಈ ಡೆಡ್‍ಲೈನ್ ಒಳಗಡೆ ಆಧಾರ್ ಪಡೆಯದೇ ಇದ್ದರೆ ಮುಂದೆ ಸಂಬಳವನ್ನು ಖಾತೆಗೆ ಜಮೆ ಮಾಡದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

    ಆಧಾರ್ ಕಾರ್ಡ್ ಇಲ್ಲದೇ ಇದ್ದಲ್ಲಿ ಶಾಲೆಗಳಲ್ಲಿ ಆಧಾರ್ ನೋಂದಣಿ ಕಾರ್ಯಕ್ರಮ ನಡೆಸಲಾಗುವುದು. ಶಿಕ್ಷಕರ ಜೊತೆ 1 ರಿಂದ 7 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಆಧಾರ್ ಅನ್ನು ಕಡ್ಡಾಯವಾಗಿ ಹೊಂದಬೇಕು ಎಂದು ಸಚಿವ ಅನುಪಮ್ ಜೈಸ್ವಾಲ್ ತಿಳಿಸಿದ್ದಾರೆ.

    ಈಗಾಗಲೇ ಶೇ.30 ರಷ್ಟು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಧಾರ್ ಹೊಂದಿದ್ದಾರೆ. ಆದರೆ ದೂರದಪ್ರದೇಶದಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ ಮಾಡಿಲ್ಲ. ಕೆಲ ಶಾಲೆಗಳಲ್ಲಿ ನಕಲಿ ಟೀಚರ್ ಗಳಿದ್ದು, ಈ ಸಮಸ್ಯೆ ಆಧಾರ್‍ನಿಂದ ಪರಿಹಾರವಾಗಲಾರದು ಎಂದು ಅಧಿಕಾರಿ ತಿಳಿಸಿದ್ದಾರೆ.

    ಜುಲೈ ಒಂದರಿಂದ ಐಟಿ ರಿಟರ್ನ್ ಮತ್ತು ಪ್ಯಾನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್ ನಿರ್ಧಾರ ಪ್ರಕಟವಾದ ಬಳಿಕ ಯೋಗಿ ಸರ್ಕಾರ ಶಿಕ್ಷಕರಿಗೆ ಆಧಾರ್ ಕಡ್ಡಾಯ ಮಾಡಿದೆ.

    ಇದನ್ನೂ ಓದಿ: 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್