Tag: ಯೂಸುಫ್ ಪಠಾಣ್

  • ತೃಣಮೂಲ ಕಾಂಗ್ರೆಸ್‌ನ 42 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಾಜಿ ಕ್ರಿಕೆಟಿಗ ಯುಸೂಫ್‌ ಪಠಾಣ್‌ ಕಣಕ್ಕೆ

    ತೃಣಮೂಲ ಕಾಂಗ್ರೆಸ್‌ನ 42 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಾಜಿ ಕ್ರಿಕೆಟಿಗ ಯುಸೂಫ್‌ ಪಠಾಣ್‌ ಕಣಕ್ಕೆ

    – ನಟಿ ರಚನಾ ಬ್ಯಾನರ್ಜಿ ಸೇರಿ ಹಲವು ಹೊಸ ಮುಖಗಳಿಗೆ ಮಣೆ

    ಕೋಲ್ಕತ್ತಾ: ಮುಂಬರುವ 2024ರ ಲೋಕಸಭಾ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ತೃಣಮೂಲ ಕಾಂಗ್ರೆಸ್‌ (TMC) 42 ಅಭ್ಯರ್ಥಿಗಳ (Lok Sabha candidates) ‌ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿದ್ದಾರೆ.

    ಸದ್ಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಅವರು 5 ಬಾರಿ ಪ್ರತಿನಿಧಿಸಿದ್ದ ಬರ್ಹಾಂಪುರ ಕ್ಷೇತ್ರದಿಂದ ಯೂಸುಫ್ ಪಠಾಣ್ (Yusuf Pathan) ಸ್ಪರ್ಧಿಸಲಿದ್ದಾರೆ. ಆದ್ರೆ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಇನ್ನೂ ತನ್ನ ಅಭ್ಯರ್ಥಿಯನ್ನ ಘೋಷಿಸಿಲ್ಲ. ಮೂಲಗಳ ಪ್ರಕಾರ ಅಧೀರ್‌ ರಂಜನ್‌ ಅವರೇ ಮತ್ತೆ ಸ್ಪರ್ಧಿಸಬಹುದು ಎನ್ನಲಾಗಿದೆ.

    ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಮೆಗಾ ರ‍್ಯಾಲಿಯಲ್ಲಿ ಟಿಎಂಸಿ ತನ್ನ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಗಾರಪ್ಪ ಫ್ಯಾಮಿಲಿ V/S ಯಡಿಯೂರಪ್ಪ ಫ್ಯಾಮಿಲಿ

    8 ಹಾಲಿ ಸಂಸದರಿಗೆ ಕೊಕ್‌:
    42 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಟಿಎಂಸಿ, ಪ್ರಸಕ್ತ ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಹಾಲಿ ಸಂಸದರನ್ನು ಕೈಬಿಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮಾಜಿ ಕ್ರಿಕೆಟಿಗ ಯುಸೂಫ್‌ ಪಠಾಣ್‌, ಬಾಲಿವುಡ್ ದಂತಕಥೆ ಶತ್ರುಗನ್ ಸಿನ್ಹಾ, ಹೂಗ್ಲಿಯ ಜನಪ್ರಿಯ ನಟಿ ರಚನಾ ಬ್ಯಾನರ್ಜಿ (Rachana Banerjee) ಅವರಂತಹ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.

    ಅಲ್ಲದೇ ಈ ಹಿಂದೆ ಲೋಕಸಭೆಯಿಂದ ಉಚ್ಛಾಟಿತರಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಕೃಷ್ಣನಗರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಟಿಎಂಸಿ ಏಕಾಂಗಿಯಾಗಿ ಕಣಕ್ಕಿಳಿಯಲು ಅಭ್ಯರ್ಥಿಗಳನ್ನ ಘೋಷಿಸಿದ್ದು, I.N.D.I.A ಒಕ್ಕೂಟದ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Congress 1st Lok Sabha List: ಮತ್ತೆ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗಿಳಿದ ರಾಗಾ!

  • ಕ್ರಿಕೆಟ್‍ಗೆ ಗುಡ್ ಬೈ ಹೇಳಿದ ಯೂಸುಫ್ ಪಠಾಣ್

    ಕ್ರಿಕೆಟ್‍ಗೆ ಗುಡ್ ಬೈ ಹೇಳಿದ ಯೂಸುಫ್ ಪಠಾಣ್

    ನವದೆಹಲಿ: ಭಾರತ ತಂಡದ ಮಾಜಿ ಆಲ್‍ರೌಂಡರ್ ಆಟಗಾರ ಯೂಸುಫ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಗುಡ್ ಬೈ ಹೇಳಿದ್ದಾರೆ.

    2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯೂಸುಫ್ ಪಠಾಣ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮತ್ತು ಸ್ಪಿನ್ ಕೈಚಳಕದಿಂದ ಎಲ್ಲರ ಗಮನಸೆಳೆದಿದ್ದರು.

    ಯೂಸುಫ್ ಪಠಾಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿದಾಯ ಪತ್ರವನ್ನು ಹಾಕಿದ್ದು, ನಾನು ನನ್ನ ನನ್ನ ಜೀವನದ ಕ್ರಿಕೆಟ್ ಇನ್ನಿಂಗ್ಸ್‍ಗೆ ಪೂರ್ಣ ವಿರಾಮ ಹಾಕುವ ಕಾಲ ಬಂದಿದೆ. ಇಂದಿನಿಂದ ನಾನು ಎಲ್ಲಾ ಪ್ರಕಾರದ ಕ್ರಿಕೆಟ್‍ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಕ್ರಿಕೆಟ್ ಜೀವನದಲ್ಲಿ ಜೊತೆಯಾದ ಸ್ನೇಹಿತರು, ಸಹ ಆಟಗಾರರು, ಕುಟುಂಬ ವರ್ಗ, ಅಭಿಮಾನಿಗಳು, ಹಲವು ತಂಡಗಳು, ತರಬೇತುದಾರರು ಹಾಗೂ ನನ್ನ ಎಲ್ಲಾ ದೇಶವಾಸಿಗಳು ನನಗೆ ಬೆಂಬಲ ಸೂಚಿಸಿರುವುದಕ್ಕಾಗಿ ಧನ್ಯವಾದ. ನಾನು 2011 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದಾಗ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲಲ್ಲಿ ಹೊತ್ತು ಸಾಗಿರುವುದು ನನಗೆ ಮರೆಯಲಾಗದ ಕ್ಷಣ ಎಂದು ನೆನಪಿಸಿಕೊಂಡಿದ್ದಾರೆ.

    ಯೂಸುಫ್ ಭಾರತದ ಪರ 57 ಏಕದಿನ ಪಂದ್ಯ ಆಡಿ 810 ರನ್ ಮತ್ತು 22 ಟಿ20 ಪಂದ್ಯವನ್ನು ಆಡಿ 236 ರನ್ ಸಿಡಿಸಿದ್ದಾರೆ. ಬಲಗೈ ಸ್ಪೋಟಕ ಬ್ಯಾಟಿಂಗ್‍ನೊಂದಿಗೆ ಬೌಲಿಂಗ್‍ನಲ್ಲೂ ಭಾರತಕ್ಕೆ ನೆರವಾಗುತ್ತಿದ್ದ ಯೂಸುಫ್ ಒಟ್ಟು 46 ವಿಕೆಟ್ ಪಡೆದು ಮಿಂಚಿದ್ದಾರೆ.

    ಯೂಸುಫ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 100 ಪಂದ್ಯಗಳಿಂದ 4825 ರನ್ ಮತ್ತು 201 ವಿಕೆಟ್ ಪಡೆದಿದ್ದಾರೆ. ಐಪಿಎಲ್ ನಲ್ಲಿ 2008ರಲ್ಲಿ ರಾಜಸ್ಥಾನ್ ರಾಯಲ್ಸ್, ಮತ್ತು 2012 ಮತ್ತು 2014ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಿ ತಂಡ ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

  • ‘ಸಮಾಜಕ್ಕಾಗಿ ನಮ್ಮ ಕೈಲಾದಷ್ಟು’- ಮಾಸ್ಕ್ ವಿತರಿಸಿದ ಪಠಾಣ್ ಬ್ರದರ್ಸ್

    ‘ಸಮಾಜಕ್ಕಾಗಿ ನಮ್ಮ ಕೈಲಾದಷ್ಟು’- ಮಾಸ್ಕ್ ವಿತರಿಸಿದ ಪಠಾಣ್ ಬ್ರದರ್ಸ್

    ಗಾಂಧಿನಗರ: ಮಹಾಮಾರಿ ಕೊರೊನಾ ವೈರಸ್ ಇಡೀ ಜಗತ್ತನ್ನು ಬೆಚ್ಚಿಬಿಳಿಸಿದೆ. ವಿವಿಧ ಆಟಗಾರರು, ಕ್ರಿಕೆಟಿಗರು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸಹೋದರರು ಮಾಸ್ಕ್‌ಗಳನ್ನು ವಿತರಿಸಿದ್ದಾರೆ.

    ಈ ಕುರಿತು ವಿಡಿಯೋ ಒಂದನ್ನು ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, ‘ಸಮಾಜಕ್ಕಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದೇವೆ. ಕೊರೊನಾ ವೈರಸ್‍ನಿಂದ ಜಾಗೃತರಾಗಿರಿ. ಒಂದು ಜಾಗದಲ್ಲಿ ಹೆಚ್ಚಿನನ ಸಂಖ್ಯೆಯಲ್ಲಿ ಸೇರಬೇಡಿ. ಮಾಸ್ಕ್ ವಿತರಣೆ ಆರಂಭ ಮಾಡಿರುವುದು ಒಂದು ಸಣ್ಣ ಪ್ರಾರಂಭವಾಗಿದ್ದು, ಮುಂದೆ ನಾವು ಹೆಚ್ಚಿನ ಸಹಾಯವನ್ನು ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

    ಜೊತೆಗೆ ವಿಡಿಯೋದಲ್ಲಿ ಯೂಸುಫ್ ಪಠಾಣ್, ನಮ್ಮ ತಂದೆ ನಡೆಸುತ್ತಿರುವ ಟ್ರಸ್ಟ್ ಮೆಹಮೊದ್ ಖಾನ್ ಪಠಾಣ್ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಮುಖವಾಡಗಳನ್ನು ದಾನ ಮಾಡಲಾಗುತ್ತಿದೆ. ಬರೋಡಾ ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಬಡ ಜನರಿಗೆ ಮಾಸ್ಕ್ ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

    ಆರೋಗ್ಯ ಸಚಿವಾಲಯ ಮಂಗಳವಾರ ಬೆಳಗ್ಗೆ 8:30ಕ್ಕೆ ನೀಡಿದ ಮಾಹಿತಿ ಪ್ರಕಾರ, ಭಾರತದಲ್ಲಿ ಈಗ ಒಟ್ಟು 492 ಕೊರೊನಾ ವೈರಸ್ ಪ್ರಕರಣಗಳಿದ್ದು, ಈ ಪೈಕಿ 446 ಪ್ರಕರಣಗಳು ಸಕ್ರಿಯವಾಗಿವೆ. ಈಗಾಗಲೇ ಕೊರೊನಾ ಸೋಂಕಿತ 8 ಜನರು ಮೃತಪಟ್ಟಿದ್ದಾರೆ.

  • ಅಂಪೈರ್ ಔಟ್ ಕೊಟ್ರು ಕ್ರೀಸಿನಲ್ಲೇ ನಿಂತ ಯೂಸುಫ್- ಅಜಿಂಕ್ಯಾ ರಹಾನೆ ಗರಂ: ವಿಡಿಯೋ

    ಅಂಪೈರ್ ಔಟ್ ಕೊಟ್ರು ಕ್ರೀಸಿನಲ್ಲೇ ನಿಂತ ಯೂಸುಫ್- ಅಜಿಂಕ್ಯಾ ರಹಾನೆ ಗರಂ: ವಿಡಿಯೋ

    ವಡೋದರಾ: 2019-20ರ ರಣಜಿ ಟ್ರೋಫಿಯಲ್ಲಿ ಮುಂಬೈ ಶುಭಾರಂಭ ಮಾಡಿದ್ದು, ಬರೋಡಾ ವಿರುದ್ಧ 309 ರನ್ ಅಂತರದ ಜಯವನ್ನು ಪಡೆದಿದೆ. ಪಂದ್ಯದಲ್ಲಿ ಮುಂಬೈ ಪರ ಯುವ ಆಟಗಾರ ಪೃಥ್ವಿ ಶಾ ದ್ವಿಶತಕ ಸಿಡಿಸಿ ಗಮನ ಸೆಳೆದರೆ, ಹಿರಿಯ ಆಟಗಾರ ಯೂಸುಫ್ ಪಠಾಣ್ ಆನ್‍ಫೀಲ್ಡ್ ಅಂಪೈರ್ ವಿರುದ್ಧ ಗರಂ ಆದ ಘಟನೆ ನಡೆದಿದೆ.

    ಬರೋಡದ 2ನೇ ಇನ್ನಿಂಗ್ಸ್ ನಲ್ಲಿ ಘಟನೆ ನಡೆದಿದ್ದು, ಮುಂಬೈ ಸ್ಪಿನ್ನರ್ ಶಶಾಂಕ್ ಅರ್ಥಡೆ ಎಸೆದ 41ನೇ ಓವರಿನ ಎಸೆತವನ್ನು ಪಠಾಣ್ ರಕ್ಷಣಾತ್ಮಕವಾಗಿ ಆಡಲು ಮುಂದಾದರು. ಆದರೆ ಯೂಸುಫ್‍ರ ಪ್ಯಾಡ್‍ಗೆ ಬಡಿದ ಚೆಂಡು ಎದೆಗೆ ತಾಗಿ ಶಾರ್ಟ್ ಲೆಗ್‍ನಲ್ಲಿದ್ದ ಫೀಲ್ಡರ್ ಕೈಸೇರಿತ್ತು. ಮುಂಬೈ ಆಟಗಾರರು ಔಟ್ ಮನವಿ ಸಲ್ಲಿಸಿದ ಕಾರಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

    ಅಂಪೈರ್ ತೀರ್ಮಾನದಿಂದ ಕ್ಷಣ ಕಾಲ ಅಘಾತಕ್ಕೆ ಒಳಗಾದ ಯೂಸಫ್ ಕ್ರೀಸ್‍ನಲ್ಲೇ ನಿಂತರು. ಚೆಂಡು ಬ್ಯಾಟ್ ಅಥವಾ ಗ್ಲೌಸ್‍ಗೂ ತಾಗದೆ ಫೀಲ್ಡರ್ ಕೈಸೇರಿದ್ದು ರೀಪ್ಲೆಯಲ್ಲಿ ಸ್ಪಷ್ಟವಾಗಿ ಕಾಣುತಿತ್ತು. ಅಂಪೈರ್ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಯೂಸುಫ್ ಕ್ರಿಸ್‍ನಲ್ಲಿ ನಿಂತಿರುವುದನ್ನು ಕಂಡ ರಹಾನೆ ಕೂಡ ಕ್ಷಣ ಕಾಲ ಸಿಟ್ಟಾದರು. ಅಂತಿಮವಾಗಿ ಅಂಪೈರ್ ತೀರ್ಪಿನಂತೆ 14 ರನ್ ಗಳಿಸಿದ್ದ ಯೂಸುಫ್ ಒಲ್ಲದ ಮನಸ್ಸಿನಿಂದ ಪೆವಿಲಿಯನ್‍ನತ್ತ ನಡೆದರು.

    ಇದುವರೆಗೂ ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಡಿಆರ್ ಎಸ್ ಅಳವಡಿಸುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಅಂಪೈರ್ ಕೆಟ್ಟ ತೀರ್ಪಿಗೆ ಬಲಿಯಾದ 37 ವರ್ಷದ ಯೂಸುಫ್ ಒಂದೊಮ್ಮೆ ಡಿಆರ್ ಎಸ್ ಮನವಿಯ ಅವಕಾಶ ಹೊಂದಿದ್ದರೆ ತಮ್ಮ ವಿಕೆಟ್ ಕಾಯ್ದುಕೊಳ್ಳುತ್ತಿದ್ದರು.

    ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 431 ರನ್ ಗಳಿಸಿದ ಮುಂಬೈ, ಎದುರಾಳಿ ತಂಡವನ್ನು 307 ರನ್ ಗಳಿಗೆ ಕಟ್ಟಿಹಾಕಿ 2ನೇ ಇನ್ನಿಂಗ್ಸ್ ಆರಂಭಿಸಿತು. ಪೃಥ್ವಿ ಶಾ 2ನೇ ಇನ್ನಿಂಗ್ಸ್ ನಲ್ಲಿ ಸ್ಫೋಟಕ ದ್ವಿಶತಕ ಸಿಡಿಸಿದ ಕಾರಣ ಮುಂಬೈ ತಂಡ 4 ವಿಕೆಟ್ ಕಳೆದುಕೊಂಡು 409 ರನ್ ಗಳಿಗೆ ಡಿಕ್ಲೇರ್ ನೀಡಿತು. ಗೆಲ್ಲಲು 534 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಬರೋಡ ತಂಡ 224 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲುಂಡಿತು. ಪಂದ್ಯದಲ್ಲಿ 10 ವಿಕೆಟ್ ಪಡೆದ ಶಮ್ಸ್ ಮುಲಾನಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

  • ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಪಠಾಣ್ ಬ್ರದರ್ಸ್

    ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಪಠಾಣ್ ಬ್ರದರ್ಸ್

    ಮುಂಬೈ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ವಡೋದರ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಊಟ ಬಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದ ಸ್ಥಿತಿ ಎದುರಾಗಿದೆ. ಅಲ್ಲದೆ ಗುಜರಾತ್‍ನ ವಡೋದರದಲ್ಲಿ ಎರಡು ದಿನದಿಂದ ಭಾರೀ ಮಳೆಯಾಗುತ್ತಿರುವ ಕಾರಣ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಅಗತ್ಯ ವಸ್ತು ಸಿಗದೇ ಸಂತ್ರಸ್ತರು ಪರದಾಡುತ್ತಿದ್ದಾರೆ. ಹೀಗಿರುವಾಗ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸಂತ್ರಸ್ತರಿಗೆ ಊಟ ಬಡಿಸುವ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

    https://twitter.com/farheenSRK/status/1157592182242459648?ref_src=twsrc%5Etfw%7Ctwcamp%5Etweetembed%7Ctwterm%5E1157592182242459648&ref_url=https%3A%2F%2Fwww.jagran.com%2Fcricket%2Fbouncer-indian-cricketer-irfan-pathan-and-yusuf-pathan-arranges-food-for-flood-hit-victims-in-vadodara-19458435.html

    ಯೂಸುಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ಅವರು ತಮ್ಮ ತಂಡದ ಜೊತೆ ಸೇರಿ ಪ್ರವಾಹ ಸಂತ್ರಸ್ತರಿಗೆ ಊಟ ಹಾಗೂ ಅಗತ್ಯ ವಸ್ತು ನೀಡಿದ್ದಾರೆ. ಈ ವೇಳೆ ಯೂಸುಫ್ ಪಠಾಣ್ ಸಂತ್ರಸ್ತರಿಗೆ ಆಹಾರ ಸಿದ್ಧತೆ ನಡೆಸಿ, ಕೆಲವು ಮಂದಿಗೆ ಊಟ ಕೂಡ ಬಡಿಸುವುದು ಕ್ಯಾಮೆರಾದಲ್ಲಿ ಸೆರೆ ಆಗಿದೆ. ಅಲ್ಲದೆ ಇರ್ಫಾನ್ ಪಠಾಣ್ ಅವರು ಕೂಡ ಜನರ ಸಹಾಯ ಮಾಡಿದ್ದಾರೆ.

    ಅಭಿಮಾನಿಯೊಬ್ಬರು ಟ್ವಿಟ್ಟರಿನಲ್ಲಿ ಇರ್ಫಾನ್ ಹಾಗೂ ಯೂಸುಫ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ಅವರ ಬಳಿ ಸಹಾಯ ಕೇಳಿದರು. ಅಲ್ಲದೆ, “ಕೆಲವು ಯುವತಿಯರು ಭಾರೀ ಮಳೆಯಿಂದ ತಮ್ಮ ಹಾಸ್ಟಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರಿಗೆ ಅಲ್ಲಿ ತಿನ್ನಲು ಸಹ ಏನೂ ಇಲ್ಲ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿ ಇರ್ಫಾನ್ ಅವರು, “ನಿಮಗೆ ಅತಿ ಶೀಘ್ರದಲ್ಲೆ ಸಹಾಯ ಮಾಡುತ್ತೇವೆ” ಎಂದು ರೀ-ಟ್ವೀಟ್ ಮಾಡಿದ್ದರು.

  • ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್- ಅಭಿಮಾನಿಗಳ ರಿಯಾಕ್ಷನ್ ಹೀಗಿದೆ

    ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್- ಅಭಿಮಾನಿಗಳ ರಿಯಾಕ್ಷನ್ ಹೀಗಿದೆ

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ, ಹೈದರಾಬಾದ್ ನಡುವಿನ ಪಂದ್ಯದಲ್ಲಿ ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್ ಪಠಾಣ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ 9 ಓವರ್ ನಲ್ಲಿ ಸ್ಟೈಕ್ ನಲ್ಲಿದ್ದ ಕೊಹ್ಲಿ ಶಕೀಬ್ ಎಸೆತವನ್ನು ಬೌಂಡರಿಗಟ್ಟಲು ಯತ್ನಿಸಿದರು. ಈ ವೇಳೆ ಫೀಲ್ಡ್‍ನಲ್ಲಿದ್ದ 35 ವರ್ಷದ ಯೂಸುಫ್ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮದೇ ಅಭಿಪ್ರಾಯ ತಿಳಿಸಿ ಟ್ವೀಟ್ ಮಾಡಿದ್ದಾರೆ.

    ಆರ್‌ಸಿಬಿ ವಿರುದ್ಧ ಪಂದ್ಯದ ಗೆಲುವಿನೊಂದಿಗೆ ಹೈದರಾಬಾದ್ ಐಪಿಎಲ್ 2018 ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಆಡಿರುವ 10 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಪಡೆದಿರುವ ಹೈದರಾಬಾದ್ 16 ಅಂಕಗಳನ್ನು ಪಡೆದಿದೆ. ಇನ್ನು ಹೈದರಾಬಾದ್ ವಿರುದ್ಧ ಸೋಲಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದು, ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಪಡೆದು 6 ಅಂಕಗಳನ್ನು ಪಡೆದುಕೊಂಡಿದೆ.