Tag: ಮೌಢ್ಯಾಚರಣೆ

  • ಆಷಾಢದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ 32 ನವಜೋಡಿಗಳು

    ಆಷಾಢದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ 32 ನವಜೋಡಿಗಳು

    ಚಿತ್ರದುರ್ಗ: ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ.

    ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಸಾಮೂಹಿಕ ವಿವಾಹ ನೆರವೇರಿಸಿದ್ದಾರೆ. ಈ ಕಲ್ಯಾಣೋತ್ಸವದಲ್ಲಿ 32 ನವಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

    ಈ ವಿವಾಹ ಮಹೋತ್ಸವದಲ್ಲಿ ಅಂತರ್‌ಧರ್ಮ ವಿವಾಹವಾದ ಹಿಂದೂ ಹಾಗೂ ಇಸ್ಲಾಂ ಧರ್ಮದ ಒಂದು ಜೋಡಿಯು ಎಲ್ಲರ ಗಮನ ಸೆಳೆಯಿತು. ಅಲ್ಲದೇ ಸಾಮೂಹಿಕ ವಿವಾಹದಲ್ಲಿ ಅಂತರ್ ಧರ್ಮ ವಿವಾಹದ ಮೂಲಕ ನವಜೀವನಕ್ಕೆ ಪಾದಾರ್ಪಣೆ ಮಾಡಿದ ಹಸೀನ ಕೂಡ ತಮ್ಮ ಜೀವನಕ್ಕೆ ಬಸವತತ್ವವನ್ನು ಅಳವಡಿಸಿಕೊಂಡಿದ್ದಾರೆ.

    ಸಮಾಜ ಪರಿವರ್ತನೆಗಾಗಿ ಅಂತರ್ಜಾತಿ ಹಾಗೂ ಅಂತರ್‌ಧರ್ಮ ವಿವಾಹಗಳಿಂದಾದರೂ ಈ ಮೌಢ್ಯ ನಿಷೇಧವಾಗಬೇಕೆಂದು ನೂತನ ವಧು ಹಸೀನ ಹೇಳಿದ್ದಾರೆ.

    ಮುರುಘಾ ಮಠದಲ್ಲಿ ನಡೆದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಜಾತಿ ಧರ್ಮಗಳನ್ನು ಮೀರಿ ನಿಂತಿದೆ. ಆಷಾಢ ಶುಕ್ರವಾರ ಅನ್ನೋದನ್ನೂ ಲೆಕ್ಕಿಸದೇ 32 ನವಜೋಡಿಗಳು ನವಜೀವನಕ್ಕೆ ಕಾಲಿಡುವ ಮೂಲಕ ಮೌಢ್ಯ ನಿಷೇಧಕ್ಕೆ ಪ್ರೇರಣೆಯಾದರು.

  • ಎತ್ತುಗಳಿಗೆ ಬೆತ್ತದಿಂದ ಹೊಡೆದು ಮುಳ್ಳಿನ ದಾರಿ ದಾಟಿಸಿ ಮೌಢ್ಯಾಚರಣೆ ಮೆರೆದ ಜನರು!

    ಎತ್ತುಗಳಿಗೆ ಬೆತ್ತದಿಂದ ಹೊಡೆದು ಮುಳ್ಳಿನ ದಾರಿ ದಾಟಿಸಿ ಮೌಢ್ಯಾಚರಣೆ ಮೆರೆದ ಜನರು!

    ಚಿಕ್ಕೋಡಿ: ಬೆತ್ತ ಹಿಡಿದು ನಿಂತ ಯುವಕರು ಎದುರು ಬರುವ ಎತ್ತಿನ ಮೇಲೆ ಹಲ್ಲೆ ಮಾಡಿ, ಮುಳ್ಳಿನ ದಾರಿ ತುಳಿದು ಬರುವಂತೆ ಹಿಂಸಿಸುವ ವಿಚಿತ್ರ ಮೌಢ್ಯಾಚರಣೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಾಗವಾಡದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಕೆಲವು ಭಾಗದಲ್ಲಿ ಕಾರಹುಣ್ಣಿಮೆ ನಂತರದ ದಿನಗಳಲ್ಲಿ ಕರಿ ಹಾಯುವ ಆಚರಣೆ ನಡೆಯುತ್ತದೆ. ಮುಳ್ಳು ಇರುವ ಬನ್ನಿ ಮರದ ರೆಂಬೆಗಳನ್ನು ತಂದು ರಸ್ತೆಯ ಮೇಲೆ ಹರಡಲಾಗಿರುತ್ತದೆ. ಇದರ ಮೇಲೆ ಗ್ರಾಮದ ಅಥವಾ ಪಟ್ಟಣ ಗೌಡರ ಮನೆಯ ಎತ್ತುಗಳನ್ನು ಹಿಡಿದು ತಂದು ಬನ್ನಿ ಮುಳ್ಳು ಸಾಲನ್ನು ದಾಟಿಸಲಾಗುತ್ತದೆ. ಆದರೆ ಎತ್ತುಗಳು ಬೆದರಿ ಹಿಂದಕ್ಕೆ ಸರಿದಾಗ ಅವುಗಳನ್ನು ಹಕ್ಕುದಾರರು ಹೊಡೆಯುತ್ತಾರೆ. ಹಕ್ಕುದಾರನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಅವರಿಗೆ ಮಾತ್ರ ಎತ್ತುಗಳನ್ನು ಹೊಡೆಯುವ ಅವಕಾಶವಿರುತ್ತದೆ.

    ಎತ್ತುಗಳು ಬನ್ನಿ ಮುಳ್ಳುಗಳನ್ನು ದಾಟಿ ಹೋದರೆ ಮಳೆ ಬೆಳೆ ಉತ್ತಮವಾಗಿ ಬರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ನಿನ್ನೆ 100 ಕ್ಕೂ ಹೆಚ್ಚು ಜನರು ಎತ್ತುಗಳ ಮೇಲೆ ಬೆತ್ತದಿಂದ ಹೊಡೆದು ಬನ್ನಿ ಮುಳ್ಳು ದಾಟಿಸಿದರು.

    ಬುಧವಾರ ಸಂಜೆ ಕಾಗವಾಡ ಪಟ್ಟಣದಲ್ಲಿ ಜನ ಸಮೂಹವೇ ಎತ್ತುಗಳು ಕರಿ ಹಾಯುವುದನ್ನು ನೋಡಲು ಕಾದು ನಿಂತಿತ್ತು. ಸುಮಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಇದಾಗಿದ್ದು, ಎತ್ತುಗಳಿಗೆ ಬೆತ್ತದಿಂದ ಮನ ಬಂದಂತೆ ಹಲ್ಲೆ ಮಾಡಿದ್ದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯಿತು.