Tag: ಯುವರಾಜ್ ಸಿಂಗ್

  • ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ

    ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ

    ಮುಂಬೈ: ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಸ್ಫೋಟಕ ಆಟಗಾರರಲ್ಲಿ ಒಬ್ಬರು. ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದ ಯುವಿ, ಟೀಂ ಇಂಡಿಯಾ 2007 ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು. ಸದ್ಯ ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದಿರುವ ಯುವಿ, ಕ್ರಿಕೆಟ್ ವೃತ್ತಿ ಜೀವನದ ಕುರಿತು ಕೆಲ ವಿಶೇಷ ಮಾಹಿತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಸದಾ ಇತರೇ ಆಟಗಾರರೊಂದಿಗೆ ಹಾಸ್ಯಮಯವಾಗಿ ಕಾಣಿಸಿಕೊಳ್ಳುತ್ತಿದ್ದ ಯುವರಾಜ್ ಸಿಂಗ್, ಎದುರಾಳಿ ಬೌಲರ್ ಗಳನ್ನು ಅಷ್ಟೇ ಸುಲಲಿತಾಗಿ ದಂಡಿಸುತ್ತಿದ್ದರು. 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಮಾತಿಗೆ ತಿರುಗೇಟು ನೀಡಿದ್ದ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ನಡೆದ ಘಟನೆ ಬಳಿಕ ನಡೆದ ಕೆಲ ಆಸ್ತಕಿಕಾರ ಮಾಹಿತಿಯನ್ನು ಯುವಿ ತಿಳಿಸಿದ್ದಾರೆ.

    2007ರ ಸೆ.10 ರಂದು ನಡೆದಿದ್ದ ಪಂದ್ಯದ ಇನ್ನಿಂಗ್ಸ್ ನ 18 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್ ನಲ್ಲೇ ಫ್ಲಿಂಟಾಫ್ ವಿರುದ್ಧ ತಿರುಗಿಬಿದಿದ್ದ ಯುವಿ ಬ್ಯಾಟ್ ತೋರಿಸಿ ಮುನ್ನುಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 19ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಡಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಹೇಳಿದ್ದಾರೆ.

    ಅಂದು ತಮ್ಮ ಬಳಿಗೆ ಆಗಮಿಸಿದ್ದ ಆಸ್ಟ್ರೇಲಿಯಾ ತಂಡದ ಕೋಚ್, ನಿಮ್ಮ ಬ್ಯಾಟ್ ಹಿಂದೆ ಫೈಬರ್ ಇದೆಯೇ? ಅಲ್ಲದೇ ಅದು ಕಾನೂನು ಬದ್ಧವಾಗಿದೆಯಾ ಎಂದು ಪ್ರಶ್ನಿಸಿದ್ದರು. ಆಗ ಪಂದ್ಯದ ರೆಫರಿಗೆ ಬ್ಯಾಟ್ ಪರೀಕ್ಷಿಸಲು ತಿಳಿಸಿದ್ದೆ. ಗಿಲ್‍ಕ್ರಿಸ್ಟ್ ಕೂಡ ಘಟನೆ ಬಳಿಕ ಇಂತಹ ಬ್ಯಾಟ್‍ಗಳನ್ನು ಎಲ್ಲಿ? ಯಾರು? ತಯಾರಿಸಿಕೊಡುತ್ತಾರೆ ಎಂದು ತಮ್ಮ ಬಳಿ ಕೇಳಿದ್ದರು ಎಂದು ತಿಳಿಸಿದ್ದಾರೆ. 2007 ಹಾಗೂ 2011ರ ವಿಶ್ವಕಪ್‍ನಲ್ಲಿ ನಾನು ಆಡಿದ್ದ ಎರಡು ಬ್ಯಾಟ್‍ಗಳು ನನಗೆ ವಿಶೇಷ ಎಂದು ಯುವರಾಜ್ ತಿಳಿಸಿದ್ದಾರೆ.

  • ಟಿ20ಯಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಯಾರು?

    ಟಿ20ಯಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಯಾರು?

    ನವದೆಹಲಿ: ಟೀಂ ಇಂಡಿಯಾ 2007ರಲ್ಲಿ ಅಂದಿನ ಯುವ ನಾಯಕ ಎಂ.ಎಸ್.ಧೋನಿ ನೇತೃತ್ವದಲ್ಲಿ ಐಸಿಸಿಯ ಚೊಚ್ಚಲ ಟಿ20 ವಿಶ್ವಪಕ್ ಟೂರ್ನಿಯನ್ನು ಗೆದ್ದು ಬೀಗಿತ್ತು. ಆದರೆ ಅದಕ್ಕೂ ಮುನ್ನ ನಡೆದ 2015ರ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಆಟಗಾರರು ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಹೀಗಾಗಿ ಚೊಚ್ಚಲ ಟಿ20 ಟೂರ್ನಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಧೋನಿ ನೇತೃತ್ವದ ಬಳಗವು ಇತಿಹಾಸವನ್ನೇ ಸೃಷ್ಟಿಸಿತು.

    ಈ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ವೇಳೆ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು. ಈ ದಾಖಲೆ ಯುವಿ ಅಭಿಮಾನಿಗಳ ನೆನಪಿನಲ್ಲಿ ಅಚ್ಚಳಿಯದಂದೆ ಉಳಿದಿದೆ. ಆದರೆ ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದು ಪ್ರಮುಖ ದಾಖಲೆ ಗಮನಕ್ಕೆ ಬಾರದೆ ಉಳಿದಿರಬಹುದು. ಅದೇನೆಂದರೆ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಯಾರು ಎನ್ನುವುದು ಅನೇಕರಿಗೆ ಗೊತ್ತಿಲ್ಲ.

    ಈ ದಾಖಲೆ ಯುವರಾಜ್ ಸಿಂಗ್ ಅಥವಾ ವಿರೇಂದ್ರ ಸೆಹ್ವಾಗ್ ಅವರ ಹೆಸರಿನಲ್ಲಿದೆ ಎಂದು ಭಾವಿಸುವುದು ತಪ್ಪಾಗುತ್ತದೆ. 2007ರಿಂದ 2015ರವರೆಗೆ 13 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಕನ್ನಡಿಗ ರಾಬಿನ್‌ ವೇಣು ಉತ್ತಪ್ಪ ಈ ಸಾಧನೆ ಮಾಡಿದ ಮೊದಲ ಭಾರತದ ಬ್ಯಾಟ್ಸ್‌ಮನ್ ಆಗಿದ್ದಾರೆ.

    ಹೌದು. ಪಾಕಿಸ್ತಾನ ವಿರುದ್ಧದ 2007ರ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್‌ ರಾಬಿನ್ ಉತ್ತಪ್ಪ ಅರ್ಧಶತಕ ದಾಖಲಿಸಿದ್ದರು. ಪಂದ್ಯದ ಮೊದಲ ಓವರಿನಲ್ಲಿ ಗೌತಮ್ ಗಂಭೀರ್ ವಿಕೆಟ್ ಒಪ್ಪಿಸಿದ ಬಳಿಕ ಉತ್ತಪ್ಪ ಬ್ಯಾಟಿಂಗ್‍ಗೆ ಕಾಲಿಟ್ಟರು. ಮುಂದಿನ ಆರು ಓವರ್ ಗಳಲ್ಲಿ ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಒಪ್ಪಿಸಿದರು. ಹೀಗಾಗಿ ಸ್ಟ್ರೈಕ್‍ನಲ್ಲಿದ್ದ ರಾಬಿಲ್ ಉತ್ತಪ್ಪ ಅವರ ಮೇಲೆ ತಂಡವನ್ನು ಗೆಲ್ಲಿಸುವ ಒತ್ತಡ ಬಿದ್ದಿತ್ತು.

    ಬಳಿಕ ಮೈದಾನಕ್ಕಿಳಿದ ಎಂ.ಎಸ್.ಧೋನಿ ಉತ್ತಪ್ಪ ಅವರಿಗೆ ಸಾಥ್ ನೀಡಿದರು. ಈ ವೇಳೆ ಉತ್ತಪ್ಪ ಸಿಕ್ಸರ್, ಬೌಂಡರಿ ಚಚ್ಚಿದರು. ಶಾಹಿತ್ ಅಫ್ರಿದಿ ಓವರಿನಲ್ಲಿ ಉತ್ತಪ್ಪ ಅವರು ಕ್ರಮವಾಗಿ 1, 4, 2, 4, 1 ರನ್ ಗಳಿಸಿದರು. ಈ ಮೂಲಕ ತಾವು ಎದುರಿಸಿದ 37ನೇ ಎಸೆತದಲ್ಲಿ ಕನ್ನಡಿಗ ಉತ್ತಪ್ಪ ಅರ್ಧ ಶತಕ ದಾಖಲಿಸಿದ್ದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಅರ್ಧ ಶತಕ ಸಿಡಿಸಿದ ಭಾರತೀಯ ಎಂಬ ದಾಖಲೆಯನ್ನು ಮಾಡಿದರು. ವಿಪರ್ಯಾಸವೆಂದರೆ ಉತ್ತಪ್ಪ ಅವರು ಆ ಬಳಿಕ ಆಡಿದ 12 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 50 ರನ್ ಗಳಿಸಲು ವಿಫಲರಾದರು.

    ಪಂದ್ಯದ ಫಲಿತಾಂಶ ಏನಾಯಿತು?
    ಉತ್ತಪ್ಪ ಅವರ ಅರ್ಧಶತಕ ಬಳಿಕ ಭಾರತ ನಿಗದಿತ 20 ಓವರ್‌ಗಳಲ್ಲಿ 141 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಸಮಬಲ ಸಾಧಿಸಿತ್ತು. ನಂತರ ಭಾರತ ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಹಾಗೂ ರಾಬಿನ್ ಉತ್ತಪ್ಪ ಸ್ಟಂಪ್ ಮಾಡಿದರು. ಆದರೆ ಪಾಕಿಸ್ತಾನದ ಯಾವುದೇ ಬೌಲರ್‌ಗಳು ಸ್ಟಂಪ್ ಮಾಡಿಲ್ಲ. ಹೀಗಾಗಿ ಭಾರತ ಗೆಲುವು ಸಾಧಿಸಿತು.

  • 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    – ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?
    – ಎಲ್ಲವನ್ನೂ ರಿವಿಲ್ ಮಾಡಿದ ಭಾರತ ಕ್ರಿಕೆಟ್ ದಂತಕಥೆ

    ಮುಂಬೈ: ಟೀಂ ಇಂಡಿಯಾ 9 ವರ್ಷಗಳ ಹಿಂದೆ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿತ್ತು. ಏಪ್ರಿಲ್ 2ರಿಂದ ಈ ಬಗ್ಗೆ ಅನೇಕ ಚರ್ಚೆಗಳಾಗಿದ್ದವು. ಈ ವಾರವೂ ಮತ್ತೊಮ್ಮೆ ಫೈನಲ್ ಪಂದ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.

    ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸುವ ಮೂಲಕ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದಿತ್ತು. ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್, ಅದರಲ್ಲೂ ವಿಶೇಷವಾಗಿ ಫಿನಿಶಿಂಗ್ ಶಾಟ್ ಸಿಕ್ಸರ್ ಅನ್ನು ಸಿಡಿಸಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದ್ದರು. ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಉತ್ತಮ ಆಲ್‍ರೌಂಡರ್ ಪ್ರದರ್ಶನ ನೀಡುತ್ತಲೇ ಬಂದಿದ್ದರೂ ಧೋನಿ ಯುವರಾಜ್ ಸಿಂಗ್ ಅವರಿಗಿಂತ ಹೆಚ್ಚು ಕೀರ್ತಿಯನ್ನು ಪಡೆದಿದ್ದು ಯಾಕೆ ಎಂಬ ಚರ್ಚೆ ಭಾರೀ ಸದ್ದು ಮಾಡುತ್ತಿದೆ.

    ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮಾಧ್ಯಮವೊಂದರ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಸಚಿನ್, ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಕ್ವಾರ್ಟರ್ ಫೈನಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಅವರು 5ನೇ ಕ್ರಮಾಂಕ, ನಾಯಕ ಧೋನಿ 6ನೇ ಕ್ರಮಾಂಕ ಮತ್ತು ಸುರೇಶ್ ರೈನಾ 7ನೇ ಕ್ರಮಾಂಕದಲ್ಲಿ ಬ್ಯಾಂಟಿಗ್ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಟೀಂ ಇಂಡಿಯಾ ವೇಗದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಫೈನಲ್ ಪಂದ್ಯದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ವಿರೇಂದ್ರ ಸೆಹ್ವಾಗ್ ಉಪುಲ್ ತರಂಗ ಅವರ ಅದ್ಭುತ ಕ್ಯಾಚ್ ಪಡೆದಿದ್ದರು. ಈ ಮೂಲಕ ನಾವು ಶ್ರೀಲಂಕಾವನ್ನು 274 ರನ್‍ಗಳಿಗೆ ಕಟ್ಟಿ ಹಾಕಿದ್ದೆವು. ಆದರೆ ಏಕಾಂಗಿ ಹೋರಾಟ ನಡೆಸಿದ್ದ ಮಹೇಲಾ ಜಯವರ್ಧನೆ 103 ರನ್ ಚಚ್ಚಿದ್ದರು ಎಂದು ನೆನೆದ್ದಾರೆ.

    ಕ್ವಾರ್ಟರ್-ಫೈನಲ್ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನನ್ನ ಮತ್ತು ವೀರು ಜೊತೆಯಾಟದ ನಂತರ ನಾನು ಡ್ರೆಸ್ಸಿಂಗ್ ಕೋಣೆಗೆ ಮರಳಿದೆ. ಆಗ ಫಿಸಿಯೋ ಟೇಬಲ್‍ನಲ್ಲಿ ಮಲಗಿದೆ. ವೀರು ನನ್ನ ಪಕ್ಕದಲ್ಲಿದ್ದರು. ಆಸೀಸ್ ವಿರುದ್ಧ ಗೆಲವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಾಗ ಸಂತೋಷ ಇಮ್ಮಡಿಯಾಗಿತ್ತು. ಆಗ ನೀವು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಿ ಎಲ್ಲೂ ಹೋಗಬೇಡಿ ಅಂತ ಸೆಹ್ವಾಗ್ ಅವರಿಗೆ ನಾನು ಹೇಳಿದ್ದೆ ಎಂದು ಸಚಿನ್ ನೆನಪನ್ನು ಬಿಚ್ಚಿಟ್ಟರು.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೌತಮ್ ಮತ್ತು ವಿರಾಟ್ ಉತ್ತಮ ಜೊತೆಯಾಟ ನಡೆದಿತ್ತು. ಎದುರಾಳಿ ತಂಡಕ್ಕಿಂತ ಕೆಲವು ಹೆಜ್ಜೆ ಮುಂದಿಡಲು ನಾವು ಬಯಸಿದ್ದೇವೆ. ಈ ವೇಳೆ ನಾನು ವೀರೂಗೆ, ‘ಎಡಗೈ ಬ್ಯಾಟ್ಸ್‌ಮನ್ ಗೌತಮ್ ವಿಕೆಟ್ ಒಪ್ಪಿಸಿ ಹೊರ ಬಂದರೆ ಎಡಗೈ ಬ್ಯಾಟ್ಸ್‌ಮನ್ ಯುವಿ ಒಳಗೆ ಹೋಗಬೇಕು. ಒಂದು ವೇಳೆ ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಹೊರಬಂದರೆ ಬಲಗೈ ಬ್ಯಾಟ್ಸ್‌ಮನ್ ಧೋನಿ ಬ್ಯಾಟಿಂಗ್‍ಗೆ ಇಳಿಯಬೇಕು’ ಎಂದು ಸಲಹೆ ನೀಡಿದ್ದೆ. ಹೀಗಾಗಿ ವಿರಾಟ್ ವಿಕೆಟ್ ಒಪ್ಪಿಸಿ ಹೊರ ಬಂದಿದ್ದರಿಂದ ಯುವಿಯನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಡ್ರಾಫ್ಟ್ ಮಾಡಲಾಯಿತು. ಏಕೆಂದರೆ ಬಲಗೈ, ಎಡಗೈ ಬ್ಯಾಟಿಂಗ್ ಸಂಯೋಜನೆ ಇರುವುದು ಮುಖ್ಯವಾಗಿತ್ತು. ಯುವಿ ಪ್ರಚಂಡ ರೂಪದಲ್ಲಿದ್ದರು. ಆದರೆ ಶ್ರೀಲಂಕಾದಲ್ಲಿ ಇಬ್ಬರು ಆಫ್ ಸ್ಪಿನ್ನರ್‌ಗಳು ಇದ್ದರು. ಆದ್ದರಿಂದ ಕಾರ್ಯತಂತ್ರದಲ್ಲಿ ಬದಲಾವಣೆ ಇರುತ್ತದೆ ಎಂದು ನಾನು ಭಾವಿಸಿದ್ದೆ ಎಂದು ಸಚಿನ್ ತಂತ್ರಗಾರಿಕೆ ರಿವೀಲ್ ಮಾಡಿದ್ದಾರೆ.

    ಈ ತಂತ್ರವನ್ನು ಅನುಸರಿಸುವಂತೆ ಸಲಹೆ ನೀಡಲು ಗ್ಯಾರಿ ಹೊರಗೆ ಕುಳಿತಿದ್ದ ಎಂ.ಎಸ್.ಧೋನಿ ಕಡೆಗೆ ತಿರುಗಿ ನೋಡಿದೆ. ಆಗ ಧೋನಿ ನನ್ನ ಬಳಿಗೆ ಬಂದಾಗ ವೀರು, ಕೋಚ್ ಗ್ಯಾರಿ ಕಸ್ಟರ್ನ್ ಹಾಗೂ ನಾನು ಅದರ ಬಗ್ಗೆ ಮಾತನಾಡಿದ್ದೆವು. ಗ್ಯಾರಿ ಸಹ ಒಪ್ಪಿದ್ದರು. ಆಗ ಮೈದಾನಕ್ಕಿಳಿಯಲು ಧೋನಿ ಸಿದ್ಧರಾದರು ಎಂದು ತಿಳಿಸಿದ್ದಾರೆ.

    ಇದೇ ವೇಳೆ ವಿರೇಂದ್ರ ಸೆಹ್ವಾಗ್ ಮಾತನಾಡಿ, ನಮ್ಮ ಮೂಲಭೂತ ಅಂಶಗಳನ್ನು ಸರಿಯಾಗಿ ಪಡೆದರೆ, ನಾವು ಯಾವಾಗಲೂ ನಿಯಂತ್ರಣದಲ್ಲಿರುತ್ತೇವೆ ಎಂದು ನಮಗೆ ತಿಳಿದಿತ್ತು. ನಾನು ಆರಂಭದಲ್ಲಿ ತುಂಬಾ ನಿರಾಶೆಗೊಂಡಿದ್ದೆ. ಸಚಿನ್ ಯಾವಾಗ ವಿಕೆಟ್ ಒಪ್ಪಿಸಿ ಹೊರ ಬಂದರೋ ನಾನು ಮೌನಕ್ಕೆ ಜಾರಿಬಿಟ್ಟಿದ್ದೆ ಎಂದು ನೆನೆದರು.

    ‘ಗೌತಮ್ ಗಂಭೀರ್ ಅವರ 97 ರನ್‍ಗಳ ಅಮೂಲ್ಯವಾದ ಇನ್ನಿಂಗ್ಸ್ ಗುರಿಯನ್ನು ಬೆನ್ನಟ್ಟುವಲ್ಲಿ ಅಡಿಪಾಯ ಹಾಕಿತು. ಜೊತೆಗೆ ಧೋನಿ ಅಜೇಯ 91 ರನ್ ಗಳಿಸಿ ಗುರಿ ತಲುಪಿದ್ದರು. ಧೋನಿ ಫಿನಿಶಿಂಗ್ ಸಿಕ್ಸರ್ ಸಿಡಿಸಿದ್ದು ಸ್ಮರಣೀಯವಾಗಿಸಿದೆ ಎಂದು ಸಚಿನ್ ಹೇಳಿದ್ದಾರೆ.

  • ನೀವು ದಂತಕಥೆ- ಯುವಿಯನ್ನ ಹೊಗಳಿದ ರವಿಶಾಸ್ತ್ರಿ

    ನೀವು ದಂತಕಥೆ- ಯುವಿಯನ್ನ ಹೊಗಳಿದ ರವಿಶಾಸ್ತ್ರಿ

    ನವದೆಹಲಿ: 1983ರ ಬಳಿಕ ಟೀಂ ಇಂಡಿಯಾ 2011ರಲ್ಲಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. 2020ರ ಏಪ್ರಿಲ್ 2ರಂದು 9 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಹಾಲಿ ತಂಡದ ಭಾರತದ ಕೋಚ್ ರವಿಶಾಸ್ತ್ರಿ ಗೆಲುವಿನ ಕ್ಷಣವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.

    ರವಿಶಾಸ್ತ್ರಿ ಅವರು, ‘ಎಲ್ಲರಿಗೂ ಅಭಿನಂದನೆಗಳು. ಈ ನೆನಪುಗಳು ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತವೆ. ನಮ್ಮ 1983ರ ತಂಡ ಜೀವನದಂತೆಯೇ ಎಂದು ಟ್ವೀಟ್ ಮಾಡಿದ್ದರು. ಜೊತೆಗೆ ಟ್ವಿಟ್ ಅನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ಟ್ಯಾಗ್ ಮಾಡಿದ್ದರು.

    ಈ ಕುರಿತು ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ರವಿಶಾಸ್ತ್ರಿ ಅವರನ್ನು ಟ್ರೋಲ್ ಮಾಡಿದ್ದಾರೆ. ಯುವಿ ಟ್ವೀಟ್‍ಗೆ ಪ್ರತಿಕ್ರಿಯಿಸಿ, ‘ಹಿರಿಯರಿಗೆ ಧನ್ಯವಾದಗಳು. ನೀವು ನನ್ನನ್ನು ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಟ್ಯಾಗ್ ಮಾಡಬಹುದಿತ್ತು. ನಾವಿಬ್ಬರೂ 2011ರ ವಿಶ್ವಕಪ್‍ನ ಚಾಂಪಿಯನ್ ತಂಡದ ಭಾಗವಾಗಿದ್ದೆವು ಎಂದು ನಗುವ ಎಮೋಜಿ ಹಾಕಿ ಕಾಳೆದಿದ್ದಾರೆ.

    ಯುವಿ ಕಾಮೆಂಟ್‍ಗೆ ಪ್ರತಿಕ್ರಿಯೆ ನೀಡಿದ ರವಿಶಾಸ್ತ್ರಿ, ವಿಶ್ವಕಪ್ ವಿಚಾರಕ್ಕೆ ಬಂದಾಗ ನಿಮ್ಮನ್ನು ಕಿರಿಯರೆಂದು ಪರಿಗಣಿಸಲು ಆಗುವುದಿಲ್ಲ. ನೀವು ದಂತಕಥೆ ಎಂದು ಹೊಗಳಿದ್ದಾರೆ.

    2011ರ ಐಸಿಸಿ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯವು ಮುಂಬೈನಲ್ಲಿ ಭಾರತ, ಶ್ರೀಲಂಕಾ ನಡೆದಿತ್ತು. ಟಾಸ್ ಗೆದ್ದಿದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‍ಗೆ 274 ರನ್ ಗಳಿಸಿತ್ತು. ಮಹೇಲಾ ಜಯವರ್ಧನೆ ಅಜೇಯ 103 ರನ್ ಗಳಿಸಿದ್ದರು. ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 4 ವಿಕೆಟ್‍ಗೆ 277 ರನ್ ಗಳಿಸಿತ್ತು. ಭಾರತದ ಪರ ಗೌತಮ್ ಗಂಭೀರ್ 97 ರನ್ ಮತ್ತು ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್ ಗಳಿಸಿದ್ದರು. ಉತ್ತಮ ಬ್ಯಾಟಿಂಗ್ ಪ್ರದರ್ಶ ನೀಡಿದ್ದ ಧೋನಿ ಅವರನ್ನು ಪಂದ್ಯ ಶ್ರೇಷ್ಠರಾಗಿ ಆಯ್ಕೆ ಮಾಡಿದರೆ, ಯುವರಾಜ್ ಸಿಂಗ್ ಅವರನ್ನು ಸರಣಿ ಶ್ರೇಷ್ಠ ಆಗಿದ್ದರು. ಇದಕ್ಕೂ ಮೊದಲು ಕಪಿಲ್ ದೇವ್ ನಾಯಕತ್ವದಲ್ಲಿ ಭಾರತೀಯ ತಂಡ 1983 ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

  • ಟ್ವೀಟ್ ಮಾಡಿ ವಿಲನ್‍ಗಳಾದ ಯುವಿ, ಭಜ್ಜಿ – ಯುವರಾಜ್ ಸಿಂಗ್ ಸ್ಪಷ್ಟನೆ

    ಟ್ವೀಟ್ ಮಾಡಿ ವಿಲನ್‍ಗಳಾದ ಯುವಿ, ಭಜ್ಜಿ – ಯುವರಾಜ್ ಸಿಂಗ್ ಸ್ಪಷ್ಟನೆ

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಟೀಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಕೊರೊನಾ ನಿಯಂತ್ರಣ ಮಾಡಲು ಪಾಕ್ ಮಾಜಿ ಕ್ರಿಕೆಟಿಗ ಆಫ್ರಿದಿ ಅವರ ಫೌಂಡೇಶನ್‍ಗೆ ಸಹಾಯ ಮಾಡುವಂತೆ ಯುವರಾಜ್ ಸಿಂಗ್ ಮನವಿ ಮಾಡಿಕೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

    ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡಲು ಆಟಗಾರರು ಮನವಿ ಮಾಡಿಬೇಕಾಗಿತ್ತು. ಆದರೆ ಪಾಕ್‍ನಲ್ಲಿರೋ ಮಂದಿಗೆ ಸಹಾಯ ಮಾಡುವಂತೆ ಮನವಿ ಮಾಡಿರುವುದು ಎಷ್ಟು ಸರಿ ಎಂಬುವುದು ನೆಟ್ಟಿಗರ ಪ್ರಶ್ನೆಯಾಗಿದೆ. ಇತ್ತ ಯುವರಾಜ್‍ಸಿಂಗ್ ದಾರಿಯನ್ನೇ ಅನುಸರಿಸಿರೋ ಹರ್ಭಜನ್ ಸಿಂಗ್ ವಿರುದ್ಧವೂ ನೆಟ್ಟಿಗರು ಗರಂ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ #shameonyuvibhajji ಎಂಬ ಹ್ಯಾಶ್ ಟ್ಯಾಗ್ ಬಳಸಿ 50 ಸಾವಿರಕ್ಕೂ ಹೆಚ್ಚು ಟ್ವೀಟ್‍ಗಳೊಂದಿಗೆ ಟ್ರೆಂಡ್ ಆಗಿತ್ತು.

    ಇತ್ತ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿ ಬರುತ್ತಿದಂತೆ ಪ್ರತಿಕ್ರಿಯೆ ನೀಡರೋ ಯುವರಾಜ್ ಸಿಂಗ್, ಎಲ್ಲವುದಕ್ಕಿಂತ ಮಾನವೀಯತೆ ದೊಡ್ಡದು ಎಂದು ಹೇಳಿ ತಮ್ಮ ಈ ಹಿಂದಿನ ಮನವಿಯನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರಿಗೆ ಅಫ್ರಿದಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಮಾನವೀಯತೆ ದೃಷ್ಟಿಯಿಂದ ದೇಶ ಗಡಿಯನ್ನು ಮೀರಿದ ನಿಮ್ಮ ಬೆಂಬಲ, ಪ್ರೀತಿ ಮತ್ತು ಶಾಂತಿಯನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

    ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ 80 ಲಕ್ಷ ರೂ., ಸುರೇಶ್ ರೈನಾ 52 ಲಕ್ಷ ರೂ., ರಹಾನೆ 10 ಲಕ್ಷ ರೂ., ಕೊಹ್ಲಿ-ಅನುಷ್ಕಾ ಜೋಡಿ 3 ಕೋಟಿ ರೂ., ಸಚಿನ್ 50 ಲಕ್ಷ ರೂ. ದೇಣಿಗೆ ನೀಡಿದ್ದರು. ಪರಿಣಾಮ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಅವರ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಲ ನೆಟ್ಟಿಗರು, ಪಾಕಿಸ್ತಾನ ಸರ್ಕಾರ, ಎನ್‍ಜಿಓಗಳು ಅಲ್ಲಿನ ಹಿಂದೂ, ಕ್ರೈಸ್ತ ಮಂದಿಗೆ ಕೊರೊನಾದಂತಹ ಸಂದರ್ಭದಲ್ಲೂ ಆಹಾರ ಪೂರೈಕೆ ಮಾಡಲು ನಿರಾಕರಿಸಿದೆ. ಅಲ್ಲದೇ ಭಾರತದಿಂದ ಭೂ ಗಡಿ ಪ್ರದೇಶದ ಮೂಲಕ ಆಹಾರವನ್ನು ಪೂರೈಕೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿ ನಿರ್ಲಕ್ಷ್ಯ ತೋರಿದೆ. ಇದುವರೆಗೂ ಈ ಬಗ್ಗೆ ಅಫ್ರಿದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲಿನ ಜನತೆಯ ಬಗ್ಗೆ ಧ್ವನಿಯನ್ನು ನೀಡಿಲ್ಲ. ಇಂತಹ ಸಂದರ್ಭದಲ್ಲಿ ಯುವಿ, ಬಜ್ಜಿ ಅವರು ಅಫ್ರಿದಿಗೆ ಬೆಂಬಲ ನೀಡಿರೋದು ಎಷ್ಟು ಸರಿ ಎಂಬುವುದು ಹಲವರ ಪ್ರಶ್ನೆಯಾಗಿದೆ.

  • ಗಂಗೂಲಿಯಂತೆ ಕೊಹ್ಲಿ, ಧೋನಿ ನನಗೆ ಸಪೋರ್ಟ್ ಮಾಡಲಿಲ್ಲ: ಯುವಿ

    ಗಂಗೂಲಿಯಂತೆ ಕೊಹ್ಲಿ, ಧೋನಿ ನನಗೆ ಸಪೋರ್ಟ್ ಮಾಡಲಿಲ್ಲ: ಯುವಿ

    – ಕ್ಯಾನ್ಸರ್ ಬಂದಾಗ ನನಗೂ ಭಯವಾಗಿತ್ತು

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯಂತೆ ನನಗೆ ಈಗಿನ ನಾಯಕ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರು ಸಪೋರ್ಟ್ ಮಾಡಲಿಲ್ಲ ಎಂದು ಮಾಜಿ ಆಟಗಾರ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೇಳಿದ್ದಾರೆ.

    ಸೌರವ್ ಗಂಗೂಲಿ ಅವರ ನಾಯಕ್ವದಲ್ಲಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಯುವಿ, ನಂತರ ರಾಹುಲ್ ದ್ರಾವಿಡ್, ಸೆಹ್ವಾಗ್, ಗಂಭೀರ್, ಕೊಹ್ಲಿ, ಧೋನಿ ಅವರ ನಾಯಕತ್ವದಲ್ಲಿ ಪಂದ್ಯಗಳನ್ನು ಆಡಿದ್ದಾರೆ. ಆದರೆ ಕೊಹ್ಲಿ ಹಾಗೂ ಧೋನಿ ಅವರಿಗೆ ಹೋಲಿಸಿಕೊಂಡರೆ ನನಗೆ ಸೌರವ್ ಗಂಗೂಲಿ ಅವರು ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಯುವರಾಜ್ ತಿಳಿಸಿದ್ದಾರೆ.

    ನಾನು ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಬಹಳ ಪಂದ್ಯಗಳನ್ನು ಆಡಿದ್ದೇನೆ. ಅವರು ನನಗೆ ಬಹಳ ಸಪೋರ್ಟ್ ಮಾಡಿದ್ದಾರೆ. ಅವರ ನಂತರ ಧೋನಿ ಅವರು ನಾಯಕತ್ವ ತೆಗೆದುಕೊಂಡರು. ಧೋನಿ ಮತ್ತು ಸೌರವ್ ನಡುವೆ ಒಬ್ಬರನ್ನು ಆಯ್ಕೆ ಮಾಡಲು ಬಹಳ ಕಷ್ಟವಾಗುತ್ತದೆ. ನನಗೆ ಸೌರವ್ ಅವರ ನಾಯಕತ್ವದಲ್ಲಿ ಬಹಳ ಒಳ್ಳೆಯ ನೆನಪುಗಳಿವೆ ಯಾಕೆಂದರೆ ಅವರು ನನಗೆ ಬಹಳ ಬೆಂಬಲ ನೀಡಿದ್ದಾರೆ. ಆದರೆ ಧೋನಿ ಮತ್ತು ಕೊಹ್ಲಿ ಅವರಿಂದ ನನಗೆ ಆ ರೀತಿಯ ಬೆಂಬಲ ಸಿಗಲಿಲ್ಲ ಎಂದು ಯುವಿ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಈಗ ಸದ್ಯಕ್ಕೆ ಭಾರತ ತಂಡಕ್ಕೆ ಒಬ್ಬ ಒಳ್ಳೆಯ ವ್ಯಕ್ತಿ ಬೇಕು. ಆತ ಆಟಗಾರರ ಜೊತೆ ಮೈದಾನದ ಹೊರಗಿನ ವಿಚಾರಗಳ ಬಗ್ಗೆಯೂ ಮಾತನಾಡಬೇಕು. ಯಾಕೆಂದರೆ ಅವರ ಮೈದಾನದ ಹೊರಗಿನ ಕೆಲ ಸಮಸ್ಯೆಗಳು ಮೈದಾನದ ಒಳಗಿನ ಪ್ರದರ್ಶನವನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಒಬ್ಬ ವ್ಯಕ್ತಿ ಆಟಗಾರರ ವೈಯಕ್ತಿಕ ವಿಚಾರಗಳಲ್ಲಿ ಮಾರ್ಗದರ್ಶನ ನೀಡಬಲ್ಲರು ಎಂದು ಯುವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಆಟಗಾರ ಜೊತೆ ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾತನಾಡಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ನಮ್ಮ ಸಮಯದಲ್ಲಿ ನಮಗೆ ಪ್ಯಾಡಿ ಅಪ್ಟನ್ ಅವರು ಇದ್ದರು ಅವರು, ಭಯ, ವೈಫಲ್ಯದಂತ ಮೈದಾನ ಹೊರಗಿನ ವಿಚಾರಗಳ ಬಗ್ಗೆ ನಮ್ಮ ಬಳಿ ಮಾತನಾಡಿ ತುಂಬಾ ಸಹಾಯ ಮಾಡುತ್ತಿದ್ದರು. ಈಗಿನ ಭಾರತ ತಂಡಕ್ಕೆ ಪ್ಯಾಡಿಯಂತವರು ಬೇಕಾಗಿದ್ದಾರೆ ಎಂದು ಯುವರಾಜ್ ತಿಳಿಸಿದ್ದಾರೆ.

    ಇದೇ ವೇಳೆ ಲಾಕ್‍ಡೌನ್ ಬಗ್ಗೆ ಮಾತನಾಡಿರುವ ಯುವರಾಜ್ ಅವರು, ಇದರಿಂದ ಅನುಕೂಲ ಮತ್ತು ಅನಾನುಕೂಲ ಎರಡು ಇದೆ. ವಿಶ್ವದಾದ್ಯಂತ ಕೊರೊನಾದಿಂದ ಬಹಳ ಜನರು ಸಾಯುತ್ತಿರುವುದನ್ನು ನೋಡಿದರೆ ನೋವು ಆಗುತ್ತೆ. ಈ ಸೋಂಕು ಬಹಳ ಬೇಗ ಹರಡುತ್ತಿದೆ. ಜನರು ಇದಕ್ಕೆ ಹೆದರದೆ ಸೂಕ್ತ ಹೆಲ್ತ್ ವೈಬ್‍ಸೈಟ್‍ಗಳಿಗೆ ಹೋಗಿ ಚೆಕ್ ಮಾಡಿ ಸೋಂಕಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಯುವರಾಜ್ ಸಲಹೆ ನೀಡಿದ್ದಾರೆ.

    ನನಗೂ ಕ್ಯಾನ್ಸರ್ ಬಂದಾಗ ನಾನೂ ಕೂಡ ತುಂಬಾ ಭಯಪಟ್ಟಿದೆ. ಆದರೆ ನಂತರ ಅದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡೆ. ಸರಿಯಾದ ಆಸ್ಪತ್ರೆಗೆ ಹೋಗಿ ಗುಣಮುಖನಾದೆ. ಹಾಗೆ ಕೊರೊನಾ ವಿಚಾರವಾಗಿಯೂ ಯಾರೂ ಭಯಪಡಬೇಡಿ ಸರ್ಕಾರಿ ಹೆಲ್ತ್ ವೆಬ್‍ಸೈಟಿಗೆ ಹೋಗಿ ಮಾಹಿತಿ ಪಡೆಯಿರಿ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಯುವಿ ಹೇಳಿದ್ದಾರೆ.

    ಒಟ್ಟು ಭಾರತದ ಪರ 304 ಏಕದಿನ ಪಂದ್ಯಗಳನ್ನು ಆಡಿರುವ ಯುವಿ, ಗಂಗೂಲಿ ನಾಯಕತ್ವದಲ್ಲಿ 110 ಪಂದ್ಯ ಹಾಗೂ ಧೋನಿ ನಾಯಕತ್ವದಲ್ಲಿ 104 ಪಂದ್ಯಗಳನ್ನು ಆಡಿದ್ದಾರೆ. ಯುವರಾಜ್ ಅವರು ಕಳೆದ ವರ್ಷ ಎಲ್ಲಾ ಮಾದರಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. 2007ರ ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಅನ್ನು ಭಾರತ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರವಹಿಸಿದ್ದರು.

  • ಕೊರೊನಾ ವಿರುದ್ಧ ಹೋರಾಡಲು ಯುವಿ ಕೈಫ್ ರೀತಿ ಒಳ್ಳೆಯ ಜೊತೆಯಾಟಬೇಕು – ಮೋದಿ

    ಕೊರೊನಾ ವಿರುದ್ಧ ಹೋರಾಡಲು ಯುವಿ ಕೈಫ್ ರೀತಿ ಒಳ್ಳೆಯ ಜೊತೆಯಾಟಬೇಕು – ಮೋದಿ

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ತರ ಒಳ್ಳೆಯ ಜೊತೆಯಾಟ ಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

    ಶುಕ್ರವಾರ ದೇಶವನ್ನು ಉದ್ದೇಶಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಮಾರ್ಚ್ 22ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಹೊರಗಡೆ ಬರಬೇಡಿ. ಜನರೇ ಜನರಿಗಾಗಿ ಮಾಡುವ ಕರ್ಫ್ಯೂ ಇದಾಗಿದ್ದು, ನಾವು ಆರೋಗ್ಯವಾಗಿದ್ದರೆ ದೇಶ ಆರೋಗ್ಯದಲ್ಲಿರುತ್ತದೆ ಎಂದು ಮನವಿ ಮಾಡಿ ಜನತಾ ಕಫ್ರ್ಯೂವನ್ನು ಪಾಲನೆ ಮಾಡುವಂತೆ ಕರೆ ಕರೆಕೊಟ್ಟಿದ್ದರು.

    ಈ ಜನತಾ ಕರ್ಫ್ಯೂಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ವಿಚಾರವಾಗಿ ಯುವರಾಜ್ ಸಿಂಗ್ ಅವರು ಕೂಡ ಟ್ವೀಟ್ ಮಾಡಿದ್ದರು. ನಾವೇಲ್ಲ ಸೇರಿ ನರೇಂದ್ರ ಮೋದಿ ಅವರ ಸೂಚನೆಯನ್ನು ಪಾಲಿಸೋಣ. ನಾವು ಇರುವ ಪರಿಸ್ಥಿತಿ ನಿಜ ಮತ್ತು ನಾವು ಕೊರೊನಾ ವೈರಸ್ ವಿರುದ್ಧ ಹೋರಾಡೋಣ. ಆರೋಗ್ಯಕರ ಜಾಗೃತಿ ಮೂಡಿಸಲು ಮತ್ತು ನಮ್ಮ ದೇಶವನ್ನು ಬೆಂಬಲಿಸಲು ಪ್ರತಿಯೊಬ್ಬ ಭಾರತೀಯನೂ ನನ್ನೊಂದಿಗೆ ಸೇರಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದರು.

    ಇದಾದ ನಂತರ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಕೂಡ, ನರೇಂದ್ರ ಮೋದಿ ಅವರು ನಮ್ಮ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಮೋದಿ ಜನತಾ ಕಫ್ರ್ಯೂ ಹಾಕಿದ್ದಾರೆ. ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಭಯಪಡಬೇಡಿ. ನಮ್ಮ ಪ್ರೀತಿ ಪಾತ್ರರು ಮತ್ತು ನಮ್ಮ ದೇಶದ ಜನರ ಯೋಗಕ್ಷೇಮದ ಜವಾಬ್ದಾರಿಯನ್ನು ನಾವು ತಗೆದುಕೊಳ್ಳುವ ಸಮಯವಿದು ಎಂದು ಬರೆದುಕೊಂಡಿದ್ದಾರೆ.

    ಈ ಇಬ್ಬರು ಸ್ಟಾರ್ ಕ್ರಿಕೆಟಿಗರು ಮಾಡಿರುವ ಟ್ವೀಟ್‍ಗೆ ಮೋದಿಜೀ ಅವರು ರೀಟ್ವೀಟ್ ಮಾಡಿದ್ದು, ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ. ಅವರ ಜೊತೆಯಾಟವನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ಈಗ ಅವರು ಹೇಳಿದಂತೆ ಇದು ಮತ್ತೊಂದು ಜೊತೆಯಾಟದ ಸಮಯ. ಈ ಬಾರಿ ಇಡೀ ಭಾರತವೇ ಒಂದು ಒಳ್ಳೆಯ ಜೊತೆಯಾಟವಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

    2002 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನ್ಯಾಟ್‍ವೆಸ್ಟ್ ಸೀರಿಸ್ ಫೈನಲ್ ಪಂದ್ಯಲ್ಲಿ ಕೈಫ್ ಮತ್ತು ಯುವರಾಜ್ ಅದ್ಭುತವಾಗಿ ಆಡಿದ್ದರು. 146 ರನ್‍ಗಳಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತವನ್ನು ಆರನೇ ವಿಕೆಟ್‍ಗೆ ಜೋಡಿ ಆದ ಕೈಫ್ ಮತ್ತು ಯುವರಾಜ್ ಜೊತೆಗೂ 121 ರನ್ ಜೊತೆಯಾಟವಾಡಿದ್ದರು. ಈ ಮೂಲಕ ಭಾರತ ಫೈನಲಿನಲ್ಲಿ ಎರಡು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು.

    2002 ರ ನ್ಯಾಟ್‍ವೆಸ್ಟ್ ಸೀರಿಸ್ ಫೈನಲ್‍ನಲ್ಲಿ ಇಂಗ್ಲೆಂಡ್ ನೀಡದ 325 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕಿತ್ತು. ಆದರೆ ದಿಢೀರ್ ಕುಸಿತ ಕಂಡ ಭಾರತಕ್ಕೆ ಯುವಿ 63 ಎಸೆತಗಳಲ್ಲಿ 69 ಮತ್ತು ಕೈಫ್ 75 ಎಸೆತಗಳಲ್ಲಿ 87 ರನ್ ಸಿಡಿಸಿ ತಂಡವನ್ನು ಗೆಲುವಿನ ತಡ ಸೇರಿಸಿದ್ದರು. ಈ ಪಂದ್ಯದ ಜೊತೆಯಾಟವನ್ನು ಉಲ್ಲೇಖಿಸಿ ಮೋದಿ ಅವರು ಈ ಟ್ವೀಟ್ ಮಾಡಿದ್ದು ಪ್ರಶಂಸೆ ವ್ಯಕ್ತವಾಗಿದೆ.

  • ವೆಲ್ ಸೇಡ್, ಕಾಕಾ- ಗೇಲ್ ವಿಡಿಯೋ ಹಂಚಿಕೊಂಡ ಯುವಿ

    ವೆಲ್ ಸೇಡ್, ಕಾಕಾ- ಗೇಲ್ ವಿಡಿಯೋ ಹಂಚಿಕೊಂಡ ಯುವಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಫನ್ನಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಯುವರಾಜ್ ಸಿಂಗ್, ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗೇಲ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕ್ರಿಸ್ ಗೇಲ್ ಹಿಂದಿ ಮಾತನಾಡಲು ಕಷ್ಟಪಡುತ್ತಿರುವುದನ್ನು ಕಾಣಬಹುದು. ಇದರಲ್ಲಿ ಗೇಲ್ “ಕಾನ್ಫಿಡೆನ್ಸ್ ಮೇರಾ, ಕಬರ್ ಬನೇಗಿ ತೇರಿ” ಎಂದು ಹಿಂದಿ ಡೈಲಾಗ್ ಹೇಳಿದ್ದಾರೆ.

    https://twitter.com/YUVSTRONG12/status/1239111700659318786

    ಕೇವಲ 17 ಸೆಕೆಂಡ್ ಇರುವ ವಿಡಿಯೋವನ್ನು ಹಂಚಿಕೊಂಡಿರುವ ಯುವಿ, ಕಾನ್ಫಿಡೆನ್ಸ್ ಮೇರಾ, ಕಬರ್ ಬನೇಗಿ ತೇರಿ, ಚೆನ್ನಾಗಿ ಹೇಳಿದ್ದೀರಾ ಕ್ರಿಸ್ ಗೇಲ್ ಕಾಕಾ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಕಾನ್ಫಿಡೆನ್ಸ್ ಮೇರಾ ಎಂದು ಸರಿಯಾಗಿ ಹೇಳುವ ಗೇಲ್, ಮುಂದಿನ ಪದವನ್ನು ಹೇಳಲು ಕಷ್ಟಪಡುತ್ತಾರೆ. ಯುವಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ ಯುವಿ, ಈಗ ಕೆಲ ವಿದೇಶಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸದ್ಯ ಯುವರಾಜ್ ಸಿಂಗ್, ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ಪರವಾಗಿ ಆಡುತ್ತಿದ್ದಾರೆ. ಆದರೆ ಕೆಲ ಪಂದ್ಯಗಳು ಮಾತ್ರ ನಡೆದಿದ್ದ ಈ ಟೂರ್ನಿ ವಿಶ್ವದದ್ಯಾಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

    ಟಿ-20 ಮಾದರಿಯ ಕ್ರಿಕೆಟ್‍ನಲ್ಲಿ ಒಂದು ದೈತ್ಯ ಪ್ರತಿಭೆ ಹೊಡಿಬಡಿ ಆಟಕ್ಕೆ ಹೇಳಿಮಾಡಿಸಿದಂತೆ ಬ್ಯಾಟ್ ಬೀಸುವ ಗೇಲ್, ಈ ಮಾದರಿಯ ಕ್ರಿಕೆಟ್‍ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಗೇಲ್ ಇಲ್ಲಿಯವರೆಗೆ ಟಿ-20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ಇದರ ಜೊತೆಗೆ ಚುಟುಕು ಮಾದರಿ ಪಂದ್ಯದಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಆಟಗಾರನಾಗಿದ್ದು, ಗೇಲ್ ಇಲ್ಲಿಯವರೆಗೆ ಟಿ-20ಯಲ್ಲಿ 22 ಶತಕ ದಾಖಲಿಸಿದ್ದಾರೆ.

    ಈಗ ಗೇಲ್ ವಿವಿಧ ವಿದೇಶಿ ಟಿ-20 ಟೂರ್ನಿಯನ್ನು ಆಡುತ್ತಿದ್ದಾರೆ. ಈಗ ಮುಂಬರುವ ಐಪಿಎಲ್ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಗೇಲ್ ಆಡಲಿದ್ದಾರೆ. ಐಪಿಎಲ್‍ನಲ್ಲಿ ಪಂಜಾಬ್ ತಂಡ ಇಲ್ಲಿಯವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ಬಾರಿ ಕನ್ನಡಿಗ ಕೆ.ಎಲ್. ರಾಹುಲ್ ಪಂಜಾಬ್ ತಂಡವನ್ನು ಮುನ್ನೆಡೆಸುತ್ತಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

    ಈ ಬಾರಿಯ ಐಪಿಎಲ್‍ಗೂ ಕೂಡ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಇದೇ ತಿಂಗಳ 29 ರಂದು ಆರಂಭವಾಗಬೇಕಿದ್ದ ಟೂರ್ನಿಯನ್ನು ಮುಂದೂಡಲಾಗಿದೆ. ಜೊತೆಗೆ ದೆಹಲಿ ಸರ್ಕಾರ ನಮ್ಮ ರಾಜ್ಯದಲ್ಲಿ ಈಗ ಇರುವ ಪರಿಸ್ಥಿತಿಗೆ ಯಾವುದೇ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ಕೊಡುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಬಿಸಿಸಿಐ ಜನರ ಆರೋಗ್ಯದ ಹಿತದೃಷ್ಠಿಯಿಂದ ಐಪಿಎಲ್ ಅನ್ನು ಮುಂದೂಡಿದೆ.

  • ತನ್ನ ಹುಟ್ಟುಹಬ್ಬದಂದು ಪತಿ ಯುವಿಯನ್ನು ವಿಶೇಷ ಸ್ಥಳಕ್ಕೆ ಕರೆದುಕೊಂಡ ಹೋದ ಹಜೇಲ್

    ತನ್ನ ಹುಟ್ಟುಹಬ್ಬದಂದು ಪತಿ ಯುವಿಯನ್ನು ವಿಶೇಷ ಸ್ಥಳಕ್ಕೆ ಕರೆದುಕೊಂಡ ಹೋದ ಹಜೇಲ್

    ನ್ಯೂಯಾರ್ಕ್: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು, ತಮ್ಮ ಪತ್ನಿ ಹಜೇಲ್ ಕೀಚ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

    ಯುವರಾಜ್ ಸಿಂಗ್ ಅವರ ಪತ್ನಿ ನಟಿ ಹಜೇಲ್ ಕೀಚ್ ಅವರು ಇಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವರಾಜ್ ಮತ್ತು ಹಜೇಲ್ ನ್ಯೂಯಾರ್ಕಿಗೆ ತೆರಳಿದ್ದು, ಅಲ್ಲಿ ಲಿಬರ್ಟಿ ಪ್ರತಿಮೆ ಬಳಿ ಸೆಲ್ಫಿ ಕ್ಲಿಕ್ಕಿಸಿ ಅದನ್ನು ತಮ್ಮ ಇಸ್ಟಾಗ್ರಾಮ್‍ನಲ್ಲಿ ಹಾಕಿ ಪ್ರೀತಿಯ ಪತ್ನಿಗೆ ಯುವಿ ವಿಶ್ ಮಾಡಿದ್ದಾರೆ.

    https://www.instagram.com/p/B9GVHuhjVoB/?utm_source=ig_embed

    ಪತ್ನಿ ಹಜೇಲ್ ಜೊತೆ ಲಿಬರ್ಟಿ ಪ್ರತಿಮೆ ಎದುರು ತೆಗೆದಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಯುವಿ, ಹೇ ಹಜೇಲ್ ಇಂದು ನಿನ್ನ ಹುಟ್ಟುಹಬ್ಬ, ನಿನ್ನ ಹುಟ್ಟಹುಬ್ಬಕ್ಕಾಗಿ, ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಕ್ಕೆ ಧನ್ಯವಾದಗಳು. ಇಂದು ನಿನಗೆ ಒಂದು ಒಳ್ಳೆಯ ದಿನವಾಗಿರಲಿ ಎಂದು ಪ್ರೀತಿಯ ಹೆಂಡತಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ.

    1987 ಫೆಬ್ರವರಿ 28 ರಂದು ಇಂಗ್ಲೆಂಡಿನ ಎಸೆಕ್ಸ್ ನಲ್ಲಿ ಜನಿಸಿದ ಹಜೇಲ್ ಕೀಚ್, 2016 ನವೆಂಬರ್ 30 ರಂದು ಯುವರಾಜ್ ಸಿಂಗ್ ಅವರನ್ನು ಮದುವೆಯಾಗಿದ್ದರು. ಬ್ರಿಟಿಷ್ ನಟಿ ಮತ್ತು ಮಾಡೆಲ್ ಆಗಿದ್ದ ಹಜೇಲ್ ಕೀಚ್ ಅವರು, ಮೊದಲ ಬಾರಿಗೆ 2007ರಲ್ಲಿ ತಮಿಳಿನ ಬಿಲ್ಲಾ ಚಿತ್ರದಲ್ಲಿ ನಟಿಸಿದ್ದರು. ನಂತರ ಅವರು ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದರು.

    ಇತ್ತೀಚೆಗೆ ಯುವರಾಜ್ ಸಿಂಗ್ ಅವರು ಪತ್ನಿ ಹಾಗೂ ಸಹೋದರ ಜೋರಾವರ್ ಸಿಂಗ್ ಅವರ ಜೊತೆ ಒಂದು ವೆಬ್ ಸರಣಿಯಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಇದರಲ್ಲಿ ಅವರ ತಾಯಿ ಶಬ್ನಮ್ ಸಿಂಗ್ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಗಾಳಿ ಸುದ್ದಿಗೆ ತೆರೆ ಎಳೆದಿದ್ದ ಯುವರಾಜ್ ಸಿಂಗ್ ಅವರು, ನಾನು ಯಾವುದೇ ವೆಬ್ ಸೀರಿಸ್ ನಟನೆ ಮಾಡುತ್ತಿಲ್ಲ ಎಂದು ಹೇಳಿದ್ದರು.

    ಭಾರತ ತಂಡದ ಪರ 17 ವರ್ಷ ಅಮೋಘವಾಗಿ ಆಟವಾಡಿದ್ದ ಯುವರಾಜ್ ಸಿಂಗ್, ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. 2011 ರ ವಿಶ್ವಕಪ್‍ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಯುವಿ, ಇಂಡಿಯಾಗೆ ಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಯಾವುದೇ ವಿದಾಯ ಪಂದ್ಯಗಳನ್ನು ಆಡದೇ ನಿವೃತ್ತಿ ಘೋಷಿಸಿದ್ದು, ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.

    https://www.instagram.com/p/B8lBH-8DXA2/

  • ಪತ್ನಿ ಜೊತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಸಿಕ್ಸರ್ ಕಿಂಗ್ ಯುವಿ

    ಪತ್ನಿ ಜೊತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಸಿಕ್ಸರ್ ಕಿಂಗ್ ಯುವಿ

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು, ಪತ್ನಿ ಹಜೇಲ್ ಕೀಜ್ ಜೊತೆ ವೆಬ್ ಸೀರಿಸ್‍ನಲ್ಲಿ ನಟನೇ ಮಾಡುವ ಮೂಲಕ ಕ್ರಿಕೆಟ್ ಬಳಿಕ ಸಿನಿಮಾರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದಾರೆ.

    ಹೌದು ಕ್ರಿಕೆಟ್ ಆಟಕ್ಕೆ ಯುವಿ ವಿದಾಯ ಹೇಳಿದ ಮೇಲೆ ಅವರು ಮತ್ತೇನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ವಿದಾಯದ ನಂತರ ಯುವರಾಜ್ ಸಿಂಗ್ ಅವರು ಕೆಲ ವಿದೇಶಿ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಪತ್ನಿ ಜೊತೆ ವೆಬ್ ಸೀರಿಸ್ ನಲ್ಲಿ ನಟಿಸುವ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

    ಇಷ್ಟು ದಿನ ಕ್ರಿಕೆಟ್‍ನಲ್ಲಿ ತನ್ನ ಆಲ್‍ರೌಂಡರ್ ಆಟದ ಮೂಲಕ ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದ ಈ ಎಡಗೈ ದಾಂಡಿಗ, ಈಗ ಅಸ್ಸಾಂನ ಡ್ರೀಮ್ ಹೌಸ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ವೆಬ್ ಸರಣಿಯಲ್ಲಿ ಅಭಿನಿಯಿಸುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ಅವರ ಪತ್ನಿ ಹಜೇಲ್ ಕೀಜ್ ಮತ್ತು ಸಹೋದರ ಜೋರಾವರ್ ಸಿಂಗ್ ಅವರು ಕೂಡ ಅಭಿನಯಿಸಲಿದ್ದಾರೆ.

    ಈ ವೆಬ್ ಸರಣಿಯ ಇನ್ನೊಂದು ವಿಶೇಷವೆಂದರೆ ಇದರಲ್ಲಿ ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೂ ದಿನ ಬ್ಯಾಟ್ ಹಿಡಿದು ಘರ್ಜಿಸಿದ್ದ ಯುವಿ ಈಗ ಬಣ್ಣ ಹಚ್ಚಿ ಮೋಡಿ ಮಾಡಲು ಬರುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಆದರೆ ಯುವಿ ಈ ವೆಬ್ ಸರಣಿಯಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.

    ಇತ್ತೀಚೆಗೆ ಭಾರತದ ಕ್ರಿಕೆಟ್ ತಂಡದ ಆಟಗಾರರು ಹೆಚ್ಚು ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ತಮಿಳಿನಲ್ಲಿ ಫ್ರೆಂಡ್ ಶಿಪ್ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಸ್ವತಃ ಅವರೇ ಟ್ವೀಟ್ ಮಾಡಿ ತಿಳಿಸಿದ್ದರು. ಇದಾದ ನಂತರ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಮೊದಲ ಬಾರಿಗೆ ಇದೇ ವರ್ಷ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಪಠಾಣ್ ಅವರು ವಿಕ್ರಮ್ ನಟನೆಯ ವಿಕ್ರಮ್ 58 ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಸ್ವತಃ ಸಿನಿಮಾದ ನಿರ್ದೇಶಕ ಅಜಯ್ ಜ್ಞಾನಮುತ್ತು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದರು.

    ಭಾರತ ತಂಡದ ಪರ 17 ವರ್ಷ ಅಮೋಘವಾಗಿ ಆಟವಾಡಿದ್ದ ಯುವರಾಜ್ ಸಿಂಗ್, ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. 2011 ರ ವಿಶ್ವಕಪ್‍ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಯುವಿ, ಇಂಡಿಯಾಗೆ ಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಯಾವುದೇ ವಿದಾಯ ಪಂದ್ಯಗಳನ್ನು ಆಡದೇ ನಿವೃತ್ತಿ ಘೋಷಿಸಿದ್ದು, ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.