Tag: ಯುಪಿಎ

  • ಎಕ್ಸಿಟ್ ಪೋಲ್ ನಿಖರವೇ? – 1998 ರಿಂದ 2014ರವರೆಗೆ ಏನು ಹೇಳಿತ್ತು? ಫಲಿತಾಂಶ ಏನು ಬಂದಿತ್ತು?

    ಎಕ್ಸಿಟ್ ಪೋಲ್ ನಿಖರವೇ? – 1998 ರಿಂದ 2014ರವರೆಗೆ ಏನು ಹೇಳಿತ್ತು? ಫಲಿತಾಂಶ ಏನು ಬಂದಿತ್ತು?

    ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು ಈ ಬಾರಿಯೂ ಕೇಂದ್ರದಲ್ಲಿ ಎನ್‍ಡಿಎಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳು ಎನ್‍ಡಿಎ ಒಕ್ಕೂಟ 300ರ ಗಡಿ ದಾಟಿದರೆ ಕೆಲವೊಂದು ಸಮೀಕ್ಷೆಗಳು ಬಿಜೆಪಿಯೊಂದೇ 300ರ ಗಡಿ ದಾಟಲಿದೆ ಎಂದು ಹೇಳಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಎಕ್ಸಿಟ್ ಪೋಲ್ ಸಮೀಕ್ಷೆಗಳು ಫಲಿತಾಂಶದ ಹತ್ತಿರ ಇರುತ್ತದೆ ಎನ್ನುವುದು ಚುನಾವಣಾ ಪಂಡಿತರ ಮಾತು.

    ಫಲಿತಾಂಶದ ಹತ್ತಿರ ಇರುತ್ತದೆ ಎನ್ನುವ ಒಂದೇ ಕಾರಣಕ್ಕೆ ಎಕ್ಸಿಟ್ ಪೋಲ್‍ಗಳನ್ನು ನಂಬುವಂತಿಲ್ಲ. ಈ ಹಿಂದೆ ಎಕ್ಸಿಟ್ ಪೋಲ್ ನಲ್ಲಿ ಒಂದು ಅಂಕಿ ನೀಡಿದ್ದರೆ ಫಲಿತಾಂಶ ಬಂದಾಗ ಅಂಕಿ ಸಂಖ್ಯೆ ಬದಲಾದ ಉದಾಹರಣೆ ಇದೆ. ಹೀಗಾಗಿ ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಕ್ಸಿಟ್ ಪೋಲ್ ಗಳು ಏನು ಹೇಳಿತ್ತು ಫಲಿತಾಂಶ ಏನು ಬಂದಿತ್ತು ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    1998 ಚುನಾವಣೆ:
    ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲ್ಲಿದ್ದು ಮೂರು ಸಮೀಕ್ಷೆಗಳು ಬಿಜೆಪಿ ಮೈತ್ರಿಕೂಟ 235 ಸ್ಥಾನಗಳಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಅಂತಿಮ ಫಲಿತಾಂಶದ ವೇಳೆ ಬಿಜೆಪಿ ಮೈತ್ರಿಕೂಟ 252 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    1999 :
    ಈ ಚುನಾವಣೆಯಲ್ಲೂ ಬಿಜೆಪಿ ಮೈತ್ರಿಕೂಟ ಅತಿದೊಡ್ಡ ಪಕ್ಷವಾಗಲಿ ಎಂದು ಎಲ್ಲ ಸಮೀಕ್ಷೆಗಳು ಹೇಳಿತ್ತು. ಅದರಲ್ಲಿ 4 ಸಮೀಕ್ಷೆಗಳು ಬಿಜೆಪಿ 300ರ ಗಡಿ ದಾಟಲಿದೆ ಎಂದು ಭವಿಷ್ಯ ನುಡಿದಿತ್ತು. ಅಂತಿಮ ಫಲಿತಾಂಶ ಪ್ರಕಟವಾದಾಗ ಬಿಜೆಪಿ ಮೈತ್ರಿಕೂಟ 296 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    2004:
    ಎರಡನೇ ಬಾರಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರಕ್ಕೆ ಏರಲಿದ್ದು, ಕಾಂಗ್ರೆಸ್ಸಿಗೆ ಮತ್ತೆ ಸೋಲಾಗಲಿದೆ ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ ಫಲಿತಾಂಶ ತಲೆಕೆಳಗೆ ಮಾಡಿತ್ತು. ಬಿಜೆಪಿ ಮೈತ್ರಿಗೆ 189 ಸ್ಥಾನಗಳು ಬಂದಿದ್ದರೆ ಕಾಂಗ್ರೆಸ್ ಮೈತ್ರಿಗೆ 222 ಸ್ಥಾನ ಸಿಕ್ಕಿತ್ತು.

    2009:
    ಈ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದರೂ ಬಹುಮತ ಸಿಗುವುದು ಕಷ್ಟ ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ ಫಲಿತಾಂಶ ಬಂದಾಗ ಬಿಜೆಪಿ ಮೈತ್ರಿಕೂಟ 159 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಮೈತ್ರಿಕೂಟ 262 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    2014:
    ಮೋದಿ ಅಲೆಯಿಂದಾಗಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ ಬಿಜೆಪಿ ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಧಿಕೃತವಾಗಿ ಟುಡೇಸ್ ಚಾಣಕ್ಯ ಮಾತ್ರ ಹೇಳಿತ್ತು. ಅಂತಿಮ ಫಲಿತಾಂಶ ಬಂದಾಗ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 336 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ವಿಧಾನ ಸಭಾ ಚುನಾವಣಾ ಫಲಿತಾಂಶ ಏನಿತ್ತು?
    ಕರ್ನಾಟಕ:
    ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲ್ಲಿದ್ದು, ಆದರೆ ಯಾರಿಗೂ ಬಹುಮತ ಸಿಗುವುದಿಲ್ಲ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿತ್ತು. ಅದರಂತೆ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ತಮಿಳುನಾಡು:
    ಆಡಳಿತ ವಿರೋಧಿ ಅಲೆ ಇರುವ ಕಾರಣ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಏರುವುದಿಲ್ಲ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿತ್ತು. ಆದರೆ ಫಲಿತಾಂಶ ಉಲ್ಟಾ ಆಗಿದ್ದು ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಏರಿತ್ತು.

    ಅಸ್ಸಾಂ:
    ಎಲ್ಲ ಎಕ್ಸಿಟ್ ಪೋಲ್‍ಗಳು ಬಿಜೆಪಿ ಐತಿಹಾಸಿಕ ಜಯವನ್ನು ದಾಖಲಿಸುತ್ತದೆ ಎಂದು ಭವಿಷ್ಯ ನುಡಿದಿತ್ತು. ಟುಡೇಸ್ ಚಾಣಕ್ಯ 90 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸುತ್ತದೆ ಎಂದಿದ್ದರೆ ಎಬಿಪಿ 81 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಅಂತಿಮವಾಗಿ ಬಿಜೆಪಿ 86 ಸ್ಥಾನಗಳನ್ನು ಗೆದ್ದು ಸರ್ಕಾರ ಸ್ಥಾಪಿಸಿತ್ತು.

    ಪಶ್ಚಿಮ ಬಂಗಾಳ:
    ಒಟ್ಟು 243 ಕ್ಷೇತ್ರಗಳಿರುವ ಬಂಗಾಳದಲ್ಲಿ ಟಿಎಂಸಿ ಭರ್ಜರಿಯಾಗಿ ಜಯಗಳಿಸುತ್ತದೆ ಎಂದು ಎಲ್ಲ ಸಮೀಕ್ಷೆಗಳು ಹೇಳಿತ್ತು. ಟುಡೇಸ್ ಚಾಣಕ್ಯ ಟಿಎಂಸಿ 210 ರಲ್ಲಿ ಜಯಗಳಿಸಲಿದೆ ಎಂದಿದ್ದರೆ, ಸಿ ವೋಟರ್ 167 ರಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಅಂತಿಮ ಫಲಿತಾಂಶ ಬಂದಾಗ ಟಿಎಂಸಿ 211 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಬಿಹಾರ:
    2015ರ ಕಾಂಗ್ರೆಸ್, ಜೆಡಿಯು,  ಆರ್‌ಜೆಡಿ ಒಟ್ಟಾಗಿ ಮಹಾಮೈತ್ರಿ ಮಾಡಿಕೊಂಡಿದ್ದ ಪರಿಣಾಮ ಯಾವ ಸಂಸ್ಥೆಗೂ ನಿಖರವಾಗಿ ಫಲಿತಾಂಶದ ಭವಿಷ್ಯ ಹೇಳಲು ಸಾಧ್ಯವಾಗಿರಲಿಲ್ಲ. ಒಂದೊಂದು ಸಂಸ್ಥೆಗಳು ಬೇರೆ ಬೇರೆ ಫಲಿತಾಂಶ ಪ್ರಕಟಿಸಿತ್ತು. ಜನರ ನಾಡಿಮಿಡಿತ ಕಂಡು ಹಿಡಿಯಲು ವಿಫಲವಾಗಿತ್ತು.  ಟುಡೇಸ್ ಚಾಣಕ್ಯ ಬಿಜೆಪಿ ಮೈತ್ರಿಗೆ 155 ಸ್ಥಾನ ಕೊಟ್ಟಿದ್ದರೆ 83 ಸ್ಥಾನಗಳನ್ನು ಮಹಾಮೈತ್ರಿಗೆ ನೀಡಿತ್ತು. ನ್ಯೂಸ್ ಎಕ್ಸ್ 130 -140 ಸ್ಥಾನಗಳನ್ನು ಮಹಾಮೈತ್ರಿಗೆ ನೀಡಿದ್ದರೆ ಎಬಿಪಿ ನ್ಯೂಸ್ 130 ಸ್ಥಾನ ನೀಡಿತ್ತು. ಫಲಿತಾಂಶ ಪ್ರಕಟವಾದಾಗ ನಿತೀಶ್ ನೇತೃತ್ವದ ಮಹಾಮೈತ್ರಿಕೂಟ 178 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

     

  • ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ : ಯಾವ ಸಮೀಕ್ಷೆ ಏನು ಹೇಳುತ್ತೆ?

    ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ : ಯಾವ ಸಮೀಕ್ಷೆ ಏನು ಹೇಳುತ್ತೆ?

    ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತೃತ್ವದ ಎನ್‍ಡಿಎ 2014ರ ಚುನಾವಣೆಯಂತೆ ಈ ಬಾರಿಯೂ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದೆ.

    ಭಾನುವಾರ ಸಂಜೆ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಎನ್‍ಡಿಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಒಟ್ಟು 542 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು ಬಹುಮತಕ್ಕೆ 272 ಸ್ಥಾನಗಳು ಬೇಕು. ತಮಿಳುನಾಡಿನ ವೆಲ್ಲೂರಿನಲ್ಲಿ ಆದಾಯ ತೆರಿಗೆ ದಾಳಿ ವೇಳೆ ಕೋಟಿಗಟ್ಟಲೇ ದುಡ್ಡು ಸಿಕ್ಕಿತ್ತು. ಹೀಗಾಗಿ ಅಲ್ಲಿನ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.

    2014ರ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರರು 150 ಸ್ಥಾನಗಳನ್ನು ಗೆದ್ದಿದರು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಯಾವ ಸಮೀಕ್ಷೆ ಏನು ಹೇಳುತ್ತೆ?
    ಟೈಮ್ಸ್ ನೌ ವಿಎಂಆರ್: ಎನ್‍ಡಿಎ – 306, ಯುಪಿಎ – 132, ಇತರೆ 104
    ಜನ್ ಕಿ ಬಾತ್ : ಎನ್‍ಡಿಎ – 305, ಯುಪಿಎ – 124, ಮಹಾಘಟ ಬಂಧನ 26, ಇತರೆ 87
    ಸಿವೋಟರ್: ಎನ್‍ಡಿಎ – 287, ಯುಪಿಎ – 128, ಮಹಾಘಟಬಂಧನ 40, ಇತರೆ 87
    ನ್ಯೂಸ್‍ನೇಷನ್: ಎನ್‍ಡಿಎ – 286, ಯುಪಿಎ – 122, ಇತರೆ 134

  • ಯುಪಿಎ ಅವಧಿಯಲ್ಲಿ ನಮಗೆ 1 ಲಕ್ಷ ಕೋಟಿ ರೂ. ಗುತ್ತಿಗೆ – ರಾಹುಲ್‍ಗೆ ಅನಿಲ್ ಅಂಬಾನಿ ತಿರುಗೇಟು

    ಯುಪಿಎ ಅವಧಿಯಲ್ಲಿ ನಮಗೆ 1 ಲಕ್ಷ ಕೋಟಿ ರೂ. ಗುತ್ತಿಗೆ – ರಾಹುಲ್‍ಗೆ ಅನಿಲ್ ಅಂಬಾನಿ ತಿರುಗೇಟು

    ಮುಂಬೈ: ರಫೇಲ್ ವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಿ ಮೋದಿ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂ. ನೀಡಿದ್ದಾರೆ ಎಂದು ಆರೋಪಿಸುತ್ತಿರುವ ರಾಹುಲ್ ಗಾಂಧಿಗೆ ರಿಲಯನ್ಸ್ ಗ್ರೂಪ್ ತಿರುಗೇಟು ನೀಡಿದೆ.

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅನಿಲ್ ಮಾಲೀಕತ್ವದ ರಿಲಯನ್ಸ್ ಕಂಪನಿ, ರಾಹುಲ್ ಗಾಂಧಿ ರಫೇಲ್ ಬಗ್ಗೆ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯ ನೀಡಿಲ್ಲ. ನಮ್ಮ ಕಂಪನಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಸುಳ್ಳು ಆರೋಪ ಮಾಡಿದ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದೆ.

    ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ 2004-2014ರ ಅವಧಿಯಲ್ಲಿ ರಿಲಯನ್ಸ್ ಗ್ರೂಪ್‍ಗೆ ಇಂಧನ, ಟೆಲಿಕಾಂ, ರಸ್ತೆ, ಮೆಟ್ರೋ ಸೇರಿದಂತೆ 1 ಲಕ್ಷ ಕೋಟಿ ರು. ಮೊತ್ತದ ಯೋಜನೆ ಗುತ್ತಿಗೆ ನೀಡಿತ್ತು. 10 ವರ್ಷಗಳ ಕಾಲ ಬೆಂಬಲಿಸಿದವರನ್ನು ಈಗ ಭ್ರಷ್ಟ ಉದ್ಯಮಿ ಎಂದು ಕರೆಯಲಾಗುತ್ತಿದೆ. ಹೀಗಾಗಿ 10 ವರ್ಷಗಳ ಕಾಲ ನಮಗೆ ಬೆಂಬಲ ನೀಡಿದ್ದು ಯಾರು ಎನ್ನುವುದನ್ನು ರಾಹುಲ್ ಗಾಂಧಿ ತಿಳಿಸಬೇಕು ಎಂದು ಆಗ್ರಹಿಸಿದೆ.

    ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ, ರಫೇಲ್ ವಿಮಾನ ಖರೀದಿಯಲ್ಲಿ ಮೋದಿ ಅಕ್ರಮ ಎಸಗಿದ್ದಾರೆ. ಅನಿಲ್ ಅಂಬಾನಿಗೆ ಲಾಭ ಮಾಡಿಕೊಟ್ಟಿದ್ದು 30 ಸಾವಿರ ಕೋಟಿ ರೂ. ನೀಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಫೇಲ್ ವಿಮಾನ ಖರೀದಿಯ ಬಗ್ಗೆ ತನಿಖೆ ನಡೆಸುತ್ತದೆ ಎಂದು ಭಾಷಣದಲ್ಲಿ ಹೇಳುತ್ತಿದ್ದಾರೆ.

  • ನಮ್ಮ ಅವಧಿಯಲ್ಲೂ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ – ಕಾಂಗ್ರೆಸ್ಸಿನಿಂದ ಪಟ್ಟಿ ಬಿಡುಗಡೆ

    ನಮ್ಮ ಅವಧಿಯಲ್ಲೂ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ – ಕಾಂಗ್ರೆಸ್ಸಿನಿಂದ ಪಟ್ಟಿ ಬಿಡುಗಡೆ

    ನವದೆಹಲಿ: ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನು ಚುನಾವಣಾ ಪ್ರಚಾರದಲ್ಲಿ ಬಳಸುತ್ತಿರುವ ಬಿಜೆಪಿಗೆ ತಿರುಗೇಟು ಎನ್ನುವಂತೆ ಯುಪಿಎ ತನ್ನ ಅವಧಿಯಲ್ಲಿ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಮಾಹಿತಿಯನ್ನು ಪ್ರಕಟಮಾಡಿದೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಿದ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಈ ಮೂಲಕ ನಮ್ಮ ಸರ್ಕಾರದ ಕಾಲದಲ್ಲೂ ಉಗ್ರರ ಮರಣಹೋಮ ಮಾಡಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

    ಇದೇ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, ನಮ್ಮ ಪಕ್ಷದ ಆಧಿಕಾರದ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ಆಗಿವೆ ಅದರೆ ನಾವು ಅದನ್ನು ರಾಜಕೀಯವಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಅದರೆ ಮೋದಿ ಅವರ ಸರ್ಕಾರವು ಸೈನ್ಯದ ಶೌರ್ಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎಂದು ದೂರಿದರು.

    2008 ರಿಂದ 2014ರ ವರೆಗೆ ನಡೆದಿರುವ 6 ಸರ್ಜಿಕಲ್ ಸ್ಟ್ರೈಕ್‍ಗಳ ವಿವರಗಳನ್ನು ಚಿತ್ರಗಳ ಸಮೇತ ಇವತ್ತು ಮಾಧ್ಯಮಗಳ ಮುಂದೆ ರಾಜೀವ್ ಶುಕ್ಲಾ ಬಿಡುಗಡೆ ಮಾಡಿದರು.

    ಈ ವಿಚಾರದ ಬಗ್ಗೆ ಹೇಳಿಕೆ ನೀಡಿರುವ ಮನಮೋಹನ್ ಸಿಂಗ್ ಅವರು, ಮೋದಿ ದೇಶದಲ್ಲಿ ಆಗಿರುವ ಆರ್ಥಿಕ ಹಿನ್ನಡೆಯನ್ನು ಮರೆಮಾಚಲು ಸೇನೆಯ ಶೌರ್ಯದ ಕಾರ್ಯಗಳ ಬಗ್ಗೆ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ಯಾವಾಗ ಎಲ್ಲಿ?
    1. 2008 ಜೂನ್ 19 ರಂದು ಪಾಕಿಸ್ತಾನದ ಪೂಂಚ್ ಪ್ರದೇಶ
    2. 2008 ಆಗಸ್ಟ್ 30 ರಿಂದ ಸೆಪ್ಟೆಂಬರ್ 1ರವರೆಗೆ ಪಾಕ್ ಆಕ್ರಮಿತ ಶಾರದಾ ಸೆಕ್ಟರಿನ ನೀಲಂ ನದಿ ಕಣಿವ ಎ
    3. 2013 ಜನವರಿ 6 ರಂದು ಸಾವನ್ ಪಾತ್ರಾ ಚೆಕ್ ಪೋಸ್ಟ್
    4. 2013 ಜುಲೈ 27 ಮತ್ತು 28 ರಂದು ನಾಜಪುರ್ ಕಣಿವೆ ಪ್ರದೇಶ
    5. 2013 ಆಗಸ್ಟ್ 6 ರಂದು ನೀಲಮ್ ನದಿ ಕಣಿವೆಯಲ್ಲಿ
    6. 2014 ಜನವರಿ 14 ರಂದು ನೀಲಮ್ ನದಿ ಕಣಿವೆ

    2016ರ ಸರ್ಜಿಕಲ್ ಸ್ಟ್ರೈಕ್ ಬಳಿಕ ಕಾಂಗ್ರೆಸ್ ತನ್ನ ಅವಧಿಯಲ್ಲಿ ಸರ್ಜಿಕಲ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿತ್ತು. ಈ ಸಂಬಂಧ ವ್ಯಕ್ತಿಯೊಬ್ಬರು ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್(ಡಿಜಿಎಂಒ)ಗೆ ಮಾಹಿತಿ ಹಕ್ಕಿನ ಅಡಿ ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿರುವ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದರು.

    ಈ ಪ್ರಶ್ನೆಗೆ ಡಿಜಿಎಂಒ, ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎನ್ನುವುದಕ್ಕೆ ನಮ್ಮ ವಿಭಾಗದಲ್ಲಿ ಯಾವುದೇ ದಾಖಲೆಗಳು ಇಲ್ಲ ಎಂದು ಉತ್ತರ ನೀಡಿತ್ತು.

    2016ರ ಸೆಪ್ಟೆಂಬರ್ 29 ರಂದು ಡಿಜಿಎಂಒ ಸುದ್ದಿಗೋಷ್ಠಿ ನಡೆಸಿ ಭಾರತದ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಆಧಾರವಾಗಿರಿಸಿ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕಿನ ಅಡಿ ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿರುವ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದ್ದರು.

  • ಭರವಸೆ ಈಡೇರಿಸಿಲ್ಲ, ಅಭಿವೃದ್ಧಿಯಾಗಿಲ್ಲ: ಮಮತಾ ವಿರುದ್ಧ ರಾಹುಲ್ ಕಿಡಿ

    ಭರವಸೆ ಈಡೇರಿಸಿಲ್ಲ, ಅಭಿವೃದ್ಧಿಯಾಗಿಲ್ಲ: ಮಮತಾ ವಿರುದ್ಧ ರಾಹುಲ್ ಕಿಡಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಮೊದಲ ಭಾಷಣದಲ್ಲಿ ರಾಹುಲ್ ಗಾಂಧಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಲ್ಡಾದಲ್ಲಿ ಆಯೋಜನೆಗೊಂಡಿದ್ದ ಮೊದಲ ಪ್ರಚಾರ ಭಾಷಣದಲ್ಲಿ, ಮಮತಾ ಬ್ಯಾನರ್ಜಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಮಮತಾ ಬ್ಯಾನರ್ಜಿ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಎಡಪಕ್ಷಗಳ ಆಡಳಿತದಿಂದ ಬಂಗಾಳದ ಜನ ರೋಸಿ ಹೋಗಿದ್ದರು. ಈಗ ಮಮತಾ ಆಡಳಿತದಲ್ಲೂ ಇದು ಮುಂದುವರಿದಿದೆ, ದೌರ್ಜನ್ಯಗಳು ನಡೆಯುತ್ತಿದೆ ಎಂದು ಆರೋಪಿಸಿದರು.

    ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿದರೆ ನಿಮ್ಮ ಮುಖ್ಯಮಂತ್ರಿ ಯಾವುದೇ ಭರವಸೆ ಈಡೇರಿಸಿಲ್ಲ. ಬಂಗಾಳದಲ್ಲಿ ಈಗ ಒಬ್ಬರ ಮಾತ್ರ ಮಾತನಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಯಾರ ಸಲಹೆಯನ್ನು ಪುರಸ್ಕರಿಸುವುದಿಲ್ಲ. ಬಂಗಾಳದಲ್ಲಿ ಬೇರೆಯವರ ಧ್ವನಿ ಕೇಳಿದ್ದೀರಾ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.

    6 ವಾರಗಳ ಹಿಂದೆ ಶರಾದ್ ಪವಾರ್ ನಿವಾಸದ ಮುಂದೆ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಜ.19ರಂದು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ಪ್ರತಿಪಕ್ಷಗಳ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು. ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಅವರ ವಿಚಾರದಲ್ಲಿ ಸಿಬಿಐ ನಡೆಯನ್ನು ಖಂಡಿಸಿ ನಡೆಸಿದ ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.

    ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿಚಾರದಲ್ಲಿ ಕೇಂದ್ರ ಕಾಂಗ್ರೆಸ್ ನಾಯಕರು ಒಂದು ನಿರ್ಧಾರ ತೆಗೆದುಕೊಂಡರೆ ರಾಜ್ಯ ನಾಯಕರು ವ್ಯತಿರಿಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಜ.19ರಂದು ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಗೈರಾಗಿದ್ದರು. ಇದನ್ನೂ ಓದಿ: ಮಮತಾ ಪರ ಬ್ಯಾಟಿಂಗ್ ಮಾಡಿದ ರಾಹುಲ್ ನಿಲುವಿಗೆ ಬಂಗಾಳ ಕಾಂಗ್ರೆಸ್ ವಿರೋಧ

  • ಎನ್‍ಡಿಎ ಮೈತ್ರಿಕೂಟಕ್ಕೆ ಬಹುಮತ ಕಷ್ಟ- ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ

    ಎನ್‍ಡಿಎ ಮೈತ್ರಿಕೂಟಕ್ಕೆ ಬಹುಮತ ಕಷ್ಟ- ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ

    – ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ

    ಬೆಂಗಳೂರು: ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮಹಾಘಟಬಂಧನ್, ಎಸ್‍ಪಿ-ಬಿಎಸ್‍ಪಿ ಮೈತ್ರಿ ಲೆಕ್ಕಕ್ಕೆ ಇಲ್ಲ ಎನ್ನುವಂತೆ ಮಾತನಾಡುತ್ತಿರಬಹುದು. ಆದ್ರೆ ಸಮೀಕ್ಷೆಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾದಿ ಸುಲಭವಲ್ಲ. ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿದ್ದು, ಅದ್ರಲ್ಲಿ ಮೋದಿ ಪಾಲಿಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ ಎಂಬ ಸೂಚನೆ ಸಿಕ್ಕಿದೆ.

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಮೈತ್ರಿಕೂಟಕ್ಕೂ ಬಹುಮತ ಸಿಗದೇ ಇದ್ದರೂ, ಚುನಾವಣೋತ್ತರ ಮೈತ್ರಿಯಿಂದ ಎನ್‍ಡಿಎ ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಎಬಿಪಿ ಹಾಗೂ ಸಿ-ವೋಟರ್ ಸಮೀಕ್ಷೆ ತಿಳಿಸಿದೆ. ಚುನಾವಣಾ ಪೂರ್ವ ಮೈತ್ರಿಯಿಂದ ಎನ್‍ಡಿಎ 233 ಹಾಗೂ ಯುಪಿಎ 167 ಸ್ಥಾನಗಳನ್ನು ಪಡೆಯಲಿದೆ. ತೃತೀಯ ರಂಗ 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಸರಳ ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿದೆ. 203 ಸ್ಥಾನಗಳನ್ನು ಜಯಿಸುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ ಸದಸ್ಯರ ಬಲ ಬಹುತೇಕ ದುಪ್ಪಟ್ಟಾಗಲಿದ್ದು, 109 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜು ಮಾಡಿದೆ.

    ಇನ್ನು ಕರ್ನಾಟಕದ ಪರಿಸ್ಥಿತಿ ಯಾರಿಗೆ ಎಷ್ಟು ಸಿಗಬಹುದು? ಇಷ್ಟಕ್ಕೂ ಚುನಾವಣಾ ಪೂರ್ವ ಸಮೀಕ್ಷೆಗಳು ಏನು ಹೇಳುತ್ತವೆ ಅನ್ನೋದನ್ನು ನೋಡೋದಾದ್ರೆ.. ಲೋಕಸಭಾ ಒಟ್ಟು ಸ್ಥಾನ – 543, ಎನ್‍ಡಿಎ – 233, ಯುಪಿಎ-167, ಇತರರು 145 (ಯಾರಿಗೂ ಬಹುಮತ ಇಲ್ಲ- ಸಿಂಪಲ್ ಮೆಜಾರಿಟಿಗೆ ಬೇಕು 273)

    ಕರ್ನಾಟಕ – ಒಟ್ಟು ಸ್ಥಾನ – 28, ಬಿಜೆಪಿ-14, ಕಾಂಗ್ರೆಸ್-11, ಜೆಡಿಎಸ್- 03
    ಉತ್ತರ ಪ್ರದೇಶ – ಒಟ್ಟು ಸ್ಥಾನ – 80, ಎಸ್‍ಪಿ-ಬಿಎಸ್‍ಪಿ 51, ಬಿಜೆಪಿ 25, ಕಾಂಗ್ರೆಸ್ 04
    ಆಂಧ್ರ ಪ್ರದೇಶ – ಒಟ್ಟು ಸ್ಥಾನ 25, ವೈಎಸ್‍ಆರ್‍ಸಿಪಿ -19, ಟಿಡಿಪಿ-06
    ದೆಹಲಿ – ಒಟ್ಟು ಸ್ಥಾನ 07- ಬಿಜೆಪಿ-07, ಕಾಂಗ್ರೆಸ್ – 00
    ಪಶ್ಚಿಮ ಬಂಗಾಳ – ಒಟ್ಟು ಸ್ಥಾನ 42, ಟಿಎಂಸಿ-34, ಬಿಜೆಪಿ 07, ಕಾಂಗ್ರೆಸ್-01

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ ಅನ್ನೋದು ಇಂಡಿಯಾ ಟುಡೇ-ಕಾರ್ವಿ ನಡೆಸಿದ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಬಯಲಾಗಿದೆ. ಇದರ ಪ್ರಕಾರ ಯಾವ ಮೈತ್ರಿ ಕೂಟಕ್ಕೆ ಎಷ್ಟೆಷ್ಟು ಸ್ಥಾನ ಸಿಕ್ಕಿದೆ ಅನ್ನೋದನ್ನು ನೋಡೋದಾದ್ರೆ..  ಲೋಕಸಭೆ ಒಟ್ಟು ಸ್ಥಾನ -543, ಎನ್‍ಡಿಎ – 237 (-86), ಯುಪಿಎ-166 (+60), ಇತರರು 140 (-13)
    ಉತ್ತರ ಪ್ರದೇಶ – ಒಟ್ಟು ಸ್ಥಾನ-80, ಎಸ್‍ಪಿ-ಬಿಎಸ್‍ಪಿ -58, ಬಿಜೆಪಿ – 18, ಕಾಂಗ್ರೆಸ್ – 04

    ಒಟ್ಟಿನಲ್ಲಿ ಚುನಾವಣೆಗೆ ಇನ್ನೂ ನಾಲ್ಕು ತಿಂಗಳಿನಷ್ಟು ಕಾಲಾವಕಾಶವಿದೆ. ಚುನಾವಣಾ ಪೂರ್ವ ಸಮೀಕ್ಷೆಯಿಂದ ರಾಜಕೀಯ ಮುಖಂಡರು ಆಕ್ಟಿವ್ ಆಗಿದ್ದು ಎಲ್ಲರ ಭವಿಷ್ಯ ಮತದಾರರಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಬಿಗ್ ಶಾಕ್

    ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಬಿಗ್ ಶಾಕ್

    – ರಾಜ್ಯದಲ್ಲಿ ಬರುತ್ತಂತೆ ಫಿಫ್ಟಿ-ಫಿಫ್ಟಿ ಫಲಿತಾಂಶ
    – ಪ್ರಧಾನಿ ಮೋದಿಗೆ ಎಚ್ಚರಿಕೆ ಕರೆಗಂಟೆ

    ನವದೆಹಲಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮಹಾಘಟಬಂಧನ್, ಎಸ್‍ಪಿ-ಬಿಎಸ್‍ಪಿ ಮೈತ್ರಿ ಲೆಕ್ಕಕ್ಕೆ ಇಲ್ಲ ಎನ್ನುವಂತೆ ಮಾತನಾಡುತ್ತಿರಬಹುದು. ಚುನಾವಣಾ ಪೂರ್ವ ಸಮೀಕ್ಷೆಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾದಿ ಸುಲಭವಲ್ಲ. ಇವತ್ತು ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿದ್ದು, ಅದರಲ್ಲಿ ಮೋದಿ ಪಾಲಿಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ ಎಂಬ ಸೂಚನೆ ಸಿಕ್ಕಿದೆ.

    ಮೋದಿ ವಿರೋಧಿಗಳು ಕೈ ಜೋಡಿಸಿದ್ರೆ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ ಆಗಲಿದೆ. ಅದರಲ್ಲೂ ಸಿ ವೋಟರ್ ಸರ್ವೇ ಪ್ರಕಾರ, ಉತ್ತರ ಪ್ರದೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮಹಾ ಮೈತ್ರಿಯಿಂದ ಬಿಜೆಪಿ ಭಾರೀ ಮುಖಭಂಗ ಅನುಭವಿಸಲಿದೆ. ಕರ್ನಾಟಕದಲ್ಲಿ ದೋಸ್ತಿ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‍ಮೇಕರ್ ಆಗಲಿವೆ. ಇತರೆ ಪಕ್ಷಗಳು 143 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕೇಂದ್ರದ ಅಧಿಕಾರದ ಗದ್ದುಗೆಗೆ ಏರುವವರು ಯಾರು ಎಂಬುದನ್ನು ಈ ಬಾರಿ ನಿರ್ಧರಿಸಲಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 233, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 167 ಸ್ಥಾನಗಳಲ್ಲಿ ಗೆಲ್ಲಲಿವೆ ಎಂದು ಸಮೀಕ್ಷೆ ಹೇಳಿದೆ.

    ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತಕ್ಕೆ ಬೇಕಾದ 273 ಸ್ಥಾನಗಳನ್ನು ಯಾವೊಂದು ಮೈತ್ರಿಕೂಟವೂ ಈ ಬಾರಿ ಗೆಲ್ಲುವುದು ಕಷ್ಟ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಪಕ್ಷ 266 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಇಬ್ಬರು ನಾಮನಿರ್ದೇಶಿತ ಸದಸ್ಯರೂ ಸೇರಿದಂತೆ ಕಳೆದ ಬಾರಿ ಎನ್‍ಡಿಎ ಮೈತ್ರಿಕೂಟದ ಒಟ್ಟು ಸದಸ್ಯರ ಸಂಖ್ಯೆ 305. ಆದರೆ, ಈ ಬಾರಿ ಎನ್‍ಡಿಎ ಬಲ 233ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.

    ಕರ್ನಾಟಕದಲ್ಲಿ ಯಾರಿಗೆ ಸಿಗಲಿದೆ ಗೆಲುವು: ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಕರ್ನಾಟಕ ಹೊಂದಿದೆ. ಇವುಗಳಲ್ಲಿ ಬಿಜೆಪಿ-14, ಕಾಂಗ್ರೆಸ್-11 ಮತ್ತು ಜೆಡಿಎಸ್-3 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದು ಸಿ ವೋಟರ್ ಸಮೀಕ್ಷೆ ಹೇಳಿದೆ.

    ಸಿ ವೋಟರ್ ಚುನಾವವಣಾ ಪೂರ್ವ ಸಮೀಕ್ಷೆ:
    ಕರ್ನಾಟಕ: ಒಟ್ಟು ಸ್ಥಾನ – 28, ಬಿಜೆಪಿ-14, ಕಾಂಗ್ರೆಸ್-11, ಜೆಡಿಎಸ್- 03
    ಉತ್ತರ ಪ್ರದೇಶ: ಒಟ್ಟು ಸ್ಥಾನ – 80, ಎಸ್‍ಪಿ-ಬಿಎಸ್‍ಪಿ 51, ಬಿಜೆಪಿ 25, ಕಾಂಗ್ರೆಸ್ 04
    ಆಂಧ್ರ ಪ್ರದೇಶ: ಒಟ್ಟು ಸ್ಥಾನ 25, ವೈಎಸ್‍ಆರ್‍ಸಿಪಿ -19, ಟಿಡಿಪಿ-06
    ಬಿಹಾರ: ಒಟ್ಟು ಸ್ಥಾನ – 40, ಎನ್‍ಡಿಎ -35, ಯುಪಿಎ-05
    ಮಹಾರಾಷ್ಟ್ರ: ಒಟ್ಟು ಸ್ಥಾನ – 48, ಎನ್‍ಡಿಎ -20, ಯುಪಿಎ-28
    ದೆಹಲಿ: ಒಟ್ಟು ಸ್ಥಾನ 07- ಬಿಜೆಪಿ-07, ಕಾಂಗ್ರೆಸ್ – 00
    ಪಶ್ಚಿಮ ಬಂಗಾಳ: ಒಟ್ಟು ಸ್ಥಾನ 42, ಟಿಎಂಸಿ-34, ಬಿಜೆಪಿ 07, ಕಾಂಗ್ರೆಸ್-01
    ಒಡಿಶಾ: ಒಟ್ಟು ಸ್ಥಾನ -21, ಎನ್‍ಡಿಎ 12, ಇತರರು – 09
    ಮಧ್ಯಪ್ರದೇಶ: ಒಟ್ಟು ಸ್ಥಾನ -29, ಎನ್‍ಡಿಎ-23, ಯುಪಿಎ-06
    ತಮಿಳುನಾಡು: ಒಟ್ಟು ಸ್ಥಾನ -39, ಬಿಜೆಪಿ -0, ಡಿಎಂಕೆ+ -39, ಎಐಎಡಿಎಂಕೆ -0
    ಹರಿಯಾಣ: ಒಟ್ಟು ಸ್ಥಾನ -10, ಬಿಜೆಪಿ 07, ಕಾಂಗ್ರೆಸ್ -03

    ಇಂಡಿಯಾ ಟುಡೇ ಸರ್ವೇ:
    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗಂಡಾಂತರ ಎದುರಾಗಲಿದೆ ಅನ್ನೋದು ಇಂಡಿಯಾ ಟುಡೇ-ಕಾರ್ವಿ ನಡೆಸಿದ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಹೇಳಲಾಗಿದೆ. ಇದರ ಪ್ರಕಾರ ಯಾವ ಮೈತ್ರಿ ಕೂಟಕ್ಕೆ ಎಷ್ಟೆಷ್ಟು ಸ್ಥಾನ ಅಂಕಿ ಅಂಶ ಈ ಕೆಳಗಿನಂತಿದೆ.

    1. ಲೋಕಸಭೆ ಒಟ್ಟು ಸ್ಥಾನ -543, ಎನ್‍ಡಿಎ – 237 (-86), ಯುಪಿಎ-166 (+60), ಇತರರು 140 (-13)
    ಒಂದು ವೇಳೆ, ಯುಪಿಎ ಜೊತೆ ಟಿಎಂಸಿ, ಎಸ್‍ಪಿ, ಬಿಎಸ್‍ಪಿ ಕೈ ಜೋಡಿಸಿದ್ರೆ ಈ ಫಲಿತಾಂಶ ಬದಲಾಗಲಿದೆ.

    2. ಲೋಕಸಭೆ ಒಟ್ಟು ಸ್ಥಾನ – 543, ಎನ್‍ಡಿಎ – 219, ಯುಪಿಎ-269, ಇತರರು 55 (ಅಧಿಕಾರದ ಸನಿಹಕ್ಕೆ ಯುಪಿಎ ಬರಲಿದೆ)
    ಉತ್ತರ ಪ್ರದೇಶ – ಒಟ್ಟು ಸ್ಥಾನ-80, ಎಸ್‍ಪಿ-ಬಿಎಸ್‍ಪಿ -58, ಬಿಜೆಪಿ – 18, ಕಾಂಗ್ರೆಸ್ – 04

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುಪಿಎ ಸರ್ಕಾರದ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಬಂಧನ: ಏನಿದು ಹಗರಣ?

    ಯುಪಿಎ ಸರ್ಕಾರದ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಬಂಧನ: ಏನಿದು ಹಗರಣ?

    -ರಾತ್ರೋರಾತ್ರಿ ದುಬೈನಿಂದ ದೆಹಲಿಗೆ ಕರೆತಂದ ಸಿಬಿಐ ಅಧಿಕಾರಿಗಳು

    ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಮಂಗಳವಾರ ತಡರಾತ್ರಿ ಭಾರತಕ್ಕೆ ಕರೆದುತಂದಿದ್ದು, ವಿಚಾರಣೆ ಆರಂಭಿಸಿದೆ.

    ಬ್ರಿಟನ್ ಪ್ರಜೆ ಕ್ರಿಶ್ಚಿಯನ್ ಮೈಕಲ್‍ ಜೇಮ್ಸ್ ನನ್ನು ಯುಎಇ ಗಡಿಪಾರು ಮಾಡಿದ್ದು, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಯ ಸಿಬಿಐ ಮುಖ್ಯಕಚೇರಿಗೆ ಕರೆತರಲಾಗಿದೆ.

    ಗಡೀಪಾರು ಮಾಡಿದ್ದು ಯಾಕೆ?
    ಬಿಟ್ರನ್ ಬಿಟ್ಟು ದುಬೈನಲ್ಲಿ ಮೈಕಲ್ ನೆಲೆಸಿದ್ದ. ಈತನನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಯುಎಇಗೆ ಮನವಿ ಸಲ್ಲಿಸಿತ್ತು. ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಜಾರಿ ಮಾಡಿತ್ತು. ಇದನ್ನು ವಿರೋಧಿಸಿ ಮೈಕಲ್ ದುಬೈ ಕೋರ್ಟ್ ಮೊರೆ ಹೋಗಿದ್ದ. ಆದರೆ ಕೋರ್ಟ್ ಆತನ ಕೋರಿಕೆಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಯುಎಇ ಸರ್ಕಾರ ಮೈಕಲ್ ನನ್ನು ಗಡಿಪಾರು ಮಾಡಿತ್ತು.

    ಏನಿದು ಪ್ರಕರಣ?
    ವಿವಿಐಪಿ ವ್ಯಕ್ತಿಗಳ ಪ್ರಯಾಣಕ್ಕೆ ಇಟಲಿಯ ಫಿನ್‍ಮೆಕ್ಯಾನಿಕಾ ಕಂಪೆನಿಯ ಅಂಗಸಂಸ್ಥೆಯಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯ ಜೊತೆ 2010ರಲ್ಲಿ 12 ಹೆಲಿಕಾಪ್ಟರ್ ಖರೀದಿಸಲು ಯುಪಿಎ ಸರ್ಕಾರ 3,600 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. 2013ರಲ್ಲಿ ಈ ಲಂಚದ ಆರೋಪ ಕೇಳಿ ಬಂದ ಕಾರಣ ಸರ್ಕಾರ 2014ರಲ್ಲಿ ಒಪ್ಪಂದವನ್ನು ರದ್ದು ಮಾಡಿತ್ತು. ಹಗರಣ ಬಯಲಿಗೆ ಬಂದ ಬಳಿಕ 1818 ಕೋಟಿ ರೂ. ಭಾರತ ಮರು ವಶಪಡಿಸಿಕೊಂಡಿದೆ. ಈ ಮೂಲಕ ಒಟ್ಟು 2,068 ಕೋಟಿ ರೂ. ವಾಪಸ್ ಪಡೆದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು. ಈ ನಿಟ್ಟಿನಲ್ಲಿ ಒಪ್ಪಂದ ಕುದುರಿಸುವ ಉದ್ದೇಶದಿಂದ ಆಗಸ್ಟಾ ವೆಸ್ಟ್‍ಲ್ಯಾಂಡ್‍ನಿಂದ 225 ಕೋಟಿ ರೂ. ಹಣವನ್ನು ಮೈಕಲ್ ಪಡೆದಿದ್ದ ಎನ್ನುವ ಆರೋಪ ಕೇಳಿಬಂದಿದೆ. ಆದರೆ ಆ ಹಣವನ್ನು ಮೈಕಲ್ ಭಾರತದ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡುವ ಉದ್ದೇಶದಿಂದ ಪಡೆದಿದ್ದ ಎನ್ನಲಾಗಿದೆ.

    ಮೈಕಲ್ ಡೈರಿಯಲ್ಲಿ ಗಣ್ಯರ ಹೆಸರು:
    ಈ ಖರೀದಿಯಲ್ಲಿ ಅವ್ಯವಹಾರ ವಾಸನೆ ಹೊಡೆದು ಭಾರೀ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಯುಪಿಎ ಸರ್ಕಾರ 2014ರ ಜನವರಿಯಲ್ಲಿ ಒಪ್ಪಂದವನ್ನು ರದ್ದು ಮಾಡಿಕೊಂಡಿತ್ತು. ಇತ್ತ ಮೈಕಲ್ ಡೈರಿಯಲ್ಲಿ ಕಾಂಗ್ರೆಸ್ಸಿನ ಪ್ರಭಾವಿ ನಾಯಕರ ಹೆಸರು ಸಿಕ್ಕಿದೆ. ಅಷ್ಟೇ ಅಲ್ಲದೆ ಹಲವರಿಗೆ ಹಣ ನೀಡಿದ್ದರ ವಿವರವೂ ಅದರಲ್ಲಿದ್ದು, ಯಾರಿಗೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಪ್ರಕರಣದ ಬೆನ್ನು ಬಿದ್ದಿದ್ದ ಸಿಬಿಐ ಹಾಗೂ ಜಾರಿನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಕ್ರಿಶ್ಚಿಯನ್ ಮೈಕಲ್‍ಗಾಗಿ ಬಲೆ ಬೀಸಿದ್ದರು. ದುಬೈನಲ್ಲಿ ಮೈಕಲ್ ಇದ್ದಾನೆ ಎನ್ನುವ ಮಾಹಿತಿ ಲಭ್ಯವಾಗುತ್ತಿದ್ದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯುಎಇ ಅಬ್ದಿಲ್ಲಾ ಬಿನ್ ಜಾಯೆದ್ ಅವರ ಜೊತೆಗೆ ಮಾತುಕತೆ ನಡೆಸಿದ್ದರು. ಇದು ಯಶಸ್ವಿಯಾಗಿದ್ದು, ಬುಧವಾರ ರಾತ್ರಿಯೇ ದುಬೈನಿಂದ ಆರೋಪಿಯನ್ನು ಕರೆತರಲಾಗಿದೆ.

    ಎಸ್‍ಪಿ ತ್ಯಾಗಿ ಬಂಧನವಾಗಿತ್ತು:
    ಈ ಖರೀದಿ ಅಕ್ರಮದಲ್ಲಿ ಎಸ್‍ಪಿ ತ್ಯಾಗಿ ಶಾಮೀಲಾಗಿರುವುದಕ್ಕೆ ಸಾಕ್ಷ್ಯಗಳಿವೆ ಎಂದು ಇಟಲಿಯ ಮಿಲಾನ್ ಕೋರ್ಟ್ 2016ರ ಏಪ್ರಿಲ್ 8ರಂದು ತೀರ್ಪು ನೀಡಿತ್ತು. ಈ ತೀರ್ಪು ಬಂದ ಬಳಿಕ ನಿವೃತ್ತ ವಾಯುಸೇನಾ ಮುಖ್ಯಸ್ಥ ಎಸ್‍ಪಿ ತ್ಯಾಗಿ ಅವರನ್ನು ಸಿಬಿಐ ಬಂಧಿಸಿತ್ತು. ಖರೀದಿ ಒಪ್ಪಂದದಲ್ಲಿ ಕಿಕ್ ಬ್ಯಾಕ್ ಪಡೆದುಕೊಂಡು ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತ್ಯಾಗಿ ಅವರನ್ನು ಬಂಧಿಸಿತ್ತು. ತ್ಯಾಗಿ ಜೊತೆ ದೆಹಲಿ ಮೂಲದ ವಕೀಲ ಗೌತಮ್ ಖಟಿಯನ್, ಎಸ್‍ಪಿ ತ್ಯಾಗಿ ಅವರ ಸಂಬಂಧಿ ಸಂಜೀವ್ ತ್ಯಾಗಿ ಅವರನ್ನು ಬಂಧಿಸಲಾಗಿತ್ತು.

    ತ್ಯಾಗಿ ಮೇಲಿದ್ದ ಆರೋಪ ಏನು?
    ವಿವಿಐಪಿ ಹೆಲಿಕಾಪ್ಟರ್ ಖರೀದಿ ಸಂಬಂಧ ಸರ್ಕಾರ ಕರೆದ ಹರಾಜು ಪ್ರಕ್ರಿಯೆಯಲ್ಲಿ ಹೆಲಿಕಾಪ್ಟರ್ ಹಾರಾಟದ ಎತ್ತರದ ಮಿತಿಯನ್ನು 6 ಸಾವಿರ ಮೀಟರ್ ನಿಂದ 4,500 ಮೀಟರ್ ಗೆ(15,000 ಅಡಿಗಳಿಗೆ) ವಾಯುಸೇನೆ ಇಳಿಸಿತ್ತು. ಆಗಸ್ಟಾ ಕಂಪನಿ ನೆರವಾಗುವ ಉದ್ದೇಶದಿಂದಲೇ ಎಸ್‍ಪಿ ತ್ಯಾಗಿ ಅವರು ಎತ್ತರದ ಮಿತಿಯನ್ನು ಇಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಜೊತೆ ಎಸ್‍ಪಿ ತ್ಯಾಗಿ ಮಾತುಕತೆ ನಡೆಸಿ ಕಿಕ್‍ಬ್ಯಾಕ್ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವೇ…?

    ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವೇ…?

    -ಎಸ್ಸಿ-ಎಸ್ಟಿ ಬಡ್ತಿ ಮೀಸಲಾತಿ ಪ್ರಕರಣದ ಭವಿಷ್ಯ ಇಂದು ನಿರ್ಧಾರ!

    ನವದೆಹಲಿ: ನಿವೃತ್ತಿಗೆ ಉಳಿದಿರುವ ಕೊನೆ ಆರು ದಿನಗಳಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಏಳು ಮಹತ್ವದ ತೀರ್ಪು ನೀಡಲಿದ್ದಾರೆ. ಮಂಗಳವಾರ ಎರಡು ಮಹತ್ವದ ತೀರ್ಪು ನೀಡಿರುವ ನ್ಯಾ.ದೀಪಕ್ ಮಿಶ್ರಾ ಇಂದು ಮೂರು ಮಹತ್ವದ ಪ್ರಕರಣಗಳ ಬಗ್ಗೆ ತೀರ್ಪು ಪ್ರಕಟಿಸಲಿದ್ದಾರೆ.

    ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಆಧಾರ್ ಯೋಜನೆಗೆ ಈಗ ಸಿಂಧುತ್ವದ ಪ್ರಶ್ನೆ ಎದುರಾಗಿದೆ. ಆಧಾರ್ ಯೋಜನೆ ಲಾಭವನ್ನು ಆಡಳಿತಾರೂಢ ಮೋದಿ ಸರ್ಕಾರ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದು, ಸರ್ಕಾರಿ ಯೋಜನೆಗಳ ಫಲಾನುಭವಿಗಳ ಪತ್ತೆ, ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಹಲವು ಯೋಜನೆಗಳಿಗೆ ಆಧಾರ್ ನಂಬರ್ ಲಿಂಕ್ ಮಾಡುತ್ತಿದೆ.

    ಹೀಗೆ ಆಧಾರ್ ಲಿಂಕ್ ಮಾಡೋದು ವ್ಯಕ್ತಿಯ ಖಾಸಗಿತನದ ಧಕ್ಕೆ ತರಲಿದೆ ಅಂತಾ ಆಧಾರ್ ಜೋಡಣೆ ವಿರೋಧಿಸಿ ಸುಪ್ರೀಂಕೋರ್ಟ್ ಗೆ 27 ಅರ್ಜಿ ದಾಖಲಾಗಿವೆ. 27 ಅರ್ಜಿಗಳ ಒಟ್ಟುಗೂಡಿಸಿ ದಾಖಲೆಯ 38 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಇಂದು ತೀರ್ಪು ನೀಡಲಿದೆ. ಆಧಾರ್ ಜೋಡಣೆ ಖಾಸಗಿತನದ ಧಕ್ಕೆಯೋ..? ಇಲ್ಲವೋ..? ಆಧಾರ್ ಸರ್ಕಾರಿ ಯೋಜನೆಗಳಿಗೆ ಕಡ್ಡಾಯ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇಂದು ತೀರ್ಪು ಹೊರ ಬರಲಿದೆ. ಈ ಮಹತ್ವದ ತೀರ್ಪು ಆಧಾರ್ ಭವಿಷ್ಯ ನಿರ್ಧರಿಸಿಲಿದ್ದು, ಇಡೀ ದೇಶವೇ ಸುಪ್ರೀಂ ತೀರ್ಪು ನತ್ತ ಎದುರು ನೋಡ್ತಿದೆ.

    ಎಸ್ಸಿ ಮತ್ತು ಎಸ್ಟಿ ಬಡ್ತಿ ಮೀಸಲಾತಿ:
    ಎಸ್ಸಿ ಮತ್ತು ಎಸ್ಟಿ ಬಡ್ತಿ ಮೀಸಲಾತಿ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪಾಗಿ ಉಳಿದಿರುವ ಎಂ.ನಾಗರಾಜು ಪ್ರಕರಣ ತೀರ್ಪು ಬದಲಾಗುತ್ತಾ ಅನ್ನೂ ಕುತೂಹಲ ಮೂಡಿದೆ. ಬಡ್ತಿ ಮೀಸಲಾತಿ ವಿಚಾರವಾಗಿ ಎಂ.ನಾಗರಾಜು ಪ್ರಕರಣದ ಬಗ್ಗೆ 2006 ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಲ್ಯಾಂಡ್ ಮಾರ್ಕ್ ಆಗಿದ್ದು ಇಡೀ ದೇಶವೇ ಈ ತೀರ್ಪು ನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ತೀರ್ಪು ಎಲ್ಲ ರಾಜ್ಯಗಳಿಗೆ ಅನ್ವಯ ಮಾಡಲು ಸಾಧ್ಯವಿಲ್ಲ ಎಂದಿದ್ದ ಬಿಹಾರ ಮತ್ತು ಈಶಾನ್ಯ ಭಾಗದ ರಾಜ್ಯಗಳು ತೀರ್ಪು ಪುನರ್ ಪರಿಶೀಲನೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು.

    ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ 2006 ರಲ್ಲಿ ನೀಡಿದ್ದ ತೀರ್ಪು ಮುಂದುವರಿಬೇಕಾ ಅಥಾವ ಏಳು ಜನರ ಸಾಂವಿಧಾನಿಕ ಪೀಠದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಬೇಕಾ ಎಂಬುದರ ಬಗ್ಗೆ ಮಹತ್ವದ ಇಂದು ತೀರ್ಪು ನೀಡಲಿದೆ. ಈ ತೀರ್ಪು ರಾಜ್ಯ ಸರ್ಕಾರಕ್ಕೆ ನಿರ್ಣಾಯಕವಾಗಿದ್ದು ಹಿಂದಿನ ತೀರ್ಪು ಪಾಲಿಸುವ ಸೂಚನೆ ಸುಪ್ರೀಂ ಕೋರ್ಟ್ ನೀಡಿದ್ರೆ ರಾಜ್ಯ ಸರ್ಕಾರ ಬಿ.ಕೆ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಲಿದೆ. ಒಂದು ವೇಳೆ ಏಳು ಜನರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾದಲ್ಲಿ ಹೆಚ್.ಡಿ.ಕೆ ಸರ್ಕಾರ ಬೀಸೊ ದೊಣ್ಣೆಯಿಂದ ಪಾರಾಗಲಿದೆ.

    ಕಲಾಪಗಳ ನೇರ ಪ್ರಸಾರ:
    ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ ಮಾಡಲು ಅವಕಾಶ ನೀಡುವ ಕುರಿತು ಕೋರ್ಟ್ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ. ಈ ಬಗ್ಗೆ ಇಂದು ಸುಪ್ರೀಂಕೋರ್ಟ್ ತನ್ನ ನಿಲುವು ಪ್ರಕಟಿಸಲಿದೆ. ಮಹತ್ವದ ಕೇಸುಗಳ ತೀರ್ಪನ್ನು ನೀಡುವಾಗ ಅವುಗಳನ್ನು ನೇರ ಪ್ರಸಾರ ಮಾಡಬೇಕು ಅನ್ನೋ ಒತ್ತಾಯವಿದೆ. ಜತೆಗೆ ಕೋರ್ಟ್ ನಲ್ಲಿ ನಡೆಯುವ ಪ್ರಮುಖ ವಿಚಾರಣೆಗಳು ದೇಶದ ಜನತೆಗೆ ಗೊತ್ತಾಗಬೇಕು. ಗೊತ್ತಾವುದರಲ್ಲಿ ತಪ್ಪೇನಿದೆ ಅನ್ನುವ ವಾದಗಳು ಮಾಡಲಾಗಿದೆ. ಕೋರ್ಟ್ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕು ಅನ್ನೊ ವಾದಕ್ಕೆ ಮನ್ನಣೆ ಕೊಡಬೇಕೋ ಬೇಡವೋ ಎಂಬ ಬಗ್ಗೆ ಇಂದು ನ್ಯಾ.ದೀಪಕ್ ಮಿಶ್ರ ನೇತೃತ್ವದ ಪೀಠ ನಿರ್ಧರಿಸಲಿದೆ. ಇಂದು ಕೂಡಾ ಸುಪ್ರೀಂಕೋರ್ಟ್ ಕುತೂಹಲದ ಕೇಂದ್ರ ಬಿಂದುವಾಗಿದ್ದು, ಮೂರು ಮಹತ್ವದ ತೀರ್ಪುಗಳು ಸುಪ್ರೀಂಕೋರ್ಟ್ ನಿಂದ ಹೊರಬೀಳಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪೆಟ್ರೋಲ್, ಡೀಸೆಲ್ ದರ ಯುಪಿಎ Vs ಎನ್‍ಡಿಎ – ಎಷ್ಟು ಏರಿಕೆಯಾಗಿದೆ: ಕೈಗೆ ತಿರುಗೇಟು ಕೊಟ್ಟ ಬಿಜೆಪಿ

    ಪೆಟ್ರೋಲ್, ಡೀಸೆಲ್ ದರ ಯುಪಿಎ Vs ಎನ್‍ಡಿಎ – ಎಷ್ಟು ಏರಿಕೆಯಾಗಿದೆ: ಕೈಗೆ ತಿರುಗೇಟು ಕೊಟ್ಟ ಬಿಜೆಪಿ

    ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಕೇಂದ್ರದ ನೀತಿಯನ್ನು ಖಂಡಿಸಿ ಭಾರತ ಬಂದ್‍ಗೆ ಕರೆ ನೀಡಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿ ಈಗ ಸಂಖ್ಯಾ ಮಾಹಿತಿಯನ್ನು ಬಿಡುಗಡೆ ಮಾಡಿ ತಿರುಗೇಟು ನೀಡಿದೆ.

    ರಾಷ್ಟ್ರ ರಾಜಧಾನಿಯಾದ ದೆಹಲಿಯ ಇಂದಿನ ದರವನ್ನು ಮುಖ್ಯವಾಗಿಟ್ಟುಕೊಂಡು ಯುಪಿಎ ಸರ್ಕಾರದ ಎರಡು ಅವಧಿಯ 5 ವರ್ಷ ಬೆಲೆ ಏರಿಕೆಯಾಗಿದ್ದು ಮೋದಿ ಸರ್ಕಾರಕ್ಕೆ ಹೋಲಿಕೆ ಮಾಡಿಕೊಂಡು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಬಾರ್ ಗ್ರಾಫಿಕ್ಸ್ ಬಿಡುಗಡೆ ಮಾಡಿದೆ.

    ಪೆಟ್ರೋಲ್ ಬೆಲೆ:
    2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಮೇ 16 ರಂದು 1 ಲೀಟರ್ ಪೆಟ್ರೋಲ್ ಬೆಲೆ 33.71 ರೂ. ಇತ್ತು. 2009ರ ಮೇ 16 ರಂದು ಈ ದರ ಶೇ.75.8ರಷ್ಟು ಏರಿಕೆಯಾಗಿ 40.62 ರೂ. ತಲುಪಿತ್ತು. 2014ರ ಮೇ 16 ರಂದು ಈ ದರ ಶೇ.75.8 ರಷ್ಟು ಏರಿಕೆಯಾಗಿ 71.41 ರೂ. ಆಗಿದೆ. ಆದರೆ ನಮ್ಮ ಅವಧಿಯಲ್ಲಿ 2018ರ ಸಪ್ಟೆಂಬರ್ 10ರ ವೇಳೆಗೆ 80.73 ರೂ. ಆಗಿದ್ದು ಶೇ.13 ರಷ್ಟು ಬೆಲೆ ಏರಿಕೆ ಕಂಡಿದೆ ಎಂದು ಹೇಳಿದೆ.

    ಡೀಸೆಲ್ ಬೆಲೆ:
    ಮೇ 16ರಂದು 1 ಲೀಟರ್ ಡೀಸೆಲ್‍ಗೆ 21.71 ರೂ. ದರ ನಿಗದಿಯಾಗಿತ್ತು. ಬಳಿಕ 2009ರ ಮೇ ವೇಳೆ ಈ ದರ ಶೇ.42 ರಷ್ಟು ಹೆಚ್ಚಾಗಿ 40.62 ರೂ. ತಲುಪಿತ್ತು. 2014ರ ಮೇ 16ರ ವೇಳೆ ದರ ಶೇ.83.7 ಏರಿಕೆಯಾಗಿ 56.71 ರೂ. ತಲುಪಿತ್ತು. ಈಗ ಸೆಪ್ಟೆಂಬರ್ 10 ರಂದು ನಮ್ಮ ಸರ್ಕಾರದಲ್ಲಿ 72.83 ರೂ. ಇದ್ದು ಶೇ.28 ಮಾತ್ರ ಏರಿಕೆಯಾಗಿದೆ ಎಂದು ಹೇಳಿಕೊಂಡಿದೆ.

    2012-2014 ರ ತನಕ ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತಿಕವಾಗಿ ತೈಲ ದರ ಹೆಚ್ಚಿದ್ದರೂ, ದೇಶೀಯವಾಗಿ ತೈಲ ದರಗಳು ಏರಿಕೆಯಾಗಿರಲಿಲ್ಲ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಭಾರತದಲ್ಲಿ ಕಡಿಮೆಯಾಗಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ ಆಗ ಯುಪಿಎ ಸರ್ಕಾರ 1.44 ಲಕ್ಷ ಕೋಟಿ ರೂ. ಮೌಲ್ಯದ ತೈಲ ಬಾಂಡ್ ಖರೀದಿಸಿತ್ತು. ಇದಕ್ಕೆ ಕೇವಲ ಬಡ್ಡಿಯಾಗಿ 70 ಸಾವಿರ ಕೋಟಿ ರೂ.ಗಳನ್ನು ಎನ್‍ಡಿಎ ಸರಕಾರ ಪಾವತಿಸಿದೆ. ಒಟ್ಟು 2 ಲಕ್ಷ ಕೋಟಿ ರೂ.ಗಳನ್ನು ಮೋದಿ ಸರಕಾರ ಮರು ಪಾವತಿಸಿದೆ. ಯುಪಿಎ ಸರ್ಕಾರ ಹಗರಣಗಳ ಪರಿಣಾಮ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇರಲಿಲ್ಲ. ಹೀಗಾಗಿ ತೈಲ ಬಾಂಡ್‍ಗಳ ಮೂಲಕ ಭಾರೀ ಸಾಲವನ್ನು ತೆಗೆದುಕೊಂಡಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ಪ್ರತಿಕ್ರಿಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv