Tag: ಯುಪಿ ಪೊಲೀಸ್

  • ಪ್ರಿಯಾಂಕಾ ಗಾಂಧಿ ಬಳಿ ಕ್ಷಮೆ ಕೇಳಿದ ಯುಪಿ ಪೊಲೀಸ್

    ಪ್ರಿಯಾಂಕಾ ಗಾಂಧಿ ಬಳಿ ಕ್ಷಮೆ ಕೇಳಿದ ಯುಪಿ ಪೊಲೀಸ್

    -ಪ್ರಿಯಾಂಕಾರ ಬೆಲ್ಚಿ ಘಟನೆ ಎಂದು ವಿಶ್ಲೇಷಣೆ
    -ಏನಿದು 1977ರ ಬೆಲ್ಚಿ ಘಟನೆ?

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಳಿ ಉತ್ತರ ಪ್ರದೇಶ ಪೊಲೀಸರು ಕ್ಷಮೆ ಕೇಳಿದ್ದಾರೆ. ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಯುಪಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರು ನಡುವೆ ಸಂಘರ್ಷವೇ ಉಂಟಾಗಿತ್ತು.

    ಈ ಹಿನ್ನೆಲೆ ಯುಪಿ ಪೊಲೀಸರು ಇಬ್ಬರು ನಾಯಕರ ಬಳಿ ಕ್ಷಮೆ ಕೋರಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 30ರಂದು ಪೊಲೀಸರು ನಡುವೆ ನಡೆದ ಗಲಾಟೆಯಲ್ಲಿ ರಾಹುಲ್ ಗಾಂಧಿ ಕೆಳಗೆ ಬಿದ್ದಿದ್ದರು. ಅಕ್ಟೋಬರ್ 3ರಂದು ನಡೆದ ಸಂಘರ್ಷದಲ್ಲಿ ಪುರುಷ ಪೊಲೀಸ್ ಅಧಿಕಾರಿಯೋರ್ವ ಪ್ರಿಯಾಂಕಾ ಗಾಂಧಿಯವರ ಕುರ್ತಾ ಹಿಡಿದಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ನಡೆಯನ್ನ ಖಂಡಿಸಿದ್ದರು.

    ಶಿವಸೇನೆಯ ಸಂಸದ ಸಂಜಯ್ ರಾವತ್ ವೈರಲ್ ಆಗಿದ್ದ ಫೋಟೋ ಟ್ವೀಟ್ ಮಾಡಿಕೊಂಡು, ಯೋಗಿ ಜೀ ನಿಮ್ಮ ರಾಜ್ಯದಲ್ಲಿ ಮಹಿಳಾ ಪೊಲೀಸರು ಇಲ್ಲವಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದರು. ಹತ್ರಾಸ್ ಕುಟುಂಬಸ್ಥರನ್ನು ಭೇಟಿಯಾದ ವೇಳೆ ಸಂತ್ರಸ್ತೆಯ ತಾಯಿಯನ್ನ ಅಪ್ಪಿಕೊಂಡು ಪ್ರಿಯಾಂಕಾ ಸಮಾಧಾನ ಹೇಳಿರುವ ಫೋಟೋ ಸಹ ವೈರಲ್ ಆಗಿತ್ತು. ಇನ್ನು ಹಲವು ಕಾಂಗ್ರೆಸ್ ಹಿರಿಯ ನಾಯಕರು ಮತ್ತು ರಾಜಕೀಯ ವಿಶ್ಲೇಷಕರು 1977ರ ಘಟನೆಯನ್ನು ಹೋಲಿಸುತ್ತಿದ್ದಾರೆ.

    1977ರಲ್ಲಿ ಇಂದಿರಾ ಗಾಂಧಿ ಅವರು ವಿರೋಧ ಪಕ್ಷದಲ್ಲಿದ್ದಾಗ ಬಿಹಾರದ ಬೆಲ್ಚಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಇಂತಹವುದೇ ಘಟನೆಗಳು ನಡೆದಿದ್ದವು. ಆ ಭೇಟಿಯ ಬಳಿಕ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿತ್ತು. ಕಾಂಗ್ರೆಸ್ ಹಿರಿಯ ನಾಯಕ ಓಮನ್ ಚಾಂಡಿ, ಇದು ಪ್ರಿಯಾಂಕಾ ಗಾಂಧಿಯವರ ಬೆಲ್ಚಿ ಘಟನೆ ಎಂದು ಕರೆದಿದ್ದಾರೆ.

    ಏನಿದು ಬೆಲ್ಚಿ ಘಟನೆ?
    ಬಿಹಾರದ ಬೆಲ್ಚಿಯಲ್ಲಿ 10 ದಲಿತರು ಮೇಲ್ಜಾತಿಯ ಶ್ರೀಮಂತರಿಂದ ಕೊಲೆಯಾಗಿದ್ದರು. ರೈಲು, ಜೀಪ್, ಟ್ರ್ಯಾಕ್ಟರ್ ಮತ್ತು ಆನೆ ಮೇಲೆ ಸವಾರಿ ನಡೆಸಿ ಇಂದಿರಾ ಗಾಂಧಿ ಬೆಲ್ಚಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಪರಿಣಾಮ 1980ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು ಎಂದು ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಾರೆ.

  • ಸಿಎಂ ಯೋಗಿಗೆ ಪ್ರಿಯಾಂಕ ಗಾಂಧಿ ಸವಾಲ್ – ಉತ್ತರ ನೀಡಿದ್ರು ಯುಪಿ ಪೊಲೀಸ್

    ಸಿಎಂ ಯೋಗಿಗೆ ಪ್ರಿಯಾಂಕ ಗಾಂಧಿ ಸವಾಲ್ – ಉತ್ತರ ನೀಡಿದ್ರು ಯುಪಿ ಪೊಲೀಸ್

    ಲಕ್ನೋ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸವಾಲು ಹಾಕಿದ್ದಾರೆ. ಪ್ರಿಯಾಂಕ ಅವರ ಸವಾಲಿಗೆ ಸಿಎಂ ಬದಲಾಗಿ ಉತ್ತರ ಪ್ರದೇಶದ ಪೊಲೀಸರು ಉತ್ತರ ನೀಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಹಿಂಸಾತ್ಮಕ ಘಟನೆಗಳತ್ತ ಬಿಜೆಪಿ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಪ್ರಿಯಾಂಕ ಗಾಂಧಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಪ್ರಿಯಾಂಕ ಟ್ವೀಟ್ ಗೆ ಉತ್ತರ ಪ್ರದೇಶದ ಪೊಲೀಸರು ಅಂಕಿ ಸಂಖ್ಯೆಗಳ ಮೂಲಕ ಉತ್ತರಿಸಿದ್ದಾರೆ.

    ಪ್ರಿಯಾಂಕ ಗಾಂಧಿ ಟ್ವೀಟ್:
    ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಯಾರ ಭಯವಿಲ್ಲದೇ ತಿರುಗಾಡುತ್ತಿದ್ದಾರೆ. ಒಂದಾದ ನಂತರ ಒಂದು ಅಪರಾಧ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಆದ್ರೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಯಾವುದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಉತ್ತರ ಪ್ರದೇಶದ ಸರ್ಕಾರ ಅಪರಾಧಿಗಳನ್ನು ಎದುರಿಸಲು/ಬಂಧಿಸಲು ಅಸಮರ್ಥವಾಗಿದೆಯಾ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಯುಪಿ ಪೊಲೀಸ್ ಉತ್ತರ:
    ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ ಮತ್ತು ಅಂತಹವರ ವಿಚಾರಣೆ ನಡೆಯುತ್ತಿದೆ. ಕಳೆದ ಎರಡು ವರ್ಷದಲ್ಲಿ 9,225 ಅಪರಾಧಿಗಳ ಬಂಧನ ಮತ್ತು 81 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 200 ಕೋಟಿ ರೂ. ಗೂ ಅಧಿಕ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಇದರ ಹೊರತಾಗಿ ದರೋಡೆ, ಕೊಲೆ, ಕಳ್ಳತನ, ಅಪಹರಣ ಅಂತಹ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.

    ಮತ್ತೊಂದು ಟ್ವೀಟ್ ನಲ್ಲಿ, ಪೊಲೀಸರ ಬಲಿಷ್ಠ, ಪಾರದರ್ಶಕತೆ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜನರು ಪೊಲೀಸರ ಬಗ್ಗೆ ನಂಬಿಕೆ ಮತ್ತು ಗೌರವವನ್ನು ಹೊಂದಿದ್ದಾರೆ. ಶೇ.20ರಿಂದ 35 ರಷ್ಟು ಅಪರಾಧ ಪ್ರಕರಣಗಳು ಕಡಿಮೆ ಆಗಿದೆ. ರಾಜ್ಯದ ಜನತೆಯ ಭದ್ರತೆ ಮತ್ತು ರಕ್ಷಣೆಗಾಗಿ ಉತ್ತರ ಪ್ರದೇಶದ ಪೊಲೀಸರು ಬದ್ಧರಾಗಿದ್ದಾರೆ.

  • ನಟಿ ರಮ್ಯಾ ವಿರುದ್ಧ ಎಫ್‍ಐಆರ್ ದಾಖಲು!

    ನಟಿ ರಮ್ಯಾ ವಿರುದ್ಧ ಎಫ್‍ಐಆರ್ ದಾಖಲು!

    ಲಕ್ನೋ: ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಮಂಡ್ಯ ಮಾಜಿ ಸಂಸದೆ ರಮ್ಯಾ, ಪ್ರಧಾನಿ ಮೋದಿ ಅವರನ್ನು ಟೀಕಿಸಿ ಅಪೇಕ್ಷರ್ಹ ಫೋಟೋವನ್ನು ಟ್ವೀಟ್ ಮಾಡಿದ್ದಕ್ಕೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಲಕ್ನೋ ಮೂಲ ವಕೀಲರಾದ ಸೈಯದ್ ರಿಜ್ವಾನ್ ಅಹ್ಮದ್ ಮಂಗಳವಾರ ಗೌಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ರಮ್ಯಾ ಅವರ ವಿರುದ್ಧ ಐಪಿಸಿ ಸೆಕ್ಷನ್ 67 (ಮಾಹಿತಿ ತಂತ್ರಜ್ಞಾನದ ಕಾಯ್ದೆ), 2008 ಮತ್ತು ಸೆಕ್ಷನ್ 124ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ರಫೇಲ್ ಒಪ್ಪಂದ ಕುರಿತು ರಮ್ಯಾ ಸೆಪ್ಟೆಂಬರ್ 24 ರಂದು ಮೋದಿ ಅವರ ಮೇಣದ ಪ್ರತಿಮೆಯ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಮೋದಿ ಸ್ವತಃ ತಮ್ಮ ಪ್ರತಿಮೆ ಮೇಲೆ ಕಳ್ಳ ಎಂದು ಬರೆಯುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಕಳ್ಳ ಪ್ರಧಾನಿ ಸುಮ್ಮನಿದ್ದಾರೆ (#ChorPMChupHai) ಎಂಬ ಹ್ಯಾಷ್ ಟ್ಯಾಗನ್ನು ರಮ್ಯಾ ಬಳಸಿ ಟ್ವೀಟ್ ಮಾಡಿದ್ದರು.

    ರಮ್ಯಾ ಮಾಡಿದ ಟ್ವಿಟ್ ನಲ್ಲಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುವ ಅಂಶವಿದೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಜ್ವಾನ್ ಅಹ್ಮದ್ ದೂರು ನೀಡಿದ್ದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ರಫೇಲ್ ಒಪ್ಪಂದ ಕುರಿತು ಮೋದಿ ಸರ್ಕಾರದ ವಿರುದ್ಧ ಅರೋಪಗಳ ಸುರಿಮಳೆ ಮಾಡಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ (ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು ಎಂದು ರಾಹುಲ್ ಆರೋಪಿಸಿದ್ದಾರೆ.

    ಕಾಂಗ್ರೆಸ್ ಆರೋಪಗಳನ್ನು ಅಲ್ಲಗೆಳೆದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯಗಳು ಸಿಗಲಿಲ್ಲ. ಹೀಗಾಗಿ ಅವರು ರಫೇಲ್ ಒಪ್ಪಂದದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಹೇಳಲು ಮುಂದಾಗಿದೆ. ಆದರೆ ನಮ್ಮದು ದೇಶಕಂಡ ಅತ್ಯಂತ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ. ಹತಾಶಾ ಮನೋಭಾವನೆಗೆ ತಲುಪಿರುವ ಕಾಂಗ್ರೆಸ್ ನಮ್ಮ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ ಎಂದು ಹೇಳಿದ್ದರು.

    ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮಥ್ರ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್ ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv