Tag: ಯುವಾ ಬ್ರಿಗೇಡ್

  • ಯೋಧರ ನೆನಪಿಗಾಗಿ ಬೆಂಗಳೂರಿನಲ್ಲಿ ಸೈನ್ಯ ವನ – ಯುವಾ ಬ್ರಿಗೇಡ್ ಅಭಿಯಾನ

    ಯೋಧರ ನೆನಪಿಗಾಗಿ ಬೆಂಗಳೂರಿನಲ್ಲಿ ಸೈನ್ಯ ವನ – ಯುವಾ ಬ್ರಿಗೇಡ್ ಅಭಿಯಾನ

    ಬೆಂಗಳೂರು: ರಾಷ್ಟ್ರ ರಕ್ಷಣೆಗಾಗಿ ಪ್ರಾಣ ಕೊಟ್ಟ ಕರ್ನಾಟಕದ ಯೋಧರ ನೆನಪಿಗಾಗಿ ಯುವಾ ಬ್ರಿಗೇಡ್ ಇಂದು ಮೈಲಸಂದ್ರದಲ್ಲಿ ಸಸಿ ನೆಡುವ ಸೈನ್ಯ ವನ ಅಭಿಯಾನ ಪ್ರಾರಂಭಿಸಿದೆ.

    50 ಸೈನಿಕ ದಂಪತಿ ಹಾಗೂ ಯುವಾ ಬ್ರಿಗೇಡ್ ಕಾರ್ಯಕರ್ತರು ಮೈಲಸಂದ್ರದ ಪಿಳೇಕಮ್ಮ ದೇಗುಲದ ಬಳಿ ಸಸಿ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸ್ವಾತಂತ್ರಕ್ಕೆ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಹುತಾತ್ಮ ಯೋಧರ ಹೆಸರಿನಲ್ಲಿ ಕಾಡೊಂದನ್ನು ನಿರ್ಮಿಸುವ ಯೋಜನೆ ಇದು ಎಂದು ಖುಷಿ ಹಂಚಿಕೊಂಡರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ 6-7 ತಿಂಗಳು ಅಧಿಕಾರ, 2022ರಲ್ಲಿ ಗಡ್ಡಧಾರಿ ಹೊಸ ಮುಖ್ಯಮಂತ್ರಿ: ಮೈಲಾರ ದೈವವಾಣಿ

    ಸೈನ್ಯ ವನದ ವಿಶೇಷ ಏನೆಂದರೆ ಈ ಕಾಡಿನಲ್ಲಿ ಪ್ರತಿ ಮರಗಳಿಗೂ ಹುತಾತ್ಮ ಯೋಧರ ಹೆಸರಿಡಲಿದ್ದು, ಸ್ಮಾರಕಗಳು ಸೈನ್ಯಕ್ಕೆ ಸೇರಿದ ಮಾಹಿತಿಗಳನ್ನು ಒಳಗೊಂಡಿರಲಿದೆ. ಮುಂದೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೈನ್ಯವನವನ್ನು ನಿರ್ಮಿಸುವ ಯೋಜನೆ ಯುವಾ ಬ್ರಿಗೇಡಿನದ್ದಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

  • ಯುವಾ ಬ್ರಿಗೇಡ್ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

    ಯುವಾ ಬ್ರಿಗೇಡ್ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

    – ಶ್ರೀರಂಗಪಟ್ಟಣದಲ್ಲಿ ಪಾಳು ಬಿದ್ದ ದೇವಸ್ಥಾನಕ್ಕೆ ಕಾಯಕಲ್ಪ

    ಮಂಡ್ಯ: ಗಿಡಗಂಟೆಗಳು ಬೆಳೆದು ಪಾಳುಬಿದ್ದಿದ್ದ ದೇವಸ್ಥಾನವನ್ನು ಜೀರ್ಣಾದ್ಧಾರ ಮಾಡಿದ ಯುವಾ ಬ್ರಿಗೇಡ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಸಮೀಪ ಕೃಷ್ಣದೇವರಾಯರ ಕಾಲದ ಶಿವನ ದೇವಾಲಯದಲ್ಲಿ ಆರಂಭದಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ 45 ವರ್ಷಗಳಿಂದ ಇಲ್ಲಿ ಪೂಜೆ ಸಲ್ಲಿಸುತ್ತಿದ್ದ ಮರಿಯಪ್ಪ ಎಂಬುವರು ಮೃತಪಟ್ಟ ಬಳಿಕ ಪಾಳುಬಿದ್ದಿತ್ತು. ದೇವಾಲಯದ ಗೋಡೆಗಳು ಶಿಥಿಲಾವಸ್ಥೆ ತಲುಪಿ, ಗಿಡಗಂಟೆಗಳು ಬೆಳೆದು, ವಿಷ ಜಂತುಗಳ ತಾಣವಾಗಿ ಪರಿವರ್ಗನೆಗೊಂಡಿತ್ತು.

    ಇದನ್ನು ಗಮನಿಸಿದ ಶ್ರೀರಂಗಪಟ್ಟಣದ ಯುವ ಬ್ರಿಗೇಡ್‍ನ ಯುವಕರ ತಂಡ ಎರಡು ತಿಂಗಳು ಪ್ರತೀ ಭಾನುವಾರ ಶ್ರಮದಾನ ಮಾಡುವ ಮೂಲಕ ದೇವಾಲಯವನ್ನನು ಸಂಪೂರ್ಣ ಜೀರ್ಣೋದ್ಧಾರ ಮಾಡಿದ್ದರು. ಬಳಿಕ ಹೊಸ ಲಿಂಗ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಪುನಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯದ ಬಗ್ಗೆ ಇಂದು ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಯುವಕರನ್ನು ಗುಣಗಾನ ಮಾಡಿದ್ದಾರೆ.

  • ಮೂತ್ರವಿಸರ್ಜನೆಯಿಂದ ಹಾಳಾಗುತ್ತಿದ್ದ ಗೋಡೆಗಳ ಮೇಲೆ ಚಿತ್ತಾರ ಬಿಡಿಸಿದ ಯುವಾ ಬ್ರಿಗೇಡ್

    ಮೂತ್ರವಿಸರ್ಜನೆಯಿಂದ ಹಾಳಾಗುತ್ತಿದ್ದ ಗೋಡೆಗಳ ಮೇಲೆ ಚಿತ್ತಾರ ಬಿಡಿಸಿದ ಯುವಾ ಬ್ರಿಗೇಡ್

    ರಾಯಚೂರು: ಸಾಮಾನ್ಯವಾಗಿ ಬಸ್ ನಿಲ್ದಾಣಗಳ ಗೋಡೆಗಳು ಅಂದರೆ ಮೂತ್ರವಿಸರ್ಜನೆ ಮಾಡುವ ಸ್ಥಳವಾಗಿ ಬಹುತೇಕ ಕಡೆ ಮಾರ್ಪಟ್ಟಿವೆ. ಪಕ್ಕದಲ್ಲೇ ಶೌಚಾಲಯವಿದ್ದರೂ ನಿರ್ವಹಣೆ ಸರಿಯಿಲ್ಲ ಅಂತ ಜನರು ಗೋಡೆಗಳ ಮೇಲೆ ಮೂತ್ರ ಮಾಡಿ ಹೊರಟುಹೋಗುತ್ತಾರೆ. ಇಲ್ಲಿ ಮೂತ್ರ ಮಾಡಬಾರದು ಅಂತ ಎಷ್ಟೇ ದೊಡ್ಡ ಅಕ್ಷರದಲ್ಲಿ ಬರೆದರೂ ಯಾರೂ ತಲೆಕೆಡಿಸಿಕೊಳ್ಳಲ್ಲ. ಹೀಗಾಗಿ ಸಾರ್ವಜನಿಕ ಆಸ್ಥಿಯನ್ನು ಕಾಪಾಡಲು ಯುವಾ ಬ್ರಿಗೇಡ್ ಮೂತ್ರವಿಸರ್ಜನೆಯಿಂದ ಹಾಳಾಗುತ್ತಿದ್ದ ಗೋಡೆಗಳ ಮೇಲೆ ಅಂದದ ಚಿತ್ತಾರ ಬಿಡಿಸಿ ಎಲ್ಲರ ಗಮನ ಸೆಳೆದಿದೆ.

    ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಗೋಡೆಗೆ ಮೂತ್ರ ಮಾಡಲು ಬರುವ ಜನ ವಾಪಸ್ ಶೌಚಾಲಯಕ್ಕೆ ಹೋಗುತ್ತಿದ್ದಾರೆ. ಯುವಾ ಬ್ರಿಗೇಡ್‍ನ ಉತ್ಸಾಹಿ ಯುವಕರ ಶ್ರಮದಿಂದ ಮೂತ್ರವಿಸರ್ಜನೆಯಿಂದ ಗಬ್ಬುನಾರುತ್ತಿದ್ದ ಗೋಡೆಗಳು ಅಂದದ ಚಿತ್ತಾರಗಳಿಂದ ಕಂಗೊಳಿಸುತ್ತಿದೆ. ಗೋಡೆಗಳ ಪಕ್ಕದಲ್ಲಿ ಮೂಗು ಮುಚ್ಚಿಕೊಂಡು ಹೋಗುತ್ತಿದ್ದ ಸಾರ್ವಜನಿಕರು ಈಗ ಗೋಡೆಗಳ ಮೇಲಿನ ಚಿತ್ರಗಳತ್ತ ಕಣ್ಣಾಯಿಸಿ ಹೋಗುತ್ತಿದ್ದಾರೆ.

    ಕಳೆದ ಐದು ವಾರಗಳಿಂದ ಪ್ರತಿ ರವಿವಾರ ಸುಂದರ ಸ್ವಚ್ಛ ರಾಯಚೂರಿಗಾಗಿ ಶ್ರಮದಾನ ಮಾಡುತ್ತಿರುವ ಯುವಾ ಬ್ರಿಗೇಡ್‍ನ ಹತ್ತು ಜನ ಸದಸ್ಯರು, ಮೊದಲೆರಡು ವಾರ ಕೇವಲ ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ನಂತರ ಒಂದು ವಾರ ಬಣ್ಣ ಬಳಿದರು. ಕಳೆದೆರಡು ವಾರಗಳಿಂದ ಸುಂದರ ಕಲಾಕೃತಿಗಳನ್ನ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಅನಾವರಣಗೊಳಿಸುತ್ತಿದ್ದಾರೆ. ರಜಾದಿನವಾದ ಪ್ರತಿ ರವಿವಾರ ಬೆಳಗ್ಗೆ 7 ಗಂಟೆಯಿಂದ 10ರವರೆಗೆ ಯುವಾ ಬ್ರಿಗೇಡ್ ಸದಸ್ಯರು ಸೇವಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೋಡೆಗಳ ಮೇಲೆ ಗಿಡಗಳು, ಪರಿಸರ, ಹಳ್ಳಿಗಾಡಿನ ಸೊಗಡಿನ ಚಿತ್ರಗಳನ್ನ ಬಿಡಿಸಲಾಗುತ್ತಿದೆ. ಅದರ ಜೊತೆಗೆ ಜಿಲ್ಲೆಯ ಪ್ರಸಿದ್ಧ ಸ್ಥಳಗಳಾದ ಆರ್‍ಟಿಪಿಎಸ್, ಹಟ್ಟಿ ಚಿನ್ನದ ಗಣಿ, ಕಲ್ಲಾನೆ, ಕೋಟೆ, ಸಾಲುಮರದ ತಿಮ್ಮಕ್ಕ ಹಾಗೂ ದೇಶಭಕ್ತಿ ಸಾರುವ ಕಲಾಕೃತಿಗಳು ಗೋಡೆಗಳ ಮೇಲೆ ಚಿತ್ರಿಸಿರುವುದು ಸಾರ್ವಜನಿಕರನ್ನ ಆಕರ್ಷಿಸುತ್ತಿವೆ.

    ಯುವಾ ಬ್ರಿಗೇಡ್‍ನ ಸದಸ್ಯರು ತಮ್ಮ ಮುಂದಿನ ಕೆಲಸಗಳು ಹಾಗೂ ಅಗತ್ಯವಾಗಿ ಬೇಕಿರುವ ಸಹಾಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನ ಹರಿಬಿಡುತ್ತಾರೆ. ಆಸಕ್ತರು ಮುಂದೆ ಬಂದು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದರಿಂದ ಬಣ್ಣ, ಬ್ರೆಷ್ ಸೇರಿದಂತೆ ಇತರೆ ಖರ್ಚುಗಳು ಸರಿದೂಗುತ್ತವೆ. ಇನ್ನೂ ಹೆಚ್ಚು ಜನ ಕೈಜೋಡಿಸಿ ಶ್ರಮದಾನದಲ್ಲಿ ಭಾಗವಹಿಸಲು ಮುಂದೆ ಬರಬೇಕು ಆಗ ಸುಂದರ ನಗರ ಸೃಷ್ಟಿಸಲು ಸಾಧ್ಯ ಎಂದು ಯುವಾ ಬ್ರಿಗೆಡ್‍ನ ರಾಯಚೂರು ಜಿಲ್ಲಾ ಸಂಚಾಲಕ ಲಕ್ಷ್ಮಣ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಮಹಾತ್ಮ ಗಾಂಧೀಜಿ 150ನೇ ವರ್ಷಾಚರಣೆ ಹಿನ್ನೆಲೆ ರಾಯಚೂರು ರೈಲ್ವೇ ನಿಲ್ದಾಣವನ್ನ ಗಾಂಧೀಜಿ ಬದುಕನ್ನ ಸಾರುವ ಚಿತ್ರಕಲೆಗಳ ಮೂಲಕ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಿರುವುದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಬಸ್ ನಿಲ್ದಾಣದ ಗೋಡೆಗಳನ್ನ ಸುಂದರಗೊಳಿಸುವ ಕಾರ್ಯಕ್ಕೆ ಕೈಹಾಕಿ ಯುವಾ ಬ್ರಿಗೇಡ್ ಯಶಸ್ವಿಯಾಗಿದೆ.

  • ನೆರೆಯಿಂದ ಸೂರು ಕಳೆದುಕೊಂಡಿದ್ದ ಅಜ್ಜ, ಅಜ್ಜಿಗೆ ಮನೆ ನಿರ್ಮಿಸಿ ಆಸರೆಯಾದ ಯುವಾ ಬ್ರಿಗೇಡ್

    ನೆರೆಯಿಂದ ಸೂರು ಕಳೆದುಕೊಂಡಿದ್ದ ಅಜ್ಜ, ಅಜ್ಜಿಗೆ ಮನೆ ನಿರ್ಮಿಸಿ ಆಸರೆಯಾದ ಯುವಾ ಬ್ರಿಗೇಡ್

    – ಸಂಪೂರ್ಣ ನೆಲಸಮವಾಗಿತ್ತು ಗುಡಿಸಲು
    – ನ. 15 ರಂದು ಮನೆಯ ಗೃಹಪ್ರವೇಶ
    – ಚಕ್ರವರ್ತಿ ಸೂಲಿಬೆಲೆಯವರಿಂದ ಕೀ ಹಸ್ತಾಂತರ

    ಶಿವಮೊಗ್ಗ: ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಇನ್ನು ಸರಿಯಾಗಿ ಪರಿಹಾರದ ಹಣ ವಿತರಣೆ ಮಾಡಿಲ್ಲ. ಆದರೆ ಶಿವಮೊಗ್ಗದಲ್ಲಿ ನೆರೆ ಸಂತ್ರಸ್ತ ವೃದ್ಧ ದಂಪತಿಗೆ ಯುವಾ ಬ್ರಿಗೇಡ್ ಸದಸ್ಯರು ಮನೆ ನಿರ್ಮಿಸಿಕೊಟ್ಟಿದ್ದಾರೆ.

    ರಾಜ್ಯದಲ್ಲಿ ಕಳೆದ ಎರಡು ತಿಂಗಳ ಹಿಂದಷ್ಟೇ ಕಂಡು ಕೇಳರಿಯದ ಭೀಕರ ಪ್ರವಾಹ ಬಂದು ಸಾಕಷ್ಟು ಹಾನಿ ಮಾಡಿತ್ತು. ಮಳೆ ಹೆಚ್ಚಾದ ಕಾರಣ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಕೂಡ ತುಂಗಾ ನದಿ ಉಕ್ಕಿ ಹರಿದು, ರಾಜಕಾಲುವೆಗಳ ಮೂಲಕ ಅದೆಷ್ಟೋ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಈ ಪ್ರವಾಹದಲ್ಲಿ ನೂರಾರು ಮನೆಗಳು ನೆಲಕಚ್ಚಿದ್ದವು. ನೆರೆಯಿಂದ ನಲುಗಿದ ಜನರು ಅಕ್ಷರಶಃ ಬೀದಿಗೆ ಬಿದ್ದಿದ್ದರು. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ಬಡಾವಣೆಯ ನಿವಾಸಿ ಮುನಿಯಪ್ಪ ಹಾಗೂ ನರಸಮ್ಮ ವೃದ್ಧ ದಂಪತಿ ಕೂಡ ನೆರೆ ಅವಘಡಕ್ಕೆ ಮನೆ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದರು. ಇದನ್ನೂ ಓದಿ:ಮಿಮ್ಸ್ ನೋಡಿ ಯುವ ಬ್ರಿಗೇಡ್‍ನಿಂದ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ

    ನೆರೆಗೆ ಅಜ್ಜ-ಅಜ್ಜಿಯ ಮನೆ ಸಂಪೂರ್ಣವಾಗಿ ನೆಲಸಮವಾಗಿತ್ತು. ಇದ್ದ ಒಂದು ಗುಡಿಸಲು ಕಳೆದುಕೊಂಡು ಪಡಬಾರದ ಕಷ್ಟ ಪಡುವಂತಾಗಿತ್ತು. ಇರುವ ಒಬ್ಬ ಮಗ ತನಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಇದ್ದುಬಿಟ್ಟಿದ್ದನು. ಇಂತಹ ಸಂದರ್ಭದಲ್ಲಿ ಶಿವಮೊಗ್ಗದ ಯುವಾ ಬ್ರಿಗೇಡ್ ಸಂಘಟನೆ ತಂಡ ಇವರ ನೆರವಿಗೆ ಧಾವಿಸಿತ್ತು. ಇದನ್ನೂ ಓದಿ:ಯುವ ಬ್ರಿಗೇಡ್‍ನಿಂದ ಕುಮಾರ ಸಂಸ್ಕಾರ – ಬೆಚ್ಚಿ ಬೀಳುವ ಮಟ್ಟದಲ್ಲಿ ತ್ಯಾಜ್ಯದ ರಾಶಿ ಪತ್ತೆ

    ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರು ಈ ಅಜ್ಜ-ಅಜ್ಜಿಯ ನೆರವಿಗೆ ಧಾವಿಸಿದ್ದು, ಗುಡಿಸಲು ಬಿದ್ದು ಜೀವನವೇ ಹೋಯ್ತು ಎಂದುಕೊಂಡಿದ್ದ ವೃದ್ಧ ದಂಪತಿಗೆ ಆಸರೆಯಾಗಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ಯಾವುದಕ್ಕೂ ಕೊರತೆಯಾಗದಂತೆ, ಅಚ್ಚುಕಟ್ಟಾಗಿ ಮನೆ ನಿರ್ಮಿಸಿಕೊಟ್ಟು ಸಾರ್ಥಕತೆ ಮೆರೆದಿದ್ದಾರೆ. ಸರ್ಕಾರದಿಂದ ಆಗದ ಕೆಲಸವನ್ನು ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರು ಮಾಡಿ ತೋರಿಸಿದ್ದಾರೆ. ಮಹಾ ಪ್ರವಾಹ-ಯುವಾ ಸಹಾಯ ಯೋಜನೆಯನ್ನ ಹಾಕಿಕೊಂಡು ಸಹಾಯದ ಹಸ್ತ ಚಾಚಿದ್ದಾರೆ.

    ನೆರೆಯಿಂದ ಸಂತ್ರಸ್ತಗೊಂಡರಿಗೆ ಸರಿಯಾಗಿ ಪರಿಹಾರ ಇನ್ನೂ ವಿತರಣೆ ಆಗಿಲ್ಲ. ಹೀಗಿರುವಾಗ ಸಿ.ಎಂ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿಯೇ ದಂಪತಿಗೆ ಮನೆ ಕಟ್ಟಿಸುವ ಮೂಲಕ ಯುವಾ ಬ್ರಿಗೇಡ್ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ:ಪ್ರತಿನಿತ್ಯ 15 ನಿಮಿಷ ಫೋನಿನಲ್ಲಿ ಕನ್ನಡ ಕಲಿಯಿರಿ – ಯುವಾ ಬ್ರಿಗೇಡಿನಿಂದ ಕನ್ನಡ ಸುಗಂಧ

    ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈ ರೀತಿಯ ಮನೆ ನಿರ್ಮಿಸಿಕೊಡಲು ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಪ್ಲ್ಯಾನ್ ರೂಪಿಸಿಕೊಂಡಿದ್ದೇವೆ. ಈಗಾಗಲೇ ಇದಕ್ಕೆ ಪಟ್ಟಿಯೂ ಕೂಡ ಸಿದ್ಧಪಡಿಸಿಕೊಂಡಿದ್ದೇವೆ ಎಂದು ಸಂಚಾಲಕ ಹರ್ಷ ತಿಳಿಸಿದ್ದಾರೆ.

    ಕಳೆದೆರೆಡು ತಿಂಗಳಿನಿಂದ ಮಳೆಗೆ ಬಿದ್ದಿದ್ದ ಗುಡಿಸಲು ಮುಂಭಾಗದಲ್ಲೇ ಇರುವ ದೇವಾಲಯದಲ್ಲಿ ಈ ವೃದ್ಧ ದಂಪತಿ ವಾಸವಾಗಿದ್ದು, ಅಲ್ಲಿಯೇ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ನವೆಂಬರ್ 15ರ ಶುಕ್ರವಾರದಂದು ಈ ಮನೆಯ ಗೃಹಪ್ರವೇಶ ನಡೆಸಲು ಯುವಾ ಬ್ರಿಗೇಡ್ ತಂಡದ ಸದಸ್ಯರು ಉತ್ಸುಕರಾಗಿದ್ದು, ಅಂದು ಇದಕ್ಕೆಲ್ಲಾ ಬೆನ್ನೆಲುಬಾಗಿರುವ ಹಾಗೂ ಈ ಯೋಜನೆಯ ಸೂತ್ರದಾರರಾಗಿರುವ ಚಕ್ರವರ್ತಿ ಸೂಲಿಬೆಲೆ ಅವರಿಂದ ನೂತನ ಮನೆಯ ಬೀಗದ ಕೈಯನ್ನು ವೃದ್ಧ ದಂಪತಿ ಹಸ್ತಾಂತರಿಸುವುದಾಗಿ ಸದಸ್ಯರು ಹೇಳಿದ್ದಾರೆ.

    ವಿದ್ಯುತ್ ಸಂಪರ್ಕ ಕೂಡ ಇಲ್ಲದ ಗುಡಿಸಲಲ್ಲಿ ವಾಸವಾಗಿ ಅದನ್ನೂ ನೆರೆಯಿಂದ ಕಳೆದುಕೊಂಡಿದ್ದ ಅಜ್ಜ-ಅಜ್ಜಿಯ ನೂತನ ಮನೆಗೆ ವಿದ್ಯುತ್ ಸಂಪರ್ಕವನ್ನ ಕೂಡ ಕೊಡಿಸಲಾಗಿದೆ. ನಗರದ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರ ಆಸಕ್ತಿಯಿಂದಾಗಿ ಇದೀಗ ತಮ್ಮ ಬಾಳ ಪಯಣದ ಇಳಿ ಸಂಜೆಯಲ್ಲಿರುವ ವೃದ್ಧ ದಂಪತಿ ಬೆಳಕು ಕಾಣುವಂತಾಗಿದೆ.

  • ಪ್ರತಿನಿತ್ಯ 15 ನಿಮಿಷ ಫೋನಿನಲ್ಲಿ ಕನ್ನಡ ಕಲಿಯಿರಿ – ಯುವಾ ಬ್ರಿಗೇಡಿನಿಂದ ಕನ್ನಡ ಸುಗಂಧ

    ಪ್ರತಿನಿತ್ಯ 15 ನಿಮಿಷ ಫೋನಿನಲ್ಲಿ ಕನ್ನಡ ಕಲಿಯಿರಿ – ಯುವಾ ಬ್ರಿಗೇಡಿನಿಂದ ಕನ್ನಡ ಸುಗಂಧ

    ಬೆಂಗಳೂರು: ಯುವಾ ಬ್ರಿಗೇಡ್ ಸಂಘಟನೆ ಈಗ ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಲು ಮುಂದಾಗಿದೆ.

    ‘ಕನ್ನಡ ಸುಗಂಧ’ ಹೆಸರಿನಲ್ಲಿ ಪ್ರತಿನಿತ್ಯ ಪ್ರತಿನಿತ್ಯ 15 ನಿಮಿಷಗಳ ಕಾಲ ಪೋನಿನ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುವುದು ಎಂದು ಯುವಾ ಬ್ರಿಗೇಡ್ ತಿಳಿಸಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಂಘಟನೆ, ಯುವಾ ಬ್ರಿಗೇಡಿನ ವತಿಯಿಂದ ಕನ್ಮಡಿಗರಲ್ಲದ ಹೊರರಾಜ್ಯದವರಿಗೆ ಕನ್ನಡ ಕಲಿಸುವ ವಿನೂತನ ಪ್ರಯತ್ನ. ಪ್ರತಿನಿತ್ಯ 15 ನಿಮಿಷಗಳ ಕಾಲ ಪೋನಿನ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುವುದು. ಆಸಕ್ತರು ನಮ್ಮನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಿ. ಹೊರನಾಡಿನಿಂದ ಬಂದ ನಿಮ್ಮ ಬಂಧುಗಳಿಗೂ ತಿಳಿಸಿ. ಹೆಚ್ಚಿನ ವಿವರಕ್ಕೆ 80730 22138 ನಂಬರ್ ಸಂಪರ್ಕಿಸಿ ಎಂದು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಸೂಲಿಬೆಲೆಯಿಂದ #GramSvarga ಚಾಲೆಂಜ್- ನಾವು ರೆಡಿ ಅಂದ್ರು ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ

     

  • ನದಿ ಪುನಶ್ಚೇತನಕ್ಕೆ ಯುವ ಬ್ರಿಗೇಡ್‍ನಿಂದ ರನ್ ಫಾರ್ ವೃಷಭಾವತಿ

    ನದಿ ಪುನಶ್ಚೇತನಕ್ಕೆ ಯುವ ಬ್ರಿಗೇಡ್‍ನಿಂದ ರನ್ ಫಾರ್ ವೃಷಭಾವತಿ

    ಬೆಂಗಳೂರು: ಒಂದು ಕಾಲದಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ವೃಷಭಾವತಿ ನದಿ ಇದೀಗ ಕೆಂಗೇರಿ ಮೋರಿಯಾಗಿ ಪರಿವರ್ತನೆಯಾಗಿದೆ. ಇದರ ಪುನಶ್ಚೇತನಕ್ಕಾಗಿ ಯುವ ಬ್ರಿಗೇಡ್ ಪಣ ತೊಟ್ಟಿದ್ದು, ವೃಷಭಾವತಿ ಉಳಿಸಲು ರನ್ ಫಾರ್ ವೃಷಭಾವತಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿತು.

    ಜೀವಜಲ, ನದಿ ಮೂಲಗಳನ್ನು ಉಳಿಸಿ ಎನ್ನುವ ಕೂಗು ಎಲ್ಲೆಡೆಯಿಂದಲೂ ಕೇಳಿಬರುತ್ತಿದೆ. ಕಾವೇರಿ ಕೂಗಿಗೆ ವ್ಯಾಪಕ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಈಗ, ಒಂದು ಕಾಲದಲ್ಲಿ ಬೆಂಗಳೂರಿನ ಜೀವನಾಡಿಯಾಗಿದ್ದ ವೃಷಭಾವತಿ ಉಳಿಸಿ ಅನ್ನೋ ಕೂಗು ಸಹ ಕೇಳಿಬರುತ್ತಿದೆ. ಯುವ ಬ್ರಿಗೇಡ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಸಿನಿಮಾ ಸ್ಟಾರ್‍ಗಳು ಸೇರಿದಂತೆ ಸಾವಿರಾರು ಜನ ಕೈ ಜೋಡಿಸಿದ್ದು, ರನ್ ಫಾರ್ ವೃಷಾಭಾವತಿ ಮೂಲಕ ಗಮನ ಸೆಳೆಯಲಾಯಿತು.

    ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಕೆಂಗೇರಿ ಉಪನಗರದಿಂದ ಬೆಂಗಳೂರು ವಿಶ್ವವಿದ್ಯಾಲಯದವರೆಗೂ 6 ಕಿ.ಮೀ. ಮ್ಯಾರಥಾನ್ ನಡೆಸಲಾಯಿತು. 3 ಸಾವಿರಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದರು. ನಗರದ ಮಧ್ಯ ಹರಿಯುತ್ತಿರುವ ವೃಷಾಭಾವತಿ ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚು ಜನ ಭಾಗವಹಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಉತ್ತಮ ಆರಂಭವಾದಂತಾಗಿದೆ. ನದಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ತಜ್ಞರು, ಬಿಬಿಎಂಪಿ ಎಂಜಿನಿಯರ್ ಹಾಗೂ ಸರ್ಕಾರದೊಂದಿಗೆ ಚರ್ಚಿಸಲಾಗಿದ್ದು 3 ವರ್ಷದಲ್ಲಿ ನದಿಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ತಿಳಿಸಿದರು.

    ಅಭಿಯಾನದಲ್ಲಿ ಸಂಸದ ತೇಜಸ್ವಿಸೂರ್ಯ, ತೇಜಸ್ವಿನಿ ಅನಂತ್ ಕುಮಾರ್, ನಟ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು. ಮಳೆಯನ್ನು ಲೆಕ್ಕಿಸದೇ 6 ಕಿ.ಮೀ ಓಡುವ ಮೂಲಕ ಜಾಗೃತಿ ಮೂಡಿಸಿದರು. ಸೇವ್ ವೃಷಭಾವತಿ ಎಂಬ ಕೂಗು ಜೋರಾಗಿತ್ತು.