Tag: ಯಶ್ವಂತ್ ಸಿನ್ಹಾ

  • ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾಗೆ ಬೆಂಬಲ ನೀಡಿದ ಟಿಆರ್‌ಎಸ್

    ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾಗೆ ಬೆಂಬಲ ನೀಡಿದ ಟಿಆರ್‌ಎಸ್

    ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ನಾಮನಿರ್ದೇಶನಕ್ಕೆ ಎರಡು ದಿನಗಳ ಮೊದಲು ತೆಲಂಗಾಣ ರಾಷ್ಟ್ರ ಸಮಿತಿಯು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಅಧ್ಯಕ್ಷ ಸ್ಥಾನಕ್ಕಾಗಿ ಬೆಂಬಲಿಸುವುದಾಗಿ ತಿಳಿಸಿದೆ.

    ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಅವರು ಕೆ. ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಟಿಆರ್‌ಎಸ್ ಪಕ್ಷವು ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿದೆ ಎಂದು ತಿಳಿಸಿದರು. ನಮ್ಮ ಸಂಸತ್ ಸದಸ್ಯರೊಂದಿಗೆ ನಾನು ಇಂದು ನಾಮನಿರ್ದೇಶನದಲ್ಲಿ ಟಿಆರ್‌ಎಸ್‍ ಅನ್ನು ಪ್ರತಿನಿಧಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

    ಇಂದು ಯಶವಂತ್ ಸಿನ್ಹಾ ಅವರು ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಕಳೆದ ವಾರ ವಿರೋಧ ಪಕ್ಷಗಳು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿದ್ದವು. ಇದಕ್ಕೂ ಮೊದಲು ಎನ್‍ಸಿಪಿ ನಾಯಕ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಲು ನಿರಾಕರಿಸಿದ್ದರು. ಇದನ್ನೂ ಓದಿ: ನಿಯಮಗಳನ್ನು ಮೀರಿ ಕಲ್ಲು ಕ್ವಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ

    ನಾಮಪತ್ರ ಸಲ್ಲಿಸಲು ಜೂನ್ 29 ಕೊನೆಯ ದಿನವಾಗಿದ್ದು, ಜುಲೈ 18 ರಂದು ಚುನಾವಣೆ ನಡೆಯಲಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಪ್ರಯಾಣಿಕರಿಗೆ ತಟ್ಟಲಿದೆ ಡೀಸೆಲ್ ಕೊರತೆ ಬಿಸಿ – ಬಸ್ ಸಂಚಾರದಲ್ಲಿ ವ್ಯತ್ಯಯ

    Live Tv

  • ಅಮಿತ್ ಶಾ ಒಂದು ಹೇಳಿಕೆಯಿಂದ ಮೋದಿ ವಿರುದ್ಧದ ನನ್ನ ಧ್ವನಿ ಜೋರಾಯಿತು: ಯಶ್‍ವಂತ್ ಸಿನ್ಹಾ

    ಅಮಿತ್ ಶಾ ಒಂದು ಹೇಳಿಕೆಯಿಂದ ಮೋದಿ ವಿರುದ್ಧದ ನನ್ನ ಧ್ವನಿ ಜೋರಾಯಿತು: ಯಶ್‍ವಂತ್ ಸಿನ್ಹಾ

    ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಯಶ್‍ವಂತ ಸಿನ್ಹಾ ಅವರು ರಫೇಲ್ ಒಪ್ಪಂದ, ಮೇಕ್ ಇನ್ ಇಂಡಿಯಾ ವಿಚಾರವನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮೋದಿ ವಿರೋಧಿ ಅಲ್ಲ. 2014ರಲ್ಲಿ ಸಕ್ರಿಯ ರಾಜಕಾರಣಕ್ಕೆ ನಾನು ಗುಡ್ ಬೈ ಹೇಳಿದ್ದೇನೆ. ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಅಂತಾ ನಿರ್ಧಾರ ತೆಗೆದುಕೊಂಡಿದ್ದು, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಉದ್ಯೋಗ ಇಲ್ಲದವರು ಮೋದಿ ಅವರನ್ನು ಟೀಕೆ ಮಾಡುವುದನ್ನು ಉದ್ಯೋಗ ಮಾಡಿಕೊಂಡಿದ್ದಾರೆಂದು ಹೇಳಿ ಅಮಿತ್ ಶಾ ವ್ಯಂಗ್ಯವಾಡಿದ್ದರು. ಹೀಗಾಗಿ ನನ್ನ ಧ್ವನಿ ಜೋರಾಯಿತು ಎಂದು ತಿಳಿಸಿದರು.

    ರಫೇಲ್ ವಿಚಾರವನ್ನು ಪ್ರಸ್ತಾಪ ಮಾಡಿದ ಅವರು, ಎಚ್‍ಎಎಲ್ ಜೊತೆ ಮಾಡಿಕೊಂಡ ಒಪ್ಪಂದವನ್ನು ರದ್ದು ಮಾಡಿದ್ದು ಯಾಕೆ? ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಏಕಾಏಕಿ ರದ್ದಾಗಿದ್ದು ಏಕೆ? ಕ್ಯಾಬಿನೆಟ್ ಗಮನಕ್ಕೂ ತಂದು ಈ ಡೀಲ್ ನಡೆದಿಲ್ಲ ಯಾಕೆ ಎಂದು ಸಿನ್ಹಾ ಪ್ರಶ್ನಿಸಿದರು.

    ಮೇಕ್ ಇನ್ ಇಂಡಿಯಾ ಅಂತಾ ಹೇಳುವವರು ವಿದೇಶದೊಂದಿಗೆ ಇಂತಹ ಒಪ್ಪಂದ ಮಾಡಿಕೊಂಡಿದ್ದು ಯಾಕೆ? ಆ ಕಂಪೆನಿ ವಿರುದ್ಧ ನಾನು ಮಾತನಾಡಲಾರೆ ಯಾಕೆಂದರೆ 500 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲು ಮಾಡಬಹುದು. ರಫೇಲ್ ಒಪ್ಪಂದದಿಂದಾಗಿ ಎಚ್‍ಎಎಲ್ ಕಂಪೆನಿಗೆ ತುಂಬಾ ನಷ್ಟವಾಗಿದೆ. ಹೊಸ ಒಡಂಬಡಿಕೆ ಮಾಡಿಕೊಳ್ಳುವವರು ಒಂದೇ ಕಂಪೆನಿಗೆ ಅಹ್ವಾನ ಕೊಟ್ಟಿದ್ದು ಯಾಕೆ? ಈ ಆರೋಪದಲ್ಲಿ ಪ್ರಧಾನಿ ಮೋದಿ ಒಬ್ಬರೇ ಭಾಗಿಯಾಗಿದ್ದಾರೆ. ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರ ನಡುವೆ ಈ ಡೀಲ್ ನಡೆದಿದೆ ಅಂತಾ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು. ಈ ಎಲ್ಲ ಕಾರಣಗಳಿಗಾಗಿ ಪಿಎಂ ಮೋದಿ ವೈಯುಕ್ತಿಕವಾಗಿ ಇದಕ್ಕೆ ಜವಾಬ್ದಾರಿ ಆಗುತ್ತಾರೆ ಎಂದು ದೂರಿದರು.

    ಈ ವ್ಯವಹಾರ ಹೇಗೆ ನಡೆದಿದೆ ಎಂಬುದು ದೇಶದ ಜನತೆಗೆ ಗೊತ್ತಾಗಬೇಕು. ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಬೇಕು. 20 ದಿನಗಳ ಹಿಂದೆ ನೋಂದಣಿ ಆದ ಕಂಪೆನಿಗೆ ಕೊಟ್ಟಿದ್ದು ಹೇಗೆ? ಆ ಕಂಪೆನಿಗೆ ಯುದ್ದ ವಿಮಾನ ತಯಾರಿಕೆಯ ಅನುಭವವೇ ಇಲ್ಲ. ಇಂತಹ ಕಂಪನಿಗೆ ಡೀಲ್ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು.

    ಜಂಟೀ ಸಂಸದೀಯ ಸಮಿತಿಯಲ್ಲಿ ಇದರ ರಫೇಲ್ ಡೀಲ್ ಬಗ್ಗೆ ಚರ್ಚೆಯಾಗಬೇಕು. ಅಲ್ಲಿ ನಿರ್ಧಾರ ಮಾಡಿ ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಆಡಳಿತ ಪಕ್ಷದವರೇ ಸಮಿತಿಯಲ್ಲಿ ಅಧ್ಯಕ್ಷರಾಗಿರುವುದರಿಂದ ಯಾವುದೇ ಅನುಕೂಲ ಆಗುವುದಿಲ್ಲ. ಆದರೆ ಫಲಿತಾಂಶ ಏನು ಬರುತ್ತೆ ಎನ್ನುವುದನ್ನು ತಿಳಿದುಕೊಳ್ಳಬಹುದು. ನಾನು ಕೂಡ 2ಜಿ ಹಗರಣದ ಸಮಿತಿಯಲ್ಲಿ ಇದ್ದು, ಏನಾಯಿತು ಎನುವುದನ್ನು ತಿಳಿದಿಕೊಂಡೆ ಎಂದರು.

    ದೇಶವನ್ನು ಅಭಿವೃದ್ಧಿ ಮಾದರಿಯಲ್ಲಿ ನಡೆಸಿದರೆ ತನ್ನಷ್ಟಕ್ಕೆ ತಾನೇ ಮೇಕ್ ಇನ್ ಇಂಡಿಯಾ ಆಗುತ್ತದೆ. ಅದನ್ನು ಬಿಟ್ಟು ಭಾಷಣದಿಂದ ಮೇಕ್ ಇನ್ ಇಂಡಿಯಾ ಆಗಲ್ಲ ಎಂದು ಪ್ರಧಾನಿಗೆ ಟಾಂಗ್ ಕೊಟ್ಟ ಅವರು, ಪ್ರಜಾತಂತ್ರದ ಮೇಲೆ, ಪ್ರಜಾತಂತ್ರದ ಸಂಸ್ಥೆಗಳ ಮೇಲೆ ದಾಳಿ ಆದ ಕಾರಣ ನಾನು ಬಿಜೆಪಿ ತೊರೆದೆ. ನಾನು 2 ವರ್ಷ ವಿದೇಶಾಂಗ ಸಚಿವನಾಗಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ನನಗೆ ಸಂಪೂರ್ಣ ಸ್ವತಂತ್ರ ನೀಡಿದ್ದರು. ಆದರೆ ಪ್ರಧಾನಿ ಮೋದಿ ಕಳೆದ ನಾಲ್ಕು ವರ್ಷದಲ್ಲಿ ಯಾವತ್ತಾದರೂ ವಿದೇಶಾಂಗ ಸಚಿವೆಯನ್ನು ವಿದೇಶಕ್ಕೆ ಕರೆದೊಯ್ದೊದ್ದಿರಾ? ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಹಾಗೂ ಖಾತೆಯ ಹೆಸರಿಗೆ ಸೀಮಿತ ಎಂದು ಕಾಲೆಳೆದರು.

    ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮ ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲಾ ಅಂಗಗಳು ಒಂದೇ ಕಡೆ ಇವೆ. ಹಿಂದೆಂದೂ ಪ್ರಜಾಪ್ರಭುತ್ವದ ಅಂಗಗಳು ಇಷ್ಟು ದುರ್ಬಲವಾಗಿರುವುದನ್ನು ನಾನು ಕಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಯಶ್‍ವಂತ್ ಸಿನ್ಹಾ ವಾಗ್ದಾಳಿ ನಡೆಸಿದರು.

    ಯಶವಂತ್ ಸಿನ್ಹಾ ಸಹಿತ ಹಲವು ಹಿರಿಯ ಬಿಜೆಪಿ ನಾಯಕರನ್ನು ಮೂಲೆ ಗುಂಪು ಮಾಡಿ `ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎನ್ನುವ ಆರೋಪ ಮೋದಿ ಮೇಲಿದೆ. ಸಿನ್ಹಾ ಅವರು ಮಾರ್ಗದರ್ಶಕ ಮಂಡಳಿಯನ್ನು ಆನೇಕ ಬಾರಿ ಲೇವಡಿ ಮಾಡಿ ಮಾತನಾಡಿದ್ದರು. ಈ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು 1 ವರ್ಷದ ಹಿಂದೆಯೇ ನಾನು ಸಮಯವನ್ನು ಕೇಳಿದ್ದೆ, ಆದರೆ ಇದೂವರೆಗೂ ನನಗೆ ಭೇಟಿಯಾಗಲು ಸಮಯವನ್ನು ನೀಡಿಲ್ಲ ಎಂದು ಯಶವಂತ್ ಸಿನ್ಹಾ ವಾಗ್ದಾಳಿ ನಡೆಸಿದ್ದರು. ಈ ವರ್ಷದ ಏಪ್ರಿಲ್ ನಲ್ಲಿ ಬಿಜೆಪಿಯನ್ನು ಯಶ್‍ವಂತ್ ಸಿನ್ಹಾ ತೊರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೂಹಾರ ಹಾಕಿ ಆರೋಪಿಗಳನ್ನು ಸ್ವಾಗತಿಸಿದ್ದ ಮಗನ ವಿರುದ್ಧ ಮಾಜಿ ಕೇಂದ್ರ ಸಚಿವ ಗರಂ!

    ಹೂಹಾರ ಹಾಕಿ ಆರೋಪಿಗಳನ್ನು ಸ್ವಾಗತಿಸಿದ್ದ ಮಗನ ವಿರುದ್ಧ ಮಾಜಿ ಕೇಂದ್ರ ಸಚಿವ ಗರಂ!

    ರಾಂಚಿ: ಗೋ ರಕ್ಷಣೆಯ ಹೆಸರಿನಲ್ಲಿ ಕೊಲೆಗೈದ 7 ಆರೋಪಿಗಳಿಗೆ ಹೂಹಾರ ಹಾಕಿ ಆಕ್ರೋಶಕ್ಕೆ ಒಳಗಾಗಿದ್ದ ಜಯಂತ್ ಸಿನ್ಹಾ ವಿರುದ್ಧ ಇದೀಗ ತಂದೆ, ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಗರಂ ಆಗಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿನ್ಹಾ, ಮಗನ ಈ ಕಾರ್ಯವನ್ನು ಯಾವುದೇ ಕಾರಣಕ್ಕೂ ನಾನು ಒಪ್ಪಲು ಸಿದ್ಧನಿಲ್ಲ. ಈ ಹಿಂದೆ ನಾನು ಒಬ್ಬ ನಾಲಾಯಕ್ ಮಗನ ಅಪ್ಪನಾಗಿದ್ದೆ. ಆದ್ರೆ ಇದೀಗ ಪಾತ್ರಗಳು ಬದಲಾಗಿವೆ. ಇದು ಟ್ವಿಟ್ಟರ್ ಮಹಿಮೆ ಅಂತ ಹೇಳೋ ಮೂಲಕ ಮಗನ ವಿರುದ್ಧ ಕೆಂಡಾಮಂಡಲಾಗಿದ್ದಾರೆ.

    ಏನಿದು ಘಟನೆ?:
    ಕಳೆದ ವರ್ಷ ಜೂನ್ ತಿಂಗಳಲ್ಲಿ ಜಾರ್ಖಂಡ್ ನ ರಾಮ್ ಗ್ರಹ್ ನಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಅವರನ್ನ ಕಾರಿನಿಂದ ಎಳೆದು ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡ ಸೇರಿ 11 ಮಂದಿ ಜೈಲು ಪಾಲಾಗಿದ್ದರು. ಇದೀಗ ಒಂದು ವರ್ಷದ ನಂತರ ಜೂನ್ 29ರಂದು ಜಾರ್ಖಂಡ್ ಹೈಕೋರ್ಟ್ 8 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು.ಹೀಗಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಇವರೆಲ್ಲರೂ ರಾಂಚಿಯಲ್ಲಿರೋ ಜಯಂತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಸಚಿವರು ಎಲ್ಲರನ್ನೂ ಹಾರ ಹಾಕಿ ಸ್ವಾಗತಿಸಿದ್ದಾರೆ.

    ಈ ಕುರಿತ ಭಾವಚಿತ್ರಗಳು ಇದೀಗ ವೈರಲ್ ಆಗಿದ್ದು, ಇದೀಗ ಮಗ ಜಯಂತ್ ಸಿನ್ಹಾ ವಿರುದ್ಧ ತಂದೆ ಯಶ್ವಂತ್ ಸಿಂಗ್ ಕಿಡಿಕಾರಿದ್ದಾರೆ.