ರಾಜಕುಮಾರ, ಕೆಜಿಎಫ್, ಕಾಂತಾರದಂತಹ ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರ್ ಅವರು ನಿರ್ಮಿಸಿರುವ ‘ಯುವ’ (Yuva) ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚಿಗೆ ಹೊಸಪೇಟೆಯಲ್ಲಿ ಅದ್ದೂರಿಯಾಗಿ ನೆರವೇರಿತು. ಯುವ ರಾಜಕುಮಾರ್ (Yuvaraj Kumar) ಈ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.

ಹೊಸಪೇಟೆಯ ಪುನೀತ್ ರಾಜಕುಮಾರ್ ಮೈದಾನದಲ್ಲಿ ಅದ್ದೂರಿಯಾಗಿ ಈ ವರ್ಣರಂಜಿತ ಸಮಾರಂಭ ನಡೆಯಿತು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದರಾಮ್, ನಾಯಕ ಯುವ ರಾಜಕುಮಾರ್, ಚಿತ್ರದಲ್ಲಿ ನಟಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಹಿತ, ಗಿರಿರಾಜ್, ರಾಘು ಶಿವಮೊಗ್ಗ ಮುಂತಾದವರು ಭಾಗವಹಿಸಿದ್ದರು. ಚಿತ್ರದ ಅನೇಕ ತಂತ್ರಜ್ಞರು ಸಹ ಉಪಸ್ಥಿತರಿದ್ದರು.

ಯುವ ಚಿತ್ರ ಆಗಲು ಅಶ್ವಿನಿ ಪುನೀತ್ ರಾಜಕುಮಾರ್ ಅವರೆ ಕಾರಣ. ಅವರು ವಿಜಯ್ ಕಿರಗಂದೂರ್ ಅವರಿಗೆ ಫೋನ್ ಮಾಡಿ ನಮ್ಮ ಗುರು(ಯುವ ರಾಜಕುಮಾರ್) ವನ್ನು ನಿಮ್ಮ ಸಂಸ್ಥೆಯ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿ ಎಂದರು. ವಿಜಯ್ ಕಿರಗಂದೂರ್ ಅವರು ಒಪ್ಪಿ ಈ ಚಿತ್ರ ನಿರ್ಮಾಣ ಮಾಡಿದರು. ಯುವ ರಾಜಕುಮಾರ್ ಕೂಡ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಯುವ ಅವರು ಓಡುವ ಸನ್ನಿವೇಶವನ್ನು ಚಿತ್ರದ ಮೊದಲ ಸನ್ನಿವೇಶವಾಗಿ ಚಿತ್ರಿಸಿಕೊಳ್ಳಲಾಗಿದೆ. ಕಾರಣ, ಯುವ ಅವರು ಯಾವಾಗಲೂ ಚಿತ್ರರಂಗದಲ್ಲಿ ಓಡುವ ಕುದುರೆಯಾಗಿರಲಿ ಎಂದು. ಇನ್ನು ನನ್ನ ಚಿತ್ರತಂಡದ ಸಹಕಾರದಿಂದ ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಇದೇ ಮಾರ್ಚ್ 29 ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿ. ಈ ಸಂದರ್ಭದಲ್ಲಿ ನಾನು ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ, ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ, ನನ್ನ ತಂಡಕ್ಕೆ ಹಾಗೂ ವಿಶೇಷವಾಗಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.

ನಾನು ಮೊದಲು ನನ್ನ ಚಿಕ್ಕಪ್ಪ ಪುನೀತ್ ರಾಜಕುಮಾರ್ ಹಾಗೂ ಚಿಕ್ಕಮ್ಮ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮಾತನಾಡಿದ ಯುವ ರಾಜಕುಮಾರ್, ಏಕೆಂದರೆ ನನ್ನನ್ನು ನಾಯಕನನ್ನಾಗಿ ಮಾಡಿ ಎಂದು ಅವರಿಬ್ಬರು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಸರ್ ಗೆ ಹೇಳಿದ್ದಾರೆ. ಅವರಿಂದಲೇ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿದೆ. ನಿರ್ಮಾಪಕರಾದ ವಿಜಯ್ ಕಿರಗಂದೂರ್ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೂ ನಾನು ಚಿರ ಋಣಿ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಹಿರಿಯ ನಟರಾದ ಅಚ್ಯುತಕುಮಾರ್, ಸುಧಾರಾಣಿ ಮುಂತಾದವರಿಂದ ಸಾಕಷ್ಟು ಕಲಿತಿದ್ದೇನೆ. ನಾಯಕಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.
ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್ ಮುಂತಾದವರು ಯುವ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಸಮಾರಂಭದಲ್ಲಿ ಕರ್ನಾಟಕದ ಹೆಸರಾಂತ ಕಲಾವಿದರ ಗಾಯನ, ನೃತ್ಯ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ಸಹ ಅದ್ಭುತವಾಗಿ ಮೂಡಿಬಂತು.


ಗಾಯಕ ವಿಜಯ್ ಪ್ರಕಾಶ್ ಅವರು ‘ರಾಜಕುಮಾರ’ ಸಿನಿಮಾದ ‘ಬೊಂಬೆ ಹೇಳುತೈತೆ’ ಹಾಡು ಹಾಡುತ್ತಿದ್ದ ವೇಳೆ ವೇದಿಕೆ ಎದುರಿಗೆ ಕೂತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಬಳಿಕ ವೇದಿಕೆಯಲ್ಲಿ ಅವರು ಮಾತು ಆರಂಭಿಸುತ್ತಿದ್ದಂತೆಯೇ ಅಭಿಮಾನಿಗಳ ಅಪ್ಪು ಜಯಘೋಷ ಮುಗಿಲು ಮುಟ್ಟಿದೆ. ನಂತರ ಮಾತನಾಡಿದ ಅಶ್ವಿನಿ (Ashwini Puneethrajkumar) ಅವರು, ‘ಯುವ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ. ಯುವ ಹೊಸ ಜರ್ನಿಗೆ ಶುಭಹಾರೈಸಿದ್ದಾರೆ.
ಇನ್ನೂ ಇದೇ ವೇಳೆ, ಯುವ ಸಿನಿಮಾ ಶುರುವಾಗಿದ್ದು ಹೇಗೆ ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ರಿವೀಲ್ ಮಾಡಿದ್ದಾರೆ. ಅಶ್ವಿನಿ ಅವರು ಯುವನನ್ನು ವಿಜಯ್ ಕಿರಗಂದೂರು ಲಾಂಚ್ ಮಾಡಬೇಕು ಎಂದು ಹೇಳುತ್ತಾರೆ. ಆ ನಂತರ ವಿಜಯ್ ಅವರು ನನಗೆ ತಿಳಿಸಿದ್ದರು. ನೀನು ಯುವನನ್ನು ಲಾಂಚ್ ಮಾಡಬೇಕು ಅಂತ. ಅಂದಿನ ಒಂದು ಫೋನ್ ಕರೆ ಇವತ್ತು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ವಿಜಯ್ ಕಿರಗಂದೂರು ಸರ್ ಕೂಡ ಒಂದೇ ಮಾತು ಹೇಳಿದ್ದು, ಗುರು (ಯುವ) ಲಾಂಚ್ ಮಾಡುವುದು ಒಂದು ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕು. ನಾವು ಸಿನಿಮಾವನ್ನು ನಿಲ್ಲಿಸಬೇಕು ಅಂತ ಹೇಳಿರೋದನ್ನು ಸ್ಮರಿಸಿದ್ದರು. ಇದನ್ನೂ ಓದಿ:
‘ಯುವ’ ಚಿತ್ರದ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಇಡೀ ಕುಟುಂಬ ಹಾಜರಿ ಹಾಕುವ ಮೂಲಕ ಸಾಥ್ ನೀಡಿದ್ದರು. ಯುವರಾಜ್‌ಕುಮಾರ್ ಅಪ್ಪುಗೆ ಮಗನಿದ್ದಂತೆ, ‘ಯುವ’ ಅಪ್ಪು ಮಗನೇ ಎಂದು ರಾಘಣ್ಣ (Raghavendra Rajkumar) ಭಾವುಕರಾದರು. ರಾಘಣ್ಣ ಮಾತಿಗೆ ಹೊಸಪೇಟೆ ಜನತೆ ಖುಷಿಪಟ್ಟರು.
ನಮ್ಮ ತಂದೆನೇ ಹೇಳಿಬಿಟ್ರು ಅಪ್ಪು ಮಗ ಅಂತ. ನಾನು ಎಲ್ಲೇ ಹೋದರೂ ಜನ ಅಪ್ಪು ಮಗ ಬಂದ. ಅಪ್ಪು ಮಗ ಬಂದ ಅಂತ ಹೇಳುತ್ತಾರೆ. ನನಗೆ ಎಷ್ಟು ಸಂತೋಷ ಆಗುತ್ತದೆ ಗೊತ್ತಾ? ಎಂದು ಯುವ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ. ಅವರು ನನ್ನ ಶಕ್ತಿಯಾಗಿ ನನ್ನ ಜೊತೆ ನಿಂತಿದ್ದಾರೆ. ಅವರು ನನ್ನ ಕೈ ಹಿಡಿದು ನಡೆಸುತ್ತಿದ್ದಾರೆ. ಇಲ್ಲಿವರೆಗೂ ಕರೆದುಕೊಂಡು ಬಂದು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಇನ್ಮುಂದೆ ನೀವು ಹೇಗೆ ಹೇಳ್ತಿರೋ ಹಾಗೆ ಎಂದು ಯುವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.












ನಮ್ಮೆಲ್ಲರ ಪವರ್ ಅಪ್ಪು ಅನ್ನೋ ಮ್ಯಾರಥಾನ್. ಓಡೋದು ಅಂದರೆ ಪುನೀತ್‌ಗೆ ತುಂಬಾ ಇಷ್ಟ. ಉತ್ತಮ ಆರೋಗ್ಯಕ್ಕಾಗಿ ಓಡಬೇಕು ಎಂದು ರಾಘಣ್ಣ ಫ್ಯಾನ್ಸ್‌ಗೆ ಆರೋಗ್ಯದ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ:
ಪುನೀತ್ ಬರ್ತ್‌ಡೇ ದಿನವನ್ನು ಅಪ್ಪು ಸ್ಫೂರ್ತಿ ದಿನವನ್ನಾಗಿ ಸರಿಯಾಗಿ ಆಚರಿಸಿ, ಇದು ಅಭಿಮಾನಿಗಳ ಹುಟ್ಟುಹಬ್ಬ ಎಂದು ರಾಘಣ್ಣ ಮಾತನಾಡಿದ್ದಾರೆ. ಇನ್ನೂ ಒಳ್ಳೆಯ ಕೆಲಸ ಮಾಡಲು ಅಪ್ಪುಗೆ ಆಯುಷ್ಯ ಸಾಲಲಿಲ್ಲ ಎಂದು ರಾಘಣ್ಣ ಭಾವುಕರಾಗಿದ್ದಾರೆ. ಪ್ರೀತಿಯಿಂದ ಜನರಿಗೆ ಏನು ಹಂಚ್ತಿರಾ ಹಂಚಿ. ಅಲ್ಲಿ ಅಪ್ಪು ಕಾಣ್ತಾರೆ ಎಂದು ರಾಘಣ್ಣ ಮಾತನಾಡಿದ್ದಾರೆ. ಸ್ಫೂರ್ತಿ ದಿನ ಬಂದರೆ ಮಕ್ಕಳು ಖುಷಿಯಾಗಬೇಕು. ಈ ದಿನವನ್ನ ಅಪ್ಪುಗಾಗಿ ಗಿಡ ನೆಡಿ, ಉಚಿತ ಶಿಕ್ಷಣ ನೀಡಿ ಸಮಾಜಮುಖಿ ಕೆಲಸ ಮಾಡಿ ಎಂದು ರಾಘಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪುನೀತ್ ಸ್ಥಾನವನ್ನು ಯಾರು ತುಂಬೋಕೆ ಆಗಲ್ಲ. ಆದರೆ ಅಪ್ಪುರಂತೆಯೇ ಮಗ ಯುವನನ್ನು ಬೆಳೆಯಿಸಿ ಹಾರೈಸಿ ಎಂದು ರಾಘಣ್ಣ ಮಾತನಾಡಿದ್ದಾರೆ.


