Tag: ಯುನಿಸೆಫ್

  • ಕುಳಿತಲ್ಲೇ ಫುಡ್‌ ಆರ್ಡರ್‌; ಬೊಜ್ಜು, ಶುಗರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ – ಶಾಕ್‌ ಕೊಟ್ಟ WHO, UNICEF ರಿಪೋರ್ಟ್‌

    ಕುಳಿತಲ್ಲೇ ಫುಡ್‌ ಆರ್ಡರ್‌; ಬೊಜ್ಜು, ಶುಗರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ – ಶಾಕ್‌ ಕೊಟ್ಟ WHO, UNICEF ರಿಪೋರ್ಟ್‌

    ಕುಳಿತಲ್ಲೇ ಆರ್ಡರ್ ಮಾಡಿದರೆ ಎಲ್ಲವೂ ಮನೆ ಬಾಗಿಲಿಗೆ ಬರುತ್ತವೆ. ಊಟ, ದಿನಸಿ, ತಿನಿಸುಗಳು ಹೀಗೆ ಬೇಕಾದ್ದನ್ನು ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಎಲ್ಲವೂ ಮೊಬೈಲ್‌ನಲ್ಲಿ ಒಂದು ಕ್ಲಿಕ್‌ನಲ್ಲಿ ಆಗುತ್ತವೆ. ನಗರ ಭಾಗದ ಜನರು ತುಂಬಾ ಬ್ಯುಸಿಯಾಗಿದ್ದಾರೆ. ತಮಗೆ ಬೇಕಾದ್ದನ್ನು ಹೊರಗಡೆ ಹೋಗಿ ತರುವಷ್ಟು ಸಮಯ ಇಲ್ಲ. ಹೀಗಾಗಿ, ಆನ್‌ಲೈನ್ ಸೇವೆಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಹೋಟೆಲ್, ರೆಸ್ಟೋರೆಂಟ್‌ಗಳಿಂದ ತಮ್ಮಿಷ್ಟದ ಊಟ-ತಿಂಡಿಗಳನ್ನು ಮನೆಗೆ ತರಿಸಿಕೊಂಡು ಸೇವಿಸುವ ಪರಿಪಾಠ ದಿನೇ ದಿನೆ ಹೆಚ್ಚುತ್ತಿದೆ. ಪರಿಣಾಮವಾಗಿ ಮನೆಯಲ್ಲೇ ಅಡುಗೆ ಮಾಡುಕೊಳ್ಳುವಂತಹ ಸಂಪ್ರದಾಯ ಕ್ಷೀಣಿಸುತ್ತಿದೆ. ತಂತ್ರಜ್ಞಾನ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆ. ಆದರೆ, ಈ ಪ್ರವೃತ್ತಿಯಿಂದ ಜನರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮ ಕಳವಳಕಾರಿಯಾಗಿದೆ.

    ನೆರೆಹೊರೆಯ ಅಂಗಡಿಗೆ ಹೋಗುವ ಅಥವಾ ವೀಕೆಂಡ್ ಸಂತೋಷಕೂಟ ಯೋಜಿಸುವ ದಿನಗಳು ಮರೆಯಾಗಿವೆ. ಆನ್‌ಲೈನ್ ಫುಡ್ ಡೆಲಿವರಿ ಮಾಡುವ ಅಪ್ಲಿಕೇಶನ್‌ಗಳ ಹೆಚ್ಚಳವು ಜನರ ಆಹಾರ ಸೇವನೆ ಕ್ರಮವನ್ನೇ ಬದಲಾಯಿಸಿವೆ. ಆನ್‌ಲೈನ್‌ ಫುಡ್‌ ಡೆಲಿವರಿ (Online Food Delivery) ಪ್ಲಾಟ್‌ಫಾರ್ಮ್‌ಗಳ ಕಡೆಗಿನ ಜನರ ಒಲವು ಹೆಚ್ಚುತ್ತಿದೆ. ಇದರಿಂದ ಜನರ ದೈಹಿಕ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದೆ. ಹೆಚ್ಚಿನ ಕ್ಯಾಲೊರಿ ಇರುವ ಆಹಾರಗಳ ಮೇಲಿನ ಅವಲಂಬನೆ ಜಾಸ್ತಿಯಾಗಿದೆ. ರುಚಿಯೆನಿಸುವ ಜಂಕ್‌ಫುಡ್ ಸೇವನೆಯೂ ಮಿತಿಮೀರಿದೆ. ಇದು ಜನರಿಗೆ ಅರಿವಾಗದಂತೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೊಜ್ಜು ಮತ್ತು ಇತರೆ ಆರೋಗ್ಯದ ಅಪಾಯಗಳು ಹೆಚ್ಚುತ್ತಿವೆ.

    WHO ಬಿಚ್ಚಿಟ್ಟ ಆತಂಕಕಾರಿ ವಿಷಯ ಏನು?
    2022 ರಲ್ಲಿ ವಿಶ್ವದಾದ್ಯಂತ ಎಂಟು ಜನರಲ್ಲಿ ಒಬ್ಬರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಅಧಿಕ ತೂಕ ಹೊಂದಿದ್ದ 250 ಕೋಟಿ ವಯಸ್ಕರಲ್ಲಿ 89 ಕೋಟಿ ಜನರು ಬೊಜ್ಜು ಸಮಸ್ಯೆಗೆ ಒಳಗಾಗಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರಲ್ಲಿಯೂ ಬೊಜ್ಜು ಹೆಚ್ಚಾಗಿದೆ. 5-19 ವರ್ಷ ವಯಸ್ಸಿನ ಸುಮಾರು 16 ಕೋಟಿ ಹದಿಹರೆಯದವರು ಬೊಜ್ಜು ಸಮಸ್ಯೆಗೆ ತುತ್ತಾಗಿದ್ದಾರೆ.

    ಬೊಜ್ಜು ಹೊಂದುವವರಲ್ಲಿ ಭಾರತವೇ ನಂ.1
    ಭಾರತದಲ್ಲಿಯೂ ಬೊಜ್ಜು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ. 2030 ರ ವೇಳೆಗೆ ಭಾರತವು ಜಾಗತಿಕವಾಗಿ ಅತಿ ಹೆಚ್ಚು ತೂಕ ಮತ್ತು ಬೊಜ್ಜು ಹೊಂದಿರುವ ಮಕ್ಕಳನ್ನು ಹೊಂದಬಹುದು ಎಂದು ಯುನಿಸೆಫ್ ಎಚ್ಚರಿಸಿದೆ. ಸುಮಾರು 3 ಕೋಟಿ ಹದಿಹರೆಯದವರು ಬೊಜ್ಜು ಹೊಂದುವ ನಿರೀಕ್ಷೆಯಿದೆ. ಜಗತ್ತಿನ ಒಟ್ಟು ಪ್ರಮಾಣದಲ್ಲಿ ಶೇ.11 ರಷ್ಟು ಭಾರತದ್ದೇ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೊಜ್ಜು/ತೂಕ ಹೆಚ್ಚಳದಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕೀಲು ಸಮಸ್ಯೆಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‌ಸಿಡಿ) ಅಪಾಯವೂ ಹೆಚ್ಚುತ್ತಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    1995ರಲ್ಲಿ ಆರಂಭ
    ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಪರಿಕಲ್ಪನೆ ಹೊಸದೇನಲ್ಲ. 1995 ರ ಆರಂಭದಲ್ಲಿ, Waiter.com (ಆಗ ವರ್ಲ್ಡ್ ವೈಡ್ ವೇಟರ್ ಎಂದು ಕರೆಯಲಾಗುತ್ತಿತ್ತು) ಎಂಬ ಪ್ಲಾಟ್‌ಫಾರ್ಮ್ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಇಂಟರ್ನೆಟ್ ಆಧಾರಿತ ಆಹಾರ ವಿತರಣೆಯನ್ನು ನೀಡಲು ಪ್ರಾರಂಭಿಸಿತು. ನಂತರ ಇತರ ಯುಎಸ್ ನಗರಗಳಿಗೆ ಇದು ವಿಸ್ತರಿಸಿತು. ಗ್ರಾಹಕರು ಡಿಜಿಟಲ್ ಮೆನುಗಳಿಗೆ ಆಕರ್ಷಿತರಾದರು. ತಮ್ಮ ಆರ್ಡರ್‌ಗಳನ್ನು ನೀಡಿದರು, ಆನ್‌ಲೈನ್ ಪಾವತಿ ಮಾಡಿದರು. ಇದು ಈಗ ಪ್ರಪಂಚದಾದ್ಯಂತ ವ್ಯಾಪಿಸಿದೆ.

    ಭಾರತದಲ್ಲಿ ಹೆಚ್ಚುತ್ತಿವೆ ಫುಡ್ ಆರ್ಡರ್‌ಗಳು
    ಕಳೆದ ದಶಕದಲ್ಲಿ ಭಾರತದಲ್ಲಿ ಈ ವಲಯವು ಉತ್ತುಂಗಕ್ಕೇರಿತು. ಹೆಚ್ಚಿದ ಸ್ಮಾರ್ಟ್‌ಫೋನ್‌ಗಳ ಬಳಕೆ, ಕಡಿಮೆ ಬೆಲೆಯ ಮೊಬೈಲ್ ಡೇಟಾ, ಆದಾಯದಲ್ಲಿನ ಹೆಚ್ಚಳ ಮೊದಲಾದ ಕಾರಣಗಳಿಗೆ ಫುಡ್ ಆರ್ಡರ್ ಪ್ರವೃತ್ತಿ ಮಿತಿಮೀರಿದೆ. 2008 ರಲ್ಲಿ ಸ್ಥಾಪನೆಯಾದ ಪ್ಲಾಟ್‌ಫಾರ್ಮ್‌ವೊಂದು, ರೆಸ್ಟೋರೆಂಟ್ ಅನ್ವೇಷಣೆ ಸೇವೆಯಾಗಿ ಪ್ರಾರಂಭವಾಯಿತು. ಆದರೆ, ಅದು 2015 ರಲ್ಲಿ ವಿತರಣಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿತು. 2014 ರಲ್ಲಿ ಪ್ರಾರಂಭವಾದ ಮತ್ತೊಂದು ಪ್ಲಾಟ್‌ಫಾರ್ಮ್‌ ತ್ವರಿತ ಸೇವೆ ಕ್ರಮದೊಂದಿಗೆ ಬಹುಬೇಗ ತನ್ನ ನೆಲೆ ವಿಸ್ತರಿಸಿಕೊಂಡಿತು. ಭಾರತದ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯು 2019 ರಿಂದ 2023 ರವರೆಗೆ 2.8 ಪಟ್ಟು ಬೆಳೆದಿದೆ. ವಾರ್ಷಿಕವಾಗಿ 18% ನಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಭಾರತೀಯ ಆಹಾರ ಸೇವಾ ಉದ್ಯಮದ ಬೆಳವಣಿಗೆಯ ದರಕ್ಕಿಂತ 1.5 ಪಟ್ಟು ಹೆಚ್ಚು ಎಂದು ಬೈನ್ & ಕಂಪನಿ ಹಾಗೂ ಐಪಿಒ-ಬೌಂಡ್ ಸ್ವಿಗ್ಗಿಯ 2024 ರ ವರದಿಯು ತಿಳಿಸಿದೆ. ಭಾರತದಲ್ಲಿ ಆಹಾರ ಸೇವೆಗಳ ಮಾರುಕಟ್ಟೆ 2030 ರ ವೇಳೆಗೆ ಸುಮಾರು 9-10 ಲಕ್ಷ ಕೋಟಿ ರೂ.ಗಳನ್ನು ಮುಟ್ಟುವ ನಿರೀಕ್ಷೆಯಿದೆ. ಈ ಹೊತ್ತಿಗೆ ಆನ್‌ಲೈನ್ ಆಹಾರ ವಿತರಣೆಯು ಒಟ್ಟಾರೆ ಮಾರುಕಟ್ಟೆಗೆ ಸುಮಾರು 20% ನಷ್ಟು ಕೊಡುಗೆ ನೀಡುವ ನಿರೀಕ್ಷೆಯಿದೆ. ಇದು ಆಹಾರ ಪದ್ಧತಿಯಲ್ಲಿ ಸಾಂಸ್ಕೃತಿಕ ಪರಿವರ್ತನೆಯನ್ನು ಸೂಚಿಸುತ್ತದೆ. ಒಂದು ಕಾಲದಲ್ಲಿ ಸಂದರ್ಭಗಳಿಗೆ ಮಾತ್ರ ಮೀಸಲಾಗಿದ್ದು, ಈಗ ದೈನಂದಿನ ಪರಿಪಾಠವಾಗಿ ಬದಲಾಗಿದೆ.

    ಆರೋಗ್ಯದ ಮೇಲಾಗುತ್ತಿರೋ ಎಫೆಕ್ಟ್ ಏನು?
    ಆನ್‌ಲೈನ್ ಫುಡ್ ಆರ್ಡರ್ ಪ್ರವೃತ್ತಿಯಿಂದ ಜನರ ಜೀವನಶೈಲಿಯಲ್ಲಿ ಬದಲಾವಣೆಯಾಗಿದೆ. ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಮನೆಯಲ್ಲೇ ಆರೋಗ್ಯಕರ ಅಡುಗೆ ತಯಾರಿಸುವ ಪರಿಪಾಠವೂ ಇಲ್ಲವಾಗಿದೆ. ಆರೋಗ್ಯಕರವಲ್ಲದ ಹೊರಗಡೆಯ ರುಚಿಕರ ಆಹಾರ ಮತ್ತು ಜಂಕ್‌ಫುಡ್‌ಗಳಿಗೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅಧಿಕ ತೂಕ, ಬೊಜ್ಜು ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗುತ್ತಿದ್ದಾರೆಂದು ಅಧ್ಯಯನಗಳು ತಿಳಿಸಿವೆ. 2024ರಲ್ಲಿ ಚೀನಾ ಅಧ್ಯಯನವೊಂದನ್ನು ನಡೆಸಿತು. ಆನ್‌ಲೈನ್‌ನಲ್ಲಿ ಹೆಚ್ಚಾಗಿ ಫುಡ್ ಆರ್ಡರ್ ಮಾಡಿ ಸೇವಿಸುವವರಲ್ಲಿ ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಕುಳಿತಲ್ಲೇ ತಮಗೆ ಬೇಕಾದ್ದನ್ನು ಸುಲಭವಾಗಿ ಆರ್ಡರ್ ಮಾಡುತ್ತಾರೆ. ಇದರಿಂದ ಅತಿಯಾಗಿ ತಿನ್ನುವ ಹವ್ಯಾಸವೂ ರೂಢಿಯಾಗಿದೆ. ಹೆಚ್ಚಿನ ಕ್ಯಾಲೋರಿ ಇರುವ ತಿನಿಸುಗಳನ್ನೇ ಆಯ್ಕೆ ಮಾಡುತ್ತಾರೆ. ಪೌಷ್ಟಿಕತೆಗೆ ಬದಲಾಗಿ ಸಂಸ್ಕರಿಸಿದ ಆಹಾರಗಳನ್ನೇ ಹೆಚ್ಚಾಗಿ ಆರ್ಡರ್ ಮಾಡುತ್ತಾರೆ. ಹೀಗಾಗಿ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

    ‘ಕಳಪೆ ಆಹಾರ ಪದ್ಧತಿಗಳು: ಭಾರತದಲ್ಲಿ ಆನ್‌ಲೈನ್ ಫುಡ್ ಆರ್ಡರ್ ಕಡೆಗಿನ ಆಕರ್ಷಣೆ’ ಎಂಬ ಶೀರ್ಷಿಕೆಯಡಿ 2021 ರಲ್ಲಿ ಅಧ್ಯಯನ ನಡೆಸಲಾಗಿತ್ತು. ಜಂಕ್‌ಫುಡ್‌ನ್ನು ಹೆಚ್ಚಾಗಿ ಆರ್ಡರ್ ಮಾಡಿ ಸೇವಿಸುತ್ತಿರುವುದೇ ಜನರಲ್ಲಿ ಬೊಜ್ಜು ಸಮಸ್ಯೆಗೆ ಕಾರಣವಾಗಿದೆ. ಸಕ್ಕರೆಯುಕ್ತ ಆಹಾರದ ಅತಿಯಾದ ಸೇವನೆಯು ಹಲ್ಲುಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಮನೆ ಆಹಾರ ಸೇವಿಸುವವರಲ್ಲಿ ಯಾವುದೇ ಅನಾರೋಗ್ಯ ತೊಂದರೆಗಳು ಕಂಡುಬಂದಿಲ್ಲ ಎಂಬುದನ್ನು ಅಧ್ಯಯನ ಬಹಿರಂಗಪಡಿಸಿದೆ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ, ಹೆಚ್ಚಿನ ಕ್ಯಾಲೊರಿ, ಪೋಷಕಾಂಶಗಳ ಕೊರತೆ ಮತ್ತು ಅಲ್ಟ್ರಾ-ಸಂಸ್ಕರಿಸಿದ ಆಹಾರವನ್ನೇ ಜನರು ಆರಿಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಅಮೆರಿಕನ್ ಅಧ್ಯಯನದ ವರದಿಯಲ್ಲಿ, ಹೆಚ್ಚು ಆರ್ಡರ್ ಮಾಡಿದ ಆಹಾರಗಳಲ್ಲಿ ‘ಚೀಸ್ ಬರ್ಗರ್ ಮತ್ತು ಫ್ರೈಸ್, ಪಿಜ್ಜಾ, ನ್ಯಾಚೋಸ್, ಚೀಸ್‌ಕೇಕ್, ಬೇಬಿ ಬ್ಯಾಕ್ ಹಂದಿ ಪಕ್ಕೆಲುಬು, ಚಿಕನ್ ಮತ್ತು ವೇಫಲ್ ಸ್ಲೈಡರ್‌ಗಳು ಇತ್ಯಾದಿಗಳಿವೆ. ಆನ್‌ಲೈನ್ ಸೇವೆಗಳಲ್ಲಿ ಆಹಾರದ ಗುಣಮಟ್ಟ, ಸುರಕ್ಷತೆ ಇರಲ್ಲ. ಆರ್ಡರ್ ಮಾಡಿ ಆಹಾರದೊಳಗೆ ಇಲಿ, ಹಲ್ಲಿ, ಜಿರಳೆ, ಹುಳ, ಪ್ಲಾಸ್ಟಿಕ್ ಕವರ್ ಮೊದಲಾದವು ಇವೆ ಎಂದು ಗ್ರಾಹಕರು ದೂರಿರುವ ಸಾಕಷ್ಟು ಪ್ರಕರಣಗಳು ಇದಕ್ಕೆ ನಿದರ್ಶನ.

    ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಇ-ಕಾಮರ್ಸ್ ಆಹಾರ ವೇದಿಕೆಗಳಿಗೆ ಕಠಿಣ ನಿಯಮಗಳನ್ನು ರೂಪಿಸಿದೆ. ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ಗಳ 70 ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, FSSAI ಎಲ್ಲಾ ರಶೀದಿಗಳು ಮತ್ತು ಇನ್‌ವಾಯ್ಸ್‌ಗಳಲ್ಲಿ ಪರವಾನಗಿ ಮತ್ತು ನೋಂದಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು, ಗೋದಾಮು ಮತ್ತು ಸಂಗ್ರಹಣಾ ಸೌಲಭ್ಯದ ವಿವರಗಳನ್ನು FoSCoS ಪೋರ್ಟಲ್‌ನಲ್ಲಿ ಬಹಿರಂಗಪಡಿಸಬೇಕು. ಎಲ್ಲಾ ಆಹಾರ ನಿರ್ವಾಹಕರು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣೀಕರಣ (FoSTaC) ಕ್ಕೆ ಒಳಗಾಗಬೇಕು, ಗೋದಾಮುಗಳನ್ನು ಪರವಾನಗಿ ನೀಡಬೇಕು ಮತ್ತು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶಿಸಿದೆ.

    ವೇಗದ ಜೀವನ.. ಕಾಯಿಲೆಗೆ ಆಹ್ವಾನ
    ನವಿ ಮುಂಬೈನ ಖಾರ್ಘರ್‌ನಲ್ಲಿರುವ ಮೆಡಿಕವರ್ ಆಸ್ಪತ್ರೆಯ ಡಯೆಟಿಕ್ಸ್ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಪಾಂಡಾ, ಆನ್‌ಲೈನ್ ಫುಡ್‌ ಆರ್ಡರ್‌ ಅಪ್ಲಿಕೇಶನ್‌ಗಳನ್ನು ತ್ವರಿತ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ, ಅವುಗಳ ವ್ಯಾಪಕ ಬಳಕೆಯು ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜು, ಮಧುಮೇಹ ಮತ್ತು ಜೀವನಶೈಲಿ-ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಫುಡ್‌ ಡೆಲಿವರಿ ಪ್ಲಾಟ್‌ಫಾರ್ಮ್‌ಗಳು ಅಲ್ಟ್ರಾ-ಸಂಸ್ಕರಿಸಿದ ಆಹಾರವನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ. ಹೆಚ್ಚುತ್ತಿರುವ ಬೊಜ್ಜಿಗೆ ಅವುಗಳ ಕೊಡುಗೆ ಗಣನೀಯವಾಗಿದೆ. ಹಾಗಂತ, ಈ ಅಪ್ಲಿಕೇಶನ್‌ಗಳ ಮೇಲೆ ದೂಷಣೆ ಸರಿಯಲ್ಲ. ಜೀವನಶೈಲಿ ಆಯ್ಕೆಗಳು, ಆಹಾರ ಪದ್ಧತಿ ಮತ್ತು ವೈಯಕ್ತಿಕ ದಿನಚರಿ ಸಹ ಪ್ರಮುಖ ಪಾತ್ರವಹಿಸುತ್ತವೆ. ಹಠಾತ್‌ ನಿರ್ಧಾರ, ಬಾಯಿಚಪಲ ಮೊದಲಾದ ಕಾರಣಗಳು ಸಾಮಾನ್ಯವಾಗಿ ಜನರಿಗೆ ಹಸಿವಿಲ್ಲದಿದ್ದರೂ ತಿನ್ನಲು ಪ್ರೇರೇಪಿಸುತ್ತವೆ ಎಂದು ತಿಳಿಸಿದ್ದಾರೆ. ಫುಡ್‌ ಡೆಲಿವರಿಗೆ ಅಪ್ಲಿಕೇಶನ್‌ಗಳಿಂದ ನಿರಂತರವಾಗಿ ತಿನಿಸುಗಳು ಮತ್ತು ರಿಯಾಯಿತಿಗೆ ಸಂಬಂಧಿಸಿದ ಸಂದೇಶಗಳು ಮೊಬೈಲ್‌ಗೆ ಬರುತ್ತಿರುತ್ತವೆ. ಅದನ್ನು ನೋಡಿ ತಿನ್ನಲು ಆಸೆ ಪಡುವವರೇ ಹೆಚ್ಚು. ತಕ್ಷಣ ಬುಕ್‌ ಮಾಡಿ ಆರ್ಡರ್‌ ಪಡೆಯುವವರು ಹೆಚ್ಚಾಗಿದ್ದಾರೆ.

    ಈ ರೀತಿಯ ಆಕರ್ಷಣೆ ತಿನ್ನಲು ಹಸಿವಿಲ್ಲದಿದ್ದರೂ ತಿನ್ನುವಂತೆ ಮಾಡುತ್ತದೆ. ಇದನ್ನು ಜನರು ಮಿತಿಗೊಳಿಸಬೇಕು. ಪ್ರಜ್ಞಾಪೂರ್ವಕ ಆಯ್ಕೆಗಳು ಇರಬೇಕು. ಆಹಾರವನ್ನು ಸೇವಿಸುವ ಮೊದಲು ಅದು ಸುರಕ್ಷಿತ, ಆರೋಗ್ಯಕರ ಮತ್ತು ಪೌಷ್ಟಿಕಾಂಶಕ್ಕೆ ಸೂಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಲೇಬಲ್ ಅನ್ನು ಎಚ್ಚರಿಕೆಯಿಂದ ಓದುವುದು ಮತ್ತು ಮಾರ್ಕೆಟಿಂಗ್ ಒತ್ತಡಗಳನ್ನು ವಿರೋಧಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಜನರು ಆರೋಗ್ಯಕರ ಆಯ್ಕೆಗಳಿಗೆ ಒತ್ತು ನೀಡಬೇಕು. ಸರಿಯಾದ ಆಯ್ಕೆಗಳನ್ನು ಮಾಡಬೇಕು.

  • ಗಾಜಾದಲ್ಲಿ ಇಸ್ರೇಲ್‌ ಮತ್ತೆ ದಾಳಿ – 10 ದಿನಗಳಲ್ಲಿ 300 ಮಕ್ಕಳು ಸಾವು

    ಗಾಜಾದಲ್ಲಿ ಇಸ್ರೇಲ್‌ ಮತ್ತೆ ದಾಳಿ – 10 ದಿನಗಳಲ್ಲಿ 300 ಮಕ್ಕಳು ಸಾವು

    ಗಾಜಾ: ಇಸ್ರೇಲ್‌ ಮತ್ತೆ ದಾಳಿ ಆರಂಭಿಸಿದ್ದು, ಗಾಜಾದ ಪ್ಯಾಲೆಸ್ಟೀನಿಯನ್‌ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ 322 ಮಕ್ಕಳು ಸಾವನ್ನಪ್ಪಿದ್ದಾರೆ. 609 ಮಕ್ಕಳು ಗಾಯಗೊಂಡಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.

    ಮಾ.23 ರಂದು ದಕ್ಷಿಣ ಗಾಜಾದಲ್ಲಿರುವ ಅಲ್ ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ, ಗಾಯಗೊಂಡ ಮಕ್ಕಳೂ ಈ ಅಂಕಿ ಅಂಶಗಳಲ್ಲಿ ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮಾಹಿತಿ ನೀಡಿದೆ.

    ಈ ಮಕ್ಕಳಲ್ಲಿ ಹೆಚ್ಚಿನವರು ಸ್ಥಳಾಂತರಗೊಂಡು ತಾತ್ಕಾಲಿಕ ಡೇರೆಗಳು, ಹಾನಿಗೊಳಗಾದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.

    ಹಮಾಸ್ ಜೊತೆಗಿನ ಸುಮಾರು ಎರಡು ತಿಂಗಳ ಯುದ್ಧ ವಿರಾಮವನ್ನು ಕೊನೆಗೊಳಿಸಿದ ಇಸ್ರೇಲ್, ಮಾ.18 ರಂದು ಗಾಜಾದ ಮೇಲೆ ತೀವ್ರವಾದ ಬಾಂಬ್ ದಾಳಿಯನ್ನು ಪುನರಾರಂಭಿಸಿತು.

    ಸುಮಾರು 18 ತಿಂಗಳ ಯುದ್ಧದ ನಂತರ, 15,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. 34,000 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

  • ಆಫ್ಘನ್‌ನಲ್ಲಿ ಭೂಕಂಪನ: ಸಾವಿನ ಸಂಖ್ಯೆ 1,150ಕ್ಕೆ ಏರಿಕೆ, 3 ಸಾವಿರ ಮನೆಗಳು ನಾಶ

    ಆಫ್ಘನ್‌ನಲ್ಲಿ ಭೂಕಂಪನ: ಸಾವಿನ ಸಂಖ್ಯೆ 1,150ಕ್ಕೆ ಏರಿಕೆ, 3 ಸಾವಿರ ಮನೆಗಳು ನಾಶ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಈಚೆಗಷ್ಟೇ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,150ಕ್ಕೆ ಏರಿಕೆಯಾಗಿದೆ. 6.1 ತೀವ್ರತೆಯ ಭೂಕಂಪದಿಂದಾಗಿ ಸಾವಿರಾರು ಮಂದಿ ಆಶ್ರಯ ಕಳೆದುಕೊಂಡಿದ್ದು ಸುಮಾರು 3,000 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. 1.18 ಲಕ್ಷ ಮಂದಿ ಮಕ್ಕಳು ಅಪಾಯಕ್ಕೆ ಸಿಲುಕಿದ್ದಾರೆ.

    ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿಯು 770 ಸಾವುಗಳನ್ನು ಅಂದಾಜಿಸಿದೆ. ಆದರೆ ಯುನಿಸೆಫ್ ಅಫ್ಘಾನಿಸ್ತಾನ ಪ್ರತಿನಿಧಿಯು ಸಾವಿನ ಸಂಖ್ಯೆ 1,036 ಎಂದು ಅಂದಾಜಿಸಿದ್ದಾರೆ. ವಿಪತ್ತು ಸಚಿವಾಲಯದ ವಕ್ತಾರ ಮೊಹಮ್ಮದ್ ನಾಸಿಮ್ ಹಕ್ಕಾನಿ 2,000 ಮಂದಿ ಗಾಯಗೊಂಡಿದ್ದು ಸಾವಿರಾರು ಮನೆಗಳು ನಾಶವಾಗಿವೆ ಎಂದು ಆಫ್ಘನ್‌ನ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

    ಕಟ್ಟಡಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗ್ರಾಮಸ್ಥರು ಕೈಯಿಂದಲೇ ಅವಶೇಷಗಳನ್ನು ಹೊರತೆಗೆಯುತ್ತಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ಗಯಾನ್ ಜಿಲ್ಲೆಯಲ್ಲಿ ಕನಿಷ್ಠ 1,000 ಮನೆಗಳಿಗೆ ಹಾನಿಯಾಗಿದ್ದು, ಖೋಸ್ಟ್ ಪ್ರಾಂತ್ಯದ ಸ್ಪೆರೆ ಜಿಲ್ಲೆಯಲ್ಲಿ 800 ಮನೆಗಳು ನೆಲಸಮಗೊಂಡಿವೆ.

    ಜರ್ಮನಿ, ನಾರ್ವೆ ಸೇರಿದಂತೆ ಇತರ ದೇಶಗಳು ವಿಶ್ವಸಂಸ್ಥೆಯ ಮೂಲಕ ಅಫ್ಘಾನಿಸ್ತಾನಕ್ಕೆ ಸಹಾಯಹಸ್ತ ಚಾಚುವುದಾಗಿ ಘೋಷಿಸಿವೆ. ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಅಫ್ಫಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪವು ಲಕ್ಷಾಂತರ ಮಕ್ಕಳನ್ನು ಅಪೌಷ್ಟಿಕತೆಯ ಅಪಾಯಕ್ಕೆ ದೂಡಲಿದೆ ಎಂದು ಹೇಳಲಾಗುತ್ತಿದೆ.

    Live Tv

  • ಪಾಕ್‍ಗೆ ಮತ್ತೆ ಮುಖಭಂಗ – ಪ್ರಿಯಾಂಕ ಬೆನ್ನಿಗೆ ನಿಂತ ಯುನಿಸೆಫ್

    ಪಾಕ್‍ಗೆ ಮತ್ತೆ ಮುಖಭಂಗ – ಪ್ರಿಯಾಂಕ ಬೆನ್ನಿಗೆ ನಿಂತ ಯುನಿಸೆಫ್

    ನವದೆಹಲಿ: ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ(ಯುನಿಸೆಫ್) ಸೌಹಾರ್ದಯುತ ರಾಯಭಾರಿಯಾಗಿರುವ ಪ್ರಿಯಾಂಕ ಚೋಪ್ರಾ ವಿರುದ್ಧ ಪಾಕಿಸ್ತಾನ ನೀಡಿದ್ದ ದೂರನ್ನು ಯುನಿಸೆಫ್ ತಳ್ಳಿ ಹಾಕಿದೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರೀ ಮುಖಭಂಗವಾಗಿದೆ.

    ಪ್ರಿಯಾಂಕ ಚೋಪ್ರಾ ಅವರು ಕಾಶ್ಮೀರದ ಬಗ್ಗೆ ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರದ ಕುರಿತು ತಮ್ಮ ನಿಲುವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಹಾಗಾಗಿ ಪ್ರಿಯಾಂಕರನ್ನು ರಾಯಭಾರಿ ಸ್ಥಾನದಿಂದ ತೆಗೆಯುವಂತೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು.

    ಗುರುವಾರ ಈ ವಿಚಾರವಾಗಿ ಮಾತನಾಡಿರುವ, ಯುನಿಸೆಫ್‍ನ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಮಾಧ್ಯಮ ವಕ್ತಾರ ಸ್ಟೀಫನ್ ಡುಜಾರಿಕ್ ಅವರು, ಯುನಿಸೆಫ್ ಗುಡ್‍ವಿಲ್ ರಾಯಭಾರಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತನಾಡುವಾಗ ರಾಯಭಾರಿಗಳು ಅವರ ಆಸಕ್ತಿ ಅಥವಾ ಕಾಳಜಿಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿರುತ್ತಾರೆ. ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ನಾವು ಆಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ರಾಯಭಾರಿಗಳ ವೈಯಕ್ತಿಕ ವಿಚಾರಗಳು ಮತ್ತು ಅಭಿಪ್ರಾಯಗಳ ಮಧ್ಯೆ ಯೂನಿಸೆಫ್ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅವರು ಯೂನಿಸೆಫ್ ಪರವಾಗಿ ಮಾತನಾಡುವಾಗ ಯುನಿಸೆಫ್‍ನ ಸಾಕ್ಷಿ ಆಧಾರಿತ ಮತ್ತು ನಿಷ್ಪಕ್ಷಪಾತವಾದ ನಿಲುವುಗಳಿಗೆ ಅವರು ಬದ್ಧರಾಗಿರಬೇಕು. ಯುನಿಸೆಫ್ ರಾಯಭಾರಿಗಳು ಮಕ್ಕಳ ಹಕ್ಕನ್ನು ಉತ್ತೇಜಿಸುವ ನಿಟ್ಟಿನಲ್ಲಿ ತಮ್ಮ ಸಮಯ ಮತ್ತು ಸಾರ್ವಜನಿಕ ಬದುಕಿನಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

    ಪಾಕಿಸ್ತಾನದ ಆರೋಪವೇನು?
    ಪ್ರಿಯಾಂಕ ಚೋಪ್ರಾ ಅವರು ಕಾಶ್ಮೀರದ ಬಗ್ಗೆ ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರದ ಕುರಿತು ತಮ್ಮ ನಿಲುವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಭಾರತೀಯ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ನ್ಯೂಕ್ಲಿಯರ್ ಬೆದರಿಕೆಯನ್ನು ಬೆಂಬಲಿಸಿದ್ದಾರೆ. ಈ ಎಲ್ಲ ವಿಚಾರಗಳು ಶಾಂತಿ ಹಾಗೂ ಸದ್ಭಾವನೆಗೆ ವಿರುದ್ಧವಾಗಿವೆ. ಅಲ್ಲದೆ ವಿಶ್ವಸಂಸ್ಥೆಯ ನಿಯಮಗಳಿಗೂ ವಿರುದ್ಧವಾಗಿವೆ. ಹೀಗಾಗಿ ಪ್ರಿಯಾಂಕ ಚೋಪ್ರಾ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಾಕ್ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದು ಒತ್ತಾಯ ಮಾಡಿದ್ದರು.

    ಫೆ.26ರಂದು ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ನಂತರ ಅದೇ ದಿನ ಪ್ರಿಯಾಂಕ ಚೋಪ್ರಾ ಜೈ ಹಿಂದ್ #IndianArmedForces  ಬಳಸಿ ಭಾರತದ ಧ್ವಜ ಮತ್ತು ಕೈ ಮುಗಿಯುತ್ತಿರುವ ಎಮೋಜಿ ಹಾಕಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಆಕ್ಷೇಪಿಸಿ ಪಾಕಿಸ್ತಾನ ಯುನಿಸೆಫ್ ಮುಂದೆ ದೂರು ನೀಡಿತ್ತು.

  • ಇಂದಿನ ಇಂಡೋ-ಅಂಗ್ಲೋ ಮ್ಯಾಚ್ ವಿಶ್ವಕಪ್‍ನಲ್ಲೇ ಅತ್ಯಂತ ವಿಶಿಷ್ಟ ಪಂದ್ಯ

    ಇಂದಿನ ಇಂಡೋ-ಅಂಗ್ಲೋ ಮ್ಯಾಚ್ ವಿಶ್ವಕಪ್‍ನಲ್ಲೇ ಅತ್ಯಂತ ವಿಶಿಷ್ಟ ಪಂದ್ಯ

    ಲಂಡನ್: ಇಂದು ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆಯುತ್ತಿರುವ ಮ್ಯಾಚ್ ವಿಶ್ವಕಪ್‍ನಲ್ಲೇ ಅತ್ಯಂತ ವಿಶಿಷ್ಟ ಪಂದ್ಯವಾಗಿದೆ. ಇದಕ್ಕೆ ಕಾರಣ ಇವತ್ತಿನ ಪಂದ್ಯವನ್ನು ಮಕ್ಕಳಿಗೆ ಅರ್ಪಣೆ ಮಾಡಲಾಗಿದೆ.

    ಹೌದು ಇಂದಿನ ಪಂದ್ಯವನ್ನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯೂನಿಸೆಫ್) ನೂತನವಾಗಿ ಹಮ್ಮಿಕೊಂಡಿರುವ ಮಕ್ಕಳಿಗಾಗಿ ಒಂದು ದಿನ ಎಂಬ ಕಾರ್ಯಕ್ರಮದ ಅಂಗವಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಆಡಲಿವೆ.

    ಈ ಕಾರ್ಯಕ್ರಮದ ಪ್ರಯುಕ್ತ ಮೂರು ಮಕ್ಕಳನ್ನು “ಆಟದ ಮೈದಾನದ ಪಂಡಿತರು” ಎಂದು ನೇಮಕ ಮಾಡಿದ್ದು ಮೈದಾನದ ಹೊರಗಡೆಯ ಎಲ್ಲ ಕರ್ತವ್ಯವನ್ನು ಮಕ್ಕಳಿಂದ ಆರಂಭಿಸುವುದು ಈ ಪಂದ್ಯದ ಮಗದೊಂದು ವಿಶಿಷ್ಟವಾಗಿದೆ. ಟಾಸ್‍ನಿಂದ ಹಿಡಿದು ಪಂದ್ಯದ ಬಳಿಕ ನಡೆಯುವ ಆಟಗಾರರ ಸುದ್ದಿಗೋಷ್ಠಿಯನ್ನು ಕೂಡ ಮಕ್ಕಳ ಕೈಯಲ್ಲೇ ಮಾಡಿಸಲು ಐಸಿಸಿ ಮುಂದಾಗಿದೆ.

    ಈ ಪಂದ್ಯದಲ್ಲಿ ಮಕ್ಕಳ ಕೈಯಲ್ಲಿ ನಿರೂಪಣೆ ಮತ್ತು ಕ್ರೀಡಾಂಗಣದಲ್ಲಿ ಪ್ರಕಟಣೆ ಮಾಡಲು ಅನುಮತಿ ನೀಡಲಾಗಿದೆ. ಜಗತ್ತಿನ ಪ್ರತಿಯೊಂದು ಮಗುವಿಗೂ ಉತ್ತಮ ಜಗತ್ತನ್ನು ನಿರ್ಮಾಣ ಮಾಡುವುದು ಇದರ ಹಿಂದಿನ ಧ್ಯೇಯವಾಗಿದೆ. ಅಲ್ಲದೆ ಆರೋಗ್ಯ ಪಾಠದ ಜೊತೆಗೆ ಕ್ರಿಕೆಟ್ ಆಡಲು ಮಕ್ಕಳಿಗೆ ನೆರವಾಗಲಿದೆ.

    ಈ ವಿಶೇಷ ಪಂದ್ಯದಲ್ಲಿ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್‍ನ ಲೆಜೆಂಡ್‍ಗಳು ಭಾಗವಹಿಸಲಿದ್ದಾರೆ. ಇಂದು ಬರ್ಮಿಂಗ್ಹ್ಯಾಮ್‍ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ 24,000 ಜನ ಪ್ರೇಕ್ಷಕರು ಇಂದು ಪಂದ್ಯ ವೀಕ್ಷಣೆ ಮಾಡಲಿದ್ದಾರೆ.

    ಈ ಪಂದ್ಯದ ಅಭಿಯಾನದಲ್ಲಿ ಸಂಗ್ರಹವಾಗುವ ಹಣವನ್ನು ಯುನಿಸಿಫ್ ವಿಶ್ವದಾದ್ಯಂತ ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿನ ಮಕ್ಕಳಿಗಾಗಿ ಮೀಸಲು ಇಡಲು ತೀರ್ಮಾನಿಸಿದೆ. ಐಸಿಸಿ ಪ್ರಕಾರ ಮಕ್ಕಳಿಗೆ ಕಲಿಯಲು, ಆಟವಾಡಲು ಮತ್ತು ಆರೋಗ್ಯವಾಗಿರಲು ಅವಕಾಶ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದೆ.

    ಈ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಐಸಿಸಿ ಸಿಇಒ ಡೇವಿಡ್ ರಿಚರ್ಡ್‍ಸನ್, ಐಸಿಸಿ ಮತ್ತು ಯುನಿಸಿಫ್ ಸುದೀರ್ಘ ಸಂಬಂಧವನ್ನು ಹೊಂದಿದೆ. ಇಂದು ಅವರ ಜೊತೆ ಮಕ್ಕಳಿಗಾಗಿ ಒಂದು ದಿನ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿಯಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮೈದಾನದಲ್ಲಿ ಪ್ರಪಂಚದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಭಾಗಿಯಾಗುತ್ತಾರೆ. ಮಕ್ಕಳು ಆಟವಾಡಲು ಕಲಿಯಲು ಮತ್ತು ಆರೋಗ್ಯಕಾರವಾಗಿರಲು ಈ ಕಾರ್ಯಕ್ರಮ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

  • ಅಂತರ್ಜಲ ಮಾಲಿನ್ಯ ಕಡಿಮೆಗೊಳಿಸಿದ ಸ್ವಚ್ಛತಾ ಅಭಿಯಾನ

    ಅಂತರ್ಜಲ ಮಾಲಿನ್ಯ ಕಡಿಮೆಗೊಳಿಸಿದ ಸ್ವಚ್ಛತಾ ಅಭಿಯಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದಿಂದ ಭಾರತದಲ್ಲಿ ಅಂತರ್ಜಲ ಮಾಲಿನ್ಯ ಕಡಿಮೆಯಾಗಿದೆ ಎಂದು ಯುನಿಸೆಫ್ ಅಧ್ಯಯನ ಮಾಡಿ ವರದಿ ನೀಡಿದೆ.

    ಹೌದು, ಅಕ್ಟೋಬರ್ 2, 2014ರ ಗಾಂಧಿ ಜಯಂತಿಯಂದು ಮೋದಿ ಸರ್ಕಾರ ಆರಂಭಿಸಿದ `ಸ್ವಚ್ಛ ಭಾರತ್ ಅಭಿಯಾನ’ಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಯುನಿಸೆಫ್ ಮತ್ತು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಜಂಟಿಯಾಗಿ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಅಧ್ಯಯನ ನಡೆಸಿದೆ. ಈ ರಾಜ್ಯಗಳಲ್ಲಿ ಸಂಗ್ರಹಿಸಿದ ಅಂತರ್ಜಲ ಮಾದರಿಗಳ ಮೇಲೆ ಅಧ್ಯಯನ ನಡೆಸಿರುವ ಯುನಿಸೆಫ್ ಈ ವರದಿ ನೀಡಿದೆ. ಶೌಚಕ್ಕಾಗಿ ಬಯಲುಗಳನ್ನು ಆಧರಿಸಿರುವ ಗ್ರಾಮಗಳಿಗೆ ಹೋಲಿಸಿದರೆ ಬಯಲು ಶೌಚ ಮುಕ್ತ ಗ್ರಾಮಗಳಲ್ಲಿ 11.25 ಪಟ್ಟು ಹೆಚ್ಚು ಅಂತರ್ಜಲ ಮಾಲಿನ್ಯ ಕಡಿಮೆಯಾಗಿದೆ. ಹೀಗಾಗಿ ಸ್ವಚ್ಛ ಭಾರತದ ಅಭಿಯಾನದಿಂದ ದೇಶದಲ್ಲಿ ಅಂತರ್ಜಲ ಮಾಲಿನ್ಯ ಕಡಿಮೆಯಾಗುತ್ತಿದೆ ಎಂದು ಯುನಿಸೆಫ್ ತಿಳಿಸಿದೆ.

    ಸ್ವಚ್ಛತಾ ಅಭಿಯಾನದ ಭಾಗವಾಗಿ ಬಯಲು ಶೌಚಮುಕ್ತ ರಾಷ್ಟ್ರದ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಹಲವು ಗ್ರಾಮಗಳಲ್ಲಿ ಸರ್ಕಾರ ಶೌಚಾಲಯ ನಿರ್ಮಿಸಿ ಅದರ ಬಗ್ಗೆ ಜಾಗೃತಿ ಮೂಡಿಸಿದೆ.

    ಅಧ್ಯಯನ ಪ್ರಕಾರ, ಮಾದರಿಗಳನ್ನು ಸಂಗ್ರಹಿಸಿದ ಗ್ರಾಮೀಣ ಪ್ರದೇಶಗಳಲ್ಲಿ ಮೊದಲು ಬಯಲು ಶೌಚ ಸಾಮಾನ್ಯವಾಗಿತ್ತು. ಆದರೆ ಸ್ವಚ್ಛ ಭಾರತ ಅಭಿಯಾನದ ನಂತರ ಈ ಗ್ರಾಮೀಣ ಪ್ರದೇಶಗಳು ಬಯಲು ಶೌಚ ಮುಕ್ತ ಪ್ರದೇಶವಾಗಿರುವುದನ್ನು ಯುನಿಸೆಫ್ ವರದಿಯಲ್ಲಿ ಉಲ್ಲೇಖಿಸಿದೆ.

    ಕೇಂದ್ರದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವರದಿ ಬಗ್ಗೆ ಪ್ರತಿಕ್ರಿಯಿಸಿ, ಸ್ವಚ್ಛತೆ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಬಯಲು ಶೌಚ ಮುಕ್ತ ಪ್ರದೇಶಗಳು ತನ್ನಿಂದ ತಾನೇ ರೋಗ ಮುಕ್ತ ಪ್ರದೇಶಗಳಾಗುತ್ತವೆ. 2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‍ಓ) ಅಧ್ಯಯನವು, ಭಾರತ ಬಯಲು ಶೌಚ ಮುಕ್ತವಾದರೆ ಸುಮಾರು 3 ಲಕ್ಷ ಮಂದಿಯ ಜೀವಗಳು ಉಳಿಯಬಹುದೆಂದು ತಿಳಿಸಿತ್ತು ಎಂದು ಹೇಳಿದರು.

  • ಯುನಿಸೆಫ್ ಯುವ ರಾಯಭಾರಿಯಾಗಿ ಹಿಮದಾಸ್ ಆಯ್ಕೆ

    ಯುನಿಸೆಫ್ ಯುವ ರಾಯಭಾರಿಯಾಗಿ ಹಿಮದಾಸ್ ಆಯ್ಕೆ

    ನವದೆಹಲಿ: ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ(ಯುನಿಸೆಫ್) ಭಾರತದ ಪ್ರಪ್ರಥಮ ಯುವ ರಾಯಭಾರಿಯಾಗಿ ಓಟಗಾರ್ತಿ ಹಿಮದಾಸ್ ಆಯ್ಕೆಯಾಗಿದ್ದಾರೆ.

    ಈ ಕುರಿತು ಬುಧವಾರ ಯುನಿಸೆಫ್‍ನ ತನ್ನ ಟ್ವಿಟ್ಟರ್ ಖಾತೆಯಲ್ಲಿ, ಇವರೇ ನಮ್ಮ ಭಾರತದ ಪ್ರಪ್ರಥಮ ಯುವ ರಾಯಭಾರಿಯೆಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ನವೆಂಬರ್ 14ರ ಮಕ್ಕಳ ದಿನಾಚರಣೆಯಂದೇ ಹಿಮದಾಸ್ ಅವರನ್ನು ಯೂತ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದು ವಿಶೇಷವಾಗಿದೆ.

    ಈ ಕುರಿತು ತನ್ನ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಹಿಮದಾಸ್, ಯುನಿಸೆಫ್ ಇಂಡಿಯಾದ ಪ್ರಪ್ರಥಮ ಯುವ ರಾಯಭಾರಿಯಾಗಿ ನನ್ನನ್ನು ಗೌರವಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುವ ಮೂಲಕ ಅವರ ಕನಸುಗಳನ್ನು ನನಸಾಗುವಂತೆ ಮಾಡುವಲ್ಲಿ ಶ್ರಮಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಜುಲೈ 12 ರಂದು ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವವನ್ನು ಹೆಚ್ಚಿಸಿದ್ದರು. 18 ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಇದಲ್ಲದೇ ಆಗಸ್ಟ್ 26ರಂದು ಇಂಡೋನೇಷ್ಯಾದಲ್ಲಿ ನಡೆದ 18 ನೇ ಏಷ್ಯನ್ ಗೇಮ್ಸ್‍ನ 400 ಮೀ ಓಟದ ಸ್ಫರ್ಧೆಯಲ್ಲಿ ಬೆಳ್ಳಿಯ ಪದಕವನ್ನು ಗೆದ್ದಿದ್ದರು.

    ಹಿಮದಾಸ್ ಅವರು ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದರು. ತನ್ನ ಮಿಂಚಿನ ಓಟದ ಮೂಲಕ ಭಾರತೀಯರ ಮನಸ್ಸು ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

    https://www.facebook.com/AFIIndiaofficial/videos/1716978178421226/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews