Tag: ಯುಸುಫ್

  • ಇಂತಹ ಕೃತ್ಯ ಎಸಗಬೇಡ ಅಂದ್ರೂ ನನ್ನ ಮಾತು ಕೇಳಲಿಲ್ಲ- ಉಗ್ರ ಅಬು ಯುಸುಫ್ ಪತ್ನಿ

    ಇಂತಹ ಕೃತ್ಯ ಎಸಗಬೇಡ ಅಂದ್ರೂ ನನ್ನ ಮಾತು ಕೇಳಲಿಲ್ಲ- ಉಗ್ರ ಅಬು ಯುಸುಫ್ ಪತ್ನಿ

    – ಗನ್ ಪೌಡರ್, ಸ್ಫೋಟಕದ ಇತರೆ ವಸ್ತುಗಳು ಮನೆಯಲ್ಲೇ ಇವೆ

    ನವದೆಹಲಿ: ಇಂತಹ ಕೃತ್ಯ ಎಸಗಬೇಡ ಎಂದು ನಾನು ಎಷ್ಟೇ ಹೇಳಿದರೂ ಕೇಳಲಿಲ್ಲ. ನನ್ನನ್ನು ತಡೆಯಬೇಡವೆಂದು ಹೇಳುತ್ತಿದ್ದ ಎಂದು ದೆಹಲಿಯಲ್ಲಿ ಸೆರೆಯಾಗಿರುವ ಐಸಿಸ್ ಆಪರೇಟರ್ ಅಬು ಯುಸುಫ್ ಪತ್ನಿ ಕಣ್ಣೀರು ಹಾಕಿದ್ದಾರೆ.

    ಈ ಕುರಿತು ಬಲರಾಮಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗನ್ ಪೌಡರ್ ಹಾಗೂ ಸ್ಫೋಟಕದ ಇತರೆ ವಸ್ತುಗಳನ್ನು ಮನೆಯಲ್ಲೇ ಸಂಗ್ರಹಿಸಿದ್ದಾನೆ. ಈ ರೀತಿ ಕೃತ್ಯ ಮಾಡಬೇಡ ಎಂದು ನಾನು ಪರಿ ಪರಿಯಾಗಿ ಕೇಳಿಕೊಂಡರೂ, ನನ್ನನ್ನು ತಡೆಯಬೇಡ ಎಂದು ಹೊರಟು ಹೋಗುತ್ತಾನೆ ಎಂದು ಯುಸುಫ್ ಪತ್ನಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

    ಅವನನ್ನು ಕ್ಷಮಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ನನಗೆ ನಾಲ್ಕು ಮಕ್ಕಳಿದ್ದಾರೆ. ಅವರನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು ಎಂದು ಯುಸುಫ್ ಪತ್ನಿ ಪ್ರಶ್ನಿಸಿದ್ದಾರೆ.

    ಶುಕ್ರವಾರ ರಾತ್ರಿಯಷ್ಟೇ ದೆಹಲಿಯ ಧೌಲಾ ಕೌನ್ ಬಳಿ ಐಸಿಸ್ ಆಪರೇಟರ್ ಯುಸುಫ್ ಅಕಾ ಅಬುನನ್ನು ಬಂಧಿಸಲಾಗಿದ್ದು, ಈತನನ್ನು ವಿಚಾರಣೆ ನಡೆಸಿದಾಗ ಭಯಾನಕ ಅಂಶ ಹೊರ ಬಿದ್ದಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಆರೋಪಿ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಆದರೆ ಭದ್ರತೆ ಹೆಚ್ಚಿದ್ದ ಕಾರಣ ಪ್ರಯತ್ನ ವಿಫಲವಾಗಿತ್ತು ಎಂದು ಪೊಲೀಸರು ನಡೆಸಿದ ವಿಚಾರಣೆ ವೇಳೆ ಬಹಿರಂಗವಾಗಿದೆ.

    ಆರೋಪಿಯನ್ನು ಇದೀಗ 8 ದಿನಗಳ ಕಾಲ ಪೊಲೀಸ್ ರಿಮ್ಯಾಂಡ್ ಹೋಮ್ ಗೆ ವಹಿಸಲಾಗಿದ್ದು, ಶುಕ್ರವಾರ ರಾತ್ರಿ ನಡೆದ ಸಣ್ಣ ಪ್ರಮಾಣದ ಗುಂಡಿನ ಚಕಮಕಿ ಬಳಿಕ ದೆಹಲಿಯ ಪೊಲೀಸ್ ಸ್ಪೆಷಲ್ ಸೆಲ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ನಂತರ ಲೋಧಿ ಕಾಲೋನಿಯಲ್ಲಿರುವ ಸ್ಪೆಷಲ್ ಸೆಲ್ ಪೊಲೀಸ್ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

    ಈ ಕುರಿತು ಪೊಲೀಸ್ ಸ್ಪೆಷಲ್ ಸೆಲ್ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾಹ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 36 ವರ್ಷದ ಯುಸುಫ್ ಅಕಾ ಅಬುನನ್ನು ಬಂಧಿಸಿದ್ದು, ಈತ ಐಸಿಸ್ ಕಮಾಂಡರ್ ನೊಂದಿಗೆ ನೇರ ಸಂಪರ್ಕದಲ್ಲಿದ್ದ. ಅಲ್ಲದೆ ಅವನ ಪತ್ನಿ ಹಾಗೂ ನಾಲ್ಕು ಮಕ್ಕಳ ಪಾಸ್‍ಪೋರ್ಟ್ ಹೊಂದಿದ್ದಾನೆ. ಇತ್ತೀಚೆಗೆ ಸಿರಿಯಾದಲ್ಲಿ ಸಾವನ್ನಪ್ಪಿದ ಯುಸುಫ್ ಅಲ್ಹಿಂದಿ ಈತನನ್ನು ನಿರ್ವಹಣೆ ಮಾಡುತ್ತಿದ್ದ. ನಂತರ ಪಾಕಿಸ್ತಾನ ಮೂಲದ ಅಬು ಅಝಿಯಾಫಾ ಈತನನ್ನು ನಿಯಂತ್ರಿಸುತ್ತಿದ್ದ. ಆದರೆ ಅಫ್ಘಾನಿಸ್ಥಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಈತ ಸಹ ಸಾವನ್ನಪ್ಪಿದ ಎಂದು ಕುಶ್ವಾಹ್ ತಿಳಿಸಿದ್ದಾರೆ.

    30 ಬೋರ್ ಬಂದೂಕು ಸೇರಿ ಕುಕ್ಕರ್ ನಲ್ಲಿನ ಎರಡು ಐಇಡಿಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ನಾಲ್ಕು ಜೀವಂತ ಕಾರ್ಟ್‍ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಖೋರಸನ್ ಪ್ರೊವಿನ್ಸ್‍ನ ಇಸ್ಲಾಮಿಕ್ ಸ್ಟೇಟ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದ. ಕೆಲವೇ ತಿಂಗಳ ಹಿಂದೆ ತನ್ನ ಊರಿನಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಸ್ಪೆಷಲ್ ಸೆಲ್ ಡಿಸಿಪಿ ತಿಳಿಸಿದ್ದಾರೆ.