Tag: ಯಜುವೇಂದ್ರ ಚಹಲ್

  • ಬುಮ್ರಾ ಹಿಂದಿಕ್ಕಿ ಅಶ್ವಿನ್ ದಾಖಲೆ ಸರಿಗಟ್ಟಿದ ಚಹಲ್

    ಬುಮ್ರಾ ಹಿಂದಿಕ್ಕಿ ಅಶ್ವಿನ್ ದಾಖಲೆ ಸರಿಗಟ್ಟಿದ ಚಹಲ್

    ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ವಿಶೇಷ ಹೆಗ್ಗಳಿಕೆಯನ್ನು ಪಡೆದಿದ್ದು, ಟಿ20 ಮಾದರಿಯಲ್ಲಿ ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿ ಆರ್.ಅಶ್ವಿನ್ ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

    ವೆಸ್ಟ್ ಇಂಡೀಸ್ ಆಟಗಾರ್ ಹೆಟ್ಮಾಯರ್ ವಿಕೆಟ್ ಪಡೆಯುವ ಮೂಲಕ ಚಹಲ್ ಈ ಸಾಧನೆ ಮಾಡಿದ್ದು, ಆ ಮೂಲಕ ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು ಹಿಂದಿಕ್ಕಿದ್ದಾರೆ.

    ಟೀಂ ಇಂಡಿಯಾ ಪರ ಅತಿ ಕಡಿಮೆ 34 ಪಂದ್ಯದಲ್ಲಿ 50 ವಿಕೆಟ್ ಸಾಧನೆ ಮಾಡಿದ ಆಟಗಾರ ಎಂಬ ದಾಖಲೆಯನ್ನು ಚಹಲ್ ಸಾಧಿಸಿದ್ದು, ಈ ಪಟ್ಟಿಯಲ್ಲಿ ಶ್ರೀಲಂಕಾ ಆಟಗಾರ ಅಜಂತಾ ಮೆಂಡಿಸ್ (26 ಪಂದ್ಯ) ವಿಶ್ವ ಕ್ರಿಕೆಟ್‍ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇದುವರೆಗೂ ವಿಶ್ವ ಟಿ20 ಕ್ರಿಕೆಟ್ ಮಾದರಿಯಲ್ಲಿ 32 ಆಟಗಾರರು 50 ವಿಕೆಟ್ ಪಡೆದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಟೀಂ ಇಂಡಿಯಾ ಪರ ಆರ್.ಅಶ್ವಿನ್, ಬುಮ್ರಾ, ಚಹಲ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮೊದಲ ಟಿ20 ಪಂದ್ಯದಲ್ಲಿ ಚಹಲ್ 9ರ ಎಕನಾಮಿಯಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದಿದ್ದರು.

    ಇತ್ತ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನಕ್ಕೆ ವಿಶ್ವದ ದಿಗ್ಗಜ ಮಾಜಿ ಆಟಗಾರರು, ಕ್ರಿಕೆಟ್ ವಿಶ್ಲೇಷಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಪಂದ್ಯದಲ್ಲಿ ಕೊಹ್ಲಿ 50 ಎಸೆತಗಳಲ್ಲಿ ತಲಾ 6 ಸಿಕ್ಸರ್, ಬೌಂಡರಿ ನೆರವಿನಿಂದ 94 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೇ 8 ಎಸೆತಗಳು ಬಾಕಿ ಇರುವಂತೆ ಪಂದ್ಯದಲ್ಲಿ ತಂಡ ಗೆಲುವು ಪಡೆಯಲು ಕಾರಣರಾದರು.

  • ಇಬ್ಬರು ಲೆಗ್‍ಸ್ಪಿನ್ನರ್ಸ್ ಟೀಂ ಇಂಡಿಯಾದಲ್ಲಿ ಅಗತ್ಯವಿಲ್ಲ: ಸೌರವ್ ಗಂಗೂಲಿ

    ಇಬ್ಬರು ಲೆಗ್‍ಸ್ಪಿನ್ನರ್ಸ್ ಟೀಂ ಇಂಡಿಯಾದಲ್ಲಿ ಅಗತ್ಯವಿಲ್ಲ: ಸೌರವ್ ಗಂಗೂಲಿ

    ಕೋಲ್ಕತ್ತಾ: ಸಿಮೀತ ಮಾದರಿಯ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಮತ್ತಷ್ಟು ಬಲಿಷ್ಠವಾಗಿರಬೇಕಾದರೆ ತಂಡಕ್ಕೆ ಸ್ಪಿನ್ನರ್ ಗಳಾದ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್‍ರನ್ನು ಆಯ್ಕೆ ಮಾಡಬೇಕಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

    ಸದ್ಯ ಯುವ ಆಟಗಾರರಿಗೆ ಪರೀಕ್ಷೆ ನಡೆಸುವ ಉದ್ದೇಶದಿಂದ ಚಹಲ್‍ಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ತಂಡದ ಬ್ಯಾಟಿಂಗ್ ಲೈನ್ ಬಲಿಷ್ಠ ಪಡಿಸುವ ಉದ್ದೇಶದಿಂದ ಪ್ರಯೋಗಕ್ಕೆ ಮುಂದಾಗಿದೆ. ಆದರೆ ಸಿಮೀತ ಮಾದರಿ ಕ್ರಿಕೆಟಿಗೆ ಚಹಲ್ ಅಗತ್ಯವಿದ್ದು, ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಕುಲ್ದೀಪ್ ಯಾದವ್ ಹಾಗೂ ಚಹಲ್ ತಂಡದಲ್ಲಿರುವುದು ಅಗತ್ಯವಿದೆ ಎಂದಿದ್ದಾರೆ.

    ಟಿ20 ಟೂರ್ನಿಯಲ್ಲಿ ತಂಡದ ನಾಯಕರಾಗಿ ಕೊಹ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಆದರೆ ಟೀಂ ಇಂಡಿಯಾಗೆ ಲೆಗ್ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ, ಕೃಣಾಲ್ ಪಾಂಡ್ಯ ಇಬ್ಬರು ಅಗತ್ಯವಿಲ್ಲ. ಇಬ್ಬರಲ್ಲಿ ಒಬ್ಬರಿದ್ದರೆ ಸಾಕು. ಇಬ್ಬರನ್ನು ಒಂದೇ ಪಂದ್ಯದಲ್ಲಿ ಕಣಕ್ಕಿಸುವ ಅಗತ್ಯತೆಯ ಅಂಶವನ್ನು ಆಯ್ಕೆ ಸಮಿತಿ ಗಮನಿಸಬೇಕಿದೆ ಎಂದು ಸೌರವ್ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

  • ಭಾರತದ ಪರ ವಿಶೇಷ ಸಾಧನೆ ನಿರ್ಮಿಸಿದ ಚಹಲ್

    ಭಾರತದ ಪರ ವಿಶೇಷ ಸಾಧನೆ ನಿರ್ಮಿಸಿದ ಚಹಲ್

    ಸೌತಾಂಪ್ಟನ್: 2019ರ ವಿಶ್ವಕಪ್ ಟೂರ್ನಿಯ ಭಾಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕೆ ಇಳಿದ ಟೀಂ ಇಂಡಿಯಾ ತಂಡದ ಪರ ಚಹಲ್ ಉತ್ತಮ ಪ್ರದರ್ಶನ ತೋರಿದ್ದಾರೆ. ಮೊದಲ ಪಂದ್ಯದಲ್ಲಿಯೇ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಚಹಲ್ 10 ಓವರ್ ಗಳಲ್ಲಿ 51 ರನ್ ನೀಡಿ 4 ವಿಕೆಟ್ ಪಡೆದರು.

    ವಿಶ್ವಕಪ್ ಪಂದ್ಯದಕ್ಕೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ತೋರಿದ ಉತ್ತಮ ಪ್ರದರ್ಶನ ಇದಾಗಿದೆ. ಅಲ್ಲದೇ ತಂಡದ ಪರ ಉತ್ತಮ ಸ್ಪೆಲ್ ಮಾಡಿದ 2ನೇ ಟೀಂ ಇಂಡಿಯಾ ಬೌಲರ್ ಚಹಲ್ ಆಗಿದ್ದಾರೆ. ಪಂದ್ಯದ ಮಹತ್ವದ ಹಂತದಲ್ಲಿ ಚಹಲ್ ವಿಕೆಟ್ ಉರುಳಿಸಿದ್ದು ವಿಶೇಷ ಸಂಗತಿಯಾಗಿದೆ. ಫಾಫ್ ಡುಪ್ಲೆಸಿಸ್ 38 ರನ್, ರಸಿ ಮ್ಯಾನ್ ಡರ್ ಡೆಸನ್ 22 ರನ್, ಡೇವಿಡ್ ಮಿಲ್ಲರ್ 31 ರನ್ ಹಾಗೂ 34 ರನ್ ಗಳಿಸಿದ್ದ ಡ್ವೇನ್ ಪೆಟೊರ್ಟರಿಯಸ್ ವಿಕೆಟ್ ಪಡೆದರು.

    2015ರ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಪಾದಾರ್ಪಣೆ ಪಂದ್ಯವಾಡಿದ್ದ ಮೊಹಮದ್ ಶಮಿ 35 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಉಳಿದಂತೆ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿರುವ ದೆಬಶಿತ್ ಮೊಹಂತಿ 1999ರಲ್ಲಿ ಕಿನ್ಯಾ ವಿರುದ್ಧದ ಪಂದ್ಯದಲ್ಲಿ 56 ರನ್ ನೀಡಿ 4 ವಿಕೆಟ್ ಪಡೆದಿದ್ದರು.

    ಸ್ಪೆಲ್ ನ ಅಂತಿಮ ಓವರ್ ಗಳಲ್ಲಿ ಚಹಲ್ ಬೌಲಿಂಗ್ ನಲ್ಲಿ ಕ್ರಿಸ್ ಮಾರಿಸ್ ಸಿಕ್ಸರ್ ಸಿಡಿಸಿದರು. ಪಂದ್ಯದಲ್ಲಿ ಟೀಂ ಇಂಡಿಯಾದ ಇಬ್ಬರು ಸ್ಪಿನ್ ಬೌಲರ್ ಗಳು ಕೂಡ ತಮ್ಮ ಸ್ಪೆಲ್ ಪೂರ್ಣಗೊಳಿಸಿದರು. ಚಹಲ್‍ಗೆ ಸಾಥ್ ನೀಡಿದ ಕುಲ್ದೀಪ್ ಯಾದವ್ 46 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ವೇಗದ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಬುಮ್ರಾ ತಲಾ 2 ವಿಕೆಟ್ ಪಡೆದರು.

  • ಐಪಿಎಲ್ 2019: ಪ್ಲೇ ಆಫ್ ಪ್ರವೇಶಿಸುವ ಅವಕಾಶ ಆರ್‌ಸಿಬಿಗಿದ್ಯಾ?

    ಐಪಿಎಲ್ 2019: ಪ್ಲೇ ಆಫ್ ಪ್ರವೇಶಿಸುವ ಅವಕಾಶ ಆರ್‌ಸಿಬಿಗಿದ್ಯಾ?

    ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದ ಸೋಲಿನ ಬಳಿಕವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಪ್ರವೇಶ ಮಾಡುವ ಅವಕಾಶಗಳು ಇದೆ ಎಂದು ಆರ್ ಸಿಬಿ ಬೌಲರ್ ಯಜುವೇಂದ್ರ ಚಹಲ್ ಅಭಿಪ್ರಾಯ ಪಟ್ಟಿದ್ದಾರೆ.

    ಟೂರ್ನಿಯಲ್ಲಿ ಇದುವರೆಗೂ 8 ಪಂದ್ಯಗಳನ್ನು ಆಡಿರುವ ಆರ್ ಸಿಬಿ 1 ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸದ್ಯ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಪಡೆದಿದೆ. ಇನ್ನುಳಿದಂತೆ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಉಳಿದಿರುವ 6 ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಯನ್ನು ಎದುರಿಸುತ್ತಿದೆ.

    11 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೇವಲ 4 ಬಾರಿ 14 ಅಂಕಗಳನ್ನು ಗಳಿಸಿರುವ ತಂಡಗಳು ಪ್ಲೇ ಆಫ್ ಪ್ರವೇಶ ಮಾಡಿದೆ. ರಾಜಸ್ಥಾನ ರಾಯಲ್ಸ್ ತಂಡ 2018 ರಲ್ಲಿ ಗ್ರೂಪ್ ಹಂತದ ಹೋರಾಟದಲ್ಲಿ ಕೇವಲ 7 ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶ ಮಾಡಿತ್ತು.

    ಟೂರ್ನಿಯಲ್ಲಿ ನೀರಸ ಪ್ರದರ್ಶವನ್ನು ನೀಡಿರುವ ಆರ್ ಸಿಬಿ ಈ ಹಂತದಲ್ಲಿ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದರೆ ಮಾತ್ರ ಈ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಫೀಲ್ಡಿಂಗ್, ಬೌಲಿಂಗ್ ವಿಭಾಗದಲ್ಲಿ ಆರ್ ಸಿಬಿ ಸಾಕಷ್ಟು ಸುಧಾರಣೆ ಮಾಡುವ ಅಗತ್ಯತೆ ಇದ್ದು, ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನದ ಅಗತ್ಯತೆ ಇದೆ.

    ಮುಂಬೈ ಪಂದ್ಯದ ಬಳಿಕ ಮಾತನಾಡಿದ ಚಹಲ್, ನಾವು ಮುಂದಿನ 6 ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇದ್ದು, ಕಳೆದ ವರ್ಷ ತಂಡವೊಂದು ಈ ಸಾಧನೆಯನ್ನು ಮಾಡಿದೆ. ಆದ್ದರಿಂದ ನಮಗೆ ಒಂದು ಅವಕಾಶ ಇದ್ದು, ಮುಂದಿನ ಹಂತದಲ್ಲಿ ಏನಾಗಲಿದೆ ಎನ್ನುವುದು ತಿಳಿಯಬೇಕಿದೆ ಎಂದರು.

  • ವಿಕೆಟ್ ಹಿಂದಿನಿಂದಲೇ ಧೋನಿ ಬೌಲರ್ ಬಾಡಿ ಲ್ಯಾಂಗ್ವೇಜ್ ಓದಬಲ್ಲರು: ಚಹಲ್

    ವಿಕೆಟ್ ಹಿಂದಿನಿಂದಲೇ ಧೋನಿ ಬೌಲರ್ ಬಾಡಿ ಲ್ಯಾಂಗ್ವೇಜ್ ಓದಬಲ್ಲರು: ಚಹಲ್

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್ ಹಿಂದಿನಿಂದಲೇ ತಂಡದ ಬೌಲರ್ ಗಳ ದೇಹ ಭಾಷೆಯನ್ನು ಓದುವ ಸಾಮರ್ಥ್ಯ ಹೊಂದಿದ್ದಾರೆ. ಅವರು ತಂಡದಲ್ಲಿ ಇರುವುದೇ ಅದೃಷ್ಟ ಎಂದು ಯುವ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಧೋನಿಯನ್ನು ಹಾಡಿ ಹೊಗಳಿರುವ ಚಹಲ್, ತಂಡದ ಪ್ರತಿಯೊಬ್ಬ ಬೌಲರ್‍ಗೂ ಕೂಡ ಧೋನಿ ಸಲಹೆ ನೀಡುತ್ತಾರೆ. ಏಷ್ಯಾ ಕಪ್ ಪಾಕ್ ವಿರುದ್ಧ ಪಂದ್ಯದಲ್ಲಿ ರೋಹಿತ್ ಪವರ್ ಪ್ಲೇ ನಲ್ಲಿ ಬೌಲಿಂಗ್ ಮಾಡಲು ಸೂಚಿಸಿದ್ದರು. ಆದರೆ ಈ ವೇಳೆ ನಾನು ಧೋನಿ ಅವರತ್ತ ನೋಡಿದೆ. ಕೂಡಲೇ ಬಳಿ ಬಂದ ಧೋನಿ ವಿಕೆಟ್ ಟು ವಿಕೆಟ್ ಬೌಲ್ ಮಾಡಲು ಸಲಹೆ ನೀಡಿದರು. ಇದರಿಂದ ಇಮಾಮ್ ಹುಲ್ ಹಕ್ ವಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡಿದ್ದಾರೆ.

    ಧೋನಿ ಯೋಚನೆಗಳು ಹಾಗೂ ಕೌಶಲ್ಯಗಳು ನನಗೆ ಬಹಳಷ್ಟು ಬಾರಿ ಹೆಚ್ಚು ಸಹಾಯಕಾರಿಯಾಗಿದೆ ಎಂದು ತಿಳಿಸಿರುವ ಚಹಲ್, ಬೌಲಿಂಗ್ ಮಾಡುವ ವೇಳೆ ನಾನು ಒಮ್ಮೆ ಅವರತ್ತ ನೋಡಿದರೆ ಸಾಕು ಓಡಿ ಬಂದು ನನಗೆ ಸಲಹೆ ನೀಡುತ್ತಿದ್ದರು. ಬೌಲರ್ ದೇಹ ಭಾಷೆಯನ್ನು ಅಷ್ಟು ನಿಖರವಾಗಿ ಗುರುತಿಸುತ್ತಿದ್ದರು ಎಂದು ಹೇಳಿದ್ದಾರೆ.

    ಇದು ಕೇವಲ ಒಂದು ಸಂದರ್ಭವಷ್ಟೇ ಈ ಹಿಂದೆಯೂ ಹಲವು ಬಾರಿ ಧೋನಿ ಸಾಕಷ್ಟು ಬಾರಿ ಸಲಹೆ ನೀಡಿ ವಿಕೆಟ್ ಪಡೆಯಲು ನೆರವಾಗಿದ್ದಾರೆ ಎಂದರು. ಈ ಹಿಂದೆಯೂ ನಾಯಕ ವಿರಾಟ್ ಕೊಹ್ಲಿ, ಧೋನಿ ಆನ್ ಫೀಲ್ಡ್ ನಲ್ಲಿ ನೀಡುವ ಸಲಹೆಗಳು ಹೆಚ್ಚು ಸಹಕಾರಿ. ನೀವು ಎಂದಿಗೂ ನಮ್ಮ ಕ್ಯಾಪ್ಟನ್ ಆಗಿರುತ್ತೀರಿ ಎಂದು ತಿಳಿಸಿದ್ದರು.

    ಏಷ್ಯಾಕಪ್ ಕ್ರಿಕೆಟ್‍ನಲ್ಲಿ 5 ಪಂದ್ಯಳನ್ನು ಆಡಿದ್ದ ಚಹಲ್ 6 ವಿಕೆಟ್ ಪಡೆದಿದ್ದರು. ರೋಹಿತ್ ನಾಯಕತ್ವದ ಟೀಂ ಇಂಡಿಯಾ ಬಾಂಗ್ಲಾ ತಂಡವನ್ನು ಸೋಲಿಸಿ ಕಪ್ ಗೆದ್ದಿತ್ತು. 2016 ರಲ್ಲಿ ಟೀಂ ಇಂಡಿಯಾ ಪರ ಪಾರ್ದಾಪಣೆ ಮಾಡಿದ ಚಹಲ್ 31 ಏಕದಿನ, 26 ಟಿ20 ಪಂದಗಳನ್ನು ಆಡಿದ್ದು, ಏಕದಿನ ಪಂದ್ಯಗಳಲ್ಲಿ 51 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಚಹಲ್ ಕಮೆಂಟ್‍ಗೆ ಟಾಂಗ್ ಕೊಟ್ಟ ರೋಹಿತ್ ಪತ್ನಿ ರಿತಿಕಾ!

    ಚಹಲ್ ಕಮೆಂಟ್‍ಗೆ ಟಾಂಗ್ ಕೊಟ್ಟ ರೋಹಿತ್ ಪತ್ನಿ ರಿತಿಕಾ!

    ಮುಂಬೈ: ಭಾರತದ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ರೋಹಿತ್ ಶರ್ಮಾ ಅವರ ಫೋಟೋಗೆ ಕಮೆಂಟ್ ಮಾಡಿದ್ದಕ್ಕೆ ಪತ್ನಿ ರಿತಿಕಾ ಅಭಿಮಾನದಿಂದ ಟ್ವೀಟ್ ಮಾಡಿದ್ದಾರೆ.

    ರೋಹಿತ್ ಶರ್ಮಾ ರವರು ಶುಕ್ರವಾರ ಫೋಟೋವೊಂದನ್ನು ಕ್ಲಿಕ್ ಮಾಡಿಕೊಂಡು ಇನ್ ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದರು. ಯಜುವೇಂದ್ರ ಚಹಲ್ ‘ಮಿಸ್ ಯೂ ರೋಹಿತ್ ಶರ್ಮಾ’ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ರೋಹಿತ್ ಶರ್ಮಾರವರ ಪತ್ನಿ ರಿತಿಕಾ ಸಜ್ದಾ ‘ಈಗ ಅವರು ನನ್ನವರು'(ಇ ಈಸ್ ಮೈನ್ ನೌ) ಎಂದು ಬರೆದು ಟಾಂಗ್ ಕೊಟ್ಟಿದ್ದಾರೆ.

    ಸದ್ಯ ಇಂಗ್ಲೆಂಡ್ ವಿರುದ್ಧದ ಟಿ-20 ಅಂತರರಾಷ್ಟ್ರೀಯ ಸರಣಿಯಲ್ಲಿ ರೋಹಿತ್ ಶರ್ಮಾ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದು, ಮೂರು ಪಂದ್ಯಗಳಲ್ಲಿ 68.50 ರ ಸರಾಸರಿಯಲ್ಲಿ ಒಂದು ಶತಕ ಸೇರಿದಂತೆ 137 ರನ್ ಹೊಡೆದಿದ್ದಾರೆ. ಏಕದಿನ ಸರಣಿಯಲ್ಲಿ 77.00 ಸರಾಸರಿಯಲ್ಲಿ 154 ರನ್ ಹೊಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯದಲ್ಲಿ ರೋಹಿತ್ ಶರ್ಮಾ 19.50 ಸರಾಸರಿಯಲ್ಲಿ ಕೇವಲ 78 ರನ್ ಗಳಿಸಿದ್ದರು.

    ರೋಹಿತ್ ಮತ್ತು ರಿತಿಕಾ ಇತ್ತೀಚಿಗೆ ಝೆಕ್ ರಿಪಬ್ಲಿಕ್ ರಾಜಧಾನಿ ಪ್ರೇಗ್ ಪ್ರವಾಸ ಹೋಗಿದ್ದರು. ಪ್ರವಾಸದಲ್ಲಿ ಕ್ಲಿಕ್ ಮಾಡಿಕೊಂಡಿದ್ದ ಫೋಟೋಗಳನ್ನು ರೋಹಿತ್ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ‘ಪ್ರೇಗ್ ನಲ್ಲಿ ನಮ್ಮ ಸುಂದರವಾದ ಕ್ಷಣಗಳು’ ಎಂದು ಬರೆದುಕೊಂಡಿದ್ದರು.

    https://www.instagram.com/p/BlgG1NAgHcF/?utm_source=ig_embed

  • ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಚಹಲ್, ತನಿಷ್ಕಾ

    ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಚಹಲ್, ತನಿಷ್ಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಜೊತೆ ಡೇಟಿಂಗ್ ಮಾಡುತ್ತಿರುವ ಹಾಗೂ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವುದರ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಹಲ್ ಸ್ಪಷ್ಟನೆ ನೀಡಿದ್ದಾರೆ.

    ಸೋಮವಾರ ಚಹಲ್ ತನ್ನ ಹಾಗೂ ತನಿಷ್ಕಾ ಸಂಬಂಧದ ಬಗ್ಗೆ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ.

    ಫೋಟೋದಲ್ಲಿ ಏನಿತ್ತು: ಎಲ್ಲರಿಗೂ ನನ್ನ ನಮಸ್ಕಾರ. ನನ್ನ ಜೀವನದಲ್ಲಿ ಏನೂ ನಡೆಯುತ್ತಿಲ್ಲ ಎಂಬ ಸಂದೇಶವನ್ನು ನಿಮಗೆ ನೀಡಲು ಇಷ್ಟಪಡುತ್ತೇನೆ. ನಾನು ಮದುವೆಯಾಗುತ್ತಿಲ್ಲ. ತನಿಷ್ಕಾ ಹಾಗೂ ನಾನು ಒಳ್ಳೆಯ ಸ್ನೇಹಿತರು ಅಷ್ಟೇ ಅದು ಬಿಟ್ಟು ನಮ್ಮ ನಡುವೆ ಯಾವ ಸಂಬಂಧವೂ ಇಲ್ಲ. ಈ ರೀತಿಯ ಸುದ್ದಿಗಳು ಹಬ್ಬಿಸದಂತೆ ನಾನು ಎಲ್ಲ ಮಾಧ್ಯಮದವರಿಗೂ ಹಾಗೂ ನನ್ನ ಅಭಿಮಾನಿಗಳಿಗೂ ಮನವಿ ಮಾಡಿಕೊಳ್ಳುತ್ತೇನೆ. ನೀವು ನನ್ನ ಖಾಸಗಿತನವನ್ನು ಗೌರವಿಸುತ್ತೀರಾ ಎಂದುಕೊಂಡಿದ್ದೇನೆ. ದಯವಿಟ್ಟು ಈ ರೀತಿ ಸುದ್ದಿಗಳನ್ನು ಹಬ್ಬಿಸುವುದು ನಿಲ್ಲಿಸಿ. ಈ ರೀತಿಯ ಮದುವೆ ಸುದ್ದಿಗಳನ್ನು ಹಬ್ಬಿಸುವ ಮೊದಲು ಪರಿಶೀಲಿಸಿ. ಧನ್ಯವಾದಗಳು. ಲವ್ ಯೂ ಆಲ್ ಎಂದು ಬರೆದ ಫೋಟೋವನ್ನು ಚಹಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟಿ ತನಿಷ್ಕಾ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, `ನನಗೂ ಚಹಲ್‍ಗೂ ಯಾವುದೇ ಸಂಬಂಧವಿಲ್ಲ. ನನಗೆ ಅವರು ವೈಯಕ್ತಿಕವಾಗಿ ಪರಿಚಯವೇ ಇಲ್ಲ. ನಾನು ಮದುವೆ ಆಗುತ್ತಿಲ್ಲ. ಸದ್ಯ ನಾನು ನನ್ನ ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಿದ್ದೇನೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

    ಫಸ್ಟ್ ರ‍್ಯಾಂಕ್ ರಾಜು ಚಿತ್ರದಲ್ಲಿ ಗುರುನಂದನ್ ಜೊತೆ ನಾಯಕಿಯಾಗಿ ನಟಿಸಿದ ತನಿಷ್ಕಾ ಕಪೂರ್ ಜೊತೆ ಚಹಲ್ ಕೆಲವು ತಿಂಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಒಬ್ಬರಿಗೊಬ್ಬರು ಪ್ರತಿಕ್ರಿಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಜೋಡಿಯ ಒಟ್ಟಿಗೆಯಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್ ಮುಗಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟಿ ಜೊತೆ ಚಹಲ್ ಡೇಟಿಂಗ್- ಶೀಘ್ರವೇ ಆಗಲಿದ್ದಾರೆ ಮದುವೆ!

  • ಸ್ಯಾಂಡಲ್‍ವುಡ್ ನಟಿ ಜೊತೆ ಚಹಲ್ ಡೇಟಿಂಗ್- ಶೀಘ್ರವೇ ಆಗಲಿದ್ದಾರೆ ಮದುವೆ!

    ಸ್ಯಾಂಡಲ್‍ವುಡ್ ನಟಿ ಜೊತೆ ಚಹಲ್ ಡೇಟಿಂಗ್- ಶೀಘ್ರವೇ ಆಗಲಿದ್ದಾರೆ ಮದುವೆ!

    ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಹಲ್ ಸ್ಯಾಂಡಲ್‍ವುಡ್ ನಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಆ ನಟಿಯೊಂದಿಗೆ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಹೌದು, ಫಸ್ಟ್ ರ‍್ಯಾಂಕ್ ರಾಜು ಚಿತ್ರದಲ್ಲಿ ಗುರುನಂದನ್ ಜೊತೆ ನಾಯಕಿಯಾಗಿ ನಟಿಸಿದ ತನಿಷ್ಕಾ ಕಪೂರ್ ಜೊತೆ ಚಹಲ್ ಡೇಟಿಂಗ್ ಮಾಡುತ್ತಿದ್ದು, ಐಪಿಎಲ್ ಮುಗಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.

    ಕೆಲವು ತಿಂಗಳಿಂದ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಒಬ್ಬರಿಗೊಬ್ಬರು ಪ್ರತಿಕ್ರಿಯಿಸುತ್ತಿದ್ದಾರೆ. ಐಪಿಎಲ್ ಮುಗಿದ ಮೇಲೆ ಟೀಂ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ಐಪಿಎಲ್ ಮುಗಿದ ತಕ್ಷಣ ಚಹಲ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.

    ಈ ಹಿಂದೆ ಟೀಂ ಇಂಡಿಯಾ ಹಾಗೂ ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನೂ ಟೀಂ ಆಟಗಾರ ಜಹೀರ್ ಖಾನ್ ನಟಿ ಸಾಗಾರಿಕ ಗಾಟ್ ಅವರನ್ನು ಮದುವೆಯಾದರೆ, ಯುವರಾಜ್ ಸಿಂಗ್ ನಟಿ ಹೆಜಲ್ ಕೀಚ್ ಜೊತೆ ಮದುವೆಯಾಗಿದ್ದರು. ಇನ್ನೂ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ನಟಿ ಗೀತಾ ಬಸ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಿತ್ತ ಚಹಲ್ ಚೆಸ್‍ನಲ್ಲೂ ಚಾಂಪಿಯನ್ ಆಗಿದ್ರು!

    ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಿತ್ತ ಚಹಲ್ ಚೆಸ್‍ನಲ್ಲೂ ಚಾಂಪಿಯನ್ ಆಗಿದ್ರು!

    ಬೆಂಗಳೂರು: ಮೂರನೇ ಟಿ20 ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಹಠಾತ್ ಕುಸಿತ ಕಾಣಲು ಕಾರಣರಾದ ಯಜುವೇಂದ್ರ ಚಹಲ್ ಒಂದು ಕಾಲದಲ್ಲಿ ಚೆಸ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

    ಹೌದು, ಹರ್ಯಾಣ ರಾಜ್ಯದ ಚಹಲ್ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರಿಕೆಟ್ ಜೊತೆಗೆ ಚೆಸ್ ಆಡುತ್ತಿದ್ದರು. ಏಷ್ಯಾ ಮತ್ತು ವಿಶ್ವ ಯೂಥ್ ಚಾಂಪಿಯನ್ ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲದೇ ಅಂಡರ್ – 12 ವಯಸ್ಸಿನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು.

    ಎಳವೆಯಲ್ಲೇ ವಿಶೇಷ ಸಾಧನೆ ಮಾಡಿದ್ದರೂ ಚೆಸ್‍ನಲ್ಲಿ ಯಾಕೆ ಮುಂದುವರಿಯಲಿಲ್ಲ ಎಂದು ಕೇಳಿದ್ದಕ್ಕೆ, ಚೆಸ್ ನಲ್ಲಿ ಸಾಧನೆ ಮಾಡಬೇಕಾದರೆ ವರ್ಷಕ್ಕೆ 50 ಲಕ್ಷ ರೂ. ಬೇಕಾಗುತ್ತದೆ. ಆದರೆ ನನಗೆ ಪ್ರಯೋಜಕರ ಕೊರತೆಯಿಂದ ಮುಂದುವರಿಯಲು ಸಾಧ್ಯವಾಗಲಿಲ್ಲ. ಆದರೆ ಹವ್ಯಾಸವಾಗಿ ಚೆಸ್ ಆಡುತ್ತೇನೆ ಎಂದು ಈ ಹಿಂದೆ ಮಾಧ್ಯಮವೊಂದಕ್ಕೆ ತಿಳಿಸಿದ್ದರು.

    ಚೆಸ್ ನಿಮಗೆ ಯಾವ ರೀತಿ ಸಹಕಾರವಾಗಿದೆ ಎಂದು ಕೇಳಿದ್ದಕ್ಕೆ, ವಿಶೇಷವಾಗಿ ಟಿ 20ಯಲ್ಲಿ ಬ್ಯಾಟ್ಸ್ ಮನ್‍ಗಳು ದೊಡ್ಡ ಶಾಟ್‍ಗಳನ್ನು ಹೊಡೆಯುತ್ತಾರೆ. ಇದರಿಂದಾಗಿ ಬೌಲರ್‍ಗಳ ಮೇಲೆ ಒತ್ತಡ ಜಾಸ್ತಿ ಇರುತ್ತದೆ. ಆದರೆ ನಾನು ಬಹಳ ಶಾಂತವಾಗಿ ಇರುತ್ತೇನೆ. ಚೆಸ್ ತರಬೇತಿಯಿಂದಾಗಿ ನಾನು ನನ್ನ ಬೌಲಿಂಗ್ ಎಸೆಯುವ ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದರು.

    ಫಿಡೆ ವಿಶ್ವ ಚೆಸ್ ಶ್ರೇಯಾಕ ಪಟ್ಟಿಯಲ್ಲಿ ಈಗಲೂ ಚಹಲ್ ಹೆಸರು ಇದ್ದು 1956ನೇ ಸ್ಥಾನದಲ್ಲಿದ್ದಾರೆ. 1990 ಜುಲೈ 23ರಂದು ಜನಿಸಿದ ಚಹಲ್, ಮೂರು ಏಕದಿನ ಮತ್ತು 6 ಟಿ20 ಪಂದ್ಯವನ್ನು ಆಡಿದ್ದಾರೆ. ಟಿ20ಯಲ್ಲಿ 11 ವಿಕೆಟ್, ಏಕದಿನದಲ್ಲಿ 6 ವಿಕೆಟ್ ಪಡೆದಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಮೂರನೇ ಟಿ20ಯಲ್ಲಿ ಚಹಲ್ 25 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಭಾರತ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಕಾರಣಕ್ಕಾಗಿ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

     ಇದನ್ನೂ ಓದಿ: 8 ರನ್‍ಗಳಿಗೆ 8 ವಿಕೆಟ್ ಪತನ: ಇದು ಚಹಲ್ ಕಮಾಲ್- ಭಾರತಕ್ಕೆ ಸರಣಿ