Tag: ಮ್ಯಾನೇಜರ್

  • ಮೇಲಾಧಿಕಾರಿಗಳ ಕಿರುಕುಳಕ್ಕೆ ಎಸ್‍ಬಿಐ ಮ್ಯಾನೇಜರ್ ಆತ್ಮಹತ್ಯೆ

    ಮೇಲಾಧಿಕಾರಿಗಳ ಕಿರುಕುಳಕ್ಕೆ ಎಸ್‍ಬಿಐ ಮ್ಯಾನೇಜರ್ ಆತ್ಮಹತ್ಯೆ

    ಶಿವಮೊಗ್ಗ: ಮೇಲಾಧಿಕಾರಿಗಳ ಕಿರುಕುಳದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಮ್ಯಾನೇಜರ್ ಒಬ್ಬರು ಆತ್ಮಹತ್ಯೆ ಶರಣಾಗಿದ್ದಾರೆ.

    ಜೋಗಫಾಲ್ಸ್ ಎಸ್‍ಬಿಐ ಶಾಖೆಯ ಅನಿಲ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ಮ್ಯಾನೇಜರ್. ಮೃತ ಅನಿಲ್ ಕುಮಾರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಅನಿಲ್ ಕುಮಾರ್ ಕೆಲಸದ ಒತ್ತಡದಿಂದ ಮಾನಸಿಕವಾಗಿ ಕುಂದಿದ್ದರು. ಕಳೆದ ಎರಡು ದಿನಗಳಿಂದ ರಜೆಯಲ್ಲಿದ್ದ ಅವರು ಇಂದು ಬ್ಯಾಂಕ್‍ಗೆ ಹೋಗಿ ಬಾಗಿಲು ತೆರೆದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮನೆಗೆ ವಾಪಸ್ ಆಗಿದ್ದರು. ಬಳಿಕ ಪತ್ನಿಯನ್ನು ಮನೆಯಿಂದ ಹೊರಗೆ ಕಳುಹಿಸಿ, ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೇಲಾಧಿಕಾರಿಗಳ ಒತ್ತಡದಿಂದ ಅನಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಅನಿಲ್ ಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಜೋಗಫಾಲ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಲೋನ್ ನೀಡಲು ಸತಾಯಿಸಿದ ಬ್ಯಾಂಕ್ ಮ್ಯಾನೇಜರ್ ಕಪಾಳಕ್ಕೆ ಬಾರಿಸಿದ ಗ್ರಾಹಕ

    ಲೋನ್ ನೀಡಲು ಸತಾಯಿಸಿದ ಬ್ಯಾಂಕ್ ಮ್ಯಾನೇಜರ್ ಕಪಾಳಕ್ಕೆ ಬಾರಿಸಿದ ಗ್ರಾಹಕ

    ವಿಜಯಪುರ: ಹಲವು ದಿನಗಳಿಂದ ಲೋನ್‍ಗಾಗಿ ಅಲೆದಾಡಿ ರೋಸಿ ಹೋದ ಗ್ರಾಹಕರೊಬ್ಬರು ತಮ್ಮನ್ನು ಸತಾಯಿಸಿದ ಬ್ಯಾಂಕ್  ಮ್ಯಾನೇಜರ್​ಗೆ ಕಪಾಳಮೋಕ್ಷ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕ ಶರಣು ಮಾಮನೆ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಬಿ.ವಿ. ಕುಲಕರ್ಣಿಗೆ ಕಪಾಳಮೋಕ್ಷ ಮಾಡಿದ್ದಾರೆ. ಎರಡು ದಿನದ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಹಲವು ದಿನಗಳಿಂದ ಲೋನ್‍ಗಾಗಿ ಶರಣು ಅವರು ಬ್ಯಾಂಕಿಗೆ ಅಲೆದಾಡಿ ರೋಸಿ ಹೋಗಿದ್ದರು. ಹೀಗಾಗಿ ಲೋನ್ ನೀಡಲು ಸತಾಯಿಸುತ್ತಿದ್ದ ಮ್ಯಾನೇಜರ್ ಮೇಲೆ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ. ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಬ್ಯಾಂಕಿನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದ ಈ ವಿಚಾರ ಬಯಲಾಗಿದೆ. ಕಪಾಳಮೋಕ್ಷ ಮಾಡಿದ ದೃಶ್ಯಗಳು ಬ್ಯಾಂಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಘಟನೆ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸತ್ತವರ ಹೆಸ್ರಲ್ಲಿ ಲಕ್ಷಾಂತರ ರೂ. ಸಾಲ ನೀಡಿ ಬ್ಯಾಂಕ್ ಮ್ಯಾನೇಜರ್ ಎಸ್ಕೇಪ್

    ಸತ್ತವರ ಹೆಸ್ರಲ್ಲಿ ಲಕ್ಷಾಂತರ ರೂ. ಸಾಲ ನೀಡಿ ಬ್ಯಾಂಕ್ ಮ್ಯಾನೇಜರ್ ಎಸ್ಕೇಪ್

    ಕೊಪ್ಪಳ: ಬ್ಯಾಂಕ್ ಅಲ್ಲಿ ಯಾವುದಾದರು ಸಾಲ ಪಡೆಯಬೇಕು ಎಂದರೆ ನೂರಾರು ಸಹಿಗಳು, ಆಧಾರ್ ಕಾರ್ಡ್, ವೋಟರ್ ಕಾರ್ಡ್, ಪ್ಯಾನ್ ಕಾರ್ಡ್, ಶ್ಯೂರಿಟಿ ಎಂದು ನೂರೆಂಟು ದಾಖಲೆಗಳನ್ನು ಕೊಟ್ಟರೂ ಒಂದು ಲಕ್ಷ ಸಾಲ ಸಿಗೋದು ಕಷ್ಟ. ಆದರೆ ಇಲ್ಲೊಬ್ಬ ಬ್ಯಾಂಕ್ ಮ್ಯಾನೇಜರ್ ಸತ್ತವರ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ನೀಡಿ ಪರಾರಿಯಾಗಿದ್ದಾನೆ.

    ಇಬ್ಬರು ರೈತರ ಹೆಸರಿನಲ್ಲಿ ಬರೋಬ್ಬರಿ 15,54,000 ರೂ. ವಂಚಿಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ವಂಚನೆ ಪ್ರಕರಣ ಕೊಂಚ ಭಿನ್ನವಾಗಿದೆ. ಸಣ್ಣ ಲಕ್ಷಮಪ್ಪ ಈರಪ್ಪ ಎಂಬವರ ಮೇಲೆ 8 ಲಕ್ಷ ರೂ. ಸಾಲ ಪಡೆದಿದ್ದಾರೆ. ಕಾರಟಗಿ ತಾಲೂಕಿನ ಕೆರೆ ಕಾಟಾಪುರ ಗ್ರಾಮದ ಪರಸಪ್ಪ ಎಂಬವರ ಹೆಸರಲ್ಲಿ 7.54 ಸಾವಿರ ರೂ. ಸಾಲ ತೆಗೆದುಕೊಳ್ಳಲಾಗಿದೆ. ಆದರೆ ಪರಸಪ್ಪ ಸತ್ತು ವರ್ಷಗಳೇ ಕಳೆದಿವೆ. ಆದರೂ ಸಹ ಕಾರಟಗಿಯಲ್ಲಿರುವ ಆಂಧ್ರ ಬ್ಯಾಂಕ್ ಪರಸಪ್ಪನ ಹೆಸರಿನಲ್ಲಿ ಸಾಲವನ್ನು ಕೊಟ್ಟಿದೆ.

    ರಂಗಪ್ಪನ ತಂದೆ ಪರಸಪ್ಪ ಸಾವನ್ನಪ್ಪಿ ಹಲವು ವರ್ಷಗಳೇ ಕಳೆದಿವೆ. ಆದರೆ ರಂಗಪ್ಪ ಅವರಿಗೆ ತಿಳೀಯದಂತೆ 7 ಲಕ್ಷ ಹಣವನ್ನು ಸಾಲ ಕೊಟ್ಟಿದೆ. ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದ ಶಿವನಗೌಡ ಮತ್ತು ಬ್ಯಾಂಕ್ ಮ್ಯಾನೇಜರ್ ಸೇರಿಕೊಂಡು ಪರಸಪ್ಪನ ಹೊಲದ ಮೇಲೆ 7 ಲಕ್ಷ ರೂ. ಸಾಲವನ್ನು ತೆಗೆದುಕೊಂಡಿದ್ದಾರೆ. ಸಾಲ ತೆಗೆದುಕೊಂಡು ಎರಡು ವರ್ಷವಾದ್ರೂ ಇದು ರಂಗಪ್ಪ ಅವರಿಗೆ ಗೊತ್ತಿರಲಿಲ್ಲ. ಇತ್ತೀಚೆಗೆ ಹೊಲದ ಪಹಣಿ ತೆಗೆಸಿಕೊಂಡು ಹೋಗಲು ಬಂದಾಗ ತಮ್ಮ ಹೋಲದ ಮೇಲೆ ಸಾಲ ಇರುವುದು ಗೊತ್ತಾಗಿದೆ. ಪಹಣಿಯಲ್ಲಿನ ಸಾಲದ ಮಾಹಿತಿ ನೋಡಿ ಗಾಬರಿಗೊಂಡ ರಂಗಪ್ಪ ನೇರವಾಗಿ ಕಾರಟಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

    ವಂಚನೆ ಪ್ರಕರಣ ದಾಖಲಿಸಿಕೊಂಡ ಕಾರಟಗಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರಟಗಿ ತಾಲೂಕಿನ ಉಳೆನೂರು ಗ್ರಾಮದ ಶಿವನಗೌಡ ಮತ್ತು ಇನ್ನೊಬ್ಬ ಕಾರಟಗಿಯ ವಿರೇಶ್ ಮಹಾದೇವ ಎಂಬ ಇಬ್ಬರು ವಂಚಕರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

    1992ರಲ್ಲಿ ಸಣ್ಣ ಲಕ್ಷಮಪ್ಪ ಈರಪ್ಪ ಮತ್ತು 2002ರಲ್ಲಿ ಪರಸಪ್ಪ ಬಾಲಗಂಡಪ್ಪ ಎಂಬವರು ಮೃತ ಪಟ್ಟಿದ್ದಾರೆ. ಮೃತಪಟ್ಟ ಇವರಿಬ್ಬರ ಹೆಸರಿನಲ್ಲಿ ಜಮಿನಿದ್ದು ಅನಾಮಿಕ ವ್ಯಕ್ತಿಗಳಿಬ್ಬರನ್ನು ಕರೆತಂದು ಇವರೇ ಹೊಲದ ಮಾಲೀಕರು ಎಂದು ತೋರಿಸಿ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಕೈಜೋಡಿಸಿ ಅಕ್ರಮವಾಗಿ ವಾಮ ಮಾರ್ಗದ ಮುಖಾಂತರ ಸಾಲ ಪಡೆದು ವಂಚನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇತ್ತ ಬ್ಯಾಂಕ್‍ನಿಂದ ಒಂದು ರೂ. ಕೂಡ ಪಡೆಯದ ರಂಗಪ್ಪ ಮತ್ತು ಮಕ್ಕಳು ಆಂಧ್ರ ಬ್ಯಾಂಕ್ ಮಂದೆ ದಿಕ್ಕುತೋಚದೆ ನಿಂತಿದ್ದಾರೆ. ಈ ಬಗ್ಗೆ ಸ್ಥಳೀಯರು ಬ್ಯಾಂಕ್ ಮ್ಯಾನೇಜರ್ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಂಬಂಧಿಕರು ಮೃತಪಟ್ಟಾಗ ರಜೆ ಕೇಳಿದ್ರೆ ಶವದ ಜೊತೆ ಫೋಟೋ ಕಳಿಸಿ ಎಂದ ಬಿಎಂಟಿಸಿ ಮ್ಯಾನೇಜರ್

    ಸಂಬಂಧಿಕರು ಮೃತಪಟ್ಟಾಗ ರಜೆ ಕೇಳಿದ್ರೆ ಶವದ ಜೊತೆ ಫೋಟೋ ಕಳಿಸಿ ಎಂದ ಬಿಎಂಟಿಸಿ ಮ್ಯಾನೇಜರ್

    ಬೆಂಗಳೂರು: ಕುಟುಂಬಸ್ಥರು ಅಥವಾ ಸಂಬಂಧಿಕರು ಸಾವನ್ನಪ್ಪಿದಾಗ ಸಿಬ್ಬಂದಿ ರಜೆ ಕೇಳಿದರೆ ಕಂಪನಿಗಳು ರಜೆ ಕೊಡುತ್ತವೆ. ಆದರೆ ಬಿಎಂಟಿಸಿಯಲ್ಲಿ ರಜೆ ಬೇಕಾದರೆ ಶವದ ಫೋಟೋ, ಸತ್ತವನ ಫೋಟೋ ತಂದರೆ ಮಾತ್ರ ರಜೆ ಮಂಜೂರು ಆಗುತ್ತದೆ.

    ಡಿಪೋ ನಂಬರ್ 33 ರಲ್ಲಿ ಸಿಬ್ಬಂದಿಯೊರ್ವ ಮೇಲಾಧಿಕಾರಿಗೆ ಡಿಪೋ ಮ್ಯಾನೇಜರ್ ವಿರುದ್ಧ ದೂರು ಬರೆದಿದ್ದು, ಈ ಪತ್ರ ಪಬ್ಲಿಕ್ ಟಿವಿಗೂ ಲಭ್ಯವಾಗಿದೆ.

    ಸಂಬಂಧಿಕರು ಸಾವನ್ನಪ್ಪಿದಾಗ ರಜೆ ಬೇಕಾಗುತ್ತೆ. ಅಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ರಜೆ ಕೊಡದೇ ಸತಾಯಿಸಿ, ಭಾವಚಿತ್ರ ತಂದು ಕೊಡು ಎಂದು ಹೇಳಿದರೆ ಶವದ ಜೊತೆ ನಾವು ಹೇಗೆ ಫೋಟೋ ತೆಗೆದುಕೊಳ್ಳಲಿ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ದೂರು ಕೊಟ್ಟಿರುವ ಸಿಬ್ಬಂದಿ ತನ್ನ ಹೆಸರನ್ನು ಮಾತ್ರ ಉಲ್ಲೇಖಿಸಿಲ್ಲ.

    ದೂರಿನಲ್ಲಿ ಏನಿದೆ?
    ಅನಾರೋಗ್ಯದಿಂದ ಓಡಾಡಲು ಸಾಧ್ಯವಾಗದ ಸಮಯದಲ್ಲಿ ದೂರವಾಣಿ ಮುಖಾಂತರ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರೆ ಇಂದೇ ಖುದ್ದಾಗಿ ರಜೆ ಅರ್ಜಿ ನೀಡಿದರೆ ರಜೆ ಮಂಜೂರು ಮಾಡುತ್ತೇನೆ ಇಲ್ಲವಾದರೆ ಗೈರು ಹಾಜರು ಮಾಡುತ್ತೇನೆ ಮತ್ತು ಬೇರೊಂದು ಘಟಕಕ್ಕೆ ವರ್ಗವಣೆ ಮಾಡುವುದಾಗಿ ಬೆದರಿಕೆ ಒಡ್ಡುವುದು. ಈ ರೀತಿ ಪ್ರಕರಣಗಳು ಅಧಿಕವಾಗಿ ನಡೆಯುತ್ತಿರುತ್ತವೆ ಎಂದು ಉಲ್ಲೇಖಿಸಿದ್ದಾರೆ.

    ಅಲ್ಲದೇ ಕುಟುಂಬದ ಮತ್ತು ಸಂಬಂಧಿಕರ ಆಕಾಲಿಕ ಮರಣ ಹೊಂದಿದಾಗ ರಜೆ ಕೇಳಿದರೆ, ರಜೆ ಮಂಜೂರು ಮಾಡಲು ಶವದ ಜೊತೆ ಭಾವಚಿತ್ರವನ್ನೂ ನೀಡಿ ಎಂದು ಅಜ್ಞಾಪಿಸುತ್ತಾರೆ. ದುಃಖದಿಂದ ಕೂಡಿದ ಸಾವಿನ ಮನೆಯಲ್ಲಿ ಶವದ ಜೊತೆ ಭಾವಚಿತ್ರ ತೆಗೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪತ್ರದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೋಸವನ್ನು ಪತ್ತೆ ಮಾಡಿದಕ್ಕೆ ಮ್ಯಾನೇಜರ್ ಮೇಲೆ ಅಟ್ಯಾಕ್..!- ಸಿಸಿಟಿವಿಯಲ್ಲಿ ಸೆರೆಯಾಯ್ತು ದುಷ್ಕೃತ್ಯ

    ಮೋಸವನ್ನು ಪತ್ತೆ ಮಾಡಿದಕ್ಕೆ ಮ್ಯಾನೇಜರ್ ಮೇಲೆ ಅಟ್ಯಾಕ್..!- ಸಿಸಿಟಿವಿಯಲ್ಲಿ ಸೆರೆಯಾಯ್ತು ದುಷ್ಕೃತ್ಯ

    ಬೆಂಗಳೂರು: ರಾಜಧಾನಿಯಲ್ಲಿರುವ ಇಂಡಸ್ಟ್ರಿಯೊಂದರ ಮ್ಯಾನೇಜರ್ ಆ ಕಂಪನಿಯಲ್ಲಿ ಆದ ಮೋಸವನ್ನು ಎತ್ತಿ ತೋರಿಸಿದಕ್ಕೆ ಆತನ ಮೇಲೆ ಸಹೋದ್ಯೋಗಿಗಳೇ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಗರುಡಾಚಾರ್ ಪಾಳ್ಯದಲ್ಲಿ ನಡೆದಿದೆ.

    ಅಶ್ವಿನ್ ಎಂಬವರು ಹಲ್ಲೆಗೊಳಗಾದ ಮ್ಯಾನೇಜರ್. ಅಶ್ವಿನ್ ಗರುಡಾಚಾರ್ ಪಾಳ್ಯದ ರಾಜ್‍ಮನೆ ಇಂಡಸ್ಟ್ರಿಸ್‍ನಲ್ಲಿ ಪರ್ಚೇಸಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಾಲದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡೋರು ಸಿಗೋದೆ ಕಡಿಮೆ. ಅದರಲ್ಲು ಕೆಲಸ ಮಾಡ್ತಿರೊ ಜಾಗದಲ್ಲಿ ಆಗುವ ಮೋಸವನ್ನು ಬೆಳಕಿಗೆ ತರಲು ಯಾರು ಮುಂದೆ ಬರಲ್ಲ. ಆದ್ರೆ ಅಶ್ವಿನ್ ತನ್ನ ಕಂಪನಿಯಲ್ಲಿ ಕೆಲವರಿಂದ ಆಗುತ್ತಿದ್ದ ಮೋಸವನ್ನು ಪತ್ತೆ ಮಾಡಿ ಬೆಳಕಿಗೆ ತಂದಿದ್ದರು. ಹೀಗೆ ಬಿಟ್ಟರೇ ತಮಗೆ ಮುಂದೆ ತೊಂದರೆ ಗ್ಯಾರಂಟಿ ಅಂತಾ ಆಶ್ವಿನ್ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳೇ ಅಶ್ವಿನ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಅಶ್ವಿನ್ ಹೇಗೋ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ.

    ಡಿ. 25ರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಾಗ ಮೂವರು ವ್ಯಕ್ತಿಗಳು ಅಶ್ವಿನ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆದ್ರೆ ಬೈಕ್ ನಿಲ್ಲಿಸದೇ ಅದೇಗೊ ಅಶ್ವಿನ್ ಬಚಾವಾಗಿದ್ದರು. ಬಳಿಕ ಈ ಕುರಿತು ಕಂಪನಿ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಅಶ್ವಿನ್ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂರು ದಿನಗಳ ಕಾಲ ಅಶ್ವಿನ್ ಮೇಲೆ ಹಲ್ಲೆ ನಡೆದಿದ್ದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ಆತನ ಸಹೋದ್ಯೋಗಿಗಳೇ ಎಂಬ ಸತ್ಯಾಂಶ ಹೊರ ಬಂದಿದೆ. ಹಲ್ಲೆ ನಡೆಸಲು ಯತ್ನಿಸಿದವರನ್ನು ರಾಜ್‍ಮನೆ ಇಂಡಸ್ಟ್ರಿಸ್‍ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜು, ಶ್ರೀಕಾಂತ್, ಪ್ರಕಾಶ್ ಎಂದು ಗುರುತಿಸಲಾಗಿದೆ.

    ಘಟನೆ ಕುರಿತು ಮಹದೇವಪುರ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.

    https://www.youtube.com/watch?v=qM2yJKny7-s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಾಟಾ ಸ್ಟೀಲ್ಸ್ ಮ್ಯಾನೇಜರ್‌ನನ್ನು ಗುಂಡಿಕ್ಕಿ ಕೊಂದ ಮಾಜಿ ನೌಕರ

    ಟಾಟಾ ಸ್ಟೀಲ್ಸ್ ಮ್ಯಾನೇಜರ್‌ನನ್ನು ಗುಂಡಿಕ್ಕಿ ಕೊಂದ ಮಾಜಿ ನೌಕರ

    ಚಂಡೀಗಡ್: ಟಾಟಾ ಸ್ಟೀಲ್ ಮ್ಯಾನೇಜರ್ ಒಬ್ಬರನ್ನು ಅದೇ ಕಂಪನಿಯ ಮಾಜಿ ನೌಕರ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹರಿಯಾಣದ ಫರಿದಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಅರಿಂದಾಲ್ ಪಾಲ್ (40) ಮೃತ ದುರ್ದೈವಿ. ಶುಕ್ರವಾರ ಮಧ್ಯಾಹ್ನ ಫರಿದಾಬಾದಿನ ಹಾರ್ಡ್ ವೇರ್ ರಸ್ತೆಯಲ್ಲಿರುವ ಟಾಟಾ ಸ್ಟೀಲ್ ತಯಾರಿಕಾ ಘಟಕದಲ್ಲಿ, ಎಂದಿನಂತೆ ಮ್ಯಾನೇಜರ್ ಅರಿಂದಾಲ್ ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಚೇರಿಗೆ ನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಅವರ ಮೇಲೆ 4-5 ಬಾರಿ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದನು.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಾಲ್ ರನ್ನು ಕಚೇರಿಯ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದರು. ಆಸ್ಪತ್ರೆಯಿಂದ ಮ್ಯಾನೇಜರ್ ಹತ್ಯೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ, ನಾನು ಆಸ್ಪತ್ರೆಗೆ ಕಡೆ ಹೊರಟೆ, ಆದರೆ ನಾನು ತಲುಪುವಷ್ಟರಲ್ಲಿ ಅರಿಂದಾಲ್ ಪಾಲ್ ಮೃತಪಟ್ಟಿದ್ದರೆಂದು ಮುಜೆಶರ್ ಪೊಲೀಸ್ ಠಾಣಾ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.

    ಮ್ಯಾನೇಜರ್ ಪಾಲ್‍ಗೆ ಗುಂಡಿನ ದಾಳಿ ನಡೆಸಿದ್ದು, ಅದೇ ಸಂಸ್ಥೆಯ ಮಾಜಿ ನೌಕರ 32 ವರ್ಷದ ವಿಶ್ವಾಸ್ ಪಾಂಡೆಯಾಗಿದ್ದಾನೆ. ಆರೋಪಿ ಪಾಂಡೆ ಟಾಟಾ ಕಂಪನಿಯಲ್ಲಿ ಕಳೆದ 4 ವರ್ಷಗಳಿಂದ (2015-2018) ಕೆಲಸ ನಿರ್ವಹಿಸಿತ್ತಿದ್ದ. ಅಲ್ಲದೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಆರೋಪಿಯನ್ನು ಕೆಲಸದಿಂದ ಹೊರಹಾಕಲಾಗಿತ್ತು. ಘಟನೆ ಸಂಬಂಧ ಆರೋಪಿ ವಿಶ್ವಾಸ್ ಪಾಂಡೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಪಾಂಡೆಗಾಗಿ ತೀವ್ರ ಶೋಧ ನಡೆಸುತ್ತಿದ್ದೇವೆ. ಸದ್ಯ ಪಾಲ್ ರವರ ಮೃತ ದೇಹವನ್ನ ಫರಿದಾಬಾದ್‍ನ ಬಾದ್‍ಷಾ ಖಾನ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಭಾನುವಾರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.

    ಮ್ಯಾನೇಜರ್ ಅರಿಂದಾಲ್ ಪಾಲ್ ಹತ್ಯೆಯ ಕುರಿತು ಟಾಟಾ ಸ್ಟೀಲ್ಸ್ ಪ್ರೋಸೆಸಿಂಗ್ ಮತ್ತು ಡಿಸ್ಟ್ರಿಬ್ಯೂಶನ್ ಕಂಪನಿ ಸಂತಾಪ ಸೂಚಿಸಿದೆ. ಪಾಲ್ ಅವರು ಹೆಂಡತಿ, ಮಗಳು ಮತ್ತು ತಂದೆ-ತಾಯಿಯನ್ನ ಅಗಲಿದ್ದಾರೆ. ಮೃತ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡಲಿದೆ ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬ್ಯಾನರ್ ವಿಚಾರಕ್ಕೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡ ಅರೆಸ್ಟ್

    ಬ್ಯಾನರ್ ವಿಚಾರಕ್ಕೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಜೆಪಿ ಮುಖಂಡರೊಬ್ಬರ ಅನುಯಾಯಿಗಳು ಗೂಂಡಾವರ್ತನೆ ತೋರಿದ್ದಾರೆ.

    ಕಾಂಗ್ರೆಸ್ ಶಾಸಕರ ಬ್ಯಾನರ್ ಕಟ್ಟಿದ್ದಕ್ಕೆ ಶಿವಾಜಿನಗರದ ಯೂನಿವರ್ಸಲ್ ಪೆಟ್ರೋಲ್ ಬಂಕ್ ಕ್ಯಾಷಿಯರ್‍ಗೆ ಥಳಿಸಲಾಗಿದೆ. ಪೆಟ್ರೋಲ್ ಬಂಕ್ ಮೇಲ್ಭಾಗದಲ್ಲಿ ಹಾಕಲಾಗಿದ್ದ ಸಚಿವ ರೋಷನ್ ಬೇಗ್ ಬ್ಯಾನರ್ ತೆಗೆಯುವಂತೆ ಗಲಾಟೆ ಮಾಡಿದ್ದಾರೆ. ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಹಲ್ಲೆ ಆರೋಪಿ ಬಾಲಕೃಷ್ಣ ಈ ಹಿಂದೆ ಜಯಮಹಲ್ ವಾರ್ಡ್ ನಿಂದ ಕಾರ್ಪೊರೇಟರ್ ಎಲೆಕ್ಷನ್ ಗೆ ನಿಂತು ಸೋತಿದ್ದನು. ಶುಕ್ರವಾರ ರಾಜು ಜೊತೆ ಸೇರಿ ಪೆಟ್ರೋಲ್ ಬಂಕ್‍ಗೆ ಬಂದು ದೊಣ್ಣೆಯಿಂದ ಅಲ್ಲಿದ್ದವರನ್ನು ಬೆದರಿಸಿದ್ದಾನೆ.

    ಈ ಬಗ್ಗೆ ಶಿವಾಜಿನಗರ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಸದ್ಯ ಅರೋಪಿ ಬಾಲಕೃಷ್ಣ ನನ್ನು ಅರೆಸ್ಟ್ ಮಾಡಿರುವ ಶಿವಾಜಿನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    https://www.youtube.com/watch?v=NUMLZJGk3tY

  • ರಾಜಕೀಯಕ್ಕೆ ಕಂಗನಾ ರಣಾವತ್ ಎಂಟ್ರಿ? ನಿಜ ಸುದ್ದಿ ಇಲ್ಲಿದೆ

    ರಾಜಕೀಯಕ್ಕೆ ಕಂಗನಾ ರಣಾವತ್ ಎಂಟ್ರಿ? ನಿಜ ಸುದ್ದಿ ಇಲ್ಲಿದೆ

    ಮುಂಬೈ: ಕಂಗನಾ ರಣಾವತ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿಚಾರ ಸುಳ್ಳು ಸುದ್ದಿ ಎಂದು ನಟಿಯ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ.

    ಈ ಸುದ್ದಿಯಲ್ಲಿ ನಿಜವಾದ ಅಂಶ ಇಲ್ಲ. ಇದೊಂದು ಸುಳ್ಳು ಸುದ್ದಿ. ಕಂಗನಾ ರಣಾವತ್ ನಿರ್ದಿಷ್ಟ ರಾಜಕೀಯ ಪಕ್ಷವೊಂದರಲ್ಲಿ ಸೇರುತ್ತಿದ್ದಾರೆ ಎಂದು ಕೆಲವರು ದುರುದ್ದೇಶದಿಂದ ಈ ವದಂತಿಯನ್ನು ಹರಿಯಬಿಟ್ಟಿದ್ದಾರೆ ಎಂದು ದೂರಿದ್ದಾರೆ.

    ಕಂಗನಾ ಯಾವ ಪಕ್ಷವನ್ನು ಸೇರುತ್ತಿಲ್ಲ ಹಾಗೂ ಪ್ರಧಾನಿ ಮೋದಿ ಅವರನ್ನು ಕೂಡ ಭೇಟಿ ಆಗಿಲ್ಲ. ಹಾಗಾಗಿ ಈ ಸುದ್ದಿ ಸುಳ್ಳು ಎಂದು ಕಂಗನಾ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ.

    ಕಂಗನಾ ರಾಜಕೀಯದಲ್ಲಿ ಯಾವುದೇ ಆಸಕ್ತಿ ತೋರಿಸಿಲ್ಲ. ಸದ್ಯ ಅವರು ಮಣಿಕರ್ಣಿಕಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ ಹಾಗೂ ಸಾಲುಸಾಲು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಅಧಿಕೃತ ಮಾಹಿತಿ ಬರುವವರೆಗೂ ದಯವಿಟ್ಟು ಈ ರೀತಿಯ ಸುದ್ದಿಗಳನ್ನು ನಂಬಬೇಡಿ ಎಂದು ಕಂಗನಾ ಮ್ಯಾನೇಜರ್ ವಿನಂತಿ ಮಾಡಿದ್ದಾರೆ.

    ಸದ್ಯ ಕಂಗನಾ `ಮಣಿಕರ್ಣಿಕಾ – ದಿ ಕ್ವೀನ್ ಆಫ್ ಝಾನ್ಸಿ’ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡುತ್ತಿದ್ದು, ಈ ವರ್ಷವೇ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.

  • ಪ್ರೇಯಸಿಗಾಗಿ ಕರೆಂಟ್ ಶಾಕ್ ಕೊಟ್ಟು ಬೆಂಗ್ಳೂರು ಬ್ಯಾಂಕ್ ಮ್ಯಾನೇಜರ್ ಕೊಲೆ

    ಪ್ರೇಯಸಿಗಾಗಿ ಕರೆಂಟ್ ಶಾಕ್ ಕೊಟ್ಟು ಬೆಂಗ್ಳೂರು ಬ್ಯಾಂಕ್ ಮ್ಯಾನೇಜರ್ ಕೊಲೆ

    ರಾಮನಗರ: ಕೋಟಕ್ ಮಹಿಂದ್ರಾ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್ ಅನಿಲ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕಗ್ಗಲೀಪುರ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

    ಕನಕಪುರ ತಾಲೂಕಿನ ಕಚುವನಹಳ್ಳಿ ಗ್ರಾಮದ ನಿವಾಸಿಯಾದ ಮಾರ್ಕೆಟಿಂಗ್ ಮ್ಯಾನೇಜರ್ ಶಿವಬಸವೇಗೌಡ ಬಂಧಿತ ಕೊಲೆಗಾರ. ಇದೇ ಡಿಸೆಂಬರ್ 3 ರಂದು ಡೆಪ್ಯುಟಿ ಮ್ಯಾನೇಜರ್ ಅನಿಲ್ ನಾಪತ್ತೆ ಪ್ರಕರಣ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆ ದಿನದಂದೇ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಿ ಗ್ರಾಮದ ಸ್ಮಶಾನದಲ್ಲಿ ಅನಿಲ್ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕಗ್ಗಲೀಪುರ ಪೊಲೀಸರು ಇದೀಗ ಕೊಲೆಗಾರನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಅನಿಲ್ ಕುಮಾರ್ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದು, ಅವರ ಮೃತದೇಹ ಡಿಸೆಂಬರ್ 4ನೇ ರಂದು ಕಗ್ಗಲೀಪುರ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಕಂಪೆನಿಯೊಂದರಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿರುವ ಶಿವಬಸವೇಗೌಡನ ಬಗ್ಗೆ ಅನುಮಾನ ಬಂದಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದು ಒಪ್ಪಿಕೊಂಡಿದ್ದ.

    ಕೊಲೆ ಎಸಗಿದ್ದು ಯಾಕೆ?
    ಪ್ರೀತಿಸಿದ ಯುವತಿ ಮೇಲಿನ ಮೋಹಕ್ಕೆ ಶಿವಬಸವೇಗೌಡ ಅನಿಲ್ ನನ್ನು ಕೊಲೆ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬ್ಯಾಂಕ್ ಮ್ಯಾನೇಜರ್ ಅನಿಲ್ ಗೆ ಶ್ವೇತಾ ಎಂಬಾಕೆ ಜೊತೆ ವಿವಾಹ ನಿಶ್ಚಯವಾಗಿತ್ತು. ತಾನು ಪ್ರೀತಿಸುತ್ತಿದ್ದ ಶ್ವೇತಾ ಬೇರೊಬ್ಬನ ಜೊತೆ ಮದುವೆಯಾಗುತ್ತಿರುವ ವಿಚಾರ ತಿಳಿದು ಮದುವೆ ತಪ್ಪಿಸಲು ದಾರಿ ಹುಡುಕಿದ್ದ. ಅನಿಲ್ ಜೊತೆ ಸ್ನೇಹ ಬೆಳೆಸಿಕೊಂಡು ಡಿಸೆಂಬರ್ 3 ರಂದು ಫೋನ್ ಮಾಡಿ ಉತ್ತರಿ ಗ್ರಾಮದ ಬಳಿ ಕರೆಸಿಕೊಂಡಿದ್ದ. ಬಳಿಕ 440 ಕೆವಿ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಕರೆದೊಯ್ದು ವಿದ್ಯುತ್ ತಂತಿಯನ್ನು ಅನಿಲ್ ನ ದೇಹಕ್ಕೆ ಹಿಡಿದು ಕೊಲೆ ಮಾಡಿ ಪರಾರಿಯಾಗಿದ್ದ.

    ಸ್ನೇಹ ಸಂಪಾದಿಸಿದ್ದು ಹೇಗೆ: ಶ್ವೇತಾ ತನ್ನ ಮದುವೆ ಬಗ್ಗೆ ಎಲ್ಲರ ಹತ್ತಿರ ಹೇಳಿಕೊಂಡಿದ್ದರು. ಈ ವೇಳೆ ಶುಭಾಶಯ ಕೋರುವುದಾಗಿ ಹೇಳಿ ಆರೋಪಿ ಶಿವಬಸವೇಗೌಡ ಶ್ವೇತಾ ಅವರಿಂದ ಅನಿಲ್ ನಂಬರ್ ಪಡೆದುಕೊಂಡು ಹೊಸ ಸಿಮ್ ಖರೀದಿ ಮಾಡಿದ್ದ. ನಂತರ ಅನಿಲ್ ಅವರಿಗೆ ಮೇಲಿಂದ ಮೇಲೆ ಕರೆ ಮಾಡಿ ಅವರ ಸ್ನೇಹ ಸಂಪಾದಿಸಿದ್ದ.

    ಅನಿಲ್ ಡಿ.4 ರಂದು ಕಗ್ಗಲೀಪುರಕ್ಕೆ ಹೋಗಿದ್ದ ಮಾಹಿತಿ ಶಿವಬಸವೇಗೌಡನಿಗೆ ತಿಳಿದಿತ್ತು. ಆಗ ಶಿವಬಸವೇಗೌಡ ಅನಿಲ್‍ಗೆ ಕರೆ ಮಾಡಿ ರಾತ್ರಿ ಊಟಕ್ಕೆ ಆಹ್ವಾನ ನೀಡಿದ್ದ. ಅದಕ್ಕೆ ಅನಿಲ್ ಕೂಡ ಒಪ್ಪಿಕೊಂಡಿದ್ದರು. ಬಳಿಕ ಅವರಿಬ್ಬರೂ ನಗರದ ಹೊರವಲಯದ ರೆಸ್ಟೋರೆಂಟ್‍ ನಲ್ಲಿ ಊಟ ಮಾಡಿ ಬೈಕ್ ನಲ್ಲಿ ನಗರಕ್ಕೆ ವಾಪಸ್ ಹೊರಟಿದ್ದಾರೆ. ಮಧ್ಯದಲ್ಲಿ ಅನಿಲ್ ಅವರು ಮೂತ್ರ ವಿಸರ್ಜನೆ ಮಾಡಲು ನಿಲ್ಲಿಸಿದಾಗ ತನ್ನ ಬಳಿ ಇದ್ದ ವಯರ್ ಅನ್ನು ಅನಿಲ್ ಅವರ ದೇಹಕ್ಕೆ ತಾಗಿಸಿ, ಅದನ್ನು ಅಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಗೆ ಸಂಪರ್ಕಿಸಿದ್ದ. ವಿದ್ಯುತ್ ಶಾಕ್ ಹೊಡೆದು ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರು.

    ಹಲವು ಪ್ರಯತ್ನ ನಡೆಸಿದ್ದ: ಟ್ರಾನ್ಸ್ ಫಾರ್ಮರ್ ಮೂಲಕ ವಿದ್ಯುತ್ ಹರಿಸಿ ಕೊಲೆ ಮಾಡುವುದಕ್ಕೆ ಆರೋಪಿ ಶಿವಬಸವೇಗೌಡ ಹಲವು ಬಾರಿ ಅಭ್ಯಾಸ ಮಾಡಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.