Tag: ಯದುವೀರ್

  • ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

    ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

    ಮಂಗಳೂರು: ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸಂಭ್ರಮ ಮನೆ ಮಾಡಲು ಹನುಮಂತನ ಕೃಪೆ ಕಾರಣ ಎನ್ನುವ ಮಾತುಗಳು ಈಗ ಕೇಳಿ ಬಂದಿವೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿರುವ ಹನುಮಂತ ಕೃಪೆಯಿಂದ ಗಂಡು ಮಗು ಜನಿಸಿದೆ ಎನ್ನುವ ಮಾತನ್ನು ಆ ಕ್ಷೇತ್ರವನ್ನು ನಂಬುತ್ತಿರುವ ಭಕ್ತರು ಹೇಳಿದ್ದಾರೆ.

    ಆಂಜನೇಯನ ಪರಮ ಭಕ್ತರಾಗಿರುವ ಯದುವೀರ್ ಅವರು ಕಳೆದ ತಿಂಗಳು ಈ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಿಸಿದ್ದರು. ಈ ಪೂಜೆಯ ವೇಳೆ ಗಂಡು ಮಗು ಜನಿಸಬೇಕೆಂದು ಅವರು ಪ್ರಾರ್ಥನೆ ಮಾಡಿಕೊಂಡಿದ್ದರು ಎಂದು ಆಡಳಿತ ಮಂಡಳಿಯ ಸದಸ್ಯರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಆದರೆ ಯದುವೀರ್ ಒಡೆಯರ್ ನಾಲ್ಕು ಬಾರಿ ಈ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮೊದಲು ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಅವರ ಜೊತೆ ಆಗಮಿಸಿದ್ದ ಯದುವೀರ್ ನಂತರ ಪತ್ನಿ ಜೊತೆ ಎರಡು ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದರು. ಪ್ರಮೋದಾ ದೇವಿ ಅವರ ಜೊತೆ ಬಂದಾಗ ಅವರನ್ನು ಮೆರವಣಿಗೆ ಮಾಡಿ ಕರೆದುಕೊಂಡು ಬರಲಾಗಿತ್ತು. ಪತ್ನಿ ಗರ್ಭಿಣಿಯಾದ ಬಳಿಕ ಒಂದು ಬಾರಿ ಭೇಟಿ ನೀಡಿದ್ದು ವಿಶೇಷ. ಕೊನೆಯದಾಗಿ ಕಳೆದ ತಿಂಗಳು ಅವರೊಬ್ಬರೆ ಈ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಿಸಿ ತೆರಳಿದ್ದರು.

    ಕ್ಷೇತ್ರಕ್ಕೆ ಆಗಮಿಸುವ ಮೊದಲೇ ಆಡಳಿತ ಮಂಡಳಿಯವರ ಜೊತೆ ವಿಶೇಷ ಪೂಜೆ ನಡೆಸಲು ಬರುತ್ತಿದ್ದೇನೆ ಎಂದು ಯದುವೀರ್ ತಿಳಿಸಿದ್ದರು. ಅದೇ ರೀತಿಯಾಗಿ ಪೂಜೆಯ ಪ್ರಾರ್ಥನೆ ಸಲ್ಲಿಸುವ ವೇಳೆ ಆರ್ಚಕರ ಜೊತೆ ತಮ್ಮ ಗಂಡು ಮಗುವಿನ ಬೇಡಿಕೆಯನ್ನು ಅವರು ಇಟ್ಟಿದ್ದರು. ಇದನ್ನೂ ಓದಿ: ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?

     

     

  • 6 ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ

    6 ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ

    ಮೈಸೂರು/ಬೆಂಗಳೂರು: ಆರು ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ. ರಾಣಿ ತ್ರಿಷಿಕಾ ಕುಮಾರಿಗೆ ಗಂಡು ಮಗುವಿನ ಜನನವಾಗಿದ್ದು, ರಾಜಮಾತೆ ಪ್ರಮೋದಾದೇವಿ ಮತ್ತು ರಾಜ ಯದುವೀರ್ ಮುಖದಲ್ಲಿ ಮಂದಹಾಸ ಮೂಡಿದೆ.

    ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವಿನ ಹಿನ್ನಲೆಯಲ್ಲಿ ತ್ರಿಷಿಕಾರನ್ನು ಖಾಸಗಿ ಆಸ್ಪತ್ರೆಯಲ್ಲಿ ಕರೆತರಲಾಗಿತ್ತು. ಬುಧವಾರ ರಾತ್ರಿ 9.50 ಕ್ಕೆ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದರು. ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು.

    ತ್ರಿಷಿಕಾ ಜೊತೆಯಲ್ಲೇ ಇರುವ ಯದುವೀರ್, ರಾಜಮಾತೆ ಪ್ರಮೋದಾದೇವಿ ಮತ್ತು ತ್ರಿಷಿಕಾ ತಾಯಿ ಯೋಗಕ್ಷೆಮ ನೋಡಿಕೊಳ್ಳುತ್ತಿದ್ದಾರೆ. ಯುವರಾಜನ ಆಗಮನ ಹಿನ್ನೆಲೆಯಲ್ಲಿ ಇಂದು ತಾಯಿ ಚಾಮುಂಡೇಶ್ವರಿಗೆ ಒಡೆಯರ್ ವಂಶಸ್ಥರು ಪೂಜೆ ಸಲ್ಲಿಸುವ ಸಾಧ್ಯತೆ ಇದೆ. 1953ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನಂತರ ಮೈಸೂರು ರಾಜಮನೆತನದಲ್ಲಿ ಗಂಡು ಸಂತಾನ ಪ್ರಾಪ್ತಿಯಾಗಿರಲಿಲ್ಲ.

    ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಯದುವೀರ್ ರನ್ನು ರಾಜಮನೆತನದ ಉತ್ತರಾಧಿಕಾರಿಯನ್ನಾಗಿ ಪ್ರಮೋದಾದೇವಿ ಒಡೆಯರ್ ದತ್ತು ಪಡೆದಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ್ದ ಸಂದರ್ಭದಲ್ಲಿ ಇಡೀ ಮೈಸೂರು ನಗರಕ್ಕೆ ಎತ್ತಿನ ಗಾಡಿಗಳಲ್ಲಿ ಸಿಹಿ ತಿಂಡಿಯನ್ನು ಕೊಂಡೊಯ್ದು ಜನರಿಗೆ ಹಂಚಲಾಗಿತ್ತು.

  • ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ- ರಥ ಎಳೆದ ಮಹಾರಾಜ ಯದುವೀರ್

    ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ- ರಥ ಎಳೆದ ಮಹಾರಾಜ ಯದುವೀರ್

    ಮೈಸೂರು: ಚಾಮುಂಡಿಬೆಟ್ಟದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಿಯ ಮಹಾರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಇಂದು ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ಯದುವಂಶದ ರಾಜ ಯದುವೀರ್ ದೇವಿಯ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

    ರಥೋತ್ಸವ ಬಳಿಕ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ, ಸುಸೂತ್ರವಾಗಿ ದಸರಾ ಆಚರಣೆ ನಂತರ ಚಾಮುಂಡಿಗೆ ಪೂಜೆ ಸಲ್ಲಿಸುವ ಸಲುವಾಗಿ ನಡೆಯುವ ರಥೋತ್ಸವ ಇದಾಗಿದೆ. ಈ ಬಾರಿ ದಸರಾ ಉತ್ಸವ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆರವೇರಿದೆ. ಸಂಪ್ರದಾಯದಂತೆ ಇಂದು ಮಹಾರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಬೆಟ್ಟದಲ್ಲಿ ದೀಪೋತ್ಸವ ನಡೆದ ಮೇಲೆ ನಮ್ಮ ದಸರಾ ಸಮಾಪ್ತಿಯಾಗಲಿದೆ ಎಂದು ಹೇಳಿದರು.

    ಇನ್ನು ಈ ಬಾರಿ ದಸರಾಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ಹೀಗಾಗಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದೇವೆ. ತಾಯಿ ಚಾಮುಂಡಿ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಪೂಜೆಯ ಮೂಲಕ ರಾಜ್ಯದಲ್ಲಿ ಮಳೆ ಬೆಳೆಯಾಗಿ ರಾಜ್ಯದ ಜನರು ಉತ್ತಮವಾದ ಜೀವನ ನಡೆಸಲಿ ಎಂದರು.

    ಇನ್ನು ರಾಣಿ ತ್ರಿಷಿಕಾ ಸೀಮಂತ ಕಾರ್ಯದ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ, ಸೀಮಂತ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ರಾಜಮನೆತದ ಸೀಮಂತ ಕಾರ್ಯದ ಬಗ್ಗೆ ಒಂದಷ್ಟು ಜನರು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಸಂಪ್ರದಾಯಗಳ ಪ್ರಕಾರ ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮ ನಡೆಯುವುದಿಲ್ಲ. ಅದು ತೀರಾ ಖಾಸಗಿಯಾಗಿರುವುದರಿಂದ ಇಲ್ಲಿ ಆ ಬಗ್ಗೆ ಚರ್ಚೆ ಬೇಡ ಎಂದರು.

    ಬಳಿಕ ಮಾತನಾಡಿದ ರಾಜ ಯದುವೀರ್, ಈ ಬಾರಿ ದಸರಾ ಯಶಸ್ವಿಯಾಗಿ ಆಚರಣೆ ಮಾಡಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಕೂಡ ಸಮಯಕ್ಕೆ ಸರಿಯಾಗಿ ನೇರವೇರಿವೆ. ಯಾವುದೇ ಅಡಚಣೆಗಳಿಲ್ಲದೇ ನೆರವೇರಿದೆ. ವಿಶ್ವವಿಖ್ಯಾತ ದಸರಾ ಸುಸೂತ್ರವಾಗಿ ನೆರವೇರಿದ್ದು ನಮಗೆ ಸಂತೋಷ ತಂದಿದೆ. ದಸರಾ ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ದೇವಿಗೆ ರಥೋತ್ಸವದ ಮೂಲಕ ಗೌರವ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ ಎಂದರು.

    ಇನ್ನು ರಥೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ರಥ ಚಲಿಸುತ್ತಿದ್ದಂತೆ ಹರ್ಷೋದ್ಗಾರದಿಂದ ಜೈಕಾರ ಹಾಕಿ ಸಂಭ್ರಮಿಸಿದರು. ಜೊತೆಗೆ ರಥ ದೇವಾಲಯದ ಸುತ್ತಾ ಒಂದು ಸುತ್ತು ಹಾಕಿತು. ಇದೇ ವೇಳೆ ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು 21 ಸುತ್ತು ಕುಶಾಲತೋಪು ಸಿಡಿಸಿ ಚಾಮುಂಡೇಶ್ವರಿಗೆ ಗೌರವ ಸಲ್ಲಿಸಿದರು.

  • ಮೈಸೂರು ಅರಮನೆಯಲ್ಲಿಂದು ಮಹಾರಾಣಿ ತ್ರಿಷಿಕಾ ಸೀಮಂತ

    ಮೈಸೂರು ಅರಮನೆಯಲ್ಲಿಂದು ಮಹಾರಾಣಿ ತ್ರಿಷಿಕಾ ಸೀಮಂತ

    ಮೈಸೂರು: ಇವತ್ತು ಮೈಸೂರಿನ ಅರಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ವಿಜಯದಶಮಿಯ ನಂತರ ಮತ್ತೆ ಯದುವಂಶದಲ್ಲಿ ಸಂತಸ ಕ್ಷಣಗಳು ಮೂಡುತ್ತಿವೆ. ಅದಕ್ಕೆ ಕಾರಣ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಗರ್ಭವತಿ ಆಗಿರುವುದು.

    ಇವತ್ತು ಅರಮನೆಯಲ್ಲಿ ತ್ರಿಷಿಕಾ ಅವರಿಗೆ ಸೀಮಂತ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಈಗಾಗಲೇ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ತ್ರಿಷಿಕಾ ಅವರ ತಂದೆ, ತಾಯಿ, ಸಹೋದರ, ಸಹೋದರಿ ಈಗಾಗಲೇ ಅರಮನೆಗೆ ಆಗಮಿಸಿದ್ದಾರೆ.

    ರಾಜ ವಂಶಸ್ಥರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು ಅವರೆಲ್ಲಾ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ದಸರಾದ ಖಾಸಗಿ ದರ್ಬಾರ್‍ನಲ್ಲಿ ಭಾಗವಹಿಸಲು ತ್ರಿಷಿಕಾ ಅವರು ತವರು ಮನೆಯಿಂದ ಪತಿಯ ಮನೆಗೆ ಆಗಮಿಸಿದ್ದರು. ಪದೇ ಪದೇ ಓಡಾಟ ನಡೆಸುವುದು ಬೇಡ ಎಂಬ ಕಾರಣಕ್ಕೆ ಇವತ್ತೆ ಸೀಮಂತ ಕಾರ್ಯ ನಡೆಸಿ ಅವರನ್ನು ತವರು ಮನೆಗೆ ಕಳುಹಿಸಿ ಕೊಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮಾಧ್ಯಮದವರು ಸೇರಿದಂತೆ ಎಲ್ಲಾ ಜನರಿಗೂ ಪ್ರವೇಶ ನಿರ್ಬಂಧಿಸಲಾಗಿದೆ.

  • ಸಾಮಾನ್ಯ ಜನರಂತೆ ರೈಲಲ್ಲಿ ಪ್ರಯಾಣಿಸಿದ ಮೈಸೂರಿನ ರಾಜ ರಾಣಿ!

    ಸಾಮಾನ್ಯ ಜನರಂತೆ ರೈಲಲ್ಲಿ ಪ್ರಯಾಣಿಸಿದ ಮೈಸೂರಿನ ರಾಜ ರಾಣಿ!

    ಮೈಸೂರು: ಯದುವಂಶದ ಮಹಾರಾಜ ಮತ್ತು ಮಹಾರಾಣಿ ಇವತ್ತು ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣ ಮಾಡಿದರು. ತುಂಬು ಗರ್ಭಿಣಿಯಾಗಿರುವ ಮಹಾರಾಣಿ ತ್ರಿಷಿಕಾ ಕುಮಾರಿ ಸಿಂಗ್ ಇಷ್ಟು ದಿನ ತವರು ಮನೆಯಲ್ಲಿದ್ದರು. ದಸರಾ ಪ್ರಯುಕ್ತ ಇವತ್ತು ಬೆಂಗಳೂರಿನಿಂದ ಮೈಸೂರಿಗೆ ಶತಾಬ್ದಿ ರೈಲಿನಲ್ಲಿ ಆಗಮಿಸಿದ್ದಾರೆ.

    ಯದುವೀರ್ ಕುಟುಂಬಸ್ಥರೊಂದಿಗೆ ತ್ರಿಷಿಕಾ ಕುಮಾರಿ ಅವರು ಇಂದು ನಗರಕ್ಕೆ ಆಗಮಿಸಿದರು. ತುಂಬು ಗರ್ಭಿಣಿಯಾಗಿರುವ ತ್ರಿಷಿಕಾ ಅವರನ್ನು ಕರೆತರಲು ಯದುವೀರ್ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರು ಮೈಸೂರು ರಸ್ತೆಯಲ್ಲಿ ಕಾರಿನ ಪ್ರಯಾಣ ಸುರಕ್ಷಿತವಲ್ಲ ಎಂದು ರೈಲಿನಲ್ಲಿ ಸಾಮಾನ್ಯರಂತೆ ಎಸಿ ಬೋಗಿಯಲ್ಲಿ ಎಲ್ಲರೊಂದಿಗೆ ಕುಳಿತು ಪ್ರಯಾಣಿಸಿದ್ದಾರೆ.

    ಇನ್ನೂ ರೈಲಿನಲ್ಲಿ ಮೈಸೂರಿನಮ ಮಹಾರಾಜ ಮತ್ತು ಮಹಾರಾಣಿಯನ್ನು ಕಂಡ ಸಹ ಪ್ರಯಾಣಿಕರು ಆಶ್ಚರ್ಯದಿಂದ ನೋಡಿದ್ದಾರೆ. ರೈಲಿನಲ್ಲಿ ಮೈಸೂರು ನಗರಕ್ಕೆ ಬಂದ ತ್ರಿಷಿಕಾ ವಿಶ್ವಪ್ರಸಿದ್ಧ ದಸರಾದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ನಾಡಹಬ್ಬ ದಸರಾಗೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.