ಬೆಂಗಳೂರು: ಕನ್ನಡ ದೃಶ್ಯಮಾಧ್ಯಮದಲ್ಲಿ ತನ್ನದೇ ಆದಂಥ ಸ್ಥಾನವನ್ನು ಪಡೆದುಕೊಂಡಿರುವ ಜೀ ಕನ್ನಡ ವಾಹಿನಿ ಇಲ್ಲಿಯವರೆಗೂ ಪ್ರೇಕ್ಷಕರಿಗೆ ಇಷ್ಟವಾದ ಕಾರ್ಯಕ್ರಮಗಳನ್ನೇ ಕೊಡುತ್ತಿದೆ. ಮನೋರಂಜನೆಗೆ ಮತ್ತೊಂದು ಹೆಸರಾಗಿ ಈ ವಾಹಿನಿ ಮೂಡಿಬರುತ್ತಲಿದೆ.
ತನ್ನ ವಿಭಿನ್ನ ಪ್ರಯತ್ನಗಳ ಮೂಲಕ ಹೊಸ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. ಈಗಾಗಲೇ ಜನಪ್ರಿಯ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಜೀ ಕನ್ನಡ ಈಗ ತನ್ನ ಜನಪ್ರಿಯ ಶೋಗಳಲ್ಲಿ ಒಂದಾದ ‘ಯಾರಿಗುಂಟು ಯಾರಿಗಿಲ್ಲ’ ಕಾರ್ಯಕ್ರಮವನ್ನು ಹೊಸ ರೂಪದೊಂದಿಗೆ ವೀಕ್ಷಕರ ಮುಂದೆ ಮತ್ತೆ ತರಲು ಸಿದ್ಧವಾಗಿದೆ.

ಕಳೆದ 2007ರಲ್ಲಿ ತನ್ನ ಮೊದಲ ಸರಣಿಯನ್ನು ಶುರುಮಾಡಿದ್ದ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮ ದಶಕದಾಚೆಗೂ ಕನ್ನಡಿಗರ ಮನೆ ಮನದಲ್ಲಿ ವಿಶೇಷ ಮನೋರಂಜನೆಯ ಕುರುಹಾಗಿ ನೆಲೆನಿಂತಿದೆ. ಅಂಥಾ ವಿನೂತನ ಕಾರ್ಯಕ್ರಮ ಇದೀಗ ಮತ್ತೊಮ್ಮೆ ಮೂಡಿಬರಲು ಸಿದ್ಧವಾಗಿದೆ. ಈಗ ಇನ್ನೊಂದಷ್ಟು ಹೊಸ ಯೋಜನೆ, ಯೋಚನೆಗಳೊಂದಿಗೆ ಮೂಡಿಬರಲು ಸಿದ್ಧವಾಗುತ್ತಿರುವ ಈ ಕಾರ್ಯಕ್ರಮ ಹೆಸರಾಂತ ತಾರೆಯರೊಂದಿಗೆ ತನ್ನ ಸರಣಿಯನ್ನು ಆರಂಭಿಸುತ್ತಿದೆ. ತನ್ನ ಪ್ರೇಕ್ಷಕರಿಗೆ ಹೊಸ ರೂಪದೊಂದಿಗೆ ಮನೋರಂಜನೆಯ ರಸದೌತಣವನ್ನು ನೀಡಲು ಇದೇ ಆಗಸ್ಟ್ 4ರಿಂದ ಯಾರಿಗುಂಟು ಯಾರಿಗಿಲ್ಲ ತನ್ನ ಪ್ರಸಾರವನ್ನು ಆರಂಭಿಸುತ್ತಿದೆ.

ಜೀ ಕನ್ನಡ ಪರಿವಾರದ ನಾಗಿಣಿ, ಕಮಲಿ, ಬ್ರಹ್ಮಗಂಟು, ಯಾರೇ ನೀ ಮೋಹಿನಿ, ಗಂಗಾ, ಜೋಡಿ ಹಕ್ಕಿ, ಮಹಾದೇವಿ, ಕಾಮಿಡಿ ಕಿಲಾಡಿಗಳು, ಸರಿಗಮಪ ಶೋಗಳ ಕಲಾವಿದರು ಪ್ರತ್ಯೇಕ ತಂಡಗಳಾಗಿ ಪಾಲ್ಗೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದ ಪ್ರತಿ ಸಂಚಿಕೆಯಲ್ಲಿ ಒಟ್ಟು 6 ಜನ ತಾರೆಯರಿರುತ್ತಾರೆ, 4 ಸುತ್ತುಗಳಿರುತ್ತವೆ. ಒಂದೊಂದು ಸುತ್ತಿನಲ್ಲೂ ಮನ ತುಂಬುವಂಥ ಮನೋರಂಜನೆಯೊಂದಿಗೆ ವಾರಂತ್ಯಕ್ಕೆ ಜೀ ವಾಹಿನಿಯ ಕೊಡುಗೆಯಾಗಿ ಯಾರಿಗುಂಟು ಯಾರಿಗಿಲ್ಲ ವೀಕ್ಷಕರ ಮುಂದೆ ಬರಲಿದೆ.
ಹೊಸ ನೋಟ, ಹೊಸ ಆಟದ ಜೊತೆ ಕಾಮಿಡಿ ಕಿಲಾಡಿ ಸೀಸನ್ 2 ಖ್ಯಾತಿಯ ಅಪ್ಪಣ್ಣ ಹಾಗೂ ಸೂರಜ್ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ. ತಮ್ಮ ನೈಜವಾದ ನಿರೂಪಣೆ ಹಾಗೂ ಚುರುಕಾದ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಹೊಸ ಸ್ಪರ್ಶವನ್ನು ನೀಡಲಿದ್ದಾರೆ. ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮವು ಆಗಸ್ಟ್ 4ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

