Tag: ಯಡಿಯೂರಪ್ಪ. ಸಿದ್ದರಾಮಯ್ಯ

  • ಉಪಚುನಾವಣೆ ಸೋಲಿನ ಬಗ್ಗೆ ಅಮಿತ್ ಶಾಗೆ ಬಿಎಸ್‍ವೈ ವರದಿ

    ಉಪಚುನಾವಣೆ ಸೋಲಿನ ಬಗ್ಗೆ ಅಮಿತ್ ಶಾಗೆ ಬಿಎಸ್‍ವೈ ವರದಿ

    – ಈ ಸೋಲನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ
    – ಮುಂದಿನ ಚುನಾವಣೆಗೆ ಅತಿಯಾದ ಆತ್ಮವಿಶ್ವಾಸ ಬೇಡ
    – ಈ ನಿಟ್ಟಿನಲ್ಲಿ ನಾವು 2018ರ ಚುನಾವಣೆಗೆ ತಯಾರಾಗುತ್ತೇವೆ

    ರವೀಶ್ ಎಚ್.ಎಸ್.
    ಮೈಸೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಸೋಲಿನ ಬಗ್ಗೆ ರಾಜ್ಯ ಬಿಜೆಪಿ, ಹೈಕಮಾಂಡ್‍ಗೆ ವರದಿ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಎರಡೂ ಕ್ಷೇತ್ರಗಳ ಸೋಲಿನ ಬಗ್ಗೆ ವರದಿಯನ್ನು ರವಾನಿಸಿದ್ದಾರೆ.

    ಈ ವರದಿಯ ಸಂಪೂರ್ಣ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಇದರಲ್ಲಿ ಕ್ಷೇತ್ರದ ಎಲ್ಲಾ ಮಾಹಿತಿಗಳನ್ನು ನೀಡಿದ್ದಾರೆ.

    ವರದಿಯಲ್ಲೇನಿದೆ..?: ನಾವು ಸೋತಿದ್ದೇವೆ, ಆದ್ರೆ ನಮ್ಮ ಶೇಕಡಾವಾರು ಮತ ಗಳಿಕೆ ಹೆಚ್ಚಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳು ನಮ್ಮದ್ದಲ್ಲ. ಇವು ಕಾಂಗ್ರೆಸ್ ಭದ್ರಕೋಟೆ ಕ್ಷೇತ್ರಗಳು. ರಾಜ್ಯದಲ್ಲಿ ಸರ್ಕಾರವೂ ಕಾಂಗ್ರೆಸ್‍ನವರದ್ದೇ ಇತ್ತು. ಹಾಗಾಗಿ ನಾವು ಸೋತಿದ್ದೇವೆ. ಆದರೆ, ನಂಜನಗೂಡಿನಲ್ಲಿ ಶೇಕಡಾವಾರು ಮತ ಹೆಚ್ಚಾಗಿದೆ. 2013ರಲ್ಲಿ ಬಿಜೆಪಿ ಶೇಕಡಾವಾರು ಮತ 25.05% ಇತ್ತು, ಈಗ ಬಿಜೆಪಿ 41.50 ಶೇಕಡಾವಾರು ಮತ ಪಡೆದಿದೆ.

    ಗುಂಡ್ಲುಪೇಟೆಯಲ್ಲೂ ಬಿಜೆಪಿಗೆ ಶೇಕಡಾವಾರು ಮತ ಹೆಚ್ಚಾಗಿದೆ. 2013ರಲ್ಲಿ ಕೆಜೆಪಿ+ಬಿಜೆಪಿ ಶೇಕಡಾವಾರು ಮತ 42.05% ಇತ್ತು, ಈಗ ಬಿಜೆಪಿ ಶೇಕಡಾವಾರು 45.37% ಮತ ಪಡೆದಿದೆ. ಹಾಗಾಗಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸಾಧನೆ ಉತ್ತಮವಾಗಿದೆ. ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ನಮ್ಮ ಪಕ್ಷ ಪ್ರಬಲವಾಗ್ತಿದೆ. ಹಾಗಾಗಿ ಈ ಎರಡು ಕ್ಷೇತ್ರಗಳ ಸೋಲಿನಿಂದ ಬಿಜೆಪಿಗೆ ಯಾವುದೇ ನಷ್ಟ ಆಗಿಲ್ಲ.

    ರಾಜ್ಯ ಬಿಜೆಪಿಯ ಎಲ್ಲ ನಾಯಕರ ಸಂಘಟಿತ ಪ್ರಚಾರ ಕೂಡ ಈ ಚುನಾವಣೆಯಲ್ಲಿತ್ತು. ಈ ಸೋಲನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ. ಆದ್ರೆ ಮುಂದಿನ ಚುನಾವಣೆಗೆ ಅತಿಯಾದ ಆತ್ಮವಿಶ್ವಾಸ ಬೇಡ ಎಂಬ ಸಂದೇಶ ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ನಾವು 2018ರ ಚುನಾವಣೆಗೆ ತಯಾರಾಗುತ್ತೇವೆ ಎಂದು ಬಿಎಸ್‍ವೈ ಅಮಿತ್ ಶಾ ಅವರಿಗೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.