Tag: ಯುಪಿ ಮಹಿಳೆ

  • ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌

    ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌

    – ಮನೆಯಲ್ಲಿದ್ದ 3 ಲಕ್ಷ ಹಣ, 5 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್‌
    – ಮದುವೆಗೆ 10 ದಿನ ಬಾಕಿ ಇರುವಾಗಲೇ ಘಟನೆ

    ಲಕ್ನೋ: ತನ್ನ ಮಗಳೊಂದಿಗೆ ಮದುವೆಯಾಗಬೇಕಿದ್ದ ಅಳಿಯನ ಜೊತೆ ಮಹಿಳೆಯೊಬ್ಬರು ಎಸ್ಕೇಪ್‌ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ಅಲಿಗಢದ ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಧುವಿನ ತಾಯಿ ಅನಿತಾ ತನ್ನ ಭಾವಿ ಅಳಿಯನೊಂದಿಗೆ ಓಡಿ ಹೋಗಿದ್ದಾಳೆ. ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಪಿಯುಸಿ ಹುಡುಗನ ಮದುವೆಯಾದ ಮೂರು ಮಕ್ಕಳ ತಾಯಿ!

    ಅನಿತಾ ಮಗಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಅನಿತಾ ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ.

    ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ನೊಂದು ನುಡಿದಿದ್ದಾಳೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ

    ಅನಿತಾಳ ಪತಿ ಕುಮಾರ್ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪೊಲೀಸರು ಅನಿತಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದಾರೆ.

  • ಬಲವಂತದ ಮದುವೆ; ವಿವಾಹವಾದ 2 ವಾರಗಳಲ್ಲೇ ಪ್ರಿಯಕರನ ಜೊತೆಗೆ ಸೇರಿ ಪತಿ ಹತ್ಯೆ ಮಾಡಿಸಿದ ಮಹಿಳೆ

    ಬಲವಂತದ ಮದುವೆ; ವಿವಾಹವಾದ 2 ವಾರಗಳಲ್ಲೇ ಪ್ರಿಯಕರನ ಜೊತೆಗೆ ಸೇರಿ ಪತಿ ಹತ್ಯೆ ಮಾಡಿಸಿದ ಮಹಿಳೆ

    ಲಕ್ನೋ: ಮದುವೆಯಾದ 2 ವಾರದಲ್ಲೇ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳಾದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಯನ್ನು ಪೋಷಕರು ಒಪ್ಪಲಿಲ್ಲ. ಮಾ.5 ರಂದು ಪ್ರಗತಿಯನ್ನು ದಿಲೀಪ್ ಎಂಬಾತನ ಜೊತೆ ಬಲವಂತವಾಗಿ ಮದುವೆ ಮಾಡಿದರು.

    ಮದುವೆಯಾಗಿ ಕೇವಲ ಎರಡು ವಾರಗಳಷ್ಟೇ ಕಳೆದಿತ್ತು. ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ, ಯೋಜನೆ ರೂಪಿಸಿ ಗಂಡನನ್ನು ಹತ್ಯೆ ಮಾಡಿಸಿದ್ದಾರೆ. ಪತಿ ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ 2 ಲಕ್ಷ ರೂ. ಸುಪಾರಿ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

    ಗುಂಡೇಟಿನಿಂದ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದ ದಿಲೀಪ್‌ನನ್ನು ಪೊಲೀಸರು ಗುರುತಿಸಿದ್ದರು. ತಕ್ಷಣ ಆತನನ್ನು ಬಿಧುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ, ಸೈಫೈ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು. ಕೊನೆಗೆ ಔರೈಯಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ದಿಲೀಪ್‌ ಕೊನೆಯುಸಿರೆಳೆದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‌

    ಈ ಸಂಬಂಧ ಮೃತ ವ್ಯಕ್ತಿಯ ಸಹೋದರ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತನ ಪತ್ನಿ ಮತ್ತು ಆಕೆಯ ಪ್ರೇಮಿ ಮದುವೆಯ ನಂತರ ಭೇಟಿಯಾಗಲು ಸಾಧ್ಯವಾಗದ ಕಾರಣ, ಇಬ್ಬರೂ ಸೇರಿಕೊಂಡು ದಿಲೀಪ್‌ನನ್ನು ಕೊಲ್ಲಲು ನಿರ್ಧರಿಸಿದ್ದರೆಂಬುದು ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ದಿಲೀಪ್‌ನನ್ನು ಕೊಲೆ ಮಾಡಲು ರಾಮಾಜಿ ಚೌಧರಿ ಎಂಬ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದರು. ಕೊಲೆ ಮಾಡಲು ಅವನಿಗೆ 2 ಲಕ್ಷ ರೂ.ಗಳನ್ನು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ರಾಮಾಜಿ ಮತ್ತು ಇತರ ಕೆಲವರು, ದಿಲೀಪ್‌ನನ್ನು ಬೈಕ್‌ನಲ್ಲಿ ಹೊಲಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಂತರ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಗುರುತಿಸಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು, ನಾಲ್ಕು ಲೈವ್ ಕಾರ್ಟ್ರಿಡ್ಜ್‌ಗಳು, ಒಂದು ಬೈಕ್, ಎರಡು ಮೊಬೈಲ್ ಫೋನ್‌ಗಳು, ಒಂದು ಪರ್ಸ್, ಆಧಾರ್ ಕಾರ್ಡ್ ಮತ್ತು 3,000 ರೂ.ಗಳನ್ನು ವಶಪಡಿಸಿಕೊಂಡಿದ್ದರು.

  • ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ವಿವಿಐಪಿ ಪ್ರದೇಶದಲ್ಲಿ ಶವವಾಗಿ ಪತ್ತೆ

    ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ವಿವಿಐಪಿ ಪ್ರದೇಶದಲ್ಲಿ ಶವವಾಗಿ ಪತ್ತೆ

    ಲಕ್ನೋ: ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ, ವಿವಿಐಪಿ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯ ಬಳಿ ಮಹಿಳೆಯ ಶವ ಪತ್ತೆಯಾಗಿದೆ.

    ಆರೋಪಿ ವಿಮಲ್ ಸೋನಿ, ಗ್ರೀನ್ ಪಾರ್ಕ್ ಪ್ರದೇಶದಲ್ಲಿ ಜಿಮ್ ತರಬೇತುದಾರನಾಗಿದ್ದಾನೆ. ಸರ್ಕಾರಿ ಅಧಿಕಾರಿಗಳಿಗೆ ಮಂಜೂರು ಮಾಡಿದ ಬಂಗಲೆಗಳನ್ನು ಒಳಗೊಂಡಿರುವ ಪ್ರದೇಶದಲ್ಲಿ ಉದ್ಯಮಿಯ ಪತ್ನಿಯ ಶವವನ್ನು ಹೂತಿಟ್ಟಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮುಂಬೈ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – 9 ಮಂದಿಗೆ ಗಾಯ

    ಜೂನ್ 24 ರಂದು ಮಹಿಳೆ ನಾಪತ್ತೆಯಾಗಿದ್ದರು. ನಂತರ ತನಿಖೆ ನಡೆಸಿದಾಗ ಆಕೆ ಮೃತಪಟ್ಟಿರುವುದು ತಿಳಿದುಬಂದಿದೆ.

    ಆರೋಪಿಗೆ ವಿವಾಹ ನಿಶ್ಚಯವಾಗಿದ್ದ ಬಗ್ಗೆ ಮಹಿಳೆ ಅಸಮಾಧಾನಗೊಂಡಿದ್ದಳು. ಕೊಲೆಯಾದ ದಿನ ಆಕೆ, 20 ದಿನಗಳ ನಂತರ ಜಿಮ್‌ಗೆ ಬಂದಿದ್ದಳು. ಆರೋಪಿ ಮತ್ತು ಮಹಿಳೆ ಇಬ್ಬರೂ ಮಾತುಕತೆಗೆ ಕಾರಿನಲ್ಲಿ ಹೋಗಿದ್ದರು. ಪರಸ್ಪರರಿಗೆ ಜಗಳವಾಗಿದೆ. ಈ ವೇಳೆ ಆರೋಪಿಯು ಮಹಿಳೆಯ ಕುತ್ತಿಗೆಗೆ ಗುದ್ದಿದ್ದಾನೆ. ಪೆಟ್ಟಿನಿಂದ ಆಕೆ ಮೂರ್ಛೆ ಹೋಗಿದ್ದಾಳೆ. ಬಳಿಕ ಆತ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲ್ಲ – ಮಹಾ ವಿಕಾಸ್‌ ಅಘಾಡಿ ಒಕ್ಕೂಟಕ್ಕೆ ಬೆಂಬಲ