Tag: ಯುವಕರ ತಂಡ

  • ಹಸಿದವರಿಗೆ ಊಟ ನೀಡ್ತಿದೆ ಧಾರವಾಡದ ಯುವಕರ ತಂಡ

    ಹಸಿದವರಿಗೆ ಊಟ ನೀಡ್ತಿದೆ ಧಾರವಾಡದ ಯುವಕರ ತಂಡ

    ಧಾರವಾಡ: ಕೊರೊನಾ ಸಂಕಷ್ಟದ ಸಮಯದಲ್ಲಿ ಅನ್ನ, ಆಹಾರಕ್ಕಾಗಿ ಪರದಾಡುತ್ತಿರುವ ಜನರಿಗೆ ಯುವಕರ ತಂಡಗಳು ನೆರವಿನ ಹಸ್ತ ಚಾಚಿ ಮಾನವಿಯತೆ ಮೆರೆದಿವೆ.

    ಧಾರವಾಡದ ನಗರದ ಈ ಯುವಕರ ತಂಡಗಳು, ಹಸಿವಿನಿಂದ ಬಳಲುತ್ತಿರುವ ಜನರಿಗೆ ಉಚಿತ ಊಟ ನೀಡುವ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿವೆ. ಒಂದು ಕಡೆ ಭಾರತೀಯ ಯುವ ಸಮೂಹದದಿಂದ ಕೊರೊನಾ ವಾರಿಯರ್ಸ್ ಗಳಿಗೆ ಊಟ ಹಾಗೂ ಮಜ್ಜಿಗೆ ನೀಡುವ ಕೆಲಸ ನಡೆದಿದೆ.

    ಇದೇ ತಂಡ ನಿರ್ಗತಿಕರನ್ನು ಹುಡುಕಿ ಹೊಟ್ಟೆಗೆ ಅನ್ನ ಹಾಕುವ ಕೆಲಸ ಮಾಡುತಿದ್ದರೆ, ಮತ್ತೊಂದು ಕಡೆ ನಾಯಕವಾಡಿ ಪ್ಲಾಟ್ ಯುವಕರ ತಂಡವೊಂದು ಸ್ಲಂಗಳಲ್ಲಿ ಇರುವ ಬಡವರಿಗೆ ಊಟದ ಪ್ಯಾಕೆಟ್ ನೀಡುವ ಕೆಲಸ ಮಾಡುತ್ತಿದೆ.

    ಕಳೆದ ಎರಡು ದಿನಗಳಿಂದ ಧಾರವಾಡದ ಲಕ್ಷ್ಮಿಸಿಂಗನಕೇರೆ, ಕಂಠಿಗಲ್ಲಿ ಝೋಡಿಗಳಿಗೆ ಹೋಗಿ ಊಟದ ಪ್ಯಾಕೆಟ್ ನೀಡುತ್ತಿವ ಈ ತಂಡ, ಊಟದ ಪ್ಯಾಕೆಟ್ ನೀಡಲು ಹಣ ಕಡಿಮೆ ಇದ್ದರೆ, ಜನರಿಂದ ಹಣ ಕೂಡಿಸಿ ಊಟದ ಪ್ಯಾಕೆಟ್ ನೀಡುವ ಕೆಲಸ ಮಾಡುತ್ತಿದೆ.

  • ಲಾಕ್‍ಡೌನ್ ಎಫೆಕ್ಟ್: ಅನ್ನಕ್ಕಾಗಿ ಪರದಾಡ್ತಿರುವವರಿಗೆ ಉಚಿತ ಆಹಾರ, ನೀರು ವಿತರಣೆ

    ಲಾಕ್‍ಡೌನ್ ಎಫೆಕ್ಟ್: ಅನ್ನಕ್ಕಾಗಿ ಪರದಾಡ್ತಿರುವವರಿಗೆ ಉಚಿತ ಆಹಾರ, ನೀರು ವಿತರಣೆ

    ಚಿತ್ರದುರ್ಗ: ಕೊರೊನಾ ಹರಡದಂತೆ ಭಾರತ ಲಾಕ್‍ಡೌನ್ ಆಗಿ ಇಂದಿಗೆ ಎರಡು ದಿನವಾಗಿದೆ. ಹೀಗಾಗಿ ಪ್ರವಾಸಿತಾಣ ಚಿತ್ರದುರ್ಗದಲ್ಲಿ ನೆಲೆಸಿರುವ ಭಿಕ್ಷಕರು, ನಿರ್ಗತಿಕರು ಹಾಗೂ ಆಸ್ಪತ್ರೆಯಲ್ಲಿರುವ ರೋಗಿಗಳು ಚಿತ್ರದುರ್ಗ ನಗರದಲ್ಲಿ ಆಹಾರ ಸಿಗಲಾರದೇ ಕಂಗಾಲಾಗಿದ್ದರು. ಇದೀಗ ಸ್ವಯಂ ಸೇವರು ಇವರಿಗೆ ಉಚಿತ ಆಹಾರ, ನೀರು ವಿತರಿಸುತ್ತಿದ್ದಾರೆ.

    ಆಹಾರ ನೀರು ತರಲು ಹೋಟೆಲ್‍ಗಳಿಲ್ಲದೇ ಜನರು ಪರದಾಡುತ್ತಿದ್ದರು. ಹೀಗಾಗಿ ಬುಧವಾರ ಅವರ ಸ್ಥಿತಿ ಕಂಡ ಗರುಡಕೇಸರಿ ಎಂಬ ಸ್ವಯಂ ಸೇವಕ ಯುವಕರ ಬಳಗವು ರಾತ್ರಿಯಿಂದಲೇ ಆಹಾರವನ್ನು ಪ್ಯಾಕ್ ಮಾಡಿಕೊಂಡು ಬಿಸ್ಲೇರಿ ನೀರು ಸಹಿತ ಆಟೋದಲ್ಲಿ ಸೇವೆ ನೀಡುತ್ತಿದ್ದಾರೆ.


    ಹಸಿದವರಿಗೆ ಉಚಿತ ಅನ್ನ, ನೀರು ನೀಡುವ ಮೂಲಕ ಯುವಕರು ಮಾನವೀಯತೆ ಮೆರೆಯುತ್ತಿದ್ದಾರೆ. ಇವರ ಕಾರ್ಯಕ್ಕೆ ಕೋಟೆನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಹಾರ ಹಾಗೂ ನೀರಿನ ಬಾಟಲಿಗಳನ್ನು ಆಟೋದಲ್ಲಿ ಹಾಕಿಕೊಂಡು ಯುವಕರು ನಗರದಾದ್ಯಂತ ವಿತರಣೆ ಮಾಡುತ್ತಿದ್ದಾರೆ.

    ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಸ್ಲಂಗಳಲ್ಲಿ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

  • ವೈರಲ್ ಆಯ್ತು ಮಂಡ್ಯ ಯುವಕರ ಸಸಿ ನೆಡುವ ಚಾಲೆಂಜ್

    ವೈರಲ್ ಆಯ್ತು ಮಂಡ್ಯ ಯುವಕರ ಸಸಿ ನೆಡುವ ಚಾಲೆಂಜ್

    ಮಂಡ್ಯ: ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ನೀವು ಬಾಟಲ್ ಓಪನ್ ಚಾಲೆಂಜ್, ಕಿಕಿ ಚಾಲೆಂಜ್ ರೀತಿಯ ಹಲವು ಚಾಲೆಂಜ್‍ಗಳನ್ನು ನೋಡಿದ್ದೀರಾ, ಆದರೆ ಇದೀಗ ಮಂಡ್ಯದಲ್ಲಿ ಹೊಸ ಚಾಲೆಂಜ್‍ವೊಂದು ಸದ್ದು ಮಾಡುತ್ತಿದೆ.

    ಪರಿಸರವನ್ನು ರಕ್ಷಣೆ ಮಾಡುವ ಸಲುವಾಗಿ ಮಂಡ್ಯ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಪ್ರೇಮಿಗಳ ಕನಸು ಎಂಬ ಶೀರ್ಷಿಕೆಯಲ್ಲಿ ಗಿಡ ನೆಡುವ ಚಾಲೆಂಜ್ ಶುರು ಮಾಡಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲದೇ ಇತರೆ ಭಾಗದಲ್ಲೂ ಯುವಕರು ಹಾಗೂ ಪೊಲೀಸರು ಈ ಚಾಲೆಂಜ್‍ನ್ನು ಸ್ವೀಕರಿಸಿ, ನಾವು ನಿಮ್ಮ ಚಾಲೆಂಜ್‍ನ್ನು ಸ್ವೀಕರಿಸಿದ್ದೇವೆ ಎಂದು ಗಿಡ ನೆಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ಖುಷಿ ಪಟ್ಟಿದ್ದಾರೆ.

    ಈ ಹಿಂದೆ ವೈರಲ್ ಆಗಿದ್ದ ಹಲವು ಹುಚ್ಚು ಚಾಲೆಂಜ್‍ಗಳಿಗಿಂತ ಮಂಡ್ಯ ಯುವಕರು ಆರಂಭಿಸಿರುವ ಗಿಡ ನೆಡುವ ಚಾಲೆಂಜ್ ವಿಭಿನ್ನವಾಗಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಮರಗಳನ್ನು ಕಡಿದು, ಇಲ್ಲಸಲ್ಲದ ಕಲುಷಿತ ವಸ್ತುಗಳನ್ನು ಭೂಮಿ ಮೇಲೆ ಹಾಕಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದಾನೆ. ಈ ನಡುವೆ ಪ್ರಕೃತಿಯನ್ನು ರಕ್ಷಣೆ ಮಾಡುವ ಗಿಡ ನೆಡುವ ಚಾಲೆಂಜ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ.

  • ಮೋದಿಗಾಗಿ ಯುವಕರಿಂದ ಪಾದಯಾತ್ರೆ

    ಮೋದಿಗಾಗಿ ಯುವಕರಿಂದ ಪಾದಯಾತ್ರೆ

    ಕೋಲಾರ: ಮತ್ತೊಮ್ಮೆ ಮೋದಿ, ಈ ದೇಶದ ಪ್ರಧಾನಿ ಆಗಬೇಕೆಂದು ಆಶಿಸಿ ಯುವಕರ ತಂಡವೊಂದು ಕೋಲಾರ ಲೋಕಸಭಾ ಕ್ಷೇತ್ರದಾದ್ಯಂತ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ.

    ಗುರುವಾರ ಮಾಲೂರುನಿಂದ ಪ್ರಾರಂಭಿಸಿರುವ ಆರು ಜನ ಯುವಕರ ತಂಡ ಟೇಕಲ್ ಮಾರ್ಗವಾಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಕೋಲಾರ, ಶ್ರೀನಿವಾಸಪುರದಿಂದ ಚಿಂತಾಮಣಿ ಶಿಡ್ಲಘಟ್ಟ ಕ್ಷೇತ್ರಗಳವರೆಗೂ ಪಾದಯಾತ್ರೆ ಮಾಡಿದ್ದಾರೆ.

    ಇನ್ನುಳಿದ ಏಳು ದಿನಗಳವರೆಗೂ ಪಾದಯಾತ್ರೆ ನಡೆಸಲಿದ್ದು, ಯಾವುದೋ ಒಂದು ಪಕ್ಷ ಅಭ್ಯರ್ಥಿಯ ಪರ ಮತಯಾಚಿಸದೆ, ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಶ್ರಮಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುಲಿದ್ದಾರೆ.

    ಸ್ಥಳೀಯರೇ ಆಗಿರುವ ಇವರು ಬೆಂಗಳೂರಿನಲ್ಲಿ ಉದ್ಯೋಗ, ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಮೋದಿ ಅವರ ಆಡಳಿತಕ್ಕೆ ಮನಸೋತು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂದು ಪಾದಯಾತ್ರೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಪಾದಯಾತ್ರೆಯುದ್ದಕ್ಕೂ ಮೋದಿ ಅವರಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.