Tag: ಯುವಮೋರ್ಚಾ

  • ಪ್ರಧಾನಿ ಮೋದಿ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ನಿರ್ಧಾರ

    ಪ್ರಧಾನಿ ಮೋದಿ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ನಿರ್ಧಾರ

    ಹುಬ್ಬಳ್ಳಿ: ಸೇವಾ ಹೀ ಸಂಘಟನಾ ಎಂಬ ಪರಿಕಲ್ಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಲು ರಾಜ್ಯ ಬಿಜೆಪಿ ಘಟಕ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದರು.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹೇಶ್ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೆ.ಪಿ.ನಡ್ಡಾರವರ ಕರೆಯ ಮೇರೆಗೆ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 02 ರವರೆಗೆ ಸೇವಾ ಸಪ್ತಾಹ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮಾ ಗಾಂಧಿ ಜಯಂತಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರತಿ ವರ್ಷದಂತೆ ಸೇವಾ ಸಪ್ತಾಹದ ಮೂಲಕ ವಿವಿಧ ರೀತಿಯ ಸೇವಾ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತಿದೆ ಎಂದರು.

    ರಾಷ್ಟ್ರೀಯ ಅಧ್ಯಕ್ಷ ನಡ್ಡಾರವರ ನಿರ್ದೇಶನದಂತೆ ಸೆಪ್ಟಂಬರ್ 14 ರಿಂದ ಸೆಪ್ಟೆಂಬರ್ 20 ರವರೆಗೆ ಪ್ರತಿ ಮಂಡಲಗಳಲ್ಲಿ 70 ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅಂಗ ಜೋಡಣಾ ಉಪಕರಣಗಳನ್ನು ನೀಡುವುದು. 70 ಬಡ ಪುರುಷರು ಮತ್ತು ಮಹಿಳೆಯರಿಗೆ ಉಚಿತ ಕನ್ನಡಕಗಳನ್ನು ನೀಡುವುದು. ಕೋವಿಡ್ 19 ನಿಯಮಗಳನ್ನು ಪಾಲಿಸಿ ಪ್ರತಿ ಜಿಲ್ಲೆಯ 70 ಆಸ್ಪತ್ರೆ ಮತ್ತು ಬಡ ಕಾಲೋನಿಗಳಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುವುದು. ಸ್ಥಳೀಯ ಆವಶ್ಯಕತೆ ಅನುಗುಣವಾಗಿ ಆಸ್ಪತ್ರೆಯ ಮೂಲಕ ಕೋವಿಡ್-19 ರಿಂದ ಪೀಡಿತರಾದ 70 ವ್ಯಕ್ತಿಗಳಿಗೆ ಪ್ಲಾಸ್ಮಾ ದಾನ ಮಾಡುವುದು.

    ಯುವಮೋರ್ಚಾದ ವತಿಯಿಂದ ರಾಜ್ಯದಲ್ಲಿ 70 ರಕ್ತದಾನ ಶಿಬಿರಗಳನ್ನು ಮಾಡುವುದು. ಪ್ರತಿ ಜಿಲ್ಲೆಗಳಲ್ಲಿ ಕನಿಷ್ಟ 1 ರಕ್ತದಾನ ಶಿಬಿರ ಆಯೋಜಿಸುವುದು. ಪ್ರತಿ ಬೂತ್‍ನಲ್ಲಿ 70 ವೃಕ್ಷಾರೋಹಣ ಕಾರ್ಯಕ್ರಮ ಮತ್ತು ಪರಿಸರ ಸಂರಕ್ಷಣೆಯ ಸಂಕಲ್ಪ ಕಾರ್ಯಕ್ರಮ. ಪ್ರತಿ ಜಿಲ್ಲೆಗಳ 70 ಹಳ್ಳಿಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುವುದು. ಪ್ಲಾಸ್ಟಿಕ್ ನಿಷೇಧ ಕುರಿತು ಜನಜಾಗೃತಿ, ಪ್ರತಿ ಜಿಲ್ಲಾ ಕೇಂದ್ರದಲ್ಲಿ 70 ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ ಮುಂತಾದ ಸೇವಾ ಸಪ್ತಾಹ ಕಾರ್ಯಕ್ರಮ ನಡೆಸಲಾಗುವುದು ಎಂದರು.

  • ಸಚಿವ ಹೆಗ್ಡೆ ಮಾತುಗಳಿಗೆ ಕಡಿವಾಣ ಹಾಕಿ – ಬಿಎಸ್‍ವೈಗೆ ಯುವಮೋರ್ಚಾದಿಂದ ದೂರು

    ಸಚಿವ ಹೆಗ್ಡೆ ಮಾತುಗಳಿಗೆ ಕಡಿವಾಣ ಹಾಕಿ – ಬಿಎಸ್‍ವೈಗೆ ಯುವಮೋರ್ಚಾದಿಂದ ದೂರು

    ಬೆಂಗಳೂರು: ತಮ್ಮ ವಿವಾದಾತ್ಮಕ ಹೇಳಿಕೆ ಮೂಲಕವೇ ಹೆಚ್ಚು ಪ್ರಚಲಿತದಲ್ಲಿರುವ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಯುವಮೋರ್ಚಾ ಉಪಾಧ್ಯಕ್ಷ ಭೀಮಾ ಶಂಕರ್ ಪಾಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ದೂರು ನೀಡಿದ್ದಾರೆ.

    ಈ ಕುರಿತು ಯಡಿಯೂರಪ್ಪಗೆ ಪತ್ರ ಬರೆದ ಭೀಮಾ ಶಂಕರ್ ಪಾಟೀಲ್, ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಕಡಿವಾಣ ಹಾಕಿ ಎಂದು ತಿಳಿಸಿದ್ದಾರೆ.

    ಅನಂತ್ ಕುಮಾರ್ ಹೆಗ್ಡೆ ಅವರು ಕನ್ನಡ ಸಾಹಿತಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಸಚಿವರು ಕುವೆಂಪು ಅವರಿಗೂ ಅಪಮಾನ ಮಾಡಿದ್ದಾರೆ. ಮುಂದೆ ಕನ್ನಡ ಭಾಷೆ, ಸಾಹಿತಿಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ ನೀಡಿ ಎಂದು ಬಿಎಸ್‍ವೈ ಗೆ ಬರೆದ ಪತ್ರದದಲ್ಲಿ ಉಲ್ಲೇಖಿಸಿದ್ದಾರೆ.

    ಮಾನ್ಯ ಸಚಿವರು ಬನವಾಸಿ ಕದಂಬ ನೆಲೆ ಬೀಡಾದ ಉತ್ತರ ಕನ್ನಡ ಜಿಲ್ಲೆ ಸಂಸದರು. ಆದರೆ ಕನ್ನಡ ಸಾಹಿತಿಗಳ ಕುರಿತು ತೀರಾ ಲಘುವಾಗಿ ಮಾತನಾಡಿರುವ ಸಚಿವ ಅನಂತ ಕುಮಾರ್ ಹೆಗ್ಡೆ ಅವರ ಕನ್ನಡ ಸಾಹಿತ್ಯ ವಿರೋಧಿ ನಡೆಯನ್ನು ಪಕ್ಷದ ಪದಾಧಿಕಾರಿಯಾಗಿ, ಸ್ವಾಭಿಮಾನಿ ಕನ್ನಡಿಗನಾಗಿ ತೀವ್ರವಾಗಿ ಖಂಡಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇತಿಹಾಸಕಾರರು ಬ್ರಿಟಿಷ್ ಮನಸ್ಥಿತಿಯವರು- ಅನಂತ್ ಕುಮಾರ್ ಹೆಗ್ಡೆ

    ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಅಪಮಾನ ಮಾಡಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಇವರನ್ನು ಮಣ್ಣಿನ ಮಗ ಎಂದು ಕರೆಯಲು ಸಾಧ್ಯವಿಲ್ಲ. ಅಲ್ಲದೆ ಪಕ್ಷದ ಅನೇಕ ಮುಖಂಡರು ಹಿಂದುತ್ವದ ಪ್ರತಿಪಾದನೆ ರಭಸದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಇದರಿಂದ ಚುನಾವಣೆ ಸಂದರ್ಭದ ಸಮಯದಲ್ಲಿ ಸಚಿವರ ಹೇಳಿಕೆಗಳು ಪಕ್ಷದ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದ್ದಾರೆ.

    ಪದ್ಮಾವತ್ ಸಿನಿಮಾ ವಿಚಾರದಲ್ಲಿ ರಾಣಿ ಚೆನ್ನಮ್ಮ, ಒನಕೆ ಓಬವ್ವವರನ್ನು ಸಾಮಾಜಿಕ ಜಾಲತಾಣದಲ್ಲಿ ತೀರ ಕೆಟ್ಟದಾಗಿ ಅವಮಾನ ಮಾಡಲಾಗಿದೆ. ಅಲ್ಲದೇ ಈ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವವರು ನ್ಯಾಯಾಲಯದಿಂದ ನಿರೀಕ್ಷಿತ ಜಾಮೀನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಕನ್ನಡ ವಿರೋಧಿ ಹೇಳಿಕೆ, ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಈ ಕೂಡಲೇ ಅವರು ಕ್ಷಮೆ ಕೋರುವಂತೆ ಸೂಚಿಸಬೇಕು ಎಂದು ಬಿಎಸ್‍ಬೈ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬುದ್ಧಿಜೀವಿಗಳು ಬರೆದ ಸಾಹಿತ್ಯಕ್ಕೆ ಅರ್ಥ, ತಲೆಬುಡ ಇರಲ್ಲ: ಅನಂತ್ ಕುಮಾರ್ ಹೆಗ್ಡೆ ಕಿಡಿ