Tag: ಮ್ಯಾನೇಜೆರ್

  • ತಂದೆ ನಿಧನರಾದ್ರೂ ರಜೆ ತೆಗೆದುಕೊಳ್ಳದೇ ಬಜೆಟ್ ಕರ್ತವ್ಯ – ಅಧಿಕಾರಿಯನ್ನು ಶ್ಲಾಘಿಸಿದ ಹಣಕಾಸು ಇಲಾಖೆ

    ತಂದೆ ನಿಧನರಾದ್ರೂ ರಜೆ ತೆಗೆದುಕೊಳ್ಳದೇ ಬಜೆಟ್ ಕರ್ತವ್ಯ – ಅಧಿಕಾರಿಯನ್ನು ಶ್ಲಾಘಿಸಿದ ಹಣಕಾಸು ಇಲಾಖೆ

    ನವದೆಹಲಿ: ಇಂದು ದೇಶದ ಜನತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್‍ಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ಬಜೆಟ್ ಪ್ರಿಂಟ್ ಮಾಡುವ ಅಧಿಕಾರಿ ನಿಧನರಾದ ತನ್ನ ತಂದೆಯ ಅಂತಿಮ ವಿಧಿಗಳಿಂದ ತಪ್ಪಿಸಿಕೊಂಡಿದ್ದಾರೆ.

    ಹಣಕಾಸು ಸಚಿವಾಲಯದ ಅಧಿಕಾರಿಗಳು ಬಜೆಟ್‍ಗೆ ಸಂಬಂಧಿಸಿದ ದಾಖಲೆಗಳನ್ನು ಜ. 20ರಿಂದ ಪ್ರಿಂಟ್ ಮಾಡಲು ಶುರು ಮಾಡಿದ್ದರು. ಬಜೆಟ್ ದಾಖಲೆಗಳನ್ನು ಮುದ್ರಿಸುವುದು ಕುಲ್‍ದೀಪ್ ಕುಮಾರ್ ಅವರ ಜವಾಬ್ದಾರಿ. ಆದರೆ ಜ. 26ರಂದು ಅಧಿಕಾರಿ ಕುಲ್‍ದೀಪ್ ಕುಮಾರ್ ಶರ್ಮಾ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ತಮ್ಮ ತಂದೆ ನಿಧನರಾಗಿದ್ದರೂ ಸಹ ಕುಲ್‍ದೀಪ್ ರಜೆ ತೆಗೆದುಕೊಳ್ಳದೇ ದಾಖಲೆಗಳನ್ನು ಮುದ್ರಿಸಿದ್ದಾರೆ. ಇದನ್ನೂ ಓದಿ: ನಿರ್ಮಲಾ ಬಜೆಟ್ ನಿರೀಕ್ಷೆ ಏನು? ಚಿನ್ನಕ್ಕೂ ಕೇಳ್ತಾರಾ ಲೆಕ್ಕ? ಸವಾಲುಗಳೇನು?

    ಕುಲ್‍ದೀಪ್ ಅವರ ಕೆಲಸ ನಿಷ್ಠೆ ನೋಡಿದ ಹಣಕಾಸು ಸಚಿವಾಲಯ ಟ್ವೀಟ್ ಮಾಡುವ ಮೂಲಕ ಹೊಗಳಿದೆ. ಟ್ವಿಟ್ಟರಿನಲ್ಲಿ, “ಜ. 26ರಂದು ಡೆಪ್ಯೂಟಿ ಮ್ಯಾನೇಜರ್ ಆದ ಕುಲ್‍ದೀಪ್ ಕುಮಾರ್ ಶರ್ಮಾ ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಬಜೆಟ್ ಇದ್ದ ಕಾರಣ ಅವರು ಕೆಲಸದಲ್ಲಿ ನಿರತರಾಗಿದ್ದರು. ಕುಲ್‍ದೀಪ್ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರೂ ಸಹ ಅವರು ಪ್ರೆಸ್ ಏರಿಯಾದಿಂದ ಒಂದು ನಿಮಿಷ ಕೂಡ ಹೊರ ಹೋಗಲಿಲ್ಲ” ಎಂದು ಟ್ವೀಟ್ ಮಾಡಿದೆ.

    ಅಷ್ಟೇ ಅಲ್ಲದೆ ಕುಲ್‍ದೀಪ್ ಅವರಿಗೆ 31 ವರ್ಷ ಅನುಭವವಿದ್ದು, ಬಜೆಟ್ ಮುದ್ರಣ ಕಾರ್ಯವನ್ನು ಅತ್ಯಂತ ಟೈಟ್ ಶೆಡ್ಯೂಲ್‍ನಲ್ಲಿ ಪೂರ್ಣಗೊಳಿಸಲು ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕುಲ್‍ದೀಪ್ ಅವರ ಶೃದ್ಧೆ ಹಾಗೂ ಕೆಲಸದಲ್ಲಿರುವ ನಿಷ್ಠೆಯನ್ನು ನೋಡಿ ಹಣಕಾಸು ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೇ ವೇಳೆ ನೆಟ್ಟಿಗರು ಹಣಕಾಸು ಸಚಿವಾಲಯ ಟ್ವೀಟ್‍ಗೆ ರೀ-ಟ್ವೀಟ್ ಮಾಡುವ ಮೂಲಕ ಕುಲ್‍ದೀಪ್ ಅವರ ತಂದೆಯ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.