Tag: ಯಾರಿಗೆ ಯಾರುಂಟು

  • ಯಾರಿಗೆ ಯಾರುಂಟು: ತ್ರಿಕೋನ ಪ್ರೇಮದ ಮೋಹಕ ಬ್ರಹ್ಮಗಂಟು!

    ಯಾರಿಗೆ ಯಾರುಂಟು: ತ್ರಿಕೋನ ಪ್ರೇಮದ ಮೋಹಕ ಬ್ರಹ್ಮಗಂಟು!

    ಬೆಂಗಳೂರು: ಸಮ್ಮೋಹಕ ಹಾಡುಗಳಿಂದಲೇ ಮೆಲುವಾಗಿ ಪ್ರೇಕ್ಷಕರನ್ನು ತಲುಪಿಕೊಂಡಿದ್ದ ಯಾರಿಗೆ ಯಾರುಂಟು ಚಿತ್ರ ಬಿಡುಗಡೆಯಾಗಿದೆ. ಹಾಡುಗಳಷ್ಟೇ ಮಾಧುರ್ಯ ಹೊಂದಿರೋ ಕಥೆ, ಅದಕ್ಕೆ ಅಂಟಿಕೊಂಡಂತಿರೋ ಮನೋರಂಜನೆ, ಜೀವನಪ್ರೇಮದ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ತಣಿಸುತ್ತಲೇ ಗೆಲುವಿನ ಯಾನ ಆರಂಭಿಸಿದೆ.

    ನಿರ್ದೇಶಕ ಕಿರಣ್ ಗೋವಿ ಈ ಚಿತ್ರದ ಮೂಲಕ ಸೂಕ್ಷ್ಮವಾದ ಕಥಾ ಎಳೆಯೊಂದನ್ನು ತ್ರಿಕೋನ ಪ್ರೇಮದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿಯೇ ನಿರೂಪಿಸಿದ್ದಾರೆ. ಈ ಮೂಲಕವೇ ಯಾರಿಗೆ ಯಾರುಂಟು ವಿಭಿನ್ನವಾದ ಚಿತ್ರವೊಂದನ್ನು ನೋಡಿದ ತೃಪ್ತಿಯನ್ನು ನೋಡುಗರಲ್ಲಿ ಮೂಡಿಸುವಲ್ಲಿಯೂ ಸಫಲವಾಗಿದೆ.

    ಈ ಚಿತ್ರದ ನಾಯಕ ದೊಡ್ಡ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವಾತ. ಜಗತ್ತಿನ ಎಲ್ಲ ಲವಲವಿಕೆ, ಜೀವನೋತ್ಸಾಹವನ್ನೂ ತನ್ನೊಳಗೆ ತುಂಬಿಸಿಕೊಂಡಂಥಾ ವ್ಯಕ್ತಿತ್ವ ಆತನದ್ದು. ಇಂಥವನಿಗೆ ಸಾವೆಂಬುದು ಸನಿಹದಲ್ಲಿಯೇ ನಿಂತುಯ ಕಾಯುತ್ತಿರುತ್ತದೆ. ತನ್ನ ಆಯುಷ್ಯ ಮುಗಿಯುತ್ತಾ ಬಂದಿದೆ ಅಂತ ಅರಿವಾಗುತ್ತಲೇ ನಾಯಕನೊಳಗೆ ಅದಮ್ಯ ಆಸೆಯೊಂದು ಮೊಳಕೆಯೊಡೆಯುತ್ತೆ.

    ಓರ್ವ ಹುಡುಗಿಯನ್ನು ಉತ್ಕಟವಾಗಿ ಪ್ರೀತಿಸಿ ಆ ಖುಷಿಯಲ್ಲಿಯೇ ಕಣ್ಮುಚ್ಚಬೇಕೆಂಬುದು ಆತನ ಬಯಕೆ. ಮೇಲಿರೋ ದೇವರು ತನಗೆಂದೇ ಚೆಲುವೆಯೊಬ್ಬಳನ್ನು ಕಳಿಸುತ್ತಾನೆಂಬ ನಂಬಿಕೆಯೊಂದಿಗೆ ಜೀವಿಸೋ ಆತ ಮೂವರು ಹುಡುಗೀರ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಹಾಗೆ ಮೂರ್ಮೂರು ಪ್ರೀತಿ ಮೇಂಟೇನು ಮಾಡಲು ಕಾರಣವಾಗೋ ಅಂಶ ಯಾವುದು? ಅದರಲ್ಲಿ ನಾಯಕನಿಗೆ ಎದುರಾಗೋ ತೊಡಕುಗಳೇನು? ಆತ ಬದುಕುಳಿಯುತ್ತಾನಾ ಎಂಬುದು ನಿಜವಾದ ಕುತೂಹಲ. ಅದಕ್ಕೆ ಥೇಟರಿನಲ್ಲಿ ಮಜವಾದ ಉತ್ತರ ಕಾದಿದೆ.

    ನಾಯಕ ಪ್ರಶಾಂತ್ ಅವರದ್ದಿಲ್ಲಿ ಪ್ರಶಾಂತವಾದ ಪಾತ್ರ. ಈ ವರೆಗೂ ಮಾಸ್ ಪಾತ್ರಗಳಲ್ಲಿ ನಟಿಸಿದ್ದ ಅವರಿಲ್ಲಿ ಬೇರೆಯದ್ದೇ ಥರದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೃತಿಕಾ ರವೀಂದ್ರ ಕೂಡಾ ಚೆಂದೆದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿಉಕೆ ನಾಯಕಿಯರಾದ ಲೇಖಾ ಚಂದ್ರ ಮತ್ತು ಆದಿತಿ ಪಾತ್ರವೂ ನೆನಪಿಟ್ಟುಕೊಳ್ಳುವಂತಿದೆ. ಚೆಂದದ ದೃಷ್ಯಗಳು, ಬಿಗಿ ಕಳೆದುಕೊಳ್ಳದ ನಿರೂಪಣೆ, ಮಾಧುರ್ಯದ ಹಾಡುಗಳೂ ಸೇರಿದಂತೆ ಹೆ ಸಿ ರಘುನಾಥ್ ನಿರ್ಮಾಣದ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾರಿಗೆ ಯಾರುಂಟು: ಸಿಗೋದು ಪಕ್ಕಾ ಗೆಲುವಿನ ನಂಟು!

    ಯಾರಿಗೆ ಯಾರುಂಟು: ಸಿಗೋದು ಪಕ್ಕಾ ಗೆಲುವಿನ ನಂಟು!

    ಬೆಂಗಳೂರು: ರಘುನಾಥ್ ನಿರ್ಮಾಣದ ಯಾರಿಗೆ ಯಾರುಂಟು ಚಿತ್ರದ ಮೆಲೋಡಿ ಹಾಡುಗಳ ಮಾಯೆಗೆ ತಲೆದೂಗದವರೇ ಇಲ್ಲ. ಚಿತ್ರರಂಗದ ನಟ ನಟಿಯರನೇಕರು ಈ ಹಾಡುಗಳನ್ನು ಮೆಚ್ಚಿಕೊಂಡು, ಮನಸಾರೆ ಹೊಗಳುತ್ತಿದ್ದಾರೆ. ಅತ್ತ ಪ್ರೇಕ್ಷಕರ ವಲಯದಲ್ಲಿಯೂ ಕೂಡಾ ಇಂಥಾದ್ದೇ ವಾತಾವರಣವಿದೆ. ಎಲ್ಲರ ಬಾಯಲ್ಲಿಯೂ ಗುನುಗುನಿಸುತ್ತಿರೋ ಹಾಡುಗಳೇ ಇಷ್ಟು ಚೆನ್ನಾಗಿರೋದರಿಂದ ಇಡೀ ಸಿನಿಮಾ ಹೇಗಿರಬಹುದೆಂಬ ಕುತೂಹಲವಂತೂ ಸರ್ವವ್ಯಾಪಿಯಾಗಿ ಬಿಟ್ಟಿದೆ.

    ಅದೆಲ್ಲದಕ್ಕೂ ಇನ್ನೊಂದು ವಾರದಲ್ಲಿ ಖಂಡಿತಾ ಉತ್ತರ ಸಿಗಲಿದೆ. ಯಾಕೆಂದರೆ ಯಾರಿಗೆ ಯಾರುಂಟು ಚಿತ್ರ ಇದೇ ಫೆಬ್ರವರಿ 22ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಒರಟ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಅಭಿಮಾನಿ ಬಳಗ ಸಂಪಾದಿಸಿಕೊಂಡಿದ್ದ ಪ್ರಶಾಂತ್ ಪಾಲಿಗೆ ಈ ಸಿನಿಮಾ ಮೂಲಕ ಮತ್ತೆ ಭರ್ಜರಿ ಓಪನಿಂಗ್ ಸಿಗೋ ಲಕ್ಷಣ ಸ್ಪಷ್ಟವಾಗಿದೆ. ನಾಯಕಿಯರಲ್ಲೊಬ್ಬರಾದ ಕೃತಿಕಾ ರವೀಂದ್ರ ಪಾಲಿಗೂ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲೊಂದು ಬ್ರೇಕ್ ಸಿಗೋ ಸೂಚನೆಗಳಿವೆ. ಲೇಖಾ ಚಂದ್ರ ಮತ್ತು ಅದಿತಿ ಪಾಲಿಗೂ ಅಂಥಾದ್ದೊಂದು ಭರವಸೆ ಇದೆ.

    ಬಿಡುಗಡೆಗೂ ಮುನ್ನವೇ ಇಂಥಾದ್ದೊಂದು ಭರವಸೆ ಮೂಡಿಕೊಂಡಿರೋದಕ್ಕೆ ಮೂಲ ಕಾರಣ ವಿಶಿಷ್ಟವಾದ ಟ್ರೈಲರ್, ಟೀಸರ್ ಮತ್ತು ಚೆಂದದ ಹಾಡುಗಳು ಜನರನ್ನು ತಲುಪಿಕೊಂಡಿರೋ ರೀತಿ. ಈ ಚಿತ್ರದ ಹಾಡುಗಳ ಬಗ್ಗೆ ಕನ್ನಡ ಚಿತ್ರರಂಗದ ಹಲವಾರು ನಟನಟಿಯರು ಭರವಸೆಯ ಮಾತಾಡಿದ್ದಾರೆ. ಬಿ.ಜೆ.ಭರತ್ ಈ ಮೂಲಕವೇ ಮತ್ತೆ ಮುಂಚೂಣಿಯಲ್ಲಿ ಮಿನುಗುತ್ತಿದ್ದಾರೆ. ಧ್ರುವ ಸರ್ಜಾ ಅವರಿಂದ ಆರಂಭವಾಗಿ ನಟ ನವೀನ್ ಕೃಷ್ಣ, ಅರು ಗೌಡ, ನಿರ್ದೇಶಕ ನಂದ ಕಿಶೋರ್, ದಯಾಳ್ ಪದ್ಮನಾಭನ್, ನಟಿ ಅನಿತಾ ಭಟ್, ಪ್ರಥಮ್ ಸೇರಿದಂತೆ ಎಲ್ಲ ವಿಭಾಗದವರೂ ಕೂಡಾ ಯಾರಿಗೆ ಯಾರುಂಟು ಚಿತ್ರ ಮ್ಯೂಸಿಕಲ್ ಹಿಟ್ ಆಗುತ್ತದೆ ಅನ್ನೋ ಭವಿಷ್ಯ ನುಡಿದಿದ್ದಾರೆ.

    ಇಂಥಾ ಪಾಸಿಟಿವ್ ಅಲೆಯ ನಡುವೆಯೇ ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರ ಮುಂದಿನ ವಾರ ಅದ್ಧೂರಿಯಾಗಿ ತೆರೆ ಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾರಿಗೆ ಯಾರುಂಟು: ಟ್ರೈಲರ್ ಮೂಲಕ ಮತ್ತೊಂದು ಸೀಕ್ರೆಟ್ ಬಯಲಾಯ್ತು!

    ಯಾರಿಗೆ ಯಾರುಂಟು: ಟ್ರೈಲರ್ ಮೂಲಕ ಮತ್ತೊಂದು ಸೀಕ್ರೆಟ್ ಬಯಲಾಯ್ತು!

    ಬೆಂಗಳೂರು: ಟೀಸರ್ ಮೂಲಕ ಕುತೂಹಲ ಕೆರಳಿಸಿದ್ದ ಕಾರ್ಟೂನ್ ಕ್ಯಾರೆಕ್ಟರ್ ಮತ್ತೆ ಪ್ರತ್ಯಕ್ಷವಾಗಿದೆ. ಇದೀಗ ಟ್ರೈಲರ್ ಮೂಲಕ ಮತ್ತೊಂದು ಸೀಕ್ರೆಟ್ ಬಿಚ್ಚಿಡೋ ಮೂಲಕ ಯಾರಿಗೆ ಯಾರುಂಟು ಚಿತ್ರದ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ.

    ತಿಂಗಳುಗಳ ಹಿಂದೆ ಯಾರಿಗೆ ಯಾರುಂಟು ಸಿನಿಮಾದ ಹೊಸಾ ಥರದ ಟೀಸರ್ ಒಂದು ಬಿಡುಗಡೆಯಾಗಿತ್ತು. ಇದರಲ್ಲಿ ಆನಿಮೇಟೆಡ್ ಕಾರ್ಟೂನ್ ಪಾತ್ರವೊಂದರ ಮೂಲಕ ನಿರೂಪಣೆ ಮಾಡಿಸೋ ಮೂಲಕ ನಿರ್ದೇಶಕ ಕಿರಣ್ ಗೋವಿ ಮ್ಯಾಜಿಕ್ ಮಾಡಿದ್ದರು. ಇದೀಗ ಅದೇ ಕಾರ್ಟೂನ್ ಪಾತ್ರ ಟ್ರೈಲರನ್ನು ನಿರೂಪಣೆ ಮಾಡಿದೆ. ಮೂವರು ನಾಯಕಿಯರ ಜೊತೆ ಡ್ಯುಯೆಟ್ ಹಾಡೋ ನಾಯಕನ ಬಗ್ಗೆ ಭಯಾನಕ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದೆ.

    ಇದುವರೆಗೆ ಹೊರಬಿದ್ದಿರೋ ಮಾಹಿತಿಗಳ ಪ್ರಕಾರವಾಗಿ ಯಾರಿಗೆ ಯಾರುಂಟು ಸಿನಿಮಾ ನಾಯಕ ಡಾಕ್ಟರ್ ಅಂತಲೇ ನಂಬಲಾಗಿತ್ತು. ಸ್ಟೆಥಸ್ಕೋಪು ಹಿಡಿದೇ ಮೂವರು ನಾಯಕಿಯರೊಂದಿಗೆ ರೊಮ್ಯಾನ್ಸ್ ಮಾಡೋ ನಾಯಕ, ಸುತ್ತಲಿರೋರೆಲ್ಲರ ಸಪೋರ್ಟು… ಆದ್ರೆ ನಾಯಕ ನಾವೆಲ್ಲ ಅಂದುಕೊಂಡಿರೋವಂತೆ ಡಾಕ್ಟರ್ ಅಲ್ಲ ಎಂಬ ವಿಚಾರವನ್ನು ಈ ಟ್ರೈಲರ್ ಜಾಹೀರು ಮಾಡಿದೆ.

    ಹಾಗಾದರೆ ಆತ ಮೂವರು ನಾಯಕಿಯರ ಜೊತೆ ಯಾಕೆ ರೊಮ್ಯಾನ್ಸ್ ಮಾಡ್ತಾನೆ? ಅದು ಗೊತ್ತಿದ್ದು ಯಾಕೆ ಜನ ಆತನಿಗೇ ಸಪೋರ್ಟು ಮಾಡುತ್ತಾರೆ ಅನ್ನೋದು ಸೇರಿದಂತೆ ಯಾರಿಗೆ ಯಾರುಂಟು ಚಿತ್ರ ಟ್ರೈಲರ್ ಮೂಲಕವೇ ಕುತೂಹಲದ ಕೇಂದ್ರಕ್ಕೆ ಬಂದು ನಿಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾರಿಗೆ ಯಾರುಂಟು ಚಿತ್ರಕ್ಕೆ ಯೋಗರಾಜ್ ಭಟ್ ಹಾರೈಕೆ!

    ಯಾರಿಗೆ ಯಾರುಂಟು ಚಿತ್ರಕ್ಕೆ ಯೋಗರಾಜ್ ಭಟ್ ಹಾರೈಕೆ!

    ಬೆಂಗಳೂರು: ಹಾಡುಗಳ ಮೂಲಕವೇ ಹವಾ ಸೃಷ್ಟಿಸೋ ಚಿತ್ರಗಳೆಲ್ಲ ಗೆಲುವು ದಾಖಲಿಸುತ್ತವೆಂದು ನಂಬಿಕೆಯಿದೆ. ಈ ಸೂತ್ರದ ಆಧಾರದಲ್ಲಿ ಹೇಳೋದಾದರೆ ರಘುನಾಥ್ ನಿರ್ಮಾಣದ ಯಾರಿಗೆ ಯಾರುಂಟು ಚಿತ್ರದ ಗೆಲುವೂ ನಿಚ್ಚಳವಾದಂತಿದೆ. ಈ ಚಿತ್ರದ ಹಾಡುಗಳೆಲ್ಲ ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ. ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆಗೆ ತಯಾರಾಗಿ ನಿಂತಿರೋ ಯಾರಿಗೆ ಯಾರುಂಟು ಬಗ್ಗೆ ನಿರ್ದೇಶಕ ಯೋಗರಾಜ ಭಟ್ ಮೆಚ್ಚುಗೆಯ ಮಾತಾಡುತ್ತಲೇ ಶುಭ ಹಾರೈಸಿದ್ದಾರೆ.

    ಹುಮ್ಮಸ್ಸು ಹೊಂದಿರೋ ತಂಡವೊಂದರಿಂದ ರೂಪುಗೊಂಡಿರೋ ಈ ಚಿತ್ರ ಯಾರಿಗೆ ಯಾರುಂಟು ಎರವಿನ ಸಂಸಾರ ಎಂಬ ದಾಸವಾಣಿಯ ಸಾಲುಗಳನ್ನು ಹೊಂದಿರೋ ಚಿತ್ರ. ಸಂಗೀತವನ್ನೂ ಪ್ರಧಾನವಾಗಿಸಿಕೊಂಡಿರೋ ಇದು ತಮ್ಮ ಪರಿಚಿತರನೇಕರು ಸೇರಿ ಮಾಡಿರೋ ಚಿತ್ರ. ಎಲ್ಲರೂ ನೋಡಿ ಈ ಪ್ರಯತ್ನವನ್ನು ಗೆಲ್ಲಿಸಬೇಕಾಗಿ ಯೋಗರಾಜ ಭಟ್ ಕೇಳಿಕೊಂಡಿದ್ದಾರೆ.

    ಕಿರಣ್ ಗೋವಿ ನಿರ್ದೇಶನದ ಈ ಚಿತ್ರ ಯೋಗರಾಜ ಭಟ್ ಮಾತಿನಂತೆಯೇ ಬದುಕಿನ ನಾನಾ ಮಗ್ಗುಲುಗಳನ್ನು ಭರ್ಜರಿ ಮನರಂಜನೆಯೊಂದಿಗೆ ತೆರೆದಿಡುವ ಚಿತ್ರ. ಈಗಾಗಲೇ ಇದರ ಅಸಲಿ ಕಥೆಯೇನು ಅಂತ ಪ್ರೇಕ್ಷಕರು ಚರ್ಚಿಸಲಾರಂಭಿಸಿದ್ದಾರೆ. ಒರಟ ಪ್ರಶಾಂತ್ ಮೂರು ವರ್ಷದ ಬಳಿಕ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋ ಕಾತರ ಹೊಂದಿದ್ದಾರೆ. ಕೃತಿಕಾ ರವೀಂದ್ರ, ಲೇಖಾ ಚಂದ್ರ ಮತ್ತು ಅದಿತಿ ರಾವ್ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv  

  • ‘ಯಾರಿಗೆ ಯಾರುಂಟು’ ಅಂತಿದಾರೆ ನಿರ್ಮಾಪಕ ರಘು ಹೆಸರಘಟ್ಟ

    ‘ಯಾರಿಗೆ ಯಾರುಂಟು’ ಅಂತಿದಾರೆ ನಿರ್ಮಾಪಕ ರಘು ಹೆಸರಘಟ್ಟ

    ಕಷ್ಟದ ಹಾದಿಯಲ್ಲೇ ಕಟ್ಟಿಕೊಂಡ ಬದುಕು ಮತ್ತು ಮುಂದ್ಯಾವತ್ತೋ ಒಂದೊಳ್ಳೆ ಚಿತ್ರವನ್ನು ಕನ್ನಡ ಚಿತ್ರರಂಗಕ್ಕಾಗಿ ಕೊಡಬೇಕೆಂಬ ಬಣ್ಣದ ಕನಸು… ಬ್ಯುಸಿನೆಸ್ಸು, ಒತ್ತಡ ಅಂತ ಅದೇನೇ ಇದ್ದರೂ ಪ್ರತೀ ಕನ್ನಡ ಚಿತ್ರಗಳನ್ನೂ ಕುಟುಂಬ ಸಮೇತ ನೋಡುವ ಕಲಾ ಪ್ರೇಮ. ಇದೀಗ ಹಾಡುಗಳ ಮೂಲಕ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿರುವ ಯಾರಿಗೆ ಯಾರುಂಟು ಚಿತ್ರ ನಿರ್ಮಾಣದ ಹಿಂದೆ ಇದೆಲ್ಲವೂ ಇದೆ. ಅಂಥಾದ್ದೊಂದು ಕಲಾಪ್ರೇಮದ ದ್ಯೋತಕವೆಂಬಂತೆ ನಿರ್ಮಾಪಕ ಹೆಚ್ ಸಿ ರಘುನಾಥ್ ಅವರೂ ಇದ್ದಾರೆ!

    ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರವನ್ನು ನಿರ್ಮಾಣ ಮಾಡಿರುವವರು ರಘುನಾಥ್. ನಿರ್ದೇಕ ಕಿರಣ್ ಗೋವಿ ಅವರ ಚಿಕ್ಕಪ್ಪನ ಮಗನೂ, ವರಸೆಯಲ್ಲಿ ಅಣ್ಣನೂ ಆಗಿರುವ ರಘುನಾಥ್ ಹೆಸರಘಟ್ಟ ಸೀಮೆಯ ತುಂಬಾ ರಘು ಅಣ್ಣ ಎಂದೇ ಪ್ರಸಿದ್ಧರು. ಹೆಸರಘಟ್ಟದ ಅಂಗಡಿ ಚಿಕ್ಕಣ್ಣನವರ ಪುತ್ರ ರಘು ಎಲ್ಲ ವ್ಯವಹಾರಗಳಾಚೆಗೂ ಈ ಭಾಗದಲ್ಲಿ ಎಲ್ಲರ ಪ್ರೀತಿಯ ವ್ಯಕ್ತಿ. ಇಷ್ಟು ವರ್ಷಗಳ ಕಾಲ ತಾವು ಸಂಪಾದಿಸಿದ ಹಣಕ್ಕಿಂತಲೂ, ಈಗ ಪಡೆದುಕೊಂಡಿರೋ ಜನರ ವಿಶ್ವಾಸ ಪ್ರೀತಿಯೇ ದೊಡ್ಡದೆಂಬ ಭಾವನೆ ರಘು ಅವರದ್ದು.

    ಈ ಭಾಗದಲ್ಲಿ ಯಶಸ್ವೀ ಉದ್ಯಮಿಯಾಗಿ ಗುರುತಿಸಿಕೊಂಡಿರೋ ರಘು ತಮ್ಮ ಸೋದರ ಸಂಬಂಧಿಯೇ ಆಗಿರುವ ಕಿರಣ್ ಗೋವಿ ಅವರ ಕನಸಿಗೆ ಸಾಥ್ ನೀಡಿದ್ದಾರೆ. ಈಗ್ಗೆ ಮೂರು ವರ್ಷದ ಹಿಂದೆ ಕಿರಣ್ ಗೋವಿಯವರ ತಂದೆ ಅನಾರೋಗ್ಯಕ್ಕೀಡಾಗಿದ್ದರು. ಹೆಚ್ಚೂ ಕಮ್ಮಿ ಆಸ್ಪತ್ರೆಯ ಅಲೆದಾಟವೇ ಬದುಕಾಗಿ ಹೋಗಿತ್ತು. ಅಖಂಡ ಮೂರು ವರ್ಷಗಳ ಕಾಲ ಕಿರಣ್ ಗೋವಿಯವರನ್ನು ತಟಸ್ಥರಾಗುವಂತೆ ಮಾಡಿದ್ದದ್ದು ಅದೇ ಸಂಕಟ. ಕಡೆಗೂ ಅವರ ತಂದೆ ತೀರಿಕೊಂಡಿದ್ದರು. ಈ ಸಂಕಟದ ಮಡುವಲ್ಲಿಯೂ ಕಿರಣ್ ಒಂದೊಳ್ಳೆ ಕಥೆ ರೂಪಿಸಿಕೊಂಡು ಈ ವಿಚಾರವನ್ನು ತಿಳಿಸಿದಾಗ ರಘು ಮೊದಲು ಕಥೆ ಕೇಳಿದ್ದರಂತೆ. ಸಂಬಂಧದ ಬಂಧ ಏನೇ ಇದ್ದರೂ ಕಥೆ ತುಂಬಾ ಹಿಡಿಸಿದ್ದರಿಂದ, ಅದನ್ನು ಒಂದು ಒಳ್ಳೆ ಚಿತ್ರವಾಗಿ ರೂಪಿಸುತ್ತಾರೆಂಬ ಭರವಸೆ ಕಿರಣ್ ಗೋವಿಯವರ ಮೇಲಿದ್ದುದರಿಂದಲೇ ರಘು ಈ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ.

    ರಘುನಾಥ್ ಅವರು ಹೆಸರಘಟ್ಟ ಸೀಮೆಯಲ್ಲಿಯೇ ಹುಟ್ಟಿ ಬೆಳೆದವರು. ಇವರ ತಂದೆ ಇಲ್ಲಿಯೇ ಒಂದು ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದರು. ಅದರಲ್ಲಾಗೋ ವ್ಯಾಪಾರವೇ ಇಡೀ ಸಂಸಾರದ ಅನ್ನದ ಮೂಲವಾಗಿತ್ತು. ಈ ವ್ಯಾಪಾರದ ಕಾರಣದಿಂದಲೇ ಅವರು ಅಂಗಡಿ ಚಿಕ್ಕಣ್ಣ ಎಂದೇ ಖ್ಯಾತರಾಗಿದ್ದವರು. ಆರಂಭದಲ್ಲಿ ಇದೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ರಘು ಆ ಬಳಿಕ ಅಲ್ಲಿಯೇ ಒಂದು ಫೋಟೋ ಸ್ಟುಡಿಯೋ ಆರಂಭಿಸಿ ಫೋಟೋಗ್ರಾಫರ್ ಆಗಿದ್ದರು. ತರುವಾಯ ಟ್ರಾವೆಲ್ಸ್ ಫೀಲ್ಡಿಗೆ ಬಂದು, ಮಾತೃಶ್ರೀ ಗ್ರೂಪಿನಲ್ಲಿ ಹನುಮಂತರಾಯಪ್ಪನವರೊಂದಿಗೆ ಲ್ಯಾಂಡ್ ಡೆವಲಪಿಂಗ್ ವಲಯದಲ್ಲಿ ದುಡಿಯುತ್ತಾ ತದ ನಂತರ ತಾವೇ ಆ ವೃತ್ತಿಯನ್ನು ಆರಂಭಿಸಿದ್ದರು.

    ಇದೀಗ ಎಸ್‍ಎಲ್ ಆರ್ ಎಂಟರ್ ಪ್ರೈಸಸ್ ಮೂಲಕ ವ್ಯವಹಾರ ನಡೆಸುತ್ತಿರುವ ರಘು ಅದೇ ಬ್ಯಾನರಿನಡಿಯಲ್ಲಿ ಯಾರಿಗೆ ಯಾರುಂಟು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಾವುದಕ್ಕೂ ಕೊರತೆಯಾಗದಂತೆ ಇಡೀ ಚಿತ್ರವನ್ನು ಪೊರೆದಿದ್ದಾರೆ. ಈ ಮೂಲಕ ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿ ಅವರದ್ದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಂಗಭೂಮಿಯಿಂದ ಬಂದ ಪ್ರತಿಭಾವಂತ ನಿರ್ದೇಶಕ ಕಿರಣ್ ಗೋವಿ!

    ರಂಗಭೂಮಿಯಿಂದ ಬಂದ ಪ್ರತಿಭಾವಂತ ನಿರ್ದೇಶಕ ಕಿರಣ್ ಗೋವಿ!

    ವರ್ಷಾಂತರಗಳ ಹಿಂದೆ ತೆರೆ ಕಂಡಿದ್ದ ಪಯಣ ಚಿತ್ರವನ್ನು, ಅದರಲ್ಲಿನ ಚೆಂದದ ಹಾಡುಗಳನ್ನು ಕನ್ನಡದ ಪ್ರೇಕ್ಷಕರ್ಯಾರೂ ಮರೆಯಲು ಸಾಧ್ಯವಿಲ್ಲ. ಅಂಥಾದ್ದೊಂದು ಮೋಡಿ ಮಾಡುತ್ತಲೇ ಮೊದಲ ಚಿತ್ರದಲ್ಲಿಯೇ ಮೆಲೋಡಿಯಸ್ ಗೆಲುವು ದಾಖಲಿಸಿದ್ದವರು ನಿರ್ದೇಶಕ ಕಿರಣ್ ಗೋವಿ. ಆ ನಂತರವೂ ಅದೇ ಯಶದ ಯಾನವನ್ನು ಮುಂದುವರೆಸಿದ್ದ ಕಿರಣ್ ಇದೀಗ ನಾಲಕ್ಕನೇ ಚಿತ್ರ `ಯಾರಿಗೆ ಯಾರುಂಟು’ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ.

    ಇದುವರೆಗೂ ನವಿರಾದ ಕಥಾ ಕೌತುಕದ ಮೂಲಕವೇ ಪ್ರೇಕ್ಷಕರನ್ನು ಹಿಡಿಟ್ಟುಕೊಂಡವರು ಕಿರಣ್ ಗೋವಿ. ಪಯಣದಿಂದ ಆರಂಭವಾಗಿ ಸಂಚಾರಿ, ಪಾರು ವೈಫ್ ಆಫ್ ದೇವದಾಸ್ ವರೆಗೂ ಅದನ್ನೇ ಮುಂದುವರೆಸಿದ್ದ ಅವರೀಗ ಯಾರಿಗೆ ಯಾರುಂಟು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ವರೆಗಿನ ಮೂರೂ ಚಿತ್ರಗಳಿಗಿಂತಲೂ ಭಿನ್ನ ಜಾಡಿನ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿಯೂ ಹಾಡುಗಳಿಗೆ ಪ್ರಧಾನ ಪ್ರಾಶಸ್ತ್ಯ ಕೊಡಲಾಗಿದೆಯಂತೆ. ಈ ಮಾತಿಗೆ ಉದಾಹರಣೆಯೆಂಬಂತೆ ಈಗಾಗಲೇ ಎರಡು ಹಾಡುಗಳ ಲಿರಿಕಲ್ ವೀಡಿಯೋಗಳು ಝೇಂಕಾರ್ ಆಡಿಯೋಸ್ ಸಂಸ್ಥೆಯ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿವೆ. ತುಂಬಾ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ವೀಕ್ಷಣೆ ಮತ್ತು ಭರಪೂರ ಮೆಚ್ಚುಗೆಗಳನ್ನೂ ಪಡೆದುಕೊಂಡಿವೆ!

    ಕಿರಣ್ ಗೋವಿ ಯಾರಿಗೆ ಯಾರುಂಟು ಚಿತ್ರದ ಮೂಲಕ ಭರ್ತಿ ಮೂರು ವರ್ಷಗಳ ನಂತರ ಮರಳಿದ್ದಾರೆ. ಒರಟ ಪ್ರಶಾಂತ್ ಅವರೂ ಕೂಡಾ ಅಷ್ಟೇ ಕಾಲಾವಧಿಯ ನಂತರ ಮತ್ತೆ ವಾಪಾಸಾಗಿದ್ದಾರೆ. ಈವರೆಗೂ ಪ್ರಶಾಂತ್ ಮಾಸ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಈ ಚಿತ್ರದಲ್ಲವರು ಅದಕ್ಕೆ ತದ್ವಿರುದ್ಧವಾದ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಒಬ್ಬ ಇನ್ನೋಸೆಂಟ್ ಹುಡುಗನ ಸುತ್ತ ಸುತ್ತೋ ಕಥಾ ಹಂದರ ಹೊಂದಿರೋ ಈ ಚಿತ್ರಕ್ಕೆ ಮೂವರು ನಾಯಕಿಯರಿದ್ದಾರೆ. ಪಕ್ಕಾ ಫ್ಯಾಮಿಲಿ ಕಥೆ ಹೊಂದಿರೋ ಈ ಚಿತ್ರ ಒಂದು ಪ್ರಮುಖ ಸ್ಥಳದ ಸುತ್ತಾ ಗಿರಕಿ ಹೊಡೆಯುತ್ತದೆಯಂತೆ.

    ಹೀಗೆ ನಾಲಕ್ಕನೇ ಚಿತ್ರದ ಮೂಲಕ ಸುದ್ದಿ ಕೇಂದ್ರದಲ್ಲಿರುವ ಕಿರಣ್ ಗೋವಿ ತುಮಕೂರಿನವರು. ಆದರೆ ಬೆಳೆದದ್ದು, ಬದುಕು ಕಟ್ಟಿಕೊಂಡಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಎಸ್‍ಎಂಆರ್‍ವಿ ಕಾಲೇಜಿನಲ್ಲಿ ಬಿಎಸ್‍ಸಿ ಎಲೆಕ್ಟ್ರಾನಿಕ್ಸ್ ಪದವಿ ಪಡೆದುಕೊಂಡಿರೋ ಕಿರಣ್ ಕಾಲೇಜು ದಿನಗಳಲ್ಲಿಯೇ ರಂಗಭೂಮಿಯ ತೆಕ್ಕೆಗೆ ಬಿದ್ದವರು. ಕಾಲೇಜು ದಿನಗಳಲ್ಲಿಯೇ ರಂಗಭೂಮಿ ನಟನಾಗಿ ರೂಪುಗೊಂಡಿದ್ದ ಅವರು ಆ ದಿನಗಳಲ್ಲಿಯೇ ಕಾಲೇಜು ಮಟ್ಟದ ನಾಟಕ ಸ್ಪರ್ಧೆಗಳಲ್ಲಿಯೂ ಮಿಂಚಿದ್ದರು. ಇದರಿಂದಾಗಿಯೇ ಕಲಿತ ಓದಿಗೂ ಆಸಕ್ತಿಗೂ ಸೂತ್ರ ಸಂಬಂಧವಿಲ್ಲದಂತಾಗಿತ್ತು. ಈ ನಾಟಕದ ಸಾಹಚರ್ಯದಿಂದಲೇ ಸಿಕ್ಕಿದ ಸಂಪರ್ಕಗಳನ್ನು ಬಳಿಸಿಕೊಂಡ ಕಿರಣ್ ಜಾಹೀರಾತು ಸೃಷ್ಟಿಸುವ ಮಾಯಾ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಅವರು ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಜಾಹೀರಾತುಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

    ಇದಾದ ನಂತರ ಸಿನಿಮಾದಲ್ಲಿ ನಟನಾಗಬೇಕೆಂದೇ ಚಿತ್ರರಂಗಕ್ಕೆ ಬಂದ ಕಿರಣ್ ಅವರಿಗೆ ಸಿಕ್ಕವರು ಎ ಆರ್ ಬಾಬು. ಆ ನಂತರದಲ್ಲಿ ಕಿರಣ್ ಅವರ ಆಸಕ್ತಿ ಸಂಪೂರ್ಣವಾಗಿಯೇ ನಿರ್ದೇಶನದತ್ತ ಹೊರಳಿಕೊಂಡಿತ್ತು. ಬಾಬು ಅವರ ಜೊತೆ ಒಂದಷ್ಟು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅವರು ಆ ನಂತರದಲ್ಲಿ ಉಮಾಕಾಂತ್ ಅವರ ಜೊತೆಗೂ ಸಹಾಯಕ ನಿರ್ದೇಶಕರಾಗಿಯೇ ಕೆಲಸ ಮಾಡಿ ಅನುಭವ ಹೊಂದಿದ್ದರು. ಇವರಿಬ್ಬರನ್ನೂ ಗುರುಗಳೆಂದೇ ಭಾವಿಸಿರುವ ಕಿರಣ್ ಗೋವಿ ಸ್ವತಂತ್ರ ನಿರ್ದೇಶಕರಾಗಬೇಕೆಂಬ ಕನಸಿನೊಂದಿಗೆ ಮುಂದುವರೆದ ಫಲಕವಾಗಿಯೇ ಪಯಣ ಚಿತ್ರ ಮೂಡಿ ಬಂದಿತ್ತು. ಅದು ಅವರ ಮೊದಲ ಚಿತ್ರ. ಅದು ಮ್ಯೂಸಿಕಲ್ ಹಿಟ್ ಆಗಿ ದಾಖಲಾಗಿದೆ. ಆ ಬಳಿಕ ಸಂಚಾರಿ ಮತ್ತು ಪಾರು ವೈಫ್ ಆಫ್ ದೇವದಾಸ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಕಿರಣ್ ಗೋವಿ ಇದೀಗ ಯಾರಿಗೆ ಯಾರುಂಟು ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ.

    ಈಗ ಬಿಡುಗಡೆಯಾಗಿರೋ ಎರಡು ಹಾಡುಗಳು ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದ್ದೇ ಈ ಚಿತ್ರವೂ ಯಶಸ್ಸಿನ ಪರ್ವವನ್ನು ಮುಂದುವರೆಸೋ ಸೂಚನೆಗಳಿವೆ. ಈ ಹುಮ್ಮಸ್ಸಿನಿಂದಿರೋ ಕಿರಣ್ ಗೋವಿ ಮುಂದಿನ ದಿನಗಳಲ್ಲಿ ನಿರ್ದೇಶನದ ಜೊತೆ ಜೊತೆಗೇ ನಟನಾಗಿಯೂ ಹೊರ ಹೊಮ್ಮುವ ಉದ್ದೇಶ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv