Tag: ಯು.ಬಿ.ಬಣಕಾರ್

  • ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕಬೇಕಿದೆ- ಬಿ.ಸಿ ಪಾಟೀಲ್

    ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕಬೇಕಿದೆ- ಬಿ.ಸಿ ಪಾಟೀಲ್

    ಹಾವೇರಿ: ನನಗೆ ಒಬ್ಬಳೇ ಹೆಂಡತಿ. ಆದರೆ ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕುವಂತಾಗಿದೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಕಿಚಾಯಿಸಿದ್ದಾರೆ.

    ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆಸಿ ನಂತರ ಮಾತನಾಡಿದ ಅವರು, ಬಿಜೆಪಿಗೆ ಬಂದು ಆರನೇ ದಿನದ ಸಂಸಾರ ನನ್ನದು. ಬಣಕಾರ್ ನಾವು ಹೊಂದಿಕೊಂಡಿದ್ದೇವೆ. ಆದರೆ ಕೆಳಮಟ್ಟದ ಕಾರ್ಯಕರ್ತರೊಂದಿಗೆ ಇನ್ನೂ ಹೊಂದಿಕೊಳ್ಳಬೇಕಿದೆ. ಆ ಕಾರ್ಯಕರ್ತರು, ಈ ಕಾರ್ಯಕರ್ತರು ಅನ್ನೋದು ಇನ್ನೂ ಸ್ವಲ್ಪ ಇದೆ. ಕಾರ್ಯಕರ್ತರನ್ನ ಒಗ್ಗೂಡಿಸುವ ಕೆಲಸವಾಗಬೇಕಿದೆ. ಏಕೆಂದರೆ ಒಬ್ಬರನ್ನು ನೋಡಿದರೆ, ಇನ್ನೊಬ್ಬರು ನನ್ನನ್ನೇಕೆ ನೋಡಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಹೀಗಾಗಿ ಬಿಜೆಪಿಗೆ ಬಂದು ಇಬ್ಬರು ಹೆಂಡತಿಯರನ್ನು ನಿಭಾಯಿಸಿದಂತಾಗುತ್ತದೆ ಎಂದರು.

    ನನಗೆ ಇರೋದು ಒಬ್ಬಳೇ ಹೆಂಡತಿ ಎಂದಾಗ ಕೌರವನಿಗೆ ಇರೋದು ಒಬ್ಬಳೇ ಹೆಂಡತಿ ಎಂದು ಮಹಿಳಾ ಕಾರ್ಯಕರ್ತೆಯೊಬ್ಬರು ಕಿಚಾಯಿಸಿದರು. ಇಂದು ಪ್ರಚಾರಕ್ಕೆ ಹೋಗಬೇಕಿತ್ತು. ಆದರೆ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಪ್ರಚಾರಕ್ಕೆ ಹೋಗಲು ಆಗಲಿಲ್ಲ. ನಾವಿಬ್ಬರೂ ಒಂದಾದಾಗ ನೀವು ಬೇರೆ ಬೇರೆ ಆಗಿರೋದು ಒಳ್ಳೆಯದಲ್ಲ. ಇನ್ನೊಂದಿಷ್ಟು ಮತ ಹಾಕಿದ್ದರೆ ಬಣಕಾರ್ ಗೆಲ್ಲುತ್ತಿದ್ದರು ಅಂದುಕೊಂಡಿರುತ್ತೀರಿ. ಆದರೆ ಬಣಕಾರ್ ಗೆದ್ದಿದ್ದರೂ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ ಎಂದರು.

    ನಾನು ಬಿಜೆಪಿಗೆ ಬರಬೇಕು ಎಂದು ಬಹಳ ಜನ ಬಯಸಿದ್ದಿರಿ ಅನ್ನಿಸುತ್ತದೆ. ನಾನು ಗೆದ್ದು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದು ಮತ್ತೆ ಸ್ಪರ್ಧಿಸಬೇಕು, ಬಣಕಾರ್ ನಾವು ಒಂದಾಗಬೇಕು ಎನ್ನುವುದೆಲ್ಲ ಹಣೆಬರಹ. ಅದೇ ರೀತಿಯಾಗಿದೆ ಎಂದು ಪಾಟೀಲ್ ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.

  • ನಾಮಪತ್ರ ಸಲ್ಲಿಸದಿದ್ದರೆ ವಿಷ ಕುಡಿತೀವಿ ಅಂತಿದ್ದಾರೆ ಕಾರ್ಯಕರ್ತರು, ಧರ್ಮ ಸಂಕಟದಲ್ಲಿದ್ದೇನೆ – ಬಿಜೆಪಿ ಟಿಕೆಟ್ ಆಕಾಂಕ್ಷಿ

    ನಾಮಪತ್ರ ಸಲ್ಲಿಸದಿದ್ದರೆ ವಿಷ ಕುಡಿತೀವಿ ಅಂತಿದ್ದಾರೆ ಕಾರ್ಯಕರ್ತರು, ಧರ್ಮ ಸಂಕಟದಲ್ಲಿದ್ದೇನೆ – ಬಿಜೆಪಿ ಟಿಕೆಟ್ ಆಕಾಂಕ್ಷಿ

    ಹಾವೇರಿ: ಸೋಮವಾರ ನಾಮಪತ್ರ ಸಲ್ಲಿಸದೇ ಇದ್ದಲ್ಲಿ ವಿಷ ಕುಡಿಯುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ನಾನೀಗ ಧರ್ಮ ಸಂಕಟದಲ್ಲಿದ್ದೇನೆ. ಮತದಾರರ ಮಾತು ಕೇಳಬೇಕೋ ಅಥವಾ ನಾಯಕರ ಮಾತು ಕೇಳಬೇಕೋ ಎನ್ನುವ ಗೊಂದಲದಲ್ಲಿದ್ದೇನೆ ಎಂದು ಹಿರೇಕೆರೂರು ಮಾಜಿ ಶಾಸಕ, ಬಿಜೆಪಿ ಟಿಕೆಟ್ ಆಕಾಂಕ್ಷಿ ಯು.ಬಿ.ಬಣಕಾರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರು ಹೊಂದಿಕೊಂಡರೆ ಕಾರ್ಯಕರ್ತರು ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಯಡಿಯೂರಪ್ಪನವರ ಮೇಲೆ ಗೌರವವಿಟ್ಟು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರೆ ಜನ ಕೇಳುವ ಸ್ಥಿತಿಯಲ್ಲಿಲ್ಲ. ಸಾಧ್ಯವಾದಷ್ಟು ಕಾರ್ಯಕರ್ತರ ಮನವೊಲಿಸುತ್ತೇನೆ. ಇನ್ನೂ ಸಮಯ ಇದೆ. ಸೋಮವಾರದವರೆಗೆ ಕಾದು ನೋಡೋಣ. ಕಾರ್ಯಕರ್ತರು ಮತ್ತು ಬೆಂಬಲಿಗರ ಮನವೊಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಅನರ್ಹ ಶಾಸಕರೇ ಚುನಾವಣೆಗೆ ಸ್ಪರ್ಧಿಸುತ್ತಾರೋ ಅಥವಾ ಅವರ ಕುಟುಂಬದವರು ಸ್ಪರ್ಧಿಸುತ್ತಾರೋ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಪ್ರತಿಭಟನೆ ಮಾಡುತ್ತಿರುವ ಮುಖಂಡರನ್ನು ಸಮಾಧಾನ ಮಾಡಿ ಕಳುಹಿಸಬೇಕು ಎಂಬ ವಿಚಾರದಲ್ಲಿದ್ದೇನೆ. ಇಷ್ಟೊಂದು ಜನರು ಸೇರಿದ್ದಾರೆ. ಟಿಕೆಟ್ ಕೈ ತಪ್ಪಿದೆ ಎನ್ನವ ಪ್ರಶ್ನೆ ಉದ್ಭವಿಸಲ್ಲ. ಎರಡು ದಿನಗಳು ಕಾದು ನೋಡೋಣ ಎಂದರೂ ಕೇಳುತ್ತಿಲ್ಲ. ಈಗಲೇ ನಾಮಪತ್ರ ಸಲ್ಲಿಸಿ ಎನ್ನುತ್ತಿದ್ದಾರೆ. ಈ ಬೆಳವಣಿಗೆಗಳ ಕುರಿತು ರಾಜ್ಯ ಮತ್ತು ಜಿಲ್ಲೆಯ ನಾಯಕರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

    ಉಪಚುನಾವಣೆ ಘೋಷಣೆಯಾದ ನಂತರ ಹಾವೇರಿ ಜಿಲ್ಲೆಯ ಎರಡು ಅನರ್ಹ ಕ್ಷೇತ್ರಗಳಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಬಿಜೆಪಿಯ ಮಾಜಿ ಶಾಸಕ ಯು.ಬಿ.ಬಣಕಾರಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಇಂದು ಬಣಕಾರ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಣಕಾರ ನಿವಾಸದ ಮುಂದೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಅನರ್ಹ ಶಾಸಕ ಬಿ.ಸಿ.ಪಾಟೀಲ್‍ಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ.

    ಬಣಕಾರ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 555 ಮತಗಳ ಅಂತರದಿಂದ ಬಣಕಾರ ಸೋತಿದ್ದರು. ಈ ಬಾರಿ 80 ಸಾವಿರಕ್ಕೂ ಅಧಿಕ ಮತಗಳನ್ನು ಕೊಡಿಸುತ್ತೇವೆ. ಅವರು ಮನೆಯಲ್ಲೇ ಕುಳಿತರೂ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುತ್ತೇವೆ. ಬಣಕಾರ ಅವರು ಚುನಾವಣಾ ಕಣದಲ್ಲಿ ಇರಲೇಬೇಕು ಎಂದು ಆಗ್ರಹಿದ್ದಾರೆ.

    ಯು.ಬಿ.ಬಣಕಾರ ನಿರ್ಧಾರ ಪ್ರಕಟಿಸಲು ವಿಳಂಬ ಮಾಡುತ್ತಿರುವುದಕ್ಕೆ ಬೇಸತ್ತು ಕಾರ್ಯಕರ್ತ ಬಸವರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿಜೆಪಿ ಟಿಕೆಟ್ ಕೊಡಬೇಕು ಇಲ್ಲವಾದಲ್ಲಿ, ಪಕ್ಷೇತರರಾಗಿ ನಿಲ್ಲಬೇಕೆಂದು ಒತ್ತಾಯಿಸುತ್ತಿದ್ದಾನೆ. ನಿಮ್ಮನ್ನೆ ನಂಬಿದ ಕಾರ್ಯಕರ್ತರಿಗೆ ವಿಷ ಕೊಡಿ, ಇಲ್ಲ ಚುನಾವಣೆಗೆ ನಿಲ್ಲಿ ಎಂದು ಬಣಕಾರ್ ಅವರನ್ನು ಮನೆಯೊಳಗೆ ಬಿಡದೆ ಮನೆ ಮುಂದೆ ಕುಳಿತು ಕಾರ್ಯಕರ್ತರು ಪಟ್ಟು ಹಿಡಿದ್ದಾರೆ.