Tag: ಮ್ಯಾಜಿಸ್ಟೀರಿಯಲ್ ತನಿಖೆ

  • ಮಂಗ್ಳೂರು ಗೋಲಿಬಾರ್: ಮ್ಯಾಜಿಸ್ಟೀರಿಯಲ್ ತನಿಖೆ ಆರಂಭ

    ಮಂಗ್ಳೂರು ಗೋಲಿಬಾರ್: ಮ್ಯಾಜಿಸ್ಟೀರಿಯಲ್ ತನಿಖೆ ಆರಂಭ

    ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರುದ್ಧ ಡಿಸೆಂಬರ್ 19ರಂದು ನಡೆದ ಹಿಂಸಾಚಾರ, ಗೋಲಿಬಾರ್ ಕುರಿತ ಮ್ಯಾಜಿಸ್ಟೀರಿಯಲ್ ತನಿಖೆ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ಇಂದು ಆರಂಭಗೊಂಡಿದೆ.

    ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ತನಿಖಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆ ವೇಳೆ ಸಾಕ್ಷ್ಯ, ಅಹವಾಲು ಸಲ್ಲಿಕೆಗೆ ಅವಕಾಶವಿದ್ದು, ಪೊಲೀಸರು ಹಾಗೂ ಸಾರ್ವಜನಿಕರಿಂದ ಅಹವಾಲು ಸಲ್ಲಿಕೆ ನಡೆಯಿತು.

    ಈ ಹಿಂದೆಯೇ ತನಿಖಾಧಿಕಾರಿ ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದು, ಯಾರು ಬೇಕಾದರೂ ಸಾಕ್ಷಿ ಹೇಳಬಹುದು ಎಂದಿದ್ದರು. ಅದರಂತೆ ಬಂದ ಸಾರ್ವಜನಿಕರ ಹಾಗೂ ಪೊಲೀಸರಿಂದ ಸಾಕ್ಷ್ಯ ದಾಖಲೀಕರಣ ಮಾಡಿದ ತನಿಖಾಧಿಕಾರಿ ಜಿ.ಜಗದೀಶ್ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

    ಪ್ರತ್ಯಕ್ಷದರ್ಶಿಗಳಿಗೆ ಸಾಕ್ಷ್ಯ ನುಡಿಯಲು ಅವಕಾಶ ನೀಡಲಾಗಿತ್ತು. ಒಟ್ಟು 14 ಜನರು ಸಾಕ್ಷಿ ಹೇಳಲು ಆಗಮಿಸಿದ್ದು, ಅದರಲ್ಲಿ ಹಲವರು ಪ್ರತ್ಯಕ್ಷ ದರ್ಶಿಗಳು ಇದ್ದರು. ಲಿಖಿತ ರೂಪದಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಸಾಕ್ಷಿಗಳು ನೀಡಿರುವ ದಾಖಲೆಗಳನ್ನು ಪಡೆದುಕೊಂಡಿದ್ದೇವೆ. ಮುಂದೆ ಮೃತರ ಕುಟುಂಬಕ್ಕೆ ಹಾಗೂ ಪೊಲೀಸರಿಗೆ ನೋಟೀಸ್ ನೀಡಿ ವಿಚಾರಣೆ ಮಾಡುತ್ತೇವೆ ಎಂದು ಜಗದೀಶ್ ತಿಳಿಸಿದ್ದಾರೆ.