Tag: ಮೌಲ್ಯಮಾಪಕರು

  • ಮೌಲ್ಯಮಾಪಕರ ಎಡವಟ್ಟು – ಟಾಪರ್ ಆಗಬೇಕಿದ್ದ ಗಾರೆ ಕೆಲಸ ಮಾಡೋರ ಮಗಳು ಫೇಲ್

    ಮೌಲ್ಯಮಾಪಕರ ಎಡವಟ್ಟು – ಟಾಪರ್ ಆಗಬೇಕಿದ್ದ ಗಾರೆ ಕೆಲಸ ಮಾಡೋರ ಮಗಳು ಫೇಲ್

    ಬೆಂಗಳೂರು: ಮೌಲ್ಯಮಾಪಕರ ಚೆಲ್ಲಾಟಕ್ಕೆ ಟಾಪರ್ ಆಗಬೇಕಿದ್ದ ಗಾರೆ ಕೆಲಸ ಮಾಡುವವರ ಮಗಳು 509 ಅಂಕ ಪಡೆದರೂ ಫೇಲ್ ಆಗಿದ್ದಾಳೆ.

    ನಾಗವಾರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಶಾಲಿನಿ ಏಪ್ರಿಲ್ 30 ರಂದು ಫಲಿತಾಂಶ ನೋಡಿದಾಗ ಒಟ್ಟು 509 ಅಂಕಗಳನ್ನು ತೆಗೆದಿದ್ದಳು. 509 ಅಂಕ ಪಡೆದಿದ್ದರೂ ಸಹ ಶಾಲಿನಿ ಕನ್ನಡದಲ್ಲಿ ಫೇಲ್ ಆಗಿದ್ದಳು.

    ಫಲಿತಾಂಶ ಬಂದ ಒಂದು ವಾರದಿಂದ ಫೇಲ್ ಆಗಿದ್ದೇನೆ ಎಂದು ಶಾಲಿನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಮಗಳ ಸ್ಥಿತಿಯನ್ನು ನೋಡಿದ ಪೋಷಕರು ಶಾಲಿನಿಯ ಉತ್ತರ ಪತ್ರಿಕೆ ತರಿಸಿಕೊಂಡಿದ್ದರು. ಈ ವೇಳೆ ಮೌಲ್ಯಮಾಪಕರ ಬೇಜವಾಬ್ದಾರಿ ಬೆಳಕಿಗೆ ಬಂದಿದೆ.

    ಆಗಿದ್ದೇನು?
    ಮೌಲ್ಯಮಾಪಕರು ದ್ವಿತೀಯ ಭಾಷೆ ಕನ್ನಡ ಪರೀಕ್ಷೆಯಲ್ಲಿ 75 ಅಂಕಗಳನ್ನು ಪರಿಗಣಿಸದೆಯೇ ಬಿಟ್ಟು ಬಿಟ್ಟಿದ್ದಾರೆ. 17 ಪೇಜ್ ಉತ್ತರ ಬರೆದು 17 ಅಂಕ ಎಂದು ಪರಿಗಣಿಸಿದ್ದಾರೆ. ಕನ್ನಡದಲ್ಲಿ 75 ಅಂಕ ಗಳಿಸಿದರೂ ಮೌಲ್ಯಮಾಪಕರು 17 ಅಂಕ ಮಾತ್ರ ನೀಡಿದ್ದಾರೆ.

    ಸದ್ಯ ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ಎಡವಟ್ಟಿಗೆ ಶಾಲಿನಿ ತಂದೆ ಅನ್ಬು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಮೌಲ್ಯಮಾಪಕರ ಎಡವಟ್ಟು- 79ರ ಬದಲು 10 ಅಂಕ ಕೊಟ್ರು!

    ಮೌಲ್ಯಮಾಪಕರ ಎಡವಟ್ಟು- 79ರ ಬದಲು 10 ಅಂಕ ಕೊಟ್ರು!

    ತುಮಕೂರು: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳು ಕನ್ನಡ ಭಾಷೆಯಲ್ಲೇ ಅನುತ್ತೀರ್ಣವಾದ ಪ್ರಕರಣ ಬೆಳಕಿಗೆ ಬಂದಿದೆ.

    ಜಿಲ್ಲೆಯ ಪಾವಗಡ ಪಟ್ಟಣದ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ವೀಣಾಬಾಯಿ ಕಲಾ ವಿಭಾಗದ ಉಳಿದ ಎಲ್ಲಾ ವಿಷಯಗಳಲ್ಲಿ 90 ಅಂಕ ಪಡೆದಿದ್ದಾಳೆ. ಆದರೆ ಕನ್ನಡದಲ್ಲಿ ಮಾತ್ರ ಕೇವಲ 10 ಅಂಕ ನೀಡಲಾಗಿದೆ. ಫಲಿತಾಂಶ ನೋಡಿ ಕಂಗಾಲಾದ ವೀಣಾಬಾಯಿ, ಶಿಕ್ಷಕರ ಸಲಹೆಯಂತೆ ಉತ್ತರ ಪತ್ರಿಕೆಯ ಫೋಟೋ ಪ್ರತಿ ತರಿಸಿಕೊಂಡಿದ್ದಾಳೆ. ಆಗ ಮೌಲ್ಯಮಾಪಕರ ಎಡವಟ್ಟು ಬಹಿರಂಗವಾಗಿದೆ.

    ಅಸಲಿಗೆ ವೀಣಾಬಾಯಿಗೆ 79 ಅಂಕ ಬಂದಿದೆ. ಉತ್ತರ ಪತ್ರಿಕೆಯಲ್ಲಿ ಅದು ಸರಿಯಾಗಿಯೇ ನಮೂದಾಗಿದೆ. ಆದರೆ ಮೌಲ್ಯ ಮಾಪಕ ಮಹಾಶಯ ರಿಸಲ್ಟ್ ಶೀಟಲ್ಲಿ ಮಾತ್ರ ಕೇವಲ 10 ಅಂಕವನಷ್ಟೇ ನಮೂದಿಸಿದ್ದಾನೆ.

    ಇದೇ ಕಾಲೇಜಿನ ಇನ್ನೊಬ್ಬ ವಿದ್ಯಾರ್ಥಿ ಆರ್.ರವಿ, ಕನ್ನಡ ವಿಷಯದಲ್ಲಿ ಇದೇ ರೀತಿ ಎಡವಟ್ಟಾಗಿ 15 ಅಂಕ ಕಡಿಮೆ ಬಂದಿದೆ. ಒಂದು ಫೋಟೋ ಪ್ರತಿ ತರಿಸಲು 530 ಕಟ್ಟಬೇಕಾಗುತ್ತದೆ. ಬಡ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುವುದೇ ಕಷ್ಟ ಅಂತಹ ಸ್ಥಿತಿಯಲ್ಲಿ ಪರೀಕ್ಷಾ ಮಂಡಳಿಯವರು ಮಾಡುವ ತಪ್ಪಿಗೆ ವಿದ್ಯಾರ್ಥಿಗಳು ಮತ್ತೆ ಬೆಲೆ ತೆರಬೇಕೇ ಅನ್ನೋದು ಪೋಷಕರ ಪ್ರಶ್ನೆಯಾಗಿದೆ.