ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೋಕಸಭೆಯ ಕಹಿ ಘಟನೆಗಳು ಮರೆಮಾಚುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದೆಹಲಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಹೊಸ ಎನ್‍ಡಿಎ ಸರ್ಕಾರ ರಚನೆಯಾದ ನಂತರ ಪ್ರಥಮ ಬಾರಿಗೆ ಪ್ರಧಾನಿ ಮೋದಿಯನ್ನು ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದ್ದು, ದೆಹಲಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ‘ನೀರು ಉಳಿಸಿ’ ಅಭಿಯಾನವನ್ನು ತಮ್ಮದೇ ಯೋಜನೆಯೊಂದಿಗೆ ಜಾರಿಗೊಳಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ಕುರಿತು ತಮ್ಮ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯ ವಿಜಯದ ಕುರಿತು ಶುಭಾಶಯ ಕೋರಿದೆ ಎಂದು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ರಾಂಚಿಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಮರಳುವಾಗ ಕೇಜ್ರಿವಾಲ್ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಯಮುನಾ ನದಿ ನೀರನ್ನು ಕೊಯ್ಲು ಮಾಡುವ ಯೋಜನೆ ಮೂಲಕ ರಾಜಧಾನಿಯಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆಯನ್ನು ನೀಗಿಸಲು ಮುಂದಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಮಳೆಗಾಲದಲ್ಲಿ ಯಮುನಾ ನದಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, ಒಂದು ಋತುಮಾನದ ನೀರಿನಿಂದ ದೆಹಲಿಯ ಒಂದು ವರ್ಷದ ನೀರಿನ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು ಪೂರೈಸಲು ಕೇಜ್ರಿವಾಲ್ ಕೇಂದ್ರ ಸರ್ಕಾರದ ನೆರವಿಗೆ ಮನವಿ ಮಾಡಿದ್ದಾರೆ. ದೆಹಲಿ ಹಾಗೂ ಕೇಂದ್ರ ಸರ್ಕಾರ ಜೊತೆಯಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ ಎಂದು ಕೇಜ್ರಿವಾಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸಂಸತ್ ಜಂಟಿ ಅಧಿವೇಶನಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಈ ಕುರಿತು ಭಾಷಣ ಮಾಡಿದ್ದು, ನೀರು ಉಳಿಸುವ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬದ್ಧತೆಯನ್ನು ವಿವರಿಸಿದ್ದರು. ಇದು ಸರ್ಕಾರದ ಎರಡನೇ ಅವಧಿಯ ವಿಶೇಷ ಅಭಿಯಾನವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಸ್ವಚ್ಛ ಭಾರತ’ ಅಭಿಯಾನ ಜನಪ್ರಿಯವಾಗಿತ್ತು.

ಅಭಿಯಾನದ ಭಾಗವಾಗಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಗ್ರಾಮ ಪಂಚಾಯತ್‍ಗಳಿಗೆ ಪತ್ರ ಬರೆದು ಈ ಬಾರಿಯ ಮಳೆಗಾಲದಲ್ಲಿ ನೀರನ್ನು ಕೊಯ್ಲು ಮಾಡುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಿದ್ದಾರೆ.
ಅಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊಹಲ್ಲಾ ಕ್ಲಿನಿಕ್ (ಸಣ್ಣ ಕ್ಲಿನಿಕ್) ಹಾಗೂ ಅಧುನೀಕರಣಗೊಳಿಸಿದ ದೆಹಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವಂತೆಯೂ ಇದೇ ವೇಳೆ ಮನವಿ ಮಾಡಿದ್ದಾರೆ. ಮೊಹಲ್ಲಾ ಕ್ಲಿನಿಕ್ ಸ್ಥಾಪನೆ ಹಾಗೂ ಸರ್ಕಾರಿ ಶಾಲೆಗಳನ್ನು ಅಧುನೀಕರಣಗೊಳಿಸುವ ಯೋಜನೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿದ್ದು, ಈ ಕುರಿತು ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]