Tag: ಯುದ್ಧವಿಮಾನಗಳು

  • ಅಂದು ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ – ಇಂದು ಅಮೆರಿಕದ ವಿರುದ್ಧ ಸಿಟ್ಟು

    ಅಂದು ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ – ಇಂದು ಅಮೆರಿಕದ ವಿರುದ್ಧ ಸಿಟ್ಟು

    ಕಾಬೂಲ್: ಅಫ್ಘಾನಿಸ್ತಾನವನ್ನು ತೊರೆದ ಅಮೆರಿಕ ಸೇನೆಯ ವಿರುದ್ಧ ತಾಲಿಬಾನ್ ಉಗ್ರರು ಈಗ ಸಿಟ್ಟಾಗಿದ್ದಾರೆ.

    ಹೌದು. ಆಗಸ್ಟ್ 31 ರಂದು ಅಫ್ಘಾನಿಸ್ತಾನವನ್ನು ಅಮೆರಿಕದ ಯೋಧರು ತೊರೆದಾಗ ತಾಲಿಬಾನಿ ಉಗ್ರರು ಗಾಳಿಯಲ್ಲಿ ಗುಂಡು ಹೊಡೆದು, ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದ್ದರು. ಆದರೆ ಈಗ ಅಮೆರಿಕ ಸೇನೆ ವಿರುದ್ಧ ಸಿಟ್ಟಾಗಿದ್ದಾರೆ ಎಂದು ವರದಿಯಾಗಿದೆ.

    ತಾಲಿಬಾನಿಗಳು ಅಮೆರಿಕದ ವಿರುದ್ಧ ಸಿಟ್ಟಾಗಲು ಕಾರಣವಿದೆ. ಅಮೆರಿಕದ ಸೈನಿಕರು ಕಾಬೂಲಿನಿಂದ ನಿರ್ಗಮಿಸುವ ಮೊದಲು ಅಫ್ಘಾನಿಸ್ತಾನದಲ್ಲಿದ್ದ ಮಿಲಿಟರಿ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳನ್ನು ನಿಷ್ಕ್ರಿಯಗೊಳಿಸಿದ್ದರು. ಈ ವಿಚಾರಕ್ಕೆ ತಾಲಿಬಾನಿ ಹೋರಾಟಗಾರರು ಸಿಟ್ಟಾಗಿದ್ದು,”ಅಮೆರಿಕ ವಿಶ್ವಾಸ ದ್ರೋಹ” ಮಾಡಿದೆ ಎಂದು ಹೇಳಿದ್ದಾರೆ.

    ಅಲ್ ಜಜೀರಾ ಸುದ್ದಿ ಸಂಸ್ಥೆ ತಾಲಿಬಾನಿ ಹೋರಾಟಗಾರರ ಹೇಳಿಕೆಯನ್ನು ಆಧಾರಿಸಿ ವರದಿ ಮಾಡಿದೆ.”ವಿಮಾನಗಳು, ಹೆಲಿಕಾಪ್ಟರ್ ಗಳನ್ನು ಹಾಗೆಯೇ ಬಿಟ್ಟು ಹೋಗಿದ್ದರೆ ಮುಂದಿನ ದಿನಗಳಲ್ಲಿ ಅದು ನಮ್ಮ ಉಪಯೋಗಕ್ಕೆ ಬರುತ್ತಿತ್ತು. ಇದು ರಾಷ್ಟ್ರೀಯ ಆಸ್ತಿ ಆಗುತ್ತಿತ್ತು. ಆದರೆ ಕಾಬೂಲ್‍ನಿಂದ ನಿರ್ಗಮಿಸುವ ಮೊದಲು ಅಮೆರಿಕನ್ನರು ಮಿಲಿಟರಿ ಹೆಲಿಕಾಪ್ಟರ್ ಗಳು ಮತ್ತು ವಿಮಾನಗಳನ್ನು ನಿಷ್ಕ್ರಿಯಗೊಳಿಸಿ ದ್ರೋಹ ಮಾಡಿದ್ದಾರೆ. ಇದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ” ಎಂದು ಸಿಟ್ಟು ಹೊರ ಹಾಕಿದ್ದಾರೆ.

    ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿ, ತಮ್ಮ ತಾಂತ್ರಿಕ ತಂಡಗಳು ವಿಮಾನ ನಿಲ್ದಾಣವನ್ನು ದುರಸ್ತಿ ಮತ್ತು ಸ್ವಚ್ಛ ಮಾಡುತ್ತಿವೆ. ಸದ್ಯಕ್ಕೆ ಕೆಲ ದಿನಗಳ ಕಾಲ ಪ್ರದೇಶಕ್ಕೆ ಜನರು ತೆರಳಬಾರದು ಎಂದು ಹೇಳಿದ್ದಾನೆ. ಇದನ್ನೂ ಓದಿ: ಶುಕ್ರವಾರದ ನಮಾಜ್ ಬಳಿಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ 

    ನಿಷ್ಕ್ರಿಯಗೊಳಿಸಿದ್ದ ಅಮೆರಿಕ:
    ಅಫ್ಘಾನಿಸ್ತಾನವನ್ನು ತೊರೆಯುವ ಮುನ್ನ ಮುನ್ನ ಅಮೆರಿಕ ಯೋಧರು ಹಲವು ಮಿಲಿಟರಿ ಉಪಕರಣಗಳನ್ನು ನಾಶ ಮಾಡಿ ತೆರಳಿದ್ದರು. ಈ ಮೂಲಕ ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿತ್ತು.

    ಕಾಬೂಲ್‍ನ ಹಮಿದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 73 ವಿಮಾನಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ವಿಮಾನದ ಕಾಕ್‍ಪಿಟ್ ಕಿಟಕಿಗಳನ್ನು ಧ್ವಂಸ ಮಾಡಲಾಗಿದೆ. ಟಯರ್ ಗಳಿಗೆ ಗುಂಡು ಹಾರಿಸಿ ಹಾಳು ಮಾಡಲಾಗಿದೆ. ಇದನ್ನೂ ಓದಿ: ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ – ಹೇಗಿರಲಿದೆ ಆಡಳಿತ ವ್ಯವಸ್ಥೆ?

    ಕಾಬೂಲ್ ವಿಮಾನ ನಿಲ್ದಾಣವನ್ನು ರಾಕೆಟ್, ಆರ್ಟಿಲರಿ ಹಾಗೂ ಮೊರ್ಟರ್ ದಾಳಿಯಿಂದ ರಕ್ಷಣೆ ಮಾಡಲು ಅಳವಡಿಸಲಾಗಿದ್ದ ಹೈಟೆಕ್ ರಾಕೆಟ್ ನಿರೋಧಕ ವ್ಯವಸ್ಥೆಯನ್ನೂ ನಿಷ್ಕ್ರಿಯಗೊಳಿಸಲಾಗಿದೆ. ಈ ವ್ಯವಸ್ಥೆಯೇ ಸೋಮವಾರ ಐಸಿಸ್ ನಡೆಸಿದ ಐದು ರಾಕೆಟ್‍ಗಳನ್ನು ಹಿಮ್ಮೆಟ್ಟಿಸಿತ್ತು.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅಮೆರಿಕದ ಕೇಂದ್ರ ಕಮಾಂಡ್ ಮುಖ್ಯಸ್ಥ ಜನರಲ್ ಕೆನ್ನೆಥ್ ಮೆಕ್‍ಕೆಂಜಿ, ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದ ವಿಮಾನಗಳು ಇನ್ನು ಮುಂದೆ ಹಾರುವುದಿಲ್ಲ. ಯಾರಿಂದಲೂ ಅವನ್ನು ಹಾರಿಸುವುದಕ್ಕೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದರು.

    ಅಮೆರಿಕ ಏನೆಲ್ಲ ಬಿಟ್ಟು ಹೋಗಿದೆ?
    150 ಯುದ್ಧ ವಿಮಾನಗಳು, 45 ಯುಎಚ್60 ಬ್ಲಾಕ್‍ಹಾಕ್ ಕಾಪ್ಟರ್, 21 ಎ29 ಟರ್ಬೊಟ್ರೂಪ್ ಹೆಲಿಕಾಪ್ಟರ್, 4 ಸಿ130 ಸರಕು ಸಾಗಣೆ ವಿಮಾನಗಳು, 50 ಎಂಡಿ530 ಹೆಲಿಕಾಪ್ಟರ್‍ಗಳು, 30 ಇತರೆ ವಿಮಾನಗಳು, 22,174 ಮಿಲಿಟರಿ ವಾಹನಗಳು ಬಿಟ್ಟುಹೋಗಿದೆ. ಇದರ ಜೊತೆ 3,50,000 ರೈಫಲ್‍ಗಳು, 64,000 ಮಶೀನ್ ಗನ್‍ಗಳು, 25,000 ಗ್ರೆನೇಡ್‍ಗಳನ್ನು ಸೈನಿಕರು ಬಿಟ್ಟು ಹೋಗಿದ್ದಾರೆ.