Tag: ಯುಪಿಎ

  • 60 ವರ್ಷದಲ್ಲಿ 13 ಕೋಟಿ ಎಲ್‍ಪಿಜಿ, ಕಳೆದ ನಾಲ್ಕು ವರ್ಷದಲ್ಲಿ 11 ಕೋಟಿ ಕನೆಕ್ಷನ್: ಮೋದಿ

    60 ವರ್ಷದಲ್ಲಿ 13 ಕೋಟಿ ಎಲ್‍ಪಿಜಿ, ಕಳೆದ ನಾಲ್ಕು ವರ್ಷದಲ್ಲಿ 11 ಕೋಟಿ ಕನೆಕ್ಷನ್: ಮೋದಿ

    ನವದೆಹಲಿ: ಉಜ್ವಲ ಯೋಜನೆಯ ಮುಖಾಂತರ ನಮ್ಮ ಸರ್ಕಾರವು ಕಳೆದ 4 ವರ್ಷಗಳಲ್ಲಿ 11 ಕೋಟಿ ಹೊಸ ಗ್ರಾಹಕರಿಗೆ ಎಲ್‍ಪಿಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ ಹಿಂದಿನ ಸರ್ಕಾರ 60 ವರ್ಷಗಳಲ್ಲಿ ಕೇವಲ 13 ಕೋಟಿ ಗ್ರಾಹಕರಿಗೆ ಮಾತ್ರ ಎಲ್‍ಪಿಜಿ ಸಂಪರ್ಕ ನೀಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಸೋಮವಾರದಂದು ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡಿದ ಮೋದಿಯವರು, ತಂತ್ರಜ್ಞಾನದ ಸಹಾಯದಿಂದ ದೇಶದ ಪ್ರತಿಯೊಬ್ಬರೊಂದಿಗೆ ಸಂಪರ್ಕ ಬೆಳೆಸಿ ಅವರಿಂದ ಮಾಹಿತಿ ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಾಯಕವಾಗಿದೆ ಎಂದು ತಿಳಿಸಿದರು.

    ಈ ವೇಳೆ ಕಥೆ ಪ್ರೇಮ್‍ಚಂದ್‍ರವರು ರಚಿಸಿದ ಹಿಂದಿಯ ‘ಈದ್ಗಾ’ ಕಥೆಯಲ್ಲಿನ ಹಮೀದ್ ಎಂಬ ಬಾಲಕನ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಹಮೀದ್ ತಾಯಿ ರೊಟ್ಟಿಯನ್ನು ಸುಡುವಾಗ ತನ್ನ ಕೈಯನ್ನು ಸುಟ್ಟುಕೊಳ್ಳುತ್ತಿದ್ದರು. ಅಜ್ಜಿಯ ನೋವನ್ನು ಕಂಡು ಬಾಲಕ ಹಮೀದ್ ಅಂಗಡಿಯಲ್ಲಿ ಮಿಠಾಯಿಯನ್ನು ಖರೀದಿಸದೇ ಇಕ್ಕುಳಗಳನ್ನು ತಂದು ಕೊಟ್ಟು ಕೈ ಸುಡದಂತೆ ಮಾಡಿದ್ದ ಎಂದರು. ಈ ವೇಳೆ ಚಿಕ್ಕವರಿದ್ದಾಗ ತಮ್ಮ ತಾಯಿಯವರು ಹೊಗೆ ತುಂಬಿದ್ದ ಅಡುಗೆ ಕೋಣೆಯಲ್ಲಿ ಕಷ್ಟ ಪಡುತ್ತಿರುವುದನ್ನು ನೆನಪಿಸಿಕೊಂಡು ಭಾವುಕರಾದ ಮೋದಿ ಅಂದು ಎಲ್‍ಪಿಜಿ ಸಂಪರ್ಕವು ಕೇವಲ ಶ್ರೀಮಂತರು ಹಾಗೂ ಪ್ರತಿಷ್ಠೆಯ ರೂಪದಲ್ಲಿ ಜಾರಿಯಲ್ಲಿತ್ತು ಎಂದು ಹೇಳಿದರು.

    ಈ ಹಿಂದೆ ಅಡುಗೆ ಮಾಡಲು ಸೀಮೆಎಣ್ಣೆ, ಕಟ್ಟಿಗೆ, ಬೆರಣಿ ಹಾಗೂ ಇನ್ನಿತರೆ ಕಚ್ಛಾವಸ್ತುಗಳನ್ನು ಬಳಸುತ್ತಿದ್ದರಿಂದ ಪರಿಸರ ಮಾಲಿನ್ಯ ಉಂಟಾಗುತಿತ್ತು. ಮಹಿಳೆಯರು ಕಟ್ಟಿಗೆಗಳನ್ನು ಸಂಗ್ರಹಿಸಲು ದಿನಗಟ್ಟಲೇ ಸಮಯ ಕಳೆಯುತ್ತಿದ್ದರು. ಈ ಯೋಜನೆಯಲ್ಲಿ ಮಹಿಳೆಯರು ಯಾವುದೇ ಮಾಲಿನ್ಯವಿಲ್ಲದೆ ಉತ್ತಮ ವಾತಾವರಣದಲ್ಲಿ ಕಡಿಮೆ ಅವಧಿಯಲ್ಲಿ ಅಡುಗೆ ಕೆಲಸವನ್ನು ಮುಗಿಸಿ, ಇತರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚಿನ ಆದಾಯ ಗಳಿಸುವ ಮೂಲಕ ಆರ್ಥಿಕವಾಗಿ ಸಧೃಢರನ್ನಾಗುವಂತೆ ಮಾಡಿದೆ ಎಂದು ವಿವರಿಸಿದರು.

    ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡುವಾಗ ಹಿಂದಿನ ಯುಪಿಯ ಸರ್ಕಾರವು 445 ಪೆಟ್ರೋಲ್ ಪಂಪ್‍ಗಳನ್ನು ದಲಿತರಿಗೆ ನೀಡಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ 1200 ಪೆಟ್ರೋಲ್ ಪಂಪ್‍ಗಳನ್ನು ದಲಿತ ಕುಟುಂಬದ ಸದಸ್ಯರಿಗೆ ನೀಡಿದ್ದೇವೆ. ಈ ಯೋಜನೆಯಲ್ಲಿ ಶೇ.45 ರಷ್ಟು ದಲಿತ ಮತ್ತು ಬಡಕುಟುಂಬದ ಒಟ್ಟು 1300 ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕವನ್ನು ನೀಡಿದ್ದೇವೆಂದು ತಿಳಿಸಿದರು.

    2014ರ ತನಕ ಒಟ್ಟು 13 ಕೋಟಿ ಕುಟುಂಬಗಳು ಎಲ್‍ಪಿಜಿ ಸಂಪರ್ಕವನ್ನು ಹೊಂದಿತ್ತು. ಅಂದರೆ ಒಟ್ಟು 60 ವರ್ಷಗಳಲ್ಲಿ ಕೇವಲ 13 ಕೋಟಿ ಕುಟುಂಬಗಳು ಮಾತ್ರವೇ ಸಂಪರ್ಕವನ್ನು ಪಡೆದುಕೊಂಡಿದೆ. ಕೇವಲ ಶ್ರೀಮಂತ ಕುಟುಂಬಗಳಿಗೆ ಮಾತ್ರವೇ ಎಲ್‍ಪಿಜಿ ಸಂಪರ್ಕ ನೀಡಲಾಗಿದೆ ಎಂದು ದೂರಿದರು.

     

     

  • ಈಗ ಎಲೆಕ್ಷನ್ ನಡೆದ್ರೆ ಗೆಲ್ಲೋದ್ಯಾರು? ಸಮೀಕ್ಷೆ ಏನು ಹೇಳುತ್ತೆ?

    ಈಗ ಎಲೆಕ್ಷನ್ ನಡೆದ್ರೆ ಗೆಲ್ಲೋದ್ಯಾರು? ಸಮೀಕ್ಷೆ ಏನು ಹೇಳುತ್ತೆ?

    ನವದೆಹಲಿ: ಅಧಿಕಾರಕ್ಕೇರಿದ ಮೂರು ವರ್ಷಗಳ ಬಳಿಕವೂ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹಾಗೇ ಇದೆ. ಇತ್ತೀಚೆಗೆ ಇಂಡಿಯಾ ಟುಡೆ ಕಾರ್ವಿ ಇನ್‍ಸೈಟ್ಸ್ ಸಹಯೋಗದಲ್ಲಿ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆ(ಎಮ್‍ಓಟಿಎನ್) ಇದನ್ನ ಸಾಬೀತು ಮಾಡಿದೆ.

    ದೇಶದಾದ್ಯಂತ 19 ರಾಜ್ಯಗಳ ಸುಮಾರು 12,178 ಜನರನ್ನ (68% ಗ್ರಾಮೀಣ ಮತದಾರರು ಹಾಗೂ 32% ನಗರ ಮತದಾರರು) ಈ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಮೋದಿಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ. ಆದರೂ 53% ಮತದಾರರು ದೇಶದ ಉದ್ಯೋಗ ಸಮಸ್ಯೆಯೇ ಆರ್ಥಿಕ ಸಂಕಷ್ಟಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಜನ ಭಾವಿಸಿದ್ದಾರೆ. 6 ತಿಂಗಳ ಹಿಂದೆ ನಡೆಸಲಾದ ಎಮ್‍ಓಟಿಎನ್ ಸಮೀಕ್ಷೆಗೆ ಹೋಲಿಸಿದ್ರೆ ಈ ಬಾರಿ ಉದ್ಯೋಗದ ಬಗ್ಗೆ ಮತದಾರರ ಸಂದೇಹ 17% ಹೆಚ್ಚಿದೆ. 60% ಮತದಾರರು ನೋಟ್‍ನ್ಯಾನ್‍ನಿಂದ ಲಾಭಕ್ಕಿಂತ ಹಾನಿಯಾಗಿದ್ದೇ ಹೆಚ್ಚು ಎಂದು ಅಭಿಪ್ರಾಯಿಸಿದ್ದಾರೆ.

    ಆದ್ರೆ ಈ ಎಲ್ಲದರ ಮಧ್ಯೆ ಮೋದಿ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಗೃಹ ಸಚಿವ ರಾಜ್‍ನಾಥ್ ಸಿಂಗ್ ಮೋದಿ ಸಂಪುಟದ ಅತ್ಯುತ್ತಮ ಸಚಿವರು ಎಂದು ಜನ ವೋಟ್ ಮಾಡಿದ್ದಾರೆ.

    ಈಗ ಚುನಾವಣೆ ನಡೆದರೆ ಗೆಲ್ಲೋದ್ಯಾರು?                                                                                                                                                  ಸಮೀಕ್ಷೆ ಪ್ರಕಾರ ಇಂದು ಲೋಕಸಭೆ ಚುನಾವಣೆ ನಡೆದ್ರೆ ಎನ್‍ಡಿಎ 42% ಮತ ಹಾಗೂ 349 ಸೀಟ್‍ಗಳನ್ನ ಪಡೆಯಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 28% ಮತ ಹಾಗೂ 75 ಸೀಟ್‍ಗಳನ್ನ ಪಡೆಯಲಿದೆ ಅಂತ ಸಮೀಕ್ಷೆ ಹೇಳಿದೆ. ಇನ್ನು ಇತರೆ ಪಕ್ಷಗಳು 30% ಮತ ಹಾಗೂ 119 ಸೀಟ್‍ಗಳನ್ನ ಪಡೆಯಲಿವೆ ಎಂದು ಎಮ್‍ಓಟಿಎನ್ ಸಮೀಕ್ಷಾ ವರದಿ ಹೇಳಿದೆ.

    ಪರ್ಯಾಯ ಪ್ರಧಾನ ಮಂತ್ರಿ ಅಭ್ಯರ್ಥಿ:
    ಸಮೀಕ್ಷೆಯಲ್ಲಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಪರ್ಯಾಯ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಹೆಸರು ಅತ್ಯಂತ ಜನಪ್ರಿಯವಾಗಿ ಉಳಿದಿದೆ. ಆದ್ರೆ ಜನವರಿಯಲ್ಲಿ ನಡೆದ ಸಮೀಕ್ಷೆಗೆ ಹೋಲಿಸಿದ್ರೆ ಅಂದು 28% ಮತಗಳಿದ್ದು, ಈಗ 21% ಗೆ ಇಳಿದಿದೆ. ರಾಹುಲ್ ಗಾಂಧಿಯ ನಂತರ ನಿತೀಶ್ ಕುಮಾರ್‍ಗೆ 13%, ಸೋನಿಯಾ ಗಾಂಧಿಗೆ 12% ಹಾಗೂ ಅರವಿಂದ್ ಕೇಜ್ರಿವಾಲ್‍ಗೆ 7% ಮತ ಸಿಕ್ಕಿದೆ.

    ಅತ್ಯಂತ ಜನಪ್ರಿಯ ಸಿಎಂ ಯಾರು?
    ಸಮೀಕ್ಷೆಯ ಪ್ರಕಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯುತ್ತಮ ಸಿಎಂ. ಎರಡನೇ ಸ್ಥಾನದಲ್ಲಿ ಬಿಹಾರದ ನಿತೀಶ್ ಕುಮಾರ್ ಹಾಗೂ ಮೂರನೇ ಸ್ಥಾನದಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಇದ್ದಾರೆ.

    ನಿತೀಶ್ ಕುಮಾರ್ ಯುಪಿಎ ಯಿಂದ ಎನ್‍ಡಿಎ ಗೆ ಬರುವ ಮುಂಚೆಯೇ ಈ ಸಮೀಕ್ಷೆ ನಡೆಸಿದ್ದರಿಂದ ಅದನ್ನ ರೀಕೋಡ್ ಮಾಡಿ ಅಪ್‍ಡೇಟ್ ಮಾಡಲಾಗಿದೆ. ನಂತರವೂ ಎನ್‍ಡಿಎಗೆ ಹೆಚ್ಚಿನ ಸೀಟ್ ಸಿಕ್ಕಿದೆ. ಎನ್‍ಡಿಎ, ಯುಪಿಎ ಮತ್ತು ಇತರೆ ಎಂದು ಮೂರು ಭಾಗಗಳಾಗಿದ್ದ ಫಲಿತಾಂಶ ಎನ್‍ಡಿಎ ಮತ್ತು ಯುಪಿಎ ನಡುವೆ ವಿಭಜನೆಯಾಗಿದೆ. ಈ ಮೂಲಕ ಎನ್‍ಡಿಎಗೆ 51% ಮತ ಹಾಗೂ 421 ಸೀಟ್‍ಗಳು ಅಭಿಸಿದ್ದು, ಯುಪಿಎಗೆ 43% ಮತ ಹಾಗು 120 ಸೀಟ್‍ಗಳು ಸಿಕ್ಕಿವೆ.

    ಭಾರತೀಯರಾಗಿ ನೀವು ಹೆಮ್ಮೆ ಪಡಲು ಇರುವಂತಹ ಕಾರಣಗಳೇನು ಎಂಬ ಪ್ರಶ್ನೆಗೆ ಜನ, ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಧರ್ಮ ಹಾಗೂ ನಂಬಿಕೆಯನ್ನ ಪಾಲಿಸಲು ಇರುವ ಸ್ವಾತಂತ್ರ್ಯಗಳೇ ಮೂರು ಪ್ರಮುಖ ಕಾರಣ ಎಂದು ಹೇಳಿದ್ದಾರೆ.

    ಇನ್ನು ದೇಶದ ಬಗ್ಗೆ ಕೋಪಗೊಳ್ಳಲು ಕಾರಣಗಳನ್ನು ಕೇಳಿದಾಗ ರಾಜಕೀಯದಲ್ಲಿನ ಭ್ರಷ್ಟಾಚಾರ, ಧರ್ಮ/ಜಾತಿ ಆಧಾರದ ಮೇಲೆ ಮತ ಚಲಾಯಿಸುವುದು ಹಾಗೂ ಕೋಮುವಾದ ಎಂದು ಉತ್ತರಿಸಿದ್ದಾರೆ. 49% ಜನ ದೇಶದಲ್ಲಿ ರಾಜಕಾರಣಿಗಳೇ ಅತ್ಯಂತ ಭ್ರಷ್ಟರು ಎಂದು ವೋಟ್ ಮಾಡಿದ್ದರೆ, 21% ಜನ ಪೊಲೀಸರು ಭ್ರಷ್ಟರೆಂದು ಅಭಿಪ್ರಯಾಪಟ್ಟಿದ್ದಾರೆ.

    ಇನ್ನು ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ 35% ಜನ ಗಡಿಯಾಚೆಗಿನ ಭಯೋತ್ಪಾದನೆ ದೇಶಕ್ಕೆ ಅತ್ಯಂತ ದೊಡ್ಡ ಆತಂಕ ಎಂದಿದ್ದಾರೆ. ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 23% ಜನ ಭಾರತ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು ಎಂದರೆ, 7% ಜನ ನಾವು ಯುದ್ಧ ಮಾಡಬೇಕು ಎಂದು ಹೇಳಿದ್ದಾರೆ.

  • 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ

    13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ

    ನವದೆಹಲಿ: ದೇಶದ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ ಆಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು 272 ಮತಗಳ ಅಂತರದಿಂದ ಸೋಲಿಸುವ ಮೂಲಕ ಈ ಉಪರಾಷ್ಟ್ರಪತಿಯಾಗಿ ಆಯ್ಕೆ ಆಗಿದ್ದಾರೆ.

    ಒಟ್ಟು 785 ಮತದಾರರ ಪೈಕಿ ಬಿಜೆಪಿ ಇಬ್ಬರು ಸೇರಿ 14 ಮಂದಿ ಮತ ಹಾಕಿರಲಿಲ್ಲ. ಶೇಕಡವಾರು ಲೆಕ್ಕದಲ್ಲಿ ನೋಡೋದಾದ್ರೆ 98.21ರಷ್ಟು ಮತದಾನ ಆಗಿತ್ತು. ಒಟ್ಟು ಮತಗಳ ಶೇ. 68 ರಷ್ಟು ಅಂದರೆ  516 ಸಂಸದರು ಎನ್‍ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಪರ ಮತ ಚಲಾಯಿಸಿದರೆ,  ಶೇ. 32ರಷ್ಟು ಅಂದರೆ 244 ಮಂದಿ ಸಂಸದರು ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಪರ ಮತ ಚಲಾಯಿಸಿದ್ದಾರೆ.

    ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವೆಂಕಯ್ಯ ನಾಯ್ಡು ಅವರನ್ನು ಅಭಿನಂದಿಸಿದ್ದಾರೆ.

    ಈ ಚುನಾವಣೆಯಲ್ಲೂ ಅಡ್ಡಮತದಾನ ನಡೆದಿದ್ದು, ವೆಂಕಯ್ಯ ನಾಯ್ಡು ಅವರಿಗೆ ಹೆಚ್ಚುವರಿಯಾಗಿ 17 ಮತಗಳು ಬಿದ್ದಿದ್ದು,   ಗೋಪಾಲಕೃಷ್ಣ ಗಾಂಧಿ ಅವರಿಗೆ 33 ಮತಗಳು ಕಡಿಮೆ ಬಿದ್ದಿದೆ.

     

  • ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

    ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

    ನವದೆಹಲಿ: ದೇಶದ ಅತ್ಯುನ್ನತ ಸಂವಿಧಾನಿಕ ಹುದ್ದೆ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ನಜೀಂ ಝೈದಿ 15ನೇ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟಿಸಿದರು.

    ಯಾವ ದಿನ ಏನು?
    ಜೂನ್ 14: ರಾಷ್ಟ್ರಪತಿ ಚುನಾವಣೆಗಾಗಿ ಅಧಿಸೂಚನೆ
    ಜೂನ್ 28: ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನ
    ಜೂನ್ 29: ನಾಮಪತ್ರಗಳ ಪರಿಶೀಲನೆ
    ಜುಲೈ 1: ನಾಮಪತ್ರ ವಾಪಸ್ ಪಡೆಯಲು ಅವಕಾಶ
    ಜುಲೈ 17: ರಾಷ್ಟ್ರಪತಿ ಹುದ್ದೆಗೆ ಮತದಾನ
    ಜುಲೈ 20: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ
    ಜುಲೈ 24: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರವಧಿ ಅಂತ್ಯ
    ಜುಲೈ 25: 15ನೇ ರಾಷ್ಟ್ರಪತಿಯ ಅಧಿಕಾರಾವಧಿ ಆರಂಭ

    ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ..?
    ಸಂವಿಧಾನದ ವಿಧಿ 54ರ ಪ್ರಕಾರ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ನಾಮಪತ್ರ ಸಲ್ಲಿಕೆ ವೇಳೆ 50 ಮಂದಿ ಮತದಾರರು ಸೂಚಕರಾಗಿ, 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ.

    ಲೋಕಸಭೆ, ರಾಜ್ಯಸಭೆ ಪ್ರಧಾನ ಕಾರ್ಯದರ್ಶಿಗಳು ಆವೃತ ಪದ್ಧತಿಯಡಿ ಚುನಾವಣಾಧಿಕಾರಿಗಳಾಗಿರುತ್ತಾರೆ. ಈ ಬಾರಿ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಪ್ರಧಾನ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿ 15 ಸಾವಿರ ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಮತಪತ್ರ ಮೂಲಕ ಮತದಾನ ನಡೆಯಲಿದೆ.

    ಮತ ಲೆಕ್ಕಾಚಾರ ಹೇಗೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ.

    ಕರ್ನಾಟಕದ ಶಾಸಕರ ಮತ ಮೌಲ್ಯ ಎಷ್ಟು?
    1971ರ ಜನಗಣತಿಯ ಪ್ರಕಾರ ಕರ್ನಾಟಕದ ಜಸಂಖ್ಯೆ = 2,92,99,014.
    ಕರ್ನಾಟಕದ ಶಾಸಕರ ಮತಮೌಲ್ಯ = 131
    ಕರ್ನಾಟಕದ ಒಟ್ಟು ಮತ ಮೌಲ್ಯ (131*224) = 29,344

    ಬೇರೆ ರಾಜ್ಯದಲ್ಲಿ ಎಷ್ಟು?
    ಉತ್ತರ ಪ್ರದೇಶದ ಶಾಸಕರ ಮತಮೌಲ್ಯ 208 ಆಗಿದ್ದರೆ, ಗೋವಾ ಶಾಸಕರ ಮತಮೌಲ್ಯ 8 ಆಗಿದೆ.

    ಸಂಸದರ ಮತ ಮೌಲ್ಯ ಎಷ್ಟು?
    ಎಲ್ಲಾ ರಾಜ್ಯಗಳ ಶಾಸಕರ ಮತಮೌಲ್ಯವನ್ನು ಸಂಸದರ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ಸಂಸದರ ಮತ ಮೌಲ್ಯ ಸಿಗುತ್ತದೆ.
    ಸಂಸದರ ಮತ ಮೌಲ್ಯ : 5,49,474/776 = 708

    ಅಭ್ಯರ್ಥಿ ಅಧಿಕೃತವಾಗಿಲ್ಲ:
    ಅತೀ ದೊಡ್ಡ ಕೂಟವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಇನ್ನೂ ಕೂಡಾ ತನ್ನ ಅಭ್ಯರ್ಥಿಯನ್ನು ಅಧಿಕೃತಗೊಳಿಸಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಎನ್‍ಡಿಎಯೇತರ ಪಕ್ಷಗಳ ಸಭೆ ನಡೆದಿದ್ದರೂ ಅಭ್ಯರ್ಥಿ ಅಂತಿಮವಾಗಿಲ್ಲ. ಒಂದು ವೇಳೆ ಸಹಮತದ ಅಭ್ಯರ್ಥಿಯನ್ನು ಘೋಷಿಸಿದರೆ ಎನ್‍ಡಿಎ ಬೆಂಬಲಿಸಲು ಸಿದ್ಧ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೇಳಿವೆಯಾದರೂ ಇದುವರೆಗೆ ಅದರ ಸೂಚನೆ ಕಂಡುಬಂದಿಲ್ಲ. ಆದರೆ ಎನ್‍ಡಿಎ ಅಭ್ಯರ್ಥಿಗೆ ಕೇವಲ 20 ಸಾವಿರ ಮತಗಳ ಕೊರತೆಯಷ್ಟೇ ಕಾಡುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳಿಗೆ ವಿಪ್ ನೀಡುವಂತಿಲ್ಲ.

    ಬಲಾಬಲ ಹೇಗಿದೆ?
    ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಮತಗಳ ಒಟ್ಟು ಮೌಲ್ಯ: 10,98,882
    ರಾಷ್ಟ್ರಪತಿಗಳ ಆಯ್ಕೆಗೆ ಅಗತ್ಯವಾಗಿರುವ ಮತಗಳ ಮೌಲ್ಯ : 5,49,442

    ಎನ್‍ಡಿಎ ಒಕ್ಕೂಟದ ಮತ ಮೌಲ್ಯ: 5,27,371 ಅಂದರೆ ಶೇಕಡಾ 48.10
    2,37,888 (ಲೋಕಸಭೆ)+ 49,560 (ರಾಜ್ಯಸಭೆ) + 2,39,923 (ವಿಧಾನಸಭೆ)

    ಯುಪಿಎ ಒಕ್ಕೂಟದ ಮತ ಮೌಲ್ಯ: 1,73,849 ಅಂದರೆ ಶೇಕಡಾ 15.90
    34,692 (ಲೋಕಸಭೆ) + 46,020 (ರಾಜ್ಯಸಭೆ) + 93,137 (ವಿಧಾನಸಭೆ)

    ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಪಕ್ಷಗಳ ಮತ ಮೌಲ್ಯ : 2,60,392 ಅಂದರೆ ಶೇಕಡಾ 23.80
    60,180 (ಲೋಕಸಭೆ)+ 47,436(ರಾಜ್ಯಸಭೆ)+ 1,52,776(ವಿಧಾನಸಭೆ)

    ಇತರೆ ವಿರೋಧ ಪಕ್ಷಗಳ ಮತ ಮೌಲ್ಯ: 1,33,907 ಅಂದರೆ ಶೇಕಡಾ 12.80
    50,268 (ಲೋಕಸಭೆ)+ 20,532 (ರಾಜ್ಯಸಭೆ)+ 63,107(ವಿಧಾನಸಭೆ)

  • ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

    ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

    ಗುವಾಹಟಿ: ಅಟಲ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿದ್ದರೆ 10 ವರ್ಷದ ಒಳಗಡೆ ಧೋಲಾ – ಸಾದಿಯಾ ಸೇತುವೆ ನಿರ್ಮಾಣವಾಗುತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಯುಪಿಎ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

    ಸರ್ಕಾರದ ಮೂರನೇ ವರ್ಷದ ಸಂಭ್ರಮಾಚರಣೆಯನ್ನು ಈಶಾನ್ಯ ರಾಜ್ಯದಲ್ಲಿ ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಅತ್ಯಂತ ಉದ್ದವಾದ ಸೇತುವೆಯನ್ನು ಉದ್ಘಾಟನೆ ಮಾಡುವ ಮೂಲಕ ಆಚರಣೆ ಮಾಡಿದರು. ಬೆಳಗ್ಗೆ 10 ಗಂಟೆಗೆ ಅಸ್ಸಾಂನ ದಿಬ್ರುಘರ್‍ಗೆ ಬಂದಿಳಿದ ಮೋದಿ ಆ ಬಳಿಕ ರಸ್ತೆ ಮಾರ್ಗವಾಗಿ ಡೋಲಾ ತಲುಪಿ ಸೇತುವೆಯನ್ನು ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಅವರು, 2003ರಲ್ಲಿ ನಮ್ಮ ಶಾಸಕ ಜಗದೀಶ್ ಭುಯನ್ ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ಸೇತುವೆಯನ್ನು ನಿರ್ಮಿಸುವಂತೆ ಪತ್ರ ಬರೆದಿದ್ದರು. ವಾಜಪೇಯಿ ಅವರು ಈ ಪತ್ರಕ್ಕೆ ಶೀಘ್ರವೇ ಸ್ಪಂದಿಸಿ ಅನುಮೋದನೆ ನೀಡಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದ ಸರ್ಕಾರದಿಂದಾಗಿ ಈ ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಯಿತು ಎಂದರು.

    ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದ ಸರ್ಬಾನಂದ ಸೋನೊವಾಲ್‌ ಅವರು ಒಂದು ವರ್ಷದಲ್ಲಿ ಸೇತುವೆ ನಿಮಾಣ ಕಾರ್ಯವನ್ನು ಪೂರ್ಣಗೊಳಿಸಿ ಅಟಲ್ ಕಂಡ ಕನಸನ್ನು ನನಸು ಮಾಡಿದೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರವನ್ನು ಹೊಗಳಿದರು.

    ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಅಭಿವೃದ್ಧಿಯಲ್ಲಿ ಈ ಸೇತುವೆ ಮಹತ್ವದ ಪಾತ್ರ ವಹಿಸಲಿದ್ದು, ಈ ಸೇತುವೆಯಿಂದ ಪ್ರತಿ ದಿನ 10 ಲಕ್ಷ ರೂ. ಇಂಧನ ಉಳಿತಾಯವಾಗಲಿದೆ ಎಂದರು.

    ಈಶಾನ್ಯ ಭಾಗದಲ್ಲಿ ರೈಲ್ವೇ ಅಷ್ಟು ಅಭಿವೃದ್ಧಿ ಆಗಿಲ್ಲ. ಮುಂದಿನ ದಿನಗಳಲ್ಲಿ ರೈಲ್ವೇಯನ್ನೂ ಅಭಿವೃದ್ಧಿ ಮಾಡುತ್ತೇವೆ. ಸಂಪರ್ಕದ ಕೊರತೆಯಿಂದಾಗಿ ಈ ಸುಂದರ ಪ್ರದೇಶಕ್ಕೆ ಪ್ರಚಾರ ಸಿಕ್ಕಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಪ್ರದೇಶಗಳನ್ನು ಪ್ರವಾಸೋದ್ಯಮ ಹಬ್‍ಗಳನ್ನಾಗಿ ರೂಪಿಸುತ್ತೇವೆ ಎಂದು ಮೋದಿ ಈ ವೇಳೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಸೇತುವೆಯ ವಿಶೇಷತೆ ಏನು?
    ಬ್ರಹ್ಮಪುತ್ರ ನದಿಯ ಉಪನದಿ ಲೋಹಿತ್‍ಗೆ 9.15 ಕಿಮೀ. ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ. 2,056 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದು, 60 ಟನ್ ತೂಕದ ಯುದ್ಧ ಟ್ಯಾಂಕ್ ಭಾರ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

    ಅಸ್ಸಾಂ ಹಾಗೂ ಅರುಣಾಲ ಪ್ರದೇಶದ ನಡುವಿನ ಸಂಚಾರ ಅವಧಿಯನ್ನು 6 ಗಂಟೆಯಿಂದ 1 ಗಂಟೆಗೆ ಇಳಿಸಲಿದೆ. 10 ವರ್ಷದ ಹಿಂದೆ ಈ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 7 ವರ್ಷದಿಂದ ಈ ಸೇತುವೆ ಕಾಮಗಾರಿ ಆರಂಭವಾಗಿದ್ದು ಈಗ ಲೋಕಾರ್ಪಣೆಯಾಗಿದೆ.

    https://www.youtube.com/watch?v=78gqC_xsSCU

  • ಐಸಿಜೆಯಲ್ಲಿ ಭಾರತದ ಪರ ವಾದಕ್ಕೆ ಪಾಕ್ ವಕೀಲ ಖವರ್ ಖುರೇಷಿಗೆ ಮಣೆ ಹಾಕಿದ್ದ ಯುಪಿಎ

    ಐಸಿಜೆಯಲ್ಲಿ ಭಾರತದ ಪರ ವಾದಕ್ಕೆ ಪಾಕ್ ವಕೀಲ ಖವರ್ ಖುರೇಷಿಗೆ ಮಣೆ ಹಾಕಿದ್ದ ಯುಪಿಎ

    – ಕಾಂಗ್ರೆಸ್ಸಿಗೆ ಮೇಕ್ ಇನ್ ಇಂಡಿಯಾ ವಕೀಲರು ಬೇಡ, ಮೇಡ್ ಇನ್ ಪಾಕ್ ವಕೀಲರು ಬೇಕು
    – ವೃತ್ತಿರಪರರನ್ನು ನೇಮಿಸುವುದಕ್ಕೆ ಯಾವುದೇ ಗಡಿ ಇಲ್ಲ ಎಂದ ಕಾಂಗ್ರೆಸ್

    ನವದೆಹಲಿ: ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಪ್ರಕರಣದಲ್ಲಿ ಪಾಕ್ ಪರ ವಾದಿಸಿದ ವಕೀಲ ಖವರ್ ಖುರೇಶಿ ಅವರು 17 ವರ್ಷಗಳ ಹಿಂದೆ ನೆದರ್‍ಲ್ಯಾಂಡಿನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ(ಐಸಿಜೆ) ಭಾರತವನ್ನು ಪ್ರತಿನಿಧಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    2004ರ ದಾಭೋಲ್ ಪವರ್ ಪ್ರಾಜೆಕ್ಟ್ ಕೇಸ್‍ನಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಖವರ್ ಖುರೇಷಿ ವಾದಿಸಿದ್ದರು. ಇದೀಗ ಆ ವಿಚಾರವನ್ನು ಬಿಜೆಪಿ ಎತ್ತಿಕೊಂಡು ಕಾಂಗ್ರೆಸ್ ನಡೆಯನ್ನು ಪ್ರಶ್ನಿಸಿ ಟೀಕಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.

    ಏನಿದು ಪ್ರಕರಣ?
    ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಅಮೆರಿಕ ಮೂಲದ ಎನ್‍ರೋನ್ ಕಂಪೆನಿ ಒಡೆತನದ ದಾಭೋಲ್ ಪವರ್ ಪ್ರಾಜೆಕ್ಟ್ ನಲ್ಲಿ 2001ರಲ್ಲಿ ಲೆಕ್ಕಪತ್ರ ಹಗರಣ ಸದ್ದು ಮಾಡಿತ್ತು. ಕೊನೆಗೆ ಕಂಪೆನಿ ಮಾಲೀಕರು ಹಾಗೂ ಮಹಾರಾಷ್ಟ್ರ ಸರ್ಕಾರದ ಮಧ್ಯೆ ವಿವಾದ ಉಂಟಾಗಿತ್ತು. ಬಳಿಕ ಭಾರತ ಸರ್ಕಾರ ಮಧ್ಯಸ್ಥಿಕೆ ವಹಿಸಿತ್ತು. ಆಗ 6 ಬಿಲಿಯನ್ ಡಾಲರ್ ನೀಡುವಂತೆ ಎನ್‍ರೋನ್ ಕಂಪೆನಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. 2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ ದಾಭೋಲ್ ಕೇಸಿಗೆ ಸಂಬಂಧಿಸಿದ ಸಂಪೂರ್ಣ ಕಾನೂನು ತಂಡವನ್ನು ಬದಲಾಯಿಸಿತ್ತು. ದೇಶದ ವಕೀಲರನ್ನು ಕಡೆಗಣಿಸಿ ಖವರ್ ಖುರೇಷಿ ಅವರನ್ನು ಭಾರತ ಪರವಾಗಿ ಐಸಿಜೆಯಲ್ಲಿ ಪ್ರತಿನಿಧಿಸಿ, ವಾದಿಸುವುದಕ್ಕೆ ನೇಮಕ ಮಾಡಿತ್ತು.

    ಕೇಸ್ ಏನಾಯ್ತು?
    ಕೇಸ್‍ನಲ್ಲಿ ಭಾರತದ ಪರ ವಾದಿಸಿದ್ದ ಖುರೇಷಿ ಸೋತಿದ್ದರು. ಕೊನೆಗೆ ಆ ಕೇಸನ್ನು ಆರ್ಬಿಟ್ರೇಶನ್ (ರಾಜಿ ಪಂಚಾತಿಕೆ) ಮೂಲಕ ಇತ್ಯರ್ಥಪಡಿಸಲಾಗಿತ್ತು.

    ಮರು ಜೀವ ಬಂದಿದ್ದು ಹೇಗೆ?
    ಭಾರತದ ಪರವಾಗಿ ಐಸಿಜೆಯಲ್ಲಿ ವಾದಿಸಲು ವಕೀಲ ಖವರ್ ಖುರೇಷಿ ಅವರನ್ನು ಯುಪಿಎ ಸರ್ಕಾರಕ್ಕೆ ಫಾಕ್ಸ್ ಮ್ಯಾಂಡಲ್ ಎನ್ನುವ ಸಂಸ್ಥೆ ಎಂದು ವಯಾನ್ ನ್ಯೂಸ್ ಬಹಿರಂಗ ಪಡಿಸಿದ್ದು ಈ ಪ್ರಕರಣ ಈಗ ಮರು ಜೀವ ಪಡೆದುಕೊಂಡಿದೆ.

    ಬಿಜೆಪಿಯ ಪ್ರಶ್ನೆ ಏನು?
    ದಾಭೋಲ್ ಪ್ರಾಜೆಕ್ಟ್ ಕೇಸಲ್ಲಿ ಹರೀಶ್ ಸಾಳ್ವೆ ಬದಲಿಗೆ, ಖುರೇಷಿಯನ್ನು ನೇಮಕ ಮಾಡಿದ್ದು ಯಾಕೆ? ನಿಮಗೆ ಪಾಕ್‍ನ ವಕೀಲರ ಮೇಲೆ ಯಾಕಷ್ಟು ನಂಬಿಕೆ ಎಂದು ಪ್ರಶ್ನಿಸಿದೆ. ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಅವರು ಭಾರತೀಯ ಸೇನೆಯನ್ನು ಪ್ರಶ್ನಿಸಿದರು. ಈಗ ಮತ್ತೊಮ್ಮೆ ಅವರ ಪಾಕಿಸ್ತಾನದ ಪರ ನಿಲುವು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

    ಯಾಕೆ ಭಾರತೀಯ ವಕೀಲರು ಅಂದು ಸಿಕ್ಕಿಲ್ಲವೇ ಎಂದು ಕೇಳಿದ್ದಕ್ಕೆ ಅವರು, ಮಾಜಿ ಸಚಿವರಾದ ಸಲ್ಮಾನ್ ಖುರ್ಷಿದ್ ಮತ್ತು ಮಣಿ ಶಂಕರ್ ಅಯ್ಯರ್ ಅವರು ಪಾಕ್ ವಕೀಲರ ನೇಮಕದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್ಸಿಗೆ ಮೇಕ್ ಇನ್ ಇಂಡಿಯಾದ ಬಗ್ಗೆ ಒಲವು ಇಲ್ಲ. ಹೀಗಾಗಿ ‘ಮೇಕ್ ಇನ್ ಇಂಡಿಯಾ’ದ ವಕೀಲರನ್ನು ನಿರ್ಲಕ್ಷಿಸಿ ‘ಮೇಡ್ ಇನ್ ಪಾಕಿಸ್ತಾನ’ ವಕೀಲರನ್ನು ನೇಮಿಸಿದೆ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಸ್ಪಷ್ಟನೆ ಏನು?
    ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಪಾಕ್ ಮೂಲದ ಖವರ್ ಖುರೇಷಿ ಒಬ್ಬ ಸ್ವತಂತ್ರ ಬ್ಯಾರಿಸ್ಟರ್. ವೃತ್ತಿರಪರರನ್ನು ನೇಮಿಸೋದಕ್ಕೆ ಯಾವುದೇ ಗಡಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಾಕಿಸ್ತಾನದಲ್ಲೇ ವಿರೋಧ:
    ನೌಕಾಪಡೆಯ ಮಾಜಿ ಅಧಿಕಾರಿ, 46ರ ಹರೆಯದ ಕುಲಭೂಷಣ್ ವಿರುದ್ಧದ ಪ್ರಕರಣದಲ್ಲಿ ಐಸಿಜೆ ಭಾರತದ ಪರವಾಗಿ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ವಿಶ್ವ ಮಟ್ಟದಲ್ಲಿ ಪಾಕ್ ಮಾನ ಹರಾಜು ಆಗಲು ಖವರ್ ಖುರೇಷಿಯ ಅಸಮರ್ಥ ವಾದ ಮಂಡನೆಯೇ ಕಾರಣ. ಅವರು ಸರಿಯಾಗಿ ವಾದವನ್ನು ಮಂಡಿಸಲಿಲ್ಲ ಎಂದು ಪಾಕ್ ಮಾಧ್ಯಮಗಳು ಅವರನ್ನು ಟೀಕಿಸಿವೆ.